ಅಂಕಣ ಬರಹ ಸಂತೆಯ ಗೌಜು ತರೀಕೆರೆಯಲ್ಲಿ ಸಂತೆ ಸೇರುವ ಜಾಗಕ್ಕೆ ಸಮೀಪದಲ್ಲಿ ನಮ್ಮ ಮನೆಯಿತ್ತು. ಪ್ರತಿ ಶುಕ್ರವಾರ ಎಬ್ಬಿಸುತ್ತಿದ್ದುದು ಮಸೀದಿಯ ಬಾಂಗಲ್ಲ, ಗುಡಿಯ ಸುಪ್ರಭಾತವಲ್ಲ, ಸಂತೆಗೌಜು. ಇಂಪಾದ ಆ ಗುಜುಗುಜು ನಾದ ಭಾವಕೋಶದಲ್ಲಿ ಈಗಲೂ ಉಳಿದಿದೆ. ಎಂತಲೇ ನನಗೆ ‘ಸಂತೆಯೊಳಗೊಂದು ಮನೆಯ ಮಾಡಿ’ ವಚನ ಓದುವಾಗ ಕೆಣಕಿದಂತಾಗುತ್ತದೆ. ಅಕ್ಕ ‘ಶಬ್ದಕ್ಕೆ ನಾಚಿದೊಡೆ ಎಂತಯ್ಯಾ?’ ಎಂದು ಪ್ರಶ್ನಿಸುತ್ತಾಳೆ. ಉತ್ತರ ಪ್ರಶ್ನೆಯೊಳಗೇ ಇದೆ-ನಾವು ಬದುಕುವ ಲೋಕಪರಿಸರ ಸಂತೆಯಂತಿದೆ; ಅಲ್ಲಿ ಸದ್ದಿರುವುದು ಸಹಜವೆಂದು. ಹಾಗಾದರೆ ಈ ಕಿರಿಕಿರಿಗೆ ಪರಿಹಾರ, ಸದ್ದಿರದ ಕಡೆ ಮನೆ ಮಾಡುವುದೊ ಅಥವಾ ಸದ್ದನ್ನೇ ಇಲ್ಲವಾಗಿಸುವುದೊ? ಅಕ್ಕನ ಪ್ರಕಾರ ಇವೆರಡೂ ಅಲ್ಲ. ಅದನ್ನು ಸಹಿಸಿಕೊಂಡೇ ಬದುಕುವುದು. `ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳು ಬಂದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂಬ ತತ್ವವು ಒಂದರ್ಥದಲ್ಲಿ ವಾಸ್ತವವಾದಿ. ಅನಗತ್ಯ ಆದರ್ಶವಾದಿ ಆಗಿರಬಾರದು, ಸ್ಥಿತಪ್ರಜ್ಞರಾಗಿರಬೇಕು ಎಂಬ ದನಿಯಿಲ್ಲಿದೆ. ವೈಯಕ್ತಿಕವಾಗಿ ಅಕ್ಕನ ಬಾಳೂ ಈ ನಿಲುವಿಗೆ ಕಾರಣವಿದ್ದೀತು. ಆಕೆ ಮನೆ ಗಂಡ ಸಂಸಾರ ಊರು ಬಿಟ್ಟು, ಒಂಟಿಯಾಗಿ ದೂರದ ಶ್ರೀಶೈಲಕ್ಕೆ ಅಲೌಕಿಕ ಗಂಡ ಮಲ್ಲಿಕಾರ್ಜುನನ್ನು ಹುಡುಕಿಕೊಂಡು ನಡೆದವಳು; ಬತ್ತಲೆಯಾಗದೆ ಬಯಲು ಸಿಕ್ಕದು ಎಂದು ಕೇಶಾಂಬರೆಯಾದವಳು; ಆಕೆ ಹಾದಿಯಲ್ಲಿ ಎದುರಿಸಿರಬಹುದಾದ ಕಿರುಕುಳವನ್ನು ಸುಲಭವಾಗಿ ಊಹಿಸಬಹುದು. ‘ಸಂತೆ’ಯನ್ನು ಒಂದು ರೂಪಕವಾಗಿ ನೋಡುತ್ತಿದ್ದರೆ, ಮೂರು ಆಯಾಮ ಹೊಳೆಯುತ್ತವೆ. ಒಂದು: ನಾವು ಸುತ್ತಲ ಪರಿಸರವನ್ನು ಬದಲಿಸಲು ಸಾಧ್ಯವಿಲ್ಲ. ಹೊಂದಿಕೊಂಡು ಅದರೊಟ್ಟಿಗೆ ಬದುಕಬೇಕು ಎಂಬ ಅಕ್ಕನ ಅರ್ಥ. ಬದುಕುವ ಪರಿಸರ ಚೆನ್ನಾಗಿದ್ದಾಗ ಈ ಯಥಾರ್ಥವಾದ ಸಮಸ್ಯೆಯಲ್ಲ. ಪರಿಸರ ಅಸಹನೀಯ ಎನಿಸುವಷ್ಟು ಕೆಟ್ಟಿದ್ದರೆ? ಹೊಂದಾಣಿಸಿ ಬದುಕಬೇಕು ಎನ್ನುವುದು ಬದಲಾವಣೆಯ ಮತ್ತು ಪರ್ಯಾಯ ಹುಡುಕಾಟದ ಸಾಧ್ಯತೆಯನ್ನೇ ನಿರಾಕರಿಸಿಕೊಂಡಂತೆ. ಈ ನಿಲುವನ್ನು ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುತ್ತಿದ್ದ ಬಸವಣ್ಣ ತಾಳಿದ್ದರೆ ಏನಾಗಿರುತ್ತಿತ್ತು? ಬಹುಶಃ ಶರಣ ಚಳುವಳಿಯೇ ಇರುತ್ತಿರಲಿಲ್ಲ. ಎರಡು: ಇದು ರೋಮಿನಲ್ಲಿರುವಾಗ ರೋಮನನಂತಿರು ಎಂಬ ಬದುಕುವ ಉಪಾಯದ ಅರ್ಥ. ಈ ತಂತ್ರಗಾರಿಕೆ ಅವಕಾಶವಾದಿತನಕ್ಕೆ ಹಾದಿಕೊಡಬಲ್ಲ ಸಾಧ್ಯತೆಯೂ ಇದೆ. ನನ್ನ ನಿಲುವನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಿಸಲಾರೆ ಎಂಬ ಜಿಗುಟುತನಕ್ಕೆ ಬದಲು, ಲೋಕಸ್ವಭಾವವೇ ಹೀಗಿದೆ, ನಾನೊಬ್ಬ ಚಡಪಡಿಸಿ ಏನು ಮಾಡಲಿ ಎಂಬ ರಾಜಿಯತ್ತ ಇದು ಕರೆದೊಯ್ಯಬಹುದು. ಮೂರು: ಲೋಕರಚನೆಯಲ್ಲಿ ಕೆಲವು ಮೂಲಭೂತ ಸಂಗತಿಗಳನ್ನು ಬದಲಿಸಲಾಗದು. ಉದಾ: ಮುಪ್ಪು, ಸಾವು. ಮನುಷ್ಯರಾಗಿ ಜನಿಸಿದ ಮೇಲೆ ಇವನ್ನು ಮುಖಾಬಿಲೆ ಮಾಡಲೇಬೇಕು ಎಂಬರ್ಥ. ಇದು ಈ ಕಠೋರ ವಾಸ್ತವಕ್ಕೆ ಒಮ್ಮೆ ಡಿಕ್ಕಿ ಹೊಡೆಯಲೇಬೇಕಿದ್ದು, ಹೋರಾಟದ ಬದುಕು ವ್ಯರ್ಥ ಎಂಬ ನಿರಾಶೆಯನ್ನೂ ಹುಟ್ಟಿಸಬಹುದು. ಕೆಲವರಲ್ಲಿ ಕಂತೆ ಒಗೆವ ಮುನ್ನ ಅರ್ಥಪೂರ್ಣವಾಗಿ ಬದುಕಬೇಕು ಎಂಬ ಛಲವಾಗಿ ಪಲ್ಲಟವಾಗಲೂಬಹುದು. ಸಾವಿನ ಘೋರಸತ್ಯದ ಧ್ಯಾನವೂ ಇತ್ಯಾತ್ಮಕ ಪರಿವರ್ತನೆಗಳನ್ನು ಕೆಲವರ ಬದುಕಿನಲ್ಲಿ ತಂದಿರುವುದುಂಟು. ಪರಿಸ್ಥಿತಿಗೆ ಹೊಂದಿಕೊಂಡು ಹೋದವರು ಜೀವನದಲ್ಲಿ ದೊಡ್ಡದನ್ನೇನೂ ಸಾಧಿಸಿಲ್ಲ. ಲೋಕ ಬದಲಿಸಬೇಕೆಂದಿದ್ದ ಆದರ್ಶವಾದಿಗಳು ಸೋತಿರಬಹುದು. ಆದರೆ ಅವರ ಸೆಣಸಾಟ-ಸೋಲು ಲೋಕದೆದುರು ಆದರ್ಶವಾಗಿ ನಿಂತಿದೆ ತಾನೇ? ಎಷ್ಟೆಲ್ಲ ಚಿಂತಿಸಿದರೂ ‘ಸಂತೆ’ಗಿರುವ ಅನಿಷ್ಟಾರ್ಥವನ್ನು ಒಪ್ಪಲು ಕಷ್ಟವಾಗುತ್ತಿದೆ. ಚಿಕ್ಕಂದಿನಲ್ಲಿ ಈಗ ಬಂದೆ ಎಂದು ಲೆಕ್ಕಕೊಟ್ಟು ಹೊರ ಹೋದ ಮೇಷ್ಟರು ಅರ್ಧ ತಾಸಾದರೂ ಬಾರದಿದ್ದಾಗ, ನಾವು ಅಭೂತಪೂರ್ವ ಗಲಭೆ ಹುಟ್ಟುಹಾಕುತ್ತಿದ್ದೆವು. ಮೇಷ್ಟರು ಓಡಿ ಬಂದವರೇ ‘ಲೋಫರ್‍ಗಳಾ, ಇದೇನು ಸ್ಕೂಲೊ ಮೀನುಸಂತೆಯೋ’ ಎಂದು ಅಬ್ಬರಿಸುತ್ತಿದ್ದರು. ಪಕ್ಕದ ಕ್ಲಾಸಿನಲ್ಲಿದ್ದ ಮನೋರಮಾ ಮೇಡಂ ಜತೆ ನಡೆಯುತ್ತಿದ್ದ ಮುದ್ದಣ ಸಲ್ಲಾಪವನ್ನು ಅರ್ಧಕ್ಕೆ ನಿಲ್ಲಿಸಿ ಧಾವಿಸಿದಾಗಲಂತೂ ಅವರಿಗೆ ಪ್ರಚಂಡ ಸಿಟ್ಟು. ‘ಥೂ ಸಂತೆ ನನ್ನಮಕ್ಕಳಾ’ ಎಂದು ಹರಸುತ್ತಿದ್ದರು. ಅಪ್ಪ ಕೂಡ ಮನೆಯ ವಸ್ತುಗಳು ಅಲ್ಲಲ್ಲೇ ಬಿದ್ದುದನ್ನು ಕಂಡಾಗ ‘ಏನೇ! ಮನೇನ ಸಂತೆ ಮಾಡಿದಿಯಲ್ಲೇ’ ಎಂದು ಅಮ್ಮನಿಗೆ ಚುಚ್ಚುತ್ತಿದ್ದ. ಕರಾವಳಿಯ ಮಿತ್ರರೊಬ್ಬರು ತಮಗಾಗದವರ ಸುದ್ದಿ ಬಂದಾಗ ‘ಛೀ! ಅದೊಂದು ಸಂತೆ’ ಎನ್ನುತ್ತಿದ್ದರು. ‘ಚಿಂತಿಲ್ಲದೋಳಿಗೆ ಸಂತೇಲಿ ನಿದ್ದೆ ಬಂತಂತೆ’- ಗಾದೆಯಲ್ಲೂ ಸಂತೆ ಬಗ್ಗೆ ಸದಭಿಪ್ರಾಯವಿಲ್ಲ. ಅರಾಜಕತೆ, ಏಕಾಂತಿಗಳಿಗೆ ಸಲ್ಲದ ಸ್ಥಳ ಎಂಬರ್ಥವೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಇದೇ ‘ಸಂತೆ’, ಬೆಳೆದದ್ದನ್ನೊ ಸಾಕಿದ್ದನ್ನೊ ಮಾರುವ ರೈತರ ಮತ್ತು ಪಶುಗಾಹಿಗಳ ಅಥವಾ ತಮ್ಮಲ್ಲಿಲ್ಲದ ವಸ್ತು ಖರೀದಿಸಲು ಹೋಗುವ ಗಿರಾಕಿಗಳ ಪಾಲಿಗೆ’ ಅನಿಷ್ಟವಲ್ಲ. ಬಟವಾಡೆ ಮಾಡಿಕೊಂಡ ಕೂಲಿಯವರು ಸಂತೆದಿನ ಖುಶಿಪಡುತ್ತಾರೆ. ಸಂತೆಗೆ ಬಂದವರು ಕೇವಲ ಮಾರು-ಕೊಳ್ಳು ಮಾಡುವುದಿಲ್ಲ. ಮಸಾಲೆದೋಸೆ ತಿನ್ನುತ್ತಾರೆ; ಸಿನಿಮಾ ನೋಡುತ್ತಾರೆ; ಕದ್ದು ಪ್ರೇಮಿಯನ್ನು ಭೇಟಿಸುತ್ತಾರೆ; ಪರಿಚಿತರು ಸಿಕ್ಕರೆ ಕಷ್ಟ ಸುಖ ಹಂಚಿಕೊಳ್ಳುತ್ತಾರೆ; ಹುರಿದ ಮೀನು ನಂಚಿಕೊಂಡು ಕಳ್ಳು ಕುಡಿಯುತ್ತಾರೆ. ಮನೆಗೆ ಹೋಗುವಾಗ ಮಕ್ಕಳಿಗೆ ಪುರಿ, ಬಟ್ಟೆಬರೆ ಖರೀದಿಸುತ್ತಾರೆ. ನಮಗಂತೂ ಶುಕ್ರವಾರ ಸಂತೆಯ ಸಂಜೆ ಮಂಡಕ್ಕಿ ಕಾರ ಕಲಸಿಕೊಂಡು ನೀರುಳ್ಳಿ ತುಂಡಿನೊಡನೆ ತಿಂದು, ಮೇಲೆ ಟೀ ಇಳಿಸುವುದು ಹಬ್ಬವಾಗಿತ್ತು. ಉರುಸು ಜಾತ್ರೆಗಳೂ ಒಂದರ್ಥದಲ್ಲಿ ಧಾರ್ಮಿಕ ಆಯಾಮವಿರುವ ಸಂತೆಗಳು ತಾನೆ? ಜನಜಂಗುಳಿಯೇ ಅಲ್ಲಿನ ವಿಶಿಷ್ಟತೆ ಮತ್ತು ಸಂಭ್ರಮಕ್ಕೆ ಕಾರಣ. ಸಂತೆಯಿಲ್ಲದ ದಿನಗಳಲ್ಲಿ ಖಾಲಿಅಂಗಡಿ, ನಿಂತಕಂಬ, ಜನರಿಲ್ಲದ ಕಟ್ಟೆಗಳು ಮದುವೆ ಮುಗಿದ ಚಪ್ಪರವನ್ನೊ ಹೆಣದ ಮುಖವನ್ನೊ ನೋಡಿದಂತೆ ನಿರಾಶಾಭಾವ ಕವಿಸುತ್ತವೆ; ಹಾರುಹೊಡೆದ ಮನೆಯಂತೆ ಬಿಕೊ ಎನ್ನುತ್ತಿದ್ದ ಶೆಡ್ಡುಗಳೆಲ್ಲ, ಸಂತೆದಿನ ದವಸ ಹಣ್ಣು ತರಕಾರಿ ತಿಂಡಿ ಜೋಡಿಸಿಕೊಂಡಾಗ ಹರೆಯದವರಂತೆ ಕಂಗೊಳಿಸುತ್ತವೆ. ಸುತ್ತಲಿನ ಮೂವತ್ತು ಹಳ್ಳಿಯ ಜನ ಬರುವ ನಮ್ಮೂರ ಸಂತೆ, ಬೆಳಗಿನ ಜಾವದಿಂದಲೇ ಸಂಚಲನ ಪಡೆದುಕೊಳ್ಳುತ್ತಿತ್ತು. ತಿಂಡಿ ಅಂಗಡಿ ಹಾಕುವುದು; ವರ್ಣರಂಜಿತ ಗ್ಲಾಸುಗಳಲ್ಲಿ ಶರಬತ್ತು ಜೋಡಿಸುವುದು; ಹಾವಾಡಿಗರು ಆಟ ಹೂಡುವುದು; ರೈತರು ತರಕಾರಿ ಚೀಲಬಿಚ್ಚಿ ನಿಂತು ಗಿರಾಕಿಗಳಿಗೆ ಕಾತರದಿ ಕಾಯುವುದು; ಹಣೆತುಂಬ ಭಂಡಾರ ಲೇಪಿಸಿಕೊಂಡು ಗಂಟೆ ಬಾರಿಸಿಕೊಂಡು ಬಾಯಲ್ಲಿ ಜಾಕುವನ್ನು ಕಚ್ಚಿ, ಚಾಟಿಯಲ್ಲಿ ಬಾರಿಸಿಕೊಳ್ಳುತ್ತ ಊರಮಾರಿಯವನು ತಟ್ಟೆಹಿಡಿದು ಭಿಕ್ಷೆ ಬೇಡುವುದು; ಹಣ್ಣಿನವ ಸೀಳಿದ ಬನಾಸ್ಪತ್ರಿ ಹೋಳನ್ನು `ಹ್ಞಾ! ಇಲ್ಲಿ ಸಕ್ರೇರಿ ಸಕ್ರೆ’ ಎಂದು ಬಾಯಿ ಮುಂದೆ ಹಿಡಿಯುವುದು; ಕೊಳಕಾದ ಪಟಾಪಟಿ ಲುಂಗಿಯುಟ್ಟ ಮಲೆಯಾಳಿ ಕಾಕಾ, `ಹರೀರ ಹರೀರಾ’ ಎನ್ನುತ್ತ ಕೆಂಡದ ಮೇಲಿಟ್ಟ ಕೆಟಲಿನಲ್ಲಿ ಸಿಹಿಗಂಜಿ ತುಂಬಿಕೊಂಡು ಸುತ್ತುವುದು; ಅಜ್ಜಿಯೊಂದು ಕುದಿವ ಎಣ್ಣೆಯಲ್ಲಿ ನಡುಗುವ ಕೈಯಿಂದ ಕಡಲೆಹಿಟ್ಟನ್ನು ಇಳಿಬಿಟ್ಟು ಹೊಂಬಣ್ಣಕ್ಕೆ ತಿರುಗಿದ ಅತ್ತಿಕಾಯನ್ನು ಜರಡಿಯಿಂದ ಬಾಚಿ ಪುಟ್ಟಿಗೆ ಹಾಕುವುದು-ಒಂದೇ ಎರಡೇ. ಕೊಳ್ಳುವವರಿಗೂ ಮಾರುವವರಿಗೂ ನಡೆಯುವ ಚೌಕಾಸಿಯಾಟ ನಿಜಕ್ಕೂ ನಾಟಕೀಯ. ನಿನ್ನ ಮಾಲು ಇಷ್ಟವಿಲ್ಲ ಎಂಬ ಭಾವದಲ್ಲಿ ಮುನ್ನಡೆಯುವ ಗಿರಾಕಿ. ಬೇಡವಾದರೆ ಹೋಗು ಎಂದು ನಟಿಸುತ್ತ ಅವನನ್ನು ಸೆಳೆಯಲು ಹೊಸ ಕುಣಿಕೆಯೆಸೆದು ಬಂಧಿಸುವ ವರ್ತಕ; ‘ಸರಿಯಾಗಿ ಅಳೆಯಮ್ಮ’ ಎಂದು ಅಸಹನೆ ತೋರುವ ಗಿರಾಕಿ. ‘ಹ್ಞೂಂ ಕಣಪ್ಪ, ಅದರ ಮ್ಯಾಲೆ ನಾನೇ ಕುತ್ಕತೀನಿ’ ಎಂದು ಎದುರೇಟು ಕೊಡುವ ಮಾರುಗಾರ್ತಿ; ತೀರ ಕಡಿಮೆ ಬೆಲೆಗೆ ಕೇಳುವ ಗಿರಾಕಿ. ‘ಬ್ಯಾಡ. ಹಂಗೇ ತಗಂಡು ಹೋಗ್ ಬಿಡು ಅತ್ಲಾಗೆ’ ಎಂದು ವ್ಯಂಗ್ಯದ ಬಾಣವೆಸೆವ ವ್ಯಾಪಾರಿ; ಮಾವಿನಹಣ್ಣಿನ ಬುಟ್ಟಿಯ ಮುಂದೆ ತೀರ ಕಡಿಮೆ ಬೆಲೆಗೆ ಕೇಳುವ ಗ್ರಾಹಕ. ವ್ಯಗ್ರವಾಗಿ `ಎತ್ತಯ್ಯ ನಿನ್ನ ತಳಾನ’ ಎನ್ನುವ ಹಣ್ಣಾಕೆ-ಎಲ್ಲರೂ ನಟರೇ. ಹೊಸ ಊರಿಗೆ ಹೋದರೆ, ಸಂತೆಯಲ್ಲಿ ತಿರುಗುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಮೀನು ಸಂತೆಯಲ್ಲಿ ಎಷ್ಟೆಲ್ಲ ಜಲಚರಗಳು ಮೀನುಗಾರ್ತಿಯ ಮುಂದಣ ಹಲಗೆಯ ಮೇಲೆ ವಿವಿಧ ಭಂಗಿಗಳಲ್ಲಿ ಪವಡಿಸಿರುತ್ತವೆ? ಒಂದು ಸಂತೆಯಲ್ಲಿ ಒಬ್ಬ ಕುರಿಗಳನ್ನು ಹಿಡಿದು ನಿಂತಿದ್ದ ರೀತಿ, ಸೂರ್ಯನ ಸಾರಥಿ ಸಪ್ತಾಶ್ವಗಳ ಲಗಾಮನ್ನು ಹಿಡಿದುಕೊಂಡಂತಿತ್ತು. ನಮ್ಮೂರ ಸಂತೆಯ ಮೂಲೆಯಲ್ಲಿ ಮಾರಾಟವಾಗುತ್ತಿದ್ದ ಮಡಕೆಗಳು ನೆನಪಾಗುತ್ತಿವೆ. ಕೆರೆಯಂಗಳದ ಮಣ್ಣು ಕಾಲಲ್ಲಿ ತುಳಿಸಿಕೊಂಡು, ಕುಲಾಲಚಕ್ರದಲ್ಲಿ ತಿರುಗಿ, ಹಲಗೆಯಿಂದ ತಟ್ಟಿಸಿಕೊಂಡು, ಆವಿಗೆಯಲ್ಲಿ ಬೆಂದು, ಗಾಡಿಯಲ್ಲಿ ಹುಶಾರಾಗಿ ಪಯಣಿಸಿ, ಕೊಳ್ಳುವವರ ಕೈ ಕಂಠಕ್ಕೆ ಬೀಳಲೆಂದು ಬಾಯ್ತೆರೆದು ಕಾಯುತ್ತಿದ್ದವು. ಮುಂದೆಯೂ ಸುಟ್ಟುಕೊಳ್ಳುವ ವಿಧಿ ಅವಕ್ಕೆ ತಪ್ಪಿದ್ದಲ್ಲ. ಕಂತುಗಳಲ್ಲಿ ಸುಟ್ಟುಕೊಳ್ಳುವ ಅವು ನಮ್ಮ ಜಠರಾಗ್ನಿಯನ್ನು ತಣಿಸುತ್ತಿದ್ದವು. ಎಷ್ಟೊಂದು ಸಂಗತಿಗಳಿಗೆ ಕೊಂಡಿ-ವೇದಿಕೆ ಈ ಸಂತೆ! ಮನೆಯನ್ನು ಏಕಾಂತದ ನೆಮ್ಮದಿಯ ಅಂತರಂಗದ ಮತ್ತು ಬಜಾರು ಬೀದಿಗಳನ್ನು ಏಕಾಂತ ಸಾಧ್ಯವಿಲ್ಲದ ಲೋಕಾಂತದ ಸಂಕೇತವೆಂದು ಗಣಿಸಲಾಗುತ್ತದೆ. ಆದರೆ ಮನೆಯು ಅನುಭವ ವಂಚಿಸುವ ಮತ್ತು ವ್ಯಕ್ತಿತ್ವ ಬಂಧಿಸುವ ತಾಣವಾಗಿ ತಳಮಳ ಹುಟ್ಟಿಸಬಲ್ಲದು. ಬುದ್ಧನ ಪಾಲಿಗೆ ಅರಮನೆ ಮತ್ತು ಏಕಾಂತಗಳು ಲೋಕಸತ್ಯ ಮುಚ್ಚಿಡುವ ಸೆರೆಮನೆಯಾಗಿದ್ದವೆಂದೇ, ಆತ ಲೋಕದ ಸಂತೆಯಲ್ಲಿ ಬೆರೆತು ಬಾಳಿನ ದಿಟವನ್ನು ಹುಡುಕಲು ಹೊರಬಿದ್ದನು. ಪೇಟೆಯ ಗಲಭೆಯಿಂದ ತಪ್ಪಿಸಿಕೊಂಡು ಹೋಗುವವರಿಗೆ ಹಳ್ಳಿ ಕಾಡು ನಿರುಮ್ಮಳ ತಾಣವೆನಿಸಬಹುದು. ವಾರಾಂತ್ಯದಲ್ಲಿ ನಗರ ಬಿಡುವವರು ಇದಕ್ಕೆ ಸಾಕ್ಷಿ. ಆದರೆ ಹಳ್ಳಿಯಲ್ಲಿ ಬಸವಳಿದ ಬದುಕು ಪೇಟೆಗೆ ಹೋದರೆ ಚಿಗುರೀತು ಎಂದು ಹಂಬಲಿಸಿ ರೈಲು ಹತ್ತುವವರೂ ಇದ್ದಾರೆ. ಮಾರುಕಟ್ಟೆಯ ಆರ್ಥಿಕತೆಯಲ್ಲಿ ಮನೆಮಾಡಿ ಬದುಕುವುದಕ್ಕೆ ಬೇಕಾದ ವಿದ್ಯೆ ಪಡೆದ ಹೊಸತಲೆಮಾರೇ ಸಿದ್ಧವಾಗಿದೆ. ಇಲ್ಲಿ ಶಬ್ದಕ್ಕೆ ನಾಚುವ ಪ್ರಶ್ನೆಯೇ ಇಲ್ಲ. ಧಾವಿಸುವ ಜನಪ್ರವಾಹಕ್ಕೆ ಪೇಟೆಯೇ ನಾಚಬೇಕು. ಇಲ್ಲಿ ಸದ್ದೇ ಇಂಪಾದ ಜೋಗುಳವಾಗುತ್ತದೆ.ಒಂದೇ ವಸ್ತು ಬದಲಾದ ಕಾಲದೇಶದಲ್ಲಿ ಕರ್ಕಶ-ಮಧುರ, ನಂಜು-ಅಮೃತ ಆಗಬಲ್ಲದು. ಪ್ರತಿ ಸಂಗತಿಯಲ್ಲೂ ವಿರುದ್ಧ ಆಯಾಮ ಇರುತ್ತವೆ. ಅದರೊಟ್ಟಿಗೆ ಬದುಕುವವರು ಅವನ್ನು ತಮಗನುವಾಗುವಂತೆ ಬದಲಿಸಿಕೊಳ್ಳುವರು. ಮರಳುಗಾಡು ಹಿಮಪ್ರದೇಶದ ಜನ -ಪ್ರಾಣಿ-ಗಿಡ-ಪಕ್ಷಿಗಳು ಮಾಡಿಕೊಂಡಿರುವ ಉಪಾಯಗಳೇ ಇದಕ್ಕೆ ಪುರಾವೆ. ದುರ್ಭರ ಪರಿಸರವು ಕಲಿಸುವ ಪಾಠಗಳಲ್ಲಿ, ವೈರುಧ್ಯಗಳನ್ನು ಪೋಷಕ ದ್ರವ್ಯವನ್ನಾಗಿ ಮಾಡಿಕೊಳ್ಳುವುದೂ ಒಂದು. ಅಕ್ಕನಿಗೆ ಬಹುಶಃ ಈ ದಿಟವೂ ಗೊತ್ತಿತ್ತು. ************************************ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಕಬ್ಬಿಗರ ಅಬ್ಬಿ.-13 ಗಗನ ಚುಂಬಿ ಮತ್ತು ಲಿಫ್ಟು ಸರ್ಗೇಯಿ ಬೂಬ್ಕಾ ,ಎಂಬ ಸೋವಿಯತ್ ಯುನಿಯನ್ ನ ಹುಡುಗ ಉದ್ದ ಕೋಲು ಹಿಡಿದು ಪೋಲ್ ವಾಲ್ಟ್ ಹಾರಲು ಸಿದ್ಧನಾಗಿದ್ದ. ಇದೊಂದು ಥರದ ಹೈ ಜಂಪ್ ಸ್ಪರ್ಧೆ. ಈ ಆಟದಲ್ಲಿ ಒಂದು ಕೋಲಿನ ಸಹಾಯದಿಂದ ಜಿಗಿಯಲಾಗುತ್ತೆ, ಆ ಕೋಲನ್ನು ಹಾರುಗೋಲು ಎಂದು ಕರೆಯೋಣ. ಹೈಜಂಪ್ ಮಾಡೋವಾಗ ಮೊದಲೇ ನಿರ್ಧರಿಸಿದ ಎತ್ತರದಲ್ಲಿ ನೆಲಕ್ಕೆ ಸಮಾನಾಂತರವಾಗಿ ಒಂದು ಕೋಲು ( ಅಳೆಗೋಲು) ಇಟ್ಟಿರುತ್ತಾರೆ. ಉದ್ದದ ಹಾರುಗೋಲು ಹಿಡಿದು, ಓಡುತ್ತಾ ಬಂದು, ಕೋಲನ್ನು ಹೈ ಜಂಪ್ ನ ಎತ್ತರದ ಅಳೆಗೋಲಿನ ಹತ್ತಿರ ಬಂದಾಗ ನೆಲಕ್ಕೂರಿ, ಹಾರುಕೋಲಿನ ಸಹಾಯದಿಂದ ಎತ್ತರಕ್ಕೆ ಜಿಗಿದು,ಅಳೆಗೋಲಿನ ಆಚೆಗೆ ಧುಮುಕುವ ಆಟ ಅದು. ಸಾಧಾರಣವಾಗಿ, ಕೋಲನ್ನೆತ್ತಿ ಓಡಿ ಬರುವಾಗ, ವೇಗದಿಂದ ಉತ್ಪನ್ನವಾದ ಶಕ್ತಿಯನ್ನೆಲ್ಲಾ ಮೊಣಕಾಲು ಮತ್ತು ತೊಡೆಗಳ ಸ್ನಾಯುಗಳಿಗೆ ನೀಡಿ, ದೇಹವನ್ನು ಆಕಾಶದತ್ತ ಚಿಮ್ಮಿಸಬೇಕು. ಅಷ್ಟಾದರೆ ಸಾಕೇ?. ಆಕಾಶದಲ್ಲಿದ್ದಾಗಲೇ ಊರಿದ ಏರುಕೋಲನ್ನು ಗಟ್ಟಿಯಾಗಿ ಹಿಡಿದು, ಹೈಜಂಪ್ ನ ಅಳೆಗೋಲಿನ ಹತ್ತಿರ ದೇಹ ತಲಪಿದಾಗ, ಎದೆಯುಬ್ಬಿಸಿ ಬಿಗಿದ ರಟ್ಟೆಯ ಸಹಾಯದಿಂದ ದೇಹವನ್ನು ನೆಲಕ್ಕೆ ಸಮಾನಾಂತರವಾಗಿ (parallel) ಬ್ಯಾಲೆನ್ಸ್ ಮಾಡಿ ಅಳೆಗೋಲನ್ನು ಸ್ಪರ್ಷಿಸದೆಯೇ ಮುಂದಕ್ಕೆ ಹೊರಳಿ ಅಳೆಗೋಲನ್ನು ದಾಟಿ ಆಚೆಕಡೆಯ ಮರಳು ಹಾಸಿಗೆ ಮೇಲೆ ಬೀಳಬೇಕು. ಬುಬ್ಕಾ ಹಾರಲು ಆರಂಭದ ಬಿಂದುವಿನಲ್ಲಿ ನಿಂತಾಗ ಅಮ್ಮನ ಮಾತುಗಳು ಕಿವಿಯೊಳಗೆ ಅನುರಣಿಸುತ್ತಿದ್ದವು. ಶಾಲೆಯಲ್ಲಿದ್ದಾಗ ಹೈಜಂಪ್ ಸ್ಪರ್ಧೆಯಲ್ಲಿ ಸೋತಾಗ ಆಕೆ ಹೇಳಿದ ಮಾತುಗಳವು. ” ಮಗನೇ! ನೀನು ಸೋತಿಲ್ಲ! ನೀನು ಜಿಗಿದ ಮಟ್ಟ ಕಡಿಮೆಯಿತ್ತಷ್ಟೇ..ಜಿಗಿಯುವ ಎತ್ತರವನ್ನು ದಿನಕ್ಕೆ ಕೂದಲೆಳೆಯಷ್ಟೆತ್ತರ ಹೆಚ್ಚು ಮಾಡುತ್ತಾ ಹೋಗು! ಜಗತ್ತು ಕಾಯುತ್ತೆ ನಿನ್ನ ಗೆಲುವಿಗಾಗಿ!” ಹಾಗೆ ಎತ್ತರದಿಂದ ಎತ್ತರಕ್ಕೆ ಹಾರಿದ ಹುಡುಗ ಬುಬ್ಕಾ, ತನ್ನ ಮೊದಲ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಜಿಗಿಯಲು ನಿಂತಿದ್ದ. ಕ್ರಿ.ಶ. 1983 ನೇ ಇಸವಿ, ಹೆಲ್ಸಿಂಕಿಯಲ್ಲಿ ನಡೆದ ಸ್ಪರ್ಧೆ ಅದು. ಸ್ಟಾರ್ಟ್!… ಹಾರಲು ಸಿಕ್ಕಿದ ಗ್ರೀನ್ ಸಿಗ್ನಲ್! ಬ್ಯುಗಿಲ್ ಮೊಳಗಿತ್ತು! ಬೂಬ್ಕಾ ಹಾರು ಕೋಲನ್ನು ಎತ್ತಿ ಹಿಡಿದು ಓಡ ತೊಡಗಿದ. ಆ ಹೆಜ್ಜೆಗಳಲ್ಲಿ ಚಿರತೆಯ ಧೃಡತೆ. ಕಣ್ಣುಗಳು ಹಾರಬೇಕಾದ ಅಳೆಗೋಲನ್ನು ನೋಟದಲ್ಲೇ ಸೆರೆಹಿಡಿದು ಗುರಿ ಸಮೀಪಿಸಿದ ಬೂಬ್ಕಾ. ಕೋಲನ್ನು ನೆಲಕ್ಕೂರಿ ನೆಲಕ್ಕೆ ಎರಡೂಪಾದಗಳ ಸಂಯೋಜಿತ ಜಿಗಿತುಳಿತಕ್ಕೆ ರಾಕೆಟ್ಟಿನಂತೆ ಆತನ ದೇಹ ಆಗಸಕ್ಕೆ ಚಿಮ್ಮಿತ್ತು. ಬೂಬ್ಕಾ ಕೊನೆಯ ಕ್ಷಣದಲ್ಲಿ ಒಂದು ಅದ್ಭುತ ತಂತ್ರ ಉಪಯೋಗಿಸಿದ್ದು ಇಂದಿಗೂ ಮನೆಮಾತು. ಸಾಧಾರಣವಾಗಿ ನೆಲಕ್ಕೆ ದೇಹದುದ್ದವನ್ನು ಸಮಾನಾಂತರ ಮಾಡಿ ಅಳೆಗೋಲಿನ ಅತ್ತಕಡೆ ಹೊರಳುವ ಬದಲು,ಈ ಕನಸುಗಾರ, ಬಿದಿರ ಕೋಲಿನ ತುದಿಯಲ್ಲಿ ಅಂಗೈ ಊರಿ, ತಲೆ ಕೆಳಗೆ ಕಾಲು ಮೇಲೆ ಮಾಡಿದ ಪೋಸ್ಚರ್ ನಲ್ಲಿ ರಟ್ಟೆಯಲ್ಲಿ ಇದ್ದ ಅಷ್ಟೂ ಬಲ ಸೇರಿಸಿ ದೇಹವನ್ನು ಎರಡನೇ ಬಾರಿ ಎತ್ತರಕ್ಕೆ ಚಿಮ್ಮಿಸಿದ್ದ. ಅಂದು ಆತ ಹಾರಿದ ಎತ್ತರ ವಿಶ್ವ ದಾಖಲೆಯನ್ನು ಮುರಿದು ಹೊಸತು ಬರೆದಿತ್ತು. ಆ ನಂತರದ ಎರಡು ದಶಕಗಳಲ್ಲಿ ಆತ 34 ಬಾರಿ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದ!. ಆರು ಬಾರಿ ವಿಶ್ವ ಚಾಂಪಿಯನ್, ಒಂದು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಆತನ ಕೊರಳೇರಿದ್ದವು ಮನುಷ್ಯ ಚೇತನವೇ ಊರ್ಧ್ವ ಮುಖಿ. ಸಾಧನೆಯ ಶಿಖರದ ಎತ್ತರ ಏರಿಸುತ್ತಲೇ ಇರುವ ಹಟಮಾರಿ ಪ್ರಜ್ಞೆ. ಹೀಗೇ ಏರುವಾಗ, ಏರುವ ವಿಧಾನ, ಏರುವ ಎತ್ತರ, ಗುರಿ, ಇವುಗಳ ಜತೆಗೆ, ಬದುಕಿಗೆ ಮತ್ತು ಸಮಾಜಕ್ಕೆ, ಈ ಚಾರಣ ಧಮಾತ್ಮಕವೇ, ಋಣಾತ್ಮಕವೇ ಎಂಬ ಜಿಜ್ಞಾಸೆ ಹುಟ್ಟುತ್ತೆ. ದಿನಕ್ಕೊಂದು ದಾಖಲೆ ಮಾಡುವ, ಮರುದಿನ ಇನ್ನಾರೋ ಮುರಿಯುವ ಓಟ. ವಿಜ್ಞಾನ, ತಂತ್ರಜ್ಞಾನವೂ ಅಷ್ಟೇ. ಗಗನಕ್ಕೆ ಸವಾಲೆಸೆಯುವ ಗಗನ ಚುಂಬೀ ಕಟ್ಟಡಗಳು, ಸಮುದ್ರದಾಳದಲ್ಲಿ ಓಡುವ ರೈಲು, ಜಾಣ ಫೋನ್ ಮೂಲಕ ಭೂಮಿಯ ಆ ಭಾಗದ ಅಮೆರಿಕಾದ ಮೊಮ್ಮಗುವಿಗೆ ಹೈದರಾಬಾದ್ ನಿಂದ ಹ್ಯಾಪ್ಪೀ ಬರ್ತ್ ಡೇ ಹಾಡುವ ಅಜ್ಜಿ, ಇತ್ಯಾದಿ ನಮ್ಮ ವಿಕಸನ? ದ ಕಹಾನಿಗಳು. ಅನವರತ ಪ್ರಯತ್ನದಲ್ಲಿ ಫಲಿಸಿದ ಅವಿಷ್ಕಾರಗಳು ನಮ್ಮನ್ನು ಮಂಗಳನ ಅಂಗಳಕ್ಕೆ ತಲಪಿಸಿದೆ. ಅದೇ ಹೊತ್ತಿಗೆ ಓಟದಲ್ಲಿ ನೋಟ ನೆಟ್ಟ ಕನ್ನಡಕದ ಹಿಂದಿನ ಕಣ್ಣುಗಳಿಗೆ ಪಕ್ಕದಲ್ಲಿ ಹಸಿವಿನಿಂದ ಅಳುವ ಮಗುವಿನ ಮುಖ ಕಾಣಿಸುತ್ತಿಲ್ಲವೇ?. ವೃದ್ಧಾಶ್ರಮದಲ್ಲಿ ಹಣ ಕಟ್ಟಿ ಬಿಟ್ಟು ಬಂದ ವಯಸ್ಸಾದ ತಂದೆತಾಯಂದಿರ ಒಬ್ಬಂಟಿತನದಿಂದ ಸುಕ್ಕಿದ ಕೆನ್ನೆಗಳಲ್ಲಿ ಜಾರಿ, ಆರಿ ಹೋಗುವ ಕಣ್ಣೀರ ಬಿಂದುಗಳ ಅರಿವಿಲ್ಲವೇ?. ಹೀಗೇ ಬನ್ನಿ, ಇಲ್ಲಿದೆ ಸುಬ್ರಾಯ ಚೊಕ್ಕಾಡಿಯವರ ಕವಿತೆ. *** *** *** ಲಿಫ್ಟು ಏರುತ್ತ ಹೋದರು ಗಗನ ಚುಂಬಿಯ ತುದಿಗೆ ನೆಲದ ಸಂಪರ್ಕವನೆ ಕಡಿದುಕೊಂಡು ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ ತನ್ನ ತಾನೇ ಧ್ಯಾನ ಮಾಡಿಕೊಂಡು. ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ ಸಂಬಂಧಗಳ ಬಂಧ ಕಡಿದುಮುನ್ನಡೆದಾಯ್ತು ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ. ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ ತಳದಲ್ಲಿ ಬಿದ್ದಿವೆ ಅನಾಥವಾಗಿ ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು ಕುಂಡದಲಿ ಇಲ್ಲಿ ತುದಿಹಂತದಲ್ಲಿ. ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ ಬೇಡ ಅವು ಇನ್ನು ಲಿಫ್ಟೊಂದೆ ಸಾಕು ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ ಕಾಂಚಾಣದೇಕಾಂತವಷ್ಟೆ ಸಾಕು. ಅರಿವಿರದ ಯಾವುದೋ ಬಂದು ಹೊಡೆದರೆ ಢಿಕ್ಕಿ ತುದಿಯಲುಗಿ,ಒಂದೊಂದೆ ಹಂತ ಕುಸಿದು ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು ನಿಂತಿದೆ ಅನಾಥ–ನೆಲಬಾನ ನಡುವೆ. *** *** *** ಕವಿತೆಯ ಹೆಸರು ಲಿಫ್ಟು. ಈ ಪದ ಆಂಗ್ಲಪದ. ಮೆಟ್ಟಿಲು ಹತ್ತುವ ಬದಲು, ನಿಂತಲ್ಲಿಯೇ ಮೇಲೆತ್ತುವ ಯಂತ್ರ! ಎಂದಾಗ ಇದು ನಾಮ ಪದ. ಮೇಲಕ್ಕೆತ್ತುವ ಕ್ತಿಯಾಸೂಚಕವಾಗಿ ಇದು ಕ್ರಿಯಾ ಪದವೂ ಹೌದು. ತಂತ್ರಜ್ಞಾನ, ಮನುಷ್ಯನ ಹತ್ತುವ ಇಳಿಯಿವ, ತೊಳೆಯುವ, ನಡೆಯುವ, ಓಡುವ ಇತ್ಯಾದಿ ಹಲವು ಕ್ತಿಯೆಗಳನ್ನು ಸುಲಭ ಮಾಡಲು, ಯಂತ್ರಾವಿಷ್ಕಾರ ಮಾಡಿದೆ. ಎಷ್ಟೆಂದರೆ, ಯಂತ್ರಗಳಿಲ್ಲದೆ ಬದುಕು ಅಸಾಧ್ಯ ಎನ್ನುವಷ್ಟು. ಮನುಷ್ಯನ, ವಿಕಸನದ ಹಲವು ಘಟ್ಟಗಳನ್ನು ವರ್ಗೀಕರಿಸುವಾಗ, ಶಿಲಾಯುಗ, ಲೋಹಯುಗ, ಹೀಗೆಯೇ ಮುಂದುವರೆದರೆ, ಈ ಯಂತ್ರಯುಗವೂ ಒಂದು ಮಹಾ ಲಂಘನವೇ. ಹಾಗಾಗಿ, ಈ ಕವಿತೆಯ ಶೀರ್ಷಿಕೆ, ಯಂತ್ರಯುಗದ ಅಷ್ಟೂ ಅಂಶಗಳ ಅಭಿವ್ಯಕ್ತಿ. ಕವಿತೆ ಓದುತ್ತಾ ಹೋದಂತೆ, ಈ ಶೀರ್ಷಿಕೆ, ಯಂತ್ರಯುಗದ ಮೊದಲು ಮತ್ತು ನಂತರದ ಸಾಮಾಜಿಕ ಪ್ರಕ್ರಿಯೆಗಳ ಮತ್ತು ಸಮಗ್ರಪ್ರಜ್ಞೆಗಳ ತಾಕಲಾಟವನ್ನೂ ಚಿತ್ರಿಸುತ್ತೆ. “ಏರುತ್ತ ಹೋದರು ಗಗನ ಚುಂಬಿಯ ತುದಿಗೆ ನೆಲದ ಸಂಪರ್ಕವನೆ ಕಡಿದುಕೊಂಡು ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ ತನ್ನ ತಾನೇ ಧ್ಯಾನ ಮಾಡಿಕೊಂಡು.” ಮನುಷ್ಯ ತನ್ನ ಪ್ರಯತ್ನದಿಂದ ಏರುತ್ತಲೇ ಹೋದ. ಗಗನ ಚುಂಬಿ ಎನ್ನುವುದು ಆಗಸಕ್ಕೆ ಮುತ್ತಿಡುವ ಎತ್ತರದ ಕಟ್ಟಡ. ಹತ್ತಲು ಉಪಯೋಗಿಸಿದ್ದು ಲಿಫ್ಟ್ ಎಂಬ ಯಂತ್ರ. ಎರುತ್ತಾ ಹೋದಂತೆ, ನೆಲ ಕಾಣಿಸಲ್ಲ. ನೆಲ ಎಂಬುದು, ಮೂಲ, ಆಧಾರಕ್ಕೆ ಪ್ರತಿಮೆ. ಏರುತ್ತಾ ಹೋದಂತೆ ತನ್ನ ಅಡಿಪಾಯವೇ ಮರೆತುಹೋಗಿ,ಅದರ ಸಂಪರ್ಕ ಕಡಿದುಹೋಯಿತು. ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಆಕೃತಿ ಇದೆ. ಈ ಪದವನ್ನು ಕವಿ ಉಪಯೋಗಿಸಿ ಕವಿತೆಗೆ ಅಚಾನಕ್ ಆಗಿ ಹೊಸ ದಿಕ್ಕು ಕೊಡುತ್ತಾರೆ. ಈಜಿಪ್ಟ್‌ನಲ್ಲಿ ಪಿರಮಿಡ್ ಒಳಗೆ ಮೃತದೇಹವನ್ನು ” ಮಮ್ಮಿ” ಮಾಡಿ ಸಮಾಧಿ ಮಾಡುತ್ತಿದ್ದರು. ಅಂದರೆ ಈ ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಇದ್ದರೆ, ಈ ಕಟ್ಟಡದ ನೆಲತಲದಿಂದ ಹತ್ತಿದ್ದು,ಬದುಕಿನ ಆದಿ ಮತ್ತು ಪಿರಮಿಡ್ ನಲ್ಲಿ, ಏಕಾಂತದಲ್ಲಿ, ತನ್ನ ತಾನೇ ಏಕಾಂತದಲ್ಲಿ ಸಮಾಧಿಯಾದ ಬದುಕಿನ ಅಂತ್ಯವೇ. ಹತ್ತುತ್ತಾ, ಕೊನೆಗೆ ನೆಲದ ಸಂಪರ್ಕ ಕಸಿದುಕೊಳ್ಳುವುದು ಎಂದರೆ, ಭೌತಿಕ ಜಗತ್ತಿನ ಸಂಪರ್ಕವಾದ,ದೇಹ ತೊರೆಯುವ ಕ್ರಿಯೆಯೇ?. ಪಿರಮಿಡ್ ಆಕೃತಿಯೊಳಗೆ ಜೀವಿಸುವ ದೇಹ, ಜೀವವಿದ್ದೂ ಸತ್ತಂತೆ,ಎಂಬ ಅರ್ಥವನ್ನೂ ಈ ಸಾಲುಗಳು ಪಡೆಯಬಹುದು ತಾನು ಏರಲು ಆರಂಭಿಸಿದ ಮೂಲ ಆಧಾರ, ತಂದೆ,ತಾಯಿ, ಶಾಲೆ,ಗುರುಗಳು, ಸಮಾಜ ಇವುಗಳ ಸೂತ್ರಗಳನ್ನು ಕಡಿದುಕೊಂಡು, ಏರಿದ ದಾರಿಯನ್ನು ಮರೆತು ಡಿಸ್ಕನೆಕ್ಟ್ ಆಗಿ ಬದುಕುವ ಜೀವನ, ಜೀವಮುಖೀ ಜೀವನವೇ? ಅಲ್ಲಾ,ಪಿರಮಿಡ್ ಒಳಗಿನ “ಮಮ್ಮಿ” ಬದುಕೇ?. ಇನ್ನೊಂದು ರೀತಿ ಅರ್ಥೈಸುವುದಿದ್ದರೆ, ಭೌತಿಕ ಬದುಕನ್ನು ತ್ಯಜಿಸಿ, ಧ್ಯಾನಮಾರ್ಗದತ್ತ ಏರಿದ ಸಂತನ ಅನುಭವಕ್ಕೆ, ತುದಿಯಲೇಕಾಂತದಲಿ, ಧ್ಯಾನಕ್ಕೆ ಅಣಿಯಾಗುವ ಪ್ರಯತ್ನ ಇದು. ಈ ಅರ್ಥಕ್ಕೆ ಕವಿತೆಯ ಉಳಿದ ಸಾಲುಗಳ ಸಮರ್ಥನೆ ದೊರಕುವುದಿಲ್ಲ. “ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ ಸಂಬಂಧಗಳ ಬಂಧ ಕಡಿದು ಮುನ್ನಡೆದಾಯ್ತು ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ.” ಈ ಗಗನಚುಂಬಿಯ ಮೇಲೆ ನೆಲದಲ್ಲಿ ನಡೆಯುವ ಅಷ್ಟೂ ಸಮಾಜಮುಖೀ ಶಬ್ಧಗಳು ಇಲ್ಲ. ಸ್ಪಂದನೆಯಿಲ್ಲ, ಬಂಧು ಬಳಗಗಳ,ಸಮಾಜದ ಕಟ್ಟುಪಾಡುಗಳಿಲ್ಲ. ಸಂಬಂಧಗಳ ಕಡಿದು ಮುನ್ನಡೆದಾಯ್ತು ಅಂತ ಕವಿವಾಣಿ. ಸಂಬಂಧ ಅದರಷ್ಟಕ್ಕೇ ಕಡಿದು ಹೋದದ್ದಲ್ಲ. ಎತ್ತರಕ್ಕೆ ಏರುವ ಭರದಲ್ಲಿ,ಆರೋಹಿಯೇ ಕಡಿದದ್ದು. ಇಲ್ಲೊಂದು ಧರ್ಮ ಸೂಕ್ಷ್ಮ ಇದೆ!. ಸಂಬಂಧಗಳ ಬಂಧ ಕಡಿಯದಿದ್ದರೆ ಹತ್ತಲು ಬಹುಷಃ ಕಷ್ಟವಾಗುತ್ತಿತ್ತು. ಆ ಸೂತ್ರಗಳು ಕೈ ಕಾಲುಗಳನ್ನು ಕಟ್ಟಿ ಹಾಕುತ್ತಿದ್ದವು. ಬಿಂದಾಸ್ ಆಗಿ ಅಷ್ಟೆತ್ತರ ಏರಲು ಸಂಪೂರ್ಣ ಸ್ವಾತಂತ್ರ್ಯ ಬೇಕಿತ್ತು. ಆದರೆ ಪ್ರಶ್ನೆ, ಏರಿದ ಎತ್ತರಕ್ಕೆ ಅರ್ಥ ಇದೆಯೇ?. ಬಹುಜನಬಳಗದ ಬಂಧನದಿಂದ, ಕಸಿದುಕೊಂಡು ತನ್ನದೇ ಆದ ಚಿಕ್ಕ ಕುಟುಂಬಕ್ಕೆ ಸೀಮಿತವಾದ, ತಾನು,ತನ್ನ ಸಾಧನೆ ಮತ್ತು ತನ್ನ ಬದುಕಿನ ಮಿತಿಯೊಳಗೆ ಸ್ವರ್ಗ ಹುಡುಕುವ ಪ್ರಯತ್ನ ಇದು. “ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ ತಳದಲ್ಲಿ ಬಿದ್ದಿವೆ ಅನಾಥವಾಗಿ ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು ಕುಂಡದಲಿ ಇಲ್ಲಿ ತುದಿಹಂತದಲ್ಲಿ” ಈ ಗಗನಚುಂಬಿ ಕಟ್ಟಡದ ತುದಿಗೆ ತಲಪಿದ ವ್ಯಕ್ತಿಗೆ, ಕಟ್ಟಡದ ತಳಪಾಯವಾದ ಹಳೆಯ ಮೌಲ್ಯಗಳು ಅಪಮೌಲ್ಯವಾಗಿವೆ. ಇಲ್ಲಿ ಅಪಮೌಲ್ಯ ಎಂಬ ಪದ ವ್ಯಾಪಾರೀ ಜಗತ್ತಿನ ಕರೆನ್ಸಿಯನ್ನು ಡಿವೇಲ್ಯುವೇಷನ್ ಅನ್ನೋ ಶಬ್ಧ. ಲಿಫ್ಟ್ ಎಂಬ ಯಾಂತ್ರಿಕ ವ್ಯವಸ್ಥೆಯಲ್ಲಿ ಮೇಲೇರುತ್ತಾ ಹೋದಂತೆ, ಕುರುಡು ಕಾಂಚಾಣ ಮುಖ್ಯವಾಗಿ, ಮೌಲ್ಯಗಳು ತಳದಲ್ಲಿ ಬಿದ್ದಿವೆ ಅನಾಥವಾಗಿ. ತುದಿಯಲ್ಲಿ ತಾನು,ತನ್ನದು ಎಂಬ ಸ್ವಾರ್ಥವೇ ಮುಖ್ಯವಾಗಿ, ಆರ್ಟಿಫಿಶಿಯಲ್ ಆದ ಹಸಿರಿನ ವ್ಯವಸ್ಥೆ, ಹೂ ಕುಂಡದಲ್ಲಿ ಸಸಿ ಊರಿ ನಿರ್ಮಿಸಿ, ಅದನ್ನೇ ನೆಲದ ಮರಗಳಾಗಿ ಕಾಣುವ ಅವಸ್ಥೆ ಇದು. ಕವಿ ರೂಪಕವಾಗಿ,’ತಾನು ತನ್ನದು ಎಂಬ ಸಸಿ’ ಎನ್ನುತ್ತಾರೆ!. ತುದಿಹಂತದಲ್ಲಿ ಅಂತ ಕವಿ ಸೂಕ್ಷ್ಮವಾಗಿ ಹೇಳುವುದೇನು?. ಇಂತಹ ಬೆಳವಣಿಗೆಗೆ ಅಂತ್ಯವಿದೆ. ಇಂತಹ ಬೆಳವಣಿಗೆ ಕೊನೆಯಾಗುವುದು,ತಾನು ಮತ್ತು ತನ್ನದು ಎಂಬ “ಸಿಂಗ್ಯುಲಾರಿಟಿ” ಯಲ್ಲಿ ಎಂದೇ? “ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ ಬೇಡ ಅವು ಇನ್ನು ಲಿಫ್ಟೊಂದೆ ಸಾಕು ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ ಕಾಂಚಾಣದೇಕಾಂತವಷ್ಟೆ ಸಾಕು.” ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ ಗಗನ ಚುಂಬಿ ಎತ್ತರಕ್ಕೆ ಏರಿದರೂ ಆ ಹತ್ತಿದ ದಾರಿ ಮರೆತು, ಯಾಂತ್ರೀಕೃತ, ಯಾಂತ್ರಿಕ ಬದುಕಿಗೆ ಮನುಷ್ಯ ಒಗ್ಗಿಕೊಳ್ಳುವ, ಒಪ್ಪಿಸಿಕೊಳ್ಳುವ, ಅವಸ್ಥೆಯ ಚಿತ್ರಣ. ಕಾಂಚಾಣದೇಕಾಂತ! ಇದಕ್ಕೆ ವಿವರಣೆ ಬೇಕೇ?! “ಅರಿವಿರದ ಯಾವುದೋ ಬಂದು ಹೊಡೆದರೆ ಢಿಕ್ಕಿ ತುದಿಯಲುಗಿ,ಒಂದೊಂದೆ ಹಂತ ಕುಸಿದು ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು ನಿಂತಿದೆ ಅನಾಥ–ನೆಲಬಾನ ನಡುವೆ.” ಈ ಪ್ಯಾರಾ ಓದುವಾಗ, ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ನ ಗಗನಚುಂಬಿ ಅವಳಿ ಟವರ್ ಮೇಲೆ ಆದ ಅಟ್ಯಾಕ್ ನ ನೆನಪು ಬರುತ್ತೆ. ಗಗನಚುಂಬಿ ಕಟ್ಟಡ ಅದರ ಎತ್ತರದಲ್ಲಿ ಏರಿ ವಾಸವಾದವರು ಒಪ್ಪಲಿ ಬಿಡಲಿ, ಅದು ನಿಂತಿರುವುದಂತೂ ನೆಲದ ಮೇಲೆ. ಅರಿವಿರದ ಯಾವುದೇ ಹೊಡೆತಕ್ಕೆ, ಕಟ್ಟಡ ತುದಿಯಲುಗಿ ಕುಸಿಯುತ್ತೆ. ಈ ಅರಿವಿರದ ಹೊಡೆತ, ಭೂಕಂಪವೂ ಆಗಬಹುದು. ಕುಸಿಯುವುದೂ ಒಂದು ಕ್ರಾಂತಿಯೇ. ಆ ಹಠಾತ್ ಬದಲಾವಣೆಯ
ಅಂಕಣ ಬರಹ ರಾತ್ರಿಬಸ್ಸುಗಳೊಂದಿಗೆ ಮಾತುಕತೆ ರಾತ್ರಿಬಸ್ಸಿನಲ್ಲಿ ಎಷ್ಟೆಲ್ಲ ಕನಸುಗಳು ಪಯಣಿಸುತ್ತಿರುತ್ತವೆ; ತಲುಪಬೇಕಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಹವಾಮಾನಕ್ಕೆ ತಕ್ಕ ಬಟ್ಟೆ ತೊಟ್ಟು ಬೆಳಗೆನ್ನುವ ಬೆರಗಿಗೆ ಕಣ್ಣುಬಿಡಲು ತಯಾರಾಗಿ ಹೊರಟುನಿಂತಿರುತ್ತವೆ! ಬಗಲಲ್ಲೊಂದು ಹಗುರವಾದ ಪರ್ಸು, ಕೈಯಲ್ಲೊಂದು ಭಾರವಾದ ಬ್ಯಾಗು, ಕೂದಲನ್ನು ಮೇಲೆತ್ತಿ ಕಟ್ಟಿದ ರಬ್ಬರ್ ಬ್ಯಾಂಡು ಎಲ್ಲವೂ ಆ ಕನಸುಗಳೊಂದಿಗೆ ಹೆಜ್ಜೆಹಾಕುತ್ತಿರುತ್ತವೆ. ಅವಸರದಲ್ಲಿ ಮನೆಬಿಟ್ಟ ಕನಸುಗಳ ಕಣ್ಣಿನ ಕನ್ನಡಕ, ಕೈಗೊಂದು ವಾಚು, ಬಿಸಿನೀರಿನ ಬಾಟಲಿಗಳೆಲ್ಲವೂ ಆ ಪಯಣದ ಪಾತ್ರಧಾರಿಗಳಂತೆ ಪಾಲ್ಗೊಳ್ಳುತ್ತವೆ. ಅರಿವಿಗೇ ಬಾರದಂತೆ ಬದುಕಿನ ಅದ್ಯಾವುದೋ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಆ ಕನಸುಗಳನ್ನೆಲ್ಲ ಅಪರಿಚಿತ ರಾತ್ರಿಯೊಂದರ ಬೋರ್ಡಿಲ್ಲದ ಬಸ್ಸು ತನ್ನದಾಗಿಸಿಕೊಂಡು ಸಾಗಿಸುತ್ತಿರುತ್ತದೆ. ಒಂದೊಂದೇ ಬೀದಿದೀಪಗಳನ್ನು ದಾಟುತ್ತ ಚಲಿಸುತ್ತಲೇ ಇರುವ ಅವು ಆ ಸ್ಥಾನಪಲ್ಲಟದ ಮಾರ್ಗಮಧ್ಯದಲ್ಲಿ ಹುಟ್ಟು-ಕೊನೆಗಳ ಆಲೋಚನೆಯನ್ನು ಬದಿಗಿಟ್ಟು, ಬಸ್ಸಿನ ಚಲನೆಯನ್ನೇ ತಮ್ಮದಾಗಿಸಿಕೊಂಡು ಸೀಟಿಗೊರಗಿ ಸುಧಾರಿಸಿಕೊಳ್ಳುತ್ತವೆ. ಹಾಗೆ ದಣಿವಾರಿಸಿಕೊಳ್ಳುತ್ತಿರುವ ಕನಸುಗಳನ್ನು ಹೊತ್ತ ಬಸ್ಸು ಹಳೆ ಸಿನೆಮಾವೊಂದರ ರೊಮ್ಯಾಂಟಿಕ್ ಹಾಡಿನ ಟ್ಯೂನಿನಂತೆ ತನ್ನದೇ ಆದ ಗತಿಯಲ್ಲಿ ದಾರಿಯೆಡೆಗೆ ದೃಷ್ಟಿನೆಟ್ಟು ಓಡುತ್ತಿರುತ್ತದೆ. ಈ ರಾತ್ರಿಬಸ್ಸುಗಳೆಡೆಗಿನ ಮೋಹವೂ ಹಳೆಯ ಹಾಡುಗಳೆಡೆಗಿನ ಮೋಹದಂತೆ ತನ್ನಿಂತಾನೇ ಹುಟ್ಟಿಕೊಂಡಿತು. ಚಿಕ್ಕವಳಿದ್ದಾಗ ಜಾತ್ರೆಗೆ ಹೋದಾಗಲೋ ಅಥವಾ ಮಳೆಗಾಲದ ದಿನಗಳಲ್ಲಿ ಸಂಚಾರವ್ಯವಸ್ಥೆಗಳೆಲ್ಲ ಅಸ್ತವ್ಯಸ್ತವಾಗಿ ಬಸ್ಸುಗಳೆಲ್ಲ ಕ್ಯಾನ್ಸಲ್ ಆಗುತ್ತಿದ್ದ ಸಂದರ್ಭಗಳಲ್ಲೋ, ಲಾಸ್ಟ್ ಬಸ್ಸಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದ ಸಮಯಗಳಲ್ಲಿ ಹೊರಊರುಗಳಿಗೆ ಸಂಚರಿಸುತ್ತಿದ್ದ ರಾತ್ರಿಬಸ್ಸುಗಳು ಬಂದು ನಿಲ್ಲುತ್ತಿದ್ದವು. ಹಾಗೆ ಬಸ್ಸು ಬಂದು ನಿಲ್ಲುತ್ತಿದ್ದಂತೆಯೇ ಒಂದು ಕೈಯ್ಯಲ್ಲಿ ಟಿಕೆಟ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಲಗೇಜು ಎತ್ತಿಕೊಂಡು ಗಡಿಬಿಡಿಯಲ್ಲಿ ಬಸ್ಸಿನೆಡೆಗೆ ಓಡುವವರನ್ನು ಕಂಡಾಗಲೆಲ್ಲ, ಈ ರಾತ್ರಿಯ ಸಮಯದಲ್ಲಿ ಇಷ್ಟೊಂದು ಜನರು ಊರು ಬಿಟ್ಟು ಅದೆಲ್ಲಿಗೆ ಹೋಗುತ್ತಿರಬಹುದು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು. ಪರ್ಸನ್ನು ಭದ್ರವಾಗಿ ಹಿಡಿದುಕೊಂಡು ಸ್ವೆಟರನ್ನು ಸರಿಪಡಿಸಿಕೊಳ್ಳುತ್ತ ಬಸ್ಸಿನಿಂದ ಇಳಿದು ಟಾಯ್ಲೆಟ್ಟಿನ ಬೋರ್ಡನ್ನು ಹುಡುಕುವವರನ್ನು ನೋಡುವಾಗಲೆಲ್ಲ, ಅವರೆಲ್ಲ ಅದ್ಯಾವುದೋ ಬೇರೆಯದೇ ಆದ ಲೋಕದೊಂದಿಗೆ ನನ್ನನ್ನು ಕನೆಕ್ಟ್ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ಹಾಗೆ ಒಂದೊಂದಾಗಿ ಸ್ಟ್ಯಾಂಡಿಗೆ ಬರುತ್ತಿದ್ದ ರಾತ್ರಿಬಸ್ಸುಗಳಿಂದಾಗಿ ಬಸ್ ಸ್ಟ್ಯಾಂಡಿನ ಬೇಕರಿಯ ಬ್ರೆಡ್ಡು-ಬಿಸ್ಕಿಟ್ಟುಗಳೂ ಒಂದೊಂದಾಗಿ ಖಾಲಿಯಾಗಿ ಅಂಗಡಿಯವನ ಮುಖದಲ್ಲೊಂದು ಸಮಾಧಾನ ಕಾಣಿಸಿಕೊಳ್ಳುತ್ತಿತ್ತು. ಆ ರೀತಿಯ ಹಗಲಲ್ಲಿ ಕಾಣಸಿಗದ ಒಂದು ವಿಚಿತ್ರವಾದ ಅವಸರದ, ಉಮೇದಿನ, ಸಮಾಧಾನದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದ ರಾತ್ರಿಬಸ್ಸುಗಳು ಒಂದನ್ನೊಂದು ರಿಪ್ಲೇಸ್ ಮಾಡುತ್ತಿರುವ ಸಮಯದಲ್ಲಿ ಲಾಸ್ಟ್ ಬಸ್ಸುಗಳು ಒಂದೊಂದಾಗಿ ಬಸ್ ಸ್ಟ್ಯಾಂಡಿನಿಂದ ಜಾಗ ಖಾಲಿಮಾಡುತ್ತಿದ್ದವು. ಹಾಗೆ ಲಾಸ್ಟ್ ಬಸ್ಸಿನಲ್ಲಿ ಕಿಟಕಿಪಕ್ಕದ ಸೀಟಿನಲ್ಲಿ ಕುಳಿತ ನಾನು ರಾತ್ರಿಬಸ್ಸಿನೊಳಗೆ ಕುಳಿತ ಜನರನ್ನು ಬೆರಗಿನಿಂದ ಇಣುಕಿ ನೋಡುತ್ತ, ಅವುಗಳ ಬಗ್ಗೆಯೇ ಯೋಚಿಸುತ್ತ ಬಸ್ಸಿನ ಸರಳಿಗೊರಗಿ ನಿದ್ರೆ ಮಾಡುತ್ತಿದ್ದೆ. ನಾನೂ ಅಂಥದ್ದೇ ರಾತ್ರಿಬಸ್ಸಿನೊಳಗೆ ಕುಳಿತು ಊರುಬಿಟ್ಟು ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಕ್ಯಾಬ್ ಗಳಿಗೆ ಎದುರಾಗುತ್ತಿದ್ದ ರಾತ್ರಿಬಸ್ಸುಗಳ ಬೋರ್ಡಿನೆಡೆಗೆ ದೃಷ್ಟಿ ಹಾಯಿಸುತ್ತಿದ್ದೆ; ಬೋರ್ಡುಗಳೇ ಇರದ ಬಸ್ಸುಗಳ ಡ್ರೈವರುಗಳೆಡೆಗೆ ಇಣುಕಿ ನೋಡುವ ಒಂದು ವಿಚಿತ್ರವಾದ ಚಟವೂ ಅಂಟಿಕೊಂಡಿತ್ತು. ಅವರ ಕಣ್ಣುಗಳಲ್ಲಿರುತ್ತಿದ್ದ ತೀಕ್ಷ್ಣತೆ-ಜಾಗರೂಕತೆಗಳೆಲ್ಲ ಕಂಪ್ಯೂಟರಿನೆದುರಿಗೆ ಕುಳಿತು ಮಂಜಾಗಿರುತ್ತಿದ್ದ ನನ್ನ ಕಣ್ಣುಗಳಲ್ಲೊಂದು ಹೊಸ ಚುರುಕನ್ನು ತುಂಬಿದಂತೆನ್ನಿಸಿ ಖುಷಿಯಾಗಿ, ಆ ಡ್ರೈವರುಗಳ ಮತ್ತು ನನ್ನ ಬದುಕಿನ ನಡುವಿನಲ್ಲೊಂದು ವಿಚಿತ್ರವಾದ ಹೋಲಿಕೆಯಿರುವಂತೆ ಭಾಸವಾಗುತ್ತಿತ್ತು. ಆ ಸಾಮ್ಯತೆಯೇ ಎಲ್ಲ ಬದುಕುಗಳ ನಿಜಸ್ಥಿತಿಯನ್ನು ಕಣ್ಣೆದುರು ತೆರೆದಿಟ್ಟಂತೆನ್ನಿಸಿ, ಹುಟ್ಟು-ಕೊನೆಗಳನ್ನು ಮರೆತು ಬಸ್ಸಿನಲ್ಲಿ ಚಲಿಸುತ್ತಿರುವ ಕನಸುಗಳು ಒಂದಿಲ್ಲೊಂದು ನಿಲುಗಡೆಯಲ್ಲಿ ಇನ್ನೊಂದು ಬಸ್ಸಿನ ಕನಸುಗಳೊಂದಿಗೆ ಸಂಧಿಸಿ ಎಲ್ಲರ ಬದುಕುಗಳನ್ನು ನಿರ್ಧರಿಸುತ್ತಿರುವಂತೆ ತೋರುತ್ತಿತ್ತು. ರಾತ್ರಿಬಸ್ಸಿನ ಮುಚ್ಚಿದ ಕಿಟಕಿಗಳ ಕರ್ಟನ್ನಿನ ಹಿಂದಿರುವ ಕನಸುಗಳೆಲ್ಲ ಬೆಳಗಾಗುವುದನ್ನೇ ಕಾಯುತ್ತಿರಬಹುದು, ಆ ಕಾಯುವಿಕೆಯ ಪ್ರಕ್ರಿಯೆಯೊಂದಿಗೇ ಅವುಗಳ ಸತ್ಯತೆಯೂ ಕೆಲಸ ಮಾಡುತ್ತಿರಬಹುದು ಎನ್ನುವಂತಹ ಯೋಚನೆಗಳೆಲ್ಲ ಪ್ರತಿದಿನವೂ ಬಸ್ಸಿನೊಂದಿಗೆ ಎದುರಾಗುತ್ತಿದ್ದವು. ಇಷ್ಟೆಲ್ಲ ಯೋಚನೆಗಳ ನಡುವೆಯೂ ಕೊನೆಯ ರಾತ್ರಿಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ಬಿಡಬಹುದು, ಬಸ್ ಸ್ಟ್ಯಾಂಡಿನಲ್ಲಿರುವ ಬಿಸ್ಕಿಟಿನ ಅಂಗಡಿಯ ಬಾಗಿಲು ಯಾವಾಗ ಮುಚ್ಚಬಹುದು, ಬ್ಯಾಗಿನ ತುಂಬ ಕನಸುಗಳನ್ನು ತುಂಬಿಕೊಂಡು ರಾತ್ರಿಬಸ್ಸು ಹತ್ತಿರುವವರ ಕನಸುಗಳೆಲ್ಲ ಯಾವ ತಿರುವಿನಲ್ಲಿ ಚಲಿಸುತ್ತಿರಬಹುದು ಎನ್ನುವ ಪ್ರಶ್ನೆಗಳೆಲ್ಲ ಪ್ರಶ್ನೆಗಳಾಗಿಯೇ ಉಳಿದಿವೆ. ಈ ರಾತ್ರಿಬಸ್ಸಿಗಾಗಿ ಕಾಯುವವರೆಲ್ಲ ಸೇರಿ ಅಲ್ಲೊಂದು ಹಗಲುಗಳಿಂದ ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿ ಮಾಡಿರುತ್ತಾರೆ. ಸ್ಕರ್ಟು ತೊಟ್ಟು ಅದಕ್ಕೆ ತಕ್ಕ ಹೈ ಹೀಲ್ಸ್ ಧರಿಸಿ ಎಸಿ ರೂಮಿನಲ್ಲಿ ನಿರಂತರವಾಗಿ ಕ್ಲೈಂಟ್ ಮೀಟಿಂಗಿನಲ್ಲಿರುವ ಹುಡುಗಿಯೊಬ್ಬಳು ಸಾಧಾರಣವಾದ ಚಪ್ಪಲಿ ಕಾಟನ್ ಬಟ್ಟೆಯನ್ನು ಧರಿಸಿ ಮೆಟ್ಟಿಲುಗಳ ಮೇಲೆ ಕುಳಿತು, ಎಣ್ಣೆಹಾಕಿ ತಲೆಬಾಚಿ ಕನಕಾಂಬರ ಮುಡಿದ ಅಪರಿಚಿತ ಹೆಂಗಸಿನೊಂದಿಗೆ ತರಕಾರಿ ರೇಟಿನ ಬಗ್ಗೆ ಮಾತನಾಡುತ್ತಿರುತ್ತಾಳೆ; ಕೆಲಸದ ಒತ್ತಡದಲ್ಲಿ ತಮ್ಮವರೊಂದಿಗೆ ಮಾತನಾಡಲು ಸಮಯವೇ ಸಿಗದ ಹುಡುಗನೊಬ್ಬ ಬಸ್ಸು ತಡವಾಗಿ ಬರುತ್ತಿರುವುದಕ್ಕೆ ಕಾರಣವನ್ನೋ, ಆಫೀಸಿನ ಪ್ರಮೋಷನ್ ವಿಷಯವನ್ನೋ, ಸ್ನೇಹಿತನ ಮದುವೆಯ ಸಂಗತಿಯನ್ನೋ ಅಕ್ಕ-ತಂಗಿಯರೊಂದಿಗೆ ಹರಟುತ್ತ ಆಚೀಚೆ ಓಡಾಡುತ್ತಿರುತ್ತಾನೆ; ಹೆಂಡತಿಯನ್ನು ಬಸ್ ಹತ್ತಿಸಲು ಬಂದವನ ಕಾರಿನಲ್ಲಿ ಹಳೆಯ ಗಝಲ್ ಗಳು ಒಂದೊಂದಾಗಿ ಪ್ಲೇ ಆಗುತ್ತ ಹೊಸದೊಂದು ಸಂವಹನವನ್ನು ಹುಟ್ಟುಹಾಕುತ್ತವೆ; ಡಿಸ್ಕೌಂಟಿನಲ್ಲಿ ಖರೀದಿಸಿದ ರೇಷ್ಮೆ ಸೀರೆ, ಹೊಸ ಸಿನೆಮಾವೊಂದರ ನಾಯಕನ ಹೇರ್ ಸ್ಟೈಲ್, ಕ್ರಿಕೆಟ್ಟಿನ ಬೆಟ್ಟಿಂಗ್ ನಲ್ಲಿ ಕಳೆದುಕೊಂಡ ಹಣ, ಟ್ರೆಕ್ಕಿಂಗ್ ನಲ್ಲಿ ಸಿಕ್ಕಿದ ಹೊಸ ಗೆಳೆಯರು, ಅತ್ತೆ-ಸೊಸೆಯರ ಮನಸ್ತಾಪಗಳೆಲ್ಲವೂ ಮಾತಾಗಿ ಹೊರಬಂದು ಬಸ್ ಸ್ಟಾಪಿನ ಪ್ಲಾಟ್ ಫಾರ್ಮ್ ಮೇಲೆ ಒಂದರೊಳಗೊಂದು ಸೇರಿಹೋಗುತ್ತವೆ. ಹಾಗೆ ಸಂಧಿಸಿದ ಮಾತುಕತೆಗಳೆಲ್ಲವೂ ಆ ಕ್ಷಣದ ಬದುಕನ್ನು ತಮ್ಮದಾಗಿಸಿಕೊಂಡು ಬಸ್ಸನ್ನೇರಲು ರೆಡಿಯಾಗುತ್ತವೆ. ರಾತ್ರಿಬಸ್ಸಿನೊಳಗಿನ ಮಾತುಕತೆಗಳದ್ದೂ ಒಂದು ವಿಶಿಷ್ಟವಾದ ಪ್ರಪಂಚ. ಸ್ನೇಹವೊಂದು ಅದೆಷ್ಟು ಸುಲಭವಾಗಿ ಹುಟ್ಟಿಕೊಳ್ಳಬಹುದೆನ್ನುವ ಪ್ರಾಕ್ಟಿಕಲ್ ಎನ್ನಬಹುದಾದಂತಹ ಕಲ್ಪನೆ ಈ ಬಸ್ಸುಗಳೊಳಗೆ ಸಿದ್ಧಿಸುತ್ತದೆ. ಅಂಥದ್ದೊಂದು ಸ್ನೇಹ ಹುಟ್ಟಿಕೊಳ್ಳಲು ಒಂದೇ ರೀತಿಯ ಆಸಕ್ತಿಯಾಗಲೀ, ಹವ್ಯಾಸಗಳಾಗಲೀ, ಮನೋಭಾವಗಳಾಗಲೀ ಅಗತ್ಯವಿಲ್ಲ; ವಯಸ್ಸಿನ ಇತಿಮಿತಿಗಳಂತೂ ಮೊದಲೇ ಇಲ್ಲ! ಪಕ್ಕದಲ್ಲಿ ಕುಳಿತವರೆಲ್ಲ ಸಲೀಸಾಗಿ ಸ್ನೇಹಿತರಾಗಿ, ಕಷ್ಟ-ಸುಖಗಳ ವಿನಿಮಯವೂ ಆಗಿ, ಮಧ್ಯರಾತ್ರಿಯಲ್ಲಿ ಅದ್ಯಾವುದೋ ಊರಿನಲ್ಲಿ ಬಸ್ಸು ನಿಂತಾಗ ಒಟ್ಟಿಗೇ ಕೆಳಗಿಳಿದು ಜೊತೆಯಾಗಿ ಟೀ ಕುಡಿದು, ಬೆಳಗ್ಗೆ ಬಸ್ಸಿಳಿದ ನಂತರ ಸಂಪರ್ಕವೇ ಇಲ್ಲದಿದ್ದರೂ, ರಾತ್ರಿಬಸ್ಸಿನಲ್ಲಿ ಜೊತೆಯಾಗಿ ಪ್ರಯಾಣ ಮಾಡಿದವರ ಚಹರೆ-ಸಂಭಾಷಣೆಗಳೆಲ್ಲವೂ ಮನಸ್ಸಿನಲ್ಲಿ ಉಳಿದುಹೋಗಿರುತ್ತವೆ. ಆ ವ್ಯಕ್ತಿಯನ್ನು ಮತ್ತೆಂದೂ ಭೇಟಿಯಾಗದಿದ್ದರೂ ಅಲ್ಪಕಾಲದ ಆ ಸ್ನೇಹದ ತುಣುಕೊಂದು ನೆನಪಾಗಿ ಉಳಿದು, ಯಾವುದೋ ಸಂದರ್ಭದ ಯಾವುದೋ ಸಂಗತಿಗಳೊಂದಿಗೆ ತನ್ನನ್ನು ತಾನು ಜೋಡಿಸಿಕೊಂಡು ಸದಾಕಾಲ ಜೊತೆಗಿರುತ್ತದೆ. ಅಂತಹ ಚಿಕ್ಕಪುಟ್ಟ ಸ್ನೇಹಗಳೇ ಒಂದಾಗಿ ಮಾನವೀಯ ನೆಲೆಯಲ್ಲಿ ಅಂತರಂಗದೊಂದಿಗೆ ಮಾತುಕತೆ ನಡೆಸುತ್ತ ಚಾಕಲೇಟ್ ಬಾಕ್ಸಿನೊಳಗಿನ ಬೊಂಬೆಗಳಂತೆ ಬದುಕಿನ ಸವಿಯನ್ನು ಹೆಚ್ಚಿಸುತ್ತಿರುತ್ತವೆ. ಈ ರಾತ್ರಿಬಸ್ಸುಗಳನ್ನು ಏರುವಾಗಲೆಲ್ಲ ನನ್ನನ್ನೊಂದು ವಿಚಿತ್ರವಾದ ಭಯವೂ ಆವರಿಸಿಕೊಳ್ಳುತ್ತಿತ್ತು. ಚಿಕ್ಕವಳಿದ್ದಾಗ ವಿಧಿ-ಹಣೆಬರಹಗಳ ಕಥೆಗಳನ್ನೆಲ್ಲ ಕೇಳುತ್ತ ಬೆಳೆದಿದ್ದ ನನಗೆ ಈ ಬೋರ್ಡುಗಳಿಲ್ಲದ ಬಸ್ಸುಗಳನ್ನು ಏರುವಾಗಲೆಲ್ಲ, ಹಣೆಬರಹವನ್ನೇ ಬರೆದಿರದ ಬದುಕಿನೊಂದಿಗೆ ಓಡುತ್ತಿರುವ ಅನುಭವವಾಗಿ ವಿಚಿತ್ರವಾದ ತಳಮಳವಾಗುತ್ತಿತ್ತು. ಐದನೇ ಕ್ಲಾಸಿನಲ್ಲಿ ಕಲಿತ ಇಂಗ್ಲಿಷ್ ಅಕ್ಷರಮಾಲೆಯನ್ನು ಮತ್ತೊಮ್ಮೆ ಮನನ ಮಾಡಿಕೊಂಡು, ಬೋರ್ಡಿನ ಬದಲಾಗಿ ಗ್ಲಾಸಿನ ಮೇಲೆ ಬರೆದಿರುತ್ತಿದ್ದ ಅಕ್ಷರವನ್ನು ಮತ್ತೆಮತ್ತೆ ಓದಿಕೊಂಡು, ವಿಧಿಯ ಮೇಲೆ ಭಾರ ಹಾಕುತ್ತಿರುವ ಭಾವದಲ್ಲಿ ಬಸ್ಸಿನೊಳಗೆ ಲಗೇಜು ಇಳಿಸುತ್ತಿದ್ದೆ. ಲಗೇಜಿನಲ್ಲಿರುವ ಟೆಡ್ಡಿಬೇರ್-ಚಾಕಲೇಟುಗಳೆಲ್ಲ ಸುಸೂತ್ರವಾಗಿ ಮಕ್ಕಳ ಕೈಯನ್ನು ತಲುಪುವಂತಾಗಲಿ ಎಂದು ಪ್ರಾರ್ಥಿಸುತ್ತ ಡ್ರೈವರಿನ ಮುಖವನ್ನೊಮ್ಮೆ ನೋಡುತ್ತಿದ್ದೆ. ಎರಡು ತಿಂಗಳಿಗೊಮ್ಮೆಯಾದರೂ ರಾತ್ರಿಬಸ್ಸಿನೊಂದಿಗೆ ಒಡನಾಟವಿಟ್ಟುಕೊಂಡಿದ್ದ ನನಗೆ ಎಷ್ಟೋ ಸಲ ಮುಖಪರಿಚಯವಿರುವ ಡ್ರೈವರಿನ ದರ್ಶನವಾಗಿ, ವರುಷಗಳಿಂದ ಬದಲಾಗದೇ ಪೀಠದಲ್ಲಿ ಕುಳಿತಿರುವ ದೇವರನ್ನು ನೋಡಿದ ಸಮಾಧಾನವಾಗುತ್ತಿತ್ತು. ಆ ನೆಮ್ಮದಿಯ ಭಾವದಲ್ಲಿಯೇ ಸೀಟಿನ ನಂಬರನ್ನು ಹುಡುಕಿ ಕಾಲುಚಾಚಿದ ತಕ್ಷಣ, ಅದೇ ಲಾಸ್ಟ್ ಬಸ್ಸಿನ ಕಿಟಕಿಪಕ್ಕದ ಸೀಟು ತಪ್ಪದೇ ನೆನಪಾಗುತ್ತಿತ್ತು. ರಾತ್ರಿಬಸ್ಸೊಂದು ಕನಸಿನಂತೆ ಮನಸ್ಸನ್ನಾವರಿಸಿಕೊಂಡು, ನಿಧಾನವಾಗಿ ನೆನಪುಗಳೊಂದಿಗೆ ಒಡನಾಡುತ್ತಿರುವ ಸಮಯದಲ್ಲಿಯೂ ಅವುಗಳೆಡೆಗಿನ ಮೋಹ ಮಾತ್ರ ಟಿವಿ ಸ್ಟ್ಯಾಂಡಿನಲ್ಲಿರುವ ಹಳೆಯ ಹಾಡುಗಳ ಸಿಡಿಗಳಂತೆ ಹಳತಾಗದೇ ಉಳಿದುಕೊಂಡಿದೆ. ಮಾತುಕತೆಗಳೆಲ್ಲ ಮೊಬೈಲಿಗೆ ಸೀಮಿತವಾಗಿಹೋಗುತ್ತಿರುವ ಕಾಲದಲ್ಲಿಯೂ ರಾತ್ರಿಬಸ್ಸುಗಳಲ್ಲಿ ಸುಂದರವಾದ ಸಂಬಂಧವೊಂದು ಹುಟ್ಟಿಕೊಂಡು ಕಾಂಟ್ಯಾಕ್ಟ್ ನಂಬರುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರಬಹುದು; ನಿಲುಗಡೆಯ ಚಹಾದ ಅಂಗಡಿಯಲ್ಲೊಬ್ಬ ಬಿಸ್ಕಿಟ್ ಪ್ಯಾಕೆಟ್ಟುಗಳಲ್ಲಿ ಸ್ನೇಹವನ್ನು ಹಂಚುತ್ತಿರಬಹುದು; ಲಗೇಜಿನೊಳಗಿನ ಮಾರ್ಕ್ಸ್ ಕಾರ್ಡು, ಲಗ್ನಪತ್ರಿಕೆ, ನೆಲ್ಲಿಕಾಯಿ, ತುಳಸಿಬೀಜಗಳೆಲ್ಲವೂ ನಿಶ್ಚಿಂತೆಯಿಂದ ಕನಸುಕಾಣುತ್ತಿರಬಹುದು. *************************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಅಂಕಣಬರಹ ಅದುಮಿಟ್ಟ ಮನದ ಮಾತುಗಳು ಕವಿತೆಗಳಾದಾಗ ಪುಸ್ತಕ- ಸಂತೆ ಸರಕುಕವಿ- ಬಿ ಎ ಮಮತಾ ಅರಸೀಕೆರೆಪ್ರಕಾಶನ- ನಾಕುತಂತಿ ಬೆಲೆ- ೮೦/- ಸಿದ್ಧ ಸೂತ್ರ ಬದಲಾಗಬೇಕುಅಜ್ಜಿ ಕಥೆಯಲ್ಲಿಅರಿವು ಜೊತೆಯಾಗಬೇಕುಹೊಸ ಕಥೆಗಳ ಬರೆಯಬೇಕುಅಕ್ಷರ ಲೋಕದಲಿಅಕ್ಷರ ಲೋಕದಲ್ಲಿ ಬದಲಾವಣೆ ಬಯಸುವ ಮಮತಾ ಆಡಲೇ ಬೇಕಾದ ಮಾತುಗಳೊಂದಿಗೆ ನಮ್ಮೆದುರಿಗಿದ್ದಾಳೆ. ಮಮತಾ ಅಂದರೇ ಹಾಗೆ. ಹೇಳಬೇಕಾದುದನ್ನು ಮನದೊಳಗೇ ಇಟ್ಟುಕೊಂಡಿರುವವಳಲ್ಲ. ಹೇಳಬೇಕಾದುದ್ದನ್ನು ಥಟ್ಟನೆ ಹೇಳಿಬಿಡುವವಳು. ಆ ಮಾತಿನಿಂದ ಏನಾದರೂ ವ್ಯತಿರಿಕ್ತವಾದರೆ ನಂತರದ ಪರಿಣಾಮಗಳ ಬಗ್ಗೆ ಕೊನೆಯಲ್ಲಿ ಯೋಚಿಸಿದರಾಯಿತು ಎಂದುಕೊಂಡಿರುವವಳು. ಹೊಸದಾಗಿ ನೋಡುವವರಿಗೆ ಇದ್ಯಾಕೆ ಹೀಗೆ ಎಂದು ಅಚ್ಚರಿಯಾದರೂ ಜೊತೆಗೇ ಇರುವ ನಮಗೆ ಇದು ಅತ್ಯಂತ ಸಹಜ. ಏನಾದರೂ ಒಂದು ಘಟನೆ ನಡೆದಾಗ ಅದಕ್ಕೆ ಮಮತಾ ತಕ್ಷಣ ಪ್ರತಿಕ್ರಿಯಿಸದೇ ಇದ್ದರೆ ಮಮತಾ ಎಲ್ಲಿ? ಆರಾಂ ಇದ್ದಾಳೆ ತಾನೆ? ಎಂದು ಸ್ನೇಹಿತ ಬಳಗದಲ್ಲಿ ಕೇಳಿಕೊಳ್ಳುವಷ್ಟು ಅವಳು ಶೀಘ್ರ ಉತ್ತರ ನೀಡುವವಳು. ಹೀಗಾಗಿ ಮಮತಾ ತಮ್ಮ ಈ ಸಂಕಲನದಲ್ಲಿ ಹೀಗೆ ನೇರಾನೇರ, ಎದೆಗೆ ಢಿಕ್ಕಿ ಹೊಡೆಯುವ ಅನೇಕ ಸಾಲುಗಳೊಂದಿಗೆ ನಮಗೆ ಎದುರಾಗುತ್ತಾರೆ. ನಿನಗೆ ನೀನೆ ಕತೆಯಾಗುವುದನಿಲ್ಲಿಸಿ ಬಿಡಲಾಗದೇನೆ ಸಖಿಸಾಕು ಮಾಡಲಾಗದೇನೆಅವನ ಹಂಬಲಿಕೆಬರೀ ನಿನ್ನದೇ ಬಿಕ್ಕಳಿಕೆ ಎಂದು ಪ್ರಾರಂಭವಾಗುವ ‘ಅವತಾರಗಳು’ ಎಂಬ ಕವಿತೆ ಆದಿಯಿಂದ ಹಿಡಿದು ಇಡೀ ಪುರಾಣಗಳನ್ನು ಜಾಲಾಡಿ ಹೆಣ್ಣಿನ ಕಣ್ಣೀರನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ಇಡೀ ಪುರಾಣ, ಭಾರತದ ಇತಿಹಾಸದ ತುಂಬೆಲ್ಲ ಹೆಣ್ಣಿನ ಬಿಕ್ಕಳಿಕೆಯ ನೋವುಗಳೇ ತುಂಬಿದೆ. ಕಣ್ಣಿಗೆ ಕಾಣದ ಸಂಪ್ರದಾಯಗಳ ಹೊರೆ ಇರುವ ಲಕ್ಷ್ಮಣರೇಖೆ ಎಲ್ಲಾ ಹೆಣ್ಣುಗಳ ಸುತ್ತಲೂ ಆವರಿಸಿಕೊಂಡಿದೆ. ಅದನ್ನು ಮೀರಿದರೆ ಅನರ್ಥ ಎಂದು ಆ ಕಾಲದಿಂದಲೂ ಹೆಣ್ಣನ್ನು ಬಲವಂತವಾಗಿ ನಂಬಿಸುತ್ತ ಬರಲಾಗಿದೆ. ಮತ್ತು ಆಗುವ ಎಲ್ಲಾ ಅನಾಹುತಗಳಿಗೂ ಹೆಣ್ಣೇ ಕಾರಣ ಎಂದು ಪ್ರಪಂಚವನ್ನು ಒಪ್ಪಿಸುತ್ತಲೇ ಬಂದಿದೆ ಈ ಪುರುಷಪ್ರಧಾನ ಸಮಾಜ. ಹೆಣ್ಣು ಮಾತನಾಡಿದರೆ ತಪ್ಪು, ಹೆಣ್ಣು ನಕ್ಕರೆ ತಪ್ಪು, ಹೆಣ್ಣು ಏನಾದರೂ ಆಸೆಪಟ್ಟರೆ ತಪ್ಪು, ಕೊನೆಗೆ ಹೆಣ್ಣು ಅತ್ತರೂ ತಪ್ಪು. ಆಕೆ ಗಂಡು ಆಡಿಸಿದಂತೆ ಆಡುವ ಗೊಂಬೆ ಅಷ್ಟೇ. ಆತ ಏನು ಹೇಳಿದರೂ ಮರು ಮಾತನಾಡದೇ ಒಪ್ಪಿಕೊಳ್ಳಬೇಕಾದ ಜೀವವಿರುವ ವಸ್ತು. ಆತನ ಮನೆ, ಹೊಲಗದ್ದೆ, ಬೈಕು, ಕಾರು ಮತ್ತು ಉಳಿದೆಲ್ಲ ಐಶಾರಾಮಿ ವಸ್ತುಗಳಂತೆಯೇ. ನಿರ್ಧಾರ ತೆಗೆದುಕೊಳ್ಳಬೇಕಾದವನು ಅವನು ಮತ್ತು ಅದರ ಬಗ್ಗೆ ಏನೂ ಕೇಳದೆ ಜಾರಿಗೆ ತರಬೇಕಾದವಳು ಮಾತ್ರ ಅವಳು. ಬದುಕಿನಲ್ಲಿ ತನ್ನಷ್ಟೇ ಅವಳೂ ಮುಖ್ಯವಾದವಳು ಎಂಬುದನ್ನು ಕನಸಿನಲ್ಲೂ ಯೋಚಿಸದ ಆತ ತನ್ನಷ್ಟಕ್ಕೆ ತಾನು ತೆಗೆದುಕೊಳ್ಳುವ ಏಕಮುಖಿ ನಿರ್ಧಾರಗಳಿಗೆ, ಜೀವನದ ಮಹತ್ವದ ತೀರ್ಮಾನಗಳಿಗೆ ಆಕೆ ಬದಲು ಮಾತನಾಡದೇ ಒಪ್ಪಿಕೊಳ್ಳಬೇಕು. ‘ಪ್ರೀತಿಸುತ್ತೇನೆ ಬಾ’ ಎಂದರೆ ಹರಕೆಯ ಕುರಿಯಂತೆ ಹತ್ತಿರ ಬರಬೇಕು, ‘ನೀನು ನನಗೆ ಬೇಡ’ ಎಂದರೆ ಬದಲು ಹೇಳದೇ ದೂರ ಸರಿಯಬೇಕು. ಅದರಲ್ಲಿಯೇ ಆಕೆಯ ಶ್ರೇಯಸ್ಸಿದೆ ಎಂದು ಶತಶತಮಾನಗಳಿಂದ ಹೆಣ್ಣನ್ನು ಭ್ರಮೆಯಲ್ಲಿ ಇಡುತ್ತ ಬರಲಾಗಿದೆ. ಆಕೆ ಸಮಾನತೆಯ ಬಗ್ಗೆ ಮಾತನಾಡುವುದೇ ಅಪರಾಧ. ಹೀಗಾಗಿಯೇ ಸಮಾನತೆಯ ಪ್ರತಿಭಟನೆನಿನ್ನದಲ್ಲ ಜೋಕೆಎಂದು ಅವಳನ್ನು ಎಚ್ಚರಿಸುತ್ತ ಆಕೆ ಏನಾದರೂ ಮಾತನಾಡಿದರೆಚಾರಿತ್ರವಧೆ, ಆಸಿಡ್ ದಾಳಿಕಲ್ಕಿಯ ಲೋಕದ ಕಾಣಿಕೆ ಎಂಬಂತೆ ಅವಳನ್ನು ಜೀವಂತವಿರುವಾಗಲೇ ಸಾಯಿಸಿ ಬಿಡುತ್ತದೆ. ಆದರೆ ಈ ಗಂಡುಲೋಕದ ಲೆಕ್ಕಚಾರಗಳೇ ವಿಚಿತ್ರ. ಕುಸಿದು ಬಿದ್ದರೆ ಎತ್ತಲು ಹತ್ತಾರು ಕೈಗಳು ಸಹಾಯ ಬೇಡದೆಯೂ ಮುಂದೆ ಬರುತ್ತವೆ. ‘ಮೈದಡವಿ’ ಸಾಂತ್ವಾನ ಹೇಳುತ್ತವೆ. ಕೇಳದೆಯೂ ‘ಎದೆಗೊರಗಿಸಿಕೊಂಡು’ ಸಮಾಧಾನ ಹೇಳುತ್ತವೆ. ಇಂತಹ ಪುರಾಣ ಸೃಷ್ಟಿಕೃತ ಪುರುಶೋತ್ತಮರನ್ನು ನಾವು ಪ್ರತಿದಿನವೂ ಕಾಣುತ್ತಿದ್ದೇವೆ ಎಂದು ಕವಯತ್ರಿ ಅಭಿಪ್ರಾಯ ಪಡುತ್ತಾರೆ. ಪುರುಷ ಪ್ರಪಂಚದ ಈ ದ್ರಾಷ್ಟ್ಯಕ್ಕೆ ಹೆಣ್ಣಿನ ನವಿರು ಲೋಕ ನಲುಗಿಹೋಗಿದೆ. ಕಣ್ಣಲ್ಲೇ ಅಳೆದು ಬಿಡುತ್ತೀರಿಕರಾರುವಕ್ಕಾದ ಅಳತೆಗಳುಬೇಡವೇ ಬೇಡ ನಿಮಗೆಯಾವುದೇ ಸಿದ್ಧ ಮಾಪಕಗಳುಬಾಯಿತುಂಬಾ ಚಪ್ಪರಿಸುತ್ತೀರಿಮತ್ತೆ ಮತ್ತೆ ಸವಿಯುತ್ತೀರಿಅದೆಷ್ಟು ತೆವಲೋಅದೇ ಧ್ಯಾನ ಅದೇ ಉಸಿರುರಸಗವಳವೇ ಅಂಗಾಂಗಗಳ ಹೆಸರು ನಯವಾದ ರೇಷ್ಮೆ ಬಟ್ಟೆಯಲ್ಲಿ ಸುತ್ತಿಕೊಂಡು ಮತ್ತಗೆ ಭಾರಿಸಿದಂತಹ ಈ ಸಾಲುಗಳು ನೀಡುವ ಮೂಕೇಟು ಅತ್ತಯಂತ ಕಠೋರವಾದವುಗಳು. ರಕ್ತ ಹೊರಬರಲಾರದು. ಆದರೆ ಒಳ ಏಟಿಗೆ ಚರ್ಮ ನೀಲಿಗಟ್ಟುವುದನ್ನು ತಡೆಯಲಾಗದು. ಆದರೆ ಈ ಏಟು ತಮಗೇ ನೀಡಿದ್ದು ಎಂದು ಈ ಸಮಾಜ ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ಪುರುಷರ ತವಲಿಗೆ ಇನ್ನೊಂದು ಪದ ಬೇಡ. ದೀಪ ಮತ್ತು ಕಲಣಿವೆ ಎನ್ನುವ ಕವಿತೆಯನ್ನೋದಿದರೆ ಈ ಪುರುಷ ವಿಕೃತಿಯ ಭೂತೋಚ್ಛಟನೆ ಆಗುವುದಂತೂ ಸತ್ಯ. ಆದರೆ ಕವನ ಓದಿ ಸಮಾಜ ಬದಲಾಗುತ್ತದೆಯೇ? ಬದಲಾಯಿಸುವ ಅವಕಾಶ ಸಿಕ್ಕರೆ ಎಲ್ಲವನ್ನು ಬದಲಿಸಿಬಿಡಬಹುದಿತ್ತು ಎನ್ನುವ ಕವಯತ್ರಿಯ ಮನದಾಳದ ಮಾತು ಇಲ್ಲಿ ಕವಿತೆಯಾಗಿದೆ ಸದ್ಯಮೂರನೇ ಕಣ್ಣುಕೊಡಲಿಲ್ಲ ಪ್ರಭುವೆಶಾಪಗಳೂ ಕೂಡ ಫಲಿಸಲಾರವು ಹಾಳಾಗಿ ಹೋಗಲಿ ಎಂದು ನಾವು ನೀಡುವ ಶಾಪ, ಬೆನ್ನ ಹಿಂದಿನ ಬೈಗುಳಗಳು ಈ ಮಾನಗೆಟ್ಟವರನ್ನು ಏನೂ ಮಾಡದು ಎನ್ನುವ ಪರಿಜ್ಞಾನ ಅವರಿಗಿದೆ. ಹೀಗಾಗಿಯೇ ಮಮತಾ ಮತ್ತೆ ಮತ್ತೆ ಅಕ್ಕನನ್ನು ಆತುಕೊಳ್ಳುತ್ತಾರೆ ಹಾದಿಯಲಿ ಹೆಜ್ಜೆ ಗುರುತು ಬೇಡಗೆಜ್ಜೆ ಸದ್ದು ಕೇಳದಾದೀತುನಾ ನಿನ್ನ ಹಿಂಬಲಿಸುವಹಂಬಲ ಬೇಡಅಕ್ಕನ ಕಾಂಬ ಗುರಿಮಾಸಿ ಹೋದೀತು ಎನ್ನುತ್ತಾರೆ. ತನ್ನ ಹಾದಿಯಲ್ಲಿ ತಾನು ದೃಢವಾಗಿ ಹೆಜ್ಜೆ ಇಡುತ್ತಿರುವಾಗ ತನ್ನ ಹಾದಿಯಲ್ಲಿ ಬಂದರೆ ಗೆಜ್ಜೆ ಸದ್ದು ಕೇಳದಾಗುತ್ತದೆ ಎನ್ನುವುದಲ್ಲದೇ ಯಾವುದೇ ಕಾರಣಕ್ಕೂ ತಾನು ಅವನನ್ನು ಹಿಂಬಾಲಿಸುವ ಗುರಿ ಹೊಂದಿಲ್ಲ ಎನ್ನುತ್ತಾರೆ. ಯಾಕೆಂದರೆ ಅವರ ಗುರಿ ಒಂದೆ. ಅಕ್ಕನ ಹಾದಿಯಲ್ಲಿ ನಡೆದು ತಮ್ಮ ಜೀವನಕ್ಕೆ ತಾನು ಜವಾಬ್ಧಾರರೆನ್ನುವವರನ್ನು ಒಲೆಗಿಕ್ಕುವುದು. ಇದು ಮಾಮೂಲಿಯಾಗಿ ಬರುವಂಥಹುದ್ದಲ್ಲ. ಅದಕ್ಕೊಂದು ದಿಟ್ಟತನಬೇಕು. ಅಂತಹ ದೃಢತೆಗಾಗಿ ಮತ್ತೆ ಅಕ್ಕನನ್ನೇ ಮೊರೆ ಹೋಗಬೇಕು. ಕಾಯುತಿವೆ ಜೀವಗಳುಜಿಗಿದು ಪರದೆಯಿಂದಾಚೆಸೀಳಿ ಬಲೆಗಳನ್ನುಅಕ್ಕ ಹೇಳೆನೀನ್ಹೇಗೆ ದಾಟಿದೆಬಂಧನದ ಸುಳಿಗಳನ್ನು ಎನ್ನುತ್ತ ಈ ಸಂಬಂಧಧ ಸುಳಿಗಳು ಮೇಲೇಳಲು ಪ್ರಯತ್ನಿಸಿದಷ್ಟೂ ಒಳಗೆಳೆದುಕೊಂಡು ಮುಳುಗಿಸುವ ಚೋದ್ಯಕ್ಕೆ ಬೆರಗಾಗುತ್ತಾರೆ.ಮನುಷ್ಯ ಸಂಬಂಧ ಯಾವತ್ತೂ ಕುತೂಹಲಕರವಾದದ್ದು. ಅದು ತಂದೆ ತಾಯಿಗಳೊಟ್ಟಿಗೆ ಇರುವ ಮಕ್ಕಳ ಸಂಬಂಧವಾಗಿರಬಹುದು, ಸಹೋದರ, ಸಹೋದರಿಯರ ನಡುವಣ ಬಂಧವಾಗಿರಬಹುದು ಗಂಡ ಹೆಂಡತಿಯ ನಡುವಣ ಸಂಬಂಧವಾಗಿರಬಹುದು. ಅಥವಾ ಸ್ನೇಹವಾಗಿರಬಹುದು ಇಲ್ಲವೇ ವ್ಯಾಖ್ಯಾನವೇ ಕೊಡಲು ಅಸಾಧ್ಯವಾದ ಪ್ರೇಮ ಸಂಬಂಧವಿರಬಹುದು. ಅವುಗಳಿಗೆ ಅರ್ಥ ಹಚ್ಚುವುದು ಅಸಾಧ್ಯವೇ ಸರಿ. ಮಮತಾ ಕೂಡ ‘ಮೇಲಾಟ’ ಕವನದ ಮೂಲಕ ಇಡೀ ಮನುಷ್ಯ ಸಂಬಂಧಗಳಿಗೆ ಕನ್ನಡಿ ಹಿಡಿದಿದ್ದಾರೆ. ಈ ಸಂಬಂಧಗಳ ಎಳೆ ಅದೆಷ್ಟು ಸೂಕ್ಷ್ಮ. ಕೆಲವೊಮ್ಮೆ ಎಂತಹ ಆಘಾತಗಳಿಗೂ ಕಿತ್ತು ಹೋಗದ ಸಂಬಂಧಗಳು ಒಮ್ಮೊಮ್ಮೆ ಸಣ್ಣ ಎಳೆದಾಟಕ್ಕೂ ತುಂಡಾಗಿ ಹೋಗುವ ನವಿರು ಎಳೆಗಳಂತೆ ಕಾಣುತ್ತದೆ. ಹಾಗಾದರೆ ಸಂಬಂಧಗಳು ಹದಗೊಳ್ಳುವುದು ಯಾವಾಗ? ಕವಯತ್ರಿಗೂ ಈ ಪ್ರಶ್ನೆ ಬೃಹದಾಕಾರವಾಗಿ ಕಾಡಿದೆ. ಹೀಗಾಗಿಯೇ ಸಂಬಂಧಗಳನ್ನು ಹದಗೊಳಿಸಲು ಬೇಯಲಿಡುತ್ತಾರೆ. ಕಾವು ಕೊಟ್ಟರೆ ಮಾತ್ರ ಮೊಟ್ಟೆಯೊಡೆಯುವ ಕ್ರೀಯೆಯಂತೆ ಹದವಾಗಿ ಕಾವು ಹೆಚ್ಚಿಸಿ ಒಂದು ಕುದಿತ ಬರಲಿ ಎಂದು ಕಾಯುತ್ತಾರೆ. ಇಲ್ಲಿ ಕವಿಯತ್ರಿ ಸಂಬಂಧವನ್ನು ಹದಗೊಳಿಸುವ ಪ್ರಕ್ರಿಯೆ ಅಕ್ಕಿಯನ್ನು ನೀರು ಹಾಕಿ ಕೊತಕೊತನೆ ಕುದಿಸುವ ಅನ್ನ ಮಾಡುವ ರೂಪಕದಂತೆ ಕಾಣುತ್ತದೆ. ಅನ್ನದ ಎಸರು ಕುದಿಯುವಾಗ ತಕತಕನೆ ಕುಣಿಯುತ್ತ ಮುಚ್ಚಿದ ತಟ್ಟೆಯನ್ನೇ ಬೀಳಿಸುತ್ತದೆ. ಸಂಬಂಧ ಗಟ್ಟಿಯಾಗುವಾಗಲೂ ಅಷ್ಟೇ. ಅದೆಷ್ಟು ಶಬ್ಧ, ಅದೆಷ್ಟು ರಾಣಾರಂಪ. ಕೆಲವೊಮ್ಮೆ ಈ ಸಂಬಂಧ ಮುರಿದೇ ಹೋಯಿತು ಎಂಬಷ್ಟು ಶಬ್ಧ ಮಾಡುತ್ತದೆ. ಆದರೆ ನಿಜವಾದ ಸಂಬಂಧಗಳು ಹಾಗೆ ಮುಗಿಯುವುದೂ ಇಲ್ಲ. ಚಿಕ್ಕಪುಟ್ಟ ಜಗಳಗಳಿಗೆ ಹೆದರುವುದೂ ಇಲ್ಲ. ಆದರೆ ಹಾಗೆಂದುಕೊಳ್ಳುವುದೂ ಕೆಲವೊಮ್ಮೆ ತಪ್ಪಾಗುತ್ತದೆ. ಏನೇನೂ ಮುಖ್ಯವಲ್ಲದ ವಿಷಯಗಳು ಸಂಬಂಧವನ್ನು ಮುರಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣೆದುರಿಗೇ ಇವೆ. ಆದರೆ ಕೊನೆಗೂ ಒಂದು ಪ್ರಶ್ನೆ ಹಾಗೆಯೇ ಉಳಿದು ಹೋಗುತ್ತದೆ. ಅದನ್ನೇ ಮಮತಾ ಮುಖ್ಯವಾಗಿ ಎತ್ತಿ ತೋರಿಸುತ್ತಾರೆ. ಸಂಬಂಧಗಳಲ್ಲಿರುವ ಮೇಲಾಟ. ತಾನು ಹೆಚ್ಚು, ನಾನು ಹೆಚ್ಚು ಎನ್ನುವ ಅಹಂ ನಮ್ಮ ಸಂಬಂಧವನ್ನು ನುಂಗಿ ನೊಣೆಯುತ್ತದೆ. ಎಲ್ಲಿ ಅಹಂ ಹಾಗೂ ಸ್ವಾರ್ಥ ಇರುತ್ತದೋ ಅಲ್ಲಿ ಸಂಬಂಧಗಳು ಬಹುಕಾಲ ಬಾಳಲಾರವು. ಮತ್ಸರ ಹಾಗೂ ಅಸೂಯೆಗಳು ಸಂಬಂಧಗಳ ನಡುವೆ ಬೆಂಕಿ ಹಚ್ಚುತ್ತವೆ. ಎಲ್ಲಿ ತಾವೇ ಹೆಚ್ಚು ಎನ್ನುವ ಹೆಚ್ಚುಗಾರಿಕೆ ಇಬ್ಬರ ನಡುವೆ ಉಂಟಾಗುತ್ತದೋ ಅಲ್ಲಿ ಸಂಬಂಧ ಹಳಸಲಾಗುತ್ತದೆ. ಎಲ್ಲಿ ಒಬ್ಬರ ಉನ್ನತಿಯನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನ ಕಿಡಿ ಹೊಗೆಯಾಡುತ್ತದೋ ಅಲ್ಲಿ ಆ ಸಂಬಂಧ ಮುಕ್ತಾಯಗೊಳ್ಳುತ್ತದೆ ಎನ್ನುತ್ತಾರೆ. ತಕ್ಕಡಿಯಲ್ಲಿ ಒಂದು ತೂಕದ ಬಟ್ಟಲು ಒಮ್ಮೆ ಕೆಳಕ್ಕೆಳೆದರೆ ಮತ್ತೊಮ್ಮೆ ಇನ್ನೊಂದು ತೂಕದ ಬಟ್ಟಲು ಸೆಣೆಸಾಟಕ್ಕೆ ನಿಲ್ಲುತ್ತದೆ. ಕೆಳಗೆ ಜಗ್ಗುವ ಈ ಪ್ರಕ್ರಿಯೆ ನಿರಂತರ. ಇಷ್ಟಾಗಿಯೂ ಕವಯತ್ರಿ ಸಂಬಂಧಗಳನ್ನು ಸುಲಭವಾಗಿ ಬಿಟ್ಟುಕೊಡಲು ಒಪ್ಪುವುದಿಲ್ಲ. ಹೀಗಾಗಿ ಕಾದು ನೋಡುತ್ತೇನೆ ಎನ್ನುತ್ತಾರೆ. ಹಠಕ್ಕೆ ಬೀಳುವ ಸಂಬಂಧಗಳಿಗೆ ಹೊಸ ಸೂತ್ರ ಬರೆಯುತ್ತ ಏಣಿಯಾಗುವ ಮನಸ್ಸಿದೆ ಕವಯತ್ರಿಗೆ. ಸಂಬಂಧಗಳ ನಡುವೆ ಸೇತುವಾಗುವ ಹಂಬಲವಿದೆ. ರೂಪಕಗಳಲ್ಲಿ ಮಾತನಾಡುವ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಇದೂ ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು. ಹಾಗೆಂದು ಯಾವ ಸಂಬಂಧಗಳೂ ಅನಿವಾರ್‍ಯವಲ್ಲ. ಅವು ಆಯಾ ಕಾಲದ ಆಯ್ಕೆಗಳಷ್ಟೇ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದವನು ಒಂದು ಮಾತನ್ನೂ ಹೇಳದೇ ಇಬ್ಬರಿಗೂ ಸೇರಿದ್ದ ಬದುಕಿನ ನಿರ್ಧಾರವನ್ನು ಒಬ್ಬನೇ ತೆಗೆದುಕೊಂಡು ಹೊರಟುಬಿಡುವಾಗ ನೋವಾಗುತ್ತದೆ ನಿಜ. ಆದರೆ ಕಾಲ ಆ ನೋವನ್ನು ಮರೆಸುವ ಶಕ್ತಿ ಹೊಂದಿದೆ. ವಿರಹವನ್ನೂ ಕಾಲದ ತೆಕ್ಕೆಗೆ ಒಪ್ಪಿಸಿಬಿಡಬಹುದು ಎನ್ನುವ ಭಾವದ ಕವಿತೆ ನನ್ನದೀ ಸಮಯ. ನಿಜ. ಅವನಿಗಾಗಿ ಕಾದು, ಕಾತರಿಸಿ, ಪರಿಪರಿಯಾಗಿ ಬೇಡಿಕೊಂಡರೂ ತನ್ನೊಬ್ಬನ ನಿರ್ಧಾರಕ್ಕೆ ಅಂಡಿಕೊಂಡವನಿಗಾಗಿ ಯಾವ ಸಮಯ ಕಾಯುತ್ತದೆ ಹೇಳಿ? ಹೀಗಾಗಿಅನಿವಾರ್ಯವಲ್ಲ ಈಗ ನೀ ನನಗೆ ಗೆಳೆಯಜೀವಭಾವಕೆ ಹೊಸ ಚೈತನ್ಯ ನನ್ನದೀ ಸಮಯಎನ್ನುತ್ತ ತನಗಿಂತಲೂ ಮುಖ್ಯವಾದ ಗುರಿಯೊಂದನ್ನು ಹುಡುಕುವೆ ಎಂದು ಹೊರಟವನಿಗೆ ಪ್ರಸ್ತುತ ಅವನ ಸ್ಥಾನದ ಅರಿವು ಮಾಡಿಕೊಡುತ್ತಾರೆ. ಬದುಕಿನ ಗತಿ ಬದಲಾಗುತ್ತಿರುತ್ತದೆ. ಅಜ್ಜಿಯ ಕಥೆಯಲ್ಲಿ ಬರುವ ಒಕ್ಕಣ್ಣಿನ ರಾಕ್ಷಸ ಏಳುಮಲ್ಲಿಗೆ ತೂಕದ ರಾಜಕುಮಾರಿಯನ್ನು ಹೊತ್ತೊಯ್ದಾಗ ಏಳು ಸಮುದ್ರ ದಾಟಿ, ಏಳು ಸುತ್ತಿನ ಕೋಟೆಯೊಳಗಿಂದ ರಾಜಕುಮಾರಿಯನ್ನು ರಕ್ಷಿಸುವ ರಾಜಕುಮಾರ ಈಗ ಎಲ್ಲಿದ್ದಾನೆ? ಹಾಗೆ ಬೇರೆ ಯಾರಿಂದಲೋ ರಕ್ಷಿಸಿಕೊಳ್ಳಬೇಕಾದ ನಿರೀಕ್ಷೆಯಲ್ಲೂ ರಾಜಕುಮಾರಿ ಇರುವುದಿಲ್ಲ. ಯಾಕೆಂದರೆ ತನ್ನ ರಕ್ಷಣೆಯ ಹೊಣೆಯೂ ಅವಳದ್ದೇ. ತನ್ನನ್ನು ತಾನು ಸಂತೈಸಿಕೊಂಡು ನಿಭಾಯಿಸಿಕೊಳ್ಳಬೇಕಾದ ಹೊರೆಯೂ ಆಕೆಯದ್ದೇ. ಒಕ್ಕಣ್ಣಿನ ರಾಕ್ಷಸನೂ ಈಗ ಅದೆಲ್ಲೋ ಹಸಿರು ಗಿಣಿರಾಮನಲ್ಲಿ ಪ್ರಾಣವನ್ನಿಡುವುದಿಲ್ಲ. ಎನ್ನುತ್ತ ಎಲ್ಲವೂ ಬದಲಾದ ಕಥೆಯೊಂದನ್ನು ಎದುರಿಗಿಡುತ್ತಾರೆ. ಜಲಜಲನೆ ಧಾರೆಯಾಗುವ ಇಳೆ ಮೋಡವಾಗಿ ಮತ್ತೆ ಸೂರ್‍ಯನ ಕಾವಿಗೆ ಧರೆಗಿಳಿಯುವಾಗ ಎಲ್ಲ ಆಕೃತಿಗಳು ಬದಲಾಗುವಂತೆ ನಮ್ಮೆಲ್ಲರ ಬದುಕಿನ ಗತಿಗಳೂ ಆಗಾಗ ಬದಲಾಗುತ್ತವೆ ಎನ್ನುತ್ತಾರೆ. ತೆರೆದ ಹಾಗೂ ಮುಚ್ಚಿದ ಬಾಗಿಲಿನ ನಡುವೆ ಆಯ್ಕೆ ಮಾಡಿಕೊಳ್ಳಲು ಹತ್ತಾರು ಗೊಂದಲಗಳಿರುವುದು ಸಹಜ. ತರೆದ ಬಾಗಿಲು ಮುಚ್ಚದೇ, ಮುಚ್ಚಿದ ಬಾಗಿಲ ಹಿಂದೆ ಏನಿದೆ ಎಂಬ ಅರಿವಾಗದೇ ಗೊಂದಲದ ಗೂಡಾಗುವುದು ಎಲ್ಲರ ಬಾಲಿನಲ್ಲೂ ಸಹಜ. ಹಾಗೆ ನೋಡಿದರೆ ಈ ತೆರೆದ ಮತ್ತು ಮುಚ್ಚಿದ ಬಾಗಿಲುಗಳ ರಹಸ್ಯ ಬಿಡಿಸುವುದರಲ್ಲಿಯೇ ನಮ್ಮೆಲ್ಲರ ಜೀವಮಾನದ ಬಹುಕಾಲ ಸಮದುಹೋಗುತ್ತದೆ ಎಂಬುದು ಮಾತ್ರ ಸತ್ಯ. ಆದರೂನಾ ಹಾಡುವಭಾವಗೀತೆಗೆ ನೀನೇ ಸಾಹಿತ್ಯಹಾಡುವೆ ಪ್ರತಿನಿತ್ಯಎನ್ನುವ ಪ್ರಣಯದ ಸಾಲುಗಳಿಗೆ ಇಲ್ಲೇನೂ ಬರ ಇಲ್ಲ. ಆದರೂ ಒಂಟಿತನದ ಸೆಳವನ್ನು ಮೀರುವುದಾದರೂ ಹೇಗೆ? ಒಂಟಿತನವೆಂಬುದು ಏನಿರಬಹುದು. ಹಾಗೆನೋಡಿದರೆ ಒಂಟಿತನವೆಂದರೆಕೈ ಚಾಚಿತಪ್ಪಿ ಹೋದ ಪ್ರೀತಿಇಲ್ಲೆಲ್ಲೋ ನಮ್ಮ ಪ್ರೀತಿಯಿದೆ ಎಂದು ಕೈ ಚಾಚಿಯೂ ಆ ಪ್ರೀತಿ ತಪ್ಪಿ ಹೋದರೆ? ಅಥವಾ ಅದು ಅರ್ಹ ಎಂದು ಅನ್ನಿಸದೇ ಹೋದರೆ?ಒಂಟಿತನವೆಂದರೆಆಪ್ತವಿಲ್ಲದ ಸಾಮಿಪ್ಯಮಾತಿಲ್ಲದ ನಿಶ್ಯಬ್ಧಒಂಟಿತನಕ್ಕೆ ಎಲ್ಲಿ ಆಪ್ತತೆ ಇರುತ್ತದೆ ಹೇಳಿ? ಅದು
ಪಿಂಜರ್ ಶೋಷಣೆಗೊಳಗಾಗಿ ಅಸ್ಥಿಪಂಜರಗಳಾಗುವ ಹೆಣ್ಣುಮಕ್ಕಳ ಕಥೆ ಅಮೃತಾ ಪ್ರೀತಮ್ ಪಿಂಜರ್ಮೂಲ : ಅಮೃತಾ ಪ್ರೀತಮ್ಕನ್ನಡಕ್ಕೆ : ಎಲ್.ಸಿ.ಸುಮಿತ್ರಾಪ್ರ : ಅಂಕಿತ ಪುಸ್ತಕಪ್ರ.ವರ್ಷ :೨೦೦೬ಬೆಲೆ : ರೂ.೬೦ಪುಟಗಳು : ೧೦೪ ದೇಶ ವಿಭಜನೆಯ ಕಾಲದಲ್ಲಿ ಶೋಷಣೆಗೊಳಗಾದ ಅಮಾಯಕ ಹೆಣ್ಣು ಮಕ್ಕಳ ಕರುಣ ಕಥೆಯಿದು. ಪೂರೋ ಎನ್ನುವವಳು ಇಲ್ಲಿ ಕಥಾ ನಾಯಕಿ. ತನ್ನ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರನಿರುವ ಒಂದು ಸುಖಿ ಕುಟುಂಬದಲ್ಲಿ ಹಾಯಾಗಿ ಬೆಳೆದ ಹುಡುಗಿ ಪೂರೊ. ಸೌಮ್ಯ ಸ್ವಭಾವದವಳೂ ವಿಧೇಯಳೂ ಆದ ಅವಳು ತಾಯಿ ತಂದೆಯರ ಮುದ್ದಿನ ಮಗಳು. ತಾಯ್ತಂದೆಯರು ಅವಳಿಗಾಗಿ ನೋಡಿಟ್ಟ ರಾಮಚಂದನನ್ನು ಮದುವೆಯಾಗುವ ಕನಸು ಕಾಣುತ್ತಿರುತ್ತಾಳೆ. ಅಷ್ಟರಲ್ಲಿ ಸಂಭವಿಸುತ್ತದೆ ಆ ದುರ್ಘಟನೆ. ಪೂರೋಳ ಮಾವನಿಂದಾದ ಒಂದು ಅನ್ಯಾಯಕ್ಕೆ ಪ್ರತೀಕಾರವಾಗಿ ಒಂದು ಮುಸ್ಲಿಂ ಕುಟುಂಬವು ರಷೀದನೆಂಬ ಅವರ ಯುವಕನನ್ನು ಪೂರೋಳನ್ನು ಬಲಾತ್ಕಾರವಾಗಿ ಎತ್ತಿ ಹಾಕಿಕೊಂಡು ಬರಲು ನಿರ್ಬಂಧಿಸುತ್ತದೆ. ಇಲ್ಲಿಂದಾಚೆ ಅವಳ ಜೀವನ ಸೂತ್ರ ಕಡಿದ ಗಾಳಿಪಟವಾಗುತ್ತದೆ. ರಷೀದನು ಅವಳ ಮೇಲೆ ಲೈಂಗಿಕ ಅತ್ಯಾಚಾರ ಮಾಡುವುದಿಲ್ಲವಾದರೂ ಪೂರೋ ಮಾನಸಿಕ ಹಿಂಸೆ ಅನುಭವಿಸುತ್ತಾಳೆ. ಪೂರೋ ಹೇಗೋ ಒದ್ದಾಡಿ ರಷೀದನ ಬಂಧನದಿಂದ ತಪ್ಪಿಸಿಕೊಂಡು ತನ್ನ ಮನೆಗೆ ಓಡಿ ಬರುತ್ತಾಳೆ. ಆದರೆ ಇಲ್ಲಿ ಅವಳಿಗೆ ಮತ್ತೊಂದು ಆಘಾತ ಕಾದಿರುತ್ತದೆ. ಬೇರೊಂದು ಧರ್ಮದವರಿಂದ ಒಯ್ಯಲ್ಪಟ್ಟು ಅವರ ಜತೆಗೆ ಕೆಲವು ದಿನಗಳನ್ನು ಕಳೆದವಳ ಪಾವಿತ್ರ್ಯವನ್ನು ಶಂಕಿಸಿ ಅವಳ ತಂದೆ ಅವಳನ್ನು ಸ್ವೀಕರಿಸುವುದಿಲ್ಲ. ತನ್ನ ಮಾನವನ್ನು ಕಳೆದುಕೊಂಡ ಅವಳಿಗೆ ಇನ್ನು ಮದುವೆಯೂ ಆಗಲಾರದೆಂದು ತಂದೆ ಅವಳನ್ನು ತಿರಸ್ಕರಿಸುತ್ತಾನೆ. ಬೇರೆ ದಾರಿ ಕಾಣದೆ ಅವಳು ರಷೀದನ ಜತೆಗೆ ಜೀವಿಸಲು ತಿರುಗಿ ಹೋಗುತ್ತಾಳೆ. ರಷೀದ ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾನೆ. ಆದ್ದರಿಂದ ಪ್ರಾಯಶ್ಚಿತ್ತವಾಗಿ ಅವಳನ್ನು ಸ್ವೀಕರಿಸಿ ಅವಳಿಗೊಂದು ಬದುಕು ಕೊಡಲು ಸಿದ್ಧನಾಗುತ್ತಾನೆ. ಆದರೆ ಅವಳ ಹೆಸರನ್ನು ಮಾತ್ರ ಹಮೀದಾ ಎಂದು ಬದಲಾಯಿಸುತ್ತಾನೆ. ಹೀಗೆ ಪೂರೋ ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ಬದುಕ ಬೇಕಾಗುತ್ತದೆ. ಸ್ವಾಭಿಮಾನಿಯೂ ಸಂವೇದನಾಶೀಲೆಯೂ ಆದ ಪೂರೋಗೆ ಇದು ಅಸಹನೀಯವೆನ್ನಿಸುತ್ತದೆ. ಪೂರೋಳ ಹಾಗೆಯೇ ಪಿತೃ ಸಂಸ್ಕೃತಿಯ ಅಸಮಾನ ಧೋರಣೆಯಿಂದಾಗಿ ಸ್ಥಾನ ಭ್ರಷ್ಟರಾಗಿ ಬೇರೆ ಬೇರೆ ರೀತಿಯಿಂದ ಅನ್ಯಾಯಕ್ಕೊಳಗಾದ ಲಾಜೋ, ಟಾರೋ ಮತ್ತು ಕಮ್ಮೋ ಎಂಬ ಇನ್ನು ಮೂವರು ಹೆಣ್ಣುಮಕ್ಕಳೂ ಈ ಕಾದಂಬರಿಯಲ್ಲಿದ್ದಾರೆ.ಹೆಣ್ಣಿನ ಬೆತ್ತಲೆ ಮೆರವಣಿಗೆ, ಲೈಂಗಿಕ ದೌರ್ಜನ್ಯಗಳಂತಹ ಕ್ರೌರ್ಯ ಪ್ರದರ್ಶನದ ಚಿತ್ರಣಗಳೂ ಇಲ್ಲಿವೆ. ಹೆಣ್ಣು ಗಂಡಿನ ಆಕ್ರಮಣಕ್ಕೊಳಗಾಗಿ ಅವನಿಂದ ಇಷ್ಟ ಬಂದಂತೆ ಬಳಸಲ್ಪಡಬಹುದೆನ್ನುವ ಸಮಾಜದ ಅಮಾನವೀಯ ನಿಲುವನ್ನು ಇಲ್ಲಿ ಪರೋಕ್ಷವಾಗಿ ಖಂಡಿಸಲಾಗಿದೆ. ಸಂಸ್ಕೃತಿ, ಧರ್ಮ ಹಾಗೂ ಸಾಮಾಜಿಕ ನಿಯಮಗಳನ್ನು ಕಾಪಾಡಿಕೊಳ್ಳುವ ನೆಪದಲ್ಲಿ ಸ್ತೀ ಯರಿಗೆ ನೀಡುವ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು, ಆ ಯಾತನೆಗಳನ್ನು ಸಹಿಸಲಾರದೆ ಒದ್ದಾಡುತ್ತ ಅಸಹಾಯಕರಾಗುವ ಸ್ತ್ರೀ ಯರ ದಾರುಣ ಪರಿಸ್ಥಿತಿಯನ್ನೂ ಈ ಕಾದಂಬರಿ ಯಥಾವತ್ತಾಗಿ ಸ್ವಲ್ಪವೂ ಉತ್ಪ್ರೇ.ಕ್ಷೆಯಿಲ್ಲದೆ ಚಿತ್ರಿಸುತ್ತದೆ.ದೇಶ ವಿಭಜನೆಯ ಕಾಲದಲ್ಲಿ ನಡೆದ ಪೂರೋಳಂತಹ ಸಾವಿರಾರು ಹೆಣ್ಣುಮಕ್ಕಳು ಅನುಭವಿಸಿದ ನರಕ ಯಾತನೆ ಇಲ್ಲಿ ಭೀಭತ್ಸ ರೂಪವನ್ನು ತಾಳಿದೆ. ಕನ್ನಡ ಅನುವಾದದ ಭಾಷಾ ಶೈಲಿ ತುಂಬಾ ಸುಂದರವಾಗಿದ್ದು ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತದೆ.. ************************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಶ್ರೀಮಂತ ಅನುಭವಗಳ ಸಹಜ ಒಡಂಬಡಿಕೆ ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಶಿಕ್ಷಕಿಯಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ಇರುವ ಕಾರಣ ರಾಧಾ, ನೃತ್ಯಗಾಥಾ, ಮಕ್ಕಳ ರವೀಂದ್ರ, ನಾರಸಿಂಹ, ಮಕ್ಕಳ ರಾಮಾಯಣ, ಕನಕ-ಕೃಷ್ಣ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ರವೀಂದ್ರ ನಾಥ ಟ್ಯಾಗೋರರ ಚಿತ್ರಾ, ಕೆಂಪುಕಣಗಿಲೆ, ಅವಳ ಕಾಗದ ಮೊದಲಾದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹ ಜಿ.ಎನ್ ಮೋಹನ್ ಸಾರಥ್ಯದ “ಅವಧಿ” ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅದನ್ನು ನಂತರ “ಬಹುರೂಪಿ” ಪ್ರಕಟಿಸಿತು. ಸಾಹಿತ್ಯ ಪರಿಷತ್ತಿನ ಈ ವರ್ಷದ ದತ್ತಿ ಪ್ರಶಸ್ತಿಗೆ ಈ ಕೃತಿ ಭಾಜನವಾಯಿತು. ಶ್ರೀಮತಿ ಸುಧಾ ಬರಿಯ ರಂಗ ತಜ್ಞೆ, ಪುಸ್ತಕ ಪರಿಚಾರಿಕೆಯಲ್ಲದೆ ಸ್ವತಃ ಕವಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆ ಕೂಡ ಅವರ ಬರಹಗಳ ಘಮಕ್ಕೆ ಇಂಬು ಕೊಟ್ಟಿದೆ. ಶಿಕ್ಷಕಿಯಾಗಿ ಮತ್ತು ರಂಗ ನಿರ್ಮಿತಿಯ ಮಿತಿ ಪರಿಮಿತಿಗಳ ಸಂಪೂರ್ಣ ಅರಿವು ಇರುವ ಕಾರಣ ಅವರ ಕವಿತೆಗಳಲ್ಲೂ ಹೆಚ್ಚು ಜನಪ್ರಿಯಗೊಳ್ಳುವ ಸೊಲ್ಲುಗಳು ಮತ್ತು ಇಮೇಜುಗಳು ತನ್ನಿಂತಾನೆ ರೂಪುಗೊಳ್ಳುತ್ತವೆ. ತೀರ ಸಾಮಾನ್ಯ ಸರಕನ್ನು ಕವಿತೆಯ ರೂಪಕವನ್ನಾಗಿಸುವ ಅಥವ ಕವಿತೆಯ ಆತ್ಮಕ್ಕೆ ಬೇಕೇ ಬೇಕಾಗುವ ಪ್ರತಿಮೆಯಾಗಿ ಅವರು ಬಳಸುವ ಕ್ರಮ ಸಮಯೋಚಿತವಾಗಿರುತ್ತದೆ. ” ಈ ರಾತ್ರಿ” ಎನ್ನುವ ಪದ್ಯವನ್ನೇ ನೋಡಿ, ಶಿವನ ಪ್ರೀತಿಸಬೇಕು ಪ್ರೀತಿಯಲಿ ಲಯವಾಗುವ ಪಾಠ ಕಲಿಯಬೇಕು ಎಂದು ಸಾಮಾನ್ಯ ತಿಳುವಳಿಕೆಯಲ್ಲಿ ಆರಂಭವಾಗುವ ಪದ್ಯ ಶಿವನ ಪೂಜಾ ವಿಧಾನವನ್ನು ಅನುಸರಿಸಿ ನಡೆಯುತ್ತಲೇ ಇದ್ದಕ್ಕಿದ್ದಂತೆ ನವಿರು ಭಾವದ ಗರಿಸವರಿ ಪ್ರೇಮಗೀತೆ ನುಡಿಸಬೇಕು ಶಿವನ ಕೊರಳಿನ ನಾಗ- ಉರುಳಾಡಬೇಕು ಎಂದು ಬದಲಾವಣೆಯನ್ನು ಬಯಸುತ್ತಲೇ, ಕಡೆಗೆ ಶಿವರಾತ್ರಿ ಕಳೆದ ಮುಂಜಾನೆ ಬೆಳ್ಳಿ ಬೆಟ್ಟದಲ್ಲಿಯೂ ಬಣ್ಣದ ಹೂವರಳಬೇಕು ಎಂದು ಮುಕ್ತಾಯವಾಗುವ ಪರಿ ಅನೂಹ್ಯ ದಿವ್ಯಕ್ಕೆ ಹಾತೊರೆಯುತ್ತಲೇ ಹೇಗೆ ಶಿವನನ್ನೂ ಒಲಿಸಿ ಅಂಥ ಕಠಿಣ ಮನಸ್ಸಲ್ಲೂ ಹೂವಿನ ಮೃದುತನವನ್ನು ಅರಳಿಸಬಹುದು ಎಂದು ತನ್ನ ನಿಲುವನ್ನು ಪ್ರಕಟಿಸುತ್ತದೆ. “ನಾನು ಮುಟ್ಟಾದ ದಿನ” ಎನ್ನುವ ಪದ್ಯ ಹೆಣ್ಣಿನ ಪಿರುಕಣೆ ಎಂದೇ ಕೆಲವರು ತಿಳಿದಿರುವ ಮಾಸಿಕ ಋತುಚಕ್ರವನ್ನು ಕುರಿತ ದಿಟ್ಟ ಪದ್ಯ. “ಅವನಿಗಿಲ್ಲದ ತೊಡರೊಂದು/ ನನಗೆದುರಾದ ನೋವು” ಎಂದು ಮುಟ್ಟನ್ನು ಬೇರೆಯದೇ ರೀತಿಯಲ್ಲಿ ಅರಿಯುವ “ಅವಳು” ಪರೀಕ್ಷೆಯಲ್ಲಿ ಪ್ರತಿ ಸ್ಪರ್ಧಿ ಹುಡುಗನಿಗೆ ಆ ನೋವು ಇಲ್ಲವಲ್ಲ ಮತ್ತು “ಅವನು” ಅದರಿಂದ ಮುಕ್ತನಾದ ಕಾರಣಕ್ಕೇ ಅವನಿಗೆ ಗೆಲುವು ಸುಲಭ ಎಂದೇ ಭಾವಿಸುತ್ತಾಳೆ. ಮುಂದುವರೆದ ಅವಳು ಮುಟ್ಟಿದಲ್ಲದೇ, ಮುಟ್ಟಿಲ್ಲದೇ ಹುಟ್ಟಿಲ್ಲವೆಂದರಿಯದ ಮುಠ್ಠಾಳರೇ, ಎಲ್ಲ ಸಹಿಸಬಹುದು ಮುಟ್ಟಿನ ಬಿಲಕ್ಕೆ ದುರ್ಬೀನು ಇಡುವ ಕ್ರೌರ್ಯವ ಹೇಗೆ ಸಹಿಸುವುದು? ಎಂದು ಪ್ರಶ್ನಿಸುವ ಎದೆಗಾರಿಕೆಯನ್ನು ತೋರುತ್ತಲೇ, ಹೊಕ್ಕಿಬಿಡಿ ಮುಟ್ಟು ಸುರಿಯುವ ದಾರಿಯಲಿ, ನಿಮ್ಮ ಹುಟ್ಟಿನ ಗುಟ್ಟಲ್ಲದೇ ಬೇರೇನಿಹುದಿಲ್ಲಿ? ಎಂದು ಪದ್ಯ ಮುಗಿಯುವಾಗ “ಅವನ” ಮಿತಿಯನ್ನು ಸ್ಪಷ್ಟವಾಗಿ ಹೇಳುತ್ತಾಳೆ ಮತ್ತು ನೈಸರ್ಗಿಕ ಸತ್ಯವನ್ನು ಅರಿ ಎಂದು ಜರ್ಭಾಗಿಯೇ ತಿವಿಯುತ್ತಾಳೆ. ಪದ್ಯದ ಅಶಯ ಮತ್ತು ತಿಳಿವನ್ನು ಪರ್ಯಾಲೋಚಿಸುವ ಕ್ರಮ ಚನ್ನಾಗಿದ್ದರೂ ಈ ಪದ್ಯದ ಹೆಣಿಗೆಯಲ್ಲಿ ಕುಶಲತೆ ಮತ್ತು ನಾಜೂಕು ಇದ್ದೂ ಇಲ್ಲದಂತಿರುವುದನ್ನು ಮುಖ್ಯ ಗಮನಿಸಬೇಕು. ಹೌದು, ಕೆಲವೊಮ್ಮೆ ನಾಜೂಕಿಗಿಂತ ಕಠಿಣ ಮಾತುಗಳೇ ಅನಿವಾರ್ಯವಾಗುತ್ತವೆ. ಶಿವನನ್ನೆ ಕುರಿತ ಮತ್ತೊಂದು ಪದ್ಯದಲ್ಲಿ “ಹೇ ಜಟಾಧರ, ಚಂದ್ರಚೂಡಾ ಸ್ಮಶಾನದ ಮೌನದಲಿ ಸಂಚರಿಸುವಾಗ” ಎಂದು ಶಿವನನ್ನು ಸಂಭೋದಿಸುತ್ತಲೇ ಅವನ ಗುಣಗಾನ ಮಾಡುವ ಭರದಲ್ಲೇ ಅವನ ಅವಗುಣಗಳನ್ನು ಹಾಸ್ಯವಾಗಿ ಪರಿಶೀಲಿಸುವ ಕ್ರಮ ಹೊಸತೇ ಆಗಿದೆ. “ಉರಿವ ಬೆಂಕಿಯಲಿ ಸಿಗರೇಟು ಹಚ್ಚಿ ಕುಳಿತಾನು!”, “ಇವನೆಲ್ಲಿಯಾದರೂ ಸೇರಿಕೊಂಡಾನು ಡೋಲು ಬಡಿಯುವುದರಲ್ಲಿ ನಿಸ್ಸೀಮ ಇವನು”, ಎಂಬೆಲ್ಲ ಅಂಬುಗಳ ಮಳೆ ಕಡೆಗೆ ಈ ರೀತಿಯಲ್ಲಿ ಸುರಿಯುತ್ತದೆ; ಹೇ ವಿಷಕಂಠ, ಗಂಗಾಧರಾ ಇವನೂ ವಿಷವ ಕುಡಿಯುವವನೇ ಬೇಡವೆಂದರೂ ನಶೆಯೇರಿಸಿಕೊಳ್ಳುವವನು ನಿನ್ನ ಎಲ್ಲ ಛಾಯೆಗಳಿರುವ ಇವನು ನಿನ್ನೊಳಗೇ ಸೇರಿಕೊಂಡಿರುವನೋ ಏನೋ ಒಮ್ಮೆ ಜಟೆಯ ಬಡಿದು ನೋಡು ಮತ್ತೆ ಮತ್ತೆ ಈ ಪದ್ಯದ ಓದು ಇದು ಬರಿಯ ಶಿವನನ್ನು ಕುರಿತ ಪ್ರಾರ್ಥನೆಯಲ್ಲದೇ ನಿಜದ ಬದುಕಿನಲ್ಲಿ ಏಗುತ್ತಿರುವ ಶಿವರನ್ನು ಅಂದರೆ ಸಾಮಾನ್ಯರ ಬದುಕನ್ನು ಧೇನಿಸಿದ, ಆ ಶಿವನ ನಾಮೋತ್ತರಗಳ ಮೂಲಕ ನಮ್ಮ ಜೊತೆಗೇ ಇರುವ ಸರೀಕರನ್ನು ಕುರಿತ ಚಿತ್ರಣವಾಗಿಯೂ ತೋರುತ್ತದೆ. “ತೊಟ್ಟು ಕಳಚಿ ಬೀಳುತ್ತವೆ ಕನಸುಗಳು ಹೂವಿನಂತೆ” ಎಂದು ಕೊನೆಗೊಳ್ಳುವ ಪದ್ಯದ ಆರಂಭ ಹೀಗಿದೆ; “ಒಂದು ಮುಂಜಾವಿನೊಂದಿಗೆ ಒಂದಿಷ್ಟು ಕನಸುಗಳೂ ಅರಳುತ್ತವೆ”. ಈ ಪದ್ಯ ಹೆಣ್ಣೊಬ್ಬಳು ತನ್ನ ನಿತ್ಯದ ಕಾಯಕದಿಂದ ಬಿಡುಗಡೆ ಹೊಂದಿ ತನಗೆ ಬೇಕಾದ ರೀತಿಯಲ್ಲಿ ಒಂದು ದಿನವನ್ನು ಕಳೆಯುವುದು ಬರಿಯ ಕನಸಾಗಿ ಉಳಿಯುತ್ತದೆ ಎಂಬುದನ್ನು ಹೇಳುತ್ತಿದೆ. ಮೇಲ್ನೋಟಕ್ಕೆ ಇಂಥ ಪದ್ಯಗಳಿಗೆ ತುಟಿ ತುದಿಯ ಅನುಕಂಪ ಮತ್ತು ಸಾರ್ವಜನಿಕ ಪರಿತಾಪಗಳು ಸಂದರೂ ನಿಜಕ್ಕೂ ಬದುಕು ಅಷ್ಟು ಘೋರವಾಗಿಲ್ಲ ಮತ್ತು ಸದ್ಯದ ಸ್ಥಿತಿಯಲ್ಲಿ ಹೆಣ್ಣನ್ನು ಅದರಲ್ಲೂ ದುಡಿಯುವ ಹೆಣ್ಣನ್ನು ತೀರ ಹೀನಾಯವಾಗಿ ಕಾಣುವುದನ್ನು ಸಮಾಜ ಬಿಟ್ಟಿದೆ. ಆದರೆ ಇಂಥ ಅತಿಶಯಗಳನ್ನು ಮುಂದುಮಾಡದೇ ಇದ್ದರೆ, ತಮ್ಮ ಬರಹಗಳಲ್ಲಿ ಗಂಡನ್ನು ಶೋಷಣೆಯ ಕಾರಣ ಎಂದು ಹೇಳದೇ ಇದ್ದರೆ, ಮತ್ತು ತಮ್ಮ ನಿಜದ ಬದುಕಲ್ಲಿ ಇಲ್ಲದೇ ಹೋದರೂ ಇದೆ ಎನ್ನುವ ” ಶೋಷಣೆ”ಯನ್ನು ಮುಂದು ಮಾಡದೇ ಇದ್ದರೆ ಅದು ಸ್ತ್ರೀ ಸಂವೇದನೆ ಇರದ ಪಠ್ಯ ಆಗುತ್ತದೆ ಎನ್ನುವ ಹುಂಬ ನಿರ್ಧಾರಗಳೂ ಕೂಡ ಒಟ್ಟಿಗೇ ಸೇರಿ ಇಂಥ ರಚನೆಗಳಿಗೆ ಕೈ ಹಾಕಲು ಕಾರಣವಾಗಿರುತ್ತವೆ. ಇಂಥದೇ ಆಲೋಚನೆಯಲ್ಲೇ ಹುಟ್ಟಿರಬಹುದಾದ “ಕುಂಭ ಸಮ್ಮೇಳನ” ಸಾಹಿತ್ಯ ಸಮ್ಮೇಳನವೇ ಮೊದಲಾದ ಸಾರ್ವಜನಿಕ ಸಮಾರಂಭಗಳಲ್ಲಿ ಅನಿವಾರ್ಯ ಎನಿಸಿರುವ ಕುಂಭ ಹೊತ್ತ ಮಹಿಳೆಯರ ಪ್ರದರ್ಶನವನ್ನು ಪ್ರಶ್ನಿಸುತ್ತದೆ. ಇಂಥ ಪ್ರದರ್ಶನಗಳನ್ನು ವಿರೋಧಿಸುವುದು ಸರಿಯಾದ ಕ್ರಮವೇ ಹೌದಾದರೂ ಇಲ್ಲಿ ಭಾಗವಹಿಸುವವರೂ ಹೆಣ್ಣು ಮಕ್ಕಳೇ ಆದುದರಿಂದ ಮೊದಲು ಅವರಲ್ಲಿ ಎಚ್ಚರ ಹುಟ್ಟಿಸಿ ಇಂಥ ಚಟುವಟಿಕೆಯಿಂದ ದೂರ ಇರಲು ತಿಳುವಳಿಕೆ ಹೇಳಬೇಕು.ಒಮ್ಮೆ ಕುಂಭ ಹೊರುವವರೇ ಸಿಗದಂತೆ ಆದರೆ ತನ್ನಿಂದ ತಾನೇ ಇಂಥ ಆಚರಣೆಗಳು ನಿಲ್ಲುತ್ತವೆ. ಆದರೆ ಬರಿಯ ಗಂಡನ್ನು ಮಾತ್ರ ಇಲ್ಲಿ ಹೊಣೆ ಮಾಡುವುದು ಹೇಗೆ ಸರಿಯಾದೀತು? ಇದು ನಮ್ಮ ದೃಶ್ಯ ಮಾಧ್ಯಮಗಳಾದ ಸಿನಿಮಾ ಮತ್ತು ಟಿವಿಯ ನಟಿಯರ ಅಂಗಾಂಗ ಪ್ರದರ್ಶನಕ್ಕೂ ಅನ್ವಯಿಸುತ್ತದೆ. ಪ್ರದರ್ಶನ ಮಾಡುವವರನ್ನು ಮೊದಲು ಅದರಿಂದ ನಿವೃತ್ತರನ್ನಾಗಿಸಿದರೆ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಕ್ಕುತ್ತದೆ. ಘೋಷಣೆಗಳಿಂದ ವಿರೋಧದ ಮಾತುಗಳಿಂದ ಹಾಗೆ ಆಡುವವರು ಮುನ್ನೆಲೆಗೆ ಬಂದಾರು ಅಷ್ಟೆ!! “ಬ್ರಾ ಮತ್ತು ಅಭಿವೃದ್ಧಿ” ಎನ್ನುವ ಕವಿತೆ ಕೂಡ ಸಂದರ್ಭವೊಂದಕ್ಕೆ ತುರ್ತು ಪ್ರತಿಕ್ರಿಯೆಯಾಗಿ ಬರೆದ ಕಾರಣ ಅದು ನಿಜಕ್ಕೂ ಹೇಳಬಹುದಾಗಿದ್ದ ದಿವ್ಯವೊಂದರ ಅನುಭೂತಿಯನ್ನು ಕಳೆದುಕೊಂಡಿದೆ. ಆದರೆ “ಗೌರಿಯ ಹಾಡು” ಎನ್ನುವ ಪದ್ಯ ನಿಜಕ್ಕೂ ಮೇಲೆ ಹೇಳದೇ ಉಳಿದ ಶೋಷಣೆಯನ್ನು ಅದ್ಭುತವಾಗಿ ಚಿತ್ರಿಸಿದ ಒಂದು ಶ್ರೇಷ್ಠ ಕೃತಿಯಾಗಿದೆ. ಮತ್ತು ಈ ಕವಿತೆಯ ಅಂತ್ಯ ಒಂದು ಅದ್ಭುತ ರೂಪಕದಲ್ಲಿ ಮುಗಿಯುತ್ತದೆ; ಗೌರಿಯ ದುಃಖದ ಝಳಕ್ಕೆ ಮಂಜಿನ ಬೆಟ್ಟವೂ ಬೆವರುತ್ತದೆ! ಇಂಥದೊಂದು ರೂಪಕವನ್ನು ಸೃಷ್ಟಿಸಿದ ಈ ಕವಿಯನ್ನು ಅಭಿನಂದಿಸದೇ ಇರುವುದು ಹೇಗೆ ಸಾಧ್ಯ? ಸುಧಾ ಆಡುಕಳ ಉದ್ದುದ್ದದ ಪದ್ಯಗಳಿಗಿಂತ ನಾಲ್ಕು ಸಾಲುಗಳಲ್ಲಿ ಇಮೇಜುಗಳನ್ನು ಕಟ್ಟಿ ಕೊಡುವುದರಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ಇರುವವರು. ರಾತ್ರಿ ಯಾವುದೋ ಹೊತ್ತಿನಲ್ಲಿ ಛಕ್ಕನೆ ನಾಲ್ಕು ಸಾಲು ಪೇರಿಸಿ ಝಗ್ಗನೆಯ ಬೆಳಕು ಮತ್ತು ಬೆರಗು ನೇಯುವುದರಲ್ಲಿ ಅವರ ಜಾಣ್ಮೆ ಮತ್ತು ರಂಗ ಶಾಲೆಯ ಅನುಭವ ಮೇಳೈಸುತ್ತವೆ ಎಂದು ಅರಿಯಬಹುದು. ಉದಾಹರಣೆಗೆ ಮಾಯಗಾತಿ ಈ ಕವಿತೆ ಯಾರ ಜಪ್ತಿಗೂ ಸಿಗಳು ಪ್ರೀತಿಯಿಂದ ಕರೆದರೆ ಎದೆಯ ದನಿಯಾಗಿ ಬರುವಳು ಇದಕ್ಕಿಂತ ಕಾವ್ಯ ಕಾರಣವನ್ನು ಇಷ್ಟು ಸ್ಪಷ್ಟವಾಗಿ ಮತ್ತು ಸರಳವಾಗಿ ಸಂಕ್ಷೇಪಿಸುವುದು ಕಷ್ಟ ಸಾಧ್ಯದ ಮಾತು! “ಗಾಯ ಮತ್ತು ಹೊಲಿಗೆ” ಎನ್ನುವ ಕವಿತೆ ಸದ್ಯಕ್ಕೆ ಈ ಕವಿ ಬರೆದಿರುವ ಉತ್ತಮ ಕವಿತೆಗಳಲ್ಲಿ ಒಂದು. ಹೊಲಿಗೆ ಹಾಕುವಾಗ ಚುಚ್ಚುಮದ್ದಿನಿಂದ ಅಮಲಿರುತ್ತದೆ ಬಿಚ್ಚುವಾಗಿನದೇ ಪೇಚಾಟ ನೋಯುವ ಗಾಯ ಮತ್ತು ಎಚ್ಚರದಲ್ಲೇ ಎಳೆಯುವ ದಾರ ಸಂಬಂಧಗಳೂ ಹಾಗೆ ಬೆಸೆದುಕೊಳ್ಳುವಾಗಿನ ಅಮಲು ಬಿಚ್ಚಿಕೊಳುವಾಗ ಇರದು! ಎಂದು ಶುರುವಾಗುವ ಈ ಪದ್ಯ ಮೇಲ್ನೋಟಕ್ಕೆ ಗಾಯ ಮತ್ತು ಅದರ ಚಿಕಿತ್ಸೆಗೆ ಬೇಕಾದ ಹೊಲಿಗೆಯನ್ನು ಕುರಿತು ಹೇಳುತ್ತಿರುವಂತೆ ಕಂಡರೂ ಯಾವುದೇ ಗಾಯದ ಹಿಂದೆ ಮತಾಂಧತೆಯ, ಜಾತಿಯ, ಶ್ರೇಷ್ಠತೆಯ ಅಮಲು ಇದ್ದರೆ ಅಂಥ ಗಾಯ ಸುರುವಲ್ಲಿ ನೋಯದು. ಆದರೆ ಆ ಗಾಯ ಮಾಯುವುದಕ್ಕೆ ಸಮಯ ಮತ್ತು ಸನ್ನಿವೇಶಗಳು ಅತ್ಯಗತ್ಯ ಗಾಯದ ಹೊಲಿಗೆ ತೆಗೆಯುವಾಗ ಆಗುವ ನೋವು ಸುಲಭಕ್ಕೆ ಸಹಿಸಿಕೊಳ್ಳಲಾರದ್ದು. ಚೂರೇ ಚೂರು ಬೇರ್ಪಟ್ಟಾಗಲೇ ಗೊತ್ತಾಗುವುದು ಸೇರಿರುವ ಸುಖ ಬೇರ್ಪಡದ ಸಂಬಂಧಗಳ ಬೆಲೆಯಂತೆ! ಒಮ್ಮೆ ಬೇರ್ಪಟ್ಟ ತನ್ನದೇ ಭಾಗವನ್ನೂ ಸೇರಿಸಿಕೊಳ್ಳಲು ಸಂಶಯಿಸುವುದು ಮಹಾನ್ ಮೂಲಭೂತವಾದಿ ದೇಹ! ಇಂಥ ಯಾವತ್ತೂ ಮಾಯಲಾಗದ ಗಾಯಗಳನ್ನು ಹೇಗೆ ಸಹಿಸಿಕೊಳ್ಳುವುದು, ಮಹಾನ್ ಮೂಲಭೂತವಾದ ನಮ್ಮ ಉಸಿರೇ ಆಗಿ ಪರಿವರ್ತಿತವಾಗಿರುವ ಸನ್ನಿವೇಶದಲ್ಲಿ? ಶ್ರೀಮತಿ ಸುಧಾ ಆಡುಕಳ ಪುಸ್ತಕ ಪರಿಚಾರಿಕೆ, ರಂಗ ಪಠ್ಯ, ಅಂಕಣ ಬರಹಗಳ ಒತ್ತಡಗಳ ನಡುವೆಯೂ ತೀರ ಖಾಸಗಿ ಸಮಯವನ್ನು, ರೂಪಕ ಪ್ರತಿಮೆಗಳ ಬೇಟವನ್ನೇ ಬೇಡುವ ಕಾವ್ಯ ಕೃಷಿಯಲ್ಲೂ ಹುಲುಸು ಬೆಳೆಯನ್ನೇ ತೆಗೆಯುತ್ತಿದ್ದಾರೆ. ಫಸಲಿನ ಪ್ರಮಾಣಕ್ಕಿಂತ ಆ ಫಸಲಿಗೆ ಪ್ರತ್ಯೇಕ ಪ್ರಮಾಣ ಮತ್ತು ಪರಿಣಾಮಗಳು ಇವೆಯೇ ಎಂದು ಸ್ವತಃ ಅವರೇ ತೀರ್ಮಾನಿಸಿದರೆ ಹತ್ತು ಸಾಮಾನ್ಯ ಸೀರೆಗಳನ್ನು ನೇಯುವ ಬದಲು ಒಂದು ಕಲಾಬತ್ತಿನ ಅಪರೂಪದ ಭರ್ಜರಿ ಸೀರೆಯನ್ನೇ ನೇಯ್ದಾರು. ಏಕೆಂದರೆ ಅವರ ಜೀವನಾನುನುಭವದ ಥಡಿಯಲ್ಲಿ ತರಹೇವಾರಿ ಬಣ್ಣ ಬಣ್ಣದ ಲಡಿಗಳ ದಾಸ್ತಾನೇ ಇದೆ. ಅವನ್ನು ಆ ಅಂಥ ಅಪರೂಪದ ಕೃತಿಗಳ ಕಾರಣಕ್ಕೆ ಬಳಸಲಿ ಎನ್ನುವ ಆಶಯದೊಂದಿಗೆ ಅವರ ಆಯ್ದ ಆರು ಕವಿತೆಗಳು ಆಸಕ್ತರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ಸುಧಾ ಆಡುಕಳ ಕವಿತೆಗಳು ೧.ಈ ರಾತ್ರಿ ಜಗದ ಹಂಗು ಗುಂಗಿಲ್ಲದ ಜಂಗಮನ ಎದೆಗೊರಗಿ ಎದೆಯ ಡಿಂಡಿಮವ ಆಲಿಸಬೇಕು- ಅದಕೊಂದು ಏಕತಾರಿಯ ನಾದವ ಅವನಗರಿವಿಲ್ಲದಂತೆ ಜೋಡಿಸಬೇಕು ಬರಸೆಳೆದು ಅಪ್ಪಿದರೆ ಭಸ್ಮವಾಗುವ ವಿಸ್ಮಯವ ಭೂತನಾಥನ ಕಿವಿಯೊಳಗುಸುರಿ ತೆಕ್ಕೆಯೊಳಗೆ ಉರಿದು ಭಸ್ಮವಾಗಬೇಕು ಕಾಪಾಲಧಾರಿ ಶಿವನ ಕಪಾಲವ ತೋಯಿಸಿ ಹಣೆಗಣ್ಣೊಳಗೂ ಪ್ರೀತಿಯ ಅಮಲು ತುಂಬಿಸಬೇಕು ಮಾತನೊಲ್ಲದ ಹರನ ಹರವಾದ ಎದೆಗೆ ನವಿರು ಭಾವದ ಗರಿಸವರಿ ಪ್ರೇಮಗೀತೆ ನುಡಿಸಬೇಕು ಶಿವನ ಕೊರಳಿನ ನಾಗ- ಉರುಳಾಡಬೇಕು ಶಿವರಾತ್ರಿ ಕಳೆದ ಮುಂಜಾನೆ ಬೆಳ್ಳಿ ಬೆಟ್ಟದಲ್ಲಿಯೂ ಬಣ್ಣದ ಹೂವರಳಬೇಕು ೨.ನಾನು ಮುಟ್ಟಾದ ದಿನ; ಅಣ್ಣನ ಕಿಸಕ್ಕನೆ ನಗು ‘ಹೆಣ್ಣು ಜನ್ಮಕ್ಕಂಟಿದ ಬವಣೆ’ ಅಮ್ಮನ ವಿಷಾದದ ಮಾತು ನನಗೆ ಮಾತ್ರ ಪರೀಕ್ಷೆಯಲಿ ನನ್ನ ಸೋಲಿಸುವ ಹುನ್ನಾರದಲ್ಲಿರುವ ಹುಡುಗನ ನೆನಪು ಅವನಿಗಿಲ್ಲದ ತೊಡರೊಂದು ನನಗೆದುರಾದ ನೋವು ತೊಡೆಯ ಸಂಧಿಯಲಿಷ್ಟು ಬಟ್ಟೆ ತುರುಕಿ ಶಾಲೆಗೆ ಓಡಿದವಳ ಕುಂಟುನಡಿಗೆಗೆ: ಗೆಳತಿಯರ ಗುಸುಗುಸು! ಲೆಕ್ಕಮಾಡಲು ಬೋರ್ಡಿಗೆ ಕರೆದ ಶಿಕ್ಷಕರೂ ಲಂಗಕೆ ಅಂಟಿದ ಕೆಂಪ ಕಂಡು ಪೆಚ್ಚು! ಎಂದೂ ತಪ್ಪದ ಲೆಕ್ಕ ತಪ್ಪಾಗಿತ್ತು ರಾತ್ರಿ ಅಪ್ಪ ಹೇಳಿದ ದ್ರೌಪದೀ ವಸ್ತ್ರಾಪಹರಣದ ಕಥೆ ಮುಟ್ಟಾದವಳ ಹಿಡಿದೆಳೆದ ದುಷ್ಟ ತೊಡೆ ಮುರಿದು ರಣಾಂಗಣದಲ್ಲಿ ಬಿದ್ದಿದ್ದ ಉರಿವ ತೊಡೆಯ ಗಾಯಕ್ಕೆ ಕಥೆಯ ಮುಲಾಮು ತಿಂಗಳ ಸ್ರಾವ ಸುರಿಯುತ್ತ ಮೈಲಿಗೆಯ ಪಟ್ಟ ಹೊತ್ತ ಕಾಲ ಸರಿದು ನಾ ಹೇಳಿದಲ್ಲದೇ ಮುಟ್ಟು ಬಯಲಾಗದ ಗುಟ್ಟು ಮುಟ್ಟು ಹುಟ್ಟುವ ಗರ್ಭದಲಿ ಮಗುವ ಹೊತ್ತು ನಿಂತಾಗ ಮುಟ್ಟೂ ಒಂಥರಾ ಹಿತವೆನಿಸಿ, ಮುಟ್ಟಾಗುವವರ ಮುಟ್ಟೆನೆಂದ ದೇವರ ಮೇಲೆ
ಅಂಕಣಬರಹ ಬದುಕಿನ ಏರಿಳಿತಗಳನು ಒಪ್ಪಿಕೊಳ್ಳುವುದು ಹೇಗೆ? ಬದುಕಿನ ರೀತಿಯೇ ಅಂಥದ್ದು. ಪ್ರತಿ ಕ್ಷಣವೂ ಹೊಸತನದಿಂದಲೇ ಕೂಡಿಕೊಂಡಿರುತ್ತದೆ.ಅದೆಷ್ಟೇ ಬೇಸರಗೊಂಡಿದ್ದರೂ ಮತ್ತೆ ಕುತೂಹಲದಿಂದ ಸೆಳೆದು ನಿಲ್ಲಿಸಬಲ್ಲ ಮಾಯಾಶಕ್ತಿ ಅದಕ್ಕಿದೆ. ರಾಶಿ ರಾಶಿ ಹೊಸ ಅನುಭವಗಳು ಮುಂದೆ ಕಾದಿವೆ ಎಂದು ಗೊತ್ತಿದ್ದರೂ ಕೆಲವೊಂದು ಸಲ ಕಷ್ಟದ ಸಾಲುಗಳು ಇನ್ನಿಲ್ಲದಂತೆ ಆವರಿಸಿ ಹಿಂಡಿ ಹಿಪ್ಪಿ ಮಾಡಿಬಿಡುತ್ತವೆ. ಪ್ರತಿ ಕಷ್ಟವೂ ವಿಶಿಷ್ಟತೆಯಿಂದ ಕಾಡುತ್ತದೆ. ಅನುಭವದ ಪಾಠವನ್ನು ಕಲಿಸಿಯೇ ಮುನ್ನಡೆಯುತ್ತದೆ. ಒಮ್ಮೊಮ್ಮೆ ದಡದಡನೆ ಓಡುವವರನ್ನು ಗಕ್ಕನೇ ನಿಲ್ಲಿಸಿ ಬಿಡುತ್ತದೆ. ಅಟ್ಟದ ಮೇಲೇರಿ ಕುಳಿತವರನ್ನು ಕೆಳಕ್ಕೆ ತಳ್ಳಿ ಬಿಡುತ್ತದೆ. ಇನ್ನು ಕೆಲವು ಸಲ ಕೌತುಕತೆಯಿಂದ ಅದರ ಮುಂದೆ ನಿಂತು ಬಿಟ್ಟ ಕಣ್ಣು ಬಿಟ್ಟಂತೆ ಪರವಶತೆಯಿಂದ ನೋಡುವಂತೆ ಮಾಡುತ್ತದೆ. ಲಗು ಬಗೆಯಿಂದ ಮೆಟ್ಟಿಲೇರಿ ಹೋಗುವವರನ್ನು ಮುಂದಕ್ಕೆ ಅಡಿ ಇಡದಂತೆ ಮಾಡುತ್ತದೆ. ಒಟ್ಟಾರೆ ಸರಳ ಮಾತಿನಲ್ಲಿ ಹೇಳುವುದಾದರೆ ಜೀವನ ಆಡಿಸಿ ನೋಡು ಬೀಳಿಸಿ ನೋಡು ಆಟ ಇದ್ದಂತೆ ಅನಿಸುವದಂತೂ ಖಚಿತ. ಜೀವನ ಎರಡು ಮುಖವುಳ್ಳ ನಾಣ್ಯವಿದ್ದಂತೆ. ಒಮ್ಮೆಲೇ ಎರಡು ಮುಖಗಳೂ ಬೀಳುವ ಸಾಧ್ಯತೆ ಇಲ್ಲ. ಆದರೆ ಎರಡೂ ಮುಖಗಳು ಬೀಳುವ ಸಾಧ್ಯತೆ ಸಮವಾಗಿರುತ್ತದೆ. ಇಲ್ಲವೇ ಕಡಿಮೆ ವ್ಯತ್ಯಾಸವಿರುತ್ತದೆ. ಒಮ್ಮೆ ಏರು ಮತ್ತೊಮ್ಮೆ ಇಳುವು.ಒಮ್ಮೆ ಗೆಲುವು ಒಮ್ಮೆ ಸೋಲು. ಒಮ್ಮೆ ಕಷ್ಟ ಮತ್ತೊಮ್ಮೆ ಸುಖ. ಮನಸ್ಸು ವಿಚಿತ್ರವಾದ ತಳಮಳಗಳಿಗೆ ಒಳಗಾದಾಗ ಬದುಕು ಭಾರವೆನಿಸುತ್ತದೆ. ಹೀಗೆ ಆದರೆ ಮುಂದೆ ಹೇಗೆ ಎನ್ನುವ ಚಿಂತೆಯ ಪ್ರಶ್ನಾರ್ಥಕ ಚಿನ್ಹೆ ನಮ್ಮ ಮುಖಕ್ಕೆ ಮುಖ ಮಾಡಿಕೊಂಡು ನಿಲ್ಲುತ್ತದೆ ಅದಕ್ಕೆ ಉತ್ತರ ನೀಡುವುದು ಹೇಗೆ? ಚೆಂದದ ಗಳಿಗೆಗಳು ಜೊತೆಗಿರುವಾಗ ಹೀಗೇ ನೂರ್ಕಾಲ ಬದುಕಬೇಕು ಅನ್ನಿಸುವುದೂ ಖಚಿತ. ಸ್ವಾರಸ್ಯಕರ ಕಥೆ ಬದುಕಿನ ಏರಿಳಿತಗಳನ್ನು ಒಪ್ಪಿಕೊಳ್ಳುವ ಕುರಿತಂತೆ ಓದಿದ ಕತೆಯೊಂದು ತುಂಬಾ ಸ್ವಾರಸ್ಯಕರವಾಗಿದೆ. ನೀವೂ ಓದಿ: ಒಮ್ಮೆ ಒಬ್ಬ ರಾಜನು ಕಮ್ಮಾರನಿಗೆ ಹೀಗೆಂದು ಆದೇಶಿಸಿದನು. “ನಾನು ಮೇಲೇರುವಾಗ ನನ್ನ ಸಂತೋಷವನ್ನು ಕೂಡಿಡುವಂತೆ ಮತ್ತು ನಾನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಾಗ ಉತ್ಸಾಹ ಚಿಮ್ಮುವಂತೆ ಒಂದು ಸೂಕ್ತಿಯಳ್ಳ ಒಂದು ಮೊಹರನ್ನು ತಯಾರಿಸಿ ಕೊಡು.”ಎಂದ. ಕಮ್ಮಾರಿನಿಗೆ ಮೊಹರು ತಯಾರಿಸುವುದೇನು ಕಷ್ಟದ ಕೆಲಸವಲ್ಲ ಆದರೆ ಕಷ್ಟ ಮತ್ತು ಸುಖದ ಕ್ಷಣಗಳಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡುವ ಸೂಕ್ತಿಯನ್ನು ತಯಾರಿಸುವುದು ಕಷ್ಟವೆನಿಸಿತು. ಆದ್ದರಿಂದ ಆತ ಒಬ್ಬ ಋಷಿಯ ಬಳಿ ಹೋದ. ಋಷಿಯ ಬಳಿ ನಡೆದ ಪ್ರಸಂಗವನ್ನೆಲ್ಲ ವಿವರಿಸಿದ. ರಾಜ ಸುಖದ ಕ್ಷಣಗಳಲ್ಲಿರುವಾಗ ಸಂತಸವನ್ನು ಸಮೀಕರಿಸುವಂತೆ, ದುಃಖದ ಮಡುವಿನಲ್ಲಿರುವಾಗ ಉತ್ಸಾಹದಿಂದ ಪುಟಿದೇಳುವಂತೆ ಮಾಡುವ ಯಾವ ಸಂದೇಶವನ್ನು ಮೊಹರಿನ ಮೇಲೆ ಬರೆಯಬೇಕು? ಎಂದು ಭಿನ್ನವಿಸಿಕೊಂಡ.ಋಷಿಯು ಹೀಗೆ ಹೇಳಿದನು. ಮೊಹರಿನ ಮೇಲೆ ಹೀಗೆಂದು ಬರೆ “ಇದನ್ನೂ ದಾಟಬೇಕು” ಗೆದ್ದಾಗ ಈ ಮೊಹರನ್ನು ನೋಡಿ ವಿನೀತನಾಗುತ್ತಾನೆ. ಮತ್ತು ನಿರುತ್ಸಾಹದಲ್ಲಿ ಎದೆಗುಂದಿದಾಗ ಭರವಸೆಯ ಬೆಳಕಿನ ಕಿರಣವನ್ನು ಮೂಡಿಸುತ್ತದೆ.ಹಾವು ಏಣಿಯ ಆಟದಂತಿರುವ ಬದುಕನ್ನು ಹೇಗೆ ಒಪ್ಪಿ ಅಪ್ಪಿಕೊಳ್ಳುವುದು. ಉತ್ಸಾಹದ ಚಿಲುಮೆ ಚಿಮ್ಮಿಸುವುದು ಹೇಗೆ ನೋಡೋಣ ಬನ್ನಿ. ಮನಸ್ಥಿತಿ ಅನೇಕ ಸಲ ನಮ್ಮ ಪರದಾಟಗಳಿಗೆ ಏರಿಳಿತಗಳಿಗೆ ನಮ್ಮ ಮನಸ್ಥಿತಿ ಮುಖ್ಯ ಕಾರಣವಾಗಿ ಪರಿಣಮಿಸುತ್ತದೆ. ನಾವು ಸುಖವಾಗಿ ಇರಬೇಕೆಂದರೆ ನಮ್ಮೆದುರಿಗಿನವರನ್ನು ಸುಖವಾಗಿ ಇಡುವುದು ಮುಖ್ಯ “ನಾವು ಇತರರಿಂದ ಏನನ್ನು ಬಯಸುತ್ತೇವೆಯೋ ಅದನ್ನು ಅವರಿಗೆ ಮೊದಲು ನೀಡಬೇಕು.” ಆದರೆ ನಾವು ಇvರÀರಿಂದ ಸಹಕಾರ ಪ್ರೀತಿ ಬಯಸುತ್ತೇವೆ ಆದರೆ ನೀಡುವುದಿಲ್ಲ. ಬಹುತೇಕರು ಸ್ವಾರ್ಥ ಕೇಂದ್ರಿತರಾಗಿರುತ್ತಾರೆ ಯಾವಾಗಲೂ ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಮುಂದಿನ ಹರುಷದ ಮನಗಳು ನಮಗೆ ಪ್ರಸನ್ನತೆಯನ್ನು ಮೂಡಿಸುತ್ತವೆ ಎನ್ನುವ ಪರಿಕಲ್ಪನೆಯನ್ನು ತಲೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಅಂಥ ಮನಸ್ಥಿತಿಯಿಂದ ಬಿಡುಗಡೆ ಹೊಂದುವಂತೆ ಯಾರೂದರೂ ಉಪದೇಶಿಸಿದರೆ ಅವರ ಮುಂದೆ ಕೌಲೆತ್ತಿನಂತೆ ಗೋಣು ಹಾಕಿ ಮತ್ತೆ ಅದೇ ತಾಳ ಅದೇ ರಾಗ ಎನ್ನುವಂತೆ ಇರುತ್ತಾರೆ. ಎಂಥ ಕೆಟ್ಟವನಲ್ಲೂ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ ಎಂದು ನಂಬಬೇಕು. ಇದು ವಾಸ್ತವ ಕೂಡ. ಪ್ರತಿಯೊಂದಕ್ಕೂ ಇತರರನ್ನು ಅವಲಂಬಿಸುವ ಮನೋಭಾವವೂ ನೋವನ್ನು ತರುವುದು. ಮನಸ್ಥಿತಿ ಎನ್ನುವುದು ಫಲವತ್ತಾದ ಮಣ್ಣು ಇದ್ದಂತೆ ಅದರಲ್ಲಿ ಏನು ಬಿತ್ತುತ್ತೇವೆಯೋ ಅದನ್ನೇ ಬೆಳೆಯುತ್ತೇವೆ. ಕೋಪ ಅಸಹನೆ ಸೇಡು ತಿರಸ್ಕಾರ ಭಯದ ಬೀಜಗಳನ್ನು ಬಿತ್ತಿದರೆ ಅದೇ ಬೆಳೆಯುವುದು. ಪರಿಸ್ಥಿತಿಯನ್ನು ನಿಭಾಯಿಸುವ ಗುಣಗಳಾದ ತಾಳ್ಮೆ ಪ್ರೀತಿ ಒಲವು ಉದಾರತೆಯನ್ನು ಬಿತ್ತಿದರೆ ಬದುಕಿನಲ್ಲಿ ಕಹಿ ಪಾಲು ಕಡಿಮೆಯಾಗಿ ಸಿಹಿ ಪಾಲು ಹೆಚ್ಚುವುದು. ವಿವೇಕ ವಿವೇಚನೆ “ವಿಶ್ವ ವಿದ್ಯಾಲಯಗಳ ಆದ್ಯ ಕರ್ತವ್ಯವೆಂದರೆ ವಿವೇಕ ವಿವೇಚನೆಯನ್ನು ಕಲಿಸುವುದು. ವ್ಯಾಪಾರವನ್ನಲ್ಲ. ಯೋಗ್ಯತೆ ಸಂಪನ್ನಶೀಲತೆಯನ್ನೇ ಹೊರತು ವಿಧಿ ವಿಧಾನವನ್ನಲ್ಲ.” ಎಂದಿದ್ದಾನೆ ವಿನ್ಸ್ಟನ್ ಚರ್ಚಿಲ್ ಯಾರು ಪ್ರತಿದಿನ ಎದುರಾಗುವ ಸನ್ನಿವೇಶಗಳನ್ನು ನಿಭಾಯಿಸುತ್ತಾರೋ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಸಾಧ್ಯವಿದ್ದಷ್ಟು ತಾಳ್ಮೆಯಿಂದ ವರ್ತಿಸುತ್ತಾರೋ ಅವರನ್ನು ವಿವೇಕಿಗಳು ಎನ್ನುತ್ತಾರೆ.ಸಂಕ್ಷಿಪ್ತವಾಗಿ ಹೇಳುವುದಾದರೆ, ಬದುಕಿನ ಎಂಥ ಜಟಿಲ ಸವಾಲುಗಳಲ್ಲೇ ಆಗಲಿ ವಿವೇಕದಿಂದ ಆಯ್ಕೆ ಮಾಡುವವರು. ಯಾರು ಮೂರ್ಖತನ ಕೆಟ್ಟದ್ದು ಎಂದು ಚೆನ್ನಾಗಿ ಅರಿಯಬಲ್ಲರೋ ಅವರು ವಿವೇಕಿಗಳು. ಅತ್ಯಂತ ನಿರುತ್ಸಾಹಗೊಂಡಾಗಲೂ ಸಹನೆ ಕಳೆದುಕೊಳ್ಳದೇ ವರ್ತಿಸಬೇಕು. ಸಮಸ್ಯೆಗಳನ್ನು ಹೊಸ ದೃಷ್ಟಿಯಿಂದ ಆಲೋಚಿಸಿ ಒಳ್ಳೆಯ ಪರಿಹಾರ ಸೂಸುವುದಷ್ಟೇ ಜಾಣತನವಲ್ಲ. ಓದಿನಲ್ಲಿ ಹಿಂದೆ ಬಿದ್ದರೂ ಲೋಕಾನುಭವದಿಂದ ಚಾಕು ಚಕ್ಯತೆಯಿಂದ ಬದುಕು ನಿರ್ವಹಿಸುವುದೂ ಜಾಣತನವೇ. ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಅಂತ ಎಲ್ಲೆಲ್ಲೋ ಬಿದ್ದು ಸಾಯುವುದಲ್ಲ. ಜೀವನದಲ್ಲಿ ನೊಂದು ಸಾಯಲು ನಿರ್ಧರಿಸುವವನು ವಿವೇಕೆ ಅಲ್ಲವೇ ಅಲ್ಲ. ಆಸಕ್ತಿ ಹುಮ್ಮಸ್ಸು ಇರಿಸಿಕೊಂಡರೇ ಜಗತ್ತೇ ನಮ್ಮದು. ಇವೆರಡನ್ನು ಸದಾ ಹೋದಲೆಲ್ಲ ಹೊತ್ತೊಯ್ಯದರೆ ಏರಿಳಿತಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲೆವು. ಸಂತಸದಿಂದ ಇರಬಲ್ಲೆವು. ಶ್ರದ್ಧೆ ಜೀವನದಲ್ಲಿ ಏನೇನು ಒಳ್ಳೆಯದು ಆಗಿದೆಯೋ ಅದರ ಹಿಂದೆ ಶ್ರದ್ಧೆಯ ಸಿಂಹಪಾಲಿದೆ. ಇಳಿಕೆಗಳನ್ನು ಏರುಗಳನ್ನಾಗಿ ಬದಲಿಸುವ ಮರದ ತಾಯಿಬೇರು ಶ್ರದ್ಧೆ ಆಗಿದೆ. “ಶ್ರದ್ಧೆ ಎಲ್ಲಿದೆಯೋ ಅಲ್ಲಿ ಧೈರ್ಯವಿದೆ.”ಶ್ರದ್ಧೆ ಇಲ್ಲದ ಬಲವಂತನೂ ಸೋಲುತ್ತಾನೆ. ಶ್ರದ್ಧೆ ಇರುವ ಕಡಿಮೆ ಬಲ ಇರುವವನು ಗೆಲ್ಲುತ್ತಾನೆ. ಬದುಕಿನ ಬಾಗಿಲಿನಾಚೆ ಏನಿದೆ ಯಾರಿಗೂ ಗೊತ್ತಿಲ್ಲ ಆದರೆ ಕೆಟ್ಟದ್ದನ್ನು ಬದಲಿಸುವ ತಾಕತ್ತು ಶ್ರದ್ಧೆಗಿದೆ. ಬೆವರ್ಲ ಸೀಲ್ಸ್ ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. “ನೀವು ವಿಫಲರಾದಲ್ಲಿ ನಿರಾಶರಾಗಬಹುದು.ಆದರೆ ಪ್ರಯತ್ನವನ್ನೇ ಮಾಡದಿದ್ದರೆ ವಿನಾಶ ನಿಶ್ಚಿತ.”ಶ್ರದ್ಧೆ ಇಲ್ಲದವನು ಏನಾದರೂ ಆಗಲಿ ಎಂದುಕೊಳ್ಳುತ್ತಾನೆ ಶ್ರದ್ಧೆ ಇರುವವನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾನೆ. ಅಂದರೆ ಶ್ರದ್ಧೆ ಜೀವರಸಾಯನವಿದ್ದಂತೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತದೆ. ಬದುಕಬೇಕೆನ್ನುವ ಬೆಳೆಯಬೇಕೆನ್ನುವ ಆಸೆ ಚಮತ್ಕಾರಗಳನ್ನು ಸೃಷ್ಟಿಸಬಲ್ಲದು. ಅದೃಷ್ಟವಚಿತರೆಂದು ಗುರುತಿಸಲ್ಪಡುವವರೆಲ್ಲರೂ ಜೀವನದ ಸುಳಿಗಳಲ್ಲಿ ವೈಫಲ್ಯಗಳಲ್ಲಿ ಗಂಡಾಂತರಗಳಲ್ಲಿ ಶ್ರದ್ಧೆಯಿಂದ ಮುಂದೆ ಸಾಗಿದ್ದಕ್ಕೆ ಶ್ರದ್ಧೆ ಅವರ ಕೈ ಹಿಡಿದು ಮುನ್ನಡೆಸಿತು. ಕೋಲಂಬಸ್ ಗೆ ಹೊಸ ಜಗತ್ತನ್ನು ಕಂಡು ಹಿಡಿಯುವ ದಾರಿ ಗೊತ್ತಿರಲಿಲ್ಲ. ಆದರೆ ಅವನಲ್ಲಿದ್ದ ಬಲವಾದ ಶ್ರದ್ದೆಯೇ ಅದನ್ನು ಹುಡುಕಿಕೊಟ್ಟಿತು. ಸ್ಥಿರವಿಲ್ಲದ ಹೊಯ್ದಾಟದ ಸ್ಥಿತಿಯಲ್ಲಿ ಮುನ್ನಡೆಸುವುದು ಶ್ರದ್ಧೆ ಆದ್ದರಿಂದ ಶ್ರದ್ಧಾವಂತರಾಗುವುದು ಮುಖ್ಯ. ಸಂಕೋಚ – ಬೇಸರ ಸಂಕೋಚ ಬಹುತೇಕ ಸನ್ನಿವೇಶಗಳಲ್ಲಿ ಅಡೆತಡೆಯಾಗಿ ಪರಿಣಮಿಸುತ್ತದೆ. ಬೇರೆಯವರನ್ನು ತೃಪ್ತಿ ಪಡಿಸಲು ನಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಬಾರದು ನಮ್ಮ ಬಗ್ಗೆ ನಮಗಿರುವ ಕೆಟ್ಟ ಅಭಿಪ್ರಾಯಗಳಲ್ಲಿ ಬೇರೆಯವರು ಆಪಾದಿಸಿದ್ದೇ ಹೆಚ್ಚು.ಅವುಗಳನ್ನು ನಿಜವಾಗಿಸಬಾರದು. ಬೇರೆಯವರಿಗೆ ಸಲಹೆ ನೀಡಿದಾಗ ಅವರು ಪಾಲಿಸದಿದ್ದರೆ ಬೇಸರ ಪಟ್ಟುಕೊಳ್ಳಬಾರದು.ನಾವು ಹೇಳಿದ್ದನ್ನೆಲ್ಲ ಜನ ಸ್ವೀಕರಿಸಬೇಕೆಂದು ಯೋಚಿಸುವುದು ತಪ್ಪು. ನಾವು ಹೇಳಿದ್ದರಲ್ಲಿ ವಿಷಯ ಇಲ್ಲದಿರಬಹುದು, ಇಷ್ಟವಾಗದೇ ಇರಬಹುದು. ಇಲ್ಲವೇ ಅವರಿಗೆ ಅರ್ಥವಾಗುವ ಹಾಗೆ ನಾವು ಹೇಳದೇ ಇರಬಹುದು. ತಪ್ಪು ಒಪ್ಪು ತಪ್ಪು ಮಾಡಿದಾಗ ಒಪ್ಪಿಕೊಂಡು ಬಿಡಬೇಕು. ತಪ್ಪುಗಳೇ ನಚಿತರ ಒಪ್ಪುಗಳನ್ನು ಮಾಡಲು ದಾರಿ ತೋರಿಸುತ್ತವೆ.ತಪ್ಪು ಮಾಡಿದಾಗ ನಮಗೆ ನಾವೇ ಭಯಂಕರ ಶಿಕ್ಷೆ ವಿಧಿಸಿಕೊಂಡು ಮೂಲೆಯಲ್ಲಿ ಕೂರಬಾರದು. ತಪ್ಪನ್ನು ತಿಳಿದುಕೊಂಡು ಒಳ್ಳೆಯ ದೃಷ್ಟಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಚಾರ್ಲಿ ಚಾಪ್ಲಿನ್ ಚಿತ್ರಗಳಲ್ಲಿ ಆತ ಎಷ್ಟೋ ಸಲ ಬೀಳುತ್ತಿರುತ್ತಾನೆ. ಏಳುತ್ತಿರುತ್ತಾನೆ ಪೈಪು ಹಿಡಿದು ಮೇಲಕ್ಕೆ ಹತ್ತಿ ಧೊಪ್ಪೆಂದು ಕೆಳಕ್ಕೆ ಬೀಳುತ್ತಾನೆ. ಅದನ್ನು ಕಂಡು ನಾವು ಬಿದ್ದು ಬಿದ್ದು ನಗುತ್ತೇವೆ. ಯಾರೋ ಬಾಳೇ ಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಬಿದ್ದಾಗ ಗೊಳ್ಳೆಂದು ನಗುತ್ತೇವೆ. ಅಂದರೆ ಇತರರ ಕಷ್ಟಗಳು ತೊಂದರೆಗಳು ನಮಗೆ ತಮಾಷೆ ಎನಿಸುತ್ತವೆ. ಆದರೆ ನಮ್ಮ ಬುಡಕ್ಕೆ ಬಂದಾಗ ನೋವು ತರುತ್ತವೆ. ಈ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಕಷ್ಟಗಳಿಗೆ ಹೆದರಿ ನಮ್ಮನ್ನು ನಾವು ಶಿಕ್ಷಿಸಿಕೊಳ್ಳುವುದು ಬೇರೆಯಲ್ಲ ಇಲಿಯನ್ನು ಓಡಿಸಲು ಮನೆಗೆ ಬೆಂಕಿ ಹಚ್ಚುವುದು ಬೇರೆಯಲ್ಲ. ಎಲ್ಲ ಏರಿಳಿತಗಳಲ್ಲೂ ಗೆದ್ದು ಬದುಕಬೇಕೆನ್ನುವ ತೀವ್ರ ಆಕಾಂಕ್ಷೆ ನಮ್ಮನ್ನು ಸಂತಸದಿ ನಗೆ ಚೆಲ್ಲಿ ಬರಮಾಡಿಕೊಳ್ಳುತ್ತದೆ. ಹಾಗಾದರೆ ಆ ತೀವ್ರ ಆಕಾಂಕ್ಷೆ ನಮ್ಮದಾಗಿಸಿಕೊಳ್ಳೋಣ ಅಲ್ಲವೇ? ********************************************* ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಮುಖಾಮುಖಿ ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ ಪರಿಚಯ ;ಚೈತ್ರಾ ಶಿವಯೋಗಿಮಠಮೂಲತಃ ಬಿಜಾಪುರದವರು. ಬೆಂಗಳೂರಿನ ನಿವಾಸಿ.ಎಂಟೆಕ್ ಪದವಿಯನ್ನು ವಿಟಿಯು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್. ಕಾರ್ಯಕ್ರಮದ ನಿರೂಪಣೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ನನ್ನೊಂದಿಗೆ ನಾನು ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ. ತೀವ್ರವಾಗಿ ನನ್ನ ಮನಸ್ಸಿಗೆ ಅರ್ಥೈಸಬೇಕಾದರೆ ಅದನ್ನ ಪದಗಳಾಗಿಸಿ ನನ್ನ ಮನದಾಳಕಿಳಿಸಿಕೊಳ್ಳುತ್ತೇನೆ. ಮನೆಯನ್ನ ನಾವು ದಿನವೂ ಗುಡಿಸಿ ಶುಚಿ ಮಾಡಿದರೂ ಅದು ಮತ್ತೆ ಕಸ, ಧೂಳುಗಳಿಂದ ತುಂಬಿಕೊಳ್ಳುವುದು. ಅಂತೆಯೇ ನಮ್ಮ ಮನಸ್ಸು. ಸದ್ವಿಚಾರಗಳನ್ನ ಅದೆಷ್ಟು ಬಾರಿ ಮನಸ್ಸಿಗೆ ತಿಳಿಹೇಳಿದರೂ ಅರಿಷಡ್ವರ್ಗಗಳ ಪ್ರಭಾವ ವಲಯದಲ್ಲಿ ಸಿಲುಕಿ ಮತ್ತೆ ಕೆಡುಕಿಗೇ ತುಡಿಯುವುದು. ಕವಿತೆ, ನನ್ನ ಮನಸ್ಸಿಗೆ ನಾನೇ ಬುದ್ಧಿ ಹೇಳುವ ಮಾತುಗಳು. ಬಹುಶಃ ಇದೇ ತೊಳಲಾಟಗಳನ್ನ ಬಹುತೇಕ ಎಲ್ಲರೂ ಅನುಭವಿಸುತ್ತಾರೆ ಹಾಗಾಗಿ ನನ್ನ ಕವಿತೆಗಳು ಅವರನ್ನೂ ತಟ್ಟಿ ತಮ್ಮೊಂದಿಗೆ ತಾವು ಆಡಲಾರದ ಮಾತುಗಳನ್ನ ನನ್ನ ಕವಿತೆಗಳಲ್ಲಿ ಕಂಡರೆ ಸಾರ್ಥಕ ಭಾವ. ಕಾಣದ, ಅರಿಯದ ಯಾರಿಗೋ ಈ ಕವಿತೆಗಳು ಸಾಂತ್ವಾನವಾಗುವುವೇನೋ ಅನ್ನುವ ಆಶಾಭಾವ. ಓದಿದ ಮನಸ್ಸಿಗೆ ಅರೆಕ್ಷಣದ ಸಂತಸ, ನಿರಾಳತೆ ನೀಡಲಿ ಎನ್ನುವ ಸದುದ್ದೇಶ. ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ. ಕವಿತೆ ಹುಟ್ಟುವ ಕ್ಷಣ ಯಾವುದು ? ನಾನು ಸ್ವಭಾವತಃ ಬಹಿರ್ಮುಖಿ ಆದರೂ ನನ್ನೊಳಗೆ ಒಬ್ಬಳು ಸೂಕ್ಷ್ಮ ಅಂತರ್ಮುಖಿ ಅಡಗಿ ಕುಳಿತ್ತಿದ್ದಾಳೆ. ಅದೆಷ್ಟೋ ಸಲ ನನಗೆ ಉಮ್ಮಳಿಸಿ ಬರುವ ಅಳು, ಆಕ್ರೋಶ, ತಡೆಯಲಾರದಷ್ಟಾಗುವ ಖುಷಿ, ನನ್ನ ಸುತ್ತ ನಡೆಯುವ ಕೆಲವು ಘಟನೆಗಳಿಂದಾಗಿ ನನ್ನೊಳಗೇ ಹೇಳಿಕೊಳ್ಳಲಾಗದಂತಹ ತಳಮಳ. ಯಾರಿಗೆ ಹೇಳಲಿ ಎಂದು ಪರದಾಡುವಾಗಲೇ ಕವಿತೆ ಹುಟ್ಟುತ್ತದೆ. ಕೇವಲ ನನ್ನೊಳಗಿನ ನೋವು-ನಲಿವುಗಳಷ್ಟೇ ಅಲ್ಲದೆ ಸುತ್ತ ಮುತ್ತಲಿನವರ ನೋವು ನಲಿವುಗಳಿಗೆ ನನ್ನ ಸ್ಪಂದನೆಯಾದಾಗ ಹುಟ್ಟುವುದು ಕವಿತೆ. ಒಂದು ಘಟನೆ, ಒಬ್ಬ ವ್ಯಕ್ತಿ, ಒಂದು ಸಂಬಂಧ ತೀವ್ರವಾಗಿ ಕಾಡಿದಾಗ ಹುಟ್ಟುವುದು ಕವಿತೆ. ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ನಾನು ಹೆಚ್ಚಾಗಿ ಪ್ರಕೃತಿಯ ಕುರಿತಾಗೇ ಬರೆಯುವುದು. ಕಾಂಕ್ರೀಟ್ ಕಾಡಿನ ಏಕತಾನತೆ ಬೇಸರ ತರಿಸಿದಾಗೆಲ್ಲ ಒಂದು ಕಾಡಿಗಾದರೂ ಹೋಗಿ ಕುಳಿತುಬಿಡಬೇಕೆನ್ನುವ ಹಂಬಲ. ಹಸಿರು ನನ್ನನ್ನು ಹೆಚ್ಚು ಸೆಳೆಯುತ್ತದೆ. ಅಷ್ಟೇ ಅಲ್ಲದೆ ಪ್ರಸ್ತುತ ಕಾಲಮಾನದ ಕೆಲವು ಅಕ್ರಮಗಳು, ಮನುಷ್ಯರೇ ಮನುಷ್ಯರನ್ನ ಲೂಟಿ ಮಾಡುವುದು, ಈಗಿನ ವಿಷಮ ಸ್ಥಿತಿಯಲ್ಲಿನ ಮನಸ್ಥಿತಿಗಳು. ಮತ್ತು ಪದೆ ಪದೆ ಕಾಡುವುದು ಅಪ್ಪನ ನೆನಪುಗಳು. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಬಾಲ್ಯ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಅಪ್ಯಾಯಮಾನ. ಹಾಗೇ ನನಗೂ ಸಹ. ನನ್ನ ಬಾಲ್ಯವೆಂದರೆ ನನ್ನ ಅಪ್ಪಾಜಿ. ಅಪ್ಪನ ಕುರಿತು ಕೆಲವು ಕವನಗಳು ಬರೆದಿರುವೆ. ನನಗೆ ಭಾಷಾಭಿಮಾನ, ಓದು-ಬರಹದ ಬಗೆಗೆ ಒಲವು ಮೂಡಿಸಿದವರೇ ಅಪ್ಪಾಜಿ. ಇನ್ನು ಸಹಜವಾಗಿ ಪ್ರೀತಿ-ಪ್ರೇಮದ ಬಗೆಗೆಯೂ ಕವನಗಳನ್ನ ಬರೆದಿರುವೆ . ನೂರು ಭಾವಗಳಲ್ಲಿ ಒಲವಿನ ರಂಗು ತುಸು ಹೆಚ್ಚೇ ಆಗಿ ಕಾಣುವ ಹರೆಯದ ಪ್ರೀತಿಯ ನವಿರು ಭಾವನೆ ಮನಸ್ಸಿನಲ್ಲಿ ಪುಳಕ ಉಂಟುಮಾಡೋದರಲ್ಲಿ ಸಂದೇಹವೇ ಇಲ್ಲ! ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಆಳುವವರು ನಿಜವಾಗಿಯೂ ಆಳುವವರಲ್ಲದೆ ಅವರು ನಮ್ಮ ಪ್ರತಿನಿಧಿಗಳಾಗಿ ಸಂವಿಧಾನ ಬದ್ಧರಾಗಿ ನಡೆದುಕೊಳ್ಳುವುದು ಅತ್ಯವಶ್ಯಕ. ಆದರೆ ಈಗ? ಬರಿ ಪಕ್ಷ, ಅವರವರ ಸ್ವಂತ ಸಿದ್ಧಾಂತಗಳು, ಜಾತಿ ರಾಜಕಾರಣ, ಧರ್ಮದ ಹೆಸರಲ್ಲಿ ರಾಜಕೀಯ, ಹಣ, ಹೆಂಡ , ವಾಮ ಮಾರ್ಗಗಳೇ ಈಗಿನ ರಾಜಕೀಯದ ಸರಕುಗಳಾಗಿವೆ. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದ ಭಾರತ ಕೇವಲ ಧರ್ಮದ ಹೆಸರಲ್ಲಿ ಗಲಭೆಗಳೇ, ಮತ್ತು ಅದರಿಂದ ಲಾಭ ಪಡೆಯುವ ರಾಜಕಾರಣಿಗಳೇ ಹೆಚ್ಚಾಗಿ ಹೋಗಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ರಾಜಕೀಯದ ಬಗ್ಗೆ ಬಹಳಷ್ಟು ಜಿಗುಪ್ಸೆ ಮತ್ತು ನೀರಸ ಮನೋಭಾವನೆ! ಆದರೂ ಸಣ್ಣ ಆಶಾಭಾವನೆ ಇನ್ನೂ ಇದೆ, ಈ ರಾಜಕೀಯ ಪರಿಸ್ಥಿತಿ ಸುಧಾರಣೆ ಆಗಲಿ ಅಂತ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ದಯವಿಲ್ಲದ ಧರ್ಮ ಅವುದಯ್ಯ? ಎಲ್ಲ ಧರ್ಮಗಳೂ ಹೇಳುವುದೂ ಇದನ್ನೇ. ನನಗೆ ಪ್ರತಿಯೊಂದು ಧರ್ಮದ ಬಗ್ಗೆಯೂ ಗೌರವವಿದೆ. ಒಂದು ಅಗೋಚರ ಶಕ್ತಿ ನಮ್ಮನ್ನೆಲ್ಲ ಕಾಯುತ್ತದೆಂಬ ಅಗಾಧ ನಂಬಿಕೆ ಇದೆ. ಆತ್ಮನೊಳಗೆ, ಪರಮಾತ್ಮ ಇದ್ದಾನೆ, ನಾವು ಮನಸಾರೆ ಪ್ರಬಲ ಇಚ್ಛೆಯಿಂದ ಒಳ್ಳೆಯದನ್ನು ಬೇಡಿಕೊಂಡರೆ ಖಂಡಿತವಾಗಿಯೂ ಜಗತ್ತಿನೆಲ್ಲ ಶಕ್ತಿ ಅದರೆಡೆಗೆ ಕೆಲಸ ಮಾಡಲು ಶುರುಮಾಡುತ್ತವೆ. ಅಂತೆಯೇ ಮೂಢನಂಬಿಕೆಗಳಲ್ಲಿ ಎಳ್ಳಷ್ಟು ಆಸಕ್ತಿ ಇಲ್ಲ. ದೇವರು ಖಂಡಿತವಾಗಿಯೂ ಇದ್ದಾಳೆ. ಅದು ನಮ್ಮ ತಂದೆ, ತಾಯಿ ರೂಪದಲ್ಲಿ, ಪ್ರಕೃತಿಯಲ್ಲಿ, ನಾವು ಮಾಡುವ ಒಳ್ಳೆಯ ಕೆಲಸಗಳಲ್ಲಿ, ಪ್ರೀತಿಯಲ್ಲಿ! ಈ ಜಗದ ಚೈತನ್ಯವೇ ದೇವರು ಎಂದರೆ ತಪ್ಪಾಗಲಾರದು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಕೃತಕತೆ, ಅಸಹಜತೆ ಮತ್ತು ಅತಿಯಾದ ಸ್ವೇಚ್ಛೆಯೇ ಹೆಚ್ಚಾಗುತ್ತಿರುವುವೆಂಬ ಭಾವ. ಮಾತು, ಕೃತಿಗಳಲ್ಲಿನ ಅತಿಯಾದ ಸ್ವೇಚ್ಛೆಯೇ ಆಧುನಿಕತೆ ಎನ್ನುವಂತಾಗಿದೆ. ಹೊಸ ವಿಚಾರಗಳನ್ನ ಹುಟ್ಟು ಹಾಕುತ್ತ, ಹಳೆಯ ಒಳಿತುಗಳನ್ನ ಉಳಿಸಿಕೊಳ್ಳುತ್ತಾ ಸಾಗಬೇಕಾಗಿದೆ. ತೆರೆದ ಮನಸ್ಸು ಮತ್ತು ಹೃದಯವೈಶಾಲ್ಯತೆಗಳು ಬಹಳ ಕಡಿಮೆಯಾಗುತ್ತಿವೆಯೇನೋ. ನಮ್ಮ ನಿಲುವನ್ನ ಸ್ಪಷ್ಟವಾಗಿ ಹೇಳಲೂ ಹಿಂಜರಿಕೆ, ಕಾರಣ ನಮ್ಮನ್ನ ಒಂದು ಪಂಥಕ್ಕೆ ಸೀಮಿತ ಮಾಡಿಬಿಡುತ್ತಾರೆ. ಹಂಸ ಪಕ್ಷಿಯ ಹಾಗೆ ಎಲ್ಲದರಲ್ಲೂ ಒಳಿತನ್ನ ಮಾತ್ರ ತೆಗೆದುಕೊಂಡು ಕೆಡುಕನ್ನ ಬಿಡಬೇಕು. ಹಾಗೆಯೇ ಎಲ್ಲದಕ್ಕೂ ಈಗ ಹೋರಾಡಬೇಕಾದ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಇದರಲ್ಲಿ ನನಗೆ ಅನುಭವವೂ ಕಡಿಮೆ. ಕಾರಣ ನಾನು ಯಾವುದೇ ಒಂದೇ ಗುಂಪಿಗೆ ಸೇರದೆ, ಒಳ್ಳೆಯ ಮತ್ತು ಹೊಸ ಹೊಳಹುಗಳು ಎಲ್ಲಿರಿತ್ತವೋ ಅಲ್ಲಿ ನನ್ನ ಒಲವಿರುತ್ತದೆ. ಆದರೂ ಒಟ್ಟಾರೆಯಾಗಿ ನೋಡಿದಾಗ ಎಡ-ಬಲಗಳೆಂದು ಒಬ್ಬರ ಮೇಲೊಬ್ಬರು ಕೆಸರೆರಚಾಡುವುದು ಬಿಟ್ಟು ಕನ್ನಡ ಭಾಷಾ ಪರಂಪರೆಯನ್ನ ಮುಂದುವರಿಸಿಕೊಂಡು ಹೋಗಲು ಒಗ್ಗೂಡುವುದು ಅತ್ಯವಶ್ಯಕ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಬಹಳಷ್ಟು ಕೆಟ್ಟ ವಿಷಯಗಳನ್ನೇ ನಾವು ಕೇಳುತ್ತಿದ್ದರೂ, ನನ್ನ ಸುತ್ತಲು ಅಥವಾ ನನ್ನ ಸಂಪರ್ಕಕ್ಕೆ ಬಂದಿರುವ ಬಹಳಷ್ಟು ಯುವಮನಸ್ಸುಗಳು ಕನ್ನಡ ಭಾಷೆಯ ಒಲವು, ಬರಹ, ಸಂಚಾರ, ಸಹೃದಯಿತನವನ್ನ ತೋರುತ್ತಿದ್ದಾರೆ. ಇದು ಬಹಳಷ್ಟು ಆಶಾದಯಕ ಸಂಗತಿ ಮತ್ತು ಸಂತಸ, ಸಂತೃಪ್ತಿಯ ವಿಷಯ. ಈ ಯುವ ಚಿಗುರುಗಳಿಗೆ, ಹಿರಿಯ ಬೇರುಗಳು ತಮ್ಮ ಪ್ರೀತಿ, ಜ್ಞಾನವನ್ನ ಧಾರೆ ಎರೆದು ಕೈ ಹಿಡಿದು ನಡೆಸೋದು ಮತ್ತೊಂದು ಖುಷಿಯ ವಿಚಾರ. ಇಂತಹವರ ಸಂತತಿ ಹೆಚ್ಚಲಿ ಅನ್ನೋ ಆಶಯ. ತಾಂತ್ರಿಕ ಪ್ರಗತಿ, ಹೊಸ ಆವಿಷ್ಕಾರಗಳು ಕ್ಷಿಪ್ರಗತಿಯಲ್ಲಿದ್ದರೂ ಬಹಳಷ್ಟು ಸಾಮಾಜಿಕ ಸಮಸ್ಯೆಗಳು ಇನ್ನೂ ಉಳಿದುಕೊಂಡಿವೆ. ಅತ್ಯಾಚಾರ, ಕೊಲೆಗಳ ಸಂಖ್ಯೆ ಕಡಿಮೆಯೇ ಆಗುತ್ತಿಲ್ಲ. ಇವೆಲ್ಲ ಸಮಸ್ಯೆಗಳು ಬಗೆಹರೆಯಬೇಕೆಂದರೆ ಪ್ರತಿ ಒಬ್ಬ ವ್ಯಕ್ತಿ ಮೊದಲು ತಾನು ಸರಿಯಾಗಿ ಇರಬೇಕು. ಬಸವಣ್ಣ ಹೇಳಿದಂತೆ – “ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ”. ಅತೀ ವೇಗದ ಮುಮ್ಮುಖದ ಚಲನೆಯೊಂದಿಗೆ, ಪ್ರೀತಿ, ಪ್ರೇಮ ಅಂತಃಕರಣದ ಗುರುತ್ವಾಕರ್ಷಣೆ ನಮ್ಮನ್ನ ಹಿಡಿದಿಡಲಿ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ನನಗೆ ಎಷ್ಟು ಸಾಧ್ಯವೋ ಅಷ್ಟೂ ಓದಬೇಕೆಂಬ ಆಸೆ. “known is drop unknown is ocean” ಎನ್ನುವಂತೆ, ಓದುವ ಪುಸ್ತಕಗಳು ಇನ್ನೂ ಬಹಳಷ್ಟಿವೆ. ಜೊತೆಗೆ ಬಹಳಷ್ಟು ಬರೆಯುವ ಕನಸಿದೆ. ನಾನು ಬರೆದದ್ದೆಲ್ಲವೂ ಅತೀ ಸುಂದರ ಅನ್ನುವಂತೆ ಇರದಿರಬಹುದು, ಆದರೆ ಮೋನಚುಗೊಳಿಸುವ ಪ್ರಯತ್ನ ಸದಾ ಜಾರಿಯಲ್ಲಿರುವುದು. ಇತ್ತೀಚೆಗೆ ಆಂಗ್ಲ ಪದ್ಯಗಳನ್ನ ಕನ್ನಡಕ್ಕೆ ತರುವ ಗೀಳು ಹತ್ತಿದೆ. ಇದನ್ನ ಜಾರಿಯಲ್ಲಿಡುವ ಆಸೆ ಮತ್ತು ಪ್ರಯತ್ನ. ಹಾಗೆಯೇ ಕಥೆಗಳನ್ನು ಸಹ ಬರೆಯುವ ಹಂಬಲವಿದೆ. ಇಷ್ಟೇ ಸಾಹಿತ್ಯದ ಬಗ್ಗೆ ನನ್ನ ಸಧ್ಯದ ಕನಸುಗಳು. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ನಾನು ಬೆಳೆದ ಪರಿಸರ ಹೆಚ್ಚಾಗಿ ಶರಣರ ಸಂಸ್ಕೃತಿ ಮತ್ತು ವೈಚಾರಿಕತೆಯ ಪ್ರಭಾವದಲ್ಲಾದ್ದರಿಂದ ಸಹಜವಾಗಿ ಅಕ್ಕನ, ಅಣ್ಣನ ವಚನಗಳು ನನ್ನನ್ನು ಚಿಂತನೆಗೆ ಹಚ್ಚುವವು ಹಾಗೂ ಹೆಚ್ಚು ಆಪ್ತ ಎನಿಸುವಂತಹವು. ನನಗೆ ಕನ್ನಡದಲ್ಲಿ ಕಾಡುವ ಕವಿ ಕುವೆಂಪು.ಬೇಂದ್ರೆಯವರ ಪದ್ಯಗಳು . ಕಾರಂತರು, ಪೂರ್ಣಚಂದ್ರ ತೇಜಸ್ವಿ. ಆಂಗ್ಲದಲ್ಲಿ ಖಲೀಲ್ ಗಿಬ್ರಾನ್ ನ ಪದ್ಯಗಳು . ಈಚೆಗೆ ಓದಿದ ಕೃತಿಗಳಾವವು? ಇತ್ತೀಚೆಗೆ ಓದಿದ ಕೃತಿಗಳೆಂದರೆ: ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ, ಇನ್ನೂ ಕವನ ಸಂಕಲನಗಳನ್ನ ಇಡಿಯಾಗಿ ಓದುವುದಕ್ಕಿಂತ ಬಿಡಿ ಬಿಡಿಯಾಗಿ ಓದುವುದೇ ಬಹಳ ಇಷ್ಟ. ಎಂ.ಆರ್ ಕಮಲ ಅವರ ನೆತ್ತರಲ್ಲಿ ನೆಂದ ಚಂದ್ರ, ಕುವೆಂಪುರವರ ಕೊಳಲು ಈ ಕವನ ಸಂಕಲನಗಳಿಂದ ಒಂದಷ್ಟು ಕವಿತೆಗಳನ್ನ ಆಗಾಗ ಓದುತ್ತಿದ್ದೇನೆ. ಓದುವ ಪಟ್ಟಿಯಲ್ಲಿ ಇನ್ನೂ ಬಹಳಷ್ಟು ಪುಸ್ತಕಗಳ ದೊಡ್ಡ ಪಟ್ಟಿಯೇ ಇದೆ. ನಿಮಗೆ ಇಷ್ಟವಾದ ಕೆಲಸ ಯಾವುದು? ಓದು ಬರಹಗಳೊಂದಿಗೆ, ನನಗೆ ಪತಿಯೊಂದಿಗೆ ಹೊಸ ಸ್ಥಳಗಳಿಗೆ ಭೇಟಿ ಕೊಡುವುದು, ಹಳೆಯ ವಾಸ್ತುಶಿಲ್ಪದ ಕಲಾಗುಡಿಗಳಿಗೆ ಹೋಗುವುದು, ಹಸಿರು, ಕಾಡು, ಬೆಟ್ಟ, ಝರಿಗಳಿಗೆ ಹೋಗಿ ಸುತ್ತಾಡಿ ಪ್ರಕೃತಿಯನ್ನ ಮನಸಾರೆ ಸವಿಯುವುದು. ಹಾಗೆಯೇ ನನ್ನ ಪುಟಾಣಿ ಮಗಳಿಗೆ ಪದ್ಯಗಳನ್ನ ಹೇಳಿಸುವುದು ಇಷ್ಟದ ಕೆಲಸದಲ್ಲೊಂದು! ನಿಮಗೆ ಇಷ್ಟವಾದ ಸ್ಥಳ ಯಾವುದು ? ಇಂತಹದೇ ಎಂದು ಕಡ್ಡಿ ಕೊರೆದು ಹೇಳುವುದು ಕಷ್ಟ. ಎಲ್ಲಿ ಪ್ರೀತಿ ಅಂತಃಕರಣ ತುಂಬಿರುವುದೋ, ಎಲ್ಲಿ ಅಮ್ಮ ಇರುವಳೋ, ಎಲ್ಲಿ ಹಸಿರಿರುವುದೋ ಆ ಸ್ಥಳಗಳೆಲ್ಲವೂ ಇಷ್ಟವೇ! ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ನನಗೆ ಬಹಳ ಇಷ್ಟವಾಗುವ ಸಿನಿಮಾಗಳು ಬಹಳಷ್ಟಿವೆ. ಡಾ.ರಾಜ್ ಕುಮಾರ್ ಅವರ ಎಲ್ಲ ಸಿನಿಮಾಗಳೂ ಇಷ್ಟವಾಗುತ್ತವೆ. ಅವರ ಸಿನಿಮಾಗಳಲ್ಲಿ ಮಾನವೀಯ ಮೌಲ್ಯಗಳು, ಪ್ರೀತಿ ಇಂತಹ ಅನೇಕ ಭಾವನಾತ್ಮಕ ಅಂಶಗಳೇ ಹೆಚ್ಚು. ಇತ್ತೀಚೆಗೆ ರಮೇಶ್ ಅರವಿಂದ್ ಅವರ ಶಿವಾಜಿ ಸುರತ್ಕಲ್ ಬಹಳಷ್ಟು ರೋಮಾಂಚನಕಾರಿ ತಿರುವುಗಳ ಚಿತ್ರ ಇಷ್ಟವಾಯ್ತು. ನೀವು ಮರೆಯಲಾರದ ಘಟನೆ ಯಾವುದು? ನನ್ನ ತಂದೆ ಅಕಾಲದಲ್ಲಿ ಇಹವನ್ನ ತ್ಯಜಿಸಿದ ಘಟನೆ ನಾನೆಂದಿಗೂ ಮರೆಯಲಾಗದ ಅತ್ಯಂತ ನೋವಿನ ಘಟನೆ. ಹಾಗೇ ನನ್ನ ಮಗಳು ಹುಟ್ಟಿದ ದಿನ ನಾನೆಂದಿಗೂ ಮರೆಯಲಾಗದ ಅತೀ ಸಂತಸದ ಕ್ಷಣ. ಹಾಗೆಯೇ ಶಾಲಾ ಕಾಲೇಜು ದಿನಗಳಲ್ಲಿ ಕ್ಲಾಸ್ ಬಿಟ್ಟು ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಬಹಳಷ್ಟು ನೆನಪನಲ್ಲಿರುತ್ತದೆ. ****************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಜ್ಞಾನಪಾನ ಭಕ್ತಿ ಜ್ಞಾನಗಳನ್ನು ಪ್ರೇರಿಸುವ ಕೃತಿ ಕೃತಿಯ ಹೆಸರು : ಜ್ಞಾನಪಾನಪ್ರಕಾಶಕರು : ಶ್ರೀ ಅಯ್ಯಪ್ಪ ಭಕ್ತ ಸಭಾ , ಚೆನ್ನೈಪ್ರಕಟಣಾ ವರ್ಷ : ೨೦೨೦ಪುಟಗಳು : ೩೨ ಹದಿನಾರನೆಯ ಶತಮಾನದಲ್ಲಿ ಭಾರತದಾದ್ಯಂತ ನಡೆದ ಭಕ್ತಿ ಚಳುವಳಿಯ ಸಂದರ್ಭದಲ್ಲಿ ಮಲೆಯಾಳ ಭಕ್ತಿ ಕಾವ್ಯ ರಚನೆ ಮಾಡಿದವರಲ್ಲಿ ಪ್ರಮುಖರು ಪೂಂದಾನಂ ನಂಬೂದಿರಿ. ಕನ್ನಡದಲ್ಲಿ ರಚನೆಯಾದ ದಾಸ ಸಾಹಿತ್ಯದಷ್ಟು ವ್ಯಾಪಕವಾದ ವಸ್ತು ವೈವಿಧ್ಯಗಳಿಲ್ಲದಿದ್ದರೂ ಮಲೆಯಾಳದಲ್ಲಿ ಪೂಂದಾನಂ, ಚೆರುಶ್ಶೇರಿ ನಂಬೂದಿರಿ, ತುಂಜತ್ತ್ ಎಳುತ್ತಚ್ಛನ್, ನಾರಾಯಣ ಭಟ್ಟಾತಿರಿಪ್ಪಾಡ್ ಮೊದಲಾದ ಭಕ್ತಿ ಕವಿಗಳು ಬಹಳಷ್ಟು ಜೀವನಮೌಲ್ಯಗಳುಳ್ಳ ದೈವಭಕ್ತಿ ಪ್ರೇರಕ ಕಾವ್ಯವನ್ನು ರಚಿಸಿದ್ದಾರೆ. ‘ಜ್ಞಾನಪಾನ'(ಪಾನ ಅಂದರೆ ಮಣ್ಣಿನಿಂದ ಮಾಡಿದ ಒಂದು ಅಲತೆಯ ಪಾತ್ರ) ಗುರುವಾಯೂರಪ್ಪನನ್ನು ಸಂಬೋಧಿಸಿ ಬರೆದ ಭಕ್ತಿ ಕಾವ್ಯ. ಮಹಾಕೃಷ್ಣ ಭಕ್ತರಾದ ಪೂಂದಾನಂ ತಮ್ಮ ಎಳೆಯ ಮಗುವಿನ ಅಕಾಲ ಮರಣದ ಸಹಿಸಲಾರದ ದುಃಖವನ್ನು ಈ ಕಾವ್ಯದ ಮೂಲಕ ಯೋಗವಿಶೇಷವಾಗಿ ಪರಿವರ್ತಿಸುತ್ತಾರೆ. ಮಲೆಯಾಳದ ಭಗವದ್ಗೀತೆಯೆಂದೇ ಪ್ರಾಮುಖ್ಯ ಪಡೆದ ಈ ಕಾವ್ಯದಲ್ಲಿ ಪಾನ ಎಂಬ ಹೆಸರಿನ ಛಂದಸ್ಸಿನಲ್ಲಿ ಬರೆದ ೩೬೫ ಸಾಲುಗಳಿವೆ. ಇದು ಒಂದು ದಾರ್ಶನಿಕ ಕಾವ್ಯ. ತನ್ನ ಸಾಹಿತ್ಯಕ ಗುಣ, ಸರಳ ಪದಪುಂಜಗಳು, ತಾತ್ವಿಕ ಶಕ್ತಿ ಹಾಗೂ ಆಳವಾದ ಭಕ್ತಿಯ ಗುಣಗಳನ್ನೂ ಈ ಕಾವ್ಯದಲ್ಲಿ ನಾವು ಕಾಣಬಹುದು. ಉದ್ದಕ್ಕೂ ವಿರುದ್ಧ ಪ್ರತಿಮೆಗಳನ್ನು ಬಳಸುವ ಮೂಲಕ ಕೃಷ್ಣನ ಬ್ರಹ್ಮಾಂಡ ಕೃತ್ಯಗಳನ್ನು ವ್ಯಯ ಕರ್ಮಜಾಲದಿಂದ ಮೇಲೆತ್ತುವ ಕೆಲಸವನ್ನು ಇಲ್ಲಿ ಕವಿ ಮಾಡಿದ್ದಾರೆ. ಕವಿ ತನ್ನ ದುಃಖಾನುಭವವನ್ನು ಭಕ್ತಿಸೌಧದ ನಿರ್ಮಾಣಕ್ಕಾಗಿ ಬಳಸಿ ಎಲ್ಲರಿಗಾಗಿ ಅದನ್ನು ಸದಾಕಾಲವೂ ತೆರೆದಿಟ್ಟಿದ್ದಾರೆ. ಉಣ್ಣಿಕೃಷ್ಣನ್ ಮನಸ್ಸಿಲ್ ಕಳಿಕ್ಕುಂಬೋಳ್ ಉಣ್ಣಿಗಳ್ ಮಟ್ಟು ವೇಣಮೋ ಮಕ್ಕಳಾಯ್’ ( ಬಾಲ ಕೃಷ್ಣನು ಮನದಿ ಆಟವಾಡುತ್ತಿರಲು/ ಎಳೆಯ ಮಕ್ಕಳು ನಮಗೆ ಬೇರೆ ಬೇಕೆ? (ಪುಟ ೨೬)ಎನ್ನುವ ಸಾಲುಗಳು ಕವಿಯ ದುಖದ ಅಗಾಧತೆಯನ್ನೂ ದೃಢವಾದ ಕೃಷ್ಣಭಕ್ತಿಯನ್ನೂ ಪ್ರಕಟಿಸುತ್ತವೆ. ಈ ಭರತಖಂಡದ ಪುಣ್ಯ ಭೂಮಿಯಲ್ಲಿ ಜನ್ಮತಳೆದ ನಾವು ಪುಣ್ಯವಂತರೆಂದೂ ಈ ಜನ್ಮವನ್ನು ನಾವು ಸತ್ಕಾರ್ಯಗಳಿಗಾಗಿ ವಿನಿಯೋಗಿಸ ಬೇಕೆಂದೂ ಪೂಂದಾನಂ ಇಲ್ಲಿ ಹೇಳುತ್ತಾರೆ. ಕೇವಲ ಲೌಕಿಕ ಸುಖ ಭೋಗಗಳಿಗಾಗಿ ಹೆಣಗಾಡುವುದು ನಮ್ಮ ಜೀವನದ ಧ್ಯೇಯವಾಗಬಾರದು. ದೇವರ ಸಹಸ್ರನಾಮಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು ಅಂತರಂಗದ ಭಕ್ತಿಯಿಂದ ನಿರಂತರವಾಗಿ ನಾಮಸ್ಮರಣೆ ಮಾಡುತ್ತ ಮೋಕ್ಷಪ್ರಾಪ್ತಿಗಾಗಿ ಪ್ರಯತ್ನಿಸುವುದೇ ನಮ್ಮ ಏಕಧ್ಯೇಯವಾಗಿರಬೆಕು ಎಂದೂ ಹೇಳುತ್ತಾರೆ. ‘ಜ್ಞಾನಪಾನ’ ಕೃತಿಯ ಭಾಷಾ ಸರಳವಾಗಿದ್ದರೂ ಅದು ಶ್ರಿಮದ್ಭಾಗವತ, ಭಜಗೋವಿಂದಂ,, ವಿವೇಕಚೂಡಾಮಣಿ ಮತ್ತು ನಾರಾಯಣೀಯಂ ಎಂಬ ಮಹತ್ವದ ಕೃತಿಗಳ ಎಲ್ಲ ಸತ್ವಗಳನ್ನು ಒಳಗೊಂಡಿದೆ. ಪೂಂದಾನಂ ಅನ್ನುವುದು ಕವಿಯ ಹೆಸರಲ್ಲ.ಅದು ಅವರ ಮನೆತನದ ಹೆಸರು. ‘ಪೂಂದಾನಂ ಇಲ್ಲಂ’ ಇರುವುದು ಈಗಿನ ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣದಿಂದ ೮ ಕಿ.ಮೀ.ದೂರದಲ್ಲಿ. ಕಾಸರಗೋಡಿನಲ್ಲಿರುವ ಹಿರಿಯ ಅನುವಾದಕರಾದ ಎ.ನರಸಿಂಹ ಭಟ್ ಕನ್ನಡಕ್ಕೆ ಮೂಲದ ಸೌಂದರ್ಯವನ್ನು ಮತ್ತು ಕಾವ್ಯಾತ್ಮಕತೆಯನ್ನು ಉಳಿಸಿಕೊಂಡು ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ಉದಾಹರಣೆಯಾಗಿ ಪೂಂದಾನಂ ಅವರು ಸಮಾಜದ ವಿವಿಧ ವರ್ಗಳ ಜನರನ್ನು ಚಿತ್ರಿಸುವ ಕೆಲವು ಸಾಲುಗಳ ಅನುವಾದ : ಸ್ಥಾನಮಾನಕ್ಕಾಗಿ ಬೈದಾಡಿ ಬಡಿದಾಡಿ/ ಮಾನವೆಲ್ಲವ ಕಳೆದು ಬದುಕುವರು ಕೆಲವರು/ ಮದಮತ್ಸರಾದಿಗಳ ಮನದಲ್ಲಿ ಮುದ್ರಿಸುತ/ಮತಿಹೀನರಾಗಿ ಬದುಕುವರು ಕೆಲವೆಉ/ ಕಾಮಮೋಹಿತರಾಗಿ ಕಾಮಾಕ್ಷಿಯರ ಸೇರಿ/ಕಾಮಕೇಳಿಯಲಿ ಕಾಲ ಕಳೆಯುವರು ಕೆಲವೆರು/ದೇವಾಲಯಗಳಲ್ಲಿ ಸೇವೆಗಾಗಿಯೆ ಸೇರಿ/ ವೇಷಧಾರಿಗಳಂತೆ ಬದುಕುವರು ಕೆಲವರು.. ಓದುಗರ ಅನುಕೂಲಕ್ಕಾಗಿ ಅನುವಾದಕರು ಮೂಲ ಕೃತಿಯ ಸಾಲುಗಳನ್ನು ಬಲ ಬದಿಯ ಪುಟಗಳಲ್ಲೂ ಅನುವಾದವನ್ನು ಎಡಬದಿಯ ಪುಟಗಳಲ್ಲೂ ನೀಡಿದ್ದಾರೆ. *********************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಗಂಗಾವತಿಯ `ಜಜ್ಬ್’ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉರ್ದು ಪಂಡಿತರ ಪಡೆಯೊಂದು ಈಚಿನವರೆಗೂ ಇತ್ತು. ನಿಜಾಂ ಸಂಸ್ಥಾನದಲ್ಲಿ ಉರ್ದು ಆಡಳಿತ ಹಾಗೂ ಶಿಕ್ಷಣದ ಭಾಷೆಯಾಗಿದ್ದು, ಸಹಜವಾಗಿಯೇ ಈ ಭಾಗದ ಎಲ್ಲ ಜಾತಿಮತಗಳ ಜನ ಉರ್ದುವಿನಲ್ಲಿ ಶಿಕ್ಷಣ ಪಡೆದರು. ಅವರಲ್ಲಿ ಕೆಲವರು ಆಡಳಿತಾತ್ಮಕ ಉರ್ದುವಿನಲ್ಲಿ ವಿಶೇಷ ಪರಿಣತಿ ಪಡೆದುಕೊಂಡರು. 1948ರಲ್ಲಿ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿತು. ಹಳೇ ಗುಲಬರ್ಗ ಬೀದರ್ ರಾಯಚೂರು ಜಿಲ್ಲೆಗಳು ಏಕೀಕೃತ ಕರ್ನಾಟಕದ ನಕ್ಷೆಯೊಳಗೆ ಬಂದವು. ಈ ರಾಜಕೀಯ ಪಲ್ಲಟವು ಉರ್ದು ಪಂಡಿತರನ್ನು ಇದ್ದಕ್ಕಿದ್ದಂತೆ ಅಪ್ರಸ್ತುತಗೊಳಿಸಿತು-ಪವರ್‍ಲೂಮ್ ಬಂದೊಡನೆ ಕೈಮಗ್ಗದ ಕೈಮುರಿದಂತೆ. ಇದರಿಂದ ಉರ್ದು ಲೇಖಕರು ಅಪ್ರಸ್ತುತಗೊಳ್ಳಲಿಲ್ಲ. ಬದಲಿಗೆ ಎರಡು ಭಾಷೆಗಳ ನಡುವಿನ ಸಾಹಿತ್ಯಕ ಮತ್ತು ಸಾಂಸ್ಕøತಿಕ ಆದಾನ ಪ್ರದಾನ ಮುಂದುವರೆಸಿದರು. ಶಾಂತರಸ, ದೇವೇಂದ್ರಕುಮಾರ ಹಕಾರಿ, ಸಿದ್ಧಯ್ಯ ಪುರಾಣಿಕ, ಚನ್ನಬಸವಪ್ಪ ಬೆಟದೂರು, ಮುದ್ದಣ ಮಂಜರ್, ಡಿ.ಕೆ.ಭೀಮಸೇನರಾವ್, ಜಂಬಣ್ಣ ಅಮರಚಿಂತ, ಚಂದ್ರಕಾಂತ ಕುಸನೂರು, ಪಂಚಾಕ್ಷರಿ ಹಿರೇಮಠ-ಇದನ್ನು ಮಾಡಿದರು. ಇವರಲ್ಲಿ ಭೀಮಸೇನರನ್ನು ಬಿಟ್ಟು ಉಳಿದವರ ಜತೆ ಒಡನಾಟ ಮಾಡುವ ಅವಕಾಶ ನನಗೆ ಸಿಕ್ಕಿತು. ಉರ್ದುನಲ್ಲಿ ಕವಿತೆ ಬರೆಯುತ್ತಿದ್ದ, ಇಕ್ಬಾಲರ ಕಾವ್ಯವನ್ನು ಅನುವಾದಿಸಿದ್ದ ಮುದ್ದಣ್ಣ `ಮಂಜರ್’ ಅವರ ಜತೆ, ಉರ್ದು-ಕನ್ನಡ ಅನುವಾದ ಕಮ್ಮಟದಲ್ಲಿ (1985) ಒಡನಾಡಿದ ನೆನಪು ಬರುತ್ತಿದೆ. ಶಾಂತರಸ, ಹಕಾರಿ, ಬೆಟದೂರರು ಕೂಡಿದಾಗ ಉರ್ದುವಿನಲ್ಲೇ ಹರಟುತ್ತಿದ್ದರು. ಶಾಂತರಸರು `ಉಮ್ರಾವ್‍ಜಾನ್’ ಕಾದಂಬರಿ ಅನುವಾದಿಸಿದರು; ಗಜಲುಗಳ ಬಗ್ಗೆ ವಿದ್ವತ್‍ಪೂರ್ಣ ಲೇಖನ ಬರೆದರು. ಕರಾವಳಿ ಭಾಗದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಮೂಲಕ ಹೊಮ್ಮಿದ ಕನ್ನಡ ಪಂಡಿತ ಪರಂಪರೆಯಿದ್ದಂತೆ, ಹೈದರಾಬಾದ್ ಕರ್ನಾಟಕದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಂದ ಉರ್ದು ಪಂಡಿತ ಪರಂಪರೆ, ಕರ್ನಾಟಕ ಸಂಸ್ಕøತಿಗೆ ಕಸುವನ್ನು ಕೂಡಿಸಿತು. ಈ ಪರಂಪರೆಯ ಲೇಖಕರಲ್ಲಿ ಗಂಗಾವತಿಯ ರಾಘವೇಂದ್ರರಾವ್ ಜಜ್ಬ್ ಸಹ ಒಬ್ಬರು. ಇವರು ತಮ್ಮ ಪರಿಚಯವನ್ನು ಬರೆದುಕೊಂಡಿರುವ ರೀತಿ ಸ್ವಾರಸ್ಯಕರವಾಗಿದೆ: “ರಾಘವೇಂದ್ರ ನಾಮ. `ಜಜ್ಬ್’ ಅಂಕಿತ. ರಾಯಚೂರು ಜಿಲ್ಲೆಗೆ ಸೇರಿದ ಗಂಗಾವತಿ ಜನ್ಮಸ್ಥಳ. ದತ್ತಪುತ್ರನಾಗಿ ಆಲಂಪುರದಲ್ಲಿ ಬೆಳೆದನು. 20ರ ಏಪ್ರಿಲ್ 1898 ಇವನ ಜನ್ಮದಿನ. ಮಾತೃಭಾಷೆ ಕನ್ನಡ. ಪ್ರಾಂತೀಯ ಭಾಷೆ ತೆಲುಗು. ರಾಜಭಾಷೆ ಉರ್ದು. ಅರಬ್ಬಿ ಫಾರಸಿ ಭಾಷೆಯಲ್ಲಿ ಕಿಂಚಿತ್ ಶಿಕ್ಷಣವಾಗಿದೆ. ಅಲ್ಪಸ್ವಲ್ಪ ಸಂಸ್ಕøತ ಪರಿಚಯವೂ ಇದೆ. ವಕೀಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 18-20 ವರ್ಷ ಪ್ರಾಕ್ಟೀಸ್ ಮಾಡಿ ಬಿಟ್ಟುಕೊಟ್ಟನು. ವಿದ್ಯಾರ್ಥಿಯಾಗಿರುವಾಗಲೇ ಕವಿತ್ವದ ಕಡೆಗೆ ಲಕ್ಷ್ಯವಿತ್ತು. ಎಲ್ಲ ವಿಧದ ಕವನಗಳನ್ನೂ ಬರೆದಿದ್ದಾನೆ. ರುಬಾಯಿ ರಚನೆಯಲ್ಲಿ ಅಭಿರುಚಿ ವಿಶೇಷವಿದೆ. ಅನೇಕ ಸಂಸ್ಕøತ ಕನ್ನಡ ತೆಲುಗು ಗ್ರಂಥಗಳ ಪದ್ಯಾನುವಾದ ಮಾಡಿದ್ದಾನೆ. ಎರಡು ಭಾಗಗಳಲ್ಲಿ ರುಬಾಯಿಯಾತ್ ಪ್ರಕಟವಾಗಿದೆ. ಅಖಿಲ ಆಂಧ್ರ ಮಜಲಿಸ್ಸಿನವರು `ಖಯ್ಯಾಮ ಎ ಆಂಧ್ರ’ ಎಂಬ ಬಿರುದನ್ನು ದಯಪಾಲಿಸಿದ್ದಾರೆ. ಕನ್ನಡ-ಕನ್ನಡ-ಉರ್ದುಕೋಶವನ್ನು ಬರೆದಿದ್ದಾನೆ.’’ ಸಂಕೋಚ ಮತ್ತು ನಮ್ರ ಪ್ರವೃತ್ತಿಯ ವ್ಯಕ್ತಿಗಳು ಮಾತ್ರ ಹೀಗೆ ಪರಿಚಯಿಸಿಕೊಳ್ಳಬಲ್ಲರು. ಅತಿರಂಜಿತ ಬಯೊಡೇಟವನ್ನು ಬ್ಯಾಗಿನಲ್ಲಿಟ್ಟುಕೊಂಡು ಅಧಿಕಾರಸ್ಥರ ಹಿಂದೆಮುಂದೆ ಸುತ್ತುವವರು ಈ ನೀರಸ ಶೈಲಿಗೆ ನಗಬಹುದು. ಜಜ್ಬ್ ಹುಟ್ಟಿದ ವರ್ಷವೇನೊ ಸಿಗುತ್ತಿದೆ. ತೀರಿಕೊಂಡ ತೇದಿ ತಿಳಿಯುತ್ತಿಲ್ಲ. ಅವರ ಮನೆತನದವರು ಎಲ್ಲಿದ್ದಾರೊ ತಿಳಿಯದು. ಅವರ ಚಿತ್ರಪಟವಾದರೂ ಸಿಕ್ಕರೆ ನೋಡಲು ಸಾಧ್ಯವಾಗಬಹುದೆಂದು ಆಸೆ ಇರಿಸಿಕೊಂಡಿರುವೆ. `ಜಜ್ಬ್’ ಹೆಸರು ನನ್ನ ನಜರಿಗೆ ಬಿದ್ದಿದ್ದು `ಉರ್ದು ಮತ್ತು ಫಾರಸಿ ಸಾಹಿತ್ಯ’ ಎಂಬ ಪುಸ್ತಕದ ಮೂಲಕ. ಹಳದಿ ರಂಗಿನ ಸಾದಾರಟ್ಟಿನ ಈ ಪುಸ್ತಕದ ಮುಖಬೆಲೆ 3 ರೂ 75 ಪೈಸೆ. ಮೈಸೂರಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೊಡಮಾಡುವ ಅರ್ಧಬೆಲೆಗೆ ಅದನ್ನು ಅಷ್ಟೊಂದು ಉಪಯುಕ್ತ ಪುಸ್ತಕವೆಂಬ ಖಬರಿಲ್ಲದೆ ಖರೀದಿಸಿದ್ದೆ. ಅದು ಮತ್ತೆಮತ್ತೆ ಬಳಸುತ್ತಿರುವ ಅಪರೂಪದ ಪುಸ್ತಕಗಳಲ್ಲಿ ಒಂದಾಯಿತು. ಈ ಪುಸ್ತಕ ಪ್ರಕಟವಾಗಿದ್ದು ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯಲ್ಲಿ. ಸಾಮಾನ್ಯ ಜನರಿಗೆ ಲೋಕದ ವಿಷಯಗಳ ಮೇಲೆ ಕನ್ನಡದಲ್ಲಿ ತಿಳುವಳಿಕೆ ಕೊಡುವುದು ವಿಶ್ವವಿದ್ಯಾಲಯದ ವಿದ್ವಾಂಸರ ಕರ್ತವ್ಯ ಎಂಬ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅನಿಸಿತು. ಅವರಾಶಯಕ್ಕೆ ಅನುಗುಣವಾಗಿ, ಬಿ.ಎಂ. ಶ್ರೀಕಂಠಯ್ಯನವರ ಕಾಲದಲ್ಲಿ ವಿಶ್ವವಿದ್ಯಾನಿಲಯ ಸದರಿ ಯೋಜನೆ ಆರಂಭಿಸಿತು. ವಿದ್ವಾಂಸರು ತಮಗೆ ಪಾಂಡಿತ್ಯವಿರುವ ಕ್ಷೇತ್ರದಲ್ಲಿ ಯಾವುದಾದರೂ ವಿಷಯ ಆರಿಸಿಕೊಂಡು, ಒಂದು ಊರಿನಲ್ಲಿ ಉಪನ್ಯಾಸ ಮಾಡಬೇಕು. ನಂತರ ಪುಸ್ತಕ ರೂಪದಲ್ಲಿ ಬರೆದುಕೊಡಬೇಕು. ಈ ಯೋಜನೆಯಲ್ಲಿ ಜಜ್ಬ್ ಉರ್ದು ಮತ್ತು ಫಾರಸಿ ಸಾಹಿತ್ಯ ಪರಿಚಯಿಸುವ ಉಪನ್ಯಾಸ ಮಾಡಿದರು. ಅದು ಪುಸಕ್ತವಾಗಿ 1964ರಲ್ಲಿ ಹೊರಬಂದಿತು. ಇದರಲ್ಲಿ ಉರ್ದು ಭಾಷೆಯ ಹುಟ್ಟು, ಅದರ ಹುಟ್ಟಿನಲ್ಲಿ ದಕ್ಷಿಣ ಭಾರತದ ಪಾತ್ರ, ಅದರ ಬೆಳವಣಿಗೆ, ಅದರಲ್ಲಿ ಹುಟ್ಟಿದ ಸಾಹಿತ್ಯ, ಫಾರಸಿಯ ಮುಖ್ಯ ಕವಿಗಳು-ಹೀಗೆ ವಿಭಿನ್ನ ನಮೂದುಗಳ ಮೇಲೆ ಅಧ್ಯಾಯಗಳಿವೆ. ಇದರ ವಿಶೇಷವೆಂದರೆ- ಉರ್ದು ಕವಿತೆಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಿ ಅವಕ್ಕೆ ತರ್ಜುಮೆ ಕೊಟ್ಟಿರುವುದು; ಭಾರತ ಮತ್ತು ಕರ್ನಾಟಕದ ಉರ್ದು ಕವಿಗಳ ಪರಿಚಯ ಕೊಟ್ಟಿರುವುದು. ಈ ಕವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಇಸಮು ಮುಸ್ಲಿಮರಲ್ಲ. ಉರ್ದು ಮುಸ್ಲಿಮರ ಭಾಷೆಯೆಂಬ ಅರೆಸತ್ಯದ ತಿಳುವಳಿಕೆ ಕಲಿತವರಲ್ಲಿದೆ. ಆದರೆ ಅದರ ಪ್ರಥಮ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಗೋರಖಪುರದ ರಘುಪತಿ `ಫಿರಾಕ್’ ಅವರಿಗೆ. ಉರ್ದುವನ್ನು ಮತಾತೀತ ಭಾಷೆಯನ್ನಾಗಿ ನೋಡಬೇಕೆಂದು ಜಜ್ಬರ ಆಶಯವಾಗಿತ್ತು. ಕೃತಿಯ ಅಖೈರಿನಲ್ಲಿ “ಮುಸ್ಲಿಮರು ಉರ್ದುವನ್ನು ತಮ್ಮದೆಂದು ಹಕ್ಕುಸಾಧಿಸುತ್ತ ಅದಕ್ಕೊಂದು ಧಾರ್ಮಿಕತೆ ಕಲ್ಪಿಸಿದರು. ಅದು ಮುಸ್ಲಿಮರದೆಂದು ಉಳಿದವರು ಅದನ್ನು ದೂರವಿಟ್ಟು ಹಿಂದಿಯನ್ನು ಅಪ್ಪಿಕೊಂಡರು. ಇವೆರಡನ್ನೂ ಒಳಗೊಂಡ ಹಿಂದೂಸ್ತಾನಿ ಭಾರತದ ಭಾಷೆಯಾಗಬೇಕೆಂದು ಗಾಂಧಿ ಬಯಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಅದು ಸಾಧ್ಯವಾಗಿದ್ದರೆ ಉರ್ದುವಿಗೆ ಈ ಸ್ಥಿತಿ ಬರುತ್ತಿರಲಿಲ್ಲ’’ ಎಂದು ವಿಷಾದದಿಂದ ಜಜ್ಬ್ ವ್ಯಾಖ್ಯಾನಿಸುತ್ತಾರೆ. ಹೈದರಾಬಾದ್ ಕರ್ನಾಟಕದಲ್ಲಿ ಜಜ್ಬ್ ರಂತಹ ಉರ್ದು ವಿದ್ವಾಂಸರು ನೂರಾರಿದ್ದರು. ಎಲ್ಲರೂ ಒಬ್ಬೊಬ್ಬರಾಗಿ ಕಣ್ಮರೆಯಾದರು. ಕೆಲವು ಹಿರಿಯರು ತಮ್ಮ ಬಾಳಿನ ಕೊನೆಯಂಚಿಗಿದ್ದಾರೆ. ಈ ಭಾಗದ ಹಿಂದಿನ ರೆವಿನ್ಯೊ ದಾಖಲೆಗಳೆಲ್ಲ ಉರ್ದುವಿನಲ್ಲಿದ್ದು, ಈಗಲೂ ತಹಸಿಲ್ದಾರರು-ಜಿಲ್ಲಾಧಿಕಾರಿಗಳು ಅಗತ್ಯ ಬಿದ್ದಾಗ ಈ ಪಂಡಿತರನ್ನು ಕರೆದು ನೆರವನ್ನು ಪಡೆವುದುಂಟು. ಹೆಚ್ಚಿನವರು ಪ್ರಭುತ್ವದ ಭಾಷೆಯಾಗಿದ್ದ ಉರ್ದುವನ್ನು ಹೊಟ್ಟೆಪಾಡಿಗಾಗಿ ಕಲಿತರೆ; ಜಜ್ಬ್ ರಂತಹ ಕೆಲವರು ಉರ್ದುವಿನಲ್ಲಿರುವ ಸಾಹಿತ್ಯದ ರುಚಿಗಾಗಿ ಕಲಿತರು. ಸ್ವತಃ ಉರ್ದುವಿನಲ್ಲಿ ಸಾಹಿತ್ಯ ರಚನೆ ಮಾಡಿದರು.ಜಜ್ಬ್ ಉರ್ದುವಿಗೆ ಸಂಸ್ಕøತದಲ್ಲಿದ್ದ ಭರ್ತೃಹರಿಯ ಶತಕಗಳನ್ನೂ ಕನ್ನಡದ ಸೋಮೇಶ್ವರ ಶತಕವನ್ನೂ ಅನುವಾದಿಸಿದರು. ಶತಕದ “ಪೊಡೆಯಲ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ದನೇನಪ್ಪನೇ!’ ಚರಣ ಅವರಲ್ಲಿ “ಸಫಾಯೀಕೇ ಲಿಯೇ ಧೋಯಾ ಕೋ ಅಪ್ನಾ ತನೇ ಖಾಖೀ, ಮಗರ್ ಇಸಸೇ ನಹೀ ಹೋತೀ ಹೈ ದಿಲ್ ಕಿ ದೂರ ನಾಪಾಕೀ’’ ಎಂದಾಗುತ್ತದೆ. ಜಜ್ಬ್ ತಮ್ಮ ಜೀವಿತ ಕಾಲದಲ್ಲಿ ಅಖಿಲ ಭಾರತ ಮಟ್ಟದ ಮುಶಾಯಿರಗಳಲ್ಲಿ ಭಾಗವಹಿಸುತ್ತಿದ್ದರು. ಅವರ ರುಬಾಯಿಗಳನ್ನು ಕವಿಗಳಾದ ಪಂಡಿತ ದತ್ತಾತ್ರೇಯ ಕೈಫಿ, ಮೋಹನ್ ಸಿಂಗ್ ದೀವಾನಾ, ಮುಲ್ಲಾರ ಮೂಜಿ, ಶಾಹಿದ್ ಸಿದ್ದಿಕಿ ಮುಂತಾದವರು ಹೊಗಳಿದ್ದಾರೆ. ಈ ರುಬಾಯಿಗಳನ್ನು (ಚೌಪದಿ) ಉರ್ದು ಅಕಾಡೆಮಿ ಮರುಮುದ್ರಿಸಬೇಕು. `ಉರ್ದು ಮತ್ತು ಫಾರಸಿ ಸಾಹಿತ್ಯ’ ಕೃತಿಯದೂ ಮರುಮುದ್ರಣ ಆಗಬೇಕು. ಜಜ್ಬ್ ಉರ್ದುಪಂಡಿತ ಮಾತ್ರ ಆಗಿರಲಿಲ್ಲ. ಮಾನವತಾವಾದಿ ಕವಿಯೂ ಆಗಿದ್ದವರು; ಕನ್ನಡ-ಉರ್ದು ಪಾಂಡಿತ್ಯ ಪರಂಪರೆಯ ಕೊಂಡಿಗಳಲ್ಲಿ ಒಂದಾಗಿದ್ದವರು; ಮುಖ್ಯವಾಗಿ ಎರಡು ಧಾರ್ಮಿಕ ಸಮುದಾಯಗಳ ನಡುವೆ ಸೇತುವಿನಂತಿದ್ದವರು. ಈಗಂತೂ ಸೇತುವೆ ಕೊಂಡಿಗಳದ್ದೇ ಕೊರತೆ. ಅವರ ರುಬಾಯಿಯೊಂದು ಹೀಗಿದೆ: ಯಾರಬ್ ಕೋಯಿ ಚಾಹೇ ತೊ ಹುಕೂಮತ್ ದೇದೇಚಾಹೇ ಜೊ ಕೋಯೀ ತೊ ಮಾಲ್ ವ ದೌಲತ್ ದೇದೇಜಿನ್‍ಜಿನ್‍ಕಿ ಜೋ ಖಾಹಿಷ್ ಹೋ ಅತಾಕರ್ ವಹ್‍ಸಬ್ಲೇಖಿನ್ ಮುಝೆ ಸಿರ್ಫ್ ಅದಮಿಯ್ಯತ್ ದೇದೇ( `ಓ ದೇವರೇ, ಯಾರಾದರೂ ಅಧಿಕಾರ ಬೇಡಿದರೆ ಕೊಡು, ಧನ ಬೇಡಿದವರಿಗೆ ಧನಕೊಡು, ಯಾರೇನು ಬೇಡುವರೊ ಅವರಿಗದನ್ನು ಕೊಡು, ನನಗೆ ಮಾತ್ರ ಮನುಷ್ಯತ್ವವನ್ನು ನೀಡು.’) ಕನ್ನಡ ಮತ್ತು ಉರ್ದು ಸಾಹಿತ್ಯದಲ್ಲಿ ಜಜ್ಬ್ ಶ್ರೇಷ್ಠ ಲೇಖಕ ಇರಲಿಕ್ಕಿಲ್ಲ. ಆದರೆ ಕೆಲವು ಹೆಸರಾಂತ ಲೇಖಕರು ಚರಿತ್ರೆಯಿಂದ ಕಹಿಯನ್ನೇ ಹೆಕ್ಕಿತೆಗೆದು ಮಂಡಿಸುವ ಸಾಹಿತ್ಯ ರಚಿಸುತ್ತಿರುವಾಗ, ಜಜ್ಬರ ಮನುಷ್ಯತ್ವದ ಹಂಬಲ ಅಪೂರ್ವವಾಗಿ ಕಾಣುತ್ತದೆ. ಕಲೆಗಾರಿಕೆ ಮತ್ತು ಜೀವನದೃಷ್ಟಿಕೋನ ಇವುಗಳ ನಡುವೆ ನಮ್ಮ ಪ್ರಥಮ ಆಯ್ಕೆ ಯಾವುದು? ಪ್ರತಿಯೊಂದು ಆಯ್ಕೆಯನ್ನು ಆಯಾ ಕಾಲ ದೇಶ ಸನ್ನಿವೇಶ ಮತ್ತು ವ್ಯಕ್ತಿಯ ತುರ್ತುಗಳು ನಿರ್ಧರಿಸುತ್ತವೆ. ಭಾರತದ ಸಾಂಸ್ಕøತಿಕ ಸಮೃದ್ಧಿಗೆ ಜಜ್ಬರಂತಹ ಪಂಡಿತರು; ನಜರುಲ್ ಇಸ್ಲಾಮರಂತಹ ಬಂಗಾಳಿ ಕವಿಗಳು; ಗಂಗೆ-ಕಾಶಿಗಳ ಜತೆ ಆಪ್ತಸಂಬಂಧವಿದ್ದ ಬಿಸ್ಮಿಲ್ಲಾಖಾನರಂತಹ ಸಂಗೀತಗಾರರು ಕಾರಣರು. ಇಂತಹ ಕೂಡುಸಂಸ್ಕøತಿಯ ಅರಿವೇ ಇರದ, ಇದ್ದರೂ ಸಮ್ಮತಿಸಿದ ಸಾಂಸ್ಕøತಿಕ ಅನಕ್ಷರತೆ ವ್ಯಾಪಕವಾಗಿ ಹಬ್ಬುತ್ತಿರುವಾಗ, ಜಜ್ಬರಂತಹ ಪಂಡಿತರ ಚಿತ್ರಗಳು ಚರಿತ್ರೆಯ ವಿಸ್ಮøತಿಗೆ ಸೇರಿದರೆ ಸೋಜಿಗವಿಲ್ಲ. (ನೇಹಿಗರೇ, ಪಂಡಿತ ರಾಮಭಾವು ಬಿಜಾಪುರೆ ಅವರ ಬಗ್ಗೆ ನಾನು ಹಿಂದೆ ಬರೆದ ಟಿಪ್ಪಣಿಯನ್ನು `ಫೇಸ್‍ಬುಕ್ಕಿನಲ್ಲಿ ಹಂಚಿಕೊಳ್ಳಲು ಸಾಧ್ಯವೇ? ಎಂದು ಕವಿ ಕವಿತಾ ಕುಸುಗಲ್ ಕೇಳಿದರು. ಇದೊಂದು ಬರೆಹ ಪ್ರಕಟಿಸುವ ತಾಣವೂ ಆಗಿದೆ ಎಂದು ಗೊತ್ತಾಗಿದ್ದು ಆಗಲೇ. ಕಷ್ಟಪಟ್ಟು ಬಲಿಪಶು ಹುಡುಕುತ್ತಿದ್ದ ಚಿರತೆಗೆ ಕಾಲ್ನಡೆ ತುಂಬಿದ ಕೊಟ್ಟಿಗೆಗೆ ಬಿಟ್ಟಂತಾಯಿತು. ಅಂದಿನಿಂದ ಹೊಸ ಪುಸ್ತಕಕ್ಕಾಗಿ ಸಿದ್ಧಪಡಿಸಿದ ಹಳೆಯ ಟಿಪ್ಪಣಿಗಳನ್ನು ಹಾಕುತ್ತ ನಿಮ್ಮ ಮೇಲೆ ಎರಗುತ್ತಿರುವೆ. ಸಿಗುತ್ತಿರುವ ಮೆಚ್ಚು ಕಸುವು ತುಂಬುತ್ತಿದೆ; ಟೀಕೆಗಳು ತಿದ್ದಿ ನೇರ್ಪಡಿಸುತ್ತಿವೆ. ಪುಸ್ತಕ ಪ್ರಕಟವಾಗುವವರೆಗೂ ನಿಮಗೆ ಈ ಕಾಟದಿಂದ ಮುಕ್ತಿಯಿಲ್ಲವೆಂದು ಕಾಣುತ್ತದೆ. ಸ್ನೇಹದ ತರೀಕೆರೆ) ********************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ









