ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಡಾ.ಸುಮತಿ ಪಿ. ಅವರ ವಿಶೇಷ ಲೇಖನ

ಮನೋಸಂಗಾತಿ ಡಾ.ಸುಮತಿ ಪಿ. “ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಮನಸ್ಸು ಎಂಬುದು ಬಹಳ ಸೂಕ್ಷ್ಮವಾದದ್ದು, ಅದೊಂದು ವಿಶಿಷ್ಟವಾದ ಶಕ್ತಿ.ಮನಸ್ಸು ಬಹಳ ವೇಗವಾಗಿ ಸಂಚರಿಸುವ ಶಕ್ತಿಯಾಗಿದ್ದು, ಅದರ ಹಿಡಿತವನ್ನು ಸಾಧಿಸುವುದು  ಬಹಳ ಕಷ್ಟವಾಗುವುದು. ಮನಸ್ಸನ್ನು ಕೆಲವೊಮ್ಮೆ ಭಾವನೆಗಳ ಕೈಗೆ ಕೊಟ್ಟು, ಏನೇನೋ ಅನಾಹುತಗಳು ಆಗುವುದುಂಟು. ಮನಸ್ಸಿನ ಹಿಡಿತವಿದ್ದರೆ ಮಾತ್ರ ಮನಸ್ಸು ವಿಷಯವನ್ನು ಗ್ರಹಿಸಲು,ಅದಕ್ಕೆ ಪ್ರತಿಕ್ರಿಯಿಸಲು ಮತ್ತು ವಿಚಾರ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತಲೂ ವೇಗವಾಗಿ ಚಲಿಸುವ ಮನಸ್ಸು ನಮ್ಮ ಆಲೋಚನೆಗಳು, ಕನಸುಗಳು ಮತ್ತು ಅನಿಸಿಕೆಗಳ ಸಂಕೀರ್ಣ ಪ್ರಕ್ರಿಯೆ.ಮನಸ್ಸಿನ ಏಕಾಗ್ರತೆ, ತಾಳ್ಮೆ ಮತ್ತು ಉದಾತ್ತತೆಯಿಂದ ಮನಸ್ಸನ್ನು ನಿಯಂತ್ರಿಸುವುದರಿಂದ ವ್ಯಕ್ತಿಯೊಬ್ಬನ ಜೀವನದ ಯಶಸ್ಸಿಗೆ ಅದು ಕಾರಣವಾಗುತ್ತದೆ. ಮನಸ್ಸನ್ನು ಸರಿಯಾದ ಮಾರ್ಗದಲ್ಲಿ ನಿರ್ದೇಶಿಸಿದರೆ ಅದು ಜೀವನವನ್ನು ಅದ್ಭುತವಾಗಿಸಬಲ್ಲದು.ಸ್ಥಿರ ಮನಸ್ಥಿತಿ ಹೊಂದಿರುವವರು ಬದಲಾವಣೆಗೆ, ಬದಲಾವಣೆಯಿಂದ ಬೆಳವಣಿಗೆಯ ಮನಸ್ಥಿತಿಗೆ  ಪರಿವರ್ತನೆಗೊಳ್ಳಬೇಕಾಗುತ್ತದೆ. ಮನಸ್ಥಿತಿಯನ್ನು ಬದಲಾಯಿಸುವುದು ಕಷ್ಟ ಎಂಬುದನ್ನು ಒಪ್ಪಿಕೊಂಡರೂ, ನಾವು ಮನಸ್ಸು ಬದಲಾಯಿಸುವುದರಿಂದ ಇನ್ನೊಬ್ಬರಿಗೆ ಒಳಿತಾಗುತ್ತದೆ, ಎನ್ನುವುದಾದರೆ ನಾವು ಮನಸ್ಸು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಬಹುದು.ಅಂತಹ ಸಂದರ್ಭದಲ್ಲಿ ಮನಸ್ಸು ಬದಲಾಯಿಸುವುದು  ಯೋಗ್ಯವಾಗಿದೆ,ಅನಿವಾರ್ಯವಾಗಿದೆ. ಕೆಲವೊಂದು ಸಂದರ್ಭದಲ್ಲಿ ಬದುಕಿನಲ್ಲಿ ಸ್ಥಿರಮನಸ್ಸಿನಿಂದಾಗಿ ಎಂತೆಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಸ್ಥಿರ ಮನಸ್ಸಿನಿಂದ ಒಳಿತಾಗುವುದೂ ಇದೆ.ಮನಸ್ಸು ಬದಲಾಯಿಸುವುದು  ನಮಗೆ ಕಷ್ಟ ಎನಿಸಬಹುದು. ಪರಿಸ್ಥಿತಿ ಯಾವಾಗ ನಮಗೆ ಕಷ್ಟವೆಸಿಸುತ್ತದೆಂದರೆ ನಮ್ಮ ಮನಸ್ಸು ಅದನ್ನು ಸ್ವೀಕರಿಸದಾಗ, ಅಥವಾ ಅದನ್ನು ಒಪ್ಪಿಕೊಳ್ಳದೆ ಇದ್ದಾಗ. ಹಾಗಾಗಿ ಕೆಲವೊಮ್ಮೆ ಇದ್ದ ಪರಿಸ್ಥಿತಿಯಲ್ಲಿ ಬದಲಾವಣೆಗಳು ಉಂಟಾದಾಗ ನಮಗೆ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ನಾವು ಒಂದು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡಿರುತ್ತೇವೆ. ಹಾಗಾಗಿ ಬದಲಾವಣೆಗಳು ಉಂಟಾದಲ್ಲಿ ಮನಸ್ಸನ್ನು ತಕ್ಷಣ ಬದಲಾವಣೆ ಮಾಡುವುದು ಕಷ್ಟ ಸಾಧ್ಯ. ಆದರೆ ನಿಧಾನವಾಗಿ ನಾವು ಅದಕ್ಕೆ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದಾಗ,  ಒಪ್ಪಿಕೊಳ್ಳುತ್ತೇವೆ. ಹಾಗಾದರೆ ಮೊದಲು ಕಷ್ಟವೆನಿಸಿದ ಅದೇ ಪರಿಸ್ಥಿತಿ ಮತ್ತೆ ಸುಲಭವಾಗಲು ಹೇಗೆ ಸಾಧ್ಯ.? ಇಲ್ಲಿ ಇರುವುದು ವಿಚಾರ ಇಷ್ಟೆ. ಯಾವಾಗ ನಾವು ಪರಿಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕಾದ ಸಂದರ್ಭ ಬರುತ್ತದೋ ಆವಾಗ ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುತ್ತೇವೆ ಅಂದರೆ  ಬದಲಾವಣೆಯನ್ನು ಮನಸ್ಸು ಸ್ವೀಕರಿಸಲು ಒಪ್ಪುತ್ತದೆ. ಇಲ್ಲಿ ಕಷ್ಟದ ಪರಿಸ್ಥಿತಿ ನಮ್ಮ ಹೊಂದಾಣಿಕೆ ಇದ್ದಾಗ ಸುಲಭವಾಗಲು ಸಾಧ್ಯವಿದೆ. ಆದರೆ ಬುದ್ಧಿವಂತ ಜೀವಿಯಾದ ಮನುಷ್ಯರಲ್ಲಿ ತನ್ನ ಮನಸ್ಥಿತಿಯನ್ನು ಬದಲಾಯಿಸುವಂತಹವರು ಇರುವುದು ಬಹಳ ಅಪರೂಪ. ಹೀಗಾಗಿಯೇ ಪರಸ್ಪರರಲ್ಲಿ ಸಿಟ್ಟು, ಕೋಪ,ದ್ವೇಷ, ರೋಷ , ಅಸೂಯೆ  ಮೂಡಿ ಬರುವುದು. ಮನುಷ್ಯ ಸಂಘಜೀವಿಯಾದ ಕಾರಣ ಸಾಮಾಜಿಕ ಜೀವನದಲ್ಲಿ, ಸಮಷ್ಟಿಯ ಒಳಿತಿನ ದೃಷ್ಟಿಯಿಂದ ನೋಡಬೇಕಾಗುತ್ತದೆ. ಸಮಾಜದ ಕೆಟ್ಟತನಕ್ಕೆ ಅಥವಾ ದುರ್ನನಡತೆಗೆ ತನ್ನ ಮನಸ್ಥಿತಿ ಕಾರಣವಾಗಬಾರದು ಎಂಬ ಎಚ್ಚರಿಕೆ ಮನುಷ್ಯನಲ್ಲಿ ಇರಬೇಕಾಗುತ್ತದೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಕೆಟ್ಟ ಪರಿಸ್ಥಿತಿಗೂ ಮನುಷ್ಯನ ಮನಸ್ಥಿತಿಯೇ ಕಾರಣ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಮನುಷ್ಯ ತನ್ನ ಮನೆಯಲ್ಲಿ, ಸಮುದಾಯದಲ್ಲಿ, ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕಾದರೆ ಸಾಮಾಜಿಕ ಮನಸ್ಥಿತಿಯನ್ನು ಅರಿತು, ಅದರಂತೆ ನನ್ನ ಮನಸ್ಸನ್ನು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಿ ಸಮಾಜ ಸುಸ್ಥಿತಿಯಲ್ಲಿ ನಡೆಯಬಹುದು. ‘ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗತ್ತದೆ’ ಎಂಬುದಕ್ಕೆ ಒಂದು ಸರಳ ಉದಾಹರಣೆಯನ್ನು ಕೊಡುವುದಾದರೆ ಒಂದು ಕುಟುಂಬದಲ್ಲಿನ ಹೆಣ್ಣು ಮಗಳು ಅಂತರ್ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಬೇಕೆನ್ನುವಾಗ, ಅವಳ ಮನೆಯವರ ಮನಸ್ಥಿತಿ ಅದಕ್ಕೆ ಒಪ್ಪದೇ ಇರಬಹುದು. ಏಕೆಂದರೆ ಸಮಾಜ ತಮ್ಮನ್ನು ಬೇರೆ ದೃಷ್ಟಿಕೋನದಿಂದ ನೋಡಬಹುದು, ನಮ್ಮನ್ನು ಹೊರಗೆ ಇಡಬಹುದು, ಬೇರೆ ಜಾತಿಯ ಸಂಸ್ಕೃತಿ ,ಸಂಸ್ಕಾರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು ಎಂಬಿತ್ಯಾದಿ ಕಾರಣಗಳಿಂದ ಅಂತರ್ಜಾತಿಯ ವಿವಾಹಕ್ಕೆ ಹೆತ್ತವರ ಮನಸ್ಸು ಒಪ್ಪದಿರಬಹುದು. ಅದೇ ರೀತಿಯಲ್ಲಿ ಪ್ರೀತಿಸಿದ ಹೆಣ್ಣು- ಗಂಡು ಒಬ್ಬರನ್ನೊಬ್ಬರು ಬಿಟ್ಟು ದೂರವಾಗಲು ಅವರ ಮನಸ್ಸೂ ಒಪ್ಪದಿರಬಹುದು. ಈ ಸಂದಿಗ್ಧ ಸನ್ನಿವೇಶದಲ್ಲಿ ಕುಟುಂಬದ ಪರಿಸ್ಥಿತಿ ಬೀಗಡಾಯಿಸುತ್ತದೆ. ಆಗ ಒಂದೇ ಪ್ರೀತಿಸಿದವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ವಿಷಯವನ್ನು ಬಗೆಹರಿಸಬಹುದು ಅಥವಾ ತಂದೆ ತಾಯಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಅಂತರ್ಜಾತೀಯ ವಿವಾಹ ಮಾಡಿಕೊಡಲು ಒಪ್ಪಿಗೆ ನೀಡಬಹುದು. ಆಗ ಅಲ್ಲಿ ಬಿಗಡಾಯಿಸಿದಂತಹ ಪರಿಸ್ಥಿತಿ, ಶಾಂತವಾಗಿ ಎಲ್ಲವೂ ಸುಖಾಂತ್ಯವಾಗಬಹುದು. ಇದು ಒಂದು ಉದಾಹರಣೆ. ಹೀಗೆ ಮನಸ್ಥಿತಿ ಬದಲಾದರೆ ಪರಿಸ್ಥಿತಿಯು ಬದಲಾಗಬಹುದು ಎಂಬುದಕ್ಕೆ ನಮ್ಮ ದಿನನಿತ್ಯದ ಜೀವನದಿಂದ ಹಲವಾರು ರೀತಿಯ ಘಟನೆಗಳನ್ನು ಇಲ್ಲಿ ಉಲ್ಲೇಖ ಮಾಡಬಹುದು. ಆದರೆ ನಮ್ಮ ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಜನರ ಸ್ಥಿರ ಮನಸ್ಥಿತಿಯಿಂದಾಗಿ ಉಂಟಾಗುವ ಕೆಡುಕುಗಳ ಬಗ್ಗೆ  ಆಲೋಚನೆಯನ್ನೇ ಮಾಡುವುದಿಲ್ಲ. ಎಲ್ಲರಿಗೂ ಅವರವರ ,*ಈಗೊ* ಮುಖ್ಯವಾಗುವುದನ್ನು ನಾವು ಗಮನಿಸಿದ್ದೇವೆ.ಆದರೆ ಮನುಷ್ಯ ತನ್ನ ಪರಿಸ್ಥಿತಿಯನ್ನು ಬದಲಾಯಿಸಲು, ತಾನು ಪರಿಸ್ಥಿತಿಯನ್ನು ದೂಷಿಸದೆ, ತನ್ನ ಮನಸ್ಸನ್ನು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ಅನಿವಾರ್ಯ .ಸಂಕಷ್ಟ ಕಾಲದಲ್ಲಿ ಬದಲಾವಣೆಗಾಗಿ ತಮ್ಮಮನಸ್ಥಿತಿಯನ್ನೇ  ಬದಲಾಯಿಸಿ ಪರಿಸ್ಥಿತಿಯನ್ನು ಬದಲಾಯಿಸಲು ಅಥವಾ ಎದುರಿಸಲು ಸಾಧ್ಯವಿದೆ. ಜೀವನದ ಯಾವುದೇ ಪರಿಸ್ಥಿತಿಯನ್ನು ಜಯಿಸಲು ನಾವು ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ. ಇಲ್ಲದಿದ್ದರೆ, ಸನ್ನಿವೇಶಗಳನ್ನು ದೂಷಿಸುವುದರಿಂದ, ಅಥವಾ ಅವು ಬದಲಾಗದ ಕಾರಣ ಹತಾಶರಾಗುವುದರಿಂದ, ಜೀವನವನ್ನು ವ್ಯರ್ಥಗೊಳಿಸುತ್ತೇವೆ. ಹಾಗಂತ ಎಲ್ಲಾ ರೀತಿಯ ಪರಿಸ್ಥಿತಿಯ ಬದಲಾವಣೆಗೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕೆಂದರ್ಥವಲ್ಲ. ಇನ್ನೊಬ್ಬರಿಗೆ ಒಳಿತಾಗುವುದಾದರೆ, ನಮ್ಮ ಮನಸ್ಥಿತಿಯನ್ನು ಬದಲಾಯಿಸುವುದರಿಂದ ಸಾಮೂಹಿಕ ಅಥವಾ ಸಮಾಜಕ್ಕೆ ಹಿತವಾಗುವುದಾದರೆ ನಾವೇಕೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬಾರದು? ಕೆಲವೊಮ್ಮೆ ಕೆಲವೊಂದು ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವೇ ಇಲ್ಲದಂತಹ ಸಂದರ್ಭಗಳು ಬರಬಹುದು. ಅಂದರೆ ಪರಿಸ್ಥಿತಿ ನಮ್ಮ ಮನಸ್ಥಿತಿಯನ್ನು ಬದಲಾಯಿಸಿ ನಾವು ಅದಕ್ಕೆ ಒಗ್ಗಿಕೊಂಡರೂ ಒಳಿತಾಗುವ ಬದಲು ಕೆಡುಕೇ ಉಂಟಾಗುವುದಾದರೆ, ನಮ್ಮ ಮನಸ್ಥಿತಿಯನ್ನು ನಾವು ಏಕೆ ಬದಲಾಯಿಸಬೇಕು. ಅಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗಾದರೂ ಮಾಡಿ ಸಮಾಜದ ಹಿತಕ್ಕಾಗಿ ಬದಲಾಯಿಸಲು ನೋಡಬೇಕು. ಇಲ್ಲದಿದ್ದಲ್ಲಿ ಅಂತಹ ಪರಿಸ್ಥಿತಿಯಲ್ಲಿ ನಾವು ಸಿಲುಕದೆ ಅದರಿಂದ ಹೊರಗೆ ಬರಬೇಕು. ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ- ಎಂಬುದಕ್ಕೆ ಈಗ ನಾನು ನೀಡುವ ಅರ್ಥ ನಿಮಗಾಗಿರಬಹುದು ಎಂದು ಭಾವಿಸುತ್ತೇನೆ. ಇಲ್ಲಿ ನಮ್ಮ ಮನಸ್ಥಿತಿ ಬದಲಾಯಿಸುವುದೆಂದರೆ, ನಮ್ಮ ‘ಅಹಂ’ ಅಥವಾ ‘ಇಗೊ’ ವನ್ನು ಇಟ್ಟುಕೊಳ್ಳದೆ, ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಸಮಾಜದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗುವುದು ಎಂದರ್ಥ. ಎಲ್ಲಿ ಸಮಾಜದಲ್ಲಿ ನಡೆಯುವ ಕೆಡುಕಿಗೆ ಅಥವಾ ಕೆಟ್ಟ ಪರಿಸ್ಥಿತಿಗೆ ನಮ್ಮ ಮನಸ್ಸು ಕಾರಣವಾಗುತ್ತದೊ ಅಂತಲ್ಲಿ ನಾವು ನಮ್ಮ ಮನಸ್ಸನ್ನು ಬದಲಾಯಿಸಿದರೆ, ಪರಿಸ್ಥಿತಿ ಸುಧಾರುತ್ತದೆ. ಹಾಗಾಗಿ ಕಷ್ಟದ ಪರಿಸ್ಥಿತಿಗೆ  ನಮ್ಮ ಮನಸ್ಸು ಅಥವಾ ಮನೋಭಾವ ಕಾರಣವಾಗುತ್ತದೆ ಎಂದಾದರೆ ನಾವು ಬದಲಾಗಬೇಕು.ಅದು ಅನಿವಾರ್ಯ ಕೂಡ.ನಮ್ಮ ಮನೋಭಾವವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ,ನಾವು ಯಾವುದೇ ಪರಿಸ್ಥಿತಿಯನ್ನು ನಗುಮುಖದಿಂದ ಎದುರಿಸಬಹುದು.  ಮನುಷ್ಯನಾದವನು ತನ್ನ ಬದುಕಿನಲ್ಲಿ ಎದುರಾದ ಸಂಕಷ್ಟದ ಪರಿಸ್ಥಿತಿಯನ್ನರಿತು, ಅದರಿಂದ ಸಮಸ್ಯೆ ಬಗೆಹರಿದು, ಒಳಿತಾಗುವುದಾದರೆ ತನ್ನ  ಮನಸ್ಥಿತಿ ಬದಲಾಯಿಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯಬೇಕು. ಆಗಲೇ ಅತ್ಯುತ್ತಮವಾದುದನ್ನು ಸಾಧಿಸಬಹುದು. ಡಾ.ಸುಮತಿ ಪಿ

“ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಡಾ.ಸುಮತಿ ಪಿ. ಅವರ ವಿಶೇಷ ಲೇಖನ Read Post »

ಇತರೆ, ಜೀವನ

“ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಜಯಶ್ರೀ.ಜೆ. ಅಬ್ಬಿಗೇರಿ                                     

ಬದುಕಿನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ                                      “ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಅಮೆರಿಕದ ಪ್ರಸಿದ್ಧ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್ ಅವರ ಜೀವನ  ಸೋಲುಗಳ ಸರಮಾಲೆಯಿಂದ ಕೂಡಿತ್ತು ವ್ಯಾಪಾರದಲ್ಲಿ ನಷ್ಟ, ಪ್ರಿಯತಮೆಯ ಸಾವು, ಹನ್ನೆರಡಕ್ಕೂ ಹೆಚ್ಚು ಬಾರಿ ಚುನಾವಣೆಯಲ್ಲಿ ಸೋಲು ಕಂಡರು. ಆದರೂ,’ನನ್ನ ಆತ್ಮವಿಶ್ವಾಸ ನನ್ನನ್ನು ಕೈಬಿಡುವುದಿಲ್ಲ.’ ಎಂದು ನಂಬಿದ್ದರು. ಅವರು ಅಂತಿಮವಾಗಿ ತಮ್ಮ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾದರು. ಸ್ವ ನಂಬಿಕೆ , , ,?ಜೀವನದ ಅತೀ ದೊಡ್ಡ ಶಕ್ತಿ ಯಾವುದು ಎಂದು ಯೋಚಿಸಿದಾಗ ಸ್ವ ನಂಬಿಕೆ ಎನ್ನುವುದು ಉತ್ತರವಾಗಿ ಸಿಗುತ್ತದೆ. ಸ್ವ ನಂಬಿಕೆ ಎಂದರೆ ತನ್ನನ್ನು ತಾನು ನಂಬುವುದು. ಸ್ಪರ್ಧಾತ್ಮಕ ಪ್ರಪಂಚದಲ್ಲಿ  ಬದುಕುತ್ತಿರುವ ನಾವು ಲಿಂಕನ್‌ರoತಹ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ಸ್ವ ನಂಬಿಕೆ ಇಲ್ಲವೆಂದರೆ ಯಾವ ಸ್ಥಾನವೂ ಇಲ್ಲ. ಯಾರಲ್ಲಿ ಆತ್ಮವಿಶ್ವಾಸ ಇಲ್ಲವೋ ಅವರಲ್ಲಿ ಭಯ ಇರುತ್ತದೆ. ಮತ್ತು  ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರುವುದಿಲ್ಲ. ಇಲ್ಲದಿದ್ದರೆ . . .? ವ್ಯಕ್ತಿ ಎಷ್ಟೇ ಜಾಣನಾಗಿದ್ದರೂ ಪ್ರತಿಭಾವಂತನಾಗಿದ್ದರೂ ಅವನಲ್ಲಿ ಸ್ವ ನಂಬಿಕೆ ಇಲ್ಲವೆಂದರೆ ಅವನು ಸಾಧನೆ ಮಾಡುವುದು ಅಸಾಧ್ಯ. ಸಾಧನೆಗೆ ಬೇಕಾದುದು ಎಲ್ಲವೂ ಇದ್ದು ಸ್ವ ನಂಬಿಕೆ ಇಲ್ಲದಿದ್ದರೆ ಸರಿಯಾದ ಇಂಜಿನ್ ಸ್ಟೇರಿಂಗ್ ಗಾಲಿಗಳು ಡ್ರೈವರ್ಎಲ್ಲವೂ ಇದ್ದು ಇಂಧನವಿಲ್ಲದ ಕಾರ್ ಇದ್ದಂತೆ. ಅದು ಮುಂದಕ್ಕೆ ಚಲಿಸಲಾರದು.‘ಜಗತ್ತಿನ ಇತಿಹಾಸವು ತನ್ನ ಮೇಲೆ ನಂಬಿಕೆ ಇಟ್ಟಿದ್ದ ಕೆಲವೇ ಕೆಲವು ವ್ಯಕ್ತಿಗಳ ಇತಿಹಾಸವಾಗಿದೆ. ಆ ನಂಬಿಕೆಯು ಒಳಗಿರುವ ದೈವತ್ವವನ್ನು ಜಾಗೃತಗೊಳಿಸುತ್ತದೆ. ನೀವು ಯಾವುದನ್ನಾದರೂ ಸಾಧಿಸಬಹುದು.’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಆತ್ಮವಿಶ್ವಾಸವೆಂದರೆ , , ,? ಆತ್ಮವಿಶ್ವಾಸವೆಂದರೆ ನಮ್ಮ ಮೇಲೆ ನಮಗಿರುವ ವಿಶ್ವಾಸ. ನಮ್ಮ ಸಾಮರ್ಥ್ಯ ಗುಣಗಳು ಮತ್ತು ನಿರ್ಧಾರಗಳ ಮೇಲೆ ನಮಗಿರುವ ಅಚಲವಾದ ನಂಬಿಕೆ. ಯಾವುದೇ ಕ್ಷೇತ್ರದಲ್ಲಿ ಜಯಗಳಿಸಲು ಇದೇ ಅತಿ ಮುಖ್ಯವಾದ ಅಸ್ತ್ರವಾಗಿದೆ. ಅದು ನಮ್ಮ ಆಂತರಿಕ ಶಕ್ತಿ. ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಯಶಸ್ವಿಯಾಗಲು ಅತಿ ಮುಖ್ಯ. ಒಬ್ಬ ವ್ಯಕ್ತಿಯು ಎಷ್ಟೇ ಬುದ್ಧಿವಂತನಾಗಿದ್ದರೂ ಆತ್ಮವಿಶ್ವಾಸದ ಕೊರತೆಯಿದ್ದರೆ ಗುರಿ ತಲುಪುವುದು ಕಷ್ಟವಾಗುತ್ತದೆ. ಕಾರಣ ಅರಿಯಿರಿ ಆತ್ಮವಿಶ್ವಾಸ ಕಡಿಮೆ ಆಗಲು ಕಾರಣ ಹಲವಾರು ಅದರಲ್ಲಿ ಮುಖ್ಯವೆಂದರೆ; ಮನೆಯಲ್ಲಿ ಹಿರಿಯರು ಶಾಲೆಯಲ್ಲಿ ಶಿಕ್ಷಕರು ನಿನಗೇನೂ ಬರುವುದಿಲ್ಲ. ನಿನ್ನ ಕೈಯಲ್ಲಿ ಏನೂ ಆಗುವುದಿಲ್ಲ. ನೀನು ಮೂರ್ಖ. ನೀನು ದಡ್ಡ ಎಂದು ಹೇಳಿದ್ದನ್ನು ಸಬ್ ಕಾನ್ಶಿಯಸ್ ಮೈಂಡ್ ಅಚ್ಚೊತ್ತಿಕೊಂಡಿರುತ್ತದೆ. ಅದೇ ಸರಿಯೆಂದು ನಂಬಿ ಅದೇ ನಂಬಿಕೆಯಿoದ ದೊಡ್ಡವರಾಗಿರುವುದು. ಮದ್ದು ಅರೆಯಿರಿ ‘ನಿಮ್ಮಲ್ಲಿ ಅದನ್ನು ಮಾಡುವ ಸಾಮರ್ಥ್ಯವಿದೆ ಎಂಬ ನಂಬಿಕೆ ನಿಮಗಿದ್ದರೆ, ಆರಂಭದಲ್ಲಿ ಆ ಸಾಮರ್ಥ್ಯ ಇಲ್ಲದಿದ್ದರೂ ಸಹ, ಕೆಲಸದ ಕೊನೆಯಲ್ಲಿ ಅದನ್ನು ಮಡುವ ಶಕ್ತಿಯನ್ನು ನೀವು ಖಂಡಿತವಾಗಿಯೂ ಪಡೆದುಕೊಳ್ಳುತ್ತೀರಿ.’ ಎಂದು ಹೇಳಿದ್ದಾರೆ ಗಾಂಧೀಜಿ. ಅವರ ನುಡಿಮುತ್ತಿನಂತೆ ಆತ್ಮವಿಶ್ವಾಸದ ಕೊರತೆಗೆ ಮದ್ದು ಅರೆಯಬೇಕು. ಇದುವರೆಗೂ ನಾನು ತಿಳಿದಿದ್ದು ತಪ್ಪು. ಇತರರ ತರಹ ನನ್ನಲ್ಲಿ ಅರ್ಹತೆಯಿದೆ. ನಾನು ಏನು ಬೇಕಾದರೂ ಮಾಡಬಹುದು ನನಗನಿಸಿದ್ದನ್ನು ಸಾಧಿಸಬಹುದು ಅನ್ನೋ ಮೈಂಡ್ ಸೆಟ್ ಬೆಳೆಸಿಕೊಳ್ಳಬೇಕು. ಚಿಕ್ಕ ಗುರಿ ‘ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಎಂಬುದು ‘ಅಪಜಯ’ ಎಂಬ ಕಾಯಿಲೆಯನ್ನು ಕೊಲ್ಲಲು ಇರುವ ಅತ್ಯತ್ತಮ ಔಷಧಿಯಾಗಿದೆ. ಇದು ನಿಮ್ಮನ್ನು ಒಬ್ಬ ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ.’ ಎಂಬ ಅಬ್ದುಲ್ ಕಲಾಂಜಿ ಅವರ ಮಾತು ಶ್ರಮದ ಕುರಿತಾಗಿಯೂ ಹೇಳುತ್ತದೆ. ಆದ್ದರಿಂದ ದಿನನಿತ್ಯ ಚಿಕ್ಕ ಚಿಕ್ಕ ಗುರಿಗಳಿರುವ ಒಂದು ಪಟ್ಟಿ ಮಾಡಿ. ಅದರಲ್ಲಿ  ಐದಾರು ಗುರಿಗಳಿದ್ದರೂ ಸಾಕು.  ಹೆಚ್ಚೆಚ್ಚು  ಗುರಿಗಳನ್ನು ಬರೆದು ಅದನ್ನು ಪೂರ್ಣಗೊಳಿಸಲು ಆಗದಿದ್ದರೆ ನಿಮಗೆ ಬೇಜಾರು ಆಗುತ್ತದೆ. ಮತ್ತು ಆತ್ಮವಿಶ್ವಾಸವು ಮತ್ತಷ್ಟು ಕೆಳಕ್ಕೆ ಜಾರುತ್ತದೆ. ಆದ್ದರಿಂದ ಚಿಕ್ಕ ಗುರಿಗಳನ್ನು ದಿನವೂ ಸಾಧಿಸಲು ಯತ್ನಿಸಿ. ತಯಾರಿ ‘ನೀವು ಅದನ್ನು ಮಾಡಬಲ್ಲಿರಿ ಎಂದು ನಂಬಿದರೂ ಅಥವಾ ಮಾಡಲು ಸಾಧ್ಯವಿಲ್ಲ ಎಂದು ನಂಬಿದರೂ ಎರಡೂ ಸಂದರ್ಭದಲ್ಲೂ ನೀವು ಸರಿಯಾಗಿಯೇ ಇರುತ್ತೀರಿ.’ ಎಂದಿದ್ದಾರೆ ಹೆನ್ರಿ ಫೋರ್ಡ್ ಯಾವುದೇ ಕೆಲಸ ನಿನ್ನ ಯೋಚನೆ ಮತ್ತು ನಿನ್ನ ನಂಬಿಕೆಯ ಮೇಲೆ ಅವಲಂಬಿತ ಎನ್ನುವುದು ಅವರ ಮಾತಿನ ಅರ್ಥ. ಗುರಿಗೆ ಗುರಿ ಇಡುವ ಮೊದಲು ಅದರ ಬಗ್ಗೆ ಸರಿಯಾದ ತಯಾರಿ ನಡೆಸಿ. ಸಂಕಷ್ಟದ ಸಮಯದಲ್ಲಿ ಎದೆಗುಂದದೆ ಮುನ್ನಡೆಯಲು ಇದು ಸಹಕಾರಿ. ಸ್ವ ನಂಬಿಕೆ ಇದ್ದಾಗ ಮಾತ್ರ ನಾವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.ಸೋತಾಗ ಕುಗ್ಗದೆ, ಮಗದೊಮ್ಮೆ ಪ್ರಯತ್ನಿಸುವ ಧೈರ್ಯವನ್ನು ಇದು ತುಂಬುತ್ತದೆ. ನಕಾರಾತ್ಮಕತೆ ಬಿಡಿ ‘ಲೈಫ್ ಹ್ಯಾಸ್ ಮೆನಿ ಪ್ರಾಬ್ಲಮ್ಸ್ ಬಟ್ ನೋ ಪ್ರಾಬ್ಲಮ್ ಲಾಸ್ಟ್ ಫಾರೆವರ್ ಸೋ ಫೇಸ್ ಚಾಲೆಂಜಿಸ್ ವಿಥ್ ಕಾನ್ಫಿಡೆನ್ಸ್. ’ನನ್ನಿಂದ ಸಾಧ್ಯವಿಲ್ಲ ಎಂಬ ಯೋಚನೆಯನ್ನು ಮೊದಲು ಕೈಬಿಡಿ. ಅದರ ಬದಲು ನಾನು ಪ್ರಯತ್ನಿಸುತ್ತೇನೆ ಎಂದು ಆಲೋಚಿಸಿ. ಸೋಲನ್ನು ಅನುಭವವಾಗಿ ಸ್ವೀಕರಿಸಿ. ಮುನ್ನಡೆಯಬೇಕು. ಸೋಲನ್ನು ವೈಫಲ್ಯವೆಂದು ಭಾವಿಸದೆ, ಕಲಿಕೆಯ ಒಂದು ಭಾಗವೆಂದು ಸ್ವೀಕರಿಸಿ ಆಗ ಸೋಲಿನ ಭಯ ಹೋಗಲಾಡುತ್ತದೆ. ಸೋಲಿನ ಭಯ ದೂರವಾಗಿ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತದೆ. ನಿಮ್ಮನ್ನು ನೀವು ಪ್ರೀತಿಸಿ. ಇತರರೊಂದಿಗೆ ಹೋಲಿಕೆ ಮಾಡಕೊಳ್ಳುವುದನ್ನು ನಿಲ್ಲಿಸಿ ನಿಮ್ಮ ವ್ಯಕ್ತಿತ್ವವನ್ನು ಗೌರವಿಸಿ. ಗುರುತಿಸಿ ನಿಮ್ಮ ಸಣ್ಣ ಪುಟ್ಟ ಯಶಸ್ಸನ್ನು ಗುರುತಿಸಿ. ಅವುಗಳನ್ನು ಸಂಭ್ರಮಿಸಿ. ಅದು ದೊಡ್ಡ ಸಾಧನೆಗೆ ಸ್ಪೂರ್ತಿಯಾಗುತ್ತದೆ. ನಿರಂತರ ಕಲಿಕೆಯಿರಲಿ ಅದು ಜ್ಞಾನ ಹೆಚ್ಚಿಸುತ್ತದೆ. ಜ್ಞಾನ ಹೆಚ್ಚಾದಂತೆ ಸಹಜವಾಗಿಯೇ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಗುರಿ ಒಂದೇ ಆಗಿರಲಿ ಪ್ರಯತ್ನ ವಿಭಿನ್ನವಾಗಿರಲಿ. ನಿಮ್ಮ ಮೇಲೆ ನಿವiಗೆ ನಂಬಿಕೆಯಿರಲಿ ಇಡೀ ಜಗತ್ತೇ ನಿಮ್ಮ ಕಾಲಡಿಯಲ್ಲಿರುತ್ತದೆ. ಪ್ರಶಂಸೆ ಮತ್ತು ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಒಂದು ಹೂವಿನ ಗಿಡ ಸರಿಯಾಗಿ ಬೆಳೆಯಲು ಮಳೆ ಮತ್ತು ಬಿಸಿಲು ಎರಡೂ ಬೇಕು. ಅಷ್ಟಕ್ಕೂ ಪ್ರಶಂಸೆ ಮತ್ತು ಟೀಕೆಗಳು ವಾಸ್ತವವಲ್ಲ. ಅವು ಜನರ ಅಭಿಪ್ರಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಿಳಿದುಕೊಳ್ಳಿ ಈ ಜಗತ್ತಿನಲ್ಲಿ ಗೌರವದಿಂದ ಬದುಕಲು ಶ್ರೇಷ್ಠವಾದುದನ್ನು ಸಾಧಿಸಲು ನಿಮ್ಮನ್ನು ನೀವು ನಂಬಬೇಕು. ಇತರರು ನಿಮ್ಮನ್ನು ನಿರೀಕ್ಷಿಸುವ ರೀತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವುದಲ್ಲ. ನಿಮ್ಮ ಆತ್ಮವಿಶ್ವಾಸದ ಮಾತುಗಳು ಆತ್ಮವಿಶ್ವಾಸಭರಿತ ನಿಮ್ಮ ಕ್ರಿಯೆಗಳು. ಸಾಕ್ರೆಟಿಸ್ ಆಗಾಗ್ಗೆ ಜನರಿಗೆ ‘ಪರೀಕ್ಷಿಸದ ಜೀವನವು ಬದುಕಲು ಯೋಗ್ಯವಲ್ಲ.’ ಎಂದು ನೆನಪಿಸುತ್ತಿದ್ದರು. ಸ್ವ ನಂಬಿಕೆಗೆ ಮೊದಲು ನಿಮ್ಮನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಒಂದು ಸಲದ ಕೆಲಸವಲ್ಲ; ಇದು ಪ್ರಶ್ನಿಸುವ ಕಲಿಯುವ ಮತ್ತು ಸರಿಪಡಿಸುವ ದೈನಂದಿನ ಅಭ್ಯಾಸವಾಗಿದೆ. ಬದಲಾವಣೆಗೆ ದಾರಿ ಆಲೋಚನೆ ಮತ್ತು ಕ್ರಿಯೆ ಸ್ಥಿರವಾದಾಗ ಮಾತ್ರ ನಂಬಿಕೆ ಹೆಚ್ಚುತ್ತದೆ. ನೋವು ಮತ್ತು ಅನಿಶ್ಚಿತತೆಯನ್ನು ತಪ್ಪಿಸುವ ಮೂಲಕ ವಿಶ್ವಾಸದಿಂದ ವರ್ತಿಸುವಂತೆ ಒತ್ತಾಯಿಸುತ್ತದೆ. ಸತತ ಪ್ರಯತ್ನ ಜ್ಞಾನಾರ್ಜನೆ ಮತ್ತು ಧೈರ್ಯದಿಂದ ಇದನ್ನು ಬೆಳೆಸಿಕೊಳ್ಳಬಹುದು. ಅಂಜಿಕೆಯನ್ನು ಬಿಟ್ಟು ಹೊಸ ಸವಾಲುಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ‘ನಿಮ್ಮನ್ನು ನೀವು ಗೆಲ್ಲುವುದು ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ದೊಡ್ಡದು.’ ಜಗತ್ತು ನಿಮ್ಮನ್ನು ನಂಬುವ ಮೊದಲು ನೀವು ನಿಮ್ಮನ್ನು ನಂಬಬೇಕು.ನೆನಪಿರಲಿ: ‘ನನ್ನಿಂದ ಸಾಧ್ಯ’ ಎಂಬ ಸಣ್ಣ ನಂಬಿಕೆ ದೊಡ್ಡ ಬದಲಾವಣೆಗೆ ದಾರಿಯಾಗುತ್ತದೆ.

“ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಜಯಶ್ರೀ.ಜೆ. ಅಬ್ಬಿಗೇರಿ                                      Read Post »

ಇತರೆ, ಜೀವನ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ.

ಜೀವನಸಂಗಾತಿ ಡಾ. ಸುಮತಿ ಪಿ. “ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” “ಅತಿಯಾಸೆ ಗತಿ ಕೇಡು”ಎಂಬ ಮಾತಿನಂತೆ ಮನುಷ್ಯನಿಗೆ ಅತಿಯಾದ ಆಸೆಗಳಿದ್ದರೆ, ಒಂದು ಆಸೆ ಅಥವಾ ಬಯಕೆಯ ಈಡೇರಿಕೆಯ ನಂತರ ಇನ್ನೊಂದು ಆಸೆ ಗರಿಗೆದರಿ ಎದ್ದು ನಿಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಮನುಷ್ಯನಿಗೆ ಸಂತೃಪ್ತಿ ಎನ್ನುವುದು ಸಿಗದೇ ಇರಬಹುದು. ಅದಕ್ಕೆ ಮನುಷ್ಯರಾದ ನಾವು ಸಂತಸದಿಂದ  ಜೀವನ ನಡೆಸಬೇಕಾದರೆ ಇದ್ದದ್ದರಲ್ಲಿ ತೃಪ್ತಿಯನ್ನು ಅನುಭವಿಸುವ ಗುಣ ನಮ್ಮದಾಗಬೇಕು. ಸಂಪತ್ತು ಎಂದರೆ ಶ್ರೇಷ್ಠವಾದದ್ದು,ಮೌಲ್ಯಯುತವಾದದ್ದು ಎಂದರ್ಥ. ಯಾವುದರಿಂದ ನಮಗೆ ಒಳಿತಾಗುತ್ತದೆಯೋ ಅದುವೇ ಸಂಪತ್ತು ಎನಿಸಿಕೊಳ್ಳುತ್ತದೆ.ಸಂತೃಪ್ತಿ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿನ ಪರಿಸ್ಥಿತಿಯಿಂದ ತೃಪ್ತನಾಗುವ ಸ್ಥಿತಿಯಾಗಿದೆ, ಸಂತೃಪ್ತಿ ಇದ್ದವರು ಜೀವನದಲ್ಲಿ ಆಂತರಿಕ ಶಾಂತಿಯನ್ನು ಹೊಂದಿರುತ್ತಾರೆ .ಆಗ ಅವರಲ್ಲಿ ಸಂತೃಪ್ತಿಯೇ ದೊಡ್ಡ ಸಂಪತ್ತಾಗಿ ವಿಜೃಂಭಿಸುತ್ತದೆ.ಸಂತೃಪ್ತಿ ಎಂದರೆ ಇದ್ದಹಾಗೆ ಜೀವನವನ್ನು ಸಾಗಿಸುವುದು ಎಂಬರ್ಥ ಬಂದಿದೆ. ಆದರೆ ನಿಜಾರ್ಥದಲ್ಲಿ ಸಂತೃಪ್ತಿಯೆಂದರೆ, ಸರಿಯಾದುದರಲ್ಲಿ, ಉದಾತ್ತವಾದುದರಲ್ಲಿ ನಾವು ನೆಲೆಗೊಳ್ಳುವುದಾಗಿದೆ.. ಸಂತೃಪ್ತಿಯು ಬಯಕೆಗಳ ಬಿರುಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮದೇ ಜೀವನವನ್ನು ತೆಗೆದುಕೊಂಡರೆ, ನಾವು ಅನುಭವಿಸುವ ಸಂತೃಪ್ತಿಯೆಂಬುವುದು ನಮ್ಮ ಬದುಕಿನ ಅತ್ಯಂತ ಸಂತೋಷದ ಕ್ಷಣಗಳಾಗಿ , ಮನಸ್ಸು ಶಾಂತಿ ಸಮಾಧಾನದಿಂದ ಇರುತ್ತದೆ. ಕೆಲವರನ್ನು ನಾವು ಸ್ಥಿತಪ್ರಜ್ಞರು ಎನ್ನುತ್ತೇವೆ. ಸ್ಥಿತಪಜ್ಞರು ಶಾಂತವಾಗಿರುತ್ತಾರೆ. ಸಂತೃಪ್ತಿಯನ್ನು ಹೊಂದುವವರಾಗಿರುತ್ತಾರೆ. ಸಾಗರದ ನೀರನ್ನು ಕಲಕಲು ಪ್ರಯತ್ನಿಸಿದರೂ, ಸಾಗರ ತನ್ನದೇ ಲಯದಲ್ಲಿರುತ್ತದೆ. ಹಾಗೆಯೇ ಸ್ಥಿತಪ್ರಜ್ಞೆಯ  ವ್ಯಕ್ತಿಯೂ  ಸಂತೃಪ್ತ  ಮನಸ್ಸಿನಿಂದ ಧನಾತ್ಮಕ ಭಾವನೆ ಹೊಂದಿರುತ್ತಾನೆ. ಪ್ರಾಣಿಗಳಲ್ಲಿ ಮನುಷ್ಯ ಜನ್ಮ ಅತೀ ಶ್ರೇಷ್ಠವಾದದ್ದು.ಮನುಷ್ಯ ಜನ್ಮದಲ್ಲಿ ಬದುಕು ನಡೆಸುವಾಗ ಸುಖ ಕಾಣಬೇಕಾದರೆ ಸಂತೃಪ್ತಿ ಇರಬೇಕು.ಸಂತೃಪ್ತಿ ಎಂಬುದು ಮನುಷ್ಯನ ಜೀವನದಲ್ಲಿ ಮೂಡಬೇಕಾದ ತೃಪ್ತ ಭಾವನೆ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ತನಗೆ ಸಿಕ್ಕಿದಷ್ಟು ಪಡೆದು, ತೃಪ್ತಿಯಿಂದ ಜೀವನ ಸಾಗಿಸುವುದು. ಎಲ್ಲಾ ಜನರು ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಜನರ ಜೀವನ ರೀತಿ ಬೇರೆ ಬೇರೆ ಇರುತ್ತದೆ .ಆದುದರಿಂದ ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೀಳರಿಮೆಯಿಂದ ಶಾಂತಿ ನೆಮ್ಮದಿಯನ್ನು ಕಳೆದುಕೊಂಡರೆ ಬದುಕಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯವಾಗದು. ಮನುಷ್ಯರು ಎಂದ ಮೇಲೆ ಒಬ್ಬರ ತರಹ ಇನ್ನೊಬ್ಬರು ಇರುವುದಿಲ್ಲ. ಕೆಲವರು ಯಾವಾಗಲೂ ಸಂತೋಷವಾಗಿರುತ್ತಾರೆ. ಇನ್ನು ಕೆಲವರು ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತಾರೆ. ಮತ್ತು ಕೆಲವರು ಹಿಂದೆ ನಡೆದ ಯಾವುದೋ ಕಹಿ ಘಟನೆಯನ್ನು ಮೆಲುಕು ಹಾಕುತ್ತಾ ಕೊರಗುತ್ತಿರುತ್ತಾರೆ. ಆದರೆ ಇರುವಷ್ಟು ದಿನ ನೆಮ್ಮದಿಯಾಗಿ ಬದುಕಬೇಕು ಎಂದರೆ  ಬದುಕಿನಲ್ಲೇ ಸಂತೋಷವನ್ನು ಕಾಣಬೇಕು. ಜೀವನದಲ್ಲಿ ಸಂತೋಷಕ್ಕೆ ಸಂತೃಪ್ತಿಯೇ ಮುಖ್ಯ ಎಂದು ನಾವು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯು ಎಷ್ಟೇ ಸಂಪತ್ತನ್ನು ಹೊಂದಿದ್ದರೂ, ಅವನು ತೃಪ್ತನಾಗದ ಹೊರತು, ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ.ಮನುಷ್ಯ ಜೀವನದಲ್ಲಿ ಸಂತೃಪ್ತಿಯನ್ನು ಕಾಣಬೇಕಾದರೆ ತನ್ನ ಆಸೆಗಳಿಗೆ ಕಡಿವಾಳ ಹಾಕಲೇಬೇಕು “ಆಸೆಯೇ ದುಃಖಕ್ಕೆ ಮೂಲ”ವೆಂದು ಗೌತಮ ಬುದ್ಧ ತಿಳಿಸಿದಂತೆ,ಅತಿ ಆಸೆಯಿಂದ ಮಾನವ ಇತರರನ್ನು ನೋಡಿ, ತಾನು ಅವರಂತೆ ಆಗಬೇಕು ಎಂದು ಏನೇನೋ  ಮಾಡಲು ಸಾಗಿ, ಇರುವ ಸುಖ, ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಪ್ರತಿಯೊಬ್ಬನೂ  ಬೇರೆಯವರ ಸುಖವನ್ನೇ ಅಳೆಯುವುದು ಜಾಸ್ತಿ.ಸ್ವಾರ್ಥ ಮನೋಭಾವದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕುವ ಕನಸಲ್ಲಿ, ಇರುವ ಸುಖವನ್ನು ನಿರ್ಲಕ್ಷಿಸಿ, ಅತೃಪ್ತಿಯ ಬಾಳು ಸಾಗಿಸುವುದಕ್ಕಿಂತ ನಮಗಿಂತಲೂ ಕಷ್ಟದಲ್ಲಿರುವವರನ್ನು ಕಂಡು “ನಾವೇ ಅವರಿಗಿಂತ ಸುಖಿಗಳು “ಎನ್ನುವ ಭಾವನೆ ತಾಳುವುದೇ ಸಂತೃಪ್ತಿ.ಸಂತೃಪ್ತಿಯೆ ಬದುಕಿನ ಸಂಪತ್ತು. ಬದುಕಿನಲ್ಲಿ  ಸಂತೃಪ್ತಿ ಇದ್ದಾಗ ,ಸಕಾರಾತ್ಮಕ ದೃಷ್ಟಿಕೋನದಿಂದ ಶಾಂತಿ, ಸಹನೆ ,ನೆಮ್ಮದಿ, ತಾಳ್ಮೆ ಮುಂತಾದಂತಹ ಗುಣಗಳು ಬೆಳೆದು ಬದುಕಿನ ಸಂಪತ್ತಾಗಿ ವಿಜೃಂಭಿಸುತ್ತದೆ ಯಮರಾಜ ಯುಧಿಷ್ಠಿರನಿಗೆ ಅದ್ಭುತವಾದ ಪ್ರಶ್ನೆಗಳನ್ನು ಕೇಳಿದಂತಹ ಸಂದರ್ಭದಲ್ಲಿ ರಾಜನು ಅವುಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾನೆ ಎಂಬುವುದನ್ನು ನಾವು ಓದಿದ್ದೇವೆ.ಅದೇ ಅವನು ಕೇಳಿದ ಪ್ರಶ್ನೆಗಳಲ್ಲೊಂದು“ಶ್ರೇಷ್ಠ ಸಂತೋಷ ಯಾವುದು?”. ಯುಧಿಷ್ಠಿರ  ಅದಕ್ಕೆ ಕೊಟ್ಟ ಶ್ರೇಷ್ಠವಾದ ಉತ್ತರ “ತೃಪ್ತಿಯಿಂದ ಪಡೆದ ಸಂತೋಷವೇ ಶ್ರೇಷ್ಠ ಸಂತೋಷ”. ಆದ್ದರಿಂದ ತೃಪ್ತಿಯು ಯಾವುದೇ ಸಮಯದಲ್ಲಿ ಹೊಂದಬಹುದಾದ ಶ್ರೇಷ್ಠ ಸಂಪತ್ತು. ಒಳ್ಳೆಯ ಗುಣವನ್ನು ಅಭಿವೃದ್ಧಿಪಡಿಸುವ ಮೂಲಕ,ಉತ್ಸಾಹ ಮತ್ತು ಅಜ್ಞಾನದ ಗುಣಗಳನ್ನು ನಿಗ್ರಹಿಸುವ ಮೂಲಕ  ತೃಪ್ತರಾಗಿರುತ್ತೇವೆ.ಸಂತೃಪ್ತ ಜೀವನವು ಯಶಸ್ವಿ ಜೀವನವೆಂದರೆ ತಪ್ಪಾಗಲಾರದು ಜೀವನದ ಯಶಸ್ಸಿನ ಅಂಶವೆಂದರೆ ಸಂತೃಪ್ತಿ ಎಂದು ಹೇಳಬಹುದು. ನಮಗೆ ಜೀವನದಲ್ಲಿ ಸಂತೃಪ್ತಿ ಇಲ್ಲದಿದ್ದರೆ, ನಮಗೆ ಯಾವುದೇ ಗೆಲುವಿನ ಸಂತಸ ಸಿಗಲಾರದು. ನಮ್ಮಲ್ಲಿ ಹಣವಿರಬಹುದು, ಆಸ್ತಿಗಳಿರಬಹುದು,ಆದರೆ ಆಂತರಿಕ ತೃಪ್ತಿ ಇಲ್ಲ ಎಂದಾದಲ್ಲಿ. ಅದು ಸಂತಸದ ಯಶಸ್ವಿ ಜೀವನವಲ್ಲ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ. ಸಮೃದ್ಧಿ, ಸಂಪತ್ತು ಇದ್ದರೂ ಬದುಕಿನಲ್ಲಿ ಸಂತೃಪ್ತಿ ಇಲ್ಲವಾಗಿದೆ. ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಮಗೆ ಸಂತೃಪ್ತಿಯೇ ಬದುಕಿನ ದೊಡ್ಡ ಸಂಪತ್ತು ಎಂಬುದು ಒಪ್ಪಿಕೊಂಡು,ಅದನ್ನು ಪಡೆಯುವುದು ಕಷ್ಟವಾದರೂ  ಇಷ್ಟಪಟ್ಟು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಬೇಕಾಗುತ್ತದೆ.ಸಂತೃಪ್ತಿಯಿಂದಲೇ ನಾವು ಜೀವನದಲ್ಲಿ ಎದುರಿಸಬೇಕಾದ ಅನೇಕ ಸಮಸ್ಯೆಗಳಿಗೆ ಮುಕ್ತಿಯನ್ನು ಹಾಡಬಹುದು, ಸಂತೃಪ್ತಿ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ಆದುದರಿಂದ ಸಂತೃಪ್ತಿಯೇ ದೊಡ್ಡ ಸಂಪತ್ತು. ಸಂತೃಪ್ತಿ ಅನ್ನೋದು ಬದುಕಿನಲ್ಲಿ ಇರಬೇಕಾದ ಮೂಲಭೂತವಾದ ಅಂಶವಾಗಿದೆ. ಸಂತೃಪ್ತಿಯೇ ಯಶಸ್ವಿ ಬದುಕಿನ ಮೂಲ ಆಧಾರಸ್ತಂಭವೆಂದೇ ಹೇಳಬಹುದು. ಈ ಭೂಮಿಯ ಮೇಲಿನ ಬದುಕೆಂಬ ನಾಲ್ಕು ದಿನದ ಬಾಳು ಅದು ಗೋಳಾಗದೆ ಇರಬೇಕಾದರೆ ಬದುಕಿನಲ್ಲಿ ಸಂತೃಪ್ತಿಯನ್ನು ಕಾಣುವಂತಹ ಮನಸ್ಸು ನಮ್ಮದಾಗಬೇಕು. ಸಂತೃಪ್ತಿಯನ್ನೇ ನಮ್ಮ ಬದುಕಿನ ದೊಡ್ಡ ಸಂಪತ್ತನ್ನಾಗಿಸಬೇಕು. ಬದುಕಿನ ದಿನಗಳನ್ನು ಚಿಂತೆ, ದುಃಖ, ನಿರಾಸೆಯಿಂದ ಅತೃಪ್ತರಾಗಿ ಕಳೆಯದೆ ಶಾಂತಿ ಸಮಾಧಾನದಿಂದತೃಪ್ತ ಜೀವನ ನಡೆಸುವುದು ನಮ್ಮೆಲ್ಲರ ಕೈಯಲ್ಲಿದೆ ಅಲ್ಲವೇ? ಡಾ.ಸುಮತಿ ಪಿ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ. Read Post »

ಇತರೆ, ಜೀವನ

“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ “ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್ ಮಕ್ಕಳು…..ತಾಯಿಯ ಪ್ರತಿಬಿಂಬ  ಬದುಕಿನಲ್ಲಿ ಈ ವಿಷಯವನ್ನು ಎಂದೂ ಮರೆಯಬಾರದು. ಯಾವುದನ್ನು ನೀವು ನಿಮ್ಮ ಸ್ವಂತ ತಾಯಿಗೆ ಬದುಕಿನಲ್ಲಿ ಕೊಡಲು ಸಾಧ್ಯವಿಲ್ಲವೋ ಅದನ್ನು ನೀವು ಕೂಡ ಪಡೆಯಲು ಸಾಧ್ಯವಿಲ್ಲ. ನಿಮ್ಮ ತಾಯಿಯೊಂದಿಗೆ ನೀವು ವರ್ತಿಸುವ ರೀತಿಯಲ್ಲಿ ಬದುಕು ನಿಮ್ಮೊಂದಿಗೆ ವರ್ತಿಸುತ್ತದೆ. ನಿಮ್ಮನ್ನು ಪ್ರೀತಿಸಿದ ಮೊದಲ ಹೃದಯ ನಿಮ್ಮ ತಾಯಿಯದಾಗಿರುತ್ತದೆ. ತಾಯಿಯ ಪ್ರೀತಿ ಶರತ್ತುಗಳನ್ನು ಹೊಂದಿರುವುದಿಲ್ಲ ಆದ್ದರಿಂದ ಎಂದಿಗೂ ನಿಮ್ಮ ತಾಯಿಯನ್ನು ಎಂದೂ ನಿರ್ಣಯಾತ್ಮಕವಾಗಿ ನೋಡಬೇಡಿ.ನಿಮ್ಮ ತಾಯಿ ಬದುಕಿನ ಎಂತೆಂತಹ ಯುದ್ಧಗಳಲ್ಲಿ ಹೋರಾಡಿರುವಳು ಎಂಬುದರ ಅರಿವು ನಿಮಗಿಲ್ಲ. ಆಕೆ ಮೌನವಾಗಿ ಸಹಿಸಿದ ನೋವುಗಳ ಕುರಿತು ನಿಮಗೆ ಗೊತ್ತಿಲ್ಲ. ತನ್ನ ಗಂಟಲುಬ್ಬಿಸುವ ನೋವನ್ನು ನುಂಗಿ ಕಣ್ಣೀರನ್ನು ಅಲ್ಲಿಯೇ ಇಂಗಿಸಿ ಕಿರುನಗೆ ನಕ್ಕ ಆಕೆಯ ನಗುವಿನ ಹಿಂದಿನ ಆಳವಾದ ಸತ್ಯದ ಅರಿವು ನಿಮಗಿಲ್ಲ.ಆರದ ಅದೆಷ್ಟೋ ಗಾಯಗಳು ಆಕೆಯ ಮನದಲ್ಲಿ ವಾಸವಾಗಿವೆ ಎಂಬುದರ ಅರಿವು ನಿಮಗೆ ಇಲ್ಲ.ಆಕೆಯ ಯೌವನವೆಲ್ಲ ತನ್ನ ಪತಿಯ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಾ ಸಾಗಿರುತ್ತದೆ.ಮಕ್ಕಳ ಭವಿಷ್ಯವನ್ನು ರೂಪಿಸಲು ಅತ್ಯಗತ್ಯವಾದ ಆರೋಗ್ಯ, ಸಂಸ್ಕಾರ, ಶಿಕ್ಷಣ, ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತಾ ತನಗೂ ಕೂಡ ತನ್ನದೇ ಆದ ಬದುಕಿದೆ ಎಂಬುದನ್ನು ಆಕೆ ಮರೆತುಬಿಟ್ಟಿರುತ್ತಾಳೆ.ಯೌವನದ ದಿನಗಳನ್ನು ಆಕೆ ಭಯ, ನಿರಾಶೆ ಮತ್ತು ಆರ್ಥಿಕ ತೊಂದರೆಗಳಿಂದ ಕಳೆದಿರುತ್ತಾಳೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಆಕೆಯನ್ನು ಯಾರೂ ಅಷ್ಟಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಆಕೆಯ ಮನದಾಳದ ಮಾತಿಗೆ ಕಿವಿಯಾಗುವುದಿಲ್ಲ ಆಕೆಯನ್ನು ಪೋಷಿಸುತ್ತಾರೆಯೇ ಹೊರತು ಆಕೆಯ ಭಾವನೆಗಳನ್ನು ಲಕ್ಷಿಸುವುದಿಲ್ಲ…. ಎಲ್ಲವನ್ನು ಮಾಡಿಯೂ ಕೂಡ ಆಕೆ ಏನನ್ನೂ ಬಯಸದೇ ಹೋದರೂ ಆಕೆಯನ್ನು ಪರಿಗಣಿಸುವುದೇ ಇಲ್ಲ. ನಿಮ್ಮ ಹುಟ್ಟಿನಿಂದ ಹಿಡಿದು ತಾನು ನಿಮ್ಮೊಂದಿಗೆ ಇರುವ ಹಾಗೂ ಬದುಕಿರುವ ಪ್ರತಿ ಕ್ಷಣವು ನಿಮ್ಮ ಮನದ ಮಾತುಗಳಿಗೆ ಆಸೆಗಳಿಗೆ ಆಕಾಂಕ್ಷೆಗಳಿಗೆಕಿವಿಗೊಡುವ, ಅದಕ್ಕಾಗಿ ಹೋರಾಡುವವರು ತಾಯಿ.,ಬದುಕಿನ ಹೋರಾಟದ ಎಲ್ಲಾ ಕಷ್ಟಗಳಿಗೆ ಗುರಾಣಿಯಂತೆ ನಿಮ್ಮನ್ನು ರಕ್ಷಿಸಿ ಬೆಳೆಸುವ ಆಕೆಗೆ ತನ್ನದೇ ಆದ ವೈಯಕ್ತಿಕ ಸುಖ ಸಂತೋಷಗಳು ಇಲ್ಲವೇ ಇಲ್ಲ ಎಂದಲ್ಲ… ಆದರೆ ಅವೆಲ್ಲವೂ ನಿಮ್ಮನ್ನು ಕಾಳಜಿ ಮಾಡುವ ಆಕೆಗೆ ಕುಟುಂಬದ ಸಂತಸದಲ್ಲಿಯೇ ಸಾರ್ಥಕತೆಯನ್ನು ಕಾಣುವ ಆಕೆಯ ವಿಶಾಲ ಹೃದಯದ ಮೂಲೆಯಲ್ಲಿ ಅಡಗಿ ಕುಳಿತಿರುತ್ತವೆ.ಆದ್ದರಿಂದ ನಿಮ್ಮ ತಾಯಿಯೊಂದಿಗೆ ಮಾತನಾಡಿ… ಆಕೆಯ ಮಾತುಗಳಿಗೆ ಕಿವಿಯಾಗಿ ಬದುಕಿನಲ್ಲಿ ಆಕೆ ಅನುಭವಿಸಿದ ನೋವು ಯಾತನೆಗಳನ್ನು ಆಕೆಯ ಮಾತುಗಳಲ್ಲಿ ಆಲಿಸಿ.ತಾಯಿಯ ಕುರಿತಾದ ಭಾವನಾತ್ಮಕ ಮಾತುಗಳನ್ನು ಮುಂದಿನ ದಿನಕ್ಕಾಗಿ ಉಳಿಸಿಕೊಳ್ಳದಿರಿ. ನಿಮ್ಮ ತಾಯಿಯ ತಾಳ್ಮೆ, ಸಹನೆ, ಸಿಟ್ಟು, ಸೆಡವು, ಅದ್ವಿತೀಯ ಕಾರ್ಯವೈಖರಿಯನ್ನು ಪ್ರಶಂಶಿಸುವುದಾದರೆ ಅದು ಇಂದೇ ಆಗಲಿ…ಯಾರಿಗೆ ಗೊತ್ತು ಮುಂದೊಂದು ದಿನ ನೀವು ಅದನ್ನೆಲ್ಲಾ ಹೇಳುವ ಹೊತ್ತಿಗೆ ಆಕೆಯೇ ಇಲ್ಲವಾಗಿರಬಹುದು…. ಇದ್ದಾಗ ಸಿಗದ ಗೌರವವನ್ನು ಸತ್ತ ಮೇಲೆ ಪಡೆಯುವುದರಲ್ಲಿ ಯಾವ ಪುರುಷಾರ್ಥವಿದೆ…. ನೀವೇ ಹೇಳಿ.ಬಹುಶಹ ಆಕೆಯ ಕಂಗಳಲ್ಲಿ ಇಡೀ ಜಗತ್ತಿನ ಸುಖ ಸೌಲಭ್ಯಗಳು ತಕ್ಕಡಿಯ ಒಂದು ತಟ್ಟೆಯಲ್ಲಿ ತೂಗಿದರೆ ನಿಮ್ಮ ಒಂದು ಅಕ್ಕರೆಯ, ಕಾಳಜಿಯ ಮಾತು ಮತ್ತೊಂದು ತಟ್ಟೆಯಲ್ಲಿ ತೂಗುತ್ತದೆನಿಮ್ಮ ತಾಯಿಯ ಕುರಿತಾದ ನಿಮ್ಮ ಪ್ರೀತಿ ಮತ್ತು ಗೌರವ ನಿಮಗೆ ಆಶೀರ್ವಾದವಾಗಿ ಮರಳಿ ದೊರೆಯುತ್ತದೆ. ಬಹುಶಹ ನಿಮ್ಮಿಂದ ಆಕೆ ನಿರೀಕ್ಷಿಸುವುದು ಕೂಡ ಅದನ್ನೇ. ಮುಂದಿನ ಬದುಕಿನಲ್ಲಿ ನೀವು ಆಕೆಗೆ ಈ ಎಲ್ಲವನ್ನು ಕೊಡಲಿ ಎಂದೇನೂ ಆಕೆ ಇದೆಲ್ಲವನ್ನು ಮಾಡಿರುವುದಿಲ್ಲ ನಿಜ. ಮಕ್ಕಳಾಗಿ ನಿಮ್ಮನ್ನು ಹಾಗೆ ಬೆಳೆಸುವುದು ತನ್ನ ಕರ್ತವ್ಯ ಎಂದು ಆಕೆ ಭಾವಿಸಿದ್ದರೆ ಅದು ಆಕೆಯ ತಪ್ಪಲ್ಲ…. ಆದರೆ ಆಕೆ ನಿಮಗೆ ಕೊಡ ಮಾಡುವ ಪ್ರೀತಿ, ಅಕ್ಕರೆ, ಕಾಳಜಿ, ಕಠಿಣತೆ, ಶಿಸ್ತುಗಳು ನಿಮ್ಮನ್ನು ನೀವು ಈಗಿರುವ ವ್ಯಕ್ತಿಯಾಗಿ ರೂಪಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿರುತ್ತದೆ.ಆಕೆಯ ಪ್ರೀತಿ, ಮಮತೆಗಳು ನಿಮ್ಮನ್ನು ಆರೋಗ್ಯಕರ ಕೌಟುಂಬಿಕ ವ್ಯಕ್ತಿಯನ್ನಾಗಿ ಬೆಳೆಸಿದರೆ ಕಠಿಣತೆಯ ಮುಖವಾಡವನ್ನು ಹೊಂದಿರುವ ಶಿಸ್ತು ಪಾಲನೆಯು ನಿಮ್ಮನ್ನು ಓರ್ವ ಸಭ್ಯ ಹಾಗೂ ಕ್ರಿಯಾಶೀಲ ವ್ಯಕ್ತಿಯನ್ನಾಗಿ ರೂಪಿಸಿರುತ್ತದೆ. ಆಕೆ ನಿಮಗೆ ತೋರುವ ಕಾಳಜಿಪೂರ್ವಕ ನಡವಳಿಕೆ ನಿಮ್ಮನ್ನು ಓರ್ವ ಸಾಮಾಜಿಕ ವ್ಯಕ್ತಿಯನ್ನಾಗಿ ರೂಪಿಸಿದರೆ ಆಕೆಯ ಧಾರ್ಮಿಕ ನಂಬಿಕೆಗಳು ನಿಮ್ಮಲ್ಲಿ ಓರ್ವ ಆಶಾವಾದಿಯನ್ನು, ಭರವಸೆಯ ನಾಯಕನನ್ನು ಸೃಷ್ಟಿಸುತ್ತವೆಆದ್ದರಿಂದ ಮಕ್ಕಳೇ…. ತಾಯಿಯ ಕುರಿತು ನಿಷ್ಕಾಳಜಿ ಬೇಡ ಆಕೆ ಭೌತಿಕವಾಗಿ ಇರಲಿ ಅಥವಾ ಇಲ್ಲದೇ ಇರಲಿ ಆಕೆಯ ಆಶೀರ್ವಾದ ಶಾಂತಿಯಾಗಿ ನಿಮ್ಮನ್ನು ಆವರಿಸುತ್ತದೆ. ಆಂತರಿಕ  ಶಕ್ತಿಯಾಗಿ ನಿಮ್ಮಲ್ಲಿ ತುಂಬಿಕೊಂಡು ನಿಮ್ಮನ್ನು ಗಟ್ಟಿಯಾಗಿಸುತ್ತದೆನಿಮಗೆ ಕೇವಲ ಒಬ್ಬ ತಾಯಿ ಮಾತ್ರ ದೊರೆಯುತ್ತಾಳೆ ಹಾಗೂ ಆಕೆಗೆ ನೀವು ಏನನ್ನು ಕೊಡುವಿರೋ ಅದನ್ನೇ ನೀವು ಬದುಕಿನಲ್ಲಿ ಪಡೆಯುವಿರಿ ಎಂಬುದನ್ನು ನೆನಪಿಟ್ಟುಕೊಂಡು ಬದುಕಿನಲ್ಲಿ ತಾಯಿಯನ್ನು ಪ್ರೀತಿಸಿ ಗೌರವಿಸಿ ಆರಾಧಿಸಿ…… ತಾಯಿ ಅದಕ್ಕೂ ಹೆಚ್ಚಿನದನ್ನು ನಿಮ್ಮಿಂದ ನಿರೀಕ್ಷಿಸುವುದಿಲ್ಲ. ಏನಂತೀರಾ ಸ್ನೇಹಿತರೇ??  ವೀಣಾ ಹೇಮಂತ್ ಗೌಡ ಪಾಟೀಲ್

“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ, ಜೀವನ

“ಜಪಾನೀಯರ ದೀರ್ಘಾಯುಷ್ಯದ ಗುಟ್ಟು” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಜಪಾನೀಯರ ದೀರ್ಘಾಯುಷ್ಯದ ಗುಟ್ಟು”  ಇತ್ತೀಚಿಗಿನ ವರದಿಯ ಪ್ರಕಾರ ಜಪಾನಿನಲ್ಲಿ 95,000ಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ. ಆರೋಗ್ಯವಾಗಿ ಓಡಾಡಿಕೊಂಡು ತಮ್ಮ ದೈನಂದಿನ ಬದುಕನ್ನು ನಡೆಸುತ್ತಿರುವ ಅವರನ್ನು ನೋಡಿದಾಗ ಅಬ್ಬಾ ಎಂಥ ಅದೃಷ್ಟವಂತರು ಇವರು ಎಂದು ನಮಗೆ ಅನಿಸಿದರೆ ತಪ್ಪಿಲ್ಲ.  ಆದರೆ ಇಲ್ಲಿ ಕೇವಲ ಅದೃಷ್ಟದ ಪಾಲು ಇಲ್ಲ. ದೀರ್ಘಾಯುಷ್ಯ ಅವರ ವಂಶವಾಹಿಗಳಲ್ಲಂತೂ ಮೊದಲೇ ಇಲ್ಲ….. ಹಾಗಿದ್ದರೆ ಅವರ ದೀರ್ಘಾಯುಷ್ಯದ ಗುಟ್ಟೇನು? ಎಂದು ಕೇಳಿದರೆಅವರ ಶಾಂತ ಸ್ವಭಾವ, ಉದ್ದೇಶ ಹಾಗೂ ಆಳವಾದ ಬುದ್ದಿವಂತಿಕೆ ಎಂದು ಹೇಳಬಹುದು.  ಬದುಕಿನಲ್ಲಿ ಅವರ ಕೆಲವು ಅಭ್ಯಾಸಗಳನ್ನು  ಅರ್ಥಮಾಡಿಕೊಳ್ಳೋಣ* ಅವರು ಅತ್ಯಂತ ಧಾನಪೂರ್ವಕವಾಗಿ ಆಹಾರವನ್ನು ಸೇವಿಸುತ್ತಾರೆ ಹಾಗೂ ಅನವಶ್ಯಕವಾಗಿ ಹೆಚ್ಚು ಆಹಾರವನ್ನು ಸೇವಿಸುವುದಿಲ್ಲ ಅವರು ಸೇವಿಸುವ ಆಹಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.ತಾಜಾ ಆಗಿರುವ, ಆಯಾ ಋತುಮಾನದಲ್ಲಿ ದೊರೆಯುವ ತರಕಾರಿ, ಹಣ್ಣು, ಆಹಾರಗಳನ್ನು ಅವರು ಸೇವಿಸುತ್ತಾರೆ.ಸಾಧ್ಯವಿದ್ದಷ್ಟು ತರಕಾರಿಗಳು, ಅಕ್ಕಿ, ಮೀನು ಹಾಗೂ ಹುದುಗು ಬರಿಸಿದ ಆಹಾರ ಪದಾರ್ಥಗಳು ಅವರ ಮೊದಲ ಆದ್ಯತೆ. ತಮ್ಮ ಅವಶ್ಯಕತೆಯ 80% ನಷ್ಟು ಆಹಾರವನ್ನು ಮಾತ್ರ ಅವರು ಸೇವಿಸುತ್ತಾರೆ…. ಅಂದರೆ ಹೊಟ್ಟೆ ತುಂಬುವ ಮುನ್ನವೇ ಅವರು ಆಹಾರ ಸೇವನೆಯನ್ನು ನಿಲ್ಲಿಸುತ್ತಾರೆ.‘ಹರಾ ಹಚೀ ಬು’ ಎಂದರೆ ನಿಮ್ಮ ಅವಶ್ಯಕತೆಯ ಕೇವಲ 80 ಶೇಕಡಾ ಆಹಾರವನ್ನು ನೀವು ಸೇವಿಸಿ ಎಂಬ ನಿಯಮವನ್ನು ಅವರು ಪಾಲಿಸುತ್ತಾರೆ. *ಸಾಮಾನ್ಯವಾಗಿ ಅವರು ಅತ್ಯಂತ ಸಹಜವಾಗಿ, ನೈಸರ್ಗಿಕವಾಗಿ ಪ್ರತಿದಿನ ನಡೆದಾಡುತ್ತಾರೆ.ಮನೆಯ ಕೈದೋಟಗಳನ್ನು ನಿರ್ವಹಿಸುತ್ತಾ ಓಡಾಡುತ್ತಾರೆ.ಇತರರನ್ನು ಅವಲಂಬಿಸದೆ ಮನೆಯ ಸ್ವಚ್ಛತೆಯನ್ನು ತಾವೇ ಮಾಡಿಕೊಳ್ಳುತ್ತಾರೆ. ಚಿಕ್ಕ ಪುಟ್ಟ ದೂರವನ್ನು ಮಾತ್ರವಲ್ಲದೆ ತುಸು ಹೆಚ್ಚಿನ ದೂರವನ್ನು ಕೂಡ ಅವರು ನಡೆದು ಪೂರೈಸುತ್ತಾರೆಪ್ರತಿದಿನ ಕೆಲ ಸೂಕ್ತ ವ್ಯಾಯಾಮಗಳನ್ನು ಮಾಡುತ್ತಾರೆ.ಅವರು ವ್ಯಾಯಾಮ ಮಾಡಲು ಜಿಮ್ ನಂತಹ ಯಂತ್ರಗಳ ಅವಲಂಬನೆಯನ್ನು ಮಾಡದೆ ಅತ್ಯಂತ ಸಹಜವಾಗಿ ಅವರು ಓಡಾಡಿಕೊಂಡು ತಮ್ಮ ನಿತ್ಯ ಬದುಕನ್ನು ನಡೆಸುತ್ತಾರೆ. ಪ್ರತಿದಿನ ಮುಂಜಾನೆ ಬೇಗನೆ ಏಳಲು ಅವರಿಗೆ ಅವರದ್ದೇ ಆದ ಕಾರಣವಿದೆ. ಇಕಿಗಾಯಿ ಎಂದು ಅದಕ್ಕೆ ಹೆಸರು. ಅದೆಷ್ಟೇ ಚಿಕ್ಕದಾದ ವಸ್ತು, ವಿಷಯವಿರಲಿ ಅದರಲ್ಲಿ ಒಂದು ಉದ್ದೇಶವನ್ನು ಅವರು ಹೊಂದಿರುತ್ತಾರೆ. ಸದಾ ಚಟುವಟಿಕೆಯಿಂದ ಇರುತ್ತಾರೆ.ಎಂದೂ ನಿವೃತ್ತರಾಗುವುದಿಲ್ಲ. ಸಾಧ್ಯವಾದಷ್ಟು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಪ್ರತಿ ಹುಟ್ಟುಹಬ್ಬಕ್ಕೂ ಮತ್ತಷ್ಟು ಆರೋಗ್ಯವಂತರಾಗಿರುವ ಆಶಯವನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. *ಮಕ್ಕಳನ್ನು, ಮೊಮ್ಮಕ್ಕಳನ್ನು ಕಾಳಜಿ ಮಾಡುವ ಅವರೇ ಎಲ್ಲ ಕೆಲಸ ಕಾರ್ಯಗಳನ್ನು ಅವರು ನಿರ್ವಹಿಸಲು ಸಹಾಯ ಮಾಡುವರು. ಚಿಕ್ಕ ಸಸಿ ಇರಲಿ ದೊಡ್ಡ ಮರವಿರಲಿ ಅದನ್ನು ಕೂಡ ಅತ್ಯಂತ ಕಾಳಜಿ ಪೂರ್ವಕವಾಗಿ ಬೆಳೆಸುತ್ತಾರೆ . ಸಮಾಜದ ಹಾಗೂ ಸಮುದಾಯದ ಕುರಿತು ಕೂಡ ಅದೇ ಪ್ರಮಾಣದ ಕಾಳಜಿಯನ್ನು ಅವರು ಹೊಂದಿರುತ್ತಾರೆ. ತಮ್ಮನ್ನು ತಾವು ಅತ್ಯಂತ ಉಪಯುಕ್ತ ಮತ್ತೊಬ್ಬರ ಅವಶ್ಯಕತೆಗೆ ಜೊತೆಯಾಗುವ ಹಾಗೂ ಅವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿರುತ್ತಾರೆ   ಅತ್ಯಂತ ಬಲವಾದ ಸಾಮಾಜಿಕ ಬಂಧುಗಳನ್ನು ಕೂಡ ಅವರು ಕಾಯ್ದುಕೊಳ್ಳುತ್ತಾರೆ *ಕುಟುಂಬ ಮತ್ತು ನೆರೆಹೊರೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹಾಗೂ ನಿರಂತರ ಸಂಪರ್ಕವನ್ನು ಹೊಂದಿರುತ್ತಾರೆ. ಹಿರಿಯರಿಗೆ ಅನಾದರ ತೋರದೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಾರೆ.ಒಂಟಿತನವನ್ನು ಅವರು ಬಯಸುವುದಿಲ್ಲ ಸದಾ ಸಮಾಜದ ಸಮುದಾಯದ ಜೊತೆ ಬೆರೆತು ಅದರ ಆಗುಹೋಗುಗಳಲ್ಲಿ ಒಂದಾಗಿ ನಡೆಯುತ್ತಾರೆ ಅತ್ಯಂತ ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ ಇದು ಅವರ ನರವ್ಯೂಹವನ್ನು ಶಾಂತಗೊಳಿಸುತ್ತದೆ. ಬದುಕಿನಲ್ಲಿ ಅತ್ಯಂತ ಕಡಿಮೆ ಅವಶ್ಯಕತೆಗಳು ಹಾಗೂ ಹೆಚ್ಚು ಉಪಯುಕ್ತತೆ ಯನ್ನು ಬಯಸುವ ವ್ಯಕ್ತಿತ್ವ ಅವರದಾಗಿದ್ದು ಅತ್ಯಂತ ನಿಧಾನ ಆದರೆ ಅಷ್ಟೇ ಅರ್ಥಪೂರ್ಣವಾದ ಶೈಲಿಯ ಬದುಕು ಅವರದಾಗಿರುತ್ತದೆ. ನಿರಂತರವಾಗಿ ಎಲ್ಲವನ್ನು ವಿರೋಧಿಸದೆ  ಒಪ್ಪಿಕೊಳ್ಳುವ ಮನೋಭಾವವನ್ನು ಹೊಂದಿರುತ್ತಾರೆ.ಹಣ, ಆಸ್ತಿ, ಅಂತಸ್ತುಗಳ ಕುರಿತು ಅವರಿಗೆ ವಿಶೇಷ ಮೋಹ ಇರುವುದಿಲ್ಲ. ಇತರರೊಂದಿಗೆ ಹೋಲಿಕೆ ಮಾಡಿಕೊಂಡು ವ್ಯಥೆ ಪಡುವ ಸ್ವಭಾವ ಕೂಡ ಅವರದಲ್ಲ. * ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಅವರದ್ದುಮನೆಯಲ್ಲಿ ಅತಿಯಾಗಿ ಲೈಟುಗಳನ್ನು ಫ್ಯಾನುಗಳನ್ನು ಉರಿಸುವುದಿಲ್ಲ ನೈಸರ್ಗಿಕ ಗಾಳಿ, ಬೆಳಕನ್ನು ಹೆಚ್ಚು ಆಸ್ವಾದಿಸುತ್ತಾರೆ. ಅವರ ದಿನಚರ್ಯ ಹಾಗೂ ಋತುಚರ್ಯಗಳಿಗೆ ಅನುಸಾರವಾಗಿ ಬದುಕನ್ನು ನಡೆಸುತ್ತಾರೆ. ಬದುಕಿನ ಕುರಿತು ಅಪಾರ ಗೌರವವನ್ನು ಹೊಂದಿರುವ ಅವರು ಆಹಾರ ಸೇವನೆಯ ಕುರಿತು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯನ್ನು ತೋರುತ್ತಾರೆ ಯಾವುದನ್ನೇ ಆಗಲಿ ಪೋಲು ಮಾಡದೆ ಬಳಸುವ ರೂಢಿಯನ್ನು  ಹೊಂದಿರುತ್ತಾರೆ.ತಮ್ಮ ದೇಹದ ಕುರಿತು ಕೂಡ ಅಷ್ಟೇ ಕಾಳಜಿ, ಗೌರವವನ್ನು ಹೊಂದಿದ್ದು ಪ್ರೀತಿಪೂರ್ವಕ ಪೋಷಣೆ ಅವರದ್ದಾಗಿರುತ್ತದೆ. *ಸಂತೋಷಕ್ಕಾಗಿ ಅವರು ಹಪಹಪಿಸುವುದಿಲ್ಲ ಬೆನ್ನತ್ತುವುದಿಲ್ಲ…. ಅವರು ಬದುಕಿನಲ್ಲಿ ಸಮತೋಲನವನ್ನು ಇಚ್ಚಿಸುತ್ತಾರೆ ಹಾಗೂ ಅದನ್ನೇ ಅಳವಡಿಸಿಕೊಳ್ಳುತ್ತಾರೆ.ಅವರು ತಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆಬದುಕಿನ ತಾತ್ಕಾಲಿಕ ವಿಷಯ ಸುಖಗಳ ಕುರಿತು ಅವರಿಗೆ ಅರಿವು ಇದ್ದು ಅಶಾಶ್ವತತೆಯನ್ನು ಒಪ್ಪಿಕೊಂಡು ಬಾಳುತ್ತಾರೆ.ಯಾವುದೇ ರೀತಿಯ ದ್ವೇಷ ಅಸಹನೆ ಅಸಮಾಧಾನಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಂಡು ಮಾನಸಿಕವಾಗಿ ಬೇಯುವುದಿಲ್ಲ…. ಹೋಗಲಿ ಬಿಡು ಎಂದು ವಿಷಯಗಳನ್ನು ಅವು ಇರುವಂತೆಯೇ ಒಪ್ಪಿ ಅಪ್ಪಿಕೊಳ್ಳುತ್ತಾರೆ.  ನೋಡಿದಿರಾ ಸ್ನೇಹಿತರೆ,ಬುದ್ಧನ ಎಲ್ಲ ಬೋಧನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಅವರು ಹೇರಳತೆಯ ವಿರುದ್ಧ ವಿರಳತೆಯನ್ನು ಅತಿ ಬಳಕೆಯ ವಿರುದ್ಧ ಸರಳತೆಯನ್ನು ಭೋಗ ಮತ್ತು ಲಾಲಸೆಯ ಬದುಕಿನ ಮೇಲೆ ಮಿತಿಯನ್ನು ತಮ್ಮನ್ನು ವಿಚಲಿತಗೊಳಿಸುವ ವಿಷಯಾಸಕ್ತಿಗಳ ಕುರಿತು ಅರಿವನ್ನು ಹೊಂದಿರುತ್ತಾರೆಒಬ್ಬಂಟಿತನದ ವಿರುದ್ಧ ಸಮುದಾಯದ ಜೊತೆಗಿನ ಭಾಗವಹಿಸುವಿಕೆಯನ್ನು ಹೊಂದಿರುತ್ತಾರೆ. ಇವೆಲ್ಲವೂ ಬೌದ್ಧ ಧರ್ಮದ ಬೋಧನೆಯ ಜಾಣ್ಮೆಯನ್ನು ಬದುಕಿನ ಕನ್ನಡಿಯಲ್ಲಿ ಅಳವಡಿಸಿಕೊಂಡು ನಮ್ಮನ್ನು ನಾವು ನೋಡಿಕೊಳ್ಳಲು ಅವರು ಬಳಸುವ ವಿಧಾನಗಳು. ಅಂತಿಮವಾಗಿ ದೀರ್ಘಾಯುಷ್ಯ ಎಂದರೆ ಬದುಕಿನ ದಿನಗಳಿಗೆ ಮತ್ತಷ್ಟು ಆಯುಷ್ಯವನ್ನು ತುಂಬುವುದು ಅಲ್ಲ.ಮತ್ತಷ್ಟು ಹೆಚ್ಚು ವರ್ಷ ಬಾಳುವುದಂತೂ ಅಲ್ಲವೇ ಅಲ್ಲ…. ಇದು ಬದುಕಿನಲ್ಲಿ ನಮಗೆ ನಿಧಾನ ವಿಷವಾಗಿ ಪರಿಣಮಿಸುವ ವಸ್ತು, ವಿಷಯ ಹಾಗೂ ವ್ಯಕ್ತಿಗಳನ್ನು ನಿರಾಕರಿಸುವ ದೂರವಿಡುವ ಒಂದು ಪ್ರಕ್ರಿಯೆ.  ಹಾಗಾದರೆ ಬದುಕಿನಲ್ಲಿ ನಿಧಾನ ವಿಷವಾಗಿ ಪರಿಣಮಿಸುವ ವಿಷಯಗಳು ಯಾವುವು ಎಂದರೆ* ಅತಿಯಾದ ಒತ್ತಡ *ಅತಿಯಾದ ಆಹಾರ ಸೇವನೆ *ಒಬ್ಬಂಟಿತನ *ಎಲ್ಲದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವುದು /   ಆತುರತೆಯನ್ನು ತೋರುವುದು *ಅರ್ಥ ರಹಿತ ಬದುಕನ್ನು ನಡೆಸುವುದು ಹಾಗೂ ಅಂತಿಮವಾಗಿ ಇನ್ನೊಬ್ಬರೊಂದಿಗೆ ನಮ್ಮ ಬದುಕನ್ನು ಹೋಲಿಸಿಕೊಂಡು ವ್ಯಕ್ತಪಡುವುದು ಸ್ನೇಹಿತರೇ…ಜಪಾನೀಯರು ದೀರ್ಘಾಯುಷಿಗಳಾಗಲು ಕಾರಣ ಅವರು ಹೆಚ್ಚೇನು ಮಾಡಿಲ್ಲ ಬದಲಾಗಿ ಜಾಣತನದಿಂದ ತಮ್ಮ ಬದುಕನ್ನು ನಡೆಸುವ ಮೂಲಕ ಅನಾವಶ್ಯಕ ವಿಷಯಗಳನ್ನು ದೂರವಿಟ್ಟಿದ್ದಾರೆ.ಬಹಳಷ್ಟು ಬಾರಿ ದೀರ್ಘಾಯುಷ್ಯದ ಗುಟ್ಟು ಯಾವುದೇ ಔಷಧಿ ಚಿಕಿತ್ಸೆಗಳಲ್ಲಿ ಇಲ್ಲ… ಬೇರೆಯವರು ನಮ್ಮ ಕುರಿತು ಗಮನ ಹರಿಸದೇ ಇದ್ದಾಗಲೂ ಕೂಡ ನಾವು ಹೇಗೆ ನಮ್ಮ ಬದುಕನ್ನು ನಡೆಸುತ್ತೇವೆ ಎಂಬುದು ನಮ್ಮ ದೀರ್ಘಾಯುಷ್ಯದ ಗುಟ್ಟಾಗಿರಬೇಕು. ವೀಣಾ ಹೇಮಂತ್ ಗೌಡ ಪಾಟೀಲ್

“ಜಪಾನೀಯರ ದೀರ್ಘಾಯುಷ್ಯದ ಗುಟ್ಟು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ, ಜೀವನ

“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ

ಬದುಕಿನ ಸಂಗಾತಿ “ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ನಾನು ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿಲ್ಲ ಜಗತ್ತಿನ ಪ್ರತಿ ಒಬ್ಬರು ತಿಳಿದುಕೊಳ್ಳಬೇಕಾದ ಮಾತಿದು ಎಷ್ಟೇ ಕೋಟಿ ಹಣ ಆಸ್ತಿ ಇದ್ದರೂ ನಾವು ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಇಷ್ಟೆಲ್ಲ ಇದ್ದರೂ ಅದನ್ನೆಲ್ಲವನ್ನು ಅನುಭವಿಸುವಂತಹ ಶಕ್ತಿ ಮನುಷ್ಯನಿಗೆ ಇಲ್ಲ. ಕಾರಣ ಆಸ್ತಿ ಹಣಕ್ಕೆ ಇರುವಷ್ಟು ವಯಸ್ಸು ಮನುಷ್ಯನಿಗೆ ಇಲ್ಲ.ಇದ್ದಾಗ ಇರುವಷ್ಟುನ್ನು ಅನುಭವಿಸುವಷ್ಟು ಮನೋ ಧೈರ್ಯವೂ ಮನುಷ್ಯನಿಗೆ ಇಲ್ಲ. 10 ಕಾರಿದ್ದರು ಒಂದು ಸಲಕ್ಕೆ ಒಂದೇ ಕಾರಿನಲ್ಲಿ  ಕುಳಿತು ಪ್ರಯಾಣ ಮಾಡಲು ಸಾಧ್ಯ. ಹಾಗೆಯೇ ಕೋಟಿ ಕೋಟಿ ಹಣ ವಿದ್ದರೂ ಅದನ್ನೆಲ್ಲ ಎಲ್ಲರ ಎದುರಿಗೆ ತೋರಿಸುವಷ್ಟು ಧೈರ್ಯವಿಲ್ಲ. ಕಾರಣ ಅಷ್ಟೊಂದು ಹಣ ಬರಲು ಒಳ್ಳೆಯ ದಾರಿಯಿಂದ ಅವಕಾಶವಿಲ್ಲ. ಇದ್ದ ಹಣದಲ್ಲಿ ಧಾರಾಳವಾಗಿ ಯಾರಿಗೂ ಸಹಾಯ ಮಾಡದೆ ತನ್ನಲ್ಲಿ ಹಾಗೆ ಇಟ್ಟು ಅದನ್ನು ಉಪಯೋಗಕ್ಕೆ ಬರದಂತೆ ಮಾಡುವುದು ಕೆಟ್ಟ ಮನಸ್ಥಿತಿ ಇರುವ ಮನುಷ್ಯನಿಗೆ ಮಾತ್ರ ಸಾಧ್ಯ. ಹಾಗೆ ತಾನು ಅನುಭವಿಸದೆ ತನ್ನವರಿಗೂ ಕೊಡದೆ ಸತ್ತಾಗ “ದರಿದ್ರದವರು ಬದುಕಿದ್ದು ಏನು ಪ್ರಯೋಜನ ಸತ್ತರೆ ಸಾಯಲಿ ಬಿಡಿ” ಎಂದು ಜನ ಅಂದುಕೊಳ್ಳುವಂತೆ ಬದುಕುವುದು ಏಕೆ ಬೇಕು? ನ್ಯಾಯವಾಗಿ ಬದುಕಿ ದುಡಿದದ್ದರಲ್ಲಿ ತನಗೆ ತನ್ನವರಿಗೆ ಎಂದು ಬಚ್ಚಿಡದೆ ಇರುವಷ್ಟು ದಿನ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಿ ಸತ್ತಾಗ “ಈ ಮನುಷ್ಯ ಇನ್ನಷ್ಟು ದಿನ ಬದುಕಿರಬೇಕಿತ್ತು “ಅಂದುಕೊಳ್ಳುವಂತೆ ಬದುಕುವುದು ಎಷ್ಟು ಒಳ್ಳೆಯ ಸಾರ್ಥಕತೆಯ ಬದುಕಲ್ಲವೇ?.ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನಾಗಿಯೇ ಇಲ್ಲ ಅವನನ್ನು ಮೃಗಗಳಿಗೆ ಹೋಲಿಸುವುದು ಖಂಡಿತ ಬೇಡವೇ ಬೇಡ. ಮೃಗಗಳಿಗಿರುವಷ್ಟು ಒಳ್ಳೆಯತನ ಈ ಕೆಟ್ಟ ಮನುಷ್ಯನಿಗಿಲ್ಲ. ಸ್ವಾರ್ಥ ಮೋಸ ಧಗ ವಂಚನೆ ಅನ್ಯಾಯ ಇವೆಲ್ಲವೂ ಮನುಷ್ಯನ ಐದು ಅಂಗಗಳಂತಾಗಿದೆ. ಮನುಷ್ಯ ತನ್ನ ದುನ೯ಡತೆ ದುರ್ಗುಣ ಇವುಗಳಿಂದ ತನ್ನನ್ನು ತಾನು ಹಾಳು ಮಾಡಿಕೊಂಡು ತನ್ನ ಸುತ್ತಮುತ್ತಲಿನ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾನೆ. ಒಳ್ಳೆಯದು ಮಾಡಲು ಒಂದು ಕ್ಷಣ ಯೋಚನೆ ಮಾಡಿದರೆ ಸಾಕು. ಕೆಟ್ಟದ್ದನ್ನು ಮಾಡಲು ಸಾವಿರ ಸಲ ಯೋಚಿಸಬೇಕು. ಆದರೆ ಈಗಿನ ಯುವ ಜನತೆ ತಪ್ಪನ್ನು ಮಾಡಲು ಒಂದೇ ಕ್ಷಣ ಯೋಚಿಸುತ್ತಾರೆ ಒಳ್ಳೆಯದನ್ನು ಮಾಡಲು ಸಾವಿರ ಸಲ ಯೋಚಿಸುತ್ತಾರೆ. ಹಾಗಾಗಿ ಇಂದು ಎಷ್ಟೋ ಯುವಜನತೆ ತಪ್ಪುಗಳನ್ನು ಮಾಡಿ  ಜೈಲನ್ನು ಸೇರಿದ್ದಾರೆ. ಅವರನ್ನೆಲ್ಲ ನೋಡಿ ಆದರೂ ಉಳಿಧ ಜನರುಬುದ್ದಿ ಕಲಿತು ಬದುಕಬೇಕು.ಇವತ್ತಿನ ಮಕ್ಕಳು ತಂದೆ ತಾಯಿಯರ ಮಾತಿಗೆ ಬೆಲೆ ಕೊಡದೆ, ತಮ್ಮದೇ ಆದ ರೀತಿಯಲ್ಲಿ ನಡೆದುಕೊಂಡು ಜೀವನ ವನ್ನೇ ಹಾಳುಮಾಡಿಕೊಂಡು, ಕೇಳಿದರೆ ಅವ್ರೆಲ್ಲ ಹೇಳೋ ಮಾತು ಏನು ಗೊತ್ತಾ? ನಾವು ನಿಮ್ಮ ಕಾಲದವರಲ್ಲ, ಇವತ್ತಿನ ಜನರೇಷನ್ ನಾವು ಎಂದು  ಉತ್ತರಿಸುವ ರೀತಿ ಅಸಯ್ಯ ತರುತ್ತೆ. ತಂದೆ ತಾಯಿಗಳು ಈ ಮಕ್ಕಳ ಕಾಲದಲ್ಲಿ ಸೋತು ಹೋಗಿದ್ದಾರೆ. ನಾನು ತಂದೆ ತಾಯಿಗಳಿಗೆ ಒಂದು ಮಾತು ಹೇಳುತ್ತೇನೆ. ಯಾರ ಮಕ್ಕಳೇ ಆಗಲಿ ಮರ್ಯಾದೆ ತೆಗೆಯೋ ಕೆಲಸ ಮಾಡಿದರೆ ನೀವು ನೊಂದುಕೊಂಡು ಜೀವ ಕಳೆದುಕೊಳ್ಳಬೇಡಿ. ಕಾರಣ ಯಾವ ತಂದೆ ತಾಯಂದಿರು  ಮಕ್ಕಳನ್ನು  ಕೆಟ್ಟ ದಾರಿಗೆ ಹೋಗಲು ಪ್ರೇರೇಪಿಸುವುದಿಲ್ಲ. ಹಾಗೆಯೇ ಯಾರು ನೋವುಂಡ ತಂದೆ ತಾಯಿಯರಿಗೆ ದಯವಿಟ್ಟು ಅವಮಾನಿಸಿ ಮಾತನಾಡಬೇಡಿ. ಹಣ ಇಲ್ಲ ಅಂದ್ರೆ ಜನಗಳ ಎದುರಿಗೆ ಓಡಾಡಬಹುದು  ಆದ್ರೆ ಮರ್ಯಾದೆ ಹೋದರೆ ಹೇಗೆ ಓಡಾಡಬಹುದು ಅಲ್ಲವೇ,  ಮರ್ಯಾದೆ ಇಲ್ಲ ಅಂದ್ರೆ ನೆಮ್ಮದಿ ಎಲ್ಲಿರುತ್ತೆ. ವನಜ ಮಹಾಲಿoಗಯ್ಯ ಮಾದಾಪುರ

“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ Read Post »

ಇತರೆ, ಜೀವನ

“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”ವನಜ ಮಹಾಲಿಂಗಯ್ಯ

ವಿಚಾರ ಸಂಗಾತಿ ವನಜ ಮಹಾಲಿಂಗಯ್ಯ “ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?” ಹಿಂದಿನ ಕಾಲದಲ್ಲಿ ಈ ಜ್ಯೋತಿಷ್ಯಕ್ಕೆ  ಈಗ ಕೊಡುವಷ್ಟು ಪ್ರಾಮುಖ್ಯತೆಯನ್ನು ಕೊಡತ್ತಿರಲಿಲ್ಲ. ಯಾಕೆಂದರೆ ಕಷ್ಟಪಟ್ಟು ದುಡಿಯೋದು  ಹೊಟ್ಟೆತುಂಬ ತಿನ್ನೋದು  ಕಣ್ತುಂಬ ನಿದ್ದೆ ಮಾಡೋದು ಅಷ್ಷೆ.   ಕಲ್ಲನ್ನು ಜೋಡಿಸಿ ಮಣ್ಣು ಕಲಸಿ ಮೆತ್ತಿ ಮನೆ ಕಟ್ಟಿ, ಅದಕ್ಕೆ ಸುಣ್ಣ, ಕೆಂಪುಬಣ್ಣ (ಉರುಮಂಜು) ಬಳಿದು ಕೊಂಡು ಬಂಗಾರದ ಬದುಕು ಬದುಕಿದವರು ನಮ್ಮ ಹಿರಿಯರು. ಹಬ್ಬ, ಮದುವೆ ಗಳಿಗೆ ಸಂಬಂಧಿ ಕರೆಲ್ಲ ಕೂಡಿಕೊಂಡು ಅವರ ಸಂಭ್ರಮ ಹೇಳತೀರದು. ಆಗ ಮನಸ್ಸನ್ನು ಹಾಳುಮಾಡುವ ಈ ಟಿ ವಿ , ಮೊಬೈಲು,   ಅಲ್ಲದೆ ಬೈಕು ಕಾರು ಇವ್ಯಾವು ಇರಲಿಲ್ಲ. ಅಂದು ಎತ್ತಿನ ಗಾಡಿ, ಕುದುರೆ ಸಾರೋಟ, ಸೈಕಲ್,ಇವ್ಯಾವು ಇಲ್ಲ ಅಂದ್ರೆ ಕಾಲ್ನಡಿಗೆ ಅಷ್ಟೇ. ಆದರೂ ಅಂದಿನಜನರೆಲ್ಲ ನೆಮ್ಮದಿಯಿಂದ  ಸಮಾಧಾನದಿಂದ ಪ್ರೀತಿ ವಿಶ್ವಾಸ ನಂಬಿಕೆಯಿಂದ ಹೊಂದಾಣಿಕಯಿಂದ ಜೀವಿಸುತ್ತಿದ್ದರು. ಎಲ್ಲವೂ ತನ್ನಷ್ಟಕ್ಕೆ ತಾನು ನಡೆಯುತ್ತಾ ಹೋಗುತ್ತಿತ್ತು. ಅಂದರೆ ಪ್ರಕೃತಿಯ ನಿಯಮಗಳನ್ನು ಪಾಲಿಸುತ್ತಾ ಜನ ಸೌಖ್ಯವಾಗಿ, ಖಷಿಯಿಂದ , ಹೊಂದಾಣಿಕೆಯಿಂದಬದುಕುತ್ತಿದ್ದರು. ಆಡಂಬರವಿಲ್ಲ, ಅತಿಯಾಸೆ ಇಲ್ಲ, ಅಸೂಯೆಯಿಲ್ಲ .  ಕಂಪ್ಲೇಟಿಲ್ಲ , ಕೋರ್ಟು ಕಚೇರಿಗಳಿಲ್ಲ. ಆದರೆ ಈಗ ವಿದ್ಯಾವಂತರು ಜಾಸ್ತಿಯಾಗಿ , ಅವರವರೇ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಅಂದರೆ ಬದುಕಿನ ಅರ್ಥವೇ ಬದಲಾಗಿದೆ. ಎಲ್ಲವೂ ಕ್ಷಣಿಕ ಎನ್ನಿಸಿದೆ.ಕಾರಣ ಅವಸರದ ಅಪಾಯದ ಪಯಣ. ತಂತ್ರಜಾನದ ಮುಂದೆ ಯಾಂತ್ರಿಕ ಜೀವನ.10 ರಿಂದ 1 ಲಕ್ಷದವರೆಗಿನ  ಅಂಗೈಯಲ್ಲಿರುವ  ಮೊಬೈಲ್ ಎಲ್ಲವನ್ನು  ಎಲ್ಲರನ್ನೂ ಬದಲಾಯಿಸಿದೆ.  ಟಿ ವಿ ಧಾರಾವಾಹಿಗಳ ಅಬ್ಬರ. ಸಂಬಂಧಗಳ ದೂರ ತೀರ,  ಎಲ್ಲವೂ ಆನ್ಲೈನ್, ಅಮ್ಮನ ಕೈರುಚಿಯಿಂದ ವಂಚಿತರಾಗಿ,  ದುಡ್ಡೇ ದೊಡ್ಡಪ್ಪ ಅದಿಲ್ಲ ಅಂದರೆ ಬದುಕೇ ಇಲ್ಲಪ್ಪ ಅನ್ನುವ ಹಾಗೆ, ಬೇರೆ ಬೇರೆ ಊರು, ರಾಜ್ಯ, ದೇಶಗಳಿಗೆ ದುಡಿಯಲೆಂದು ಹೋದ ಮಕ್ಕಳು ತಂದೆ ತಾಯಿಯ ಸುಖಕ್ಕಲ್ಲ  ಅವರ ಶವಕ್ಕು ಬರದಂತಹ ಪರಿಸ್ಥಿತಿಯಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದರೆ ಎಲ್ಲಿಗೋಯಿತು? ನಮ್ಮ  ಜೀವನ?  ಅದರ ನಡು ವೆ ಜ್ಯೋತಿಷ್ಯ, ವಾಸ್ತು ಅಂತ ಜನ ಮುಗಿಬಿದ್ದಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ಎಲ್ಲಾ ನ್ಯೂಸ್ ಚಾನಲ್ಗಳಲ್ಲಿ ಬರುವ ಜ್ಯೋತಿಷಿಗಳು ಅವರ ಬದುಕೆ ಅದ್ವಾನಕ್ಕಿಟ್ಟಿರುತ್ತದೆ , ಅದರೆ ಅವರು ಎಲ್ಲರ ಬದುಕಿನ ಬಗ್ಗೆ ಹೇಳಲು ಕೂತಿರುತ್ತಾರೆ. ಅವರ ಹಿನ್ನೆಲೆ ಹೇಗಿದೆ,  ಅವರಿಗೆ ಅವರ ಭವಿಷ್ಯದ ಬಗ್ಗೆಯೇ ಅವರಿಗೆ ಗೊತ್ತಿಲ್ಲ, ಇತ್ತೀಚೆಗೆ ನಡೆದ ಜ್ಯೊತಿಷಿಯ ಕೊಲೆಯನಂತರವಾದರು ,ಟಿ ವಿ ಮಾಧ್ಯಮಗಳು ಅಂತಹ  ಕಾರ್ಯಕ್ರಮಳಿಗೆ   ಹಾಗೂ ಟಿವಿಗಳಲ್ಲಿ ಬರುವ ಕೆಲವು ಜಾಹೀರಾತುಗಳು ನಿಜಕ್ಕೂ ಮನೆ ಮಂದಿಯನ್ನು ಮುಜುಗರ ಪಡಿಸುತ್ತಿವೆ. ಅದೂ ಅಲ್ಲದೆ ಮಹಿಳೆರ ಒಳ ಉಡುಪುಗಳ ಜಾಹೀರಾತು ಗಳು ಹಾಗೂ ಪ್ಯಾಡ್ ಮತ್ತು IVF  ಜಾಹೀರಾತು ಗಳು ನಿಜಕ್ಕೂ ಬೇಜಾರು ತರುತ್ತವೆ. ಹಾಗೆಯೇ ಕೆಲವು ರಿಯಾಲಿಟಿ ಷೋಗಳು  ಡಬಲ್ ಮೀನಿಂಗ್ ಬಳಸುವುದು ಹಾಗೂ ಕೆಟ್ಟ ಕೆಟ್ಟ ದೃಶ್ಯ ಗಳನ್ನು ವೈಭವೀಕರಿಸಿ ತೋರಿಸುವುದು ನಿಜಕ್ಕೂ ಅಸಹ್ಯವಾಗುತ್ತಿದೆ.ಇದಕ್ಕೆಲ್ಲ ಕಡಿವಾಣ ಹಾಕಬೇಕಿತ್ತು ಅಲ್ಲವೇ  ? ಕಡಿವಾಣ ಹಾಕುವವರು ಯಾರು? ವನಜ ಮಹಾಲಿಂಗಯ್ಯ                          

“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”ವನಜ ಮಹಾಲಿಂಗಯ್ಯ Read Post »

ಇತರೆ, ಜೀವನ

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ

ಜೀವನ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳನ್ನುಉಳಿಸಿಕೊಳ್ಳಿ” ಈಗ ಆಗಿರತಕ್ಕಂತ ಪ್ರಕೃತಿ ವಿಪತ್ತನ್ನು ನೋಡಿದರೆ ಈ ಜಗತ್ತು ಬೇಗ ನಾಶವಾಗುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲ ಆದರೂ ನಮ್ಮ ಜನಗಳಿಗೆ ಬುದ್ಧಿ ಬರುತ್ತಿಲ್ಲ. ಉದಾಹರಣೆ ಯಾರನ್ನು ಯಾರೂ ಮಾತನಾಡಿಸುತ್ತಿಲ್ಲಾ, ಯಾರ ಬಗ್ಗೆಯೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ,ಸಂಬಂಧಗಳಿಗೆ ಬೆಲೆ ಇಲ್ಲ, ನಾವೇ ಮೊದಲು ಮಾತನಾಡಿಸಿದರೆ ಅವರ ಮುಂದೆ ನಾವು ಸಣ್ಣವರಾಗಿ ಬಿಡುತ್ತೇವೆನು ಅನ್ನುವ ಅಹಂ,ಮತ್ತು ಈ ಮೊಬೈಲ್ಗಳ ಹಾವಳಿ ಮೊಬೈಲ್ ಗಳನ್ನು ಹಿಡಿದು ಮನೆಯಲ್ಲಿರುವ ನಾಲ್ಕು ಜನ ನಾಲ್ಕು ಮೂಲೆಯಲ್ಲಿ ಕುಳಿತು ವೀಕ್ಷಣೆ ಮಾಡುತ್ತಿರುತ್ತಾರೆ. ಮನೆಯಲ್ಲಿಯೇ ಇದ್ದರೂ ಮನೆಯ ಒಳಗೆ ಏನಾದರೂ ಗೊತ್ತಾಗದೆ ಇರುವಂತಹ ಪರಿಸ್ಥಿತಿ. ಎಲ್ಲಿಗೆ ಹೋಗ್ತಾ ಇದೆ ನಮ್ಮ ಕುಟುಂಬಗಳು ಏನಾಗ್ತಾ ಇದೆ ಸಮಾಜದಲ್ಲಿ ಇದನ್ನೆಲ್ಲ ನೋಡಿದ್ರೆ ಈಗಾಗಿರುವಂತಹ ಪ್ರಕೃತಿ ವಿಕೋಪ ಜಗತ್ತನ್ನ ನಾಶ ಮಾಡಿ ಹೊಸದಾಗಿ ಜಗತ್ತು ಸೃಷ್ಟಿಯಾಗಬಹುದೇನೋ? ನಿಜಕ್ಕೂ ಮನುಷ್ಯರಲ್ಲಿ ಯಾವ ಭಾವನೆಗಳು ಇಲ್ಲದಂತಾಗುತ್ತದೆ .ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಒಬ್ಬರು ಮುಂದೆ ಬಂದರೆ ಅವರನ್ನು ಹೇಗೆ ಹಿಂದಕ್ಕೆ ಎಳೆಯಬೇಕೆಂಬುವ ಯೋಚನೆಯಲ್ಲಿಯೇ ಇರುತ್ತಾರೆ.. ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ ದರೋಡೆ ಅತ್ಯಾಚಾರಗಳು ಇವೆಲ್ಲವೂ ಅಂಗೈಯಲ್ಲಿರುವ ಪ್ರಪಂಚದ ಎಲ್ಲಾ ಆಗುಹೋಗುಗಳಲ್ಲದೆ ಕೆಟ್ಟ ಸಂದೇಶಗಳನ್ನು ಹಾಗೂ ಚಿತ್ರಣಗಳನ್ನು ತೋರಿಸುತ್ತಿರುವ ಮೊಬೈಲ್ ಬಳಕೆಯಿಂದ ಆಗುತ್ತಿದೆ ಎಂದರೇ ತಪ್ಪಾಗಲಾರದು. ಮೊಬೈಲ್ ಬಳಕೆ ಮಕ್ಕಳಿಂದ ದೊಡ್ಡವರವರೆಗೂ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಜಾಸ್ತಿ ಬಳಕೆಯಾಗುತ್ತಿದೆ. ಕಾರಣ ಈ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ದೇವರೇ ಕಾಪಾಡಬೇಕು. ಜನರು ಇನ್ನು ಮುಂದೆಯಾದರೂ ತಾವು ಬದುಕಿರುವ ತನಕ ತಮ್ಮವರು ಸಂಬಂಧಿಕರು ಎಂದು ವಿಚಾರಿಸುವುದು, ಮಾತನಾಡಿಸುವುದು, ಹೋಗಿ ಬಂದು ಅವರ ಆರೋಗ್ಯವನ್ನು ವಿಚಾರಿಸುವುದು ಮಾಡುವ ಮನಸ್ಸು ಮಾಡಬೇಕಾಗಿದೆ .ಯಾರ ಮನೆಯಲ್ಲಿಯೇ ಆಗಲಿ ಒಂದು ಮದುವೆ ಗೃಹಪ್ರವೇಶ ಇದ್ದರೆ ವಾಟ್ಸಪ್ ನಲ್ಲಿ ಪತ್ರಿಕೆ ಕಳಿಸಿದರೆ ಸಾಕು ಮನೆಯಲ್ಲಿರುವ ಎಲ್ಲರೂ ಕಾರ್ಯಕ್ರಮಕ್ಕೆ ಹೋಗುತ್ತೇವೆ ಆದರೆ ಯಾರ ಮನೆಯಲ್ಲಿ ಕಷ್ಟ ನೋವು ಸಾವು ಬಂತು  ಎಂದರೆ ಏಕೆ ಬರುವುದಿಲ್ಲ ?ಅದರಲ್ಲೂ ಯಾರಾದರೂ ಸತ್ತರೆಂದು ಸುದ್ದಿ ಬಂದರೆ ಸಾಕು ಯಾರಾದರೂ ಒಬ್ಬರು ಹೋಗಿ ಹಾರ ಹಾಕಿ ಬನ್ನಿ ಎಲ್ಲರೂ ಹೋಗುವುದೇಕೆ ಎಂದು ಹೇಳುವ ಜನಕ್ಕೆ ಸತ್ತ ವ್ಯಕ್ತಿಯ ಮುಖ ಮತ್ತೆ ನೋಡಲಾಗುವುದಿಲ್ಲ ಎನ್ನುವ ಸತ್ಯ ಗೊತ್ತಾಗುವುದಿಲ್ಲ. ನಿಜಕ್ಕೂ ಜಮೀನನ್ನು ಕೊಳ್ಳಬಹುದು ಮನೆಯನ್ನು ಕಟ್ಟಿಸಬಹುದು ಆದರೆ ತಂದೆ ತಾಯಿ ರಕ್ತ ಸಂಬಂಧಗಳನ್ನು ಯಾರು ಖರೀದಿ ಮಾಡಲು ಸಾಧ್ಯವಿಲ್ಲ. ನಿಜಕ್ಕೂ ಇದನ್ನು ಬರೆಯುವಾಗ ಇತ್ತೀಚೆಗೆ ಆಗುತ್ತಿರುವ ಅನಾಹುತವನ್ನು ನೋಡಿ ಅನಾಹುತಗಳಲ್ಲಿ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿರುವ ಒಬ್ಬೊಬ್ಬರೇ ಉಳಿದುಕೊಂಡಿರುವ ಅವರನ್ನು ನೋಡಿದರೆ ನಾವು ಬಟ್ಟೆ ಆಹಾರ ಹಣ ಏನಾದರು ಕೊಡಬಹುದು ಕುಟುಂಬದವರನ್ನು ಕೊಡಲು ಸಾಧ್ಯವೇ ಎಂದು ಯೋಚಿಸುತ್ತಾ ಬರೆದಿರುವೆ. ವನಜ ಮಹಾಲಿಂಗಯ್ಯ ಮಾದಾಪುರ                        

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ Read Post »

ಇತರೆ, ಜೀವನ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ

ವೈವಾಹಿಕ ಸಂಗಾತಿ ವನಜ ಮಹಾಲಿಂಗಯ್ಯ “ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ” “ರಹಸ್ಯ ಪ್ರೀತಿ, ಮದುವೆ ಒಳ್ಳೆಯದಲ್ಲ.”ದುಶ್ಯಂತ ಶಾಕುಂತಳೆಯನ್ನು ಮದುವೆಯಾಗಿರುವುದನ್ನೆ  ಮರೆತುಬಿಟ್ಟಿದ್ದಾನೆ. ಅಲ್ಲಿ ಶಕುಂತಳೆ ಗರ್ಭವತಿಯಾಗಿದ್ದಾಳೆ. ಅವಳನ್ನು ದುಷ್ಯಂತನ ಬಳಿಗೆ ಬಿಟ್ಟುಬರಲು ಕಣ್ವಮಹರ್ಷಿಗಳು ಶಿಷ್ಯ ನೊಂದಿಗೆ ಶಕುಂತಲೆಯನ್ನು ಅರಮನೆಗೆ ಕಳುಹಿಸುತ್ತಾರೆ.ಅಲ್ಲಿ ದುಷ್ಯಂತ ಹಾಗು ಶಿಷ್ಯ ಶಾಂಘ್ರವನಿಗೂ ಮಾತು ಕತೆ ನಡೆಯುತ್ತದೆ. ಶಂಕುತಳೆ ನಿನ್ನ ಹೆಂಡತಿಯೆಂದು ಕಣ್ವರ ಶಿಷ್ಯ ಎಷ್ಟು ಹೇಳಿದರೂ ದುಷ್ಯಂತ ಒಪ್ಪುವುದಿಲ್ಲ. ಆಗ ಶಾಂಘ್ರವನಿಗೆ ಶಕುಂತಳೆಯ ಮೇಲೆ  ಕೋಪ ಬರುತ್ತದೆ.ಕಾರಣ  ಇವಳ ಒಂದು ಕ್ಷಣದ ಅವಿವೇಕದಿಂದ ಎಂತಹ ಅಪಹಾಸ್ಯಕ್ಕೆ ಗುರಿಯಾದಳೆಂದು. ಆಗ ಒಂದು ಮಾತನ್ನು ಹೇಳುತ್ತಾನೆ.ಯಾರಿಗೂ ಗೊತ್ತಿಲ್ಲದಂತೆ ಪ್ರೀತಿಸುವಾಗ ಅಥವಾ ರಹಸ್ಯವಾಗಿ ಮದುವೆಯಾಗುವಾಗ  ಆ ವ್ಯಕ್ತಿಯ ಬಗ್ಗೆ ಚನ್ನಾಗಿಪರೀಕ್ಷೆ ಮಾಡಿರಬೇಕು. ಅವರ ಸ್ವಭಾವ ಸರಿಯಾಗಿ ತಿಳಿಯದಿದ್ದರೆ ಪ್ರೀತಿಯೂ ಸಹ ದ್ವೇಷವಾಗಿ ಮಾರ್ಪಾಡಾಗಲು ತುಂಬಾ ಸಮಯವಾಗುವುದಿಲ್ಲ.ದುಷ್ಯಂತ ಹಾಗು ಶಂಕುತಳೆ ಗುಟ್ಟಾಗಿ ಸೇರಿದವರು. ಅವರಿಬ್ಬರ ಸಂಬಂಧಕ್ಕೆ  ಯಾವ ಸಾಕ್ಷಿಯೂ ಇರಲಿಲ್ಲ. ಇದ್ದ ಒಂದು ಉಂಗುರವೂ ಕಳೆದುಹೋಗಿದೆ. ಅವರಿಬ್ಬರ ಮದುವೆಯಾಗಿದ್ದು ಹಿರಿಯರಿಗೆ ಗೊತ್ತಿದ್ದರೆ ಶಕುಂತಳೆಯನ್ನು ಹೆಂಡತಿಯೆಂದು ದುಷ್ಯಂತ ಒಪ್ಪಿಕೊಳ್ಳಬೇಕಿತ್ತು. ರಹಸ್ಯವಾಗಿ ಮದುವೆಯಾಗಿದ್ದರಿಂದ ಶಕುಂತಳೆಯ ಪೋಷಕರು ಅಸಹಾಯಕರು.   ಅಂದು ಕಾಳಿದಾಸ ಈ ನಾಟಕ ಬರೆದ ಸಮಯ ಈಗಿನ ಸಮಯಕ್ಕೂ ತುಂಬಾ ಅಂತರ ವಿದ್ದರೂ ಪರಿಸ್ಥಿತಿ ಮಾತ್ರವೇ ಬದಲಾಗಿಲ್ಲ. ಇಂದಿನ ಮಕ್ಕಳು ಗುಟ್ಟಾಗಿ ಪ್ರೀತಿಸಿ ಓಡಿಹೋಗಿ ಮದುವೆಯಾಗಿ ಮುಂದಿನ ದಿನಗಳಲ್ಲಿ ಎಡವಟ್ಟಾಗಿ ತುಂಬಾ ನೋವು ಅನುಭವಿಸುತ್ತಾರೆ. ಪಾಲಕರಿಗೂ ಕಷ್ಟ ಕೊಡುತ್ತಾರೆ.ಅದರಲ್ಲೂ ಹೆಚ್ಚು ಕಷ್ಟಕ್ಕೆ ಗುರಿಯಾಗುವವರು ಅಪ್ಪ ಅಮ್ಮ.ಪ್ರಾಯದ ಬಿಸಿಯಲ್ಲಿ  ಪ್ರೀತಿಯ ಗುಂಡಿಗೆ ಬೀಳಲು ಒಂದು ಕ್ಷಣ ಸಾಕು. ಆದರೆ ಒಬ್ಬರನ್ನು ಒಬ್ಬರು ಅರಿತುಕೊಳ್ಳದೇ ಆಕರ್ಷಣೆಗೆಪ್ರೀತಿಸಿದರೆ ಅದು ಹೆಚ್ಚುಕಾಲ ಉಳಿಯವುದು ಅಕ್ಷರಶಃ ಸುಳ್ಳು.  ಯಾವ ವ್ಯಕ್ತಿಯ ಗುಣ ಸರಿಯಾಗಿ ಗೊತ್ತಿರುವುದಿಲ್ಲವೋ ಅಂತಹ ವ್ಯಕ್ತಿಯು ವೈರಿಯಾಗುತ್ತಾನೆ. ಅಂದಾಗಲಿ ಇಂದಾಗಲಿ ಸಂಬಂಧಗಳೇ ಸಾಕ್ಷಿಯನ್ನು ಹೇಳುತ್ತವೆ.  ನಾವಿಬ್ಬರೂ ಮದುವೆಯಾಗಿದ್ದೇವೆ ಎಂದರೆ  ಸಾಕ್ಷಿ ತೋರಿಸಲು ಕೋರ್ಟು ಕೇಳುತ್ತದೆ. ಅಂದು ದುಷ್ಯಂತನು  ಶಕುಂತಳೆಗು ಅದನ್ನೆ ಕೇಳಿದ್ದು.  ಅದಕ್ಕೆ ಗುಟ್ಟಾಗಿ ಮದುವೆ ಮಾಡಿಕೊಂಡು ಹೆತ್ತವರಿಗೂ ಸಂಬಂಧಿಕರಿಗೂ ಅವಮಾನ ಮಾಡಬೇಡಿ. ಜೀವ ಚಿಕ್ಕದು, ಜೀವನ ದೊಡ್ಡದು.  ಎಲ್ಲರ ಒಪ್ಪಿಗೆಯಿಂದ ನಡೆದ ಮದುವೆಗಳಲ್ಲಿ ಏನಾದರೂ ತೊಂದರೆಯಾದರೆ ಹೇಳಲು  ನಿಮ್ಮವರು ಎಲ್ಲರೂ ಇರುತ್ತಾರೆ.ಗುಟ್ಟಾಗಿ ಮದುವೆಯಾಗಿ ಆತ್ಮಹತ್ಯಗೆ ಶರಣಾಗಿ ಹೆತ್ತವರ ಮನಸ್ಸು ನೋಯಿಸಬೇಡಿ. ಅಂದು ದುಷ್ಯಂತ ಶಕುಂತಳೆಯ ಮದುವೆ ಸಾಕ್ಷಿಯಾಗಿದ್ದುದು ಒಂದು ಉಂಗುರ, ಹಾಗು ಕಣ್ವಾಶ್ರಮದಲ್ಲಿದ್ದ ಒಂದು ಜಿಂಕೆ ಮಾತ್ರವೆ.  ಆದರೆ ಉಂಗುರ ಕಳೆದಿತ್ತು .  ಪಾಪ ಜಿಂಕೆ ಸಾಕ್ಷ್ಯ ಯಾರು ಕೇಳುತ್ತಾರೆ?    ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮೈ ಜುಮ್ಮೆನಿಸುತ್ತದೆ. ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ ಹುಡುಗಿಯ  ಕತೆ. ಬೇಡ ಮಕ್ಕಳೆ ಯಾರೂ ಅಂತಹ ತಪ್ಪು ಮಾಡಿ  ಜೀವಕಳೆದುಕೊಳ್ಳಬೇಡಿ. ಮದುವೆಯ ವಿಷಯದಲ್ಲಿ ದುಡುಕಬೇಡಿ.  ಗುಟ್ಟು ಮಾಡಬೇಡಿ. ಹೆತ್ತವರಿಗೆ ಅವರ ಜವಾಬ್ದಾರಿ ಗೊತ್ತಿರುತ್ತದೆ. ವನಜ ಮಹಾಲಿಂಗಯ್ಯಅಧ್ಕಕ್ಷರುವಿಶ್ವವಿನೂತನ ಮಹಿಳಾ ಸಮಾಜ ದಾವಣಗೆರೆ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ Read Post »

ಇತರೆ, ಜೀವನ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ

ಬದುಕಿನ ಸಂಗಾತಿ ಜಯಶ್ರೀ.ಜೆ.ಅಬ್ಬಿಗೇರಿ “ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಸುತ್ತು ಬಳಸಿ ಮತ್ತೆ ಮತ್ತೆ ಸಮಸ್ಯೆಗಳೆಲ್ಲ ನನ್ನ ಪಾಲಿಗೆ ಏಕೆ ಬರುತ್ತಿವೆ? ಉಳಿದವರೆಲ್ಲ ಹಾಯಾಗಿದ್ದಾರೆ ನನಗೆ ಮಾತ್ರ ಹೀಗಾಗುತ್ತಿದೆ. ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತೇವೆ.. ಪ್ರೀತಿ ಪಾತ್ರರು ಮರಣಿಸಿದಾಗ, ಬಹಳಷ್ಟು ಇಷ್ಟ ಪಟ್ಟದ್ದು ಸಿಗದೇ ಇದ್ದಾಗ, ಅಂದುಕೊoಡದ್ದು ಅಂದುಕೊoಡoತೆ ಆಗದೇ ಇದ್ದಾಗ ನನ್ನ ಬದುಕಿನಲ್ಲಿ ದುರಂತಗಳ ಸರಮಾಲೆ ಬೆನ್ನು ಬಿಡದ ಬೇತಾಳನಂತೆ ಬೆನ್ನು ಹತ್ತಿವೆ. ನನಗೇ ಏಕೆ ಹೀಗೆ ಆಗುತ್ತೆ? ಎನ್ನುವ ಪ್ರಶ್ನೆ ತಲೆ ಹೊಕ್ಕು ಕಟ್ಟಿಗೆ ಹುಳು ಕೊರೆಯುವಂತೆ ಕೊರೆಯುತ್ತದೆ. ಪದೇ ಪದೇ ತೊಂದರೆ ಕೊಡುವ, ನಮ್ಮನ್ನು ಏಳ್ಗೆ ಆಗದಂತೆ ತಡೆಯುವ ಈ ಪ್ರಶ್ನೆಯಿಂದ ಬಚಾವಾಗುವುದು ಹೇಗೆ? ಎಂದು ಯೋಚಿಸುತ್ತೇವೆ. ಅಲ್ಲವೇ? ಈ ಕಾಡುವ ಯೋಚನೆಗೆ ಪೂರ್ಣ ವಿರಾಮ ಹಾಕಲು ಸಹಕಾರಿಯಾಗುವ ಅಂಶಗಳತ್ತ ಒಮ್ಮೆ ಗಮನ ಹರಿಸಿ.ಸುತ್ತ ಕಣ್ಣು ಹರಿಸಿ ದುರಂತಗಳು ಸಂಭವಿಸಿದಾಗ, ವಿಷಮ ಗಳಿಗೆಯಲ್ಲಿ ಭವಿಷ್ಯದ ದಾರಿಯೇ ಕಾಣದೇ ಕತ್ತಲೆಯಲ್ಲಿ ಕುಳಿತಾಗ ನನಗೇಕೆ ಹೀಗೆ? ಎನ್ನುವ ಮನಸ್ಥಿತಿಯಿಂದ ಹೊರಬಂದು ನಿಮ್ಮಸುತ್ತ ಮುತ್ತಲಜನ-ಜೀವನದೆಡೆಗೆ ಕಣ್ಣು ಹರಿಸಿ ಇತರರು ನಿಮ್ಮಂತೆ ಸಮಸ್ಯೆಯಲ್ಲಿದ್ದರೂ ಅದನ್ನು ದೊಡ್ಡದಾಗಿಸಿದೇ ನಗುವ ಮೊಗವ ಹೊತ್ತು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಆದ ನೋವಿನ ಕಡೆ ಹೆಚ್ಚು ಗಮನ ಕೊಡದೇ ನೋವುಂಡರೂ ನಗುವ ಪ್ರಯತ್ನ ಮಾಡುತ್ತಾರೆ. ಇತರರ ದುಃಖಕ್ಕೆ ಕಿವಿಗೊಡುವದರಲ್ಲಿ ಸಂತೃಪ್ತಿ ಕಾಣುತ್ತಾರೆ. ‘ನಾನು ಬರಿಗಾಲಲ್ಲಿ ನಡೆಯಬೇಕಿದೆ ನನ್ನ ಬಳಿ ಪಾದರಕ್ಷೆಗಳಿಲ್ಲ ಎಂದು ಕಣ್ಣೀರಿಡುತ್ತಿರುವಾಗ ಕಾಲಿಲ್ಲದವನನ್ನು ಕಂಡೆ ನನ್ನ ನೋವು ನೋವೇ ಅಲ್ಲ ಅನಿಸಿತು. ದೇವರಿಗೆ ಕೃತಜ್ಞನಾಗಿರಬೇಕು ನಾನು.’ ಎಂದೊಮ್ಮೆ ವಿಲಿಯಮ್ ಶೇಕ್ಸ್ಪಿಯರ್ ಹೇಳಿದ ಮಾತು ಎಷ್ಟೊಂದು ಮಾರ್ಮಿಕವಾಗಿದೆ. ದುರಂತವೆoದರೆ ನಾವು ನಮ್ಮ ಸುತ್ತ ರೇಷ್ಮೆ ಹುಳುವಿನಂತೆ  ಗೂಡು ಕಟ್ಟಿಕೊಂಡು ಯಾರೋ ನಮ್ಮನ್ನು ಮೇಲೇಳದಂತೆ ತಡೆಯುತ್ತಿದ್ದಾರೆ ಎಂದು ಗೋಳಿಡುವುದುಕಣ್ಣು ಹೊರನೋಟಗಳನ್ನು ನೋಡಲಿ.  ಅಂತರಗಣ್ಣಿನಿoದ ಪರಾಮರ್ಶಿಸಲಿ. ಆಗ ನಿಮಗೆ ಬಂದ ಸಂಕಟ ಏನೂ ಅಲ್ಲವೇ ಅಲ್ಲ ನನಗಿಂತ ಕಷ್ಟದಲ್ಲಿರುವವರು ತುಂಬಾ ಜನರಿದ್ದಾರೆ. ನನಗೆ ದೇವರು  ಅಂಥ ದುಸ್ಥಿತಿ ಬರದಂತೆ ಕಾಪಾಡಿದ್ದಾನೆ ಎಂದೆನಿಸುವುದು.ದುಃಖದಿoದ ಹೊರಬಂದು ಅದೇ ಅನುಭವ ಪಡೆದ ಇತರರ ಬಗ್ಗೆ ಯೋಚಿಸಿ. ಅವರೊಂದಿಗೆ ಮಾತನಾಡಿ ಆಗ ಅವರ ಬಗೆಗೆ ನಿಮಗೆ ಅನುಕಂಪ ತಾದ್ಯಾತ್ಮತೆ ಮೂಡುತ್ತದೆ.ನೀವಿನ್ನೂ ಅನುಕೂಲಕರ ಪರಿಸ್ಥಿತಿಯಲ್ಲಿರುವಿರಿ ಎಂದೆನ್ನಿಸುವುದು.   ದುರ್ಘಟನೆ ಆಹ್ವಾನಿಸದಿರಿ ಎಲ್ಲ ದುರಂತಗಳು  ಒಮ್ಮಿಂದೊಮ್ಮೆಲೇ ಧುತ್ತನೇ ಘಟಿಸುವುದಿಲ್ಲ. ಕೆಲವೊಂದು ನಮ್ಮ ಸ್ವಯಂ ಕೃತ ತಪ್ಪುಗಳಿಂದ ಉದಾಸೀನತೆಯಿಂದ ಘಟಿಸುತ್ತವೆ. ಅವುಗಳನ್ನು ನಾವೇ ಕೈ ಹಿಡಿದು ತಂದು ನಮ್ಮ ಬಾಳಲ್ಲಿ ಮಣೆ ಹಾಕಿ ಕೂಡ್ರಿಸಿ ಕೊಳ್ಳುತ್ತೇವೆ.ನಮಗರಿವಿಲ್ಲದಂತೆ ಗೆದ್ದಲು ಹುಳುವಿನಂತೆ ನಮ್ಮ ಅಸ್ತಿತ್ವವನ್ನು ಇಲ್ಲದಂತೆ ಮಾಡಲು ದಿನವೂ ಕಾರ್ಯನಿರತಆಗಿರುತ್ತವೆ ತುರ್ತು ಜರೂರು ಮಹತ್ವದ ವಿಷಯಗಳನ್ನು ಪರಿಗಣಿಸಿ ಕ್ರಿಯಾಶೀಲರಾದರೆ, ನಡೆಯುವ ದುರ್ಘಟನೆಗಳ ಅವಕಾಶದ ಬಾಗಿಲು ಮುಚ್ಚಿದರೆ ಸದಾ ಕಾಲಕ್ಕೂ ಮುಚ್ಚಿ ಹೋಗುತ್ತವೆ. ಇನ್ನು ನಿಮ್ಮ ನಿಯಂತ್ರಣದಾಚೆಗೆ ನಡೆವ ದುರಂತಗಳಿಗೆ ಪ್ರತಿಯಾಗಿ  ಸಹನ ಶಕ್ತಿಯಿಂದ ದಿಟ್ಟತನದಿಂದ ಪ್ರತಿಕ್ರಿಯಿಸಿದರೆ ಸಮಸ್ಯೆ ಉಲ್ಬಣಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.ಏಳು ಬಾರಿ ಟೂರ್ ಡೇ ಫ್ರಾನ್ಸ್ ಗೆದ್ದ  ಲ್ಯಾನ್ಸ್ ಆರ್ಮಸ್ಟಾ ಹೀಗೆ ಹೇಳುತ್ತಾರೆ.‘ಬಹಳಷ್ಟು ಜನರು ಕೊನೆಗೆ ಇಟ್ಟುಕೊಳ್ಳುವ ಶೇಕಡಾ ಒಂದು ಮೀಸಲು ಶಕ್ತಿಯು ಕ್ರೀಡಾಪಟು ಬಳಸಲು ದಿಟ್ಟತನ ತೋರುವ ಹೆಚ್ಚುವರಿ ಶಕ್ತಿಯಾಗಿದೆ.’ಈ ಹೇಳಿಕೆಯಂತೆ  ನಮ್ಮ ದಿಟ್ಟತನದಿಂದ ತೋರುವ ಹೆಚ್ಚುವರಿ ಶಕ್ತಿಯ ಸದುಪಯೋಗಪಡಿಸಿಕೊಳ್ಳಿ. ಸಹಜವಾಗಿರಿ ಸದಾ ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಕೈ ಬಿಡಬೇಕು. ಈ ಹೋಲಿಕೆ ಇತರರಿಗಿಂತ ಕೆಳ ಮಟ್ಟದಲ್ಲಿದ್ದೇನೆ ಎಂದು ನಿತ್ರಾಣಗೊಳಿಸುವ ಕೀಳರಿಮೆ ಇಲ್ಲವೇ ಮೇಲರಿಮೆಯ ಅಹಂಕಾರವನ್ನು ಹುಟ್ಟು ಹಾಕುತ್ತದೆ. ನಿಮ್ಮ ನಿಜ ಸ್ವರೂಪ ನೀಡದ ಕಲ್ಪಿತ ಭ್ರಮಾಲೋಕವು ಇಲ್ಲದ ತೊಂದರೆಗಳನ್ನು ತಂದು ನಿಮ್ಮ ಬದುಕಿನ ಮಡಿಲಲ್ಲಿ ಚೆಲ್ಲುತ್ತದೆ. ನಿಜದಲ್ಲಿ ತಾನು ತಾನಾಗದ ಹುಸಿ ಲೋಕದಲ್ಲಿ ಸಮಸ್ಯೆಗಳ ಜಾಲವನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಮಾಡುತ್ತದೆ. ಕೆಲವೊಮ್ಮೆ ನುಡಿಯಲ್ಲಿ ಎಚ್ಚೆತ್ತುಕೊಳ್ಳುತ್ತೇವೆ. ನಡೆಯಲ್ಲಿ ತಪ್ಪುತ್ತೇವೆ. ಜ್ಞಾನ ಕ್ರಿಯೆಗಳು ಸಮನಾಗಿರಿಸಿ ನಡೆಯುವುದು ಹಗ್ಗದ ಮೇಲಿನ ನಡಿಗೆ ಇದ್ದಂತೆ. ಹೂದೋಟದಲ್ಲಿ ಮೈ ಅರಳಿಸಿ ನಿಂತ ಹೂಗಳು ತನಗಿಂತ ದೊಡ್ಡ ಇಲ್ಲ ಚಿಕ್ಕ ಹೂಗಳನ್ನು ನೋಡಿ ಕಣ್ಣ ಹನಿ ಸುರಿಸುವುದಿಲ್ಲ. ತನ್ನಷ್ಟಕ್ಕೆ ತಾನೆ ಬಿಮ್ಮನೇ ಅರಳಿ ಗಾಳಿ ಬೀಸಿದಲ್ಲೆಲ್ಲ ತನ್ನ ಕಂಪು ಸೂಸುವವು. ಬಿರಿದ ಕುಸುಮಗಳಂತೆ ಸಹಜವಾಗಿರಿ. ಛಲ ಬಲ ತುಂಬಿಕೊಳ್ಳಿ ಅಮಾನುಷ, ಭೀಕರ, ಹೃದಯ ವಿದ್ರಾವಕ, ಘೋರ ಹತ್ಯಾಕಾಂಡಗಳಲ್ಲಿ ಸಾವಿನ ಬಾಗಿಲು ತಟ್ಟಿ ಬಂದವರು ಸಮರ್ಥವಾಗಿ ಬದುಕಿ ತೋರಿದವರು  ಸಾಧನೆಯ ಉತ್ತುಂಗಕ್ಕೆ ಏರಿದವರು ಹಸಿರಾದ ಪ್ರೀತಿಯನ್ನು ಇತರರ ಬಾಳಲ್ಲಿ ತಂದವರ ಪಟ್ಟಿಯೇ ಇದೆ. ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಇಂಥ ವೀರ ಮಹನೀಯರ ಜೀವನ ಚರಿತ್ರೆಯನ್ನೊಮ್ಮೆ ಓದಿ. ನಿಮ್ಮಲ್ಲೂ ಛಲ ಬಲ ತುಂಬಿಕೊoಡರೆ  ಶೌರ್ಯದ ಖಣಿ ನೀವಾಗುವಿರಿ.   ಕವಿ ಕೆ ಎಸ್ ನಿಸ್ಸಾರ ಅಹ್ಮದ್ ರವರು  ‘ಹುದ್ದೆ ಮುದ್ದೆ ನಿದ್ದೆ ಈ ಬದುಕು ಇಷ್ಟೇ ಪೆದ್ದೆ?ಎಂಬ ಲೇಖನದಲ್ಲಿ ‘ದಿನವಹಿಯ ಊಟ ಬಟ್ಟೆಗಳ ಅಗತ್ಯಗಳನ್ನು ದಾಟದ, ಉಸಿರಾಡಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯ ಪುನರಾವರ್ತಿತ ಯಾಂತ್ರಿಕ ಚಟುವಟಿಕೆಯೇ ಅನೇಕಾನೇಕರ ಪಾಲಿಗೆ ಬಾಳ್ವೆ ಎನ್ನಿಸುತ್ತಿದೆ.’ಎಂದು ವಿಷಾದದಿಂದ ಬರೆದಿದ್ದಾರೆ.ಜೀವನದ ಪ್ರತಿ ಸಂಕುಚಿತ ದೃಷ್ಟಿಕೋನ ತೊರೆಯಿರಿ ಎಂಬ ಸಂದೇಶ ನೀಡದ್ದಾರೆ. ಪರಿಹಾರದತ್ತ ಗಮನ ಹರಿಸಿಬಂದ ಸಂಕಟದತ್ತ ನೋಡುತ್ತ ಕುಳಿತರೆ ಅದು ದಿನೇ ದಿನೇ ದೊಡ್ಡದೆನಿಸತೊಡುತ್ತದೆ. ಬೃಹದಾಕಾರವಾಗಿ ಬೆಳೆದು ನಮ್ಮನ್ನೇ ನುಂಗಿ ಬಿಡುವುದೇನೋ ಎಂಬ ಚಿಂತೆ ಆವರಿಸಿಕೊಳ್ಳುತ್ತದೆ. ಸಮಸ್ಯೆಯನ್ನು ಎಲ್ಲರ ಮುಂದೆ ಹೇಳುತ್ತ ತಿರುಗ ಬೇಡಿ. ಏಕೆಂದರೆ ಇಲ್ಲಿ ನಿಮ್ಮ ದುಃಖಗಳ ಪ್ರಚಾರಕ್ಕೆ ಜಾಗವಿಲ್ಲ. ಅದಲ್ಲದೇ ಸಮಸ್ಯೆಗಳಿಲ್ಲದವರು ಯಾರೂ ಇಲ್ಲ. ಸಮಸ್ಯೆಯ ಮೂಲ ಹುಡುಕಿದರೆ ಪರಿಹಾರ ತನ್ನಿಂದ ತಾನೇ ಹೊಳೆಯುತ್ತದೆ.ಒಮ್ಮೊಮ್ಮೆ ಅಚಾತುರ್ಯದಿಂದ ಅಲಕ್ಷö್ಯದಿಂದ ಸಮಸ್ಯೆ ಬೆಳೆದು ನಿಲ್ಲುತ್ತದೆ ಆಗ ಅನುಭವಿಕರನ್ನು ಜ್ಞಾನಿಗಳನ್ನು ಸಂಪರ್ಕಿಸಿದರೆ ಅಡ್ಡಗೋಡೆಯಾಗಿ ನಿಂತಿದ್ದ ನೋವು ತಾನೇ ಮಂಜಿನoತೆ ಕರಗುವುದು.ಕೆಲವೊಂದು ತೊಂದರೆಗಳಿಗೆ ಕಾಲವೇ ಉತ್ತರಿಸುವುದು ಕಾಲಕ್ಕಿಂತ ಉತ್ತಮ ಆರೈಕೆ ಮತ್ತೊಂದಿಲ್ಲ. ದೊಡ್ಡ ದೊಡ್ಡ ಅವಘಡಗಳಲ್ಲಿ ಕುಟುಂಬ ಸದಸ್ಯರನ್ನು  ಕಳೆದುಕೊಂಡವರು ಬೆಳಕಿನ ಆಶಾ ಕಿರಣ ಕಾಣದವರು ಜೀವನವೇ ಬೇಡ ಅಂದುಕೊoಡವರು ಬದುಕು ದುಸ್ತರ ಎಂದುಕೊoಡವರು  ಕಾಲ ಉರುಳಿದಂತೆ ಜೀವನ ಪ್ರೀತಿಗೆ ಸಿಲುಕಿ ಸಂತಸದ ಜೀವನ ಸಾಗಿಸುವುದನ್ನು ಆದರ್ಶವಾಗಿಸಿಕೊಳ್ಳಿ.  ದುಃಖ ದುಮ್ಮಾನ ಅವಮಾನಗಳ ಸರಣಿಯನ್ನೇ ಸವಾಲಾಗಿ ಸ್ವೀಕರಿಸಿ ಬದುಕಿನ ಹೋರಾಟವನ್ನು ಹೇಗೆ ಜಯಸಬೇಕೆಂಬುದನ್ನು ತೋರಿದ ಅಂಬೇಡ್ಕರ್ ಅಬ್ರಾಹಾಂ ಲಿಂಕನ್‌ರoಥವರ ದೊಡ್ಡ ಕೀರ್ತಿಗೆ ಪಾತ್ರರಾದ ಅದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ ನಿಮ್ಮ ವಿಚಾರ ವೈಖರಿಯನ್ನು ಬದಲಿಸಿದರೆ ಎಂದೆoದಿಗೂ ವ್ಯಥೆಯಾಗಿ ಉಳಿಯುವ ದುರಂತವೂ ಪ್ರಬಲರನ್ನಾಗಿಸುವ ಅಚ್ಚರಿ ಬದಲಾವಣೆಯನ್ನು ನೀವೇ ಗಮನಿಸಬಹುದು. ಕೊನೆ ಹನಿಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ ಮನೋಬಲವನ್ನು ಬಾನಿಗೆ ಹಾರಿಸೋಣ. ಬದುಕನ್ನು ಶ್ರೇಷ್ಠ ಪಥಕ್ಕೆ ಹೊರಳಿಸೋಣ.   ಜಯಶ್ರೀ.ಜೆ.ಅಬ್ಬಿಗೇರಿ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ Read Post »

You cannot copy content of this page

Scroll to Top