ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಯುಗ ಯುಗಾದಿ ಕಳೆದರೂ..!

ಯುಗಾದಿ ವಿಶೇಷ ಬರಹ ಯುಗ ಯುಗಾದಿ ಕಳೆದರೂ..! ಯುಗ ಯುಗಾದಿ ಕಳೆದರೂ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.                     ಹೊಂಗೆ ಹೂವ ತೊಂಗಳಲಿ,                     ಭೃಂಗದ ಸಂಗೀತ ಕೇಳಿ                     ಮತ್ತೆ ಕೇಳ ಬರುತಿದೆ.                     ಬೇವಿನ ಕಹಿ ಬಾಳಿನಲಿ                     ಹೂವಿನ ನಸುಗಂಪು ಸೂಸಿ                     ಜೀವಕಳೆಯ ತರುತಿದೆ. ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ. ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ.                     ನಿದ್ದೆಗೊಮ್ಮೆ ನಿತ್ಯ ಮರಣ,                     ಎದ್ದ ಸಲ ನವೀನ ಜನನ,                     ನಮಗೆ ಏಕೆ ಬಾರದು?                     ಎಲೆ ಸನತ್ಕುಮಾರ ದೇವ,                     ಎಲೆ ಸಾಹಸಿ ಚಿರಂಜೀವ,                     ನಿನಗೆ ಲೀಲೆ ಸೇರದೂ. ಯುಗ ಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.               # ಅಂಬಿಕಾತನಯದತ್ತ ……………………………………………. ಯುಗಾದಿ ಹಬ್ಬದ ಮಹತ್ವವೂ..! ಯುಗಾದಿ ಹಬ್ಬ ಆಗಲೇ ಬಂದಿದೆ. ಜನರು ಹೇಗೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಶೇಷ ಆಚರಣೆಗೆ ಹೇಗೆ ಸಿದ್ಧರಾಗಬೇಕು. ಯುಗಾದಿಯ ವಿಶೇಷ ಆಚರಣೆ ಏನು ಎಂಬುದರ ವಿವರಣೆ ಇಲ್ಲಿದೆ… ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಮತ್ತು ಆಚರಿಸುವ ವಿಧಾನ..! ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಯುಗಾದಿ ಆಚರಣೆ ಎದುರಿಗಿದೆ. ಮುಂಬರುವ ಮಂಗಳವಾರ ಏಪ್ರಿಲ್​ 13 ನೇ ತಾರೀಕಿನಂದು ಈ ವರ್ಷದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ.  ತಮಿಳುನಾಡು ಮತ್ತು ಕೇರಳದಲ್ಲಿ ವಿಷು ಎಂದು ಈ ಹಬ್ಬವನ್ನು ಕರೆಯಲಾಗುತ್ತದೆ. ಇನ್ನು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದರೆ, ಪಾಡ್ಯಮಿ ದಿವಸ ಗುಡಿ ಏರಿಸುವುದು ಎಂದರ್ಥ. ಅಂದರೆ, ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ಗುಡಿ ಎಂದು ಮೂಲೆಯಲ್ಲಿ ಇರಿಸುವ ಸಂಪ್ರದಾಯವಿದೆ. ಇದು ಹೊಸ ವರ್ಷದ ಆಗಮಕ್ಕೆ ಸಂಕೇತವಾಗಿದೆ. ಜೊತೆಗೆ ಮನೆಯಲ್ಲಿ ವೀಶೆಷ ಪೂಜೆಯನ್ನೂ ಕೈಗೊಳ್ಳಲಾಗುತ್ತದೆ. ಪೂಜೆ ಅಂದರೆ ಬೇರೇನೂ ಅಲ್ಲ. ನಮ್ಮ ಬದುಕಿನ ಹೊಸ ಜೀವನದ ಮುಖ್ಯ ವಿಚಾರಗಳು ಹೇಗಿರಬೇಕೆಂಬ ವಿಧಾನದ ಕ್ಯಾಲೆಂಡರ್ ಅಷ್ಟೇ. ಯುಗಾದಿ ಹಬ್ಬ ಅಂದಾಕ್ಷಣ ಹೊಸ ವರ್ಷ ಪ್ರಾರಂಭದ ದಿನ. ಹೊಸ ವರ್ಷದ ಜೊತೆಗೆ ಹೊಸ ಭರವಸೆ ಮತ್ತು ಹೊಸ ಚೈತನ್ಯ ತುಂಬುವ ದಿನ. ಯುಗ, ಅಂದರೆ ವಯಸ್ಸು ಮತ್ತು ಆದಿ ಅಂದರೆ ಪ್ರಾರಂಭ ಎಂಬುದಾಗಿ ‘ಯುಗಾದಿ’ ಎಂಬ ಹೆಸರೂ ಬಂದಿದೆ. ಯುಗಾದಿ ಆಚರಣೆ– ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಮೊದಲ ದಿನವೂ ಹೌದು. ಚಳಿಗಾಲದ ಅಂತ್ಯ ಮತ್ತು ಸುಗ್ಗಿಯ ಋತುವಿನ ಆರಂಭದಲ್ಲಿ ಯುಗಾದಿ ಹಬ್ಬ ಬರುವುದು. ಚಂದ್ರಮನ ಯುಗಾದಿ 2021 ದಿನಾಂಕ ಮತ್ತು ಮುಹೂರ್ತ ಸಮಯವೂ– ಯುಗಾದಿ ಹಬ್ಬ 2021 ರ ಏಪ್ರಿಲ್ 12 ನೇ ತಾರೀಕು ಪ್ರತಿಪದ ತಿಥಿಯಂದು ಬೆಳಿಗ್ಗೆ 7:59 ಕ್ಕೆ ಆರಂಭಗೊಳ್ಳುತ್ತದೆ. ಮರುದಿನ ಏಪ್ರಿಲ್​ 13 ನೇ ತಾರೀಕು ಬೆಳಿಗ್ಗೆ 10.16 ರ ಸಮಯಕ್ಕೆ ಮುಕ್ತಾಯಗೊಳ್ಳುತ್ತದೆ ಹಿಂದೂ ಸಾಂಪ್ರದಾಯದಂತೆ. ಈ ಆಚರಣೆ ಗೊಡ್ಡು ಆಚರಣೆ ಆದರೆ ಯಾವ ಫಲವೂ ಇಲ್ಲ. ಸರ್ವವಿಧದ, ಸರ್ವ ಜಾತಿ ಜನಾಂಗದ ಜನರ ಒಗೂಡಿಕೆವೊಂದೆಗೇ ಆಚರಣೆ ಆಗಬೇಕು. ಹಬ್ಬಕ್ಕೆ ಸಿದ್ಧತೆಗಳು– ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿಯನ್ನಿಟ್ಟು ಹಬ್ಬಕ್ಕೆ ಬೆಳಿಗ್ಗೆಯಿಂದಲೇ ಮೆರಗುಗೊಳಿಸಲಾಗುತ್ತದೆ. ಯುಗಾದಿಯಂದು ಹೊಸ ಬಟ್ಟೆ, ಹೊಸ ವಿಚಾರ ಹೊಸ ಭರವಸೆಯತ್ತ ಇಡೀ ವರ್ಷ ಸಾಗಲಿ ಎಂಬ ನಂಬಿಕೆಯ ಜೊತೆ ಮುನ್ನಡೆಯವ ಹೆಜ್ಜೆಯಾಗಿರುತ್ತದೆ ಯುಗಾದಿ. ಯುಗಾದಿ ಹಬ್ಬದ ಆಚರಣೆ ಹೇಗೆ?– ಬೆಳಗ್ಗೆ ಬೇಗ ಎದ್ದು ಮನೆಯಲ್ಲಿ ಸಡಗರ, ಸಂಭ್ರಮ. ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ರಂಗಿನ ರಂಗೋಲಿ ಬಿಡಿಸುತ್ತಾರೆ. ಬೆಳಿಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ ಶುದ್ಧಗೊಳ್ಳುತ್ತಾರೆ. ಮನೆಯ ಎದುರಿನ ಬಾಗಿಲು, ದೇವಾಲಯದ ಬಾಗಿಲಿಗೆ ಮಾವಿನ ಎಲೆಗಳ ಹಾರ (ತಳಿರು ತೋರಣ) ಮಾಡಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಯುಗಾದಿ ದಿನದಂದು ಸಂತೋಷದ ಪ್ರತೀಕವಾಗಿ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾಗಿ ಬೇವನ್ನು ಬೆರೆಸಿ ಪ್ರಸಾದವಾಗಿ ಸೇವಿಸುತ್ತಾರೆ. ಇದಿಷ್ಟೇ ಆದರೆ ಸಾಲದು ಹೊಸ ಸವಂತವನು ಹೊಸ ಜೀವನದ ಭರವಸೆಯೊಂದಿಗೆ ಆಚರಣೆಯಾಗಬೇಕು. ಸರ್ವರಳೊಂದುಗೂಡಿ ಬದುಕಿನ ಆಚರಣೆ ಆಗಬೇಕು. ಆ ಮಾತ್ರ ಈ ಯುಗಾದಿ ಆಚರಣೆಗೆ ಮಹತ್ವ ಬರುವುದು..! ************************ ಕೆ.ಶಿವು.ಲಕ್ಕಣ್ಣವರ

ಯುಗ ಯುಗಾದಿ ಕಳೆದರೂ..! Read Post »

ಇತರೆ

ಯುಗಾದಿ ವಿಶೇಷ ಬರಹ ಯುಗಾದಿಯೆಂಬ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ ಎಂದು ಹೇಳುವುದು ಪ್ರಮುಖವಾಗಿ ಭಾಷೆ,  ಆಚರಣೆ-ಸಂಪ್ರದಾಯಗಳು, ಉಡುಗೆ-ತೊಡುಗೆ, ಆಹಾರ ಮೊದಲಾದವುಗಳಿಗೆ ಸಂಬಂಧಿಸಿದಂತೆ . ಇಲ್ಲಿನ  ವೈವಿಧ್ಯತೆ ಎಷ್ಟೆಂದರೆ  ರಾಜ್ಯ ರಾಜ್ಯಗಳ ನಡುವಿನ ಮಾತಿರಲಿ, ಅಕ್ಕಪಕ್ಕದ ತಾಲೂಕುಗಳಲ್ಲಿ, ಊರುಗಳಲ್ಲೇ ಭಿನ್ನತೆಯನ್ನು ಕಾಣಬಹುದು.   ಆದರೆ ಕಳೆದ 2 ದಶಕಗಳಿಂದ ಇಂಥ ಪ್ರಾದೇಶಿಕ ಭಿನ್ನತೆಗಳು ಬದಲಾಗುತ್ತಿವೆ  ಅಥವಾ  ಕೆಲವು  ಇಲ್ಲವಾಗಿವೆ. ಇದಕ್ಕೆ ಬಹುಮುಖ್ಯ ಕಾರಣ ದೊಡ್ಡ ಪಟ್ಟಣ ಹಾಗೂ ಶಹರಗಳಿಗೆ ಉದ್ಯೋಗ ಹಾಗೂ  ಜೀವನ ನಿರ್ವಹಣೆಯ ದಾರಿಗಳನ್ನು ಅರಸುತ್ತ ನಡೆದಿರುವ  ನಿರಂತರ ವಲಸೆ. 20ನೇ ಶತಮಾನದ ಕೊನೆಯ ದಶಕದಲ್ಲಿ ಭಾರತದ ಮಹಾನಗರಗಳಿಗೆ ಲಗ್ಗೆ ಇಟ್ಟ ಐಟಿಬಿಟಿ ಕಂಪನಿಗಳು ಈ ನಗರಗಳ ಬದುಕನ್ನು ಅನಾಮತ್ತಾಗಿ ಎತ್ತಿ ಪಲ್ಟಿ ಮಾಡಿದವು.  ವಿದೇಶಿ ಮೂಲದ ಕಂಪನಿಗಳ ಮೂಲಕ  ಹಣದ ಹೊಳೆ  ಇಲ್ಲಿ ಹರಿಯಲಾರಂಭಿಸಿದಂತೆ ಅದರ ಉಪ ಉತ್ಪನ್ನವಾಗಿ ಹಳ್ಳಿಯ, ಸಣ್ಣ ಪಟ್ಟಣಗಳ ಯುವಜನತೆ ನಗರಗಳಿಗೆ ಗುಳೆ ಬಂದಿತು. ಅವರ ಮೂಲ ಊರುಗಳಲ್ಲಿ ಮಧ್ಯವಯಸ್ಸು ಮೀರಿದವರಷ್ಟೇ ಇರುವುದು ಅಂದಿನ ವಾಸ್ತವವಾಗಿತ್ತು.  ಇದರಿಂದ ದೊಡ್ಡ ಪ್ರಮಾಣದಲ್ಲಿ  ಆರ್ಥಿಕ, ರಾಜಕೀಯ ಬದಲಾವಣೆಗಳಾದರೆ, ಅದಕ್ಕಿಂತ ತೀವೃ ಪರಿಣಾಮಗಳು ಸಾಮಾಜಿಕವಾಗಿ ಕಂಡು ಬಂದವು. ಅದರಲ್ಲಿ ವಿಶೇಷವಾಗಿ  ನಮ್ಮ ಹಬ್ಬ- ಹರಿದಿನಗಳ ಆಚರಣೆಯಲ್ಲಾದ ಬದಲಾವಣೆಗಳು. ನಮ್ಮ ಬಹುತೇಕ ಹಬ್ಬಗಳನ್ನು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತ ಈಗ ದಶಕಗಳೇ ಕಳೆದಿವೆ. ನಗರಗಳಲ್ಲಿ   ಒದಗುವಿಕೆ, ಸಮಯಾವಕಾಶ, ರಜೆ, ಬಿಡುವು ಮೊದಲಾದ ವೈಯುಕ್ತಿಕವಾಗಿ ಮನೆಯ ಸದಸ್ಯರ ಅನುಕೂಲತೆಗಳಿಗೆ ತಕ್ಕಂತೆ ಹಿಗ್ಗುವ, ಕುಗ್ಗುವ ಅಥವಾ ಇಲ್ಲವಾಗುವ ಒಂದು ವಿಶೇಷ ದಿನ ಹಬ್ಬದ ದಿನ.  ಗ್ರಾಮೀಣ ಭಾಗಗಳಲ್ಲಿ ಅದು ಕಟ್ಟುನಿಟ್ಟಿನ  ಆಚರಣೆ , ಸಂಪ್ರದಾಯ, ರೀತಿ-ರಿವಾಜು, ಪರಂಪರೆಗಳ ಒಟ್ಟೂ ಮೊತ್ತ. ಅನೇಕ ಬಾರಿ  ಊರಿಗೆ ಊರೇ ಭಾಗವಹಿಸಿ ಸಂಭ್ರಮಿಸುವ ಊರ  ಹಬ್ಬ.         ನಮ್ಮ ಸಂವಿಧಾನ  ‘ ಇಂಡಿಯಾ ದಟ್ ಈಸ್ ಭಾರತ್ ‘ ಎಂದು ನಮ್ಮ ದೇಶವನ್ನು ಗುರುತಿಸಿದೆಯಷ್ಟೇ. ಅದರಂತೆ ಇಂಡಿಯಾ ಆಧುನಿಕ, ನಗರ ಕೇಂದ್ರಿತ  ದೇಶವನ್ನು ಪ್ರತಿನಿಧಿಸಿದರೆ ಭಾರತ ಅದಕ್ಕೆ ತದ್ವಿರುದ್ಧವಾದ ಹಿಂದುಳಿದ, ಗ್ರಾಮೀಣ ದೇಶವನ್ನು ಪ್ರತಿನಿಧಿಸುತ್ತದೆಯೋ ಎಂಬಷ್ಟು ಕಂದಕ ಈ ಹಬ್ಬ-ಹರಿದಿನಗಳ ಆಚರಣೆಯಲ್ಲಿ ಇತ್ತೀಚೆಗೆ  ಕಾಣುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ನಗರಗಳಲ್ಲಿ ಹಬ್ಬಗಳೆಂದರೆ ಜೋರಾದ ಹೂ-ಹಣ್ಣುಗಳ ಮಾರಾಟ, ಬೇಕರಿಗಳಲ್ಲಿ ತರಹೆವಾರು ಸಿಹಿತಿನಿಸುಗಳ ಜೋಡಣೆ, ಅಂಗಡಿಗಳಲ್ಲಿ ಭರಾಟೆಯ ಸೇಲ್, ಡಿಸ್ಕೌಂಟುಗಳ ಆಕರ್ಷಣೆ, ಹೊಟೆಲ್ಲುಗಳಲ್ಲಿ ಹಬ್ಬದಡಿಗೆಯ ಊಟ…ಎಲ್ಲವೂ ದುಬಾರಿ.  ಇಲ್ಲಿಗೆ ನಿಲ್ಲದೆ ಈ ಹಬ್ಬಗಳ ಸಡಗರ ದೇವಾಲಯಗಳಿಗೂ ವಿಸ್ತರಿಸಿದೆ. ಮೊದಲಾದರೆ ಕೆಲ ಹಬ್ಬಗಳಲ್ಲಿ ಮಾತ್ರ   ಅಭಿಷೇಕ, ಹೋಮಗಳು   ದೇವಾಲಯಗಳಲ್ಲಿ ನಡೆಯುತ್ತಿದ್ದವು. ಇಂದು ಹೆಚ್ಚವರಿ  ಗಳಿಕೆಗಾಗಿ  ಎಲ್ಲ ಹಬ್ಬಗಳಿಗೂ ಅವು ನಡೆಯುತ್ತವೆ.  ನಗರಗಳ ಹಬ್ಬಗಳೆಂದರೆ ದುಂದು, ಖರ್ಚು, ಹೆಚ್ಚು ಕಸ, ಮಾಲಿನ್ಯ ಎಂಬಂತಾಗಿದೆ  ಪರಿಸ್ಥಿತಿ. ಇದಕ್ಕೆ ಹಬ್ಬಗಳ ಮಾರನೇ ದಿನ ಬೀದಿಗಳನ್ನು  ಸ್ವಚ್ಛಗೊಳಿಸಲು ಹೆಣಗುವ  ಪೌರಕಾರ್ಮಿಕರ ಬವಣೆಯೇ ಸಾಕ್ಷಿ. ಈ ಕಾರಣದಿಂದ ಗ್ರಾಮೀಣ ಭಾಗದಲ್ಲಿ ನಡೆಯುವ ಸರಳ,  ನೆಲಮೂಲ ಸಂಸ್ಕೃತಿಯ. ಆಚರಣೆಯಾದ,  ಪರಿಸರ ಸ್ನೇಹಿ ಹಬ್ಬಗಳು ನನಗಿಷ್ಟ.    ಭಾರತೀಯ ಋತುಮಾನಕ್ಕೆ ಅನುಗುಣವಾಗಿ ಬರುವ ಯುಗಾದಿ  ವರ್ಷದ ಮೊದಲ ಹಬ್ಬ. ಪ್ರಕೃತಿಯ ನಲಿವಿನಲ್ಲಿ  ನಾವೂ ಜೊತೆಯಾಗುವ ಹಬ್ಬ. ನಮ್ಮ ಎಲ್ಲ ಹಬ್ಬಗಳೂ ಪ್ರಕೃತಿಗೆ ಪೂರಕವಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.  ಇದಕ್ಕೆ ಯುಗಾದಿಯೂ ಹೊರತಲ್ಲ. ವಸಂತನ ಆಗಮನವನ್ನು ಪ್ರಕೃತಿಯು ಹೊಸ ಹೂ-ಹಣ್ಣುಗಳನ್ನು ಒದಗಿಸುವುದರ ಮೂಲಕ ಸಂಭ್ರಮಿಸಿದರೆ,  ಅವುಗಳನ್ನು ಬಳಸಿ,  ವ್ಯಂಜನಗಳನ್ನು ತಯಾರಿಸಿ ಮನೆ-ಮಂದಿ, ಊರು-ಕೇರಿ ಸವಿದು ಸಂಭ್ರಮ ಪಡುತ್ತವೆ. ಅಂದು ತಯಾರಾಗುವ ಪದಾರ್ಥಗಳಾದರೂ ಎಂಥವು!   ನಾವು ಚಿಕ್ಕವರಿದ್ದಾಗ  ಮಾವಿನಕಾಯಿ ಚಿತ್ರಾನ್ನ,  ಮಾವಿನ ಉಪ್ಪಿನಕಾಯಿ, ಅಮಟೆಕಾಯಿಯ ಹುಳಿಸಿಹಿಪಲ್ಯ,  ಹೋಳಿಗೆ, ಕಡಲೆ ಬೇಳೆಯ ಸಿಹಿತಿನಿಸು ಮಾಲ್ದಿ, ಉದ್ದಿನ ಕಾಳಿನ ಷಂಡಿಗೆ ಇತ್ಯಾದಿ. ಜೊತೆಗೆ ಹದಮಜ್ಜಿಗೆ ಎಂದು ಕರೆಯಲ್ಪಡುವ ಮಸಾಲೆ ಮಜ್ಜಿಗೆ ಇವು ಮುಖ್ಯವಾದ ಕೆಲವು. ಇವನ್ನೆಲ್ಲ ಸಾಂಪ್ರದಾಯಿಕ ರುಚಿಕಟ್ಟಿನಲ್ಲೇ ಮಾಡುತ್ತಿದ್ದ ಅಮ್ಮನ ಕೈ ಅಡುಗೆಯ ರುಚಿಯೇ ರುಚಿ. ಇದನ್ನು ಅಪ್ಪ-ಅಮ್ಮ, ಅಕ್ಕ-ಅಣ್ಣಂದಿರೊಂದಿಗೆ  ಜೊತೆಯಾಗಿ  ನೆಲದ ಮೇಲೆ ಮಣೆಯಲ್ಲಿ ಕೂತು  ಹಿತ್ತಲ  ಬಾಳೆ ಎಲೆಯಲ್ಲಿ  ಉಂಡರೆ ಹಬ್ಬದ ಮಜವೇ ಬೇರೆ.     ಯುಗಾದಿ  ಹಬ್ಬದಲ್ಲಿ  ಮೊದಲು ಮನೆಯಲ್ಲಿ ಮಾಡುತ್ತಿದ್ದುದು ಹಿರಿಯರ ಪೂಜೆ. ಇದೊಂದು ಭಾವನಾತ್ಮಕ ಸಂದರ್ಭ. ನಾವು ಕಾಣದ ನಮ್ಮ ಅಜ್ಜ, ಮುತ್ತಜ್ಜಂದಿರನ್ನು ಸಾಂಕೇತಿಕವಾಗಿ ಹೊಸ ಬಟ್ಟೆ ಇಟ್ಟು, ಅವರಿಗೆ ದೊಡ್ಡ ಬಾಳೆ ಎಲೆಯಲ್ಲಿ ಎಡೆ ಇಟ್ಟು ಮನೆಯ ಎಲ್ಲರೂ ಆರತಿ ಮಾಡಿ ಕೈಮುಗಿಯುವಾಗ ಗಂಟಲುಬ್ಬಿ ಬರುವಂತೆ ದುಃಖ. ಕಣ್ಣರಿಯದಿದ್ದರೂ ಕರುಳು ಅರಿಯುವ ಬಾಂಧವ್ಯ. ಆ ಕ್ಷಣಕ್ಕೆ ಸಂಭ್ರಮವೆಲ್ಲ  ಮರೆಯಾಗಿ ಅಲ್ಲಿ ನೆಲೆಸುತ್ತಿದ್ದುದು ಗಂಭೀರ ಮೌನ.  ಇಂಥ ಆಚರಣೆಗಳು ನನ್ನನ್ನು ಸೋಲಿಸುತ್ತವೆ. ಬದುಕಿನ ವಿರಾಟ್ ದರ್ಶನವಾಗುವುದು ಇಂಥ ನಾಜೂಕಿನ ಸಂದರ್ಭದಲ್ಲಿ. ಆಗ ಚಿಕ್ಕವರಾದ ನಾವು ಧರಿಸುತ್ತಿದ್ದ ಹೊಸ ಬಟ್ಟೆಯ ಮೋಹಕ್ಕೂ ಮೀರಿ ಕಾಣದ ಹಿರಿಯರ ಅವ್ಯಕ್ತ ಇರುವು ನಮ್ಮನ್ನು ಹಿಡಿದು ಕಂಪಿಸುತ್ತಿತ್ತು. ಅಂದಿನ ದಿನವಿಡೀ ಕೆಲಸದ ಹೈರಾಣು ಬದುಕಿನಲ್ಲಿ ಇಂಥ ಒಂದು ದಿನ ಮರೆಯದೇ ಹಿರಿಯರನ್ನು ನೆನೆಯುವ ಆ ನಿರಾಡಂಬರ ಸಂಪ್ರದಾಯದಲ್ಲಿ  ನನಗೆ ಅಳಿದ ಮೇಲೂ ಉಳಿದ, ಉಳಿಯಲೇಬೇಕಾದ ಪ್ರೀತಿಯ  ದ್ಯೋತಕವಷ್ಟೇ ಕಾಣುತ್ತದೆ.  ದೇವರ  ಕೋಣೆಯಲ್ಲಿ  ಇಷ್ಟು ನಡೆದು ಬಾಗಿಲಾಚೆ ದಾಟಿದರೆ ಮತ್ತೆ ನಾವು ಚಿಮ್ಮುವ ನಡಿಗೆಯ ಮಕ್ಕಳೇ. ನನ್ನ ಅಮ್ಮ,” ಅಜ್ಜ- ಅಮ್ಮನಿಗೆ ಪೂಜೆ ಮಾಡ್ರಿ” ಎಂದು ಮೆಲುದನಿಯಲ್ಲಿ ನೀಡುತ್ತಿದ್ದ ಹುಕುಂ ಹಿಂದೆ ಅವರ ಬಗ್ಗೆ ಇದ್ದ ಗೌರವಾದರಗಳ ಭಾವ ಇಂದಿಗೂ ಕಿವಿಯಲ್ಲಿ ಅನುರಣಿಸುತ್ತದೆ.  ಇಂಥ ಅಮ್ಮ ನಮಗೆಂದೂ ಕಹಿ ಬೇವನ್ನು ತಿನ್ನಿಸಿಯೇ ಇರಲಿಲ್ಲ. ಮಾಲ್ದಿಯಲ್ಲಿ ಬೇವಿನ ಹೂಗಳನ್ನು ಹಾಕಿ ತಿನ್ನಲು ಕೊಡುತ್ತಿದ್ದರು. ಮಕ್ಕಳ  ಬದುಕಲ್ಲಿ ಸಿಹಿಯ ಪಾಲೇ ಹೆಚ್ಚಿರಲಿ ಎಂಬುದು ಎಲ್ಲ ತಾಯಂದಿರ ಹಾರೈಕೆಯಲ್ಲವೇ? ಅತ್ತೆಯ ಮನೆಯಲ್ಲಿ ಹಬ್ಬದ ಆರಂಭ ಕಹಿಬೇವು- ಬೆಲ್ಲವನ್ನು ತಿನ್ನುವುದರೊಂದಿಗೆ! ಇದನ್ನು ವಿಧಿಯೆನ್ನಿ ಬೇಕಾದರೆ. ಬದುಕಲ್ಲಿ ಕಹಿ- ಸಿಹಿ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂಬ ತತ್ವದ ಈ ಆಚರಣೆ ನನಗೆ ಇಷ್ಟವಾಗಿ ಮುಂದುವರೆಸಿದೆ. ಪ್ರತಿ ವರ್ಷ ಬೇವಿನ ಎಲೆಯ ಚಿಕ್ಕ ತುಣುಕನ್ನು ತಿಂದು ಮೈ ಮುಖ ಹಿಸುಕುವ ಮಗನಿಗೆ ಜೀವನ ಹೀಗೆ. ಕಹಿಯನ್ನು ಅನುಭವಿಸಲೇಬೇಕು ಎಂದು ಹೆಳುತ್ತೇನೆ. ಈ ಸಂಪ್ರದಾಯ ಬಿಟ್ಟರೆ ಅಂಥ ಮುತ್ತಿನಂಥ ಮಾತು ಹೇಳುವ ಪ್ರಮೇಯವೆ ಬರದಲ್ಲ!  ನಮಗೆ ಯುಗಾದಿಯ ಇನ್ನೊಂದು    ವಿಶೇಷವೆಂದರೆ ಸಂಜೆಯ  ಚಂದ್ರದರ್ಶನ. ನಮ್ಮ ಮನೆಯಿದ್ದ ಉದ್ದನೆಯ ಮುಖ್ಯ ರಸ್ತೆಯ ಉದ್ದಕ್ಕೂ ಕೈಯಲ್ಲಿ ಊದಿನಕಡ್ಡಿ ಹಚ್ಚಿ ಹಿಡಿದುಕೊಂಡು ಪೂರ್ವ ಆಗಸದತ್ತ ಮುಖ ಮಾಡಿ ನಿಂತ ಸಾಲು ಸಾಲು ಜನ. ಪಾಡ್ಯದಂದು ತೆಳು ಗೆರೆಯಂತಿರುವ ಚಂದ್ರ ಸುಲಭವಾಗಿ ಗೋಚರಿಸಲಾರ. ಶುಭ್ರ ಆಕಾಶವಿದ್ದರೆ ಚುರುಕು ಕಣ್ಣುಗಳು ಬೆಳ್ಳಿಯ ಕೂದಲೆಳೆಯನ್ನು  ಗುರುತಿಸಿದಾಕ್ಷಣ ಉಸಿರು ಬಿಗಿ ಹಿಡಿದು ಕಾಯುತ್ತಿದ್ದವರಲ್ಲಿ ಮಿಂಚಿನ ಸಂಚಾರ ವಾಗುತ್ತಿತ್ತು. ಆಗ ಎಲ್ಲರ ತೋರು ಬೆರಳುಗಳೂ ಅದೇ ದಿಕ್ಕಿಗೆ ಚಾಚಿರುತ್ತಿದ್ದವು. ಕಂಡವರ ಮುಖದಲ್ಲಿ ಅರಳುತ್ತಿದ್ದ ಸಂತಸಕ್ಕೆ ಪಾರವಿರಲಿಲ್ಲ. ಕಾಣದಿದ್ದವರಲ್ಲಿ ಕೆಲವರು ಸಪ್ಪಗಾಗಿ ಒಪ್ಪಿಕೊಂಡರೂ ಕೆಲವರಿಗೆ ಕಾಣದಿದ್ದನ್ನು ಒಪ್ಪಿಕೊಳ್ಳಲಾಗದ ಬಿಗುಮಾನ. ಬೀದಿಯಲ್ಲಿ ಪರಸ್ಪರ  ಮಾತನಾಡದವರೂ ಚಂದ್ರನ  ಕಾಣಲು, ಕಾಣಿಸಲು ಒಂದಾಗುತ್ತಿದ್ದ ಅಪರೂಪದ ಕ್ಷಣವದು. ಬಹಳ ಹೊತ್ತಿನವರೆಗೂ ಅಲ್ಲಿ ಚಂದ್ರದರ್ಶನದ ಸುತ್ತಲೇ ಮಾತುಕತೆಗಳು ನಡೆಯುತ್ತಿದ್ದವು. ಕಳೆದ ಕೆಲ ವರ್ಷಗಳ ಚಂದ್ರದರ್ಶನದ ನೆನಪುಗಳು ತಾಜಾ ಆಗುತ್ತಿದ್ದವು. ಮತ್ತೆ ಇಂಥ ಭೇಟಿಗೆ ಒಂದು ವರ್ಷ ಕಾಯಬೇಕಲ್ಲ ಎಂಬ ಕಾರಣಕ್ಕೋ ಏನೋ ಯಾರಿಗೂ ಬೇಗನೇ ಅಲ್ಲಿಂದ ಕದಲಲು ಆಗುತ್ತಿರಲಿಲ್ಲ. ಕೊನೆಗೆ ಹಿರಿಯರೊಬ್ಬರು ನಡೀರಿ ದೇವರಿಗೆ ದೀಪ ಹಚ್ಚಬೇಕು ಎಂದಾಗ ಮತ್ತೊಮ್ಮೆ ಗಡಿಬಿಡಿ ಶುರುವಾಗುತ್ತಿತ್ತು. ಹಕ್ಕಿಗಳು ಗೂಡು ಸೇರುವಾಗಿನ ಕಲಕಲ  ಮನೆಯವರೆಗೂ ಸಂಚರಿಸಿ ನಿಧಾನಕ್ಕೆ ಬೀದಿ ಮೊದಲಿನಂತಾಗುತ್ತಿತ್ತು. ಸಂಜೆ ಮನೆಯ ಹಿರಿಯರಿಗೆ ನಮಸ್ಕರಿಸುವುದರೊಂದಿಗೆ  ಹಬ್ಬ ಮುಗಿಯುತ್ತಿತ್ತು.  ಈ ಒಂದು ದಿನಕ್ಕಾಗಿ ವಾರಗಳಿಂದ ಆರಂಭವಾಗುತ್ತಿದ್ದ ಮನೆಯ ಸ್ವಚ್ಛತೆ, ಅಟ್ಟದ ಧೂಳು ಕೊಡವುವುದು, ತಿಂಡಿ- ತಿನಿಸುಗಳನ್ನು ಮಾಡಲು, ತುಂಬಲು ಬೇಕಾದ ಪಾತ್ರೆಗಳನ್ನು ತೊಳೆಯುವುದು, ಸಾಮಾನುಗಳನ್ನು ಪಟ್ಟಿ ಮಾಡಿಕೊಂಡು ಶಾನಭಾಗರ ಅಂಗಡಿಗೆ ಹೋಗಿ ಕೊಟ್ಟು ಬರುವುದು, ನಸುಕಿನಲ್ಲೇ ಬಂದು ಬಾಗಿಲಿಗೆ ಹೂ ಸಿಕ್ಕಿಸಿ ಅದೃಶ್ಯವಾಗುವ   ವರ್ತನೆಯ ಹೂ ಮಾರುವವಳಿಗೆ ಹಬ್ಬಕ್ಕೆ ಎಲ್ಲರಿಗೂ ಒಂದೊಂದು ದಂಡೆ ಮಲ್ಲಿಗೆ ಹೂ ಇರಬೇಕು ಎಂದು ಹೇಳಲು  ಹಬ್ಬಕ್ಕೆ ಎರಡು ದಿನ ಮೊದಲು ಬೇಗ ಎದ್ದು  ಕಾದು ಕುಳಿತುಕೊಳ್ಳುವುದು, ಮನೆಯ ಮುಂಭಾಗದ ಅಂಗಳ ಸಾರಿಸಿ ಯಾವ ರಂಗೋಲಿ ಇಡಬೇಕು ಎಂದು ರಂಗೋಲಿ  ಬಿಡಿಸಿ ಸಂಗ್ರಹಿಸಿಟ್ಟುಕೊಂಡ ಪುಸ್ತಕವನ್ನು ಗಣಿತವೋ, ವಿಜ್ಞಾನವೋ ಅಭ್ಯಾಸ ಮಾಡಿದಂತೆ ಬಿಡಿಸಿ ಬಿಡಿಸಿ ಕಲಿತುಕೊಳ್ಳುವುದು….ಮುಂತಾಗಿ ಮನೆಯ ಎಲ್ಲರಿಗೂ ಕೆಲಸವೋ ಕೆಲಸ !!  ಹಬ್ಬದ ದಿನ  ಬೆಳಿಗ್ಗೆ ಬೇಗನೇ ಎದ್ದು   ಕೊಟ್ಟಿಗೆಯಲ್ಲಿದ್ದ ಸಗಣಿಯನ್ನು ಬಾಚಿ  ಹಳೆಯ ಬಕೀಟಿಗೆ ತುಂಬಿ ನೀರು ಸುರುವಿ ಕೈಯಾಡಿಸುತ್ತ ಅಂಗಳ ಸಾರಣೆಗೆ ಬೇಕಾಗುವ ಹದಕ್ಕೆ ಗಂಜಲ ತಯಾರಿಸುವುದನ್ನು ನಿಷ್ಠೆಯಿಂದಲೇ ಮಾಡುವುದು. ಅದರ ವಾಸನೆಗೆ ಯಾವತ್ತೂ ‘ ಇಶ್ಯಿ’  ಎನಿಸಲೇ ಇಲ್ಲ. ಅಂಗಳದ ಒಂದು ತುದಿಯಿಂದ ತಂಬಿಗೆಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕುತ್ತ ಕಡ್ಡಿಹಿಡಿಯಲ್ಲಿ  ನಯವಾಗಿ ಕಸಬರಿಗೆಯ ಒಂದು ಕಡ್ಡಿಯ ಗುರುತೂ ಬರದಂತೆ  ಹರಡುತ್ತ ಅಂಗಳ ಪೂರ್ತಿ ಬಳಿದರೆ ನನಗೂ, ಅಮ್ಮನಿಗೂ ಖುಷಿ. ಇವೆಲ್ಲ ನಾವು ನೋಡಿ ಕಲಿತ ಪುಟ್ಟ ಜವಾಬ್ದಾರಿಗಳು. ಅದಕ್ಕಾಗಿ ಅಮ್ಮನ ಮುಖದಲ್ಲಿ ಆ ಸಂತಸದ ನಗು ಉಕ್ಕುತ್ತಿತ್ತು ಎಂದು ಈ ತಾಯಿಗೆ ಈಗ  ಅರಿವಾಗಿದೆ.  ಅದೆಂಥ ತುಂಬು ಬದುಕು!! ಈಗ ಬದಲಾಗಿದೆ ಎಂದೆನಲ್ಲವೇ? ಅಡುಗೆಗಳು ಬಹುತೇಕ  ಹಾಗೇ ಇವೆ. ಮಾಲ್ದಿ ಹೆಚ್ಚು ಇಷ್ಟ ಪಡದ ಕಾರಣ ಮೆನುವಿನಿಂದ ಕಣ್ಮರೆಯಾಗಿದೆ. ಹೊಸತಾಗಿ ಕೆಲವು ಸೇರ್ಪಡೆಯಾಗಿವೆ.  ಈಗಲೂ ಸಂಜೆ ಊದಿನಕಡ್ಡಿ ಹಚ್ಚಿಕೊಂಡು  ಟೆರೇಸಿನ ಮೇಲೆ ಹೋಗಿ ಚಂದ್ರನನ್ನು ಹುಡುಕುತ್ತೇನೆ. ಕಂಡರೆ ಎಲ್ಲ ಮೊದಲಿನಂತೆ..ಮಗ ಅಣಕಿಸಿದಾಗ ಹೇಳುತ್ತೇನೆ. ಇದು ನಮ್ಮ ಪರಂಪರೆಯ ಭಾಗ. ಬಿಟ್ಟರೆ ಕಳೆದು ಹೋಗಿಬಿಡುತ್ತದೆ. ಅನುಸರಿಸಿದರೆ ಕಳೆದ ಕಾಲವನ್ನು ಕಟ್ಟಿ ಹಾಕಿದ ಸಂತೋಷ ಆ ಕ್ಷಣಕ್ಕೆ ಆಗುತ್ತದೆ.  ಹೆಚ್ಚೇನಿಲ್ಲ.  ಇದನ್ನು ವ್ಯಾಮೋಹವೆನ್ನಿ. ಗೊಡ್ಡು ಎಂದು ಮೂಗು ಮುರಿಯಿರಿ. ಬೇಸರವಿಲ್ಲ. ಹೊಟೆಲ್ಲುಗಳಲ್ಲಿ ದುಬಾರಿ ಬಿಲ್ ತೆತ್ತು ಬೀಗುವ ಹಬ್ಬಕ್ಕಿಂತ ಇಂಥ ಬಾಗುವ ಹಬ್ಬವೇ ನನಗೆ ಪ್ರಿಯ.  ಅಡುಗೆಯನ್ನು ಹಂಚಿ ತಿನ್ನುವುದು ಹಳ್ಳಿಗಳ, ಸಣ್ಣ ಪಟ್ಟಣಗಳ ಸುಂದರ ಅಭ್ಯಾಸ. ಅದೇ ನೆವದಲ್ಲಿ ಹಾಲು- ಹೈನು ಸಮೃದ್ಧವಾಗಿ ನೀಡುವ ಆಕಳಿಗೆ ಒಂದು ಎಡೆ, ಮನೆ ದೇವರಿಗೆ ಒಂದು, ಹಿತ್ತಲಲ್ಲಿರುವ ಭೂತನ/ ಚೌಡಿ ಕಟ್ಟೆಗೆ ಒಂದು, ಊರು ದೇವರಿಗೆ ಒಂದು, ಹಿರಿಯರಿಗೆ ಒಂದು, ಹೊಸ್ತಿಲುಗಳಿಗೆ ಒಂದು..ಹೀಗೆ ಎಲ್ಲರನ್ನೂ- ಎಲ್ಲವನ್ನೂ ನೆನೆಯುವ ಸತ್ಸಂಪ್ರದಾಯವನ್ನು ಅಮ್ಮ ಅನುಸರಿಸಿಕೊಂಡು ಬಂದಿದ್ದರು.. ಇದನ್ನು ಬಿಡಲಾರದ ನಾನು ಮನೆಗೆ ಹಾಲು ಕೊಡುವವರಿಗೆ, ಅವರ ಮನೆಯ ಆಕಳಿಗೆ, ಎದುರು ಇರುವ ದೇವಸ್ಥಾನಕ್ಕೆ ಕೊಡುತ್ತೇನೆ. ಅಂದು ದೇವಾಲಯ ತುಂಬಿ ತುಳುಕುವುದರಿಂದ ಪಾಪ ಭಟ್ಟರಿಗೆ ಮನೆಗೆ ಹೋಗಲೂ ಪುರಸೊತ್ತಿರುವುದಿಲ್ಲ. ಪ್ರತಿ ಹಬ್ಬದಲ್ಲೂ ಅವರಿಗೆ ನಮ್ಮ ಮನೆಯದೇ ಊಟ. ಜೊತೆಗೆ ದೇವಾಲಯದ ಸುತ್ತಲೂ ಇರುವ ಉದ್ಯಾನ ನೋಡಿಕೊಳ್ಳುವ ಮಾಲಿಗಳಿಗೂ.  ಸಂಪ್ರದಾಯ ಗೊಡ್ಡಲ್ಲ. ಅದನ್ನು ನಾವು ಅರ್ಥಪೂರ್ಣವಾಗಿ ಮುಂದುವರೆಸಿಕೊಂಡು ಹೋಗಬಹುದು. ಹಬ್ಬದ ನೆವದಲ್ಲಿ ಇಷ್ಟೆಲ್ಲ ನೆನಪಾಗಿ ಮನಸ್ಸು ಒದ್ದೆಯಾಯಿತು. ಹೊಸ ವರ್ಷ ದುಡಿಯುವ ಕೈಗಳಿಗೆ ಬಲವನ್ನೂ,

Read Post »

ಇತರೆ

ಯುಗಾದಿ ವಿಶೇಷ ಬರಹ ಕೊನೆಗೂ ಸಿಕ್ಕ ಸದ್ಗುರು 1993 – 94 ರ ಮಾತದು. ನಾವಾಗ ಖಾಸಗಿ ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದಾಗ ವಿಜ್ಞಾನ ವಿಷಯ ಬೋಧಿಸಲು ಹೊಸ ಶಿಕ್ಷಕರೊಬ್ಬರ ಆಗಮನವಾಯಿತು. ಹಳ್ಳಿ ಶಾಲೆ. ಹಳ್ಳಿ ಹುಡುಗರಾಗಿದ್ದ ನಮಗೆ ಅವರ ಮಾತು – ಕತೆ, ರೀತಿ – ನೀತಿ & ಎಲ್ಲಕ್ಕೂ ಮಿಗಿಲಾಗಿ ಅವರ ಸ್ಟೈಲ್ ಅತ್ಯಾಕರ್ಷಿಸಿತು. ಮೊದಲ ನೋಟದಲ್ಲೇ ವಿದ್ಯಾರ್ಥಿಗಳ ಮನ ಗೆದ್ದ ಅವರು ನಮ್ಮ ಪಾಲಿಗೆ ಸ್ಟೂಡೆಂಟ್ ಐಕಾನ್ ಎನಿಸಿದರು.  ಅವರು ಪಾಠ ಹೇಳುತ್ತಿದ್ದ ರೀತಿ, ಬೋಧಿಸುವ ಪರಿ, ಸದಾ ಹಸನ್ಮುಖತೆಯಿಂದಲೇ ಮನವರಿಕೆ ಮಾಡಿಸುತ್ತಿದ್ದ ಅವರ ತಾಳ್ಮೆ, ತಪ್ಪು ಮಾಡಿದಾಗ ಹೊಡೆಯದೆ – ಬೈಯದೇ, ಯಾರೊಬ್ಬರ ಮನಸ್ಸಿಗೂ ನೋವಾಗದಂತೆ ನಯವಾಗಿ ತಿದ್ದಿ – ತೀಡುತ್ತಿದ್ದ ತಾಯ್ಮಮತೆಯ ಅವರ ಅಂತಃಕರಣ, ಬೋರ್ ಎನಿಸಿದಾಗ ಹಾಡು ಹೇಳಿ ರಂಜಿಸಿ ಪಾಠ ಮುಂದುವರೆಸುತ್ತಿದ್ದ ಕ್ರಮ … ಥೇಟ್ ರಾಜ್ ಕುಮಾರ್ ವಾಯ್ಸಲ್ಲೂ ಒಮ್ಮೊಮ್ಮೆ ಮಾತಾಡಿ, ಹಾಡ್ಹೇಳಿ, ಜೋಕ್ಸೇಳಿ ನಕ್ಕು ನಗಿಸಿ ಬೋಧಿಸುತ್ತಿದ್ದ ಅವರ ಬತ್ತದ ಉತ್ಸಾಹ, ಯಾವುದೇ ಕ್ರೀಡೆ – ಆಟೋಟದಲ್ಲೂ ವಿದ್ಯಾರ್ಥಿಗಳೊಂದಿಗೆ ತಾವೂ ಭಾಗವಹಿಸಿ ಹುರಿದುಂಬಿಸುತ್ತಿದ್ದ ಉತ್ಸುಕತೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವ ಸಂದರ್ಭದಲ್ಲಿ ತಾವೇ ನೃತ್ಯ ನಿರ್ದೇಶನ ಮಾಡಿ ವಿದ್ಯಾರ್ಥಿಗಳೊಂದಿಗೆ ವೇದಿಕೆಯಲ್ಲಿ ತಾವೂ ಕೂಡ ಒಂದು ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದ ಅವರ ಬಹುಮುಖಿ ಪ್ರತಿಭೆ … ಹೀಗೆ ಒಂದೇ ಎರಡೇ ಎಲ್ಲವೂ ಅದ್ಭುತ – ಅಮೋಘ.         ಅವರ ವ್ಯಕ್ತಿತ್ವವೇ ಅಂಥದ್ದು. ಎಂಥಾ ವಿದ್ಯಾರ್ಥಿಗಾದರೂ ಎಷ್ಟೇ ವರುಷಗಳಾದರೂ ಮರೆಯಲಾಗದಂತಹ ಛಾಪು ಮೂಡಿಸುವಂಥದ್ದು.   ಹಾಗಾಗಿಯೇ ನಾವು ಅವರನ್ನ ಸದಾ ಸ್ಮರಿಸುತ್ತಲೇ ಇರುತ್ತಿದ್ದೆವು.  ನಮ್ಮ  SSLC ಪರೀಕ್ಷೆ ಮುಗಿಯುತ್ತಿದ್ದಂತೆಯೇ  ಅವರು ಆ ಶಾಲೆಯಿಂದ ನಿರ್ಗಮಿಸಿ ಬಿಟ್ಟಿದ್ದರು. ಎಲ್ಲಿಗೆ ಹೋದರು, ಯಾವ ಊರಿನಲ್ಲಿ ಜಾಬ್ ಮಾಡುತ್ತಿದ್ದಾರೆ ಎಂಬ ಕುರಿತು ಆ ಶಾಲೆಯ ಸಿಬ್ಬಂದಿಯವರಿಗಾಗಲಿ ಅಥವಾ ಯಾವೊಬ್ಬ ವಿದ್ಯಾರ್ಥಿಗಾಗಲಿ ಮಾಹಿತಿ ಇರಲಿ ಸುಳಿವು ಸಹ ಸಿಗಲಿಲ್ಲ . ಫೋನ್ ಮೂಲಕವಾದರೂ ಪತ್ತೆ ಹಚ್ಚೋಣವೆಂದರೆ ನಮ್ಮದು ಆಗ ಫೋನೇ ಇಲ್ಲದ ಕಾಲ, ನಮ್ಮೂರಲ್ಲಿ ಆಗ ಯಾರ ಮನೆಯಲ್ಲೂ ಲ್ಯಾಂಡ್ ಲೈನ್ ಕೂಡ ಇರಲಿಲ್ಲ . ಅಂತೆಯೇ ನಮ್ಮ ಆ ಗುರುಗಳ ಬಳಿ ಕೂಡ .. ಹಾಗಾಗಿ Long Period  Communication Gap ಆಯ್ತು …     ಹೈಸ್ಕೂಲ್ ಮತ್ತು M.Phil ವಿದ್ಯಾಭ್ಯಾಸದ ನಡುವಣ ಪಯಣದಲ್ಲಿ ಹತ್ತು ಹಲವು ಮೇರು ಶಿಕ್ಷಕರ ದಿಗ್ದರ್ಶನವೂ ಆಯ್ತು. ಆದರೂ, ಸುಮಾರು 25 ವರ್ಷಗಳೇ ಕಳೆದರೂ ಅವರನ್ನು ಕಾಣುವ ತವಕ ಮಾತ್ರ ಮನದಲ್ಲಿ ಮನೆ ಮಾಡಿತ್ತು.  ಅದೂ ಕೂಡ ಒಂದು ಅಚ್ಚರಿಯ ಸಂಗತಿಯಾಗಿ ಮನವ ಕಾಡಿತ್ತು … ಮರೆಯಲಾಗದ ಯುಗಾದಿ :    ಆ ತವಕಕ್ಕೆ ಪ್ರತಿಯಾಗಿ ಕಿಂಚಿತ್ತು ಫಲ ಎಂಬಂತೆ ಆ ಯುಗಾದಿಯ ದಿನದಂದು ಒಂದಷ್ಟು ಆ ಮಹನೀಯರ ಇರುವಿಕೆಯ ಮೂಲದ ಮಾಹಿತಿ ಲಭಿಸಿತ್ತು. 2018 ರ  ಯುಗಾದಿಯಂದು ಹಂಪಿ – ಹೊಸಪೇಟೆಯ ಕಡೆ ಸ್ನೇಹಿತರೊಂದಿಗೆ ಪ್ರಯಾಣ ಬೆಳೆಸಿದ್ದೆ. 2 ದಿನ ಅಲ್ಲಿಯೇ ತಂಗಿದ್ದ ನಾವು ವಾಪಸ್ ಊರಿಗೆ ಬರುತ್ತಿದ್ದಾಗ ನಮ್ಮ ಮಿತ್ರರೊಬ್ಬರ ಬಳಿ ಆಕಸ್ಮಾತ್ ಆಗಿ ನಮ್ಮ ಆ ಗುರುವಿನ ಬಗ್ಗೆ ಪ್ರಸ್ತಾಪಿಸಿದೆ. ಅದಕ್ಕವರು – ಅಯ್ಯೋ ನೀವು ಇಷ್ಟು ದಿನ ಹುಡುಕುತಿದ್ದ ನಿಮ್ಮ ಗುರುಗಳು ಅಲ್ಲೇ ಹಗರಿಬೊಮ್ಮನ ಹಳ್ಳಿಯ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಇದಾರಂತೆ, ಅಷ್ಟು ಮಾತ್ರ ನನಗೆ ಗೊತ್ತು. ಆದರೆ ಪಕ್ಕಾ ಅಡ್ರೆಸ್ ಆಗಲಿ ಅಥವಾ ಫೋನ್ ನಂಬರ್ ಆಗಲಿ ನಂಗೊತ್ತಿಲ್ಲ … ಆನ್ ದಿ ವೇ ಬರ್ತಾ ಪತ್ತೆ ಹಚ್ಕೊಂಡು ಬನ್ನಿ ಎಂದರು….     ಅದೇ ಜಾಡು ಹಿಡಿದು ಅಲ್ಲಿಗೆ ಹೋದ್ವಿ . ಕೆಲವರನ್ನು ಕೇಳಲಾಗಿ ಗೊತ್ತಿಲ್ಲ ಎಂಬ ಉತ್ತರ. ಇನ್ನೇನು ನಿರಾಸೆಯಿಂದ ಹೊರಡುವ ಹೊತ್ತಿಗೆ ಕೊನೆಯ ಪ್ರಯತ್ನವೆಂಬಂತೆ ಒಂದು ಪ್ರಾವಿಜನಲ್ ಸ್ಟೋರ್ನಲ್ಲಿ ವಿಚಾರಿಸಿದಾಗ – ” ಮೊದಲು 1 ವರ್ಷದ ಹಿಂದೆ ಅವರು ಇಲ್ಲೇ ಪಕ್ಕದ ಕೇರಿಯಲ್ಲಿ ಇದ್ರು. ಈಗ ಎಲ್ಲಿದ್ದಾರೋ ಗೊತ್ತಿಲ್ಲ ” ಅಂದು ಬಿಟ್ಟಾಗ ನಿಜಕ್ಕೂ ಒಂದಿಷ್ಟು ಖುಷಿ ಮತ್ತಿಷ್ಟು ಬೇಸರವೆನಿಸಿತು. ಅವರ ಫೋನ್ ನಂಬರ್ ಏನಾದ್ರೂ ಇದ್ರೆ ಕೊಡ್ತಿರಾ ಸರ್ ಎಂದೆವು. ಇಲ್ಲ ಎಂದ ಅವರು ಕೊಂಚ ಬಳಿಕ … ಅವರ ಅಳಿಯ ಒಬ್ರ ನಂಬರ್ ಇದೆ ಕೊಡ್ತಿನಿ, ಬೇಕಾದ್ರೆ ಅವರ ಬಳಿ ವಿಚಾರಿಸಿ ನೋಡಿ ಎಂದರು. ನಿಟ್ಟುಸಿರು ಬಿಟ್ಟ ನಾವು ಕೂಡಲೇ ನಂಬರ್ ಪಡೆದು ಫೋನಾಯಿಸಿದರೆ ಅವರೊಡನೆಯೇ ನಮ್ಮ ಗುರುಗಳೂ ಸಹ ಇದ್ದರು … ಸಂತಸಕ್ಕೆ ಪಾರವೇ ಇರಲಿಲ್ಲ. ಪರಿಚಯ ಹೇಳಿಕೊಂಡೆ …ಒಂದಷ್ಟು ಕುಶಲೋಪರಿಯೂ ಆಯಿತು.. “ಎಂಥಾ ಕೆಲಸ ಆಯ್ತಲ್ಲ, ನಾವು ಹಗರಿಬೊಮ್ಮನಹಳ್ಳಿಯಲ್ಲೇ ವಾಸವಿದ್ದೇವೆ. ಇನ್ನೊಮ್ಮೆ ಈ ಕಡೆ ಬಂದಾಗ ಮನೆಗೆ ಬಾ. ಖುದ್ದು ಭೇಟಿಯಾಗೋಣ ಗಂಗಾಧರ್, ನಾವೀಗ ಸಂಕ್ರಾಂತಿ ಪ್ರಯುಕ್ತ ಹೊಸಪೇಟೆ ಹತ್ತಿರದ ಹುಲಿಗಿ ಗ್ರಾಮಕ್ಕೆ ಬಂದಿದ್ದೇವೆ. ಮತ್ತೊಮ್ಮೆ ಖಂಡಿತಾ ಭೇಟಿ ಆಗೋಣ ” ಎಂದ್ಹೇಳಿ ತಮ್ಮ ಮೊಬೈಲ್ ನಂಬರ್ ಕೊಟ್ಟು ಅಡ್ರೆಸ್ ಹೇಳಿ ಫೋನ್ ಮೂಲಕವೇ ಬೀಳ್ಕೊಟ್ಟರು…. ಅಂತೂ.. , ಮುಖಭೇಟಿಯಾಗದಿದ್ದರೂ ಮತ್ತೊಮ್ಮೆ ಸಿಗುವ ಭರವಸೆಯೊಂದಿಗೆ ಅಲ್ಲಿಂದ ಸೀದಾ ಊರಿಗೆ ತೆರಳಿದೆವು … ಈಗ ನೆನಪಾದಲೆಲ್ಲಾ ಫೋನ್ ಮಾಡುತ್ತೇನೆ. ಆ ದಾರಿಯಲ್ಲಿ ಪ್ರಯಾಣಿಸಿದಾಗಲೆಲ್ಲಾ ಅವರ ಮನೆಗೆ ಹೋಗಿ ಬರುತ್ತೇನೆ.     ಆ ನಮ್ಮ ಮನೋ ಮಂದಿರದ ಗುರುಗಳ ಹೆಸರು ” ಶ್ರೀಯುತ ಕುಮಾರ್ ಸ್ವಾಮಿ ಹಿರೇಮಠದ್ “   ವೃತ್ತಿ ಪ್ರೇಮವೊಂದನ್ನೇ ಗುರಿಯಾಗಿಸಿಕೊಂಡು ಬೋಧಿಸುವ ಇಂತಹ ಶಿಕ್ಷಕರ ಸಂಖ್ಯೆ & ಸೇವೆ ಈಗ ವಿರಳವೇ ಸರಿ …     ಇಂತಹ ವಿರಳ ಗುರು ಮರಳಿ ಸಿಕ್ಕ 2018 ರ ಯುಗಾದಿಯ ಎಂದಿಗೂ ಮರೆಯಲಾಗದು. ಪ್ರತಿ ಯುಗಾದಿಗೂ ಅವ್ಯಾಹತ ಆ ಗುರುವಿನ ಸ್ಮರಣೆ. ತಸ್ಮೈ ಶ್ರೀ ಗುರುವೇ ನಮಃ … ********************************** ಗಂಗಾಧರ್ ಬಿ.ಎಲ್ ನಿಟ್ಟೂರ್

Read Post »

ಇತರೆ

ಯುಗಾದಿ ವಿಶೇಷ ಬರಹ ಯುಗಾದಿ ಯುಗಾದಿ        ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಒಂದು ಅತ್ಯುನ್ನತ ಸಾಂಸ್ಕೃತಿಕ ಮಹತ್ವವಿದೆ. ಆದುದರಿಂದಲೇ ಭಾರತೀಯರು ತಮ್ಮ ಹೊಸವರುಷದ ದಿನವೂ ಯುಗಾದಿಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಗ್ರಾಮೀಣರ ಆಡುಮಾತಿನ ಲ್ಲಿ ಹೇಳುವುದಾದರೆ ಯುಗಾದಿಯು ‘ಉಗಾದಿ’ ಎನಿಸಿಕೊಳ್ಳುತ್ತದೆ. ಯುಗಾದಿ ಹಬ್ಬ ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ. ಇದು ಭಾರತೀಯರ ಪಾಲಿಗೆ ನವಮನ್ವಂತರ, ಅಲ್ಲದೆ ಇದು ಭಾರತೀಯರಾದ ನಮ್ಮ ಪಾಲಿಗೆ ಹೊಸ ವರುಷದ ಮೊದಲ ದಿನ.     ಯುಗಾದಿಯನ್ನು ಚಾಂದ್ರಮಾನ- ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿಯಿದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ದತಿಗೆ ಚಾಂದ್ರಮಾನ ಯುಗಾದಿ ಎನ್ನುವರು. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸುವರು. ದಕ್ಷಿಣ ಭಾರತೀಯರು ಚಾಂದ್ರಮಾನ ವನ್ನು ಅನುಸರಿಸಿ ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿ ಆಚರಿಸುವರು.  ಬೇವು- ಬೆಲ್ಲ       ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು.ಬೇವು ಬೆಲ್ಲವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ…  ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| ಅದರರ್ಥ ಹೀಗಿದೆ– “ನೂರು ವರುಷಗಳ ಆಯುಷ್ಯ, ಸದ್ರಢ ಆರೋಗ್ಯ ,ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ”.   ಯುಗಾದಿ ಹಬ್ಬದಂದು ಬೇವು ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ,ಸುಖ- ದು:ಖ, ನಲಿವು,ನೋವು ಎಂಬ ಮಾತಿನಂತೆ ಜೀವನದಲ್ಲಿ ಇವೆರಡರ ಇರುವಿಕೆ ಅಗತ್ಯ ವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ‌ಸಾಧ್ಯ. ಆದರೆ ಕಷ್ಟಕ್ಕಿಂತ ಸುಖವೆ ಬೇಕು‌ ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿಯಲ್ಲಿ ಕಷ್ಟವನ್ನು, ಕಹಿಯನ್ನು, ನೋವನ್ನು ಬಯಸುವವರೇ ಇಲ್ಲವೆನ್ನುವಂತಾಗಿದೆ. ಆದರೆ ಜೀವನ ಎನ್ನುವುದು ಕಷ್ಟ ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ‌ ಇವೆರಡು ಒಂದನ್ನೊಂದು ಬಿಟ್ಟಿರಲಾರವು.        ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಯುಗಾದಿ ಹಬ್ಬದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಜೀವನದಲ್ಲಿ ಏನೇ ಏರುಪೇರಾದರೂ ಸರ್ವರೂ ಸುಖದಿಂದ, ಸಮನ್ವಯದಿಂದ ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಇದರಲ್ಲಿದೆ.       ಯುಗಾದಿ ಬಂದಿತೆಂದರೆ ಎಲ್ಲೆಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರ ಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ವರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುತ್ತದೆ.       ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲಾ ಹಿಂದೂಗಳು ಆಚರಿಸುತ್ತಾರೆ. ರೈತರು ಎತ್ತುಗಳನ್ನು ಅಲಂಕರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ವನ್ನು ಭಾರತ ಪರ್ವದಲ್ಲಿ ಬೇರೆ ಬೇರೆ ಹೆಸರಿನಿಂದ ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಗುಜರಾತ್,ಮಹಾರಾಷ್ಟ್ರದಲ್ಲಿ ಯುಗಾದಿಯ ದಿನ ಪ್ರತಿಯೊಂದು ಮನೆಯ ಮುಂದೆ ಗುಡಿಯನ್ನು ನಿಲ್ಲಿಸುವ ಪದ್ದತಿ ಇರುವುದರಿಂದ ಯುಗಾದಿಯನ್ನು ಗುಡಿಪಾಡ್ಯ ಎಂದು ಕರೆಯುವರು. ಗುಡಿ ಎಂದರೆ ಧ್ವಜ. ಒಂದು ಕೋಲಿನ ತುದಿಗೆ ರೇಷ್ಮೆ ಬಟ್ಟೆ ಏರಿಸಿ ಅದರ ಮೇಲೆ ಬೆಳ್ಳಿ ಅಥವಾ ಹಿತ್ತಾಳೆಯ ಸಣ್ಣ ಬಿಂದಿಗೆಯನ್ನು‌ ಕಟ್ಡಿ ಬೇವು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುವರು. ಮಹಾಭಾರತದಲ್ಲಿ ಇದರ ಪ್ರಸ್ತಾಪವಿದೆ.      ಸಿಹಿತಿನಿಸು……    ಒಬ್ಬಟ್ಟು ಅಥವಾ ಹೊಳಿಗೆ ಬಹಳ ದಿನ ಇರದೇ ಕೊಡುವುದೆಂದು ಕಡಲೆ ಅಥವಾ ತೊಗರಿ ಬೆಳೆಯ ಹೂರಣದಲ್ಲಿ ಮಾಡುವರು. ಇದನ್ನೆ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆಯುತ್ತಾರೆ. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆವರು.  ಯುಗಾದಿಯ ಖಗೋಳ ಘಟನೆಗಳು     ಯುಗಾದಿಯ ಸಂದರ್ಭದಲ್ಲಿ ಭೂಮಿಯ ಆಕ್ಸೆಸ್ ವಾಲುತ್ತದೆ. ಉತ್ತರ ಗೋಳಾರ್ಧವು ಹೆಚ್ಚಿನ ಪ್ರಮಾಣದ ಸೂರ್ಯನ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈ ಸಮಯದಲ್ಲಿ ಭೂಮಿಯು ಹೆಚ್ಚು ಉಷ್ಣತೆಗೆ ಒಳಗಾಗುತ್ತದೆ. ಆದ್ದರಿಂದ ಮನುಷ್ಯರಿಗೆ ಹೆಚ್ಚು ಶಾಖದ ಅನುಭವಾಗುತ್ತದೆ. ಅದನ್ನು ಸಹಿಸುವ ಶಕ್ತಿಯನ್ನು ಯುಗಾದಿ ಆಚರಣೆ ನೀಡುತ್ತದೆ‌. ಖಗೋಳ ಶಾಸ್ತ್ರದ ಪ್ರಕಾರ ಯುಗಾದಿಯ ಹಿಂದಿನ ದಿನ ಅಮವಾಸ್ಯೆ ಯಾಗಿರುತ್ತದೆ.       ಹೊಸ ಸಂವತ್ಸರದ ಪ್ರಾರಂಭದ ದಿನ ಇದು. ವಸಂತ ಋತುವಿನ ಪ್ರಾರಂಭದ ದಿನ ಇದಾಗಿರುತ್ತದೆ. ಇನ್ನು‌ “ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು” ಎಂಬ ಹಾಡಿನಂತೆ ಪ್ರಕೃತಿಯೂ ಕೂಡ ಚಿಗುರೆಲೆಗಳಿಂದ‌ ಹೊಸ ಋತುವಿನ ಸ್ವಾಗತ ಕೋರಲು ಸಜ್ಜಾಗಿರುವ ಸಮಯ ಇದಾಗಿದೆ.       ಈ ಸಮಯದಲ್ಲಿ ಮರಗಳ ಎಲೆಗಳು ಉದುರುತ್ತದೆ, ಹೊಸ ಚಿಗುರು ಪ್ರಾರಂಭವಾಗುತ್ತದೆ. ಹಾಗಾಗಿ ಹೊಸತನದ ಸಂಕೇತವನ್ನು ಪ್ರಕೃತಿಯೂ ಕೂಡ ನೀಡಲು ಪ್ರಾರಂಭಿಸುವ ಸುದಿನ ಇದು.  ಪಂಚಾಂಗದ ಪ್ರಕಾರ ಯುಗಾದಿಯ ದಿನದಂದು ಹೊಸ ಹಿಂದೂ ಕ್ಯಾಲೆಂಡರ್ ಪ್ರಾರಂಭವಾಗುತ್ತದೆ.     ಹಿಂದೂ ಕ್ಯಾಲೆಂಡರ್ ಕೇವಲ ಸಾಂಪ್ರದಾಯಿಕವಾಗಿ ಮಾತ್ರವೇ ಮಹತ್ವಪೂರ್ಣ ವಾದುದಲ್ಲ. ಆದರೆ ಇದು ವೈಜ್ಞಾನಿಕವಾಗಿಯೂ ಮತ್ತು ಖಗೋಳ ಶಾಸ್ತ್ರದ ಪ್ರಕಾರವೂ ಕೂಡ ಹಲವು ಗ್ರಹಗಳ ಕ್ಷಣಗಳನ್ನು ವಿವರಿಸುವ ಸಂಪರ್ಕ ಸಾಧನವಾಗಿದೆ.      ನಮ್ಮ ಭಾರತೀಯ ಶ್ರೇಷ್ಠ ಗಣಿತಜ್ಞರೆನಿಸಿರುವ ಭಾಸ್ಕರಾಚಾರ್ಯರ ಪ್ರಕಾರ ಯುಗಾದಿಯ ಸೂರ್ಯೋದಯವು ಹೊಸ ವರ್ಷದ ಪ್ರಾರಂಭವಾಗಿದೆ. ಯಾಕೆಂದರೆ ಭೂಮಿಯು ಸೂರ್ಯನ ಸುತ್ತ ಸುತ್ತುವಿಕೆ ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಗೆ ಒಮ್ಮೆ ಪೂರ್ಣಗೊಂಡಿರುತ್ತದೆ.      ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ತವಲ್ಲದೆ, ಇಡೀ ವಿಶ್ವಕ್ಕೆ ಉಜ್ವಲತೆಯನ್ನು ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯ.      ಯುಗ ಯುಗಾದಿ ಕಳೆದರೂ      ಯುಗಾದಿ ಮರಳಿ ಬರುತಿದೆ      ಹೊಸವರುಷಕೆ ಹೊಸಹರುಷವ      ಹೊಸತು‌-ಹೊಸತು ತರುತಿದೆ…… ಎಂಬ ದ.ರಾ.ಬೇಂದ್ರೆ ಯವರ ಹಾಡಿನ ಸಾಲಿನಂತೆ ನಾವೆಲ್ಲರೂ ಯುಗಾದಿಯ ನಿಜ ಅರ್ಥ ಅರಿತು ಸಹಕಾರ, ಸಹಬಾಳ್ವೆಯಿಂದ ಹಬ್ಬವನ್ನು ಆಚರಿಸೋಣ. ******************************************************           ಅಕ್ಷತಾ ಜಗದೀಶ.

Read Post »

ಇತರೆ

ಯುಗಾದಿ ವಿಶೇಷ ಬರಹ ಯುಗಾದಿಯ ಸವಿ ಅಲ್ರಿ..ನನಗೊಂದು ಹೊಸ ಸೀರಿಬೇಕು.ಯಾಕಂದ್ರ ಹೊಸ ವರ್ಷದ ಸಂಭ್ರಮಕ ಎಲ್ಲವೂ ಹೊಸದಾಗಿರಬೇಕು ಅನ್ನು ತ್ತಿದ್ದರು ಅವನೇನು ತಲಿ ಕೆಡಸಿಕೊಂಡಿರಲಿಲ್ಲ. ಅಲ್ಲೆ ಕಪಾ ಟ ತುಂಬ ಇರೋ ಸಾರಿ ಮೊದಲ ಉಟ್ಟ ಹರಿ,ಆ ಮ್ಯಾಲೆ ಹೊಸಾದು ತಗೊಳಾಕಂತ. ಸುಮ್ಮನ ಯಾಕ ಖರ್ಚು ಎಷ್ಟ ರ ಜಿಪುಣ‌ ಅದಿರಿ ನೀವು? ನಾ ಎನಾರ ಬಂಗಾರ ಕೇಳಿನೇ ನು? ಅದನಂತೂ ಹಾಕ್ಕೊಂಡು ಅಡ್ಡಾಡೋ ಯೋಗ ಇಲ್ಲ ನನಗ.ಬರಿ ಸೀರಿವಳಗಾದ್ರೂ ಖುಷಿ ಪಡೋಣ‌ ಅಂದ್ರ ಅದಕೂ ಹಿಂಗ ಅಂತಿರಿ. ಗೆಳತೆರ ಮುಂದ ಮರ್ಯಾದಿ ತಗಿಬ್ಯಾಡ್ರಿ? ಹಾಂಗಲ್ಲ ಮಾರಾಯ್ತಿ, ನನ್ನ ಅಂಗಿ ಪ್ಯಾಂಟ್ ನಮ್ಮ ಮದವ್ಯಾಗಿಂದು. ಇನ್ನು  ಹಾಂಗ ಅದಾವ ನಾ ಎನ ರ ಹೊಸಾದು ಇಷ್ಟವರ್ಷದಾಗ ಹೊಲಸಿನೇನ? ಇದ್ದುದ ರಾಗ ಮಾಡಕೊಂಡ ಹೊಂಟಿಲ್ಲೆನ ಅದಕ ಎಲ್ಲ ಹಬ್ಬ, ಅಮಾಸಿ,ಹುಣ್ಣಮಿಗೆ ಅರಬಿ ತಗೊಳ್ಳೊದು ಕಡಮಿ ಮಾ ಡು ನನ್ನ ಕಿಸೆ ಮೊದಲ ಹರದೈತಿ. ಆತ ಬಿಡ್ರಿ? ಹೆಚ್ಚ ಮಾತ ಬೇಡ.ನಿಮಗ ಕೊಡಸಾಕ ಮನ ಸಿಲ್ಲ‌ ಅಂತ ಡೈರೆಕ್ಟ ಹೇಳಿಬಿಡ್ರಿ.ಎಲ್ಲರ ಮನಿಯಾಗ ಹಬ್ಬಕ್ಕ ಬಟ್ಟಿ,ಬಂಗಾರ ಹಾಕ್ಕೊಂಡು ಹಬ್ಬ ಮಾಡಿದ್ರ,ನಮ್ಮ ಮನಿ ಯಾಗ ಹಳೆ ಸೀರ್ಯಾಗ ಹೊಸವರ್ಷಾನ ಬರಮಾಡಕೋ ಭಾಗ್ಯ ಸಿಕ್ಕಿದ್ದು ನನ್ನ ಹಣೆಬರ ಇಷ್ಟ ಅಂತಾತು.ಉಡಾಂಗಿ ಲ್ಲ,ತೊಡಾಂಗಿಲ್ಲ ಎನ್ನುತ್ತ ಬಿರುಸಿಲೆ ಒಳನಡೆದೆ. ಹಬ್ಬ ಅಂದ ಮ್ಯಾಲೆ ಸ್ವಲ್ಪರ ತಯಾರಿಬೇಕು.ಬೆಲ್ಲ,ಬೇವು,ಕಬ್ಬು ಮಾವು ಹೊಸ ಫಲಗಳ ಪೂಜಿಸಾಕ ರೆಡಿ ಮಾಡತಿದ್ದೆ. ಅವನು ನಾನು ಬೆರೆತಿದ್ದು ಕಷ್ಟದ ಸಮಯದಾಗ. ಬದುಕಿಗೆ ಯಾರ ಆಶ್ರಯವಿಲ್ಲದೇ ಇರುವೆಯಂತೆ ಹಗುರಾದ ಆನೆ ಯಂತೆ ಭಾರವಾದ ಎಲ್ಲ ಸುಖವ ಸಮನಾಗಿ ಹಂಚಿಕೊಂ ಡು ಹೆಜ್ಹೆಯಿಟ್ಟವರು. ದೈವದ ಸಂಕಲ್ಪವೇ ಕೈ ಹಿಡಿದು ಮುನ್ನಡೆಸಿದೆ. ಕಷ್ಟ ಸುಖಗಳಿಗೆ ಸಮನಾಗಿ ಬೆರೆಯುವ ಮನೋಭಾವ ಎಲ್ಲರಲ್ಲಿ ಬರಲೆಂದು, ಚಾಂದ್ರಮಾನ ಯುಗಾದಿ ಹೊಸ ಸಂವತ್ಸರಕ್ಕೆ ಪಾದಾರ್ಪಣೆ  ಮಾಡುವಾ ಗ ನಮ್ಮಲ್ಲಾಗುವ ಬದಲಾವಣೆಗಳು ಇಡೀ ಜೀವನದ ಮೇಲೆ ಪರಿಣಾಮ ಬಿರುವಂತಹ ಸುಸಂದರ್ಭ.ಇದೆಲ್ಲ ಗೊತ್ತಿದ್ದು ಎಲ್ಲ ಬೇಡವೆನ್ನುವವನ ಕಂಡು ಮಾತಾಡಿ ಉಪಯೋಗವಿಲ್ಲವೆಂದು ಸುಮ್ಮನಾದೆ. ಮಕ್ಕಳು ಅಪ್ಪನೊಂದಿಗೆ ತಳಿರುತೋರಣ ಕಟ್ಟುವಲ್ಲಿ ಬ್ಯೂಜಿ.ನಾನು ಅಡಿಗೆ ತಯಾರಿಯಲ್ಲಿ ಮನೆಯೋ ನವ ಮದುಮಗಳಂತೆ ಶೃಂಗಾರ ಮಾಡಿದ್ದು ಖಷಿ ತಂದಿತ್ತು. ಎಲ್ಲವಿದ್ದರೂ ಅವನ ಪ್ರೇಮದ ಮಾತುಗಳು ಸುಳಿಯದಿ ದ್ದರೆ,ಬೇವು ಮಾತ್ರ ಒಡಲ ಸೇರಿ ಬೆಲ್ಲದ ಸವಿಯ ಇಲ್ಲವಾ ಗಿಸಿದಂತೆ. ಹೊಸ ಪಂಚಾಂಗದ ಮುನ್ನುಡಿ ನಂಬುವವರ ರಾಶಿಗಳ ಬಲಾಬಲದ ಪಠಣ.ನಲಿವೆಂಬುದು ನಮ್ಮಲ್ಲಿ ಸದಾ ಜೇನುಗೂಡು ಕಟ್ಟಿದಂತೆ. ಪೂಜೆಯ ಸಿದ್ದತೆ‌ ಮುಗಿದ ಮೇಲೆ ರೆಡಿಯಾಗಲು ಇದ್ದುದ ರಲ್ಲೆ ಸೀರೆಗಾಗಿ ಹುಡುಕಾಟ. ಎದುರಿಗೊಂದು ಪಾಕೀಟು. ಆಶ್ಚರ್ಯ ಇದೇನೆಂದು ಬಿಚ್ಚಿದರೆ ‘ಸೀರೆ’ನನಗಿಷ್ಟವಾದ “ತಿಳಿನೀಲಾಕಾಶ” ಆಗಿಂದ ಅಂದಿದ್ದೆಲ್ಲ ಬರಿ ತಮಾಷೆ, ರೇಗಿಸುವ..ಬುದ್ದಿ ಇನ್ನು ಹೋಗಿಲ್ಲ. ಅದೆಲ್ಲ ಸತ್ಯ ಅಂತ ಬೈದೆನಲ್ಲ ಎನ್ನುತ ಸೀರೆ ಕವರ್ ಸಮೇತ ರೀ…ಇದು ನನಗಾ? ಮತ್ತೆ ಹೇಳಲೇ ಇಲ್ಲ? ಅಯ್ಯೋ  ಗುಂಡಿ ನಿನ್ನ ಗುಣ ನನಗಲ್ಲದೆ ಇನ್ನಾರಿಗೆ ಗೊತ್ತಾಗೊದು? ಮನೆಯ ಮಹಾಲಕ್ಷ್ಮಿ ಕಣೇ ನೀನು.ಸದಾ ನಗುನಗುತಾ ಓಡಾಡಿಕೊಂಡಿದ್ದರೆ ಅದೇ ನನಗೆ ಸ್ವರ್ಗ. ಯುಗಾದಿಯು ಕಹಿ ನೆನಪುಗಳ ಮರೆಸಲಿ, ಸಿಹಿನೆನಪುಗಳನ್ನು ಹಚ್ಚಿಸಲಿ. ನಮ್ಮಿಬ್ಬರ ಬಾಳಲಿ ವಿರಸಗಳು ಸುಳಿಯದಿರಲಿ ಚಿನ್ನಾ. ಬೇವು-ಬೆಲ್ಲದಂತೆ ಎನ್ನುತ ಮುದ್ದಿಸಿದವನ ಪ್ರೀತಿಯಲಿ ಯುಗಾದಿಯ ಸವಿಯ ಮೆಲ್ಲುತ್ತಿದ್ದೆ…. ********* ಶಿವಲೀಲಾ ಹುಣಸಗಿ

Read Post »

ಇತರೆ

ಯುಗಾದಿ ವಿಶೇಷ ಬರಹ ಕಹಿ ಜಾಸ್ತಿ ತಿಂದ್ರೆ ವರ್ಷ ಪೂರ್ತಿ ಸಿಹಿಯಂತೆ  ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ವರ್ಷದ ಆರಂಭ ಯುಗಾದಿ. ಸಂವತ್ಸರವೊಂದು ಮುಗಿದು ಮತ್ತೊಂದು ಸಂವತ್ಸರಕ್ಕೆ ಕಾಲಿಡುವ ಸಮಯ ಅರವತ್ತು ಸಂವತ್ಸರಗಳ  ಈ ಚಕ್ರದಲ್ಲಿ ಈಗ ನಾವು ೩೫ ರ ಪ್ಲವ ನಾಮ ಸಂವತ್ಸರದಲ್ಲಿ ಇದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯ ಆಚರಣೆ ಬಂದಮೇಲೆ ತಿಥಿ ನಕ್ಷತ್ರ ಸಂವತ್ಸರಗಳ ಲೆಕ್ಕಾಚಾರ ಅಷ್ಟಾಗಿ ನಮ್ಮ ದೈನಂದಿನ ಬದುಕಿನಲ್ಲಿ ಉಳಿದುಕೊಂಡಿಲ್ಲ.  ಅದರಲ್ಲಿ ಯುಗಾದಿಯ ಆಚರಣೆ ಸ್ವಲ್ಪ ಮುಂಚೂಣಿಯಲ್ಲಿದೆ ಅನ್ನಬಹುದೇನೋ. ಯಾಕೆಂದರೆ ನಾವು ಹೊಸವರ್ಷವನ್ನು ಡಿಸೇಂಬರ್ 31ರಂದು ಸಂಪದ್ಭರಿತವಾಗಿ ಆಚರಿಸುತ್ತೇವೆ.  ಅದೇನೇ ಇದ್ದರೂ ವಾಸ್ತವದ ಲೆಕ್ಕಾಚಾರ ಕಾಲಮಾನ ಬದಲಾಗಲಾರದು. ಹೂ ಹೀಚು ಹಣ್ಣುಗಳಿಂದ  ಪ್ರಕೃತಿ ಹೊಸ ಹೊಸ ಬಗೆಯ ಉಡುಗೆ ತೊಟ್ಟು ಸಂಭ್ರಮಿಸುವ ಕಾಲ ಈಗಲೇ. ಇಯರ್ ಎಂಡ್ ಅಂತ ಈಗಲೂ ಲೆಕ್ಕಾಚಾರ ಮಾರ್ಚ್ ತಿಂಗಳನ್ನೇ ಹೇಳೋದು. ಯುಗಾದಿಯ ನಂತರ ವಿಪರೀತವಾಗುವ ತಾಪಮಾನ.  ಹಲವಾರು ರೋಗ ರುಜಿನಗಳನ್ನು ತರುತ್ತದೆ. ನೂರಕ್ಕೂ ಹೆಚ್ಚು ಔಷಧೀಯ ಗುಣವಿರುವ ಬೇವು, ಇದರ ಸೇವನೆಯಿಂದ, ಬರುವ ರೋಗಗಳನ್ನು ತಡೆಗಟ್ಟಬಹುದು. ಮತ್ತು ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಜೊತೆಗೆ ಬೆಲ್ಲವನ್ನೂ ತಿನ್ನುವ  ವೈಜ್ಞಾನಿಕ ಕಾರಣವೂ ನಮಗಿಲ್ಲಿ ಸಿಗುತ್ತದೆ. ಈಗಲೂ ಹಳ್ಳಿಗಳಲ್ಲಿ ಬೆಲ್ಲ ತಿಂದು ನೀರು ಕುಡಿಯುವ ಪದ್ಧತಿ ಇದೆ.  ಮಲೆನಾಡಿನ  ಜೋರು ಮಳೆಗೆ ಜೀವ ಉಳಿಸಿಕೊಳ್ಳಲು ಹೆಣಗಾಡುವ ಬೇವಿನಗಿಡ ಅಪರೂಪದ ಅತಿಥಿ. ಹಬ್ಬದ ಮುಂಚಿನ ದಿನವೇ ಯಾರ ಮನೆಯಲ್ಲಿ ಬೇವಿನ ಗಿಡವಿದೆ ಎನ್ನುವ ತಲಾಷ್. ಕಣ್ಣು ಉಜ್ಜುತ್ತಲೇ ಬೇವಿನ ಎಲೆ ಕಿತ್ತು ತರುವ ಕಾಯಕ. ಹೆಚ್ಚು ಎಲೆ ತಂದರೆ ಹೆಚ್ಚು ತಿನ್ನಿಸುತ್ತಾಳೆ ಅಮ್ಮ ಎಂದು ಚೂರೇಚೂರು ಹಿಡಿದು ಬರುವ ಹುಷಾರಿತನ.  ಇದೇನು ಇಷ್ಟು ಹನಿ ಇನ್ನೂ ಬೇಕು ಎನ್ನುವ ಅಮ್ಮ ಮತ್ತೆ ತರುವ ವರೆಗೂ ಬಿಡ್ತಿರಲಿಲ್ಲ.  ಅಮ್ಮ ಅದೆಷ್ಟು ಕಹಿ ತಿನ್ನಿಸುತ್ತಾಳೋ ಇಂದು  ಎಂದು ನಮ್ಮ ನಮ್ಮೊಳಗೆ ಚರ್ಚೆ ಹೇಗೆ ತಪ್ಪಿಸಿಕೊಳ್ಳುವದೆಂದು.  ಎಲ್ಲಾ ಹಬ್ಬಗಳಲ್ಲೂ ಸಂಭ್ರಮ ಸೂಸುವ ಮುಖದಲ್ಲಿ ಆವತ್ತು ಸ್ವಲ್ಪ ಮಂಕು. ತುಪ್ಪದಲ್ಲಿ ಹುರಿದು ಜೊತೆಗಿಷ್ಟು ಬೆಲ್ಲ ಇಟ್ಟು ದೇವರಿಗೆ ಕೈಮುಗಿದು ತಿನ್ನಿ ಎನ್ನುತಿದ್ದಳು.  ಈ ದಿನ ಕಹಿ ಜಾಸ್ತಿ ತಿಂದವರಿಗೆ  ಬದುಕಿನಲ್ಲಿ ಸಿಹಿ ಜಾಸ್ತಿ ಎನ್ನುವ ಅಮ್ಮನ ನುಡಿಗಟ್ಟಿಗೆ ಹೆದರಿ ತಟ್ಟೆಯಲ್ಲಿದ್ದ ಬೇವಿನ ಎಲೆಗಳೆಲ್ಲ ಖಾಲಿ. ಕಿವುಚಿದ ಮುಖದಲ್ಲಿ ಪೆಚ್ಚು ನಗು. ಅಪ್ಪ ಪೂಜೆಗೆ ಇಟ್ಟ ಪಂಚಾಂಗ ತೆಗೆದು ತಿಥಿ, ವಾರ,ನಕ್ಷತ್ರ,ವಾರ್ಷಿಕ ಹಬ್ಬಗಳನ್ನು ಓದುತ್ತಿದ್ದರು. ಆಗಲೇ ನಮಗೆ ವರ್ಷ ಭವಿಷ್ಯ ಓದಲು ಕಾತರ.  ಯಾರು ಮೊದಲು ಓದುವುದು  ಪೂರ್ಣ ವರ್ಷದ ಭವಿಷ್ಯವೀಗ ನಮ್ಮ ಕೈಯೊಳಗೆ ಇದೆ ಎನ್ನುವ  ಕೆಟ್ಟ ಕುತೂಹಲ. ಮತ್ತೆ ತಿಳಿದು ಕೊಳ್ಳುವ ಗಡಿಬಿಡಿ.  ಯಾರಾದರೂ ಒಬ್ಬರು ಎಲ್ಲರ ಭವಿಷ್ಯವನ್ನು ದೊಡ್ಡದಾಗಿ ಓದಬೇಕು ಎನ್ನುವಲ್ಲಿಗೆ ಅದಕ್ಕೊಂದು ಪರ್ಯಾಯ ವ್ಯವಸ್ಥೆ. ಅಪ್ಪನ ರಾಶಿಯಿಂದ ಶುರುವಾದ ಭವಿಷ್ಯ ಸುಮಾರು ಒಂದು ತಾಸುಗಳ ಕಾಲ ನಡೆಯುವ ಈ ಪ್ರಕ್ರಿಯೆಯಲ್ಲಿ ಇಡೀ ವರ್ಷದ ಬದುಕೇ ಕಣ್ಮುಂದೆ ನಿಂತು ಕುಣಿದ ಭಾವ. ಗೊತ್ತಿದ್ದವರದ್ದೆಲ್ಲ ಓದಿ ಎಲ್ಲರ ಹಣೆಬರಹ ಬಲ್ಲವರಂತೆ ಪೋಸು. ಕಲಹ,ಪ್ರೀತಿ, ಸಂತಾನ ಭಾಗ್ಯ,ಕಂಕಣ ಭಾಗ್ಯ, ಧನಹಾನಿ,ಮಾನ ಹಾನಿ. ಇದನ್ನೆಲ್ಲಾ ಪರಿಹರಿಸಲು ಸರಿದೂಗಿಸಲು ಅಲ್ಲೊಂದು ಸಣ್ಣ ತಯಾರಿ.  ಒಂದಕ್ಕೊಂದು ತಾಳೆಯಾಗದ ಭವಿಷ್ಯ ಫಲಕ್ಕೆ ಚಿಂತಿತ ಮನಸು,ಮುಸಿ ಮುಸಿ ನಗು.  ಒಟ್ಟಿನಲ್ಲಿ ಈ ವರ್ಷ ಮಿಶ್ರಫಲ ಎಂದಾಗ ಒಂತರ ಮಿಶ್ರಭಾವ.  ವರ್ಷಾರಂಭದ ವಾಸ್ತವ ಮತ್ತು ಕಲ್ಪನೆಗಳ ಬದುಕಿಗೆ, ಅಮ್ಮನ ಅಡುಗೆಯ ಹೋಳಿಗೆ ಸಿಹಿಯೊಡನೆ ಸಣ್ಣ ಆರಂಭ.  ಅಳು ನಗು ಕಿತ್ತಾಟ ಪ್ರೀತಿ ಇಂದು ನೀವು ಏನೇ ಮಾಡಿದರೂ  ವರ್ಷ ಪೂರ್ತಿ ಅದೇ ಇರುತ್ತೆ ನಿಮ್ ಪಾಲಿಗೆ ಎನ್ನುವ ವಾರ್ನಿಂಗ್ ಗೆ ಎಲ್ಲ ಮರೆತ ಭರಪೂರ ಪ್ರೀತಿ.  ಹಬ್ಬಗಳು ಯಾವುದೇ ಇರಲಿ ಆರೋಗ್ಯ,ಪ್ರೀತಿ, ನಿಷ್ಠೆ,ನಂಬಿಕೆಗಳ ಜೊತೆಗೆ ಬಂಧಗಳ ಬೆಸೆಯುವುದೇ ಎಲ್ಲ ಹಬ್ಬದ ಉದ್ದೇಶ ಎನ್ನುವುದು ನಾವು ಅರಿಯಬೇಕಾದ ಸತ್ಯ. ಯೇ ಕಹಿ ಜಾಸ್ತಿ ತಿನ್ನು ಇಲ್ಲ ಅಂದ್ರೆ ಬದುಕು ಸಿಹಿಯಾಗಿ ಇರಲ್ಲ ಅನ್ನೋದನ್ನ ಮಗನಿಗೆ ಹೇಳೋದನ್ನ ಮರೆತಿಲ್ಲ ನಾನು ಯಾಕೆಂದ್ರೆ ನಂಬಿಕೆಯೇ ಬದುಕು. ************************************** ಸ್ಮಿತಾ ಭಟ್

Read Post »

ಇತರೆ

ಯುಗಾದಿ ವಿಶೇಷ ಬರಹ ಹೊಸ ವರುಷವು ಬರಲಿ, ಸುಖ ಸಾವಿರ ತರಲಿ… ಅದೇನೋ ಬೇರೆ ಎಲ್ಲಾ ಹಬ್ಬಗಳಿಗಿರುವ ಒಂದು ಆಕರ್ಷಣೆ, ಆಚರಣೆ ಯುಗಾದಿ ಹಬ್ಬಕ್ಕಿಲ್ಲ. ಹಿಂದೂ ಚಾಂದ್ರಮಾನ ಪಂಚಾಗದ ಪ್ರಕಾರ ಚೈತ್ರ ಶುದ್ಧ ಪಾಡ್ಯಮಿಯನ್ನು ಯುಗಾದಿ ಹಬ್ಬವೆಂದು, ವರ್ಷದ ಮೊದಲ ದಿನವೆಂದು ಆಚರಿಸುತ್ತೇವೆ. ಸೌರಮಾನದವರು ಪ್ರತಿವರ್ಷ ಏಪ್ರಿಲ್‌ 14ರಂದು ಯುಗಾದಿಯನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಮಾರ್ಚ್‌ ತಿಂಗಳ ಕೊನೆಯಿಂದ ಏಪ್ರಿಲ್‌ ನಡುವಿನೊಳಗೆ ಹೊಸವರ್ಷದ ಆರಂಭವಾಗುವುದು ಆಚರಣೆಯಲ್ಲಿದೆ. ಚಿಕ್ಕಂದಿನಿಂದಲೂ ಈ ಹಬ್ಬದ ಬಗ್ಗೆ ವಿಶೇಷವಾದ ಆಸಕ್ತಿಯೇನೂ ಇರಲಿಲ್ಲ. ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಬೇವಿನ ಟೊಂಗೆಯನ್ನು ಸಿಕ್ಕಿಸಿ ಸಿಂಗರಿಸುತ್ತಿದ್ದೆವು. ಎಂದಿನಂತೆ ಅಂದೂ ನಮ್ಮಪ್ಪ ದೇವರಪೂಜೆ ಮಾಡುತ್ತಿದ್ದರು. ಆ ವರ್ಷದ ಪಂಚಾಂಗವನ್ನು ತಂದು ದೇವರ ಮುಂದಿಟ್ಟು ಅದಕ್ಕೂ ಪೂಜೆ ಸಲ್ಲಿಸುತ್ತಿದ್ದರು. ನಂತರ ಬೇವಿನ ಹೂವು ಮತ್ತು ಬೆಲ್ಲದ ಮಿಶ್ರಣವನ್ನು ಪ್ರಸಾದವಾಗಿ ಕೊಡುತ್ತಿದ್ದರು. ಇದನ್ನು ಬೇಡವೆನ್ನುವಂತೆಯೇ ಇಲ್ಲ. ಜೀವನದಲ್ಲಿ ಎದುರಿಸುವ ಸಿಹಿ ಕಹಿಗಳ ಸಂಕೇತವಂತೆ ಇದು. ಎರಡನ್ನೂ ಸಮಭಾವದಿಂದ ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಆಶಯವಿದೆ ಈ ಆಚರಣೆಯ ಹಿಂದೆ. ಒಟ್ಟಿನಲ್ಲಿ ಹೇಗೋ ನುಂಗಿಬಿಡುತ್ತಿದ್ದೆವು. ಆಮೇಲೆ ನಮ್ಮ ತಂದೆ ಪಂಚಾಗ ಶ್ರವಣ ಮಾಡುತ್ತಿದ್ದರು. ನಾವೇನು ಎಂದೂ ಕೇಳಿಸಿಕೊಂಡಿರಲಿಲ್ಲ ಬಿಡಿ. ಸ್ಕೂಲಿಗೆ ಹೋಗುವ ಯಾವ ಮಕ್ಕಳಿಗೂ ಯುಗಾದಿಯ ಬಗ್ಗೆ ವಿಶೇಷವಾದ ಅಸ್ಥೆಯಿರುವುದಿಲ್ಲ. ಯಾಕೆನ್ನಿ, ಎಲ್ಲರಿಗೂ ಪರೀಕ್ಷೆಯ ಸಮಯ. ವರ್ಷವಿಡೀ ಆರಾಮಾಗಿ ಕಾಲಕಳೆದು ʻಯುದ್ಧಕಾಲೇ ಶಸ್ತ್ರಾಭ್ಯಾಸʼದ ತರಹ ಆಗ ಪುಸ್ತಕ ಹಿಡಿದು ಕೂರುವವರದು ಒಂದು ರೀತಿಯ ಸಂಕಟವಾದರೆ, ವರ್ಷಾರಂಭದಿಂದಲೂ ಓದಿ ಓದಿ ಗುಡ್ಡೆಹಾಕಿ ಪರೀಕ್ಷೆಯಲ್ಲಿ ಏನು ಕೇಳಿಬಿಡುವರೋ ಎಂಬ ಆತಂಕದಿಂದಲೇ ಇರುವ ಬುದ್ಧಿವಂತ ವಿದ್ಯಾರ್ಥಿಗಳ ಸಂಕಟವೇ ಬೇರೆ. ಒಬ್ಬರಿಗೆ ಹೇಗೋ ಪಾಸಾಗುವಷ್ಟು ಅಂಕಗಳನ್ನು ಗಳಿಸಿಕೊಂಡು ಈ ವರ್ಷ ದಾಟಿಕೊಂಡರೆ ಸಾಕು, ಮುಂದಿನ ವರ್ಷ ನೋಡಿಕೊಂಡರಾಯಿತು ಎನ್ನುವ ಮನೋಭಾವವಿದ್ದರೆ, ಇನ್ನೊಬ್ಬರಿಗೆ ಯಾವ ಗೊಂದಲದಲ್ಲಿ ಎಷ್ಟು ಅಂಕ ಕಳೆದುಹೋಗುವುದೋ, ಭವಿಷ್ಯದ ಗತಿಯೇನು ಎನ್ನುವ ಚಿಂತೆ. ಹೇಗಿದೆ ನೋಡಿ, ದಡ್ಡರಿಗೆ ಗಳಿಸಿಕೊಳ್ಳುವ ಉಮೇದು; ಜಾಣರಿಗೆ ಕಳೆದುಕೊಳ್ಳುವ ಭಯ. ನಾನಂತೂ ಪ್ರತಿವರ್ಷವೂ ʻಮುಂದಿನ ವರ್ಷ ಹೀಗೆ ಕಡೆಯ ಘಳಿಗೆಯಲ್ಲಿ ಒದ್ದಾಡದೆ, ಅಂದಂದಿನ ಪಾಠಗಳನ್ನು ಅಂದಂದೇ ಓದುತ್ತೇನೆಂದುʼ ಒಂದು ಘೋರ ಪ್ರತಿಜ್ಞೆ ಮಾಡುತ್ತಿದ್ದೆ. ಆದರೆ ಅದನ್ನು ಪೂರೈಸಿಬಿಟ್ಟರೆ ಮುಂದಿನ ವರ್ಷ ಮಾಡಲು ಪ್ರತಿಜ್ಞೆಗಳೇ ಇರುವುದಿಲ್ಲವಲ್ಲ; ಹಾಗಾಗಿ ಅದನ್ನೆಂದೂ ಪೂರೈಸುತ್ತಿರಲಿಲ್ಲ. ಹೀಗೆ ಅವರವರದೇ ತಲ್ಲಣಗಳಲ್ಲಿ ಮುಳುಗಿರುವ ಕಾಲದಲ್ಲಿ ಹಬ್ಬ ಬಂದರೆ ಮಕ್ಕಳಿಗೆ ಅದಿನ್ಯಾವ ಖುಷಿಯಿದ್ದೀತು ಹೇಳಿ. ಆಗ ನಮಗಿದ್ದ ಒಂದೇ ಖುಷಿಯೆಂದರೆ ವರ್ಷದಲ್ಲಿ ಎರಡೇ ಹಬ್ಬಕ್ಕೆ ಹೊಸಬಟ್ಟೆ ಸಿಗುತ್ತಿದ್ದುದು, ಅದು ಯುಗಾದಿ ಮತ್ತು ದೀಪಾವಳಿಯಲ್ಲಿ ಮಾತ್ರಾ. ಮದುವೆಯ ಜವಳಿ ಕೊಳ್ಳುವಂತಹ ಉಮೇದಿನಿಂದ ಊರೆಲ್ಲಾ ಪರ್ಯಟನೆ ಮಾಡಿ, ಜೊತೆಯವರು ಕೊಂಡ ಬಟ್ಟೆಗಳ ಎಲ್ಲಾ ವಿವರಗಳನ್ನೂ ತಿಳಿದುಕೊಂಡು, ಅಂಥದೇ ಬೇಕೆಂದು ಅಪ್ಪ, ಅಮ್ಮರಲ್ಲಿ ಬೇಡಿಕೆಯಿಟ್ಟರೂ, ಅವಾವುದೂ ಹಬ್ಬದ ಬಜೆಟ್‌ನಲ್ಲಿ ಪಾಸಾಗದೆ ಕಡೆಗೆ ಅಮ್ಮ ತಂದ ಯಾವುದೋ ಒಂದು ಬಟ್ಟೆಗೆ ಸಮಾಧಾನ ಮಾಡಿಕೊಳ್ಳಬೇಕಿತ್ತು, ಮಾಡಿಕೊಳ್ಳುತ್ತಿದ್ದೆವು. ಹಬ್ಬದಡುಗೆಯಲ್ಲಿ ಹೆಚ್ಚಾಗಿ ಮಾವಿನಕಾಯಿ ಚಿತ್ರಾನ್ನ, ಹೋಳಿಗೆ ಇರುತ್ತಿತ್ತು. ಹೋಳಿಗೆಗಿಂತಾ ವರ್ಷದ ಹೊಸಫಸಲು ಮಾವಿನಕಾಯಿ ಚಿತ್ರಾನ್ನದ ಬಗ್ಗೆಯೇ ಹೆಚ್ಚಿಗೆ ಒಲವು. ವರ್ಷಾರಂಭವಾಗಿ ಮೂರು ತಿಂಗಳ ನಂತರ ಬರುವ ಯುಗಾದಿಗೆ ವರ್ಷದ ಮೊದಲು ಎಂದೇಕೆ ಹೇಳುತ್ತಾರೆಂದು ಆಗೆಲ್ಲಾ ಅನ್ನಿಸುತ್ತಿತ್ತು. ಸಂಕ್ರಾಂತಿ ಸುಗ್ಗಿಯ ಹಬ್ಬವಾದರೂ, ಅದು ಮರಗಳೆಲ್ಲಾ ಎಲೆಯುದುರಿಸಿ ಬೋಳಾಗಿರುವ ಕಾಲ. ಚಳಿ ಕಳೆದು ಬಿಸಿಲು ಹುಟ್ಟಿದಾಗಲೇ ಸುತ್ತಲಿನ ಪ್ರಕೃತಿಯಲ್ಲೂ ಎಂತಹ ಸುಂದರ ಬದಲಾವಣೆ. ಬೋಳುಮರಗಳ ಗೆಲ್ಲು ಗೆಲ್ಲುಗಳೂ ಜೀವರಸ ತಳೆದು ಮೆಲ್ಲಗೆ ಕುಡಿಯೊಡೆದು, ಎಲೆಗಳೆಲ್ಲಾ ನಸುಗೆಂಪಾಗಿ ಚಿಗುರೊಡೆದು, ಎಳೆಹಸಿರು, ಎಲೆಹಸಿರು, ಕಡುಹಸಿರು ಬಣ್ಣಕ್ಕೆ ತಿರುಗಿ, ಮೈತುಂಬಾ ಬಣ್ಣಬಣ್ಣದ ಹೂತಳೆದು ರಸ್ತೆಯುದ್ದಕ್ಕೂ ಹಾಸಿ ವಸಂತರಾಜನ ಆಗಮನಕ್ಕೆಂದು ಸಿದ್ಧವಾಗಿ ಸಿಂಗರಿಸಿಕೊಂಡು ನಿಂತಿರುವಾಗ ಅದೆಂಥ ಸೊಬಗು! ʻಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ; ಚಳಿಯನು ಕೊಂದ ಹಕ್ಕಿಗಲುಳಿಗಳೆ ಚಂದʼ ಎಂದು ಬಿ.ಎಂ.ಶ್ರೀಯವರು ಹಾಡಿದಂತೆ ಎಲ್ಲ ಜಡತ್ವವನ್ನೂ ಹೊಡೆದೋಡಿಸಿ ಹೊಸ ಚಿಗುರು, ಹೊಸ ಹೂವು, ಹಣ್ಣುಗಳನ್ನು ತರುವ ಯುಗಾದಿ ಚಂದವೇ ಅಲ್ಲವೇ. ʻಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ; ಎಲ್ಲಿಯದೀ ಅನುಬಂಧ!ʼ ಜೊತೆಗೇ ಹಿಮ್ಮೇಳದವರಂತೆ ಅದೆಷ್ಟೊಂದು ಹಾಡುವ ಹಕ್ಕಿಗಳು ಈ ಕಾಲದಲ್ಲಿ! ನೆತ್ತಿ ಸುಡುವಷ್ಟು ಬಿಸಿಲಿರುವಾಗ ತಂಪಾಗುವಂತೆ ಬೇವನ್ನು, ಹೊಂಗೆಯನ್ನೂ ಅರಳಿಸುವ ಪ್ರಕೃತಿಯ ಮಾಯೆ ಅದೆಂಥದು! ಸೃಷ್ಟಿಯ ಸಮತೋಲನವೆಂದರೆ ಇದೇ ಅಲ್ಲವೇ. ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಮಾವಾಗಲೀ, ಹೂವಿನ ರಾಣಿ ಎನಿಸಿಕೊಂಡಿರುವ ಮಲ್ಲಿಗೆಯಾಗಲೀ ಮೊಗತೋರುವುದು ಈ ಕಾಲದಲ್ಲೇ. ನಮ್ಮಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು – “ಮಾವಿನ ಸವಿಯನ್ನು, ಮಲ್ಲಿಗೆಯ ಕಂಪನ್ನು ಇಷ್ಟ ಪಡದಿರುವವರೇ ಇಲ್ಲ. ಹಾಗೂ ಇದ್ದಾರೆಂದರೆ ಅದವರ ರುಚಿಯ ದೋಷ; ಮಾವು ಮಲ್ಲಿಗೆಯದಲ್ಲ” ಎಂದು. ನಿಜವಲ್ಲವೇ? ಮಾವು ಎಂದಾಕ್ಷಣ ನನ್ನ ನೆನಪು ನಮ್ಮ ಶಾಲೆಯ ದಿನಗಳಿಗೆ ಓಡಿಹೋಗುತ್ತದೆ. ಆಗೆಲ್ಲಾ ಹಲವು ಮುದುಕ, ಮುದುಕಿಯರು ಸ್ಕೂಲಿನ ಮುಂದೆ ಕಿತ್ತಳೆ, ಪರಗಿ, ನೇರಳೆ, ಬೋರೆಯಂತಹ ಹಣ್ಣುಗಳನ್ನು, ನೆಲ್ಲಿಕಾಯಿ, ಮಾವಿನಕಾಯಿ ಇಂತಹ ಹುಳಿಯಾದ ಕಾಯಿಗಳನ್ನು ಬುಟ್ಟಿಯಲ್ಲಿಟ್ಟುಕೊಂಡು, ಮುಂದೆ ಸುರಿದುಕೊಂಡು ಮಾರುತ್ತಿದ್ದರು. ಹಣ್ಣು ತೊಳೆದು ತಿನ್ನುವುದೆಲ್ಲಾ ಈ ಕಾಲಕ್ಕೆ, ಅಂದು ಅಂತಹ ರಿವಾಜುಗಳಾಗಲೀ, ಸ್ನಾನ ಸಂಸ್ಕಾರಗಳಾಗಲೀ ಇರಲಿಲ್ಲ. ಬೀದಿಯಲ್ಲಿಟ್ಟುಕೊಂಡಿದ್ದು ಸೀದಾ ಹೊಟ್ಟೆಯಲ್ಲಿರುತ್ತಿತ್ತು. ಎರಡು ಪೈಸೆಗೂ ನಾಲ್ಕಾರು ಪುಟ್ಟ ಹಣ್ಣುಗಳನ್ನು, ಕಾಯಿಗಳನ್ನು ಕೈಗಿಡುತ್ತಿದ್ದರು. ನಾವು ಕೊಂಡ ಹಣ್ಣುಗಳನ್ನು ಒಂದು ಪುಟ್ಟ ಅಲ್ಯುಮಿನಿಯಮ್ ಪಾತ್ರೆಗೆ ಸುರಿದುಕೊಂಡು ಅದಕ್ಕಷ್ಟು ಉಪ್ಪು ಖಾರ ಬೆರಸಿ, ಎಗರಿಸಿ ಎಗರಿಸಿ ಚೆನ್ನಾಗಿ ಹೊಂದಿಸಿ ಒಂದು ಕಾಗದದ ಪೊಟ್ಟಣಕ್ಕೆ ಹಾಕಿಕೊಟ್ಟರೆ… ಅಬ್ಭಾ! ಯಾವ ಅಮೃತದ ರುಚಿಯೂ ಅದರ ಮುಂದಿಲ್ಲ. ಪುಟ್ಟ ಕಿತ್ತಳೇ ಹಣ್ಣನ್ನು ಅರ್ಧಕ್ಕೆ ಹೆಚ್ಚಿ ಅದಕ್ಕೆ ಉಪ್ಪುಖಾರದ ಪುಡಿಯನ್ನು ಬೆರೆಸಿ ನಾಲಿಗೆಗೆ ಸವರಿಕೊಳ್ಳುತ್ತಿದ್ದರೆ, ಎಂತಹ ಬಾಯಿಕೆಟ್ಟು ರುಚಿ ಕೆಟ್ಟಿದ್ದರೂ ಓಡಿಹೋಗಬೇಕು! ಈ ಸರಕಲ್ಲೆಲ್ಲಾ ಹೆಚ್ಚಿನ ಬೆಲೆ ಎಂದರೆ ಗಿಣಿಮೂತಿ ಮಾವಿನಕಾಯಿಗೆ. ಪುಟ್ಟವಕ್ಕೆ ಐದು ಪೈಸೆಯಿಂದ ಹಿಡಿದು ದೊಡ್ಡ ಕಾಯಿಗಳು ಗರಿಷ್ಟವೆಂದರೆ ಇಪ್ಪತ್ತೈದು ಪೈಸೆ. ನಮ್ಮ ರೇಂಜ್‌ ಯಾವಾಗಲೂ ಐದರಿಂದ ಹತ್ತು ಪೈಸೆ ಮಾತ್ರಾ. ಅದೂ ಪರೀಕ್ಷೆ ಮುಗಿಯುವ ತನಕ ಏನೇ ಆದರೂ ಮಾವಿನಕಾಯನ್ನು ತಿನ್ನಲೇಬಾರದು ಎಂದು ಮನೆಯಲ್ಲಿ ಕಟ್ಟಪ್ಪಣೆ. ತಿಂದು ಜ್ವರ ಕೆಮ್ಮು ಬಂದು ಪರೀಕ್ಷೆಗೇ ಚಕ್ಕರ್‌ ಕೊಡುವಂತಾದರೆ ಎನ್ನುವ ಕಾಳಜಿ. ಅಪ್ಪಣೆಗಳನ್ನು ಮೀರುವುದರಲ್ಲಿರುವ ಖುಷಿ, ಪಾಲಿಸುವುದರಲ್ಲಿದೆಯೇ! ಹೇಗೋ ಅತ್ತೂ, ಕರೆದೂ ಎಂದೋ ಒಂದೊಂದು ದಿನವಾದರೂ ಕಾಸು ಗಿಟ್ಟಿಸಿಕೊಳ್ಳುತ್ತಿದ್ದೆವು. ಈ ತ್ಯಾಗಕ್ಕೆ ಪ್ರತಿಫಲವಾಗಿ ಕಡೆಯ ಪರೀಕ್ಷೆಯ ದಿನ ಹಟಮಾಡಿ ಒಂದಿಡೀ ಹತ್ತುಪೈಸೆಯ ಮಾವಿನಕಾಯನ್ನು ಕೊಂಡು ತಿಂದರೆ ಭೂತಬಲಿ ಹಾಕಿದಂತೆ! ಆಮೇಲೆ ಶಾಲೆಯ ಕಡೆ ಹೋಗುವಂತೆಯೂ ಇಲ್ಲ; ಹಣ್ಣುಕಾಯಿನ ಅಜ್ಜಿಯರೂ ಇಲ್ಲ. ನಾನು ಹೈಸ್ಕೂಲಿಗೆ ಹೋಗುತ್ತಿದ್ದ ಕಾನ್ವೆಂಟಿನಲ್ಲಿ ದೊಡ್ಡ ಮಾವಿನ ಮರದ ತೋಪು ಇತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಎಲ್ಲರೂ ತಂತಮ್ಮ ಗುಂಪಿನೊಡನೆ ಹೋಗಿ ನಿಗದಿ ಮಾಡಿಕೊಂಡಿದ್ದ ಮಾವಿನ ಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದೆವು. ಅಲ್ಲಿನ ಸಿಸ್ಟರ್‌ಗಳು ಅದೆಷ್ಟು ಶಿಸ್ತನ್ನು ಪಾಲಿಸುತ್ತಿದ್ದರೆಂದರೆ ಆ ಸಮಯಕ್ಕೆ ಮುಂಚೆಯೇ ಆಳುಗಳನ್ನು ಬಿಟ್ಟು ಉದುರಿದ ಕಾಯಿಗಳೆಲ್ಲವನ್ನೂ ಹುಡುಕಿ ಹುಡುಕಿ ಆರಿಸಿಕೊಂಡು ಹೋಗಿರುತ್ತಿದ್ದರು. ಮತ್ತು ಊಟದ ಸಮಯದ ಉದ್ದಕ್ಕೂ ತೋಪಿನ ಬಾಗಿಲಲ್ಲೇ ನಿಂತು ಯಾರಾದರೂ ಕಲ್ಲೆಸೆಯುತ್ತಿದ್ದಾರೆಯೇ, ಹತ್ತಿ ಕಿತ್ತುತ್ತಿದ್ದಾರೆಯೇ ಎನ್ನುವ ಕಣ್ಗಾವಲನ್ನು ಇರಿಸಿಕೊಂಡು ನಿಂತಿರುತ್ತಿದ್ದರು. ಟೊಂಗೆಟೊಂಗೆಯಲ್ಲೂ ಜಿಗಿಯುತ್ತಿರುವ ಎಳೆಯ ಮಾವಿನಕಾಯಿಗಳು… ಕಣ್ಣೋಟಕ್ಕಷ್ಟೇ, ಕೈಗಿಲ್ಲ! ನಾವು ಕುಳಿತಿರುವಾಗಲೇ, ನಮ್ಮ ಅದೃಷ್ಟ ಖುಲಾಯಿಸಿ ಯಾವುದಾದರೂ ಕಾಯಿ ಬಿದ್ದರೆ ಅದು ನಮ್ಮ ಪುಣ್ಯ. ಅದು ಹೇಗೋ ಟಿಫಿನ್‌ ಬಾಕ್ಸಿನ ಮುಚ್ಚಳದಿಂದಲೇ ಕತ್ತರಿಸಿ ಹಂಚಿಕೊಂಡು ತಿಂದಾಗ ಅದೆಂಥ ಆನಂದ. ಕದ್ದ ಮಾಲಿಗಿರುವ ರುಚಿ ಕೊಂಡದ್ದಕ್ಕಿದೆಯೇ? ನೆತ್ತಿಗೇರಿ ಜುಟ್ಟು ನಿಮಿರಿಸುತ್ತಿದ್ದ ಹುಳಿ ಅದೆಷ್ಟು ರುಚಿ! ಅಂತೂ ಅಂತಹ ಅದೃಷ್ಟವೂ ಎಂದಾದರೊಮ್ಮೆ ಒದಗಿ ಬರುತ್ತಿತ್ತು. ಈಗ ಮತ್ತೆ ಯುಗಾದಿ ಹಬ್ಬಕ್ಕೆ ಬರೋಣ. ಹಬ್ಬದ ದಿನ ಸಂಜೆ ನಾವೆಲ್ಲರೂ ಹೊಸ ಬಟ್ಟೆ ತೊಡುತ್ತಿದ್ದೆವು. ಹೊಸ ಸೀರೆಯುಟ್ಟ ಅಮ್ಮ ಪಂಚಾಂಗದಲ್ಲಿ ಈ ವರ್ಷದ ಭವಿಷ್ಯ ಹೇಗಿದೆಯೆಂದು ಓದುತ್ತಿದ್ದರು. ಮಳೆ, ಬೆಳೆ, ರಾಜಕೀಯ ಪಲ್ಲಟಗಳು ಎಲ್ಲವೂ ಮುಗಿದ ನಂತರ ಪ್ರತಿಯೊಬ್ಬರ ರಾಶಿಯ ಕಂದಾಯ ಫಲವನ್ನು ನೋಡುತ್ತಿದ್ದರು. ಕಂದಾಯ ಫಲವೆಂದರೆ ಆಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜಪೂಜ-ರಾಜಕೋಪ ಹೀಗೆ ವರ್ಷದ ಮೂರೂ ಭಾಗಗಳಲ್ಲಿ ಒಬ್ಬೊಬ್ಬರ ಫಲವೂ ಹೇಗಿದೆ ಎಂದು ನೋಡುವುದು. ʻಮನೆಗಿರುವ ಆದಾಯ ಅಪ್ಪ ಒಬ್ಬರದೇ ಆಗಿರುವಾಗ ಬೇರೆ ಬೇರೆಯವರಿಗೆ ಬೇರೆ ಬೇರೆ ಆದಾಯ ಹೇಗಿರುತ್ತದೆ?ʼ ಎನ್ನುವ ಸಂಶಯ ನನಗೆ ಯಾವಾಗಲೂ. ಇದಾದ ಮೇಲೆ ಪ್ರತಿಯೊಬ್ಬರ ರಾಶಿಫಲವನ್ನೂ ಓದುತ್ತಿದ್ದರು. ಏನೋ ಚೆನ್ನಾಗಿರುವುದು ಬಂದರೆ ಓದು ಮುಂದುವರೆಯುತ್ತಿತ್ತು; ಇಲ್ಲವಾದರೆ “ಅಯ್ಯೋ ಇದ್ರಲ್ಲಿ ಬರ‍್ದಿರೋದೆಲ್ಲಾ ಆಗೋ ಹಂಗಿದ್ರೆ ಇನ್ಯಾಕೆ? ಬಂದಾಗ ಅನುಭವಿಸೋದು ಇದ್ದೇ ಇದೆ. ಸಾಕಿಷ್ಟು ತಿಳ್ಕೊಂಡಿದ್ದು” ಎನ್ನುತ್ತಾ ಪುಸ್ತಕ ಮುಚ್ಚುತ್ತಿದ್ದರು. ಎಷ್ಟೊಂದು ಆರೋಗ್ಯಕರ ಮನೋಭಾವವಲ್ಲವೇ?! ಈಗಂತೂ ಬಿಡಿ, ಪ್ರತಿ ವಾಹಿನಿಯಲ್ಲೂ ನೂರಾರು ಜ್ಯೋತಿಷ್ಯ ಹೇಳುವವರು ಉದ್ಭವಿಸಿ ದೊಡ್ಡ ಕಾರ್ಯಕ್ರಮವನ್ನೇ ನಡೆಸಿಬಿಡುತ್ತಾರೆ. ಕೆಲವು ಸಲವಂತೂ ಇಬ್ಬರು, ಮೂವರು ಒಟ್ಟಿಗೇ ಕುಳಿತು ಅದರ ಬಗ್ಗೆ ಚರ್ಚೆ, ವಾದ-ವಿವಾದಗಳು ಬೇರೆ. ಹಲವು ಕಂಟಕಗಳಿಗೆ ಅವರು ಹೇಳುವ ಪರಿಹಾರಗಳನ್ನು ಮಾಡಹೊರಟರೆ ಗಂಟು ಮುಳುಗಿ ಜನಸಾಮಾನ್ಯರು ಮಖಾಡೆ ಮಲಗುವುದೇ ಸರಿ. ಹೋಗಲಿ ಬಿಡಿ, ಅದು ಅವರವರ ವೃತ್ತಿ ಧರ್ಮ, ಕೇಳುವವರ ಕರ್ಮ. ಯುಗಾದಿಯಂದು ಎಲ್ಲರಿಗೂ ಒಳ್ಳೆಯದನ್ನು ಹಾರೈಸೋಣ. ಮುಂದೆ ಬರುವ ದಿನಗಳು ಚೆನ್ನಾಗಿರುತ್ತವೆ ಎಂದು ಭಾವಿಸೋಣ. ನಮ್ಮಮ್ಮ ಹೇಳಿದಂತೆ ʻಬಂದರೆ ಅನುಭವಿಸುವುದು ಇದ್ದೇ ಇದೆʼ. ಈಗಿಂದಲೇ ಏಕೆ ಚಿಂತೆ? ಮನೆಯಲ್ಲಿ ಮಾಡಲು ಬರದಿದ್ದರೆ ಹೋಳಿಗೆ ಮನೆಯಿಂದಾದರೂ ತಂದು ಮಧುಮೇಹವಿಲ್ಲದಿದ್ದರೆ ಹಾಲು, ತುಪ್ಪದೊಂದಿಗೆ ಸಂಭ್ರಮಿಸುತ್ತಾ ತಿನ್ನೋಣ. ಎಲ್ಲೆಲ್ಲೂ ಮಾವಿನಕಾಯಿ ಸುರಿಯುತ್ತಿದೆ. ಚಿತ್ರಾನ್ನಕ್ಕಂತೂ ಮೋಸವಿಲ್ಲ. ನೆನಪಿಸಿಕೊಂಡರೇ ಬಾಯಲ್ಲಿ ನೀರೂರುತ್ತಿದೆ. ಕೊರೋನಾ ಕಾವಳದಲ್ಲೂ ಇಂತಹ ಸಣ್ಣ ಪುಟ್ಟ ಸಂಭ್ರಮಗಳನ್ನು ಮನಸಾರೆ ಅನುಭವಿಸೋಣ. ********************************************* ಟಿ. ಎಸ್. ಶ್ರವಣ ಕುಮಾರಿ.

Read Post »

ಇತರೆ

ಯುಗಾದಿ ವಿಶೇಷ ಬರಹ ಚಿಗುರಿದಚೈತ್ರ ನಾಳೆ ಚೈತ್ರಮಾಸದ ಮೊದಲನೆ ದಿನ,  ನಮಗೆ ಹೊಸ ವರುಷ.  ತೊರಣ ಕಟ್ಟಬೇಕು, ಮಾವಿನ ಎಲೆ, ಬೇವಿನ ಸೊಪ್ಪು ತರಬೇಕಾಗಿದೆ, ಮಗನಿಗೆ ಹೇಳಲೇ! ಪ್ರತಿವರ್ಷವೂ ಇದೇ ಗೊಳು, ಮಗನು ಪ್ರಾಯಕ್ಕೆ ಬಂದಾಗಿಂದಾ ಹಬ್ಬದ ದಿನಗಳಲ್ಲಿ ಮಗನಾಗಲಿ, ಗಂಡನಾಗಲೀ ಸ್ವಲ್ಪವೂ ಆಸಕ್ತಿಯನ್ನು ತೋರುವುದೇ ಇಲ್ಲ.  ನಾನೊಬ್ಬಳೇ ಎಲ್ಲಾ ಹಬ್ಬದ ಕೆಲಸಗಳನ್ನು ಮಾಡಬೇಕು. ಎಲ್ಲರೂ ಆಸಕ್ತಿಯಿಂದ ಜೊತೆಗೂಡಿ ಹಬ್ಬಗಳನ್ನು ಆಚರಿಸಿದರೆ ಬಲು ಚೆಂದ.  ಏನು ಮಾಡುವುದಕೂ ಬೆಸರ, ಮನಸಿಗೆ ಉಲ್ಲಾಸವೇ ಇಲ್ಲವಾಗುತ್ತಿದೆಯಲ್ಲ! ಜೀವನದಲ್ಲಿ ಸಾರವೇ ಇಲ್ಲ. ಮೌನವಾಯಿತು ಮನ.  “ಏ ವೀಣಾ ಎಣ್ಣೆ ಸ್ನಾನ ಮುಗಿಸಿ, ಹೂಗಳ ಹಾರವನ್ನು ಕಟ್ಟಿ ಕೊಡು” ಅಮ್ಮನ ಕೂಗಿಗೆ ಎದ್ದು, ಬೇಗ ಬೇಗನೆ ಸಿದ್ಧಳಾದೆ.  ಅಕ್ಕನ ಜೊತೆ ಸೇರಿ ಮನೆಯ ಅಂಗಳದಲ್ಲಿ, ಪ್ರೀತಿಯಿಂದ ಆರೈಕೆಮಾಡಿ ಬೆಳೆದ, ಬಣ್ಣ ಬಣ್ಣದ ಸ್ಪಟಿಕ ಹೂ, ಮಲ್ಲಿಗೆ, ಗುಲಾಬಿ, ಸಂಪಿಗೆ, ಕಾಕಡ, ಮಾಚಿ ಪತ್ರೆ, ಗರಿಕೆ, ದಾಳಿಂಬ್ರೆ ಪತ್ರೆ, ಸೀಬೆಗಿಡದ ಒಂದೆರಡು ಕುಡಿಗಳನ್ನು ಕಿತ್ತು, ಅಕ್ಕನ ಜೊತೆ ಕೂಡಿ ಹೂವಿನ ಹಾರವನ್ನು ಕಟ್ಟಿ, ಪೂಜೆಯ ಸಿದ್ಧತೆಗಳನ್ನು ಮಾಡಿಮುಗಿಸಿದೆ.  ಅಣ್ಣ ಮಾವಿನ ಸೊಪ್ಪು, ಹೂಗಳಿದ್ದ ಬೇವಿನ ಚಿಗುರುಗಳನ್ನು ತಂದು, ಮಾವಿನ ತೊರಣವನ್ನು ಕಟ್ಟಿ, ಬೇವಿನ ಕುಡಿ, ಹೂವ, ಬೆಲ್ಲ, ಸ್ವಲ್ಪ ತುಪ್ಪ ಹಾಕಿ ಕುಟ್ಟಿ ದೇವರ ನೈವೇದ್ಯಕೆಂದು ಒಂದು ಬಟ್ಟಲಲ್ಲಿ ಹಾಕಿ ದೇವರ ಕೋಣೆಯಲ್ಲಿ ಪೂಜೆ ಮಾಡುತ್ತಿದ್ದ ಅಪ್ಪನಿಗೆ ಕೊಟ್ಟನು, ತಾನೂ ಪೂಜೆಗೆ ಕುಳಿತನು. ಅಮ್ಮ ಬೇಗ ಬೇಗನೆ ಒಂದೆರಡು ಬೇಳೆ ಹೋಳಿಗೆಯನ್ನು ಮಾಡಿ, ತುಪ್ಪ ಹಾಕಿ ನೈವೇದ್ಯದ ಸಮಯಕ್ಕೆ ತಂದು ಕೊಟ್ಟು, ತಾನೂ ಮಹಾಮಂಗಳಾರತಿಯನ್ನು ತೆಗೆದುಕೊಂಡು, ಮತ್ತೆ ಹೊಳಿಗೆಯನ್ನು ಮಾಡಲು ಅಡುಗೆ ಮನೆಯತ್ತ ಹೋದಳು.  ಅಪ್ಪ ಎಲ್ಲರಿಗೂ ಬೇವುಬೆಲ್ಲದ ಮಿಶ್ರಣವನ್ನು ಕೊಟ್ಟರು.  ಕಹಿ ಇದ್ದರೂ ಸಹ ನಾವೆಲ್ಲ ಶ್ರದ್ಧೆಇಂದ ತಿಂದು, ಹೊಳಿಗೆಗಾಗಿ ಕಾತರದಿಂದ ಕೈ ಚಾಚಿದೆವು.  ಅಣ್ಣ ಆ ಎರಡು ಹೊಳಿಗೆಯನ್ನು ತುಂಡುಗಳನ್ನಾಗಿ ಮಾಡಿ ಎಲ್ಲರಿಗೂ ಕೊಟ್ಟು ತಾನೂ ತಿಂದನು. ಅಕ್ಕ ಮಾವಿನಕಾಯಿಯನ್ನು ಸಣ್ಣಗೆ ಹಚ್ಚುತ್ತಿದ್ದಳು, ನಾನೂ ಸಹ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯನ್ನು ತೊಳೆದು, ಹೆಸರಬೇಳೆ ಕೋಸಂಬ್ರಿ, ಮಾವಿನಕಾಯಿ ಚಿತ್ರಾನ್ನ ಮಾಡುವುದಕ್ಕೆ, ಅಮ್ಮನಿಗೆ ಸಹಾಯಮಾಡಿದೆವು.  ಮನೆಯೆಲ್ಲಾ ಮಲ್ಲಿಗೆ ಹೂವಿನ ಪರಿಮಳದಿಂದ ಕೂಡಿತ್ತು.  ಹೋಳಿಗೆ, ಬೊಂಡದ ವಾಸನೆಯು ನಮ್ಮ ಹಸಿವನ್ನು ಹೆಚ್ಚಿಸಿತ್ತು. ಅಣ್ಣ ಎಲ್ಲರಿಗೂ ಬಾಳೆ ಎಲೆ ಹಾಕಿ, ನೀರಿಟ್ಟು ಊಟಕ್ಕೆ ಎಲ್ಲರನ್ನೂ ಕರೆದು, ತಾನು ನಮ್ಮಜೊತೆ ಸೇರಿ ಪಾಯಸ, ಪಲ್ಯ, ಕೊಸಂಬರಿಯನ್ನು ಬಡಿಸಿದನು. ಅಪ್ಪ, ಅಮ್ಮರ ಜೊತೆ ಕುಳಿತು ನಾವೆಲ್ಲರೂ ನಗುನಗುತ್ತ ಹಬ್ಬದ ಊಟವನ್ನು ಮುಗಿಸಿದೆವು. “ಅಣ್ಣ ಯಾರೋ ಗೇಟ್ ತೆಗೆದಹಾಗಾಯಿತು”, “ನೊಡು, ಯಾರೋ ಬಂದಿರಬೇಕು” ನನ್ನಕ್ಕ ಹೇಳಿದಂತೆ, ಅಣ್ಣ ಬಾಗಿಲನ್ನು ತೆಗೆದನು.  ನಾನು ಓಡಿಹೋಗಿ, ಯಾರಿರಬೇಕೆಂದು ತೊಂಗಿ ನೋಡಿದೆ, ಅರೆ ಮೊಹನ, ಜ್ಯೊತಿ ಎಲ್ಲರೂ ಬಂದಿದ್ದಾರೆ, “ಅಮ್ಮ ಅಮ್ಮ ಮಾಮನ ಮಕ್ಕಳು ಬಂದಿದ್ದಾರೆ”, “ಹೌದೆನೆ!, ಅಮ್ಮ ಕೊಣೆಯಿಂದ ಹೊರಗೆ ಬಂದು, ತನ್ನ ಆಣ್ಣನ ಮಕ್ಕಳನ್ನು ಸ್ವಾಗತಿಸಿದಳು. ನಮ್ಮೆಲ್ಲರಿಗೂ ಖುಷಿಯೋ ಖುಷಿ.  ನಾವೆಲ್ಲರೂ ಹರಟೆಹೊಡೆಯುತ್ತ, ಕೇರಂ ಆಟವನ್ನು ಆಡಿ, ಅಂತಾಕ್ಷರಿಯಲ್ಲಿ ಕನ್ನಡ, ಹಿಂದಿ ಹಾಡುಗಳನ್ನು ಹಾಡುತ್ತ, ಹಾಡುತ್ತಾ, ಅಮ್ಮ ತಂದುಕೊಟ್ಟ ನಿಂಬೆಹಣ್ಣಿನ ಪಾನಕವನ್ನು ಕುಡಿಯುತ್ತ ಅಂತಾಕ್ಷರಿಯನ್ನು ಮುಗಿಸಿದೆವು. ಸಮಯ ಕಳೆದದ್ದೇ ತಿಳಿಯಲಿಲ್ಲ. ಮನೆಯ ಗಿಡದಲ್ಲಿ ಬಿಟ್ಟ ಸೀಬೆಹಣ್ಣನ್ನು ಕಿತ್ತು ಅವರಿಗೆ ಕೊಟ್ಟು, ನಾವೆಲ್ಲರೂ, ಮೊಹನ, ಜ್ಯೊತಿಯನ್ನು ಅವರ ಮನೆಯ  ಅರ್ಧ ದಾರಿಯವರೆಗೆ ಬೀಳ್ಕೊಟ್ಟು ಮನೆಗೆ ಬಂದೆವು.  ಎಲ್ಲರ ಮನದಲ್ಲೂ ಎನೋ ಒಂದು ತೃಪ್ತಿ ತುಂಬಿ ಕುಣಿಯುತಿತ್ತು. ಹೆಜ್ಜೆಯ ಸದ್ದಿಗೆ, ನೆನಪುಗಳಿಂದ ಹೊರಬಂದು, ತಲೆ ಎತ್ತಿ ನೋಡಿದೆ.  ಮಗ ಸೊಸೆಯ ಕೈಹಿಡಿದು ನನ್ನ ಸಮೀಪ ಬಂದು ಕುಳಿತನು.  “ಅಮ್ಮ ಒಂದು ಚೀಟಿಯಲ್ಲಿ ನಾಳೆ ಹಬ್ಬಕ್ಕೆ ಏನೇನು ತರಬೇಕೆಂದು ಬರೆದು ಕೊಡು, ನಾನು, ಇವಳು ಇಬ್ಬರೂ ಹೋಗಿ ತರುತ್ತೇವೆ. ನಾಳೆ ಬೇಳೆ ಹೋಳಿಗೆ ಮಾಡು, ಕೋಸಂಬ್ರಿಗೆ ಮಾವಿನಕಾಯಿ ಹಾಕು. ಮಸಾಲವಡೆ ಮಾಡು, ನಾವು ನಿನಗೆ ಸಹಾಯ ಮಾಡ್ತಿವಿ”. ಮಗನ ಮಾತನ್ನು ನಂಬಲಾಗಲಿಲ್ಲ, ಆದರೂ ಸಂತೊಷದಿಂದ ಎದ್ದು, ಚೀಟಿಯನ್ನು ಬರೆದು ಕೊಟ್ಟೆ.  ಇಬ್ಬರೂ ಹೊರಟರು. ಏನಿದು ಆಶ್ಚರ್ಯ!! ಮಗ ಮೊದುವೆ ಆದಮೇಲೆ ಬದಲಾದನೇ!, ಪೂಜೆ, ಹಬ್ಬಗಳೆಂದರೆ ಆಸಕ್ತಿಯನ್ನು ತೋರದ ಮಗ, ಇಂದು ಹೀಗೆಲ್ಲಾ ಹೇಳಿದನೇ! ಇದೆಲ್ಲಾ ಸೊಸೆಯ ಪ್ರಭಾವವಿರಬೇಕು! ಸದ್ಯ ನಮ್ಮ ಆಚರಣೆಗಳಲ್ಲಿ ಆಸಕ್ತಿಯನ್ನು ತೋರಿದನಲ್ಲ, ಅಷ್ಟೇ ಸಾಕು.  ಸೊಸೆಯ ಮೇಲೆ ಪ್ರೀತಿ ಹೆಚ್ಚಿತು. ಬೇಗ ಬೇಗನೆ ಮನೆಯನ್ನು ಸ್ವಚಗೊಳಿಸಿ, ಮಗ, ಸೊಸೆ ಬರುವದರೊಳಗೆ ಹಬ್ಬದ ತಯಾರಿಯನ್ನು ಮಾಡಿದೆನು.  ಪೂಜೆಯ ಸಾಮಗ್ರಿಗಳನ್ನು ಒರೆಸುತ್ತಾ ಕುಳಿತ ನನಗೆ, ಮತ್ತೆ ತವರುಮನೆಯ ನೆನಪಾಯಿತು. ಎಲ್ಲರೂ ಬೆಳೆದು ದೊಡ್ಡವರಾದೆವು, ಆದರೆ ಬುದ್ಧಿ ಬೆಳೆಯಲಿಲ್ಲ.  ಸಂಸಾರದಲ್ಲಿ ಮನಸ್ತಾಪಗಳು ಹುಟ್ಟಿ, ಅಣ್ಣ ತಂಗಿಯರೆಲ್ಲಾ ದೂರ ಸರಿದೆವು. ಅಪ್ಪ ಅಮ್ಮರ ಸಾವಿನನಂತರ ತವರುಮನೆ ಇಲ್ಲದೇ ಹೋಯಿತಲ್ಲಾ. ನಾನೇ ಪೂಜೆಯನ್ನು ಮಾಡಿ ಎಲ್ಲರಿಗೂ ಬೇವು,ಬೆಲ್ಲದ ಚೂರ್ಣವನ್ನು ಕೊಟ್ಟು, ಹೋಳಿಗೆ ಮಾಡಲು ಅಡುಗೆ ಮನೆಗೆ ಹೋದೆನು. ಗಂಡ ದಿನಪತ್ರಿಕೆಯನ್ನು ಓದುವುದರಲ್ಲಿ ಮುಳುಗಿಹೋಗಿದ್ದರು. ಅವರಿಗೇ ದಿನನಿತ್ಯ ಅದೇ ಪ್ರಪಂಚವಾಗಿತ್ತು. ಬದಲಾಗದ ಜೀವಿ. “ಹಹ….ಬನ್ನಿ..ಬನ್ನಿ…” ಪಕ್ಕದ ಮನೆಯವರ ದ್ವನಿ ಕೇಳಿಸಿತು,  ಮನಸ್ಸು ಒಲ್ಲದಿದ್ದರೂ, ಕುತೂಹಲದಿಂದ ಕಿಟಕಿಇಂದ ಇಣುಕಿ ನೋಡಿದೆ. ಪ್ರಕಾಶ್ ರವರ ತಮ್ಮ, ಅಕ್ಕ ಬಂದಿದ್ದರು ಹಬ್ಬಕ್ಕಾಗಿ. ಪ್ರಕಾಶ್ ರವರ ಪತ್ನಿ ಶೊಭಾಳೊ ರೇಶಿಮೆ ಸೀರೆ ಉಟ್ಟಿದ್ದರು, ಎಲ್ಲರೂ ಹೊಸ ಬಟ್ಟೆಗಳನ್ನು ತೊಟ್ಟು, ಹಬ್ಬದ ಸವಿಯಲ್ಲಿ ಮುಳುಗಿದ್ದರು.  ಅವರ ಸಂಭ್ರಮವನ್ನು ನೋಡಿ ಒಂದು ಷಣ ಅಲ್ಲೇ ಸುಮ್ಮನೆ ನಿಂತುಬಿಟ್ಟೆ. ಸಂಸಾರವೆಂದರೆ ಹಾಗಿರಬೇಕೆಂದೆನಿಸಿತು.  ಬಂಧುಗಳ ಒಡನಾಟದ ಮಹತ್ವದ ಅರಿವಾಯಿತು. ಯೊವ್ವನದಲ್ಲಿ ಯಾರೂ ಬೇಕಾಗುವುದಿಲ್ಲ, ಅದೇ ವಯಸ್ಸಾಗುತ್ತಾ.. ಆಗುತ್ತಾ..ಒಂಟಿತನವು ಕಾಡುವುದು, ಮಕ್ಕಳು ಅವರ ಪಾಡಿಗೆ, ಅವರ ಇಷ್ಟದಂತೆ ಜೊತೆಯಲಿ ಇದ್ದರೂ ಇಲ್ಲದವರಂತಿರುತ್ತಾರೆ, ಇಲ್ಲವೇ ಹೊರ ರಾಜ್ಯಗಳಲ್ಲೋ, ದೇಶಗಳಲ್ಲೋ  ಕೆಲಸದ ಕಾರಣಕ್ಕೆ ಇದ್ದುಬಿಡುತ್ತಾರೆ.  ಆಗ ನಮಗೆ ನಮ್ಮ ನೆಂಟರ, ಸ್ನೇಹಿತರ ಒಡನಾಟ ಬೇಕೆಂದೆನಿಸುವುದು. ಅಣ್ಣ ಮೊದುವೆಯಾದ ನಂತರ ಬದಲಾಗಿಬಿಟ್ಟ, ನಾವು ಅಮ್ಮನ ಮನೆಗೆ ಉಗಾದಿ ಹಬ್ಬಕೆಂದು ಹೋದಾಗೆಲ್ಲಾ, ಅಣ್ಣ ಅತ್ತಿಗೆಯ ನಡವಳಿಕೆ ಬದಲಾದಂತೆನಿಸುತಿತ್ತು. ವ್ಯಂಗವಾದ ಮಾತುಗಳು ಕಿವಿಗೆ ಬೀಳುತಿದ್ದವು. ಕ್ರಮೇಣ ಅಪ್ಪ, ಅಮ್ಮರ ಸಾವಿನ ನಂತರ ತವರುಮನೆಇಂದ ದೂರವಾಗಿಯೇಬಿಟ್ಟೆವು.  ಅತ್ತೆ ಮನೆಯಲ್ಲಂತೂ ನನ್ನದೆಂಬುದು ಏನೂ, ಯಾರೂ ಇಲ್ಲವೆಂದೆನಿಸಿತು.  ಹಬ್ಬ ಹರಿದಿನಗಳಲ್ಲಿ ಮನೆಗೆ ನೆಂಟರು ಬಂದು ಹೋಗಿ ಮಾಡಿದರೆ, ನಮ್ಮ ಹಾಗೂ ಅವರ ನಡುವಿನ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗುವುದು.  ಗಂಡನಾದರೋ ಒಂಟಿಯಾಗಿರುವುದನ್ನೇ ಇಷ್ಟ ಪಡುತ್ತಿದ್ದರು.  ಆದರೆ ನನಗೆ ಎಲ್ಲರ ಸಂಬಂಧವು ಬೇಕೆನಿಸುತ್ತಿತ್ತು.  ಮನೆ, ಮನಸ್ಸು ಖಾಲಿ ಖಾಲಿ ಎಂದೆನಿಸಿತು.  ಅಮ್ಮ, ಅಪ್ಪ ನೆನಪಾಗಿ ಹೃದಯ ಭಾರವೆನಿಸಿತು. “ಮಗ, ಸೊಸೆ  ಹೊರಗೆ ಹೋಗದೆ, ಹಬ್ಬಕ್ಕೆ ಮನೆಯಲ್ಲಿ ನಮ್ಮಜೊತೆ ಇದ್ದಾರೆ, ಇದು ಸಂತೋಷದ ಷಣ,  ಸುಮ್ಮನೆ ಹಳೆಯ ನೆನಪುಗಳೋಂದಿಗೆ ಈ ದಿನವೇಕೆ ಬೇಸರಗೊಳ್ಳಬೇಕು”. ಮುಖವನ್ನು ತೊಳೆದು ಅಡುಗೆ ಮನೆಯತ್ತ ಹೆಜ್ಜೆ ಇಟ್ಟೆ, ಅಲ್ಲಿ ಮಗ ಮಾವಿನ ಕಾಯಿಯನ್ನು ಹಚ್ಚುತಿದ್ದ, ಸೊಸೆಯೋ ತನ್ನ ಪುಟ್ಟ ಪುಟ್ಟ ಕೈಯಲ್ಲಿ ನಾನು ಮಾಡಿಟ್ಟ ಹೂರ್ಣದ ಉಂಡೆಗಳನ್ನು ಮಾಡಿ ಒಂದು ತಟ್ಟೆಯಲ್ಲಿ ಇಡುತ್ತಿದ್ದಳು. ಅವರಿಬ್ಬರೂ  ಎನೋ ಮಾತನಾಡುತ್ತ ನಗು ನಗುತ್ತ ನನಗೆ ಸಹಾಯವನ್ನು ಮಾಡುತಿದ್ದರು.  ತಕ್ಷಣ ಅವರಿಬ್ಬರನ್ನು ಪ್ರೀತಿಇಂದಪ್ಪಿಕೊಂಡು, ಇಬ್ಬರಿಗೂ ಹಬ್ಬದ ಶುಭಾಶಯಗಳನ್ನು ಹೇಳಿ ಹೋಳಿಗೆಯನ್ನು ಮಾಡಿ ಮುಗಿಸಿದೆ. ನಗುನಗುತ ಎಲ್ಲರಿಗೂ ಬಾಳೆ ಎಲೆಯ ಊಟ ಬಡಿಸಿ, ಅಡುಗೆಮನೆಗೆ ಬಂದು ಒಂದೆರಡು ಡಬ್ಬಗಳಲ್ಲಿ, ಹೋಳಿಗೆ, ಮಾವಿನಕಾಯಿ ಚಿತ್ರಾನ್ನ, ಒಂದೆರಡು ಮಸಾಲವಡೆಯನ್ನು ತುಂಬಿಸಿಕೊಂಡು, ರೌಕೆಕಣ, ತಾಂಬೂಲವನ್ನು ಚೀಲದಲ್ಲಿ ಇಟ್ಟು, ಮೂಲೆ ಮನೆಯಲ್ಲಿದ್ದ ಪಾರ್ವತಮ್ಮ-ನಾಗರಾಜ ವೃದ್ಧದಂಪತಿಗಳ ಮನೆಗೆ ಬಂದು, ಅವರಿಗೆ ಹಬ್ಬದ ತಿಂಡಿಯನ್ನು ಕೊಟ್ಟು, ಅವರ ಆಶೀರ್ವಾದವನ್ನು ಪಡೆದು, ಮನೆಗೆ ಬಂದು, ತಾನೂ ಊಟ ಮಾಡಿ, ಮಗ, ಸೊಸೆಯೊಂದಿಗೆ ಆ ದಿನ ಬೆರೆತು ಮನತುಂಬುವ ತನಕ ಮಾತನಾಡಿ, ಮಿಕ್ಕ ಕೆಲಸವನ್ನೆಲ್ಲ ಮಾಡಿ ಮುಗಿಸಿದೆನು.  ಮನಸು ತೃಪ್ತಿ ಇಂದ ತುಂಬಿತ್ತು. ಅಂದು ಅರಿವಾಯಿತು ನನಗೆ. ಬಿರುಕು ಬಿಟ್ಟ ಸಂಬಂಧಗಳನ್ನು ಮತ್ತೆ ಮತ್ತೆ ನೆನೆಯುತ್ತ, ವಿನಾಕಾರಣ ಕೊರಗುವುದಕಿಂತ, ನಮ್ಮ ಅಕ್ಕ ಪಕ್ಕದವರೋಂದಿಗೆ ಪ್ರೀತಿಯನ್ನು ಹಂಚಿಕೊಳ್ಳುವುದೇ ಸರಿ ಎನಿಸಿತು.  ಪಾರ್ವತಮ್ಮನ ಮಕ್ಕಳು ಅವರಜೊತೆ ಇಲ್ಲ. ಬೇರೆ ಊರಿನಲ್ಲಿದ್ದಾರೆ,  ಅವರಿಬ್ಬರೇ ಜೀವನವನ್ನು ನಡೆಸುತಿಲ್ಲವೇ?  ಪಾರ್ವತಮ್ಮ-ನಾಗರಾಜ ದಂಪತಿಗಳು ನನ್ನ ತಂದೆ-ತಾಯಿ ಅಥವ ಅಣ್ಣ ಅತ್ತಿಗೆಯಾಗಬಹುದಲ್ಲವೇ? ಈ ದಿನ ಅವರಿಬ್ಬರೇ ಹಬ್ಬವನ್ನು ಆಚರಿಸುತಿಲ್ಲವೇ? ಸಾಯಂಕಾಲ ಮಗ, ಸೊಸೆಯನ್ನು ತನ್ನ ಸ್ನೇಹಿತನ ಮನೆಗೆಂದು ಬಸವನಗುಡಿಯತ್ತ ಹೊರಟನು. ಸೊಸೆ ಸುಂದರವಾಗಿ ಅಲಂಕರಿಸಿಕೊಂಡು, ನಗುನಗುತ್ತ ಮಗನ ಕೈ ಹಿಡಿದು ಹೊರಟಳು. ಅಂದು ನನ್ನ ಮನಸು “ಮಾವಿನ ಚಿಗುರಿನಂತೆ ಚಿಗುರಿ, ಬೇವಿನ ಹೂವಿನಂತೆ ಅರಳಿ, ಬೆಲ್ಲದ ಸಿಹಿಯು ಚೈತ್ರ ಮಾಸದ ಮಳೆಹನಿಯೊಂದಿಗೆ ಸೇರಿ, ಅ ಸಿಹಿಯ ಹನಿಯು ನನ್ನ ಹೃದಯವನ್ನು ಪ್ರೀತಿಯಿಂದ  ಪಸರಿಸಿತು.  ಎಲ್ಲೆಲ್ಲಿಯೂ ಹೊಸ ತನ, ಹೊಸ ಭರವಸೆಯೊಂದಿಗೆ ಹೊಸ ಹೊಸ ಸ್ನೇಹಗಳ ಬಂಧನದಲ್ಲಿ ಬೆಸೆಯಬೇಕೆನಿಸಿತು”. “ಉಗಾದಿ ಮರಳಿ ಮರಳಿ ಬರಲೆಂದು ಮನಸು ಹಾಡಿತು”. **************************************************************** ಮೀನಾಕ್ಷಿಹರೀಶ್.

Read Post »

ಇತರೆ

ಯುಗಾದಿ ವಿಶೇಷ ಲೇಖನ ನವಚೈತನ್ಯಕ್ಕೆ ಮುನ್ನುಡಿ ಯುಗಾದಿ ಸಂಗಾತಿ ಸಾಹಿತ್ಯ ಪತ್ರಿಕೆ: ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಸಂಚಲನ ಮೂಡುತ್ತದೆ ಎಲ್ಲಾ ಕಡೆಗೂ ಹಸಿರುತೋರಣ ಹೂವಿನ ಶೃಂಗಾರ ಮಾಡಿದಂತೆ ಗಿಡದ ತುಂಬಾ ಹೂಗಳು ಅರಳಿ ಚಿಗುರು ಮೂಡಿ ಸಂಭ್ರಮದ ವಾತಾವರಣ ಏರ್ಪಡಿಸುತ್ತವೆ.ಇದು ನಾವು ಹೊಸವರ್ಷದ ಎಂದು ಸಂಭ್ರಮಪಡುವ ಯುಗದ ಆದಿ ಯುಗಾದಿಯ ವಿಶೇಷತೆ.        ಹೊಸವರ್ಷವೆಂದರೆ ಇದುವೇ ಎಂದು ಸಾಧಿಸುವಂತೆ ಎಲ್ಲಾ ಕಡೆಗೂ ಹಸಿರು ಉಸಿರಾಡುವುದು. ಬಣ್ಣ ಬಣ್ಣದ ಹೂವುಗಳು ಗಿಡದ ತುಂಬೆಲ್ಲಾ ಅರಳಿ ಪರಿಸರವೆಲ್ಲಾ ಶೃಂಗಾರ. ವರ್ಷದ ಆರಂಭದ ಸಂಕೇತವನ್ನು, ಹೊಸತನದ ಕಳೆಯನ್ನು ಪ್ರಕೃತಿ ಎಲ್ಲೆಡೆ ಪಸರಿಸುತ್ತದೆ.       ಅದೇ ಇಡೀ ಜಗತ್ತು ಹೊಸ ವರ್ಷವೆಂದು ಆಚರಿಸುವ ಜನವರಿ ಒಂದು, ಮಧ್ಯರಾತ್ರಿಯಲ್ಲಿ ನಿಶಾಚರಗಳು ಹೋರಾಡುವ ಸಮಯದಲ್ಲಿ ಪ್ರಾರಂಭವಾಗುವುದು . ಆರೋಗ್ಯ ಹಾಳು ಮಾಡಿಕೊಳ್ಳುವಂತಹ ಬೇಕರಿ ತಿನಿಸುಗಳು , ಕೇಕ್ ,ಡ್ರಿಂಕ್ಸ್ ಕೂಲಡ್ರಿಂಕ್ಸ್, ಮೋಜು-ಮಸ್ತಿ ಮಾಡುತ್ತಾರಾತ್ರಿಯೆಲ್ಲಾ ನಿದ್ದೆಗೆಟ್ಟು ಅನಾಹುತಕ್ಕೆ ಕಾರಣ ಮಾಡಿಕೊಳ್ಳುವ ಇದು ಹೊಸವರ್ಷವೇ? ಅದೇ ಭಾರತೀಯ ಪದ್ದತಿಯಂತೆ ಯುಗಾದಿಯಂದು  ನಾವು ಆಚರಿಸುವ ಹೊಸ ವರ್ಷವು ಮುಂಜಾವಿನ ಬ್ರಾಹ್ಮಿ   ಮುಹೂರ್ತದಲ್ಲಿ ಪ್ರಾರಂಭವಾಗುವುದು.ಅಂದು ಮೊದಲೇ ಶುಚಿಗೊಳಿಸಿದ ಮನೆಯಲ್ಲಿ  ಬಾಗಿಲಿಗೆ ಮಾವಿನ ತೋರಣ ಕಟ್ಟಿ , ಹೂವಿನ ಅಲಂಕಾರ ಮಾಡಿ , ಅಂಗಳದಲ್ಲಿ ಸುಂದರ ರಂಗೋಲಿಗೆ ಬಣ್ಣದ ಮೆರಗು . ಎಲ್ಲರೂ ಬೇವು ಬೆರೆಸಿದ ಬಿಸಿ ನೀರಿನಲ್ಲಿ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮನೆಯಲ್ಲೇ ಮಾಡಿದ ಹೋಳಿಗೆ,ಕಡುಬು, ಅನ್ನ ಸಾರು ಸಂಡಿಗೆ, ಹಪ್ಪಳ ,ಉಪ್ಪಿನಕಾಯಿ, ಮೊಸರು ಮುಂತಾದ ಬಗೆಬಗೆಯ ಅಮೃತದಂತಹ ಸವಿಭೋಜನ ಜೊತೆಗೆ ಜೀವನದ ಮರ್ಮ ಸಾರುವ ಬೇವು-ಬೆಲ್ಲವನ್ನು ಮನೆಮಂದಿಯಲ್ಲಾ ಸೇರಿ ಸವಿದು ಸಂಭ್ರಮಿಸುವ ನಮ್ಮ ಹಬ್ಬ ತನುಮನಕ್ಕೆ ಹಿತಕರ. ಪ್ರಕೃತಿಗೆ ಹತ್ತಿರ. ಇಡೀ ವರ್ಷ ಉತ್ಸಾಹ ಸಂಭ್ರಮದಿಂದ ಕಳೆಯುವಂತೆ ಚೈತನ್ಯ, ಬರವಸೆ ಮೂಡಿಸುವ ಈ ನಮ್ಮ ಯುಗಾದಿ ನಿಜವಾದ ಹೊಸ ವರ್ಷ.      ನಮ್ಮ ಮನೆಯಲ್ಲಂತೂ ಯುಗಾದಿ ಬಂದರೆ ಸಾಕು ವಾರದ ಮೊದಲೇ ಸ್ವಚ್ಛತಾ ಕಾರ್ಯ ನಡೆಯುವುದು. ಮನೆಯಲ್ಲಾ ಶುಚಿಗೊಳಿಸಿ , ಹಾಸಿಗೆ ಬಟ್ಟೆ, ಪಾತ್ರೆಗಳನ್ನು ಶುಭ್ರಗೊಳಿಸುತ್ತೇವೆ. ಅಮಾವಾಸ್ಯೆ ದಿನದಂದೇ ನಮ್ಮ ಮನೆಯಲ್ಲಿ ಹಬ್ಬ ಪ್ರಾರಂಭವಾಗುವುದು. ಮನೆಗೆ ತಳಿರು ತೋರಣ ಹೂಗಳಿಂದ ಸಿಂಗರಿಸಿ, ಆ ದಿನದಂದೇ ಘಟಸ್ಥಾಪನೆ ಮಾಡಿ ಐದು ದಿನಗಳ ಕಾಲ ನಂದಾದೀಪವನ್ನು ಹಗಲು-ಇರುಳು ಕಾಯುತ್ತೇವೆ. ಅಂದು ಹೋಸ ಗೋಧಿ,ನೆನೆಸಿದ ಕಡಲೆಕಾಳು,ಉಡಕ್ಕಿ ಸಾಮಾನು ಇಟ್ಟು ಕಾಳಿಕಾ ದೇವಿಯನ್ನು ಪೂಜಿಸುತ್ತೇವೆ.  ಹೋಳಿಗೆ ಅನ್ನ ,ಸಾರು ,ಕೋಸಂಬರಿ, ಪಲ್ಯ ಮುಂತಾದವುಗಳನ್ನು ನೈವೇದ್ಯ ಮಾಡುತ್ತೇವೆ .ಅಮವಾಸ್ಯೆ ಮರುದಿನ ಪಾಡ್ಯದಂದು ಬೇವು ಹಾಕಿದ ನೀರಿನಿಂದ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತೇವೆ.ಅಂದು ಗೋಧಿ ಹುಗ್ಗಿ, ಬೇವು ಬೆಲ್ಲ ವನ್ನು ನೈವೇದ್ಯಕ್ಕೆ ವಿಶೇಷವಾಗಿ ಮಾಡಿರುತ್ತೇವೆ.ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಡಿ ತುಂಬಿ ದೇವಿ ಕೃಪೆಗೆ ಪಾತ್ರರಾಗುತ್ತೇವೆ.         ಹೀಗೆ ಯುಗಾದಿ ಮನೆ ಒಳಗೂ ಹೊರಗೂ ಸಂಭ್ರಮ ಸಡಗರದ ವಾತಾವರಣವನ್ನು ಏರ್ಪಡಿಸುತ್ತದೆ.ಮಾನವರ ದೇಹ ಮನಸ್ಸುಗಳಿಗೆ,ಸಸ್ಯ ಜೀವ ಸಂಕೂಲಕ್ಕೆನವಚೈತನ್ಯ, ನವೋಲ್ಲಾಸ ಹೊತ್ತು ತರುತ್ತದೆ. ****** ಲಕ್ಷ್ಮೀದೇವಿ ಪತ್ತಾರ

Read Post »

ಇತರೆ

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ

ಜನ್ಮದಿನಾಚರಣೆ 11/04/2021 ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ [01:48, 11/04/2021] +91 95382 66593: ಭಾರತದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಜ್ಯೋತಿಬಾ ಪುಲೆ.ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಧರ್ಮ, ಪಂಥ, ಸಂಪ್ರದಾಯ ಈ ರೀತಿಯ ಕಟ್ಟುಪಾಡುಗಳಿಗೆ ಜೋತುಬೀಳದೆ,ಮಾನವ ಧರ್ಮವನ್ನು ಆಧರಿಸಿ ನಡೆಯಬೇಕೆಂದು ಅಪೇಕ್ಷೆ ಪಟ್ಟವರು. ಜ್ಯೋತಿಬಾ ಪುಲೆ ಅವರು 11/04/1827 ರಂದು ಮಹಾರಾಷ್ಟ್ರದ ‘ಕಟಗುಣ’ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್,ತಾಯಿ ಚಿಮಣಾಬಾಯಿ. ಜ್ಯೋತಿಬಾ ಅವರು ಇನ್ನೂ ಚಿಕ್ಕವರಿದಾಗಲೇ ತಾಯಿ ಚಿಮಣಾಬಾಯಿ ಅವರು ಸ್ವರ್ಗಸ್ತರಾಗುತ್ತಾರೆ.ನಂತರ ಜ್ಯೋತಿಬಾ ಅವರನ್ನು ಸಾಕಿ ಸಲುಹಿದ್ದು ತಾಯಿ ಚಿಮಣಾಬಾಯಿ ಅವರ ಸೋದರಿ ಸಗುಣಾಬಾಯಿ ಅವರು.ಸಗುಣಾಬಾಯಿ ಅವರು ಚಿಕ್ಕವಯಸ್ಸಿನಿಂದಲೇ ಜ್ಯೋತಿಬಾ ಅವರ ಮನಸ್ಸಿನಲ್ಲಿ ಸಮಾಜಸೇವೆ ಎಂಬ ಬೆಳಕಿನ ಜ್ಞಾನವನ್ನು ಬಿತ್ತುತ್ತಾರೆ. ಜಾತಿಯ ಕಟ್ಟಲೆಗಳಿಂದ ಮಡುಗಟ್ಟಿದ್ದ ಸಮಾಜದಲ್ಲಿ ಶಿಕ್ಷಣವೆಂಬ ಸೇವೆಯ ಮೂಲಕ ಸಂಪೂರ್ಣ ಭಾರತದಲ್ಲಿ ಪ್ರಗತಿಪರ ನಡೆಯನ್ನು ಹುಟ್ಟುಹಾಕಿದ ಜ್ಯೋತಿಬಾ ಫುಲೆ ಅವರು,ಅಂಬೇಡ್ಕರರವರಿಗೂ ಹಲವು ವಿಚಾರಗಳಲ್ಲಿ ಆದರ್ಶವಾಗಿದ್ದರು.ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪ್ರದಾಯದ ಹೆಸರಿನಲ್ಲಿ ನಿಷೇಧಿಸಿದ್ದ ಕಾಲದಲ್ಲಿ ಜ್ಯೋತಿಬಾರವರು ತನ್ನ ಪತ್ನಿ ಸಾವಿತ್ರಿಭಾಯಿ ಪುಲೆ ರವರಿಗೆ ಅಕ್ಷರ ಕಲಿಸಿ ಭಾರತದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ರೂಪಿಸಿದ ಮಹಾನ್ ಚೇತನ. ಆ ಕಾಲದಲ್ಲಿ ಮೇಲ್ಜಾತಿಯವರಿಗೆ ಮಾತ್ರ ಶಿಕ್ಷಣವೆಂಬ ಅನಿಷ್ಟ ಪದ್ಧತಿ ಇತ್ತು.ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಶಾಲೆಗಳಿದ್ದವು.ಆದರೆ ಆ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳಿಗೆ ಮಾತ್ರ ಕಲಿಯುವ ಅವಕಾಶ ಇತ್ತು, ಆ ಎಲ್ಲಾ ಕಟ್ಟಲೆಗಳನ್ನು ಮೀರಿ 1848 ರಲ್ಲಿ ಪುಣೆಯಲ್ಲಿ ಶ್ರೀ ಬಿಡೇಯವರ ಭವನದಲ್ಲಿ ಹೆಣ್ಣು ಮಕ್ಕಳ ಶಾಲೆ ಆರಂಭಿಸಿ ಭಾರತದಲ್ಲಿ ಪ್ರಪ್ರಥಮ ಹೆಣ್ಣು ಮಕ್ಕಳ ಶಾಲೆ ಆರಂಭಿಸಿದ ಕೀರ್ತಿಯನ್ನು ಪುಲೆ ದಂಪತಿ ಪಡೆದರು.ಬಡವ,ಶ್ರೀಮಂತ, ಜಾತಿ ಧರ್ಮಗಳ ಬೇಧ ಮಾಡದೇ ಸಕಲ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದರು ಪುಲೆ ದಂಪತಿಗಳು,ಆ ಕಾಲದಲ್ಲಿ ಜ್ಯೋತಿಬಾ ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು.ಆದರೆ ಅವರ ಇಚ್ಛೆ,ಗುರಿ ಒಂದೇ ಆಗಿತ್ತು ಸಮಾಜ ಸೇವೆ.ಶಿಕ್ಷಣದ ಕ್ರಾಂತಿಯ ಜೊತೆಗೆ ಜ್ಯೋತಿಬಾ ಪುಲೆ ಅವರು ವಿಧವೆಯರ ಮಕ್ಕಳಿಗಾಗಿ ಅನಾಥ ಶಾಲೆ,ವಿಧವಾ ವಿವಾಹ, ಸತ್ಯಶೋದಕ ಸಮಾಜದ ಸ್ಥಾಪನೆ ಮಾಡಿ ಬಸವ ಮಾರ್ಗದಲ್ಲಿ ಸಾಗಿದ ಮಹಾನ ಚೇತನ ಜ್ಯೋತಿಬಾ ಪುಲೆ. ಇಂದಿನ ಯುವ ಸಮಾಜ ಪುಲೆ ದಂಪತಿಗಳ ಆದರ್ಶಗಳನ್ನ ಪಾಲಿಸಿಕೊಂಡು ಹೋಗಬೇಕಾಗಿದೆ.ನಟ ನಟಿಯರ ಜನ್ಮದಿನದವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಕಾರ್ಯದಲ್ಲಿ ಬಹುತೇಕ ಇಂದಿನ ಯುವ ಸಮಾಜ ಮುಳುಗಿದೆ.ಆದರೆ ಈ ರೀತಿಯ ಮಹಾನ ಚೇತನಗಳು ಯುವ ಸಮಾಜಕ್ಕೆ ನೆನಪಾಗದೆ ಇರುವುದು ವಿಪರ್ಯಾಸ,ಪುಲೆ ದಂಪತಿಗಳ ಜನ್ಮದಿನವನ್ನು ಅದ್ದೂರಿಯಾಗಿ ಮಾಡದೇ ಇದ್ದರೂ ಅವರ ಜೀವನದ ಕುರಿತು ತಿಳಿದುಕೊಂಡು ಅವರು ಸಾಗಿದ ಮಾರ್ಗದಲ್ಲಿ ಒಂದಿಷ್ಟಾದರೂ ಸಾಗುವ ಮನಸ್ಸು ನಾವುಗಳು ಮಾಡಬೇಕಿದೆ. ************************************** ಹೊರನಾಡ ಕನ್ನಡಿಗ ಪ್ರಕಾಶ (ಇಂದೋರ್- ಮಧ್ಯಪ್ರದೇಶ)

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ Read Post »

You cannot copy content of this page

Scroll to Top