ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಕವಿತೆ ಅನಂತ ಮೌನಗಳ ಶಬ್ದ ಸಾಗರ ರಂಜಾನ್ ಹೆಬಸೂರು.‌ಹುಬ್ಬಳ್ಳಿ ಕವಿತೆಗಳನ್ನು ಯಾಕೆ ಬರೆಯುವಿರಿ? ಕವಿತೆ ಅಥವಾ ಕಾವ್ಯ ನಮ್ಮೊಳಗಿನ ಒತ್ತಡಗಳನ್ನು ಕಳೆದುಕೊಳ್ಳುವ ಒಂದು ಮಾಧ್ಯಮ ನನ್ನೊಳಗೆ ಒಡಮೂಡುವ ಸೂಕ್ಷ್ಮ ಗ್ರಹಿಕೆಯ ಸಂವೇದನಗಳು , ಒತ್ತಡಗಳು ಸಂಕಟಗಳನ್ನು , ವರ್ತಮಾನದ ತಲ್ಲಣಗಳಿಗೆ ಅನುಸಂಧಾನವಾಗಿಸುವುದು ಮುಖಾಮುಖಿಯಾಗುವುದಕ್ಕೆ ಕಾವ್ಯ ಬರೆಯುತ್ತವೆ ಒಳಗಿನ ಕತ್ತಲೆಗೆ ಬೆಳಕು ಸುರಿಯಲಿಕ್ಕೆ,ಮನುಷ್ಯ ಬದುಕಿನ ಶೋಧಕ್ಕೆ,ಕಾಡುವ ಘಟನೆಗಳಿಗೆ ಚಿತ್ರಗಳಿಗೆ, ನೋವಿಗೆ,ಸಂಕಟಕ್ಕೆ,ತಲ್ಲಣಕ್ಕೆ,ಮಿಡಿಯುವ ಕರುಳಿಗೆ,ಅವಮಾನ ನೋವು,ಹತಾಶೆ,ಕ್ರೋಧ,ಅವ್ಯಕ್ತ ಭಾವಗಳ ಅಕ್ಷರಗಳಿಗೆ ಕಾವ್ಯ ಮಾಧ್ಯಮ ವಾಗುತ್ತದೆ . ಕಾವ್ಯ ಕಾರ್ಯ ಕಾರಣವಿಲ್ಲದೆ ಹುಟ್ಟುವುದಲ್ಲ ಅನುಭವ ಘನೀಕರಣ ಗೊಂಡು ತನ್ನೊಳಗೆ ಹುಟ್ಟಿಸಿಕೊಳ್ಳುತ್ತದೆ ; ಬರೆಸಿಕೊಳ್ಳುತ್ತದೆ.ನನ್ನೊಳಗೆ ಮನೋಗತವಾಗಿ ಹುದುಗಿ ಹದವಾಗಿ ಮೆದುವಾಗಿ ಕಾವ್ಯವಾಗುತ್ತದೆ. ಕವಿತೆ ಹುಟ್ಟುವ ಕ್ಷಣ ಯಾವುದು? ಸವಿತಾ ನಾಗಭೂಷಣ ಅವರ ಕವಿತೆಯಂತೆ ಕವಿತೆ ಎಂದರೆ ” ಚಪಾತಿ ಹಿಟ್ಟಿನಂತೆ ಮಡಚಿದರೆ ಚಿಕ್ಕದಾಗುತ್ತದೆ ಲಟ್ಟಿಸಿದರೆ ಅಗಲವಾಗುತ್ತದೆ. ಕೆ.ಎಸ್ ನರಸಿಂಹಸ್ವಾಮಿ ಅವರ ಕವಿತೆಯಂತೆ ಅನುಭವದಾಳ ಕೈ ಹಿಡಿದಾಗ ಒಂದು ಕವಿತೆಯಂತೆ. ಒಟ್ಟಿನಲ್ಲಿ ಕಾವ್ಯ ನನ್ನಂತರಂಗದ ಕತ್ತಲಿಗೆ ಪ್ರತಿಬಿಂಬದ ಬೆಳಕಾಗಿ ಕಾವ್ಯ ವಿದೆ . ಅದು ಕಾಡಿದಾಗ ಮಿಡಿದಾಗ ಕಾವ್ಯ ಸ್ಪುರಣೆಯಾಗುತ್ತದೆ.‌ ಅದೊಂದು ನಿರಾಳವಾಗಿಸುವ ಪ್ರಕ್ರಿಯೆ . ಅದು ದೀರ್ಘ ಕಾಡುವಿಕೆಯ ನಂತರ ಅದೊಂದು ಅನಂತ ಮೌನಗಳ ಶಬ್ದ ಸಾಗರ. ಕವಿತೆ ಅದು ಒಮ್ಮೆ ಲೆ  ಮೂಕನಿಗೆ ಬಾಯಿ ಬಂದಂಗೆ ಕಂಬಾರನ ಕುಲುಮೆಯಲಿ ಸುಟ್ಟು ಹದವಾಗಿ ಮೆದುವಾದ ಕ್ಷಣ ,ಭೂತ ವರ್ತಮಾನ ಗಮಿಸಿ ಭವಿತವ್ಯಕ್ಕೆ ದಾರಿ ತೋರುವ ಮಂತ್ರಗಳು. ಹದಗೊಂಡಾಗ ಎದೆ ತೆರೆದ ಮಾತುಗಳು. ನಿಮ್ಮ ಕಾವ್ಯದ ವಸ್ತು ಏನು? ಕಾಡುವ ವಿಷಯ ಯಾವುದು? ಪರಕೀಯತೆ, ಅನಾಥ ಪ್ರಜ್ಞೆ, ಲೋಕದ ಸಂಕಟಗಳು, ಏಕಾಂತ ಲೋಕಾಂತವಾದ ವರ್ತಮಾನದ ತಲ್ಲಣಗಳು,ಆತಂಕಗಳು ನನ್ನ ಕಾವ್ಯದಲ್ಲಿ ಕಾಡುವ ವಿಷಯ ಪ್ರತಿ ಕಾವ್ಯವು ಹಾಗೆ ಮಾಗಿದಂತೆ ಅನುಭವಿಸಿದಂತೆ ಅದರ ಫಲ. ವಯೋಸಹಜವಾಗಿ ಹುಟ್ಟುವ ಆನುಭವ ಆಕಾಂಕ್ಷೆ ಗಳು, ಕನಸುಗಳು, ಆಲೋಚನೆ ಗಳು, ಮನೋಭಾವ ಗಳು ನಮ್ಮ ಕಾವ್ಯವಾಗುತ್ತದೆ.ಹಾಗೆ ಯೇ ವಯೋ ಸಹಜ ಪ್ರೀತಿ ಪ್ರೇಮ, ವಿರಹ ದುಃಖ,ಸಂತೋಷ, ಹುಡುಗಾಟಿಕೆ,ಬಾಲ್ಯ ಕಳೆದ ಕ್ಷಣಗಳು ,ಹರೆಯದ ಕಾಮನೆ,ಪ್ರೀತಿ ಎಲ್ಲವೂ ನನ್ನ ಕಾವ್ಯಗಳಲ್ಲಿ ಪಡಿಮೂಡಿವೆ ಹಾಗೆಯೆ ಎಲ್ಲ ಕವಿಗಳಲ್ಲೂ ಸಹಜವೂ ಹೌದು. ನಿಮ್ಮ‌ಕಾವ್ಯದಲ್ಲಿ ಬಾಲ್ಯ,‌ಹರೆಯ ಇಣುಕಿದೆಯಾ? ಹರೆಯದ ಪ್ರೇಮ ಕಾವ್ಯ ಹುಟ್ಟುವ ತಲಕಾವೇರಿ ಬಾಲ್ಯದ ಹುಡುಗಾಟ  . ಹರೆಯದ ಚೆಲ್ಲಾಟ ಕಾವ್ಯವಾಗಿ ಅನುಭವವಾಗಿ ಅನುಭಾವವಾಗಿ ವಯಸ್ಸು ಮಾಗಿದಂತೆ ಕಾವ್ಯ ಗಂಭೀರತೆಯ ಸ್ವರೂಪ ಪಡೆದುಕೊಳ್ಳುತ್ತದೆ. ಒಂದು ತೊರೆ ಹರಿದು ನದಿಯಾಗಿ ಸಾಗರದಂತೆ ಹರಡುವ ಪ್ರಕ್ರಿಯೆ. ಪ್ರಸ್ತುತ ರಾಜಕೀಯ ಸಂದರ್ಭಕ್ಕೆ ನಿಮ್ಮ ಪ್ರತಿಕ್ರಿಯೆ ಏನು?  ರಾಜಕೀಯ ಜ್ಞಾನ ಇಲ್ಲವೆನ್ನುವವನು ಈ ದೇಶದ ಅನಕ್ಷರಸ್ಥ.  ರಾಜಕೀಯವೆನ್ನುವುದು  ನಮ್ಮ ಕಲ್ಯಾಣಗೋಸ್ಕರ ನಾವೆ ಮಾಡಿಕೊಂಡ ಒಂದು ಜನಸೇವಕರ  ಗುಂಪು .ಆದರೆ ಲಾಭಕೋರತನವೇ ಈ ಸನ್ನಿವೇಶದ ಪ್ರಧಾನ ಅಂಶವಾಗಿದೆ .ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ಖಾಸಗೀಕರಣದ ಗುಲಾಮತನಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವ ನೆಲೆಗೆ ಸಾಗುತ್ತಿದೆ.ಜನಕಲ್ಯಾಣದ ಅಂಶಗಳನ್ನು ಕ್ರೋಢೀಕರಿಸಿ ಕೊಂಡು ಅಭಿವೃದ್ಧಿ ಪಥದತ್ತ ರಾಜಕಾರಣ ಸಾಗಬೇಕಿದೆ ದೇವರು, ಧರ್ಮದ ಬಗ್ಗೆ ನಿಮ್ಮ ನಿಲುವೇನು?  ದೇವರು ಧರ್ಮ ಅಪ್ರಸ್ತುತ ವೆನಿಸುವ ದುರಿತ  ಕರೋನಾ ಕಾಲದಲ್ಲಿ ಇದ್ದೇವೆ.  ಆದರೆ ಅದರ ನಂಬಿಕೆಯ ಜೀವಾಲಳವೂ ಇನ್ನೂ ನಮ್ಮನ್ನು ಬದುಕಿಸುತ್ತೀವೆ. ಕ್ರೂರತೆಯ ಕಾಲದಲ್ಲೂ ಧರ್ಮ ದೇವರು ನಮ್ಮನ್ನು ರಕ್ಷಿಸುತ್ತವೆ ಅನ್ನುವ ನಂಬಿಕೆಯ ನ್ನು ಬಲವಾಗಿ ನಂಬಿಕೊಂಡದ್ದು  ನಮ್ಮ  ಭಾರತೀಯ ಪರಂಪರೆ ಆದರೆ ನಮ್ಮ ಹಿರಿಯರು ಧರ್ಮ ಮತ್ತು ದೇವರ ಪರಿಕಲ್ಪನೆಯನ್ನು ಹಿರಿದಾರ್ಥದಲ್ಲಿ ನಂಬಿಕೊಂಡು ಬಂದಿದ್ದರು ಆದರೆ ನಮ್ಮ ವಿಶ್ವಕುಟುಂಬತ್ವವನ್ನು ಸೀಮಿತಗೊಳಿಸಿ  ಆಲೋಚಿಸುತ್ತಿದ್ದೇವೆ ಆ ದಿಕ್ಕಿನಲ್ಲಿ ಚಿಂತಿಸುತ್ತಿದ್ದೇವೆ ವಿಶಾಲಾರ್ಥದಲ್ಲಿ ಧರ್ಮ ದೇವರ ಪರಿಕಲ್ಪನೆ ಇಂದು ಇಲ್ಲದಾಗಿ ಜಗತ್ತು ಅದಃಪತನದತ್ತ ಸಾಗುತ್ತಿದೆ. ಧರ್ಮ ಮನುಷ್ಯನ ದೃಷ್ಟಿ ಕೋನವನ್ನು ಬದಲಿಸಬೇಕಿದೆ ಎಲ್ಲರೂ ಬದುಕುವ ಮನುಜಮತವನ್ನು ಪ್ರೇರಿಪಿಸುವ ವಾತಾವರಣ ನಿರ್ಮಾಣವಾಗಬೇಕಿದೆ ಮೂರ್ತ ಅಮೂರ್ತ ಗಳ ಕಲ್ಪನೆ ಇಟ್ಟುಕೊಂಡು ದೇವರು ಧರ್ಮ ನಮ್ಮ ಕೈಯೊಳಗಿನ ಯಂತ್ರಗಳಾಗಿ ಮಾರ್ಪಟ್ಟಿವೆ ಬಸವಣ್ಣ ಹೇಳಿದಂತೆ  ” ದಯವಿಲ್ಲದ ಧರ್ಮ ಅದಾವುದಯ್ಯ ದಯವೇ ಬೇಕು ಸಕಲ ಪ್ರಾಣೆಗಳಲ್ಲಿ” ಅನ್ನುವ ವಚನದಂತೆ “ದಯೆ ಧರ್ಮದ ಮೂಲಾಧಾರ ವಾಗಬೇಕು. ದೇವರು ಅಂತರಂಗದ ಶಕ್ತಿಯಾಗಬೇಕು ಅದು ಮನುಷ್ಯನ ಕಲ್ಯಾಣ ಬಯಸಬೇಕು ಸಕಲ ಜೀವರಾಶಿಗಳಿಗೆ ಒಳಿತು ಬಯಸಬೇಕು ಧರ್ಮ ಮಿತಿಗಳಿಂದ ತುಂಬಿ ಮನುಷ್ಯ ನ ಅಧಃಪತನಕ್ಕೆ ಹಾದಿಯಾಗಬಾರದು ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಮೊಹಮ್ಮದ್ ದರ್ವೇಶಿ ಹೇಳಿದಂತೆ ಕಾವ್ಯ ಚರಿತ್ರೆಯನ್ನ ಬದಲಿಸುತ್ತದೋ ಇಲ್ಲವೋ ಗೊತ್ತಿಲ್ಲ ಕವಿತೆ ವರ್ತಮಾನವನ್ನ ಬದಲಿಸುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಅದು ಕವಿಯನ್ನ ಮಾತ್ರ ಬದಲಾಯಿಸುತ್ತದೆ ಎನ್ನುವಂತೆ ಜಿಎಸ್ ಶಿವರುದ್ರಪ್ಪ ಅವರು ಹೇಳಿದಂತೆ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಕಾವ್ಯ ಎಂದರೆ ಕಾವ್ಯ ನನ್ನನ್ನು ಮೊದಲು.  ನಂತರ ತನ್ನ ಸುತ್ತಲಿನ ಸಮಾಜವನ್ನು ಒಂದಿಷ್ಟು ಎಚ್ಚರ ವಿವರಿಸಲು ಈ ಎಚ್ಚರಿಕೆ ಅನೇಕ ಮಾಧ್ಯಮಗಳಿದ್ದರೂ ಕಾವ್ಯ ಅದರಲ್ಲೊಂದು ಕೊಳದ ತಳ ಗೊಡೆ ಗೆದ್ದಾಗ ಅದು ತಿಳಿಯಾಗಲು ಕಾವ್ಯದ ಕೆರೆಯೂ ತಿಳಿಗೆ ಕಾರಣವಾಗುತ್ತವೆ .ಸಾಹಿತ್ಯದಿಂದ ಎಲ್ಲವೂ ಬದಲಾವಣೆಯಾಗುತ್ತದೆ ಎಂದು ಕನಸು ಕಂಡವರಲ್ಲ ಅದು ಬದಲಾವಣೆಗೆ ಪ್ರಖರ ಆಯುಧ ಎನ್ನುವುದರಲ್ಲಿ ಸಂಶಯವಿಲ್ಲ ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಕವಿ ಸಾಹಿತಿ ಯಾರು?  ಆಂಗ್ಲಭಾಷೆ ಗಿಂತಲೂ ಹೆಚ್ಚು ಕನ್ನಡದಲ್ಲಿ ಅನೇಕ ಕವಿಗಳು ನಮ್ಮನ್ನು ಕಾಡಿದ್ದಾರೆ ಬೇಂದ್ರೆ.  ಮತ್ತು ಕುವೆಂಪು.‌ ಸು. ರಂ .ಎಕ್ಕುಂಡಿ .ಸತೀಶ್ ಕುಲಕರ್ಣಿ . ದೇವನೂರ ಮಹಾದೇವ. ಕಾರ್ನಾಡ,  ಸಿದ್ಧಲಿಂಗಯ್ಯ. ಎಚ್ ,ಎಸ್, ಶಿವಪ್ರಕಾಶ್.‌ ಕೆ. ಷರೀಫಾ,  ಬಾನು ಮುಷ್ತಾಕ್ ಇವರೆಲ್ಲರೂ ನನ್ನ ಇಷ್ಟದ  ಕವಿಗಳು.‌ ಇತ್ತೀಚೆಗೆ ಓದಿದ ಕೃತಿಗಳು ಯಾವವು?  ಲಂಕೇಶರ ಅಕ್ಷರ ಹೊಸ ಕಾವ್ಯ.‌ ನೀಲು ಕವಿತೆಗಳು, ಚನ್ನಪ್ಪ ಅಂಗಡಿಯವರ ಸ್ತೋಮ ಕಥಾಸಂಕಲನ.  ಕಿರಸೂರ ಗಿರಿಯಪ್ಪ ಅವರ ಅಲೆ ನದಿ ,  ಎಸ್.‌ ಮಕಾಂದಾರ್ ಅವರ ಅಕ್ಕಡಿ ಸಾಲು ಇತ್ತೀಚೆಗೆ ನಾನು ಓದಿದ ಸಂಕಲನಗಳು.  ನಿಮಗೆ ಇಷ್ಟವಾದ ಕೆಲಸ ಯಾವುದು?  ನನಗೆ ಇಷ್ಟವಾದ ಕೆಲಸ ಮಕ್ಕಳ ಜೊತೆ ಆಟ ಆಡುವುದು ಪಾಠ ಮಾಡುವುದು.  ನಿಮಗೆ ಇಷ್ಟವಾದ ಸ್ಥಳ ಯಾವುದು? ಕಡಲತೀರ ,ದಟ್ಟ ಪ್ರಕೃತಿಯ ಮಡಿಲು, ಅಸೀಮ ಬಯಲು ಇಷ್ಟವಾದ ಸಿನಿಮಾ ಯಾವುದು ?  ನನಗೆ ಇಷ್ಟವಾದ ಸಿನಿಮಾ ಮಯೂರ ಹುಲಿಯ ಹಾಲಿನ ಮೇವು ಮೈ ಅಟೋಗ್ರಾಫ್ ಮುಂಗಾರು ಮಳೆ ನೀವು ಮರೆಯಲಾಗದ ಘಟನೆ ಯಾವುದು?  ಅವಳ ನೆನಪುಗಳು, ವಿಕೃತಗೊಂಡ ಸಮಾಜದ ಕಹಿ ಘಟನೆಗಳು, ಸದಾ ಕಾಡುವ ಸಂಕಟಗಳ ಸಂವೇದನೆಗಳು. *************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ದಿ ಲಾಸ್ಟ್ ಲೆಕ್ಚರ್ ದಿ ಲಾಸ್ಟ್ ಲೆಕ್ಚರ್ ( ಆತ್ಮ ಕಥನ ರೂಪದ ಉಪನ್ಯಾಸಗಳು)ಮೂಲ : ರ‍್ಯಾಂಡಿ ಪಾಶ್ ಕನ್ನಡಕ್ಕೆ : ಎಸ್.ಉಮೇಶ್ಪ್ರ : ಧಾತ್ರಿ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೧೯೩ ಮೂಲಕೃತಿಯ ಅದ್ಭುತ ಜನಪ್ರಿಯತೆಯಿಂದಾಗಿ ಕನ್ನಡಕ್ಕೂ ಬಂದು ಕನ್ನಡದಲ್ಲೂ ಮಾರಾಟ ಮತ್ತು ಜನಪ್ರಿಯತೆಗಳ ದೃಷ್ಟಿಯಿಂದ ಅಪಾರ ಯಶಸ್ಸು ಪಡೆದ ಕೃತಿಯಿದು. ಮೂಲ ಲೇಖಕ ರ‍್ಯಾಂಡಿ ಪಾಶ್ ಜಠರದ ಕ್ಯಾನ್ಸರಿನಿಂದ ಪೀಡಿತನಾಗಿ ಇನ್ನು ಕೆಲವೇ ತಿಂಗಳುಗಳಷ್ಟೇ ಬದುಕುವನೆಂದು ವೈದ್ಯಕೀಯ ವರದಿ ಬಂದಾಗ ಅಮೆರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದವರು ಆತನ ಅಂತಿಮ ಉಪನ್ಯಾಸಕ್ಕೆ ಒಂದು ಅವಕಾಶ ಮಾಡಿಕೊಡುತ್ತಾರೆ. ಆ ಸಂದರ್ಭದಲ್ಲಿ ರ‍್ಯಾಂಡಿ ಪಾಶ್ ಒಂದು ಗಂಟೆ ಕಾಲ ತನ್ನ ಬಾಲ್ಯದ ಕನಸುಗಳು, ಅನುಭವಗಳು, ಘಟನೆಗಳು, ತನ್ನ ತಂದೆ ತಾಯಿಗಳ ಉದಾತ್ತ ಗುಣಗಳು, ಅವರೊಂದಿಗಿನ ಕೌಟುಂಬಿಕ ಬದುಕಿನಲ್ಲಿ ತಾನು ಅನುಭವಿಸಿದ ಸಂತಸ, ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ತಾನು ಮಾಡಿದ ಕೆಲಸಗಳು, ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ, ಜೈ ಎಂಬ ಹೆಣ್ಣನ್ನು ತನ್ನ ೩೭ನೆಯ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಆಕೆಯೊಂದಿಗಿನ ಸಂತಸಭರಿತ ದಾಂಪತ್ಯ ಜೀವನ, ಮೂವರು ಎಳೆಯ ಮಕ್ಕಳಾದ ಡೈಲಾ, ಲೋಗನ್ ಮತ್ತು ಛೋಲೆಯೊಂದಿಗಿನ ಸುಂದರ ಸಾಂಸಾರಿಕ ಬದುಕು, ತನ್ನ ಮಕ್ಕಳಿಗೆ ಆದರ್ಶ ತಂದೆಯಾಗಲು ಆತ ಪಟ್ಟ ಶ್ರಮ, ಕ್ಯಾನ್ಸರ್ ಇದೆ ಎಂಬುದು ತಿಳಿದಾಗ ಉಂಟಾದ ಆಘಾತ, ತಳಮಳ ಮತ್ತು ತಲ್ಲಣ, ಪ್ರೀತಿಸುವ ಹೆಂಡತಿಯನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಬೇಕಲ್ಲ ಎಂಬ ನೋವು, ಆದರೂ ತಾನಿಲ್ಲದ ಕೊರತೆ ಮಕ್ಕಳನ್ನು ಕಾಡಬಾರದು ಎಂಬ ಕಾಳಜಿಯಿಂದ ಅವರೊಂದಿಗೆ ಖುಷಿಯಿಂದ ಆಡಿದ ಎಲ್ಲ ಕ್ಷಣಗಳನ್ನೂ ವೀಡಿಯೋದಲ್ಲಿ ಸೆರೆ ಹಿಡಿದದ್ದು-ಹೀಗೆ ಹಲವಾರು ವೈಯಕ್ತಿಕ ಸಂಗತಿಗಳನ್ನು ಕುರಿತು ತಮ್ಮ ಉಪನ್ಯಾಸದಲ್ಲಿ ವಿಸ್ತರಿಸುತ್ತಾರೆ. ಲೇಖಕರ ಆತ್ಮಕಥನದ ರೀತಿಯಲ್ಲಿರುವ ಈ ಎಲ್ಲ ಮಾತುಗಳು ಈ ಕೃತಿಯಲ್ಲಿ ದಾಖಲಿಸಲ್ಪಟ್ಟಿವೆ. ಆತನ ಒಂದೊಂದು ಮಾತುಗಳೂ ಅವುಗಳಲ್ಲಿ ಕಾಣುವ ತಾತ್ವಿಕ ಮೌಲ್ಯಗಳಿಂದ ಬೆರಗು ಹುಟ್ಟಿಸುತ್ತವೆ. ಸಾವನ್ನು ಗಟ್ಟಿ ಮನಸ್ಸಿನಿಂದ ಎದುರಿಸಿ ತಾನು ತೊರೆದು ಹೋಗುತ್ತಿರುವ ಕುಟುಂಬಕ್ಕೆ ತನ್ನ ಅಗಲುವಿಕೆಯಿಂದ ಯಾವ ತೊಂದರೆಯೂ ಆಗಬಾರದೆಂದು ಅವರೆಲ್ಲರನ್ನೂ ಮಾನಸಿಕವಾಗಿ ಸಿದ್ಧಪಡಿಸುವ ರ‍್ಯಾಂಡಿಪಾಶರವರ ಧೈರ್ಯ ಮತ್ತು ಆತ್ಮವಿಶ್ವಾಸಗಳು ಅಪ್ರತಿಮವಾಗಿವೆ. ಹಾಗೆಯೇ ಆತನ ಪರಿಸ್ಥಿತಿಯ ಚಿತ್ರಣವು ಮನಕದಡುತ್ತದೆ. ಸ್ವತಃ ಲೇಖಕರೇ ಸಾವನ್ನೆದುರಿಸುವ ಸಂದರ್ಭದಲ್ಲಿ ನೀಡಿದ ಅಂತಿಮ ಉಪನ್ಯಾಸದಲ್ಲಿ ಮಂಡಿಸಿದ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಸಾವು ಸನ್ನಿಹಿತವಾದ ವ್ಯಕ್ತಿಯ ದಿಟ್ಟ ಮನೋಭಾವವನ್ನು ಬಹಳ ಸುಂದರವಾಗಿ ಚಿತ್ರಿಸುತ್ತದೆ. ಎಸ್.ಉಮೇಶ್ ಅವರ ಅನುವಾದ ಸರಳವಾಗಿದ್ದು ನಯವಾಗಿ ಓದಿಸಿಕೊಂಡು ಹೋಗುತ್ತದೆ. ************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಬಾಗದ ಬದುಕು ನಾನು ಶಿವಮೊಗ್ಗೆಯಲ್ಲಿದ್ದ ದಿನಗಳಲ್ಲಿ ಹಲವು ತಲೆಮಾರಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಹಾಗೂ ಸಮಾಜವಾದಿಗಳು ಬೀದಿಯಲ್ಲಿ ಓಡಾಡಿಕೊಂಡಿದ್ದನ್ನು ಕಾಣುತ್ತಿದ್ದೆ. ಹೆಚ್ಚಿನವರು ಗಾಂಧಿ ಇಲ್ಲವೇ ಲೋಹಿಯಾರ ವ್ಯಕ್ತಿತ್ವ ಅಥವಾ ಚಿಂತನೆಯ ಭಾವಕ್ಕೆ ಸಿಕ್ಕು ಬದುಕಿನ ಹಾದಿ ರೂಪಿಸಿಕೊಂಡವರು. ಸಮಕಾಲೀನ ಚುನಾವಣಾ ರಾಜಕಾರಣದಲ್ಲಿ ಇವರ ಯಾರ ಹೆಸರೂ ಚಾಲ್ತಿಯಲ್ಲಿರುತ್ತಿರಲಿಲ್ಲ. ಹೀಗಾಗಿ ಮಾಧ್ಯಮಗಳೂ ಇವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವರು ಮಲೆನಾಡಿನ ಮಳೆಗಾಲದಲ್ಲಿ ಮೋಡಗಳ ಮರೆಯಿಂದ ತಟ್ಟನೆ ಕಾಣಿಸಿಕೊಂಡು ಬೆಳಗುವ ಸೂರ್ಯನಂತೆ ಸನ್ನಿವೇಶ ಬಂದಾಗ ಪ್ರತ್ಯಕ್ಷವಾಗುತ್ತಿದ್ದರು. ಇವರಲ್ಲಿ ಪೊನ್ನಮ್ಮಾಳ್ ಸಹ ಒಬ್ಬರು.ತಮಿಳು ಮನೆಮಾತಿನ ಪೊನ್ನಮ್ಮಾಳ್ ಬ್ರಿಟಿಶರ ವಿರುದ್ಧದ ಹೋರಾಟಗಳಲ್ಲಿ ಭಾಗವಹಿಸಿ ಸೆರೆಮನೆ ಕಂಡವರು; ಹೋರಾಟಗಾರರಿಗೆ ನೀಡಲಾಗುತ್ತಿದ್ದ ಪೆನ್ಶನ್ ತೆಗೆದುಕೊಳ್ಳಲು ನಿರಾಕರಿಸಿದವರು; ನಾಡಸೇವೆಗೆ ಸಂಸಾರ ಅಡ್ಡಿಯಾದೀತೆಂದು ಮದುವೆಯಾಗದೆ ಉಳಿದವರು; ಖಾದಿಬಿಟ್ಟು ಬೇರೆ ಉಟ್ಟವರಲ್ಲ; ಲೋಹಿಯಾ ಅನುಯಾಯಿಯಾಗಿದ್ದವರು; ಸಮಾಜವಾದಿ ಚಿಂತನೆಯ ಮೂಸೆಯಲ್ಲಿ ರೂಪುಗೊಂಡವರು; ಬಹುತೇಕ ಆದರ್ಶವಾದಿಗಳಂತೆ ಮುರಿದರೂ ಬಾಗಲಾರೆನೆಂದು ಬದುಕಿದವರು; ನಂಬಿದ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡವರಲ್ಲ. ಕೆಟ್ಟದ್ದು ಅನಿಸಿದಾಗ ಸಹಿಸಿದವರಲ್ಲ. ಗೌರವ ಹುಟ್ಟಿಸುವ ಇಂಥ ಸಮಾಜವಾದಿಗಳ ಹಠಮಾರಿತನ ಮತ್ತು ನೈತಿಕತೆ ಕೆಲವೊಮ್ಮೆ ದುರಂತಪ್ರಜ್ಞೆಯದು ಅನಿಸುತ್ತದೆ. ಉದಾಹರಣೆಗೆ, ಪೊನ್ನಮ್ಮಾಳರ ಸಮಕಾಲೀನರಾದ ಸದಾಶಿವರಾವ್. ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ ಮುಂತಾದವರ ಸಂಗಾತಿಯಾಗಿದ್ದ ಇವರು ತೀರ್ಥಹಳ್ಳಿ ಸೀಮೆಯವರು. ಐವತ್ತರ ದಶಕದ ಸಮಾಜವಾದಿ ಚಳುವಳಿಯಲ್ಲಿ ಒಡಮೂಡಿದವರು; ಕಾಗೋಡು ಸತ್ಯಾಗ್ರಹದ ಪ್ರಭಾವದಿಂದ ಉಳುವವರಿಗೇ ನೆಲವನ್ನು ಬಿಟ್ಟುಕೊಡಬೇಕು ಎಂಬ ಆದರ್ಶಕ್ಕೆ ಬಿದ್ದು, ಇದ್ದಬದ್ದ ಜಮೀನನೆಲ್ಲ ರೈತರಿಗೆ ಹಂಚಿದವರು. ತಮಗಾಗಿ ಏನನ್ನೂ ಉಳಿಸಿಕೊಳ್ಳದ ಇವರ ಮುಪ್ಪಿನ ದಿನಗಳಲ್ಲಿ ಕಷ್ಟದ ದಿನಗಳು ಕಾಣಿಸಿದವು. ಇದನ್ನವರು ಯಾರಲ್ಲೂ ಹೇಳಿಕೊಳ್ಳಲಿಲ್ಲ. ಯಾರಿಗೂ ಸುದ್ದಿಯಾಗದಂತೆ ಒಂದು ದಿನ ತೀರಿಕೊಂಡರು. ಶಿವಮೊಗ್ಗೆಯಲ್ಲಿದ್ದ ಇನ್ನೊಬ್ಬ ವಿಶಿಷ್ಟ ವ್ಯಕ್ತಿ ನಾಗಪ್ಪಶೆಟ್ಟರು. ಸಬರಮತಿ ಆಶ್ರಮದಲ್ಲಿ ಇದ್ದವರು. ಗಾಂಧೀಜಿಯವರಿಗೂ ಕಸ್ತೂರಬಾಯಿಗೂ ಯಾವುದೊ ವಿಷಯಕ್ಕೆ ಭಿನ್ನಮತ ಬಂದಾಗ, ಗಾಂಧಿಯವರ ವಿರುದ್ಧ ಓಟುಹಾಕಿ ದೋಷ ತೋರಿಸಿಕೊಟ್ಟವರು ಎಂದು ಅವರ ಬಗ್ಗೆ ಪ್ರತೀತಿಯಿತ್ತು. ಶೆಟ್ಟರು ಹಳೇಸೈಕಲೊಂದನ್ನು ಸವಾರಿ ಮಾಡಿಕೊಂಡು ಶಿವಮೊಗ್ಗ ಶಹರನೆಲ್ಲ ತಿರುಗಾಡುತ್ತಿದ್ದರು; ಎಚ್. ನರಸಿಂಹಯ್ಯನವರಂತೆ ಇವರೂ ಶಿಕ್ಷಣಸಂಸ್ಥೆ ಕಟ್ಟಲು ತಮ್ಮ ಜೀವನ ವ್ಯಯಿಸಿದರು. ವಿಚಿತ್ರವೆಂದರೆ, ಈ ಇಬ್ಬರೂ ಕಟ್ಟಿದ ಸಂಸ್ಥೆಗಳು ವಿಜ್ಞಾನ ಮತ್ತು ವಾಣಿಜ್ಯಶಾಸ್ತ್ರಕ್ಕೆ ಹೆಸರಾಗಿದ್ದವು. ಅಲ್ಲಿ ಬಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬರುತ್ತಿದ್ದುದು ಕಡಿಮೆ. ಇದನ್ನು ಅವರ ವೈಯಕ್ತಿಕ ಸರಳತೆಗಿದ್ದ ಸಾಮಾಜಿಕ ಪ್ರಜ್ಞೆಯ ಕೊರತೆ ಎನ್ನಬೇಕೊ, ತಮ್ಮ ಪ್ರಭಾವಶಾಲಿ ವ್ಯಕ್ತಿತ್ವವನ್ನು ಬೇರೆ ಹಿತಾಸಕ್ತಿಗಳು ಬಳಸಿಕೊಳ್ಳುವುದನ್ನು ಅರಿಯದ ಮುಗ್ಧತೆ ಎನ್ನಬೇಕೊ ತಿಳಿಯದು. ಈ ವಿಷಯದಲ್ಲಿ ಪೊನ್ನಮ್ಮಾಳ್ ಭೋಳೆಯಲ್ಲ. ಸಂಸ್ಥೆಗಳಿಗೆ ತಮ್ಮ ವ್ಯಕ್ತಿತ್ವ ಬಳಕೆಗೊಳ್ಳಲು ಬೆಂಕಿಯಂತಹ ಅವರು ಬಿಡಲಿಲ್ಲ. ಉದ್ದಕ್ಕೂ ಶಕ್ತಿರಾಜಕಾರಣಕ್ಕೆ ದೂರವಾಗಿದ್ದು ಜನಪರ ಚಳುವಳಿಗಳಲ್ಲೇ ಗುರುತಿಸಿಕೊಂಡರು. ಅವರ ಮಾತು ಹರಿತವಾದ ಚಾಕುವಿನಿಂದ ಚರ್ಮದ ಮೇಲೆ ಗೀರಿದಂತೆ ಕಟುವಾಗಿರುತ್ತಿತ್ತು. ರಾಜಕಾರಣಿಗಳು ಇವರ ಸಹವಾಸವೇ ಬೇಡವೆಂದು ದೂರ ಇರುತ್ತಿದ್ದರು. ಜೆ.ಎಚ್. ಪಟೇಲ್, ಬಂಗಾರಪ್ಪ ಮುಂತಾದವರನ್ನೆಲ್ಲ ಪೊನ್ನಮ್ಮಾಳ್, ಅವರು ಮುಖ್ಯಮಂತ್ರಿಗಳಾಗಿದ್ದಾರೆ ಎಂಬುದನ್ನೂ ಲೆಕ್ಕಕ್ಕಿಡದೆ ಏಕವಚನದಲ್ಲಿ ಮಾತಾಡುತ್ತಿದ್ದರು. ಪಟೇಲರನ್ನು ಕೂರಿಸಿಕೊಂಡು ಅವರ ಕುಡಿತ ಸ್ತ್ರೀಶೋಕಿಗಳನ್ನು ಕಟುವಾಗಿ ಟೀಕಿಸುತ್ತಿದ್ದರಂತೆ; ಅವರ ಪ್ರಕಾರ, ಕುಡಿಯದ, ವ್ಯಾಯಾಮ ಮಾಡಿ ದೇಹವನ್ನು ಶಿಸ್ತಾಗಿ ಇಟ್ಟುಕೊಂಡಿದ್ದ ಬಂಗಾರಪ್ಪ, ಗುಡ್ಬಾಯ್ ಆಗಿದ್ದರು. ಬಂಗಾರಪ್ಪನವರಾದರೂ ಪೊನ್ನಮ್ಮಾಳ್ ನಡೆದುಹೋಗುತ್ತಿದ್ದರೆ, ಕಾರು ನಿಲ್ಲಿಸಿ ರಸ್ತೆಬದಿಯಲ್ಲೇ ನಿಂತು ಮಾತಾಡುತ್ತಿದ್ದರು. ಮಾತು ಮುಗಿದ ಬಳಿಕ ಪೊನ್ನಮ್ಮಾಳ್ ತಮ್ಮ ನಡಿಗೆ ಮುಂದುವರೆಸುತ್ತಿದ್ದರು. ಅಧಿಕಾರಸ್ಥರ ಜತೆ ಹೀಗೆ ಅಂತರ ಕಾದುಕೊಂಡಿರುತ್ತಿದ್ದ ಪೊನ್ನಮ್ಮಾಳ್, ಸಾಮಾನ್ಯರ ಕಷ್ಟಗಳಿಗೆ ಸಂಬಂಧಪಟ್ಟ ಯಾವುದೇ ಚಳುವಳಿ-ಸತ್ಯಾಗ್ರಹ ಇದ್ದರೂ, ಇಡೀ ದಿನ ಬಂದು ಕೂರುತ್ತಿದ್ದರು. ಯೌವನದಲ್ಲಿ ಸುಂದರಿ ಆಗಿದ್ದಿರಬಹುದಾದ ಇವರು, ಹೊಸತಲೆಮಾರಿನ ಚಳುವಳಿಗಾರ ತರುಣ ತರುಣಿಯರನ್ನು ಸುತ್ತ ಕೂರಿಸಿಕೊಂಡು ಮಾತುಕತೆ ಮಾಡುತ್ತಿದ್ದರು- `ಟೈಟಾನಿಕ್’ ಚಿತ್ರದಲ್ಲಿ ಅಜ್ಜಿ, ಹಡಗು ಮುಳುಗುವಾಗ ಜೀವ ಉಳಿಸಿಕೊಳ್ಳಲು ಹೋರಾಡಿದ ಸಾಹಸಗಾಥೆ ಹಂಚಿಕೊಳ್ಳುವಂತೆ. ಆದರೆ ಟೈಟಾನಿಕ್ ಅಜ್ಜಿಯಷ್ಟು ಮುಕ್ತವಾಗಿ ಖಾಸಗಿ ಬದುಕನ್ನು ತೆರೆದು ಹೇಳುತ್ತಿರಲಿಲ್ಲ. ಹಳಗಾಲದ ಅನೇಕ ಸ್ವಾತಂತ್ರ್ಯ ಹೋರಾಟಗಾರರಂತೆ, ಗತಕಾಲದ ಆದರ್ಶಗಳಲ್ಲೇ ಮುಳುಗಿ ವರ್ತಮಾನವೆಲ್ಲ ಪತನವಾಗಿದೆ ಎಂದು ಸಿನಿಕವಾಗಿ ಗೊಣಗುವ ಪೈಕಿ ಆಗಿರಲಿಲ್ಲ ಪೊನ್ನಮ್ಮಾಳ್. ಸಮಕಾಲೀನ ಹೋರಾಟಗಳಲ್ಲಿ ತೊಡಗಿಕೊಂಡು ಅವಕ್ಕೆ ನೈತಿಕ ಬೆಂಬಲ ತುಂಬುತ್ತಿದ್ದರು. ನಾನೂ ಭಾಗವಹಿಸಿದ್ದ ಹಳೆಯದಾದ ಪತ್ರಿಕಾ ವರದಿಯೊಂದನ್ನು ಒಮ್ಮೆ ನೋಡುತ್ತಿದ್ದೆ. ತುಂಗಭದ್ರಾ ನದಿಯನ್ನು ಕುದುರೆಮುಖದ ಅದಿರುಗಾರಿಕೆಯಿಂದ ಉಳಿಸುವ ಚಳುವಳಿಯದು. ಶಿವಮೊಗ್ಗೆಯ ಗೋಪಿಸರ್ಕಲಿನಲ್ಲಿ ಹಾಕಿದ ಪೆಂಡಾಲಿನಲ್ಲಿ ಅನೇಕ ಲೇಖಕರು ಚಿಂತಕರು ಧರಣಿ ನಿರತರಾಗಿದ್ದಾರೆ. ಅವರ ನಡುವೆ ಪೊನ್ನಮ್ಮಾಳ್ ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರ ಕುಳಿತ ಭಂಗಿಯಲ್ಲಿ ಮುಂದಾಳುತನದ ಗತ್ತಿಗಿಂತ, ನೀವು ಮಾಡುತ್ತಿರುವ ಒಳ್ಳೆಯ ಕೆಲಸಗಳಲ್ಲಿ ನನ್ನನ್ನೂ ಒಳಗೊಳ್ಳಿ ಎಂಬ ಕೋರಿಕೆಯೂ ಇದ್ದಂತಿದೆ. ತಮ್ಮ ಚೈತನ್ಯ ಹೊಸ ತಲೆಮಾರಿನ ತರುಣ ತರುಣಿಯರಲ್ಲಿ ಮುಂದುವರೆಯುತ್ತಿದೆ ಎಂಬ ಸಮಾಧಾನವಿದೆ. ಅವರು ಆದರ್ಶ ತುಂಬಿಕೊಂಡ ಹುಡುಗ-ಹುಡುಗಿಯರ ಜತೆ ಸೇರಿ, ತಮ್ಮ ಮನಸ್ಸಿನ, ಸಿದ್ಧಾಂತದ, ಆದರ್ಶದ ಯೌವನ ಉಳಿಸಿಕೊಂಡಿದ್ದರು. ಹಿರಿತನ ತನ್ನನ್ನು ನವೀಕರಿಸಿಕೊಳ್ಳುವುದು ಅಥವಾ ಪರಂಪರೆ ರೂಪುಗೊಳ್ಳುವುದು ಹೀಗೇ ತಾನೇ? ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರ ಪಾಲುಗೊಳ್ಳುವಿಕೆಯು ತೀರ ಕಡಿಮೆಯಿರುವ, ಇದ್ದರೂ ಸಹಾಯಕರಾಗಿ ಉಳಿಯುುವ ಭಾರತೀಯ ಸಾಮಾಜಿಕ ಸನ್ನಿವೇಶದಲ್ಲಿ, ಪೊನಮ್ಮಾಳ್ ನಮ್ಮ ಕೊಡಗಿನ ಗೌರಮ್ಮನವರ ತರಹ, ತಮ್ಮ ವ್ಯಕ್ತಿತ್ವದ ಘನತೆಯನ್ನು ಸ್ವಯಂ ಪರಿಭಾವಿಸಿದ್ದವರು. ಸದ್ಯ ಕರ್ನಾಟಕ ರಾಜಕೀಯ ಪಕ್ಷಗಳಲ್ಲಿರುವ ಕೆಲವು ನಾಯಕಿಯರು, ಸೂಕ್ಷ್ಮತೆ ಕಳೆದುಕೊಂಡು ಕೂಗುಮಾರಿಗಳಾಗಿ ಪರಿವರ್ತನೆಗೊಂಡಿರುವುದನ್ನು ಕಾಣುವಾಗ, ಜನಪರ ಚಳುವಳಿಗಳಲ್ಲಿ ರೂಪುಗೊಂಡ ಕರ್ನಾಟಕದ ಕಮಲಾದೇವಿ ಚಟ್ಟೋಪಾಧ್ಯಾಯ, ಪೊನ್ನಮ್ಮಾಳ್ ಮುಂತಾದ ಹಳಬರ ಧೀಮಂತಿಕೆ ಗೌರವ ಹುಟ್ಟಿಸುತ್ತದೆ. ಬಾಳಿನುದ್ದಕ್ಕೂ ವ್ಯವಸ್ಥೆಯ ಎದುರಾಳಿಯಾಗಿಯೇ ಜೀವಿಸಿದ ಪೊನ್ನಮ್ಮಾಳ್ ಕಡೆತನಕ ಒರೆಯಿಂದ ಆಗತಾನೇ ಹೊರಸೆಳೆದ ಕತ್ತಿಯಂತೆ ತಮ್ಮ ಪ್ರಖರತೆ ಉಳಿಸಿಕೊಂಡಿದ್ದರು. ಕಾಗೋಡು ಸತ್ಯಾಗ್ರಹಕ್ಕೆಂದು ಶಿವಮೊಗ್ಗೆಗೆ ಲೋಹಿಯಾ ಬಂದಾಗ ತೆಗೆಯಲಾದ ಒಂದು ಫೋಟೊ ಇದೆ. ಅದರಲ್ಲಿ ಸೈನಿಕಳಂತೆ ಪೊನ್ನಮ್ಮಾಳ್ ಲೋಹಿಯಾರ ಜತೆ ನಡೆಯುತ್ತಿದ್ದಾರೆ. ಅವರ ದೇಹಭಾಷೆ ಯಾರಿಗೂ ಬಾಗದೆ ಬದುಕುವ ಅವರ ಗುಣದ ಪ್ರತೀಕದಂತಿದೆ. ತುಸು ಬಾಗಿರುವ ಲೋಹಿಯಾ ಹೊಸತಲೆಮಾರಿನ ಹೆಣ್ಣೊಬ್ಬಳಲ್ಲಿ ತಮ್ಮ ಚೈತನ್ಯ ಪ್ರವಹಿಸುತ್ತಿರುವುದನ್ನು ಪರಿಭಾವಿಸಿರುವ ಭಾವದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.ಪೊನ್ನಮ್ಮಾಳ್ ಹಾದಿಯಲ್ಲಿ ನಡೆದ ಹಲವಾರು ಮಹಿಳೆಯರನ್ನು ಕರ್ನಾಟಕ ಕಂಡಿತು. ************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಹುಣಿಸೆ ಮರದ ಕತೆ ಹುಣಿಸೆ ಮರದ ಕತೆತಮಿಳು ಮೂಲ : ಸುಂದರ ರಾಮಸ್ವಾಮಿಅನುವಾದ : ಕೆ.ನಲ್ಲತಂಬಿಪ್ರ : ಲಂಕೇಶ್ ಪ್ರಕಾಶನಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೫೦ಪುಟಗಳು : ೧೯೨   ಪರಿಸರ ಕಾಳಜಿಯನ್ನು ಹೊಂದಿದ ಒಂದು ವಿಶಿಷ್ಟ ಕಾದಂಬರಿಯಿದು. ಅದೊಂದು ಪುಟ್ಟ ಹಳ್ಳಿಯಲ್ಲಿ, ಮೂರು ರಸ್ತೆ ಕೂಡುವ ಸ್ಥಳದಲ್ಲಿ  ಆ ಹುಣಿಸೆ ಮರವಿತ್ತು.  ಆ ಜಾಗ ಜನರ ಓಡಾಟ-ಗಿಜಿ ಗಿಜಿಗಳಿಂದ ತುಂಬಿ ಲವಲವಿಕೆಯಿಂದ ಕೂಡಿತ್ತು. ತನ್ನಷ್ಟಕ್ಕೆ ಹುಟ್ಟಿಕೊಂಡ ಆ ಹುಣಿಸೆ  ಮರವು ಮಾನವನ ಲೆಕ್ಕವಿಲ್ಲದ ಆಟಗಳಿಗೆ ಮೂಕ ಸಾಕ್ಷಿಯಾಗಿ  ಮನುಷ್ಯನ ಸುಖ-ದುಖ, ಸ್ವಾರ್ಥ-ತ್ಯಾಗ, ಪ್ರೀತಿ-ದ್ವೇಷ-ಅಸೂಯೆಗಳನ್ನು ಮೌನವಾಗಿ ಗಮನಿಸುತ್ತಿತ್ತು. ಮನುಷ್ಯರಿಗಾಗಿ ಎಲೆ ಚಿಗುರಿಸಿ, ಹೂ ಬಿಟ್ಟು, ಕಾಯಿಗಳನ್ನು ಕೊಡುತ್ತಿತ್ತು. ಎತ್ತರೆತ್ತರಕ್ಕೆ ಬೆಳೆಯುತ್ತ ಹೋದ ಅದರ ಕೊಂಬೆಗಳು ಬಾನಿಗೂ ಬೇರುಗಳು ಮಣ್ಣಿನೊಳಗಣ ಆಳಕ್ಕೂ ಚಾಚಿಕೊಂಡವು.  ಆದರೆ, ದೇಶವನ್ನೂ ಹಣವನ್ನೂ ಸ್ತ್ರೀ ಯರನ್ನೂ  ಅಧಿಕಾರವನ್ನೂ ಹಿರಿಮೆಯನ್ನೂ ಅಂಕೆಯಲ್ಲಿರಿಸಿಕೊಂಡು ಆಟ ಆಡಿದ ಮನುಷ್ಯ ಅದನ್ನು ಪಗಡೆಯ ಕಾಯಿಯಾಗಿಸಿ ಉರುಳಿಸಿದ ಪರಿಣಾಮವಾಗಿ ಆ ವೃಕ್ಷ ನಾಶವಾಯಿತು. ದಾಮೋದರ ಆಸಾನ್ ಎಂಬ ತತ್ವಜ್ಞಾನಿಯು ವೇದಾಂತಿಯಂತೆ ಮಾತನಾಡುತ್ತ ಆ ಹುಣಿಸೆ ಮರದ ಕಥೆಯನ್ನು ಕಾದಂಬರಿಯ ನಿರೂಪಕನಿಗೆ ಹೇಳುತ್ತ ಹೋಗುತ್ತಾನೆ.  ಹುಣಿಸೆ ಮರ ಹಿಂದೆ ಇದ್ದದ್ದು ಒಂದು ದೊಡ್ಡ ಕೊಳದ ನಡುವೆ. ಜನರು ಅದನ್ನು ಪುಳಿಕೊಳ ಅನ್ನುತ್ತಿದ್ದರು. ಅದರ ಸುತ್ತ ಹುಟ್ಟಿಕೊಂಡಿದ್ದ ಕಥೆಯನ್ನು ದಾಮೋದರ ಆಸಾನ್ ನಿರೂಪಕನಿಗೆ ಹೇಳುತ್ತಾನೆ. ಸೆಲ್ಲತ್ತಾಯಿ ಎಂಬವಳು ಆ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಯಾರೋ ಒಬ್ಬ ಅತಿಮಾನುಷ ಶಕ್ತಿಯನ್ನು ಹೊಂದಿದ್ದ ವ್ಯಕ್ತಿ ಅವಳನ್ನು ಎತ್ತಿಕೊಂಡು ಕಾಡೊಳಗೆ ಒಯ್ದಿದ್ದ.  ಅವನನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.  ಆ ವ್ಯಕ್ತಿಯಿಂದ ಸೆಲ್ಲತ್ತಾಯಿ ವಶೀಕರಣಕ್ಕೊಳಗಾಗಿ ಆತನ ಧ್ಯಾನದಲ್ಲೇ ಕಳೆಯುತ್ತ ಕೊನೆಗೆ ಅದೇ ಹುಣಿಸೆಮರಕ್ಕೆ ನೇತಾಡಿ ಸತ್ತು ಹೋದಳು. ಆಸಾನ್ ಹೇಳಿದ ಇನ್ನೊಂದು ಕಥೆ ಒಬ್ಬ ರಾಜನದ್ದು. ರಾಜ ಆ ಊರನ್ನು ಸಂದರ್ಶಿಸುತ್ತಾನೆಂದು ಇಡೀ ಊರನ್ನು ಅಲಂಕರಿಸಿ ಸಿದ್ಧ ಪಡಿಸಿದ ಜನರು ಪುಳಿಕ್ಕೊಳವನ್ನು ಮಾತ್ರ ಸ್ವಚ್ಛಗೊಳಿಸದೆ ಹಾಗೆಯೇ ಬಿಟ್ಟರು.  ಪರಿಣಾಮವಾಗಿ ಅದರೊಳಗಿಂದ ಬಂದ ದುರ್ವಾಸನೆಯು ರಾಜನನ್ನು ಅಸಮಾಧಾನಗೊಳಿಸುತ್ತದೆ. ಅದನ್ನು ಗಮನಿಸಿದ ಅಧಿಕಾರಿಗಳು ಭಯಗೊಂಡು ರಾಜನ ಕ್ಷಮೆ ಬೇಡುತ್ತಾರೆ.  ಆದರೆ ರಾಜನು ಅವರನ್ನು ಕ್ಷಮಿಸದೆ ಕೆಲಸದಿಂದ ವಜಾ ಮಾಡುತ್ತಾನೆ. ಆದರೆ ರಾಜನು ತನ್ನ ಅರಮನೆಗೆ ಮರಳುವ ಯಾತ್ರೆಯ ಸಂದರ್ಭದಲ್ಲಿ ಊರವರೆಲ್ಲ ಒಟ್ಟಾಗಿ ಆ ಪುಳಿಕ್ಕೊಳದ ಪಕ್ಕವಿದ್ದ ಎತ್ತರದ ಪರೈಯನ್ ಗುಡ್ಡವನ್ನು ಕಡಿದು ನೆಲಸಮ ಮಾಡಿ ಆ ಮಣ್ಣನ್ನು ಪುಳಿಕ್ಕೊಳಕ್ಕೆ ತುಂಬಿಸಿ, ಕೊಳವನ್ನು ಮುಚ್ಚಿ, ಆ ಜಾಗದಲ್ಲಿ, ಉದ್ಯಾನವನ್ನು ನಿರ್ಮಿಸಿ ಅಲಂಕರಿಸಿ ಸುಂದರವಾಗಿಸುತ್ತಾರೆ. ಮುಂದೆ ಊರು ಒಂದು ಪಟ್ಟಣವಾಗಿ ಹುಣಸೆ ಮರವಿದ್ದ ಜಾಗದಲ್ಲಿ ಮೂರು ರಸ್ತೆಗಳು ಕೂಡಿ, ಅದಕ್ಕೆ ಹುಣಸೆಮರ ಜಂಕ್ಷನ್ ಎಂದು ಹೆಸರಾಗುತ್ತದೆ. ಮುಂದೊಂದು ದಿನ ಆ ಹುಣಿಸೆ ಬುಡಕ್ಕೂ ಕೊಡಲಿ ಹಾಕಿ ’ಒಬ್ಬ ಸುಮಂಗಲಿಯ ತಿಲಕವನ್ನು ಅಳಿಸಿದಂತೆ’ ಆ ಜಾಗವನ್ನು ಬೋಳಾಗಿಸುತ್ತಾರೆ. ಸ್ವಾರ್ಥಿಯಾದ ಮನುಷ್ಯನು ತನ್ನ ಸ್ವಂತ ಲಾಭಕ್ಕೋಸ್ಕರ ಆಧುನಿಕತೆ-ಅಭಿವೃದ್ಧಿ- ಪ್ರಗತಿಗಳ ಹೆಸರಿನಲ್ಲಿ ಪರಿಸರ ನಾಶ ಮಾಡುವ ವೈರುದ್ಧ್ಯದತ್ತ ಈ ಕಾದಂಬರಿಯು ಬೊಟ್ಟು ಮಾಡಿ ತೋರಿಸುತ್ತದೆ.  ಹುಣಿಸೆ ಮರದ ರೂಪಕದ ಮೂಲಕ ಆಡಳಿತಾರೂಢ ಅಧಿಕಾರಿಗಳ ರಾಜಕೀಯದ ವ್ಯಂಗ್ಯ ಚಿತ್ರಣವನ್ನು ಕಾದಂಬರಿ ನೀಡುತ್ತದೆ.  ಒಂದು ಒಳ್ಳೆಯ ಕಾದಂಬರಿಯನ್ನು ಕನ್ನಡಕ್ಕೆ ನೀಡಿದ ಹಿರಿಮೆ ನಲ್ಲತಂಬಿಯವರದ್ದಾಗಿದೆ. *********************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಅಸಾಮಾನ್ಯದ ವ್ಯಕ್ತಿ ಚಿತ್ರ ಇವನು… ಬಾಲ್ಯದಲ್ಲಿ ಅಜ್ಜನ ಊರು ಮತ್ತು ಅಜ್ಜನ ಮನೆ ಎನ್ನುವ ಆ ಜಾಗ ಎಷ್ಟೊಂದು ಆಸ್ಥೆಯ ಆಕರ್ಷಣೆಯ  ಜಾಗವಾಗಿತ್ತು… ಅದೆಷ್ಟು ಖುಷಿಯಿಂದ ಅಜ್ಜನ ಮನೆಗೆ ಬರುತ್ತಿದ್ದೆವು… ಅಜ್ಜನ ಮನೆಯ ಮಾಳಿಗೆ, ಪಡಸಾಲೆ, ನೆಲಾಗಾಣೆ, ಅಟ್ಟ, ಗಣಿಗೆ, ಬಾದಾಳ, ಸಗಣಿ ನೆಲ, ಮಣ ಗಾತ್ರದ ಒಂಟಿ ತಲೆ ಬಾಗಿಲು, ಪಡಸಾಲೆಯ ನಾಲ್ಕು ಕಂಬಗಳು, ಅಡುಗೆ ಮನೆಯ ಮಜ್ಜಿಗೆ ಕಡೆಯುವ ಕಂಬ,  ದನಾಕ್ಕೆ, ತಿಪ್ಪೆ, ಬಾರುಕೋಲು, ಹಗೇವಿನ, ಸಗಣಿ, ಗಂಜಲ…. ಇನ್ನೂ ಅಸಂಖ್ಯ ಯಾವುದನ್ನೂ ಮರೆಯಲು ಸಾಧ್ಯವಾಗದೆ ಇನ್ನು ಮರೆತು ಹೋಗಿಬಿಟ್ಟರೆ?! ಎಂದು ಮನಸ್ಸು ಅತ್ತಿಂದಿತ್ತ ತೊನೆಯುತ್ತಿದ್ದಾಗ ಮತ್ತೆ ಮತ್ತೆ ಅಜ್ಜನೂರನ್ನು ಕಣ್ತುಂಬಿಕೊಳ್ಳಲು ಹೊರಟದ್ದಿದೆ. ಅಜ್ಜನ ಮನೆಯಲ್ಲಿ ನಾನು ಹುಟ್ಟಿದಾಗ ಮನೆಯಲ್ಲಿ ಮೂರು ಮೂರು ಬಾಣಂತನಗಳಂತೆ. ನನ್ನ ಅತ್ತೆಯ ಮಗ, ದೊಡ್ಡಪ್ಪನ ಮಗ ಮತ್ತು ನಾನು ಒಟ್ಟಿಗೆ ಒಂದೇ ಮನೆಯಲ್ಲಿ ಒಂದೇ ತಿಂಗಳಲ್ಲಿ ಹುಟ್ಟಿದ್ದೆವಂತೆ. ಪಡಸಾಲೆಯ ನಾಲ್ಕು ಕಂಬಗಳನ್ನು ಬಳಸಿ ಮೂರು ಜೋಲಿ ಕಟ್ಟಿದ್ದರಂತೆ. ಪರದೆಗಳನ್ನು ಇಳಿ ಬಿಟ್ಟು ಮೂರು ಬಾಣಂತಿ ಕೋಣೆಗಳನ್ನು ನಿರ್ಮಿಸಿದ್ದರಂತೆ. ಅತ್ತೆಯ ಮಗ ಮತ್ತು ದೊಡ್ಡಪ್ಪನ ಮಗ ಬೆಳ್ಳ ಬೆಳ್ಳಗೆ ಗುಂಡು ಗುಂಡಗೆ ಮುದ್ದು ಮುದ್ದಾಗಿದ್ದರಂತೆ. ಆದರೆ ನಾನು ಕಪ್ಪಗೆ,ತೆಳ್ಳಗೆ ಇಷ್ಟೇ ಇಷ್ಟು ಇದ್ದೆನಂತೆ. ಮನೆಗೆ ಯಾರೇ ಬರಲಿ ಅವರಿಬ್ಬರನ್ನೇ ಹೆಚ್ಚು ಮುದ್ದು ಮಾಡುತ್ತಿದ್ದರಂತೆ. ನನ್ನನ್ನು ಯಾರೂ ಎತ್ತಿಕೊಳ್ಳುತ್ತಿರಲಿಲ್ಲವಂತೆ. ನಾನು ನನ್ನಮ್ಮನಿಗೆ ಮೊದಲ ಮಗು. ಮೇಲಾಗಿ ಅಮ್ಮ ಹದನೈದಕ್ಕೆ ಹಸೆ ಏರಿದವರು, ಹದಿನೇಳಕ್ಕೆ ನನ್ನನ್ನು ಹೆತ್ತವರು. ಅವರಿಗೆ ಅದೇನೇನು ಕನಸುಗಳಿತ್ತೋ… ನನ್ನಿಂದಾಗಿ ಅದೆಷ್ಟು ನಿರಾಸೆಯಾಗಿತ್ತೋ ಅವರಿಗೆ… ಯಾರಾದರೂ ಮಗುವನ್ನು ಜರಿದರೆ ಸಾಕು ನನ್ನ ಮಗು ಹೀಗಿದೆಯಲ್ಲ ಎಂದು ಅಳುತ್ತಿದ್ದರಂತೆ. ಈಗಲೂ ಒಮ್ಮೊಮ್ಮೆ ನನಗೆ ಆ ಮನೆಯ ಜಂತೆಗಳು ಬಿಕ್ಕಳಿಸಿದಂತೆ ತೋರುತ್ತದೆ. ನಾನು ನಾಲ್ಕೂವರೆ ವರ್ಷದವಳಿದ್ದಾಗ ನನ್ನ ತಮ್ಮ ಹುಟ್ಟಿದ. ಅಜ್ಜನ ಮನೆಯಲ್ಲಿಯೇ ಅಮ್ಮನ ಹೆರಿಗೆಯಾದದ್ದು. ಆ ದಿನದ ಅಮ್ಮನ ನೋವು, ರಕ್ತಸ್ರಾವ, ನೆಲದ ಮೇಲೆ ಚೆಲ್ಲಿದ್ದ ರಕ್ತ , ತಮ್ಮ ಹುಟ್ಟಿದ ಸಂಭ್ರಮ ಎಲ್ಲವೂ ಇನ್ನೂ ನೆನಪಿದೆ ನನಗೆ. ಆಗ ಇಡೀ ಊರಿಗೇ ತತ್ತಕ್ಷಣದ ಸೂಲಗಿತ್ತಿ, ದಾದಿ, ಹೆರಿಗೆವಮಾಡಿಸುವ ವೈದ್ಯೆ ಎಂದರೆ ಅದು ಕುಂಬಾರಜ್ಜಿ ಮಾತ್ರ. ಅವಳ ಹಸ್ತಗುಣದ ಮೇಲೆ ಇಡೀ ಊರಿಗೇ ನಂಬಿಕೆ ಇತ್ತು. ಮೇಲಾಗಿ ಯಾವ ದಿಕ್ಕಿನಿಂದ ಹೊರಟರು ಮುಖ್ಯ ರಸ್ತೆ ಸೇರಿಕೊಳ್ಳಲು ಎರೆಡು ಮೂರು ಕಿಲೋಮೀಟರ್ ನಡೆಯಬೇಕಿದ್ದ ಆ ಕುಗ್ರಾಮದ ಜನರಿಗೆ ಹೀಗೆ ಆಕೆಯನ್ನು ಅವಲಂಬಿಸದೆ ವಿಧಿಯೂ ಇರಲಿಲ್ಲ. ಅಂದೂ ಸಹ ಕುಂಬಾರಜ್ಜಿ ಬಂದು ಅಮ್ಮನ ನೋವಿನಲ್ಲಿ ಭಾಗಿಯಾಗಿದ್ದಳು. ಪಡಸಾಲೆಗೆ ಪಡಾಸಾಲೆಯೇ ನೋವಿನಿಂದ ಅನುರಣಿಸುತ್ತಿತ್ತು. ರಕ್ತಸ್ರಾವದ ನಡುವೆಯೇ ಅಮ್ಮನ ಉಪಚಾರ ಮಾಡುತ್ತಾ ಸಮಾಧಾನಿಸುತ್ತಾ ಮಗು ಹೊರಬರುವ ದಾರಿಯನ್ನು ಸಲೀಸುಗೊಳಿಸಲು ಕುಂಬಾರಜ್ಜಿ ತೊಡಗಿದ್ದಳು. ಆದರೆ ಯಾರ ನೋವನ್ನು ಯಾರೂ ಕಡ ಪಡೆಯಲು ಸಾಧ್ಯವಿಲ್ಲವಲ್ಲ. ಇದೆಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದ ನನಗೆ ಅಮ್ಮನ ಅಳುವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮತ್ತೆ ಸರಹೊತ್ತಿನ ನಿದ್ದೆ ತಡೆಯಲಾಗದೆ ಮಲಗಿಬಿಟ್ಟಿದ್ದೆ. ಅಂತೂ ಇಂತೂ ರಾತ್ರಿ ಪೂರಾ ತ್ರಾಸು ಕೊಟ್ಟು ಬೆಳಗಿನ ಏಳರ ಹೊತ್ತಿಗೆ ಮಗು ಭೂಮಿಗೆ ಬಂದಿತ್ತು. ಆ ಮುದ್ದು ಮಗು ನನ್ನ ತಮ್ಮನಾಗಿದ್ದ. ಒಮ್ಮೆ ದೊಡ್ಡಪ್ಪನ ಮಗನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪ ದೊಡ್ಡಮ್ಮನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದನೆಂಬ ನೆನಪು. ಎಲ್ಲ ಅಸ್ಪಷ್ಟ ನೆನಪುಗಳು. ಈಗ ಕೇಳಿದರೆ ನಿಜವೋ ಸುಳ್ಳೋ ಎನ್ನುವ ಗೊಂದಲವೇ ಹೆಚ್ಚು ಕಾಡುತ್ತದೆಯೇನೋ… ಮತ್ತು ನಿಜವೆಂದು ಹೇಳಲಾರೆನೇನೋ… ಅಜ್ಜನ ಮನೆ ಅರಮನೆಯಂತದ್ದಲ್ಲದಿದ್ದರೂ ತೀರಾ ಚಿಕ್ಕದ್ದೇನೂ ಆಗಿರಲಿಲ್ಲ. ತಾನು ಮದುವೆಯಾಗಿ ಬೇರೆ ಸಂಸಾರವಂತ ಹೂಡಿಕೊಂಡು ಬಂದಾಗ ಅಜ್ಜಯ್ಯನಲ್ಲಿ ಸ್ವಂತ ಮನೆಯಾಗಲೀ ಎತ್ತಾಗಲೀ ಬಿತ್ತಿ ಬೆಳೆಯುವ ಅಂಗೈ ಅಗಲ ಭೂಮಿಯಾಗಲೀ ಇರಲಿಲ್ಲವಂತೆ. ಆದರೆ ಕಷ್ಟಧಾರಿ ಅಜ್ಜಯ್ಯ ತನ್ನ ಸ್ವಂತ ಸಾಮರ್ಥ್ಯದಿಂದ ಮನೆ, ದನ, ಕರ, ಮೂವತ್ತೆರೆಡು ಎಕರೆ ಹೊಲ ಅಂತ ಸಂಪಾದಿಸಿಕೊಂಡಿದ್ದ ಮತ್ತು ಅನುವು ಆಪತ್ತಿಗಿರಲೆಂದು ಒಂದಷ್ಟು ಹಣವನ್ನೂ ಕೂಡಿಟ್ಟುಕೊಂಡಿದ್ದ. ಅದಕ್ಕೆ ಮೊಮ್ಮೊಕ್ಕಳ ಮದುವೆಗೆ ಎನ್ನುವ ಹೆಸರಿಟ್ಟು ಹೋಗಿದ್ದ. ಪೂರ್ವದಿಕ್ಕಿನ ಅಜ್ಜಯ್ಯನ ಆ ಮನೆಯೂ ಅಜ್ಜಯ್ಯನಂತೆಯೇ ಬೆಳಗ್ಗೆ ಐದರ ನಂತರ ಯಾರನ್ನೂ ಮಲಗಲು ಬಿಡುತ್ತಿರಲಿಲ್ಲ. ಬೆಳ್ಳಂಬೆಳಗಿನ ಎಲ್ಲಾ ಪ್ರಖರ ಪ್ರಭೆಯೂ ಮನೆ ಹೊಕ್ಕುತ್ತಿತ್ತು. ಅಜ್ಜನಿಗಂತೂ ನಾಲ್ಕರ ನಂತರ ಮಲಗಿ ಅಭ್ಯಾಸವೇ ಇರಲಿಲ್ಲ. ಮತ್ತೆ ಮನೆ ಮಂದಿಯೂ ಸಹ ಐದರ ನಂತರ ಮಲಗುವಂತಿರಲಿಲ್ಲ. ರಜೆಗೆ ಹೋದಾಗ ಹೊತ್ತು ಆರಾದರೂ ಕುಂಬಕರ್ಣರಂತೆ ಮಲಗಿರುತ್ತಿದ್ದ ನಮ್ಮನ್ನು ಬೈದು ಎಬ್ಬಿಸುತ್ತಿದ್ದ ಅಜ್ಜನ ಆಜ್ಞೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಊರು ತುಂಬ ಇದ್ದ ಚಿಕ್ಕಪ್ಪ ದೊಡ್ಡಪ್ಪಂದಿರ ಮನೆಗಳನ್ನು ಹುಡುಕಿ ಹೋಗುತ್ತಿದ್ದದ್ದು ಇನ್ನು ಚೆನ್ನಾಗಿ ನೆನಪಿದೆ. ಆಗಲೂ ಕಳ್ಳಬೀಳುತ್ತಿದ್ದೇವೆಂದು ಅಜ್ಜ ಬೈಯ್ಯುತ್ತಿದ್ದ ಅದು ಬೇರೆ ಮಾತು. ಚಿಕ್ಕವಳಿದ್ದಾಗ  ನನಗೆ ಎಷ್ಟೋ ಬಾರಿ ಅಜ್ಜನ ಮನೆಯ ಪಡಸಾಲೆಯ ಕಂಬಗಳನ್ನು ನೋಡುತ್ತಾ ಇದರ ಮೇಲಿರುವ ಬೆವರಿನಂಟು, ಎಣ್ಣೆಯ ಕಮಟು, ಎಂಥದೋ ಜಿಡ್ಡು ಯಾರ್ಯಾರದಿರಬಹುದು… ವಾಸನೆಯಿಂದೇನಾದರೂ ಅವರ ಗುರುತು ಹತ್ತುತ್ತದಾ? ಯಾರ ಸ್ಪರ್ಷದ ವಾಸನೆ ಇಲ್ಲಿದೆ…. ಎಂದೆಲ್ಲ ಅನಿಸಿ ಹೊಟ್ಟೆ ಚುಳ್ ಎನ್ನುತ್ತಿತ್ತು. ನನ್ನಜ್ಜ ಅವುಗಳಲ್ಲೆ ಒಂದು ಕಂಬಕ್ಕೆ ತನ್ನ ಜಂಪರ್ ನೇತು ಹಾಕುತ್ತಿದ್ದರು. ಅದೇ ಕಂಬದ ಮೇಲ್ಭಾಗದಲ್ಲಿ ರೇಡಿಯೋ ಪೆಟ್ಟಿಗೆಯೊಂದನ್ನು ಇಡಲಾಗಿತ್ತು. ಬೆಳ್ಳಂ ಬೆಳಗ್ಗೆ ಅದು ಹೊರಡಿಸುತ್ತಿದ್ದ “ಟ್ಯೂ ಟ್ಯುಡುಡುಡೂ.. ಟ್ಯುಡುಡುಡೂ… ಟ್ಯುಡೂ…” ಎಂಬ ನಾದವೇ ನಮಗೆಲ್ಲ ಬೆಳಗಿನ ಸುಪ್ರಭಾತ. ಅಡುಗೆ ಮನೆಯ ಪುಟ್ಟ ಕಂಬಕ್ಕೆ ಹಗ್ಗ ಕಟ್ಟಿ ಅಜ್ಜಿ ಮಜ್ಜಿಗೆ ಕಡೆಯುತ್ತಿದ್ದರು. ಹೊರಗಿನ ಹಾಲಿನಲ್ಲಿದ್ದ ಕತ್ರಿ ಗೂಟ ಎನ್ನುವ ಕಂಬದಲ್ಲಿ ಜಾನುವಾರುಗಳಿಗಾಗಿ ಜೋಳದ ಸೊಪ್ಪೆ ಕತ್ತರಿಸಲಾಗುತ್ತಿತ್ತು. ಪಡಸಾಲೆಯ ಕಂಬಗಳನ್ನು ಬಳಸಿ ನಾವೆಲ್ಲ ಮನೆ ಮಕ್ಕಳು ಉಪ್ಪಿನಾಟ ಆಡುತ್ತಿದ್ದೆವು. ಅಜ್ಜನ ಮನೆಯ ಕಂಬಗಳ ಮೇಲ್ಭಾಗದಲ್ಲಿ ನವಿಲಿನ ಚಿತ್ರಗಳಿದ್ದವು. ಆದರೆ ಅಜ್ಜಯ್ಯ ಮನೆಯೊಳಗೆ ಉಪ್ಪಿನಾಟ ಆಡಲು ಬಿಡುತ್ತಿರಲಿಲ್ಲ. ಮನೆಯೊಳಗೆ ಉಪ್ಪಿನಾಟ ಆಡಿದರೆ ಸಾಲ ಹೆಚ್ಚಾಗುತ್ತದೆ ಎನ್ನುತ್ತಿದ್ದ. ಹಾಗಾಗಿ ಮನೆಯ ಪಕ್ಕದಲ್ಲಿ ಮನೆಗೆ ಆತುಕೊಂಡಂತೆ ಇದ್ದ ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಉಪ್ಪಿನಾಟ ಆಡುತ್ತಿದ್ದೆವು. ಉಪ್ಪಿನಾಟ ಎಂದರೆ ಆಟವಾಡಲು ಎಷ್ಟು ಜನ ಆಟಗಾರರಿತ್ತೇವೋ ಅಷ್ಟು ಜನ ಒಂದೊಂದು ಕಂಬ ಹಿಡಿದಿಟ್ಟುಕೊಳ್ಳಬೇಕು. ಒಬ್ಬರು “ಉಪ್ಪಮ್ಮೊ ಉಪ್ಪು…..” ಎಂದು ರಾಗವಾಗಿ ಹಾಡುತ್ತಾ ಉಪ್ಪು ಮಾರುತ್ತಾ ಬರಬೇಕು. ರಾಗವಾಗಿ ಹಾಡಬೇಕೆನ್ನುವ ನಿಯಮವೇನೂ ಇಲ್ಲ. ಆದರೆ ಆಡುತ್ತಿದ್ದವರೆಲ್ಲರೂ ಹುಡುಗಿಯರೇ ಹೆಚ್ಚಾಗಿರುತ್ತಿದ್ದರಿಂದ ಅದು ಹಾಡಿನ ಒನಪು ವಯ್ಯಾರವನ್ನು ಪಡೆದುಕೊಳ್ಳುತ್ತಿತ್ತಿರಬೇಕು. ಉಪ್ಪಿನವಳು ಮುಂದೆ ಹೋದ ತಕ್ಷಣ ಕಂಬ ಹಿಡಿದುಕೊಂಡಿರುತ್ತಿದ್ದ ಆಟಗಾರ್ತಿಯರು ಉಪ್ಪಿನವಳ ಹಿಂದೆ ಅದಲು ಬದಲಾಗಬೇಕು. ಹೀಗೆ ಅದಲು ಬದಲಾಗುವಾಗ ಅಚಾನಕ್ ಉಪ್ಪಿನವಳು ಕಂಬವನ್ನು ಆಕ್ರಮಿಸಿಕೊಂಡುಬಿಟ್ಟರೆ ಕಂಬವನ್ನು ಕಳೆದುಕೊಂಡವಳು ಔಟ್ ಎಂದು ಅರ್ಥ. ಈಗ ಅವಳು ಉಪ್ಪು ಮಾರುತ್ತಾ ಹೊರಡಬೇಕು. ಹೀಗೆ ಆಟ ಮುಂದುವರಿಯುತ್ತಿತ್ತು. ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಸಮಯದ ಪರಿವೆಯಿಲ್ಲದೇ ಉಪ್ಪಾಟ ಆಡಿದ್ದಿದೆ. ಆದರೀಗ ಆ ಮರದ ಕಂಬಗಳು ಮತ್ತು ಮಣ್ಣಿನಿಂದ ನಿರ್ಮಿಸಿದ್ದ ಗುಡಿಯನ್ನು ಕೆಡವಿ ಹೊಸ ಕಾಂಕ್ರೀಟ್ ಕಟ್ಟಡವನ್ನು ಕಟ್ಟಲಾಗಿದೆ. ಕಂಬಗಳೆಲ್ಲ ಎಲ್ಲೋ ಮಾಯವಾಗಿವೆ. ಅಸಲಿಗೆ ಅದೊಂದು ಗುಡಿ ಅಂತಲೇ ಅನಿಸುತ್ತಿಲ್ಲ. ಹಿಂದೆಲ್ಲಾ ಗುಡಿಯಲ್ಲಿ ಸಣ್ಣ ಗೌರಿ ಮತ್ತು ದೊಡ್ಡ ಗೌರಿ ಹಬ್ಬಕ್ಕೆ ಗೌರಿ ಮಣ್ಣನ್ನು ತಂದು ಹಾಕಲಾಗುತ್ತಿತ್ತು. ಗುಡಿಯ ಪಕ್ಕದಲ್ಲಿದ್ದ ಬುಡ್ಡೆ ಕಲ್ಲೂ ಸಹ ಗೌರಿ ಮಣ್ಣಿನೊಟ್ಟಿಗೆ ಕಾಡು ಹೂಗಳ ಪೂಜೆ ಪಡೆಯುತ್ತಿದ್ದ. ಆದರೀಗ ಗುಡಿಯೇ ಅನ್ನಿಸದ ನೆನಪುಗಳ ಸಮಾಧಿ ದಿಬ್ಬದ ಮೇಲೆ ಗೌರಿಯ ಗದ್ದುಗೆಯನ್ನು ಸಿದ್ಧಮಾಡಿ ಕೂರಿಸುತ್ತಾರೆ ಹೇಗೆ… ಅವಳನ್ನು ದೇವತೆ ಎಂದು ಕಲ್ಪಿಸಿಕೊಳ್ಳುತ್ತಾರೆ ಹೇಗೆ… ಎಂದು ಕಳವಳವಾಗುತ್ತದೆ. ಹಿಂದೆ ಆಚರಿಸಿದ್ದ ಗೌರಿ ಹಬ್ಬಗಳು, ದೀಪ ಹಿಡಿದು ಓಡಾಡಿದ್ದ ಹೆಜ್ಜೆ ಗುರುತುಗಳು, ಜೋಕಾಲಿ ಕಟ್ಟಿ ಜೀಕಿದ ಎಲ್ಲ ನೆನಪುಗಳೂ ಸುಮ್ಮನೇ ಕಾಡುತ್ತವೆ. ಒಂಥರಾ ಸಂಕಟ…. ಅಜ್ಜಯ್ಯ ಒಂಥರಾ ಶಿಸ್ತಿನ ಸಿಪಾಯಿ.  ಬಿಳಿ ಪಂಚೆಯ ಕಚ್ಚೆ ಹಾಕಿ, ಮೇಲೊಂದು ತಾನೇ ಹೇಳಿ ಹೊಲೆಸಿಕೊಂಡಿರುತಿದ್ದ ದೊಡ್ಡ ಬೊಕ್ಕುಣದ ಜಂಪರ್ ತೊಟ್ಟು ಪೂರ್ಣ ಕತ್ತಲು ಕಳೆದು ಬೆಳ್ಳಗಾಗುವುದರೊಳಗೆ ತನ್ನ ಜೋಡೆತ್ತುಗಳನ್ನು ಬಿಟ್ಟುಕೊಂಡು ಕಣದ ಕಡೆ ಹೊರಟು ಬಿಡುತ್ತಿದ್ದ. ಮನೆಯಲ್ಲಿ ಯಾರೊಬ್ಬರೂ ಅವನ ಮುಂದೆ ಸುಮ್ಮನೆ ಕಾಲಾಯಾಪನೆ ಮಾಡುವುದು ಸಾಧ್ಯವಿರಲಿಲ್ಲ. ಅಸಲಿಗೆ ಅವನಾದರೂ ಎಲ್ಲರಿಗೂ ಮಾದರಿಯಂತಿರುತ್ತಿದ್ದ. ಎಂದೂ ಮೈಮುರಿದು ದುಡಿಯದೆ ಕೂತು ಉಂಡವನಲ್ಲ. ಭಾವುಕತೆಯನ್ನು ಕಳೆದುಕೊಂಡವನಂತೆ ವರ್ತಿಸುತ್ತಿದ್ದ ಅಜ್ಜಯ್ಯ,  ಇಂದಿಗೂ ನಮ್ಮ ಮನಸ್ಸಿನಲ್ಲಿ ಹೇಗಿಷ್ಟು ಆಳದ ಬೇರಿನಂತೆ ನಾಟಿಕೊಂಡುಳಿದನೆಂಬುದು ನಿಜಕ್ಕೂ ಅಚ್ಚರಿಯೇ. ಅಜ್ಜಯ್ಯ ದಿನದಿಪತ್ನಾಲ್ಕು ತಾಸೂ ಕೃಷಿಯಲ್ಲೇ ಮುಳುಗಿರುವವನೆನಿಸಿದರೂ ಅವನ ಧಾರ್ಮಿಕ ಸ್ವಭಾವದ ಬಗ್ಗೆ ಅಪ್ಪ ಅತ್ತೆಯರಿಂದ ಸಾಕಷ್ಟು ಅರಿತಿದ್ದೆ. ಕೃಷಿಕನಾದರೂ ಅಕ್ಷರಸ್ತನಾಗಿದ್ದ ಅಜ್ಜಯ್ಯ ರಾಮಾಯಣವನ್ನು, ಶನಿ ಮಹಾತ್ಮೆ ಕಥನವನ್ನ ಬಹಳ ಇಷ್ಟ ಪಟ್ಟು ಓದುತ್ತಿದ್ದನಂತೆ. ತನ್ನ ಅಕ್ಷರ ಪ್ರೀತಿಯಿಂದಾಗಿಯೇ ಅಪ್ಪ ದೊಡ್ಡಪ್ಪಂದಿರನ್ನು ಅಕ್ಷರವಂತರನ್ನಾಗಿ ಮಾಡಿ ನೌಕರಿಗೆ ಸೇರುವಂತೆ ಮಾಡಿದ್ದನಂತೆ. ಅಜ್ಜಯ್ಯ ಸತ್ತಾಗ ನಾನು ಮಾಡಿದ ಮೊದಲ ಕೆಲಸವೇ ಅವನ ಖಾಸಗಿ ಪೆಟ್ಟಿಗೆಯನ್ನು ತೆರೆದು ನೋಡಿದ್ದು. ಅಲ್ಲಿಯವರೆಗೂ ಅದನ್ನು ಕಿರುಬೆರಳಿಂದ ಮುಟ್ಟಲೂ ಭಯಪಡುತ್ತಿದ್ದೆ. ಕಾರಣ ಅಜ್ಜಯ್ಯ ಎಂದೂ ಆ ಪೆಟ್ಟಿಗೆಯನ್ನು ಜನರಿರುವಾಗ ತೆರೆಯುತ್ತಿರಲಿಲ್ಲ. ಮತ್ತೆ ಯಾರಿಗೂ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಯಾರಾದರೂ ಅಪ್ಪಿ ತಪ್ಪಿ ಮುಟ್ಟಲು ಪ್ರಯತ್ನಿಸಿಬಿಟ್ಟರೆ ಗುಡುಗಿಬಿಡುತ್ತಿದ್ದ. ಅದಕ್ಕೆ ಹೆದರಿ ನಾವೆಂದೂ ಅದರ ತಂಟೆಗೆ ಹೋಗುತ್ತಿರಲಿಲ್ಲ. ಅದನ್ನವನು ತನ್ನ ಪ್ರಾಣಕ್ಕು ಮಿಗಿಲಾಗಿ ಜೋಪಾನ ಮಾಡಿಟ್ಟುಕೊಂಡಿದ್ದ. ಎಷ್ಟೊಂದು ಕುತೂಹಲ ಅದನ್ನು ತೆರೆದು ನೋಡುವಾಗ. ಅದರೊಳಗೆ ಏನೇನೋ ಚಿತ್ರ ವಿಚಿತ್ರ ವಸ್ತುಗಳು, ಯಾವುದೋ ಬೀಗದ ಕೈಗಳು, ಒಂದಷ್ಟು ದೇವರ ಪಟಗಳು, ಶಿಥಿಲಾವಸ್ಥೆಯಲ್ಲಿದ್ದ ಪರ್ಸುಗಳು, ಜೊತೆಗೆ ಶನಿ ಮಹಾತ್ಮೆ, ರಾಮಾಯಣ, ಮಹಾಭಾರತದ ಅತ್ಯಂತ ಪುರಾತನ, ಬಣ್ಣ ಮಾಸಿದ, ಬ್ಯಾಗಡಿ ಕವರಿನ ಬೈಂಡ್ ಹಾಕಲಾಗಿದ್ದ ಪುಸ್ತಕಗಳು. ಧೂಳಿನ ಘಮದೊಟ್ಟಿಗೆ ಅಜ್ಜಯ್ಯನ ಬೆವರಿನ ಗಮಲು ಬೆರತಿದ್ದಿರಬೇಕು. ಎಂಥದೋ ಮಧುರಾನುಭೂತಿ. ನಾನು ಆ ಪುಸ್ತಕಗಳನ್ನು ಮನೆಗೆ ತಂದಿಟ್ಟುಕೊಂಡಿದ್ದೆ. ಅಜ್ಜಯ್ಯನ ಮೇಲಿನ ಪ್ರೀತಿಯಿಂದಾಗಿ. ಈಗಲೂ ಆ ಪುಸ್ತಕಗಳು ಅಜ್ಜಯ್ಯನನ್ನು ನೆನಪಿಸುತ್ತ ನನ್ನ ಬಳಿ ಇವೆ. ಅಜ್ಜ ಸತ್ತಾಗ ನಾವು ಬಹಳ ದೂರದಿಂದ ಮಣ್ಣಿಗೆ ಬಂದಿದ್ದೆವು. ಊರನ್ನು ಪ್ರವೇಶಿಸಲು ಎಂಥದೋ ಹಿಂಜರಿಕೆ. ಅಜ್ಜನನ್ನು ಆ ಸ್ಥಿತಿಯಲ್ಲಿ ನೋಡುವುದು ನನ್ನಿಂದ ಸಾಧ್ಯವಾ ಎನಿಸಿತ್ತು. ಮನೆ ಹತ್ತಿರವಾದಂತೆ ಮನೆ ಮುಂದಿನ ಹೊಗೆ, ಒಳಗಿನ ಅಳು, ಸುತ್ತುಗಟ್ಟಿದ್ದ ಜನ ನನ್ನನ್ನು ಅಧೀರಳಾಗಿಸಿದ್ದವು. ನಾನೀಗ ಬಾಗಿಲಿಗೆ ಬಂದು ನಿಂತಿದ್ದೆ. ಅಜ್ಜನನ್ನು ಅವನು ಸದಾ ಮಲಗುತ್ತಿದ್ದ ಕಟ್ಟೆಯ ಮೇಲೆ ಇಂಟು ಮಾರ್ಕಿನ ರೀತಿಯಲ್ಲಿ ಕೋಲುಗಳ ಆಧಾರ ಕೊಟ್ಟು ಕೂರಿಸಲಾಗಿತ್ತು. ಹಣೆ ತುಂಬ ಮೂರು ಪಟ್ಟೆ ವಿಭೂತಿ, ಕತ್ತಲ್ಲಿ ದೊಡ್ಡ ಕರಡಿಗೆ, ಅವನ ಇಷ್ಟದ ಬಿಳಿ ಪಂಚೆ ಮತ್ತು ಹೊಚ್ಚ ಹೊಸ ಬಿಳಿ ಜುಬ್ಬ… ಈ ಎಲ್ಲ ಪೋಷಾಕಿನಲ್ಲಿ ಅವ ಈಗಿನ್ನು ಸ್ನಾನ ಮಾಡಿ ಸಂತೆಗೆ ಹೊರಟವನಂತೆ ಕಾಣುತ್ತಿದ್ದ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ-೧೨. ಚದುರಿದ ಚಿತ್ರಗಳಲ್ಲೇ ಅರಳುವ ಹೂವುಗಳಂಥ ನರಸಿಂಹ ವರ್ಮ ಕವಿತೆಗಳು ವಿಟ್ಲದ ನರಸಿಂಹ ವರ್ಮ “ಆಕಾಶದ ಚಿತ್ರಗಳು” ಹೆಸರಿನ ಕವನ ಸಂಕಲನವನ್ನು ೨೦೧೯ರಲ್ಲಿ ಪ್ರಕಟಿಸುವುದರ ಮೂಲಕ ಈಗಾಗಲೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾನೂನು ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅವರ ಕವಿತೆಗಳಲ್ಲಿ ಹುಡುಕಿದರೂ ವಾದ ವಿವಾದಗಳಾಗಲೀ, ವ್ಯವಸ್ಥೆಯ ಪರ ಅಥವ ವಿರೋಧದ ನಿಲುವಾಗಲೀ ಇಲ್ಲದೇ ಇರುವುದು ವಿಶೇಷ. ಜೊತೆಗೇ ವರ್ತಮಾನದ ಸಂಗತಿಗಳಿಗೆ ಥಟ್ಟನೆ ಪ್ರತಿಕ್ರಯಿಸಿ ಪದ್ಯವೊಂದನ್ನು ಹೊಸೆಯುವ ಅವಸರದ ಧಾವಂತ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ವಿಚಾರವೊಂದನ್ನು ಮೇಲೆತ್ತುವ ಅಥವ ಇನ್ನಿಲ್ಲದಂತೆ ಅದನ್ನು ಆಕ್ಷೇಪಿಸುವ ರೀತಿಯಿಂದಲೂ ಅವರು ಮುಕ್ತರು. ಮತ್ತು ಆ ಕಾರಣದಿಂದಲೇ ಅವರು ಪ್ರಕಟಿಸುವ ಕವಿತೆಗೆ ಚಿದ್ವಿಲಾಸದ ಬಗ್ಗೆ ಅನನ್ಯ ಕಕ್ಕುಲತೆ ಮತ್ತು ಇಬ್ಬಂದಿತನದ ಬಗ್ಗೆ ವಿಶೇಷ ಕಾಳಜಿ. ಪ್ರಾಯಶಃ ಈ ಕಾರಣಕ್ಕೇ ನರಸಿಂಹ ವರ್ಮರ ಕಾವ್ಯ ಕೃಷಿಗೆ ವರ್ತಮಾನದ ಸಂಗತಿಗಳಿಗಿಂತಲೂ ಪೌರಾಣಿಕ ಮತ್ತು ಐತಿಹಾಸಿಕ ವ್ಯಕ್ತಿಗಳೂ ಘಟನೆಗಳೂ ಸಾದೃಶ ಪ್ರತಿಮೆಗಳಾಗಿ ಅವರ ಕವಿತೆಗಳ ವಕ್ತಾರಿಕೆಯನ್ನೂ ನಿಭಾಯಿಸುತ್ತವೆ.‌ ಮತ್ತು ಈ ಇದೇ ಕಾರಣಕ್ಕಾಗಿ ಜನ್ಮತಃ ಇರುವ ರಾಜಮನೆತನದ ಪ್ರಭಾವಳಿಯನ್ನು ಕಳಚಿಟ್ಟು ಸಾಮಾನ್ಯನಾಗಿ ನಡೆದು ಹೋದ ತಥಾಗತ ಬುದ್ಧನ ಹಾದಿ ಇವರಿಗೆ ಪ್ರಿಯವಾದುದಾಗಿದೆ. ಅವರ ಕವಿತೆಗಳು ಒಂದು ಸಾಮಾಜಿಕ ಚೌಕಟ್ಟು ಅಥವ ಬಂಧಗಳಿಂದ ದೂರ ಇರುವ ಕಾರಣ ಅವರ ಕವಿತೆಗಳಲ್ಲಿ ಅಧ್ಯಯನಶೀಲತೆ ಮತ್ತು ಪ್ರಾಮಾಣಿಕ ದರುಶನಗಳು ಪ್ರಕಟವಾಗುತ್ತವೆ. ಯಾವ ಕವಿ ಸತತ ಅಧ್ಯನಶೀಲನಾಗಿ ಇರುತ್ತಾನೆಯೋ ಅವನು ಯಾವತ್ತೂ ಯಾರನ್ನಾಗಲೀ ಅಥವ ಯಾವ ಒಂದು ನಿರ್ದಿಷ್ಟ ವಾದಕ್ಕಾಗಲೀ ಕಟ್ಟು ಬೀಳದೇ ಸ್ವತಃ ಸೃಜಿಸಿದ ಅನುಭವದ ಮೂಸೆಗಳಲ್ಲಿ ತನ್ನ ಅನಿಸಿಕೆಗಳನ್ನು ಬೆರೆಸಿ ಲೋಕದ ಕಣ್ಣಿಗೆ ಹಿಡಿಯುತ್ತಾನೆ. ಆ ಲೋಕವು ಹೀಗೇ ಇದೆ ಎಂದಾಗಲೀ ಹೀಗೇ ಇರಬೇಕು ಎಂಬ ವಾದವಾಗಲೀ ಆ ಅಂಥ ಜಿಜ್ಞಾಸುವಿಗೆ ಇರುವುದಿಲ್ಲ. ನನಗೆ ಅನಿಸಿದ್ದನ್ನು ಹೇಳಿದ್ದೇನೆ, ಒಪ್ಪುವುದು ಬಿಡುವುದು ಲೋಕದ ಸಂಗತಿ ಎಂದು ಮುಂದುವರೆಯುತ್ತಾನೆ. ಲೋಕ ಒಪ್ಪಿದರೂ ಅಷ್ಟೆ, ಒಪ್ಪದೇ ಇದ್ದರೂ ಅಷ್ಟೆ. ಲೋಕಾಂತದ ಅಗ್ನಿದಿವ್ಯಗಳನ್ನು ಅನುಲಕ್ಷಿಸದೇ ತನ್ನ ಪಾಡಿಗೆ ತಾನಿರುವ ನರಸಿಂಹ ವರ್ಮರಂತೆಯೇ ಅವರ ಪದ್ಯಗಳಲ್ಲೂ ಅಂಥದೇ ವಿವೇಕ ಸದಾ ಸರ್ವದಾ ಜಾಗೃತವಾಗಿರುವುದನ್ನು ಓದುಗ ಗಮನಿಸಬಹುದು. ಈ ಮಾತಿಗೆ ಉದಾಹರಣೆಯಾಗಿ ಅವರ ಈ ಕವಿತೆಯನ್ನು ನೋಡಬಹುದು. ಬಾಣಲೆಗೆ ಸುರಿವಾಗ ಸಾಸಿವೆಯೊಂದು ಪುಟಿದು ಹಾರಿ ಹೋಯಿತು ಛಲವಿಟ್ಟು ಹುಡುಕಿದರೆ ಸಾಸಿವೆಯೂ ದೊರಕೀತು : ಸೂಕ್ಷ್ಮವನೂ ಶೋಧಿಸಿದೆನೆಂದು ಬೀಗಿದೆ ಬುದ್ಧ ನಕ್ಕ : ನೀನು ಹುಡುಕಿದ್ದು ಬರಿಯ ಸಾಸಿವೆ , ಸಾವಿಲ್ಲದ ಮನೆಯ ಸಾಸಿವೆಯಲ್ಲ ಬಾಣಲೆಮನದ  ನೆಲೆಯಿಲ್ಲೀಗ ಸಾಸಿವೆಯ ಚಟಪಟ ಮತ್ತು ಒಗ್ಗರಣೆಯ ಘಮ . ಪದ್ಯದ ನೇಯ್ಗೆಯಲ್ಲಿ ವಿಶೇಷ ಇರದಿದ್ದರೂ ಸಾಸುವೆಯ ಪ್ರತಿಮೆಯ ಮೂಲಕ ಸಾವನ್ನು ಧೇನಿಸುವ ಕವಿ, ಕಾದ ಬಾಣಲೆಯಾದ ಮನದಲ್ಲಿ ಚಟಪಟಿಸುತ್ತಲೇ ಒಗ್ಗರಣೆಯ ಘಮಕ್ಕೆ ಅಂದರೆ ಬದುಕಿನ ಸಾರವನ್ನೂ ಗ್ರಹಿಸುತ್ತಾನಲ್ಲ ಅದು ವಿಶೇಷವೇ. ಕವಿತೆಯ ಎರಡನೆಯ ಪ್ಯಾರ “ದೊರಕೀತು” ದೊರಕಿತು ಆದರೆ ಮಾತ್ರ ಪದ್ಯಕ್ಕೆ ಮತ್ತಷ್ಟು ಝಳ ಬಂದೀತು‌. ಸದ್ಯಕ್ಕಿಲ್ಲಿ ಯಾವುದೂ ಸರಾಗವಲ್ಲ : ಹಳೆಯ ರಾಗ ಬದಲಾಗಿಲ್ಲ , ಅಬ್ಬರಿಸಿ ಬೊಬ್ಬಿರಿಯುವುದನ್ನು ರಾಗವೆನ್ನಲಾಗುವುದಿಲ್ಲ. ಎಂದು ಕೊನೆಯಾಗುವ ಅವರ ಕವಿತೆಯೊಂದು ನಮ್ಮನ್ನು ಆಕರ್ಷಿಸುವ ವಿವಿಧ ಇಸಂಗಳನ್ನು ಕುರಿತು ಹೇಳುತ್ತಲೇ ಕಡೆಗೆ ಯಾವ ಸಿದ್ಧಾಂತವೂ ಸರಾಗ ಒಲಿಯದು ಮತ್ತು ಎಲ್ಲ ವಾದ ಮತ್ತು ಸಿದ್ಧಾಂತಗಳಲ್ಲೂ ಮತ್ತದೇ ಹಳೆಯದೇ  ರಾಗದ ಛಾಯೆ ಇರುವಾಗ ಅಬ್ಬರಿಸಿ ಕೂಗಿದ ಮಾತ್ರಕ್ಕೆ ಅದನ್ನು ಹೊಸ ರಾಗ ಎನ್ನಲಾಗುವುದಿಲ್ಲ ಎಂಬ ತೀರ್ಮಾನ ಕೂಡ ಎಲ್ಲ ಸಿದ್ಧಾಂತಗಳ ತಲಸ್ಪರ್ಶೀ ಅಧ್ಯಯನದಿಂದ ಪಡೆದ ಕಾಣ್ಕೆಯೇ ಆಗಿದೆ. ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ ಯಾವ ಕವಿತೆಗೂ ಜಾಗವಿಲ್ಲ : ಒಂಟಿ ‍ಅರಮನೆಯಲ್ಲೂ ತಕ್ಷಕನ ನೆನಪು ಯಾವ ಫಲದಲ್ಲಿ ಯಾವ ಹುಳವೋ ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ. ಎನ್ನುವ ಸಶಕ್ತ ಅಂತ್ಯವಿರುವ ಕವಿತೆಯಲ್ಲಿ ಕರೋನಾದ ಭೀತಿಯನ್ನು ಪದ್ಯವಾಗಿಸಿರುವ ರೀತಿಗೆ ಕೂಡ ತಕ್ಷಕ ಮತ್ತು ಪರೀಕ್ಷಿತರು ಇಣುಕುವುದರಿಂದ ನಮ್ಮೊಳಗೇ ಇರುವ ಯಯಾತಿ ಕೂಡ ಭಯದಿಂದ ನಡುಗುತ್ತಾನೆ. ನೀವು ನನ್ನತ್ತ ಎಸೆದ  ಕಲ್ಲುಗಳನ್ನು ಆಯ್ದು ಜೋಪಾನವಾಗಿ  ಕಾಯ್ದಿರಿಸಿದ್ದೇನೆ ತುಕ್ಕು ಹಿಡಿಯುತ್ತಿದೆಯೇನೋ ಬದುಕಿಗೆ ಎಂದೆನಿಸಿದಾಗಲೆಲ್ಲ‌ಾ ಬಾಳುವ ಹೊನ್ನಛಲವೀಯುವ ಪರುಷಮಣಿಗಳವು ಕಲ್ಲೆಸವ ಕೈಗಳಿಗೂ ಒಂದು ಸಲಾಮ್ ಇದೊಂದು ಮುಂಗಾಣ್ಕೆಯ ಕವಿತೆ. ಕವಿತೆಗಳು ಕೂಡ ಬದುಕಿನ ಭಾಷ್ಯ ಎಂದು ಲಾಕ್ಷಣಿಕರು ಹೇಳಿದ ಮಾತು ಈ ಇಂಥ ಸಾಲುಗಳಲ್ಲಿ ಜೀವಂತವಾಗಿದೆ. ಯಾರು ಯಾರೋ ಯಾವುದೋ ಕಾರಣಕ್ಕೆ ಹೊಡೆದ ಕಲ್ಲುಗಳನ್ನು ಸಂಗ್ರಹಿಸಿ ಇಟ್ಟು ಕೊಂಡ ಕವಿ ಬದುಕು ಉಧ್ವಸ್ತಗೊಂಡಾಗಲೆಲ್ಲ ಆ ಪರುಷಮಣಿಯಂಥ ಮುಟ್ಟಿಸಿದೊಡನೆಯೇ ಬಂಗಾರವಾಗಿ ಬದಲಾಗುವ ಸರಕಾಗಿಸುವುದು ಕೂಡ ಕೌತುಕವೇ ಹೌದು. ಹೀಗೆ ಕಣ್ಣು ಕೆಂಪಾಗಿಸಿ ‌ಅವಳು ಸುಳಿದಾಡುವುದು ಹೊಸತೇನಲ್ಲ ಕವಿಗೆ : ಆದರೂ ವಾಡಿಕೆಯಂತೆ ಕೇಳಿದ ‘ಏನಾಯಿತು’ ಎಂದು ‘ ಕಣ್ಣಿಗೆ ಯಾವುದೋ ಹುಳ ಬಿದ್ದಿರಬೇಕು ‘ ಅಂದಳು ನೋಡಿದರೆ ಏನೂ ಇಲ್ಲ ‘ನಿನ್ನ  ತಲೆಯೊಳಗಿರುವ ಹುಳ ಕಣ್ಣಿಗೆ ಹೊಕ್ಕಿರಬಹುದು’ ‌ಎಂದದ್ದು ಕವಿಯ ಕಾವ್ಯಾತ್ಮಕ ಪ್ರಯೋಗ ‘ನಿಮ್ಮ ಕವಿತೆಯ ಹಾಗೆ ‘ಅಂದಳು ನಿಟ್ಟುಸಿರ ನಂತರ ಮತ್ತೆ ಉಸುರಿದಳು : ‘ನಿನ್ನೆ ಇಡೀ ದಿನ ಇಡೀ ರಾತ್ರಿ ಕಾದೆ ನಮ್ಮ ಮದುವೆಯ ದಿವಸ ನಿಮಗೆ ನೆನಪಾಗುವುದೇ ಎಂದು , ನಿಮ್ಮ ತಲೆಯೊಳಗಿನ  ಕವಿತೆ ಹುಳದಂತೆ ಕಣ್ಣಿಗಿಳಿದಿದ್ದರೂ ಪರವಾಗಿರಲಿಲ್ಲ ಪೊರೆಯಂತೆ  ಕಣ್ಣನ್ನೇ ಕಾಡಿತು ‘ ಅಂದಳು ಕವಿತೆಯ ಪೊರೆ ಒಮ್ಮೆಲೇ ಕಳಚಿತು. ಪ್ರಾಯಶಃ ಈ ಕವಿತೆಯ ಯಾವುದೇ ಸಾಲನ್ನು ಕತ್ತರಿಸಿ ಇಲ್ಲಿ ಕೋಟ್ ಮಾಡಿದ್ದಿದ್ದರೆ ಇಡಿಯ ಪದ್ಯದ ಮೂಲಕ ಕವಿ ಹೇಳ ಹೊರಟದ್ದೇನು ಎನ್ನುವುದು ಶೃತಪಡಿಸಲಿಕ್ಕೆ ಆಗದ ಕಾರಣ ಇಡೀ ಪದ್ಯವನ್ನು ಇಲ್ಲಿ ಓದಿಸಿದ್ದೇನೆ. ಏಕೆಂದರೆ ಇದು ಈ ಕವಿಯೊಬ್ಬನ ತಪ್ಪಲ್ಲ, ಬಹಳಷ್ಟು ಜನ ನಾವು ನಮ್ಮದೇ ಜರೂರುಗಳಲ್ಲಿ ಕಳೆದು ಹೋಗುತ್ತ ನಿಜಕ್ಕೂ “ಶುಭಾಷಯ” ಹೇಳಲೇ ಬೇಕಾದ ಕನಿಷ್ಠ ಸಂತೈಸಬಹುದಾದ ಸಂಗತಿಗಳನ್ನ ಮರೆತು ಬಿಡುತ್ತೇವಲ್ಲ ಅದರ ಅಭಿವ್ಯಕ್ತಿ ಇಲ್ಲಿ ಸಲೀಸಾಗಿ ಬಂದಿದೆ‌. ಒಂದು ಸಣ್ಣಕತೆಯೇ ಆಗಿ ಬದಲಾಗಿದೆ. ಬಯಲಲ್ಲಿ ಬಯಲೆನಿಸಿಕೊಂಡ ಜಂಗಮ ಬೆಳಕು ಎಲ್ಲಿ  ಹೋಯಿತು ? ಎಂದು ಎಲ್ಲವೂ ವ್ಯಾಪಾರವೇ ಆಗಿ ಬದಲಾಗಿರುವ ವರ್ತಮಾನದ ಬದುಕನ್ನು ಪ್ರಶ್ನಿಸುವ ಕವಿಯ ಈ ಪ್ರಶ್ನೆ ನಮ್ಮೆಲ್ಲರದ್ದೂ ಆಗ ಬೇಕಾದ ತುರ್ತು ಸಮಯ ಇದಾಗಿದೆ. “ಆಕಾಶದ ಚಿತ್ರಗಳು” ಶೀರ್ಷಿಕೆಯ ಪದ್ಯದ ಈ ಸಾಲುಗಳು ಅಲ್ಲೊಬ್ಬಳು ಹಳೇ ನೈಟಿಯ ಆಂಟಿಗೆ ಗೊರಕೆ ಗಂಡನ ಪಕ್ಕದಲ್ಲಿ ಮಲಗಿ ನೂರು ನಿಟ್ಟುಸಿರುಗಳ ಕಾದ ನಟ್ಟಿರುಳಲ್ಲೂ ಇಂದ್ರಚಾಪದ ಬೆನ್ನೇರಿ ಆಗಸಕ್ಕೇರುವ ಕನವರಿಕೆ, ಬೆಚ್ಚೆದ್ದ ಗಂಡನ ಸಂಶಯದ ಕಂಗಳಲ್ಲಿ ಗೌತಮನ ಶಾಪದ ಪಳೆಯುಳಿಕೆ ಎನ್ನುವ ಅದ್ಭುತ ರೂಪಕವಾಗಿದೆ. ಒಂದೇ ಒಂದು ಹೊಸ ರೂಪಕವೊಂದನ್ನು ಒಬ್ಬ ಹೊಸ ಕವಿ ಸೃಷ್ಟಿಸಿದರೆ ಆ ಕವಿ ಬಹಳ ಕಾಲ ಉಳಿಯುತ್ತಾನೆ ಎಂಬ ಮಾತಿದೆ. ಹಾಗಾಗಿ ಶ್ರೀ ನರಸಿಂಹ ವರ್ಮನೆಂಬ ಈ ಕವಿ ಬಹುಕಾಲ ಉಳಿಯುವರು ಎಂಬುದಕ್ಕೆ ಸಾಕ್ಷಿಯೂ ಆಗಿದೆ ಈ ಸಾಲುಗಳು. ತಮ್ಮದೇ ಓದಿನಿಂದ ಕಂಡುಕೊಂಡ ದಾರಿಯಲ್ಲೇ ಸಾಗುವ ಈ ಕವಿ ಅಪರೂಪಕ್ಕೆ ಎಂಬಂತೆ “ಸ್ಪರ್ಶವೆಂದರೆ ಮುಟ್ಟುವಿಕೆಯಲ್ಲ ತಟ್ಟುವಿಕೆ” ಎಂದೂ ಕಾಣಿಸಬಲ್ಲ ಛಾತಿ ಉಳ್ಳವರು. ದೂರದ ಬೆಟ್ಟವನ್ನು ಕಣ್ಣ ಮುಂದೆ ಹಿಡಿಯ ಬಲ್ಲಂತೆಯೇ ತಮ್ಮೊಳಗಿನ ದೇವರನ್ನೂ ಕಾಣಿಸ ಬಲ್ಲವರು‌‌. ಶ್ರೀ ನರಸಿಂಹ ವರ್ಮರು ಕಾನೂನು ಕಟ್ಟಳೆ ಅರಿತ ಕಾರಣ ಅವರಿಗೆ ಯಾವುದು ತಪ್ಪು ಯಾವುದು ಸರಿ ಎಂಬ ಸೈದ್ಧಾಂತಿಕ ಕಾರಣಗಳಾಚೆಯ ಅವರವರ ಲೋಕದ ಅರಿವು ಸಿದ್ಧಿಸಿದೆ‌. ಪ್ರಾಯಶಃ ಆ ಅರಿವೇ ಅವರೆಲ್ಲ ಕವಿತೆಗಳಿಗೂ ಹೊದಿಸಿದ ಅರಿವೆಯೂ ಆಗಿದೆ. ಆದರೆ ನಾವು ಹೊದ್ದ ಅರಿವೆಗಳನ್ನು ಕಳಚದೇ ನಿಜದ ನಗ್ನತೆಗೆ ಇರುವ ಚೆಲುವು ಮತ್ತು ಗಟ್ಟಿತನ ಅಲಂಕಾರದಲ್ಲಿ ಮರೆವೆಯಾಗಿ ಬದಲಾಗಬಾರದು. ಅವರ ಮುಂದಿನ ಪದ್ಯಗಳ ಬಗ್ಗೆ ಭರವಸೆ ಮತ್ತು ಅಪರೂಪದ ತಿಳುವಳಿಕೆಯ ಗಂಧದ ಪರಿಮಳ ಸೂಸುತ್ತಲೇ ಆಳದಾಳದ ತಿಳಿವನ್ನು ಪುನರ್ಮನನ ಮಾಡಿಸುವ ಅವರ ಕಾವ್ಯ ಕೃಷಿಗೆ ಶುಭಾಷಯ ಹೇಳುತ್ತ ಅವರ ಆಯ್ದ ಕವಿತೆಗಳನ್ನು ನಿಮ್ಮ ಓದಿಗೆ ಶಿಫಾರಸು ಮಾಡುತ್ತ ಈ ಟಿಪ್ಪಣಿ ಮುಗಿಸುತ್ತೇನೆ. ನರಸಿಂಹ ವರ್ಮರ ಆಯ್ದ ಕವಿತೆಗಳು. 1. ಹೊರಗೆ ‌ಅಡ್ಡಾಡುವುದಿಲ್ಲ ಈಗ ಕವನ : ಹಾಳೆಯಲ್ಲೇ ತೆವಳುತ್ತದೆ ಕದಲದಂತೆ ಕದಲಿ ಕದಲಿಸುತ್ತಿದೆ ‍‌‍ಅವ್ಯಕ್ತ ‌‌ಹುಳದ ಧ್ಯಾನ ‌ಕವಿತೆಗೂ ಬೇಕು ಮಾರುಕಟ್ಟೆ ‍‌ಅಕ್ಷರಗಳಿಗೆ ಮೆರವಣಿಗೆ : ಈಗ ಮ‌ಾತ್ರ ಬೇಡವೇ ಬೇಡ ವಿಮರ್ಶೆ, ಹೊಗಳಿಕೆ ಕೋವಿದ ಎಂದು ಬಣ್ಣಿಸಿದರೆ ಕೋವಿಡ ಎಂದಂತೆ  ಭಾಸವಾಗಿ ಭಾಷೆ  ಭಯ ಹುಟ್ಟಿಸುತ್ತಿದೆ ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ ಯಾವ ಕವಿತೆಗೂ ಜಾಗವಿಲ್ಲ : ಒಂಟಿ ‍ಅರಮನೆಯಲ್ಲೂ ತಕ್ಷಕನ ನೆನಪು ಯಾವ ಫಲದಲ್ಲಿ ಯಾವ ಹುಳವೋ ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ. 2. ಟ್ರಾಫಿಕ್ ಜಂಜಾಟದಲ್ಲಿ ಕಾರು ಚಲಾಯಿಸುತ್ತಾ ಅವನು ಧ್ಯಾನಕೇಂದ್ರದ ಬಗ್ಗೆ ಧ್ಯಾನಿಸುತ್ತಾನೆ : ಧ್ಯಾನ ಕೇಂದ್ರದೊಳಗೆ ಕಾಲಿಟ್ಟೊಡನೆ ಧ್ಯಾನ ಮಾಯವಾಗುತ್ತದೆ ಬಣ್ಣಬಣ್ಣದ ದಿರಿಸುಗಳ    ಸಾಲಿನಿಂದ ತೇಲಿ ಬಂದ ಲಘು ಅತ್ತರಿಗೆ ತತ್ತರಿಸಿ ಅವನು ಮಾಯೆಯ ಬಗ್ಗೆ ಗಾಢವಾಗಿ ಚಿಂತಿಸುತ್ತಾನೆ : ಧ್ಯಾನಕೇಂದ್ರದೊಳಗೆ ನಿಧಾನವಾಗಿ ಮಾಯೆ ಆವರಿಸತೊಡಗುತ್ತದೆ ಹೊರಗೆ ಕಾರಿನಲ್ಲಿ ಎಸಿಯಿಂದ ಬೇಸತ್ತ ಶ್ವಾನ ಅತಂತ್ರಗೊಂಡು ಹಣಕಲು ಹವಣಿಸುತ್ತಿದೆ  : ರಸ್ತೆಯ ‌ಆಚೆ ಬದಿಯಲ್ಲಿ ಹೆಣ್ಣುಸೊಣಗವೊಂದು ಸ್ವತಂತ್ರವಾಗಿ ಸಂಚರಿಸುತ್ತಿದೆ ಜಗದೊಳಗಿನ ಎಲ್ಲಾ ಮಾಯೆಗಳೂ ಉದರಂಭರಣಕ್ಕೆ ಪ್ರವಚನಗಳಾಗಿ ಗೋಡೆಗಳೊಳಗೆ ಪ್ರವಹಿಸುತ್ತಿವೆ “ಮನದ ಮುಂದಣ ಆಸೆಯೇ ಮಾಯೆ ಕಾಣಾ” ಎಂಬ ಸರಳ ಅಧ್ಯಾತ್ಮ ಅಲ್ಲೇ ಪಕ್ಕದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಬಯಲಾಗಿ ಬಿದ್ದಿದೆ. 3. ಬಯಲೊಳಗಿದ್ದ ಯೋಗದ ಬಟ್ಟಲುಗಳೀಗ ‌ಅಂಗಡಿಯೊಳಗೆ ದೊರೆವುದೆಂದು ದಾಂಗುಡಿಯಿಡುವ ಜನರು ಎಲ್ಲೆಡೆಗೂ ಹುಯಿಲೋ ಹುಯಿಲು ಬಯಲೊಳಗಿದ್ದ ಬಟ್ಟಲುಗಳೊಳಗೆ ಬೆಟ್ಟದಷ್ಟು ಕುತೂಹಲಗಳು ಒಂದು ನಂಬಿಕೆಗೆ ಹಲವು ನಾಮರೂಪಗಳು ಬಸಿರುಸಿರ ಬಿಗಿ ಹಿಡಿದು ಜಗದುಸಿರೊಳಗೊಂದಾಗುವ ಕನಸ ಸಾಹಸಗಳು ತನುವಿನೊಳಗೊಂದು ಹಾವು ಹಾವಿನೊಳಗೆ ಹೂವುಗಳನಿಟ್ಟು ತಲೆ ದಾಟಬಲ್ಲ ನರ ಕಲ್ಪನಾ ವ್ಯೂಹಗಳು ಬದಲಾದ ಕಾಲದಲಿ ಅಂಗಡಿ ಮುಂಗಟ್ಟುಗಳಲಿ ಮೂಟೆ ಮೂಟೆ ಹಣ ಸುರಿದು ನಕಲಿ ಬಟ್ಟಲುಗಳನೂ ಕೊಳ್ಳಬಲ್ಲ  ಭೋಗಿಗಳು : ಕೊಳ್ಳೆ ಹೊಡೆವ ವ್ಯಾಪಾರಕ್ಕಿಳಿದ ನಕಲಿ ಯೋಗಿಗಳು ಬಯಲಲ್ಲಿ ಬಯಲೆನಿಸಿಕೊಂಡ ಜಂಗಮ ಬೆಳಕು ಎಲ್ಲಿ  ಹೋಯಿತು ? 4. ಕರೆ ಶೂನ್ಯದಲ್ಲೇ ದೃಷ್ಟಿ ನೆಟ್ಟು ಕಂಗೆಟ್ಟು ಕಣ್ಣ ಬೆಳಕನ್ನೇ ಕಳಕೊಂಡವರ ಕಡೆಗೆ ಕಡೆಗಣ್ಣನಾದರೂ ಹಾಯಿಸು; ಕಣ್ಣಿಂದ ಕಣ್ಣಿಗೆ ಸುಳಿಯಲಿ ಭರವಸೆಯ ಮಿಂಚು ಹರಿಸು ಭರವಸೆಯ ಬೆಳಕು! ಸಕಲ ಸ್ನಾಯುಗಳನ್ನೂ ಬಿಗಿಗೊಳಿಸಿ ಹುಬ್ಬುಗಂಟಿಕ್ಕಿ ಬೊಬ್ಬಿರಿಯುವ ಸದಾ ಉದ್ವಿಗ್ನ ಮಂದಿಯೂ ಬಿದ್ದು ಬಿದ್ದು ನಗುವಂತೆ ಖುದ್ದು ನಗು, ನಗಿಸು, ನಗುತ ಬಾಳು ಹಬ್ಬಿಸು ನಗೆಯ ಬೆಳಕು! ಜಡ್ಡುಗಳೂ ಗೊಡ್ಡುಗಳೂ ಬಡ್ಡಾದ ಹೆಡ್ಡುಗಳೂ ಸಿಡಿದು ಚೂರಾಗುವಂತೆ ಹೊಡೆದೊಡೆಯುವ ವಿವೇಚನೆಯ ಪಟಾಕಿಗಳ ಹಂಚು ಜನ ಮಾನಸಕೆ ಉಬ್ಬಿಸು ಸ್ವಾಭಿಮಾನದ ಬೆಳಕು! ತಮಸೋಮ‌ಾ ಜ್ಯೋತಿರ್ಗಮಯ ಎಂಬ ಚಿಂತನೆಯ ಬೆಳಕು ಜಾತಿ ಮತ ಕಾಲ ದೇಶಗಳ ಮೀರಿ ದಿಸೆದಿಸೆಗಳಿಗೂ ಹರಿದಾಗ ಜಗದ ತುಂಬೆಲ್ಲ ನಿತ್ಯ ದೀಪಾವಳಿ! ಅದಕ್ಕಾಗಿ ನೀನು ದಯವಿಟ್ಟು ಬೆಳಕು ಹಚ್ಚು ಕಿಚ್ಚು ಹಚ್ಚಬೇಡ! 5. ಆಕಾಶದ ಚಿತ್ರಗಳು  ಯಾವುದೋ

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಕತೆಗಾರ್ತಿ ಆಶಾ ಜಗದೀಶ್ಮುಖಾಮುಖಿಯಲ್ಲಿ “ಹೆಣ್ಣು ನನ್ನ ಬರಹದ ಮೂಲ ಕಾಳಜಿ” ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ: ಕವಿತೆಯನ್ನು ನಾನು ಬರೆಯುತ್ತೇನೆ ಎನ್ನುವುದು ತಪ್ಪಾಗುತ್ತದೆ. ಕವಿತೆಗಳೇ ನನ್ನಿಂದ ಬರೆಸಿಕೊಳ್ಳುತ್ತವೆ ಎನ್ನುವುದು ಸರಿ. ನನ್ನೊಳಗೆ ಅಂತಹುದೊಂದು ತೀವ್ರತೆಯನ್ನು ಇಟ್ಟುಕೊಳ್ಳದೆ ಬರೆಯುವುದು ನನಗೆ ಕಷ್ಟ. ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ: ಯಾವ ಕ್ಷಣವಾದರೂ ಸರಿ ಅದು ನನ್ನನ್ನು ಕಾಡಬೇಕು. ಸತಾಯಿಸಬೇಕು. ಇನ್ನು ಬರೆಯದೆ ಉಳಿಯಲಾರೆ ಅನ್ನಿಸುವಂತೆ ಮಾಡಬೇಕು. ಆಗ ಮಾತ್ರ ಕವಿತೆ ಹುಟ್ಟುತ್ತದೆ. ಹಾಗಾಗಿ ಕವಿತೆಯ ರಚನೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯ. ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ: ವಸ್ತು ಇಂಥದ್ದೇ ಇರಬೇಕು ಅಂತೇನೂ ಇಲ್ಲ ನನಗೆ. ಸುತ್ತಲಿನ ಆಗುಹೋಗುಗಳೆಲ್ಲಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವವಳು ನಾನು. ಯಾರದೋ ಸಾವು ಮತ್ಯಾರದೋ ಕಷ್ಟ ಎಲ್ಲವೂ ನನ್ನನ್ನು ಅಳಿಸುತ್ತವೆ. ಒಂದು ಆರ್ಟ್ ಮೂವಿ ಚಾಲು ಆಯಿತೆಂದರೆ ನನ್ನ ಕಣ್ಣೀರು ಕೋಡಿ ಬೀಳುವುದು ಗ್ಯಾರೆಂಟಿ ಎಂದು ಮೊದಲೇ ಹೇಳಿಬಿಡಬಹುದು. ಮತ್ತೆ ಅದರ ಬಗ್ಗೆ ನನಗೆ ಮುಜುಗರವಿಲ್ಲ. ಇನ್ಫ್ಯಾಕ್ಟ್ ಎಷ್ಟೋ ಹೊತ್ತು ಅಥವಾ ಕೆಲ ದಿನಗಳೂ ಅದೇ ಹ್ಯಾಂಗೋವರಿನಲ್ಲಿ ಇರಲು ಬಯಸ್ತೇನೆ ನಾನು. ಆಗ ನನ್ನಲ್ಲಿ ಕವಿತೆಯೊಂದು ಮೊಳಕೆಯೊಡೆಯಬಹುದು. ನೋವು, ಸಂತೋಷ, ಸಿಟ್ಟು, ಅಸಹನೆ, ಕೋಪ….. ಇತ್ಯಾದಿ ಯಾವ ಭಾವವೇ ಆಗಿರಲಿ ಅದರ ಶಿಖರ ಮುಟ್ಟುವ ತೀವ್ರತೆ ನನ್ನನ್ನಾವರಿಸಿದಾಗ ನನ್ನೊಳಗೆ ಕವಿತೆ ಮೊಟ್ಟೆ ಇಡುತ್ತದೆ. ಮತ್ತೆ ಕವಿಯಾದವನು ಅಂತರಂಗದ ದನಿಯಾಗುತ್ತಲೇ ಬಹಿರಂಗದ ಕಿವಿಯಾಗಲೂ ಬೇಕಿರುತ್ತದೆ. ಹಾಗಾಗಿ ಅವನ ಕಾವ್ಯ ಅದೆರಡರಿಂದಲೂ ಪ್ರಭಾವಿಸಲ್ಪಟ್ಟಿರುತ್ತದೆ. ಅದಕ್ಕೆ ನಾನೂ ಹೊರತಲ್ಲ. ಹೆಣ್ಣು ನನ್ನ ಬರಹದ ಮೂಲ ಕಾಳಜಿ ಕಾರಣ ಹೆಣ್ಣು ಹೊರಗಿನಿಂದಷ್ಟೇ ಅಲ್ಲ ಒಳಗಿನಿಂದಲೂ ಹೆಚ್ಚು ಗೊತ್ತಿರುವ ಕಾರಣ ಇರಬಹುದು. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ: ಖಂಡಿತಾ. ಬಾಲ್ಯದ ನೆನಪುಗಳಿಲ್ಲದೇ ನಮ್ಮ ಯಾವ ಪ್ರಕಾರದ ಬರಹವೂ ಸಂಪೂರ್ಣವಾಗಲಿಕ್ಕೇ ಸಾಧ್ಯವಿಲ್ಲ ಎನಿಸುವಷ್ಟು ಅದು ನಮ್ಮ ಬರಹಗಳಲ್ಲಿ ಹಾಸು ಹೊಕ್ಕು. ಇನ್ನು ಹರೆಯ ಎನ್ನುವುದು ಕಲ್ಲನ್ನೂ ಕವಿಯನ್ನಾಗಿಸಿಬಿಡುವ ಕಾಲ. ಅದಕ್ಕೆ ಯಾರೂ ಹೊರತಾಗಲು ಸಾಧ್ಯವಿಲ್ಲ. ಇದೇ ಹಂತದಲ್ಲಿಯೇ ನಮ್ಮ ದೇಹ ಮತ್ತೊಂದು ಹಂತದ ಬೇಳವಣಿಗೆಯನ್ನು ಪಡೆದುಕೊಳ್ಳುತ್ತದೆ. ಹಾರ್ಮೋನುಗಳ ವ್ಯತ್ಯಯ ವೈಪರಿತ್ಯ ನಮ್ಮ ಭಾವಕೋಶವನ್ನು ನಾನಾಥರದ ಪರೀಕ್ಷೆಗೆ ಒಳಗಾಗುವಂತೆ ಮಾಡುತ್ತದೆ. ಇವೆಲ್ಲವೂ ಒಂದಿಡೀ ಬದುಕಿಗೆ ಅಗತ್ಯವಿರುವ ಅನುಭವಗಳು. ನಾವವನ್ನು ಅಗತ್ಯವಾಗಿ ಕಟ್ಟಿಟ್ಟುಕೊಳ್ಳಲೇ ಬೇಕು. ಅದು ಪ್ರೇಮ ಮತ್ತು ಕಾಮದ ಭಾವಗಳು ಬಲಗೊಳ್ಳುವ ಕಾಲವೂ ಹೌದು. ಪ್ರೇಮ ಮತ್ತು ಕಾಮ ನಮ್ಮನ್ನು ಅತ್ಯಂತ ತೀವ್ರವಾಗಿ ತಲ್ಲಣಿಸುವಂತೆ ಕಾಡಬಲ್ಲ ಭಾವಗಳು. ಕವಿಯಾದವನಿಗೆ ಅವು ವರದಾನವೇ ಸರಿ. ಮತ್ತೆ ಪ್ರತಿಯೊಬ್ಬರೂ ಅವಕ್ಕೆ ಈಡಾಗದೇ ಪಾರಾಗುವುದು ಸಾಧ್ಯವಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಹಿಂದಿನಿಂದಲೂ ರಾಜಕೀಯದ ಅಂಗಳದಲ್ಲಿಯೇ ಸಾಹಿತ್ಯ ಪೋಷಣೆ ಪಡೆದು ಬೆಳೆದು ಬಂದಿರುವುದನ್ನು ಕಾಣಬಹುದು. ರಾಜಾಶ್ರಯವಿಲ್ಲದೇ ಕವಿಗಳು ಕಾವ್ಯವನ್ನಷ್ಟೇ ನಂಬಿ ಬದುಕುವ ಸ್ಥಿತಿ ಆಗ ಇರುತ್ತಿರಲಿಲ್ಲ. ಅದರ ನಡುವೆಯೂ ಯಾವ ಆರ್ಥಿಕ ಸಹಾಯವಿಲ್ಲದೆಯೂ ಬರೆದ ಕೆಲವರು ಸಿಗುತ್ತಾರೆ. ಆದರೆ ತಮ್ಮ ಜೀವಿತಾವಧಿಯಲ್ಲಿ ಅವರಿಗೆ ಸಿಗಬೇಕಾದ ಮಾನ ಮನ್ನಣೆ ಸಿಗದೆ ಹೋಗಿರುವುದು ಕಂಡುಬರುತ್ತದೆ. ಇದು ರಾಜಾಶ್ರಯದ ಬೆಂಬಲವಿಲ್ಲದ್ದು ಕಾರಣ ಎನ್ನುವುದೂ ತಿಳಿದುಬರುತ್ತದೆ. ಆದರೆ ಈಗ ಹಾಗಿಲ್ಲ. ಬಹಳಷ್ಟು ಬರಹಗಾರರು ಆರ್ಥಿಕವಾಗಿ ಸ್ವತಂತ್ರರಿದ್ದಾರೆ ಮತ್ತು ಮುಖ್ಯವಾಗಿ ಬರಹವನ್ನೇ ನಂಬಿ ಬದುಕುತ್ತಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಇಲ್ಲಿ ಸಾಹಿತ್ಯವನ್ನು ಪ್ರೀತಿಯಿಂದ ಓದುವ ಮತ್ತು ಬರೆಯುವ ಕಾರಣಕ್ಕಾಗಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಈಗ ಆಮಿಷಗಳಿಲ್ಲ, ಹೊಗಳು ಭಟ್ಟಂಗಿಗಳಾಗುವ ಅವಶ್ಯಕತೆ ಅಥವಾ ಅನಿವಾರ್ಯತೆ ಯಾರಿಗೂ ಇಲ್ಲ. ಆದರೆ ಇಂದಿನ ರಾಜಕೀಯ ಪ್ರಭಾವವೇ ಬೇರೆ. ಮತ್ತದು ಸಾಹಿತ್ಯದ ಮಟ್ಟಿಗೆ ಪೂರಕವಾಗಿದೆ ಅಂತನ್ನಿಸುವುದಿಲ್ಲ ನನಗೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗ. ದೇವರು ಎಂದರೆ ನಾವು ತಪ್ಪು ಮಾಡದಂತೆ ಸದಾ ನಮ್ಮನ್ನು ಎಚ್ಚರಿಸುವ ಅರಿವು. ಇದು ನನ್ನ ಸರಳ ನಂಬಿಕೆ. ದೇವರನ್ನು ನಾನು ನಂಬುವುದು ಹೀಗೆ. ತೋರಿಕೆಗೆ ದೇವರ ಮುಂದೆ ಕೂತು ಭಜನೆ ಮಾಡುವುದು ನನ್ನಿಂದ ಸಾಧ್ಯವಿಲ್ಲ. ಹಸಿದವನನ್ನ “ಮುಂದೆ ಹೋಗು…” ಎಂದು ಹೇಳಿ ದೇವರ ಮುಂದೆ ನೈವೇದ್ಯಕ್ಕಿಡುವುದು ನನ್ನಿಂದಾಗದ ಕೆಲಸ. ಮನಸ್ಸು ಶುದ್ಧಾವಗಲ್ಲದೆ ಸ್ನಾನ ಮಾಡಿರುವೆ ಎನ್ನುವ ಕಾರಣಕ್ಕೆ ದೇವರ ಎದುರು ಕೂರುವುದು ನನ್ನಿಂದ ಸಾಧ್ಯವಿಲ್ಲ. ದೇವರ ಭಾವಚಿತ್ರವೇ ಒಂದು ಅಗ್ನಿದಿವ್ಯವಿದ್ದಂತೆ. ಅದರ ಕಣ್ಣಿಗೆ ಕಣ್ಣು ಸೇರಿಸಲು ನಿಜಾಯಿತಿ, ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಗೆ ನಿಯತ್ತಾಗಿರಬೇಕು. ಹಾಗಿಲ್ಲದೇ ಹೋಗಿ ಕೂತು ಕಣ್ಣುತಪ್ಪಿಸಿ ಕೂತು ಎದ್ದುಬರುವುದು ನನಗಂತೂ ಕಷ್ಟ. ನಾನು ಆಸ್ತಿಕಳು. ಆದರೆ ನನ್ನನ್ನು ಹತ್ತಿರದಿಂದ ನೋಡುವವರು ನಾಸ್ತಿಕಳೆಂದು ತಿಳಿಯಬಹುದು. ಕಾರಣ ಅವರ ನಂಬಿಕೆಗೂ ನನ್ನ ನಂಬಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ನನ್ನ ದೇವರಿಗೊಂದು ಹೆಸರಿರಬೇಕು ಎಂದು ನಾನು ಬಯಸುವುದಿಲ್ಲ. ನನ್ನ ದೇವರಿಗೆ ಜಾತಿ, ಧರ್ಮದ ಹಂಗಿಲ್ಲ. ಅದೊಂದು ಶಕ್ತಿ, ಅದೊಂದು ಬೆಳಕು… ಹಚ್ಚಿಟ್ಟ ದೀಪದ ಜ್ಯೋತಿಯೇ ದೇವರು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ: ಇವತ್ತಿನ ಸಾಂಸ್ಕೃತಿಕ ಪ್ರಪಂಚ ಜಾಗತಿಕ ಮಟ್ಟದಲ್ಲಿ ವೈವೀಧ್ಯಮಯ ಅವಕಾಶಗಳನ್ನು ನಮಗೆ ಮಾಡಿಕೊಡುತ್ತಿದೆ. ಇವತ್ತು ಬರಹಗಾರನಿಗೆ ಸಾಕಷ್ಟು ಸ್ಪೂರ್ತಿ ಇದೆ ಬರೆಯಲಿಕ್ಕೆ. ಯಾವುದೇ ಒತ್ತಡವಿಲ್ಲ. ಆದರೆ ಆಧುನಿಕತೆಯ ವೇಗ ಅವನಲ್ಲಿ ವಿಚಿತ್ರ ಧಾವಂತವನ್ನು ಸೃಷ್ಟಿಸುತ್ತಿದೆ. ಎಲ್ಲವೂ ಇನ್ಸ್ಟಂಟ್ ಆಗುತ್ತಿರುವ ಈ ಹೊತ್ತಿನಲ್ಲಿ ಇನ್ಸ್ಟಂಟ್ ಹೆಸರು, ಪ್ರಸಿದ್ಧಿ, ಗುರುತಿಗಾಗಿ ಅರೆಬೆಂದ ಪದಾರ್ಥವನ್ನು ಬಡಿಸುವ ತರಾತುರಿಯೂ ಬೆಳೆಯುತ್ತಿದೆ. ಸ್ವಾರ್ಥ, ಅಸಹನೆ, ಮೇಲರಿಮೆ, ಕೀಳರಿಮೆ… ಮುಂತಾದ ಕಾರಣಕ್ಕೆ ತಮ್ಮ ಜಾಗಟೆಯನ್ನು ತಾವೇ ಹೊಡೆದುಕೊಳ್ಳುವುದು ಹೆಚ್ಚಾಗುತ್ತಿದೆ. ಅದರಿಂದ ಪಾರಾಗಿ ಬರೆಯಬೇಕಾಗಿರುವುದು ಸಧ್ಯದ ತುರ್ತು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ: ಸಾಂಸ್ಕೃತಿಕ ಕ್ಷೇತ್ರದ ಒಳಗಿನ ರಾಜಕಾರಣ ಭಯ ಹುಟ್ಟಿಸುತ್ತದೆ. ಅರಣ್ಯದ ಯಾವ ಮರವೂ ಒಂದನ್ನೊಂದು ತುಳಿದು ಬೆಳೆಯುವುದಿಲ್ಲ. ಅಲ್ಲಿ ಒಂದು ಸಣ್ಣ ಪೊದೆ ಹೇಗೆ ಸ್ವತಂತ್ರವಾಗಿ ಹಬ್ಬಿ ಬೆಳೆಯುತ್ತದೋ ಹಾಗೆಯೇ ತೇಗ, ಹೊನ್ನೆ, ದೇವದಾರುವಿನಂತಹ ಮರಗಳೂ ಬೆಳೆಯುತ್ತವೆ. ಅಲ್ಲಿನ ಪ್ರತಿಯೊಂದು ಪ್ರಾಣಿಯೂ ಸ್ವಾಭಾವಿಕ ಆಹಾರ ಸರಪಣಿಯನ್ನು ಅನುಸರಿಸಿ ತಮ್ಮ ಬದುಕನ್ನು ತಾವು ಸಾಗಿಸುತ್ತವೆ. ಹಾಗೆ ಬೆಳೆಯಬೇಕು ನಾವು. ಆದರೆ ಇಲ್ಲಿ ಹಾಗಾಗುವುದಿಲ್ಲ. ನಕಾರಾತ್ಮಕ ಬಾಹ್ಯ ಪ್ರೇರಣೆಗಳು, ಪ್ರಭಾವಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ. ಅವುಗಳಿಂದ ಪಾರಾಗಿ ಬರಹವನ್ನು ಮಾಡಬೇಕಾದ ಸವಾಲು ನಮ್ಮ ಮುಂದಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ: ಸಧ್ಯದ ಕರೋನಾ ಪರಿಸ್ಥಿತಿಯಲ್ಲಿ ಯಾವುದನ್ನೂ ಅರ್ಥೈಸುವುದು, ನಿರ್ಧರಿಸುವುದು ಅಷ್ಟು ಸುಲಭವಿಲ್ಲ. ಆದರೂ ವಿಶ್ವದ ಮುಂದೆ ಭಾರತದ ಚಲನೆ ಆಶಾದಾಯಕವೆನಿಸುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ: ಖಂಡಿತ ನನಗೆ ಕನಸುಗಳಿಲ್ಲ. ಬರೆಯುವುದು ನನ್ನ ಜರೂರತ್ತು. ಯಾರನ್ನೂ ಮೆಚ್ಚಿಸಲಿಕ್ಕಲ್ಲ. ಯಾರಾದರೂ ಹೊಗಳಿದರೆ ನನಗೆ ವಿಪರೀತ ಮುಜುಗರವಾಗುತ್ತದೆ. ಇನ್ನೊಂದೇ ಒಂದು ಮಾತನ್ನೂ ಕೇಳಿಸಿಕೊಳ್ಳಲು ಸಾಧ್ಯವಿಲ್ಲ ನನ್ನಿಂದ ಎನ್ನಿಸುವಷ್ಟು. ನಾನು ನನ್ನ ತುಡಿತ, ತುಮುಲ, ಒಳ ಒತ್ತಡವನ್ನ ತಡೆಯಲಾಗದೆ ಬರೆದದ್ದನ್ನು ಸೌಜನ್ಯದಿಂದ ಓದಿ ಪ್ರೀತಿಸುವವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿರುತ್ತದೆ. ಅವರು ನಿಜವಾಗಲೂ ಹೊಗಳಿಕೆಗೆ ಅರ್ಹರು. ಇನ್ನು ಇದುವರೆಗೂ ನಾನೇನು ಬರೆದಿರುವೆನೋ ಅದೆಲ್ಲ ನಾನು ಕನಸುಕಟ್ಟಿ ಬರೆದದ್ದಲ್ಲ. ಹಾಗಾಗಿ ಇನ್ನು ಮುಂದೆಯೂ ಅದು ಹಾಗೇ ನಡೆದುಕೊಂಡು ಹೋಗುತ್ತದೆ. ನನಗೆ ನಿರೀಕ್ಷೆಗಳು ಕಡಿಮೆ. ಹಾಗಾಗಿ ನೋವೂ ಕಡಿಮೆ. ಯಾರಾದರೂ ನ್ಯಾಯವಾಗಿ ಟೀಕಿಸಿದರೆ ಖುಷಿಯಾಗುತ್ತದೆ. ಮತ್ತು ಅನಗತ್ಯ ಟೀಕೆಗಳನ್ನು ತಳ್ಳಿಹಾಕಿ ಮುನ್ನಡೆಯುವುದೂ ಗೊತ್ತು. ನೆನ್ನೆ ನಾಳೆಗಳಿಗಿಂತ ವರ್ತಮಾನದಲ್ಲಿ ಬದುಕುವವಳು ನಾನು. ಈ ಕ್ಷಣ ನಾನೇನು ಮಾಡುತ್ತಿರುತ್ತೇನೋ ಅದನ್ನು ನೂರು ಪ್ರತಿಶತ ನನ್ನ ಸಾಮರ್ಥ್ಯ ಸುರಿದು ಚೊಕ್ಕವಾಗಿ ಮಾಡಿ ಮುಗಿಸಬೇಕು, ಅಷ್ಟೇ ನನ್ನ ಗುರಿಯಾಗಿರುತ್ತದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಉತ್ತರ: ಒಬ್ಬರೇ ಅಂತ ಹೇಳುವುದು ಕಷ್ಟ. ಬಹಳಷ್ಟು ಮಂದಿ ಇದ್ದಾರೆ. ಓ.ಹೆನ್ರಿ, ಎಮಿಲಿ ಡಿಕಿನ್ಸನ್, ಶೇಕ್ಸ್‌ಪಿಯರ್, ವಿಲಿಯಮ್ ಬ್ಲೇಕ್, ಕೀಟ್ಸ್, ಮಾಯಾ ಏಂಜೆಲೋ… ಮುಂತಾದವರು. ಮತ್ತೆ ಭಾರತೀಯ ಇಂಗ್ಲೀಷ್ ಬರಹಗಾರರಲ್ಲಿ ಅರವಿಂದ್ ಅಡಿಗ, ಚೇತನ್ ಭಗತ್, ಕಮಲಾದಾಸ್, ಎ.ಕೆ.ರಾಮಾನುಜನ್, ರಸ್ಕಿನ್ ಬಾಂಡ್… ಮತ್ತು ಹೆಸರಿಸಲಾದಷ್ಟು ಮಂದಿ ಒಂದೇ ಒಂದು ಕವಿತೆ, ಒಂದೇ ಒಂದು ಕತೆ ಅಥವಾ ಒಂದೇ ಒಂದು ಬರಹವಾಗಿ ನನ್ನ ಓದಿಗೆ ದಕ್ಕಿ ನನ್ನ ಅರಿವನ್ನು ವಿಸ್ತರಿಸಿರುತ್ತಾರೆ. ಅವರೆಲ್ಲರೂ ನನಗೆ ಇಷ್ಟವೇ. ಮತ್ತೆ ಕನ್ನಡದಲ್ಲಿ ನನ್ನನ್ನು ಬಹಳ ಕಾಡಿದವರೆಂದರೆ ಕುವೆಂಪು ತೇಜಸ್ವಿ, ಅನಂತಮೂರ್ತಿ, ಕುಂ. ವೀರಭದ್ರಪ್ಪ, ಜಯಂತ್ ಕಾಯ್ಕಿಣಿ….. ಇವರೆಲ್ಲ ಈಗಲೂ ನನ್ನನ್ನು ಕಾಡುವವರೇ. ಇತ್ತೀಚೆಗೆ ಬರೆಯುತ್ತಿರುವ ಬಹಳಷ್ಟು ಮಂದಿ ಬರಹಗಾರರು ತಮ್ಮ ಗಟ್ಟಿ ಬರಹದಿಂದಾಗಿ ನನಗೆ ಬಹಳ ಇಷ್ಟ. ಈಚೆಗೆ ಓದಿದ ಕೃತಿಗಳಾವವು? ಉತ್ತರ: ಇತ್ತೀಚೆಗೆ ಆಲ್ಕೆಮಿಸ್ಟ್ (poulo coelho) ಓದಿದೆ. ಬಹಳ ಇಷ್ಟವಾಯ್ತು. ಈ ಕಾದಂಬರಿಯ ಮೊದಲಲ್ಲಿ ಒಂದು ಸಣ್ಣ ಕತೆ ಬರುತ್ತದೆ. ಅಲ್ಲೊಬ್ಬ ಸಣ್ಣ ವಯಸ್ಸಿನ ಹುಡುಗನಿರುತ್ತಾನೆ. ಅವನು ಬಹಳ ಸುಂದರವಾಗಿರುತ್ತಾನೆ. ಪ್ರತಿನಿತ್ಯ ಅವನೊಂದು ತಿಳಿಗೊಳಕ್ಕೆ ಬರುತ್ತಿರುತ್ತಾನೆ. ಅದರಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಖುಷಿಪಡುತ್ತಿರುತ್ತಾನೆ. ಆದರೆ ಅದೊಂದು ದಿನ ಅವ ಅದೇ ಕೊಳದಲ್ಲಿ ಜಾರಿ ಬಿದ್ದು ಸತ್ತು ಹೋಗುತ್ತಾನೆ. ಕೊಳ ದುಃಖಿತವಾಗುತ್ತದೆ. ಅವನು ಬಿದ್ದ ಜಾಗದಲ್ಲಿ ಸುಂದರವಾದ ಕಮಲವೊಂದು ಹುಟ್ಟಿ ಅರಳುತ್ತದೆ. ಒಮ್ಮೆ ಅತ್ತ ಹೋಗುತ್ತಿದ್ದ ದೇವತೆಗಳು ಕೊಳವನ್ನು ಕೇಳುತ್ತಾರೆ, “ನಿನಗೀಗ ದುಃಖವಾಗುತ್ತಿರಬಹುದಲ್ಲವಾ, ಅವ ಅದೆಷ್ಟು ಸುಂದರವಾಗಿದ್ದ, ಪ್ರತಿನಿತ್ಯ ನಿನ್ನ ಸಮತಲದ ಮೇಲೆ ಬಹಳ ಹತ್ತಿರದಿಂದ ತನ್ನ ಮುಖದ ಪ್ರತಿಬಿಂಬವನ್ನು ನೋಡಿಕೊಂಡು ಆನಂದಿಸುತ್ತಿದ್ದ ” ಎಂದು ಕೇಳುತ್ತಾರೆ. ಆಗ ಕೊಳ “ಹುಡುಗ ಸುಂದರನಿದ್ದನಾ? ನಿಜಕ್ಕೂ ನನಗೆ ಗೊತ್ತಿಲ್ಲ. ಅವನು ಪ್ರತಿಬಾರಿ ಕಣ್ಣರಳಿಸಿ ಬಹಳ ಹತ್ತಿರದಿಂದ ನನ್ನನ್ನು ನೋಡುವಾಗ ನಾನು ಅವನ ಕಣ್ಣಲ್ಲಿ ನನ್ನದೇ ಸೌಂದರ್ಯವನ್ನು ಕಂಡು ಬೆರಗಾಗುತ್ತಿದ್ದೆ. ಈಗ ಅದು ಸಾಧ್ಯವಾಗುತ್ತಿಲ್ಲ, ಅದು ನನ್ನ ನೋವು” ಎನ್ನುತ್ತದೆ. ಈ ಕತೆ ಅದೆಷ್ಟು ನನ್ನನ್ನು ಕಾಡಿತೆಂದರೆ, ಹೌದಲ್ಲವಾ ನಾವು ಯಾವ ಮಟ್ಟಿಗೆ ತಯಾರಾಗಿದ್ದೇವೆ ಎಂದರೆ ನಮಗೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಬೇಕಾಗೂ ಇಲ್ಲ. ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ: ಹಾಡುವುದು, ಬಣ್ಣಗಳ ಜೊತೆ ಆಟ ಆಡುವುದು, ಚಿತ್ರ ಬರೆಯುವುದು, ಕ್ರಾಫ್ಟ್ ಮಾಡುವುದು, ಸುಮ್ಮನೆ ಗೊತ್ತು ಗುರಿ ಇಲ್ಲದೇ ಓದುತ್ತಾ ಕೂರುವುದು, ಮಕ್ಕಳೊಂದಿಗೆ ಬೆರೆಯುವುದು, ಅವರಿಗೆ ಏನಾದರೂ ಕಲಿಸುವುದು, ಅವರಲ್ಲಿ ಸ್ಪೂರ್ತಿ ತುಂಬುವುದು…. ಹೀಗೆ ಒಟ್ಟಿನಲ್ಲಿ ಸುಮ್ಮನೆ ಕೂರಲಿಕ್ಕಂತೂ ನನಗೆ ಸಾಧ್ಯವಿಲ್ಲ. ಏನಾದರೂ ಸರಿ ಮಾಡುತ್ತಲೇ ಇರಬೇಕು ನಾನು. ಜೊತೆಗೆ ಕೌಟುಂಬಿಕ ಜವಾಬ್ದಾರಿಗಳಂತೂ ಇದ್ದೇ ಇರುತ್ತವೆ. ನಿಮಗೆ ಇಷ್ಟವಾದ ಸ್ಥಳ ಯಾವುದು ? ಉತ್ತರ: ಸಮುದ್ರ ತೀರ ಮತ್ತು ದಟ್ಟ ಕಾಡು. ನಾನು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಂದಿನ ಟ್ರಿಪ್ಪುಗಳಲ್ಲಿ ಬಹಳಷ್ಟು

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಅಲೆಯ ಮೊರೆತ ಅಲೆಯ ಮೊರೆತ( ಕಾದಂಬರಿ)ತಮಿಳು ಮೂಲ : ಕಲ್ಕಿಅನುವಾದ : ಶಶಿಕಲಾ ರಾಜಪ್ರ : ಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೪೨೦ಪುಟಗಳು : ೬೯೨ ವಾಸ್ತವವಾದಿ ಶೈಲಿಯಲ್ಲಿರುವ ಈ ಕಾದಂಬರಿಯು ಒಂದು ಕಾಲ್ಪನಿಕ ಕಥೆಯನ್ನು ವಸ್ತುವಾಗಿ ಹೊಂದಿದ್ದರೂ  ಭಾರತಕ್ಕೆ ಸ್ವಾತಂತ್ರ್ಯ   ಸಿಗುವ ಮೊದಲು ನಡೆದ ಎಲ್ಲ ಸಂಗತಿಗಳನ್ನೂ ಐತಿಹಾಸಿಕ ಸತ್ಯಗಳೊಂದಿಗೆ ಯಥಾವತ್ತಾಗಿ ನಿರೂಪಿಸುತ್ತದೆ.         ಪಟ್ಟಾಮಣಿಯಮ್ ಕಿಟ್ಟಾವಯ್ಯರ್, ಸರಸ್ವತಿ ಅಮ್ಮಾಳ್, ಪದ್ಮಾಚಲ ಶಾಸ್ತಿç ಅಯ್ಯರ್, ಕಾಮಾಕ್ಷಿ ಅಮ್ಮಾಳ್, ದೊರೆಸ್ವಾಮಿ ಅಯ್ಯರ್, ರಾಜಮ್ಮ, ಲಲಿತಾ, ಸೀತಾ, ಸೌಂದರ್ ರಾಜನ್, ಸೂರ್ಯ, ಪಟ್ಟಾಭಿರಾಮನ್, ಧಾರಿಣಿ, ಅಮರನಾಥ, ಚಿತ್ರಾ ಮೊದಲಾದವು ಇಲ್ಲಿ ಎದ್ದು ಕಾಣುವ ಪಾತ್ರಗಳು. ಇವರೆಲ್ಲರ ವೈಯಕ್ತಿಕ ಹಾಗೂ  ಕೌಟುಂಬಿಕ ಬದುಕಿನ ವಿವರಗಳು , ಗ್ರಾಮೀಣ ಹಾಗೂ ನಗರ ಬದುಕಿನ  ಚಿತ್ರಗಳು, ಸ್ವಾತಂತ್ರ್ಯ  ಹೋರಾಟ, ಬಿಳಿಯರ ಸರಕಾರದ ಆಡಳಿತ ವೃತ್ತಾಂತಗಳು, ಕಾಂಗ್ರೆಸ್ ಮತ್ತು ಸೋಷಲಿಸ್ಟ್  ಸಂಘಟನೆಗಳು ನಡೆಸಿದ ಹೋರಾಟದ ಚಿತ್ರಗಳು ಇಲ್ಲಿವೆ.  ಸರಕಾರದ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವ ಕ್ರಾಂತಿವೀರ ಯುವಕರು ರಹಸ್ಯವಾಗಿ ನಡೆಸುವ ಸಿದ್ಧತೆಗಳು, ಅವರನ್ನು ಬಂಧಿಸಲು ಪೋಲಿಸರು ನಡೆಸುವ ಪ್ರಯತ್ನಗಳು,  ಬಂಧನ, ಜೈಲುವಾಸ, ಕೈದಿಗಳು ತಪ್ಪಿಸಿಕೊಳ್ಳಲು ಮಾಡುವ ಒದ್ದಾಟಗಳ ಚಿತ್ರಣಗಳಿವೆ.  ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಸ್ಥಾನೀಯ ರಾಜರುಗಳು ತಮ್ಮ ತಮ್ಮೊಳಗೆ ಕಾದಾಡಿ ಹೊರಗಿನಿಂದ ಮುಸಲ್ಮಾನರೂ ಆಂಗ್ಲರೂ ಬಂದು ಇಲ್ಲಿ ನೆಲೆಯೂರಲು ಕಾರಣರಾದದ್ದು ಹೇಗೆ ಎಂಬ ಬಗ್ಗೆ ಚರ್ಚೆಗಳಿವೆ.  ಮುಸಲ್ಮಾನರ ಆಕ್ರಮಣ, ಆಡಳಿತ ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳನ್ನು ನಾಶ ಮಾಡಿ ಅವರು ಮಸೀದಿಗಳನ್ನು ಸ್ಥಾಪಿಸಿದ್ದು, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ ಅವರನ್ನು ತಮ್ಮ ಜನಾನಾದಲ್ಲಿರಿಸಿಕೊಂಡದ್ದು, ಬಲಾತ್ಕಾರವಾಗಿ ಮತಾಂತರಗೊಳಿಸಿದ ವಿವರಗಳಿವೆ.  ಇವೆಲ್ಲದರ ಜತೆಗೆ ಬ್ರಿಟಿಷರ ದಾಸ್ಯದಿಂದ ಭಾರತವನ್ನು ಬಂಧಮುಕ್ತಗೊಳಿಸಲು ಉಪವಾಸ ಸತ್ಯಾಗ್ರಹ-ಅಹಿಂಸಾ ವ್ರತಗಳ ಮೂಲಕ ಹೋರಾಟ ನಡೆಸಿದ ಗಾಂಧೀಜಿಯವರ ಬಗ್ಗೆ ಇಲ್ಲಿ ಕೆಲವು ಪಾತ್ರಗಳಿಗೆ ಅಪಾರವಾದ ಭಕ್ತ-ಗೌರವಗಳಿದ್ದರೆ ಇನ್ನು ಕೆಲವು ಪಾತ್ರಗಳಿಗೆ ಅವರಿಂದಾಗಿಯೇ ಭಾರತವು ಎರಡು ಹೋಳಾಗಿ ಬಿಟ್ಟಿತು ಎಂಬ ಅಸಮಾಧಾನ ವ್ಯಕ್ತವಾಗಿದೆ.  ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ  ಮುಸಲ್ಮಾನರು ಪ್ರತ್ಯೇಕ ರಾಜ್ಯ ಬೇಕೆಂದು ಕೂಗಿದಾಗ  ಗಾಂಧೀಜಿಯವರು ಅವರನ್ನು ತಡೆಯಲಿಲ್ಲ, ಮತ್ತು ಪಾಕಿಸ್ತಾನದಲ್ಲಿ  ಹಿಂದೂಗಳ ಮೇಲೆ ದೌರ್ಜನ್ಯ ನಡೆದು ಲಕ್ಷ ಲಕ್ಷ ಮಂದಿ ಸಾವಿಗೀಡಾದಾಗ  ಗಾಂಧೀಜಿಯವರು ದೆಹಲಿಯಲ್ಲಿ ಪ್ರೇಮ ಬೋಧನೆ ಮಾಡುತ್ತಿದ್ದರು, ದೆಹಲಿಯಲ್ಲಿದ್ದ ಎಲ್ಲ ಹಿಂದೂ ದೇವಾಲಯಗಳನ್ನು ಮುಸಲ್ಮಾನರು ನಾಶಪಡಿಸಿ ಮಸೀದಿ ಕಟ್ಟಿಸಿದ್ದು ನಿಜವೆಂದು ಗೊತ್ತಿದ್ದರೂ ಹಿಂದೂ ನಿರಾಶ್ರಿತರು ದೆಹಲಿಯ ಮಸೀದಿಗಳಲ್ಲಿ ತಾತ್ಕಾಲಿಕ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದಾಗ  ಅವರು ಅದನ್ನು ತಡೆದರು- ಇತ್ಯಾದಿ ಆರೋಪಗಳಿವೆ.     ೬೯೦ ಪುಟಗಳಿರುವ ಈ ಬೃಹತ್ ಕಾದಂಬರಿಯ ಕನ್ನಡ ಅನುವಾದ ಬಹಳ ಸೊಗಸಾಗಿ ಬಂದಿದೆ. ತಮಿಳು ಭಾಷೆಯ ಕೆಲವು ಪದಗಳನ್ನು ಹಾಗೆಯೇ ಉಳಿಸಿಕೊಂಡು ಅವಕ್ಕೆ ಅಡಿ ಟಿಪ್ಪಣಿ ಕೊಟ್ಟದ್ದು ಕನ್ನಡದ ಓದುಗರಿಗೆ ತಮಿಳು ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವಲ್ಲಿ  ಉಪಯುಕ್ತವಾಗಿದೆ.  ತಮಿಳಿನ ಕೆಲವು ಗಾದೆ ಮಾತು- ನುಡಿಕಟ್ಟುಗಳಿಗೆ ಸಮಾನಾರ್ಥಕವಾದ ಅಭಿವ್ಯಕ್ತಿಗಳು ಕನ್ನಡದಲ್ಲಿ ಇಲ್ಲದಿದ್ದರೂ ಅವುಗಳನ್ನು ಅಷ್ಟೇ ಪ್ರಾಸಬದ್ಧವಾಗಿ ರಚಿಸಿ ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದು ಸ್ವಾಗತಾರ್ಹ. ಒಟ್ಟಿನಲ್ಲಿ ಇದು ಬಹಳ ಸೃಜನಶೀಲ ಅನುವಾದ. ********************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ-14 `ಸಣ್ಣ’ಸಂಗತಿ ನರಸಿಂಹಸ್ವಾಮಿಯವರ ಪುಟ್ಟ ಕವಿತೆಯೊಂದಿದೆ-ಹೆಸರು `ಸಣ್ಣಸಂಗತಿ’. ಅದು ಸಾಹಿತ್ಯ ವಿಮರ್ಶೆಯಲ್ಲಿ ಶ್ರೇಷ್ಠ ಕವನವೆಂದೇನೂ ಚರ್ಚೆಗೊಳಗಾಗಿಲ್ಲ. ಆದರೆ ಮತ್ತೆಮತ್ತೆ ಕಾಡುತ್ತದೆ. ಅದರ ವಸ್ತು ತಾಯೊಬ್ಬಳ ದುಡಿತ. ಅಲ್ಲೊಂದು ಸನ್ನಿವೇಶವಿದೆ: ನಡುರಾತ್ರಿ. ಕುಟುಂಬದ ಸಮಸ್ತ ಸದಸ್ಯರೂ ಗಾಢನಿದ್ದೆಯಲ್ಲಿದ್ದಾರೆ. ಅವರಲ್ಲಿ ಎಳೆಗೂಸಿನ ತಾಯಿಯೂ ಸೇರಿದ್ದಾಳೆ. ಆಕೆಯ ಮಂಚದ ಪಕ್ಕದಲ್ಲಿರುವ ತೊಟ್ಟಿಲಲ್ಲಿ ಕೂಸಿದೆ. ಅದು ಗಾಳಿಯಲ್ಲಿ ಕಾಲು ಅಲುಗಿಸುತ್ತ ಹೊದಿಕೆಯನ್ನು ಕಿತ್ತೆಸೆಯುತ್ತಿದೆ. ಎಲ್ಲರಂತೆ ಆಕೆಯೂ ನಿದ್ದೆಯಲ್ಲಿ ಮುಳುಗಿರುವಳು. ಆದರೆ ಅವಳ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುತ್ತಿದೆ. `ನಿದ್ದೆ ಎಚ್ಚರಗಳಲಿ ಪೊರೆವ ಕೈ’ಯನ್ನು ತನ್ನ ಕಂದನಿಗಾಗಿ ದುಡಿಯಲು ಬಿಟ್ಟಿರುವ ಈ ತಾಯ್‍ದುಡಿತದ ಪ್ರೇರಣೆ ಯಾವುದು? ಲೋಕದ ಸಮಸ್ತ ತಾಯಂದಿರಲ್ಲೂ ಯುಗಾಂತರಗಳಿಂದ ಸಂತಾನ ಕಾಪಿಡಲು ನಿರತವಾಗಿರುವ ಸುಪ್ತ ಕಾಳಜಿಯೇ? ಲೋಕದಲ್ಲಿ ಸಂಭವಿಸುವ ಯುದ್ಧ, ಪ್ರವಾಹ, ಭೂಕಂಪ, ವಿಮಾನಾಪಘಾತ, ರಾಜಕೀಯ ಬದಲಾವಣೆ, ಸುನಾಮಿ ಮುಂತಾದ ನಿಸರ್ಗಕೃತ ಹಾಗೂ ಮಾನವ ನಿರ್ಮಿತ ವಿದ್ಯಮಾನಗಳನ್ನೆಲ್ಲ `ಬೃಹತ್’ ಎನ್ನುವುದಾದರೆ, ಅವುಗಳ ಮುಂದೆ ಈ ಸಂಗತಿ `ಸಣ್ಣ’ದು. ಆದರೆ ನಿಜವಾಗಿ ಸಣ್ಣದೇ? ಇದು ಕವಿತೆ ಹುಟ್ಟಿಸುತ್ತಿರುವ ಬೆರಗು ಮತ್ತು ಪ್ರಶ್ನೆ. ಇಂತಹ `ಸಣ್ಣ’ಸಂಗತಿಗಳನ್ನು ಗಮನಿಸಲಾಗದೆ ಹುಟ್ಟಿರುವ ದೊಡ್ಡ ಬರೆಹಗಳು ಲೋಕದಲ್ಲಿ ಬಹುಶಃ ಇಲ್ಲ. ಟಾಲ್‍ಸ್ಟಾಯ್, ಕುವೆಂಪು, ವೈಕಂ, ಪ್ರೇಮಚಂದ್, ದೇವನೂರ ಇವರ ಬರೆಹ ಶ್ರೇಷ್ಠ ಮತ್ತು ಮಾನವೀಯ ಆಗಿರುವುದು ಇಂತಹ `ಕಿರು’ ಸಂಗತಿಗಳನ್ನು ಒಳಗೊಳ್ಳುವುದರಿಂದ; ಓದುಗರ ಸಂವೇದನೆಯನ್ನು ಸೂಕ್ಷ್ಮವಾಗಿಸುವ ಪರಿಯಿಂದ.`ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದಲ್ಲಿ ಬರುವ ಪ್ರಸ್ತಾವನ ರೂಪದ ಹೇಳಿಕೆ ನೆನಪಾಗುತ್ತಿದೆ: `ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ; ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ’. ಇದು ಲೋಕದ ಸಮಸ್ತವನ್ನು ಹಿರಿದು ಕಿರಿದೆನ್ನದೆ ಸಮಾನ ಮಹತ್ವದಿಂದ ನೋಡುವ ತತ್ವ; ಇನ್ನೊಂದು ಬಗೆಯಲ್ಲಿ ಸಮಾಜವಾದಿ ದರ್ಶನ ಕೂಡ. ಅಂತಸ್ತು ಅಧಿಕಾರ ಜಾತಿ ಸಂಪತ್ತು ಇತ್ಯಾದಿ ಕಾರಣಗಳಿಂದ ಕೆಲವರನ್ನು ಗಣ್ಯರೆಂದೂ ಕೆಲವರನ್ನು ಸಣ್ಣವರೆಂದೂ ತಾರತಮ್ಯ ಮಾಡುವ ಮನೋಭಾವ ಸಮಾಜದಲ್ಲಿದೆ. ಈ ಮನೋಭಾವಕ್ಕೆ ಕೆಲವು ಸಂಗತಿ `ದೊಡ್ಡ’ `ಮಹತ್ವ’ ಅನಿಸಿದರೆ, ಕೆಲವು `ಸಣ್ಣ’ `ಕ್ಷುದ್ರ’ ಎನಿಸುತ್ತವೆ. ಈ ತಾರತಮ್ಯವನ್ನು ಮೀರಿ ಲೋಕವನ್ನು ಗ್ರಹಿಸಲು ಸಾಧ್ಯವಾದರೆ, ಹೊಸನೋಟಗಳು ಕಾಣಬಹುದು. ಲೋಕವು ತನ್ನ ಪ್ರತಿಷ್ಠಿತ ಧೋರಣೆಯಿಂದ ನೋಡಲು ನಿರಾಕರಿಸಿದ, ನೂರಾರು ಜೀವಂತ ಸನ್ನಿವೇಶಗಳು ಗೋಚರಿಸಬಹುದು. ಆಗ ಅವನ್ನು ಪ್ರೀತಿ ಅಚ್ಚರಿ ಕುತೂಹಲಗಳಿಂದ ನೋಡುತ್ತ ಅಲ್ಲಿರುವ ಚೈತನ್ಯ ಗುರುತಿಸಲು ಸಾಧ್ಯವಾಗುತ್ತದೆ. ಅವು ನಮ್ಮ ಅರಿವು ಮತ್ತು ಸಂವೇದನೆಗಳನ್ನು ನಮಗೆ ಅರಿವಿಲ್ಲದೆಯೇ ಬದಲಿಸಬಲ್ಲವು. ಕುವೆಂಪು ದೊರೆ ರಾಮನ ಮೇಲೆ `ಮಹಾಕಾವ್ಯ’ ಬರೆದರು. ಈ ಬಗ್ಗೆ ಅವರಿಗೆ ಸ್ವಯಂ ಅಭಿಮಾನವಿತ್ತು. ಆದರೆ ವಾಸ್ತವವಾಗಿ ಅವರು ನಮ್ಮ ಮಹತ್ವದ ಲೇಖಕರಾಗಿರುವುದು `ಸಾಮಾನ್ಯ’ರೆಂದು ಕರೆಯುವ, ಚರಿತ್ರೆಯಿಲ್ಲದ ಮನುಷ್ಯರನ್ನು ಕುರಿತು ಬರೆದ ಪರ್ಯಾಯ ಚರಿತ್ರೆಯಿಂದ; ಗೊಬ್ಬರ ಪುಟ್ಟಹಕ್ಕಿ ಹೀರೇಹೂವು ಇತ್ಯಾದಿ ವಸ್ತುಗಳ ಮೇಲೆ ಬರೆದ ಕವಿತೆಗಳಿಂದ. ಮಲತಾಯಿಯ ಕಾಟಕ್ಕೆ ಸಿಲುಕಿದ ಪುಟ್ಟ ಹುಡುಗಿ, ಮನೆಗೆ ಬಾರದ ದನ ಹುಡುಕುತ್ತ ಕತ್ತಲಲ್ಲಿ ಹೋಗಿ ಸಂಕಟಪಡುವ `ನಾಗಿ’ ಕವನವನ್ನು ಓದುವಾಗ, ಈಗಲೂ ನನ್ನ ಕಣ್ಣಂಚಿಗೆ ನೀರು ಬಂದು ನಿಲ್ಲುತ್ತವೆ. ನಾಯಿ ಕೋಳಿ ಮಕ್ಕಳು ಹೆಂಗಸರು ದಲಿತರು ಅವರ ಗದ್ಯಕಥನದ ಪ್ರಮುಖ ಪಾತ್ರಗಳು; ಹೆಚ್ಚಿನವರು `ಯಾರೂ ಅರಿಯದ ವೀರ’ರು. ಇದು ಅವರ ಕತೆಯೊಂದರ ಹೆಸರು ಕೂಡ. `ಇಂದಿರಾಬಾಯಿ’ `ಮರಳಿಮಣ್ಣಿಗೆ’ `ಒಡಲಾಳ’ ಇವೆಲ್ಲ ಯಾರೂ ಅರಿಯದ ವೀರರ ಮೇಲೆ ಹುಟ್ಟಿದ ಕಥನಗಳೇ. ಕೆಎಸ್‍ನ ಅವರ ಕವನದ ತಾಯಿ ಕೂಡ ಇಂತಹ ಒಬ್ಬ ವೀರಳೇ. ಲೋಕದೃಷ್ಟಿಯಲ್ಲಿ ಬೃಹತ್ ಮಹತ್ ಎನ್ನಲಾಗುವ ಸಂಗತಿಗಳನ್ನು ಗಮನಿಸುವುದು ದೋಷವಲ್ಲ. ಆದರೆ ಅದೊಂದೇ ನೋಡುಗರ ಚಿಂತನೆಯನ್ನೊ ಸೃಷ್ಟಿಯಾದ ಕಲೆಯನ್ನೊ ಮಹತ್ವಗೊಳಿಸುವುದಿಲ್ಲ; `ಸಾಮಾನ್ಯ’ ಎನಿಸಿಕೊಂಡಿದ್ದನ್ನು ನೋಡುವುದರ, ಅದರ ಬಗ್ಗೆ ಚಿಂತಿಸುವುದರ ಅನುಭವವೇ ಬೇರೆ. `ಭವ್ಯತೆ’ ಪರಿಕಲ್ಪನೆಯ ಮೇಲೆ ಚರ್ಚಿಸುತ್ತ ಚಿಂತಕ ಬ್ರಾಡ್ಲೆ, ಆಗಸಕ್ಕೆ ಚಾಚಿದ ಚರ್ಚಿನ ಶಿಖರ ಮಾತ್ರವಲ್ಲ, ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ತಾಯಿಹಕ್ಕಿ ನಾಯಿಯೊಂದಿಗೆ ಮಾಡುವ ಹೋರಾಟವೂ ಭವ್ಯವೆಂದು ಕರೆಯುತ್ತಾನೆ. ಕನ್ನಡದ ಎಲ್ಲ ಸಂವೇದನಶೀಲ ಲೇಖಕರಿಗೆ ಈ ಸಂಗತಿ ತಿಳಿದಿತ್ತು. ಈ ಸಂಗತಿಯು ಬರೆಹಕ್ಕೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ದಾರ್ಶನಿಕರಿಗೂ ರಾಜಕೀಯ ನಾಯಕರಿಗೂ ಸಂಬಂಧಪಟ್ಟಿದ್ದು. ಬುದ್ಧ ಲೋಕಗುರು ಆಗಿದ್ದು, ಸಾಮ್ರಾಟರ ಜತೆ ಮಾಡಿದ ಸಂವಾದದಿಂದಲ್ಲ. ಮಗುಸತ್ತ ತಾಯೊಬ್ಬಳ ದುಗುಡವನ್ನು ಸಾವಿಲ್ಲದ ಮನೆಯ ಸಾಸಿವೆಯನ್ನು ತರಲು ಹೇಳುವ ಮೂಲಕ; ಚಾಂಡಾಲಕನ್ಯೆಯ ಕೈನೀರನ್ನು ಕುಡಿದೊ ವೇಶ್ಯೆಯೊಬ್ಬಳ ಆತಿಥ್ಯ ಸ್ವೀಕರಿಸಿ ಅವರಲ್ಲಿ ಹೊಸಬಾಳಿನ ಭರವಸೆ ಮೂಡಿಸುವ ಮೂಲಕ. ಅವನು ರೋಗಿ, ಶವ, ಭಿಕ್ಷುಕರನ್ನು ಕಂಡು ಲೋಕದ ದುಃಖಕ್ಕೆ ಪರಿಹಾರ ಕಾಣಲು ಮನೆಬಿಟ್ಟು ಹೋಗಿದ್ದು, ಕಟ್ಟುಕತೆ ಇರಬಹುದು; ಆದರೆ ಇದು ಪರೋಕ್ಷವಾಗಿ ಬುದ್ಧನ ನೋಟದ ವಿಶಿಷ್ಟತೆ ಮತ್ತು ಹೃದಯವಂತಿಕೆಯನ್ನು ಕುರಿತು ಜನರ ಕಲ್ಪನೆಯನ್ನು ಸಹ ಸೂಚಿಸುತ್ತಿದೆ. ಮಹತ್ತೆನ್ನುವುದು ಕಿರಿದುಗಳಿಂದಲೇ ರೂಪುಗೊಳ್ಳುತ್ತದೆ ಎಂಬ ಅರಿವು ಇಲ್ಲಿನದು. ಕೀಳಿಂಗೆ ಹಯನು ಕರೆಯುತ್ತದೆ ಎಂದು ಶರಣರು ರೂಪಕಾತ್ಮಕವಾಗಿ ಇದೇ ತಥ್ಯವನ್ನು ಹೇಳಿದರು. ಗಾಂಧಿಯವರ ನೋಟ ಮತ್ತು ಕ್ರಿಯೆಗಳಲ್ಲೂ ಈ ತಥ್ಯವಿತ್ತು. ಉಪ್ಪು ಚರಕಗಳು ಲೋಕದ ಕಣ್ಣಲ್ಲಿ `ಸಣ್ಣ’ ವಸ್ತುಗಳು. ಆದರೆ ಅವುಗಳ ಮೂಲಕ ದೇಶದಲ್ಲಿ ಹೊಸ ರಾಜಕೀಯ-ಸಾಮಾಜಿಕ ಪ್ರಜ್ಞೆಯನ್ನು ಅವರು ಕಟ್ಟಿದರು; ರಾಜಕಾರಣವನ್ನು ಆಧ್ಯಾತ್ಮೀಕರಿಸಿ ಸಂಚಲನ ಮೂಡಿಸಿದರು. `ಸಣ್ಣ’ ವಿಷಯಗಳಿಗೂ ಗಮನಕೊಡುವ ಅವರ ಗುಣ ಅಟೆನ್‍ಬರೊ ಸಿನಿಮಾದಲ್ಲಿಯೂ ಇದೆ. ಅದು ನೆಹರೂ ಹಾಗೂ ಪಟೇಲರು ರಾಜಕೀಯ ಮಹತ್ವದ ಸಮಸ್ಯೆಯನ್ನು ಚರ್ಚಿಸಲು ಆಶ್ರಮಕ್ಕೆ ಬಂದಿರುವ ಸನ್ನಿವೇಶ. ಗಾಂಧೀಜಿ ಅವರಿಬ್ಬರ ಜತೆ ಮಾಡುತ್ತಿದ್ದ ಚರ್ಚೆಯನ್ನು ತಟ್ಟನೆ ನಿಲ್ಲಿಸಿ, ಮುರಿದ ಕಾಲಿನ ಮೇಕೆಯೊಂದರ ಶುಶ್ರೂಶೆಗೆ ತೊಡಗಿಬಿಡುತ್ತಾರೆ. ಈ ಘಟನೆ ನಾಟಕೀಯವಾಗಿದೆ ಮತ್ತು ಮಾರ್ಮಿಕವಾಗಿದೆ. ನರಸಿಂಹಸ್ವಾಮಿ ಕವನದಲ್ಲಿ ಹಾಲೂಡಿಸುವ ತಾಯಿ ಕೂಸಿನ ಕಾಳಜಿ ಮಾಡಿದರೆ, ಇಲ್ಲಿ ಗಾಂಧಿ ತನಗೆ ಹಾಲೂಡುವ ಪ್ರಾಣಿಯ ಕಾಳಜಿ ಮಾಡುವರು. ದೇಶ ನಡೆಸುವ ಹೊಣೆ ಹೊರಲು ಸಿದ್ಧವಾಗುತ್ತಿರುವ ಇಬ್ಬರು ನಾಯಕರಿಗೆ ದೇಶಕಟ್ಟುವ ಪರಿಯನ್ನು ಈ ಮೂಲಕ ಸೂಚಿಸುವರು. `ಚಿಕ್ಕ’ ಸಂಗತಿಗಳಿಗೆ ಗಮನ ಹರಿಸುವುದು ಡೆಮಾಕ್ರಸಿಯ ತಳತತ್ವವೂ ಹೌದು. ಸ್ಮಾಲ್ `ಬೂಟಿಫುಲ್’ ಮಾತ್ರವಲ್ಲ, ಗ್ರೇಟ್ ಕೂಡ. `ಸಣ್ಣ’ ಶಬ್ದವು ಸಣ್ಣತನದಲ್ಲಿ ನೇತ್ಯಾತ್ಮಕವಾಗಿರಬಹುದು. ಆದರದು ವಿರಾಟ್ ತತ್ವದರ್ಶನದ ಜೀವಾಳ. ನರಸಿಂಹಸ್ವಾಮಿ ಕವನದ ತಾಯ ಚಿತ್ರವು ನನ್ನನ್ನು ಕಾಡುತ್ತಿರಲು ಬಾಲ್ಯದ ನೆನಪುಗಳೂ ಕಾರಣವಿರಬೇಕು. ರಾತ್ರಿ ಊಟದ ಹೊತ್ತಲ್ಲಿ ಅಮ್ಮ ನಮ್ಮನ್ನು ಎದುರು ಕೂರಿಸಿಕೊಂಡು, ಸಂಗೀತಗೋಷ್ಠಿಯಲ್ಲಿ ಕಲಾವಿದನು ಹಲವು ವಾದ್ಯಗಳ ನಡುವೆ ಕೂತಂತೆ ಅಡುಗೆಯ ಪಾತ್ರೆಗಳನ್ನು ಸುತ್ತ ಇಟ್ಟುಕೊಂಡು, ಎಲ್ಲರ ತಟ್ಟೆಗಳ ಮೇಲೆ ಹಕ್ಕಿಗಣ್ಣನ್ನಿಟ್ಟು, ನಮ್ಮ ಹಸಿವು ಇಷ್ಟಾನಿಷ್ಟಗಳನ್ನು ಗಮನಿಸಿ ಬಡಿಸುತ್ತ, ತಾನೂ ಬಡಿಸಿಕೊಂಡು ಉಣ್ಣುತ್ತಿದ್ದಳು. ನಾವೆಲ್ಲ ಮಲಗಿದ ಬಳಿಕವೂ ಎಚ್ಚರವಾಗಿದ್ದು ಹೊದಿಕೆ ಸರಿಪಡಿಸುತ್ತ, ಸರಿದ ದಿಂಬನ್ನು ತಲೆಗೆ ಕೊಡುತ್ತ, ಹೋಗಿಬರುವ ತಿಗಣೆಗಳನ್ನು ಹೊಸಕಿ ಹಾಕುತ್ತ, ನಿಶಾಚರಿಯಂತೆ ವರ್ತಿಸುತ್ತಿದ್ದಳು. ನಿತ್ಯವೂ ಸಂಭವಿಸುತ್ತಿದ್ದ ಈ ಬಡಿಸುವ ಮತ್ತು ಮಲಗಿಸುತ್ತಿದ್ದ ಪರಿ ಎಷ್ಟು ಜೀವಪರವಾಗಿತ್ತು ಎಂದು ಈಗ ಹೊಳೆಯುತ್ತಿದೆ. ಲೋಕದ ಅದೆಷ್ಟು ಮನೆಗಳಲ್ಲಿ ಇಂತಹ ತಾಯ್‍ಜೀವಗಳು ಉಳಿದವರ ಹದುಳಕ್ಕೆ ದುಡಿಯುತ್ತಿವೆಯೊ? ತಾಯ್ತನದ ಈ ಕಾಳಜಿ ತಂದೆ, ಮಡದಿ, ಗಂಡ, ಸ್ನೇಹಿತರು ಕೂಡ ಮಾಡಬಲ್ಲರು. ಲೋಕಚಿಂತಕರ ಇಂತಹದೇ ಕಾಳಜಿ, ಚಿಂತನೆ ಮತ್ತು ಕ್ರಿಯೆಗಳು ಸಮಾಜವನ್ನು ಕಟ್ಟಿವೆ. ಕುದ್ಮಲ್ ರಂಗರಾವ್, ಗೋದಾವರಿ ಪುರುಳೇಕರ್, ಜ್ಯೋತಿಬಾ, ಅಂಬೇಡ್ಕರ್, ಕುವೆಂಪು, ನಾರಾಯಣಗುರು ಇವರು ಸಮಾಜಕ್ಕೆ ನೆಮ್ಮದಿಯ ಬದುಕನ್ನು ರೂಪಿಸಲು ಹೆಣಗಿದವರು. ಅದಕ್ಕಾಗಿ ಲೋಕದಿಂದ ಕಷ್ಟ ಅಪಮಾನ ಎದುರಿಸಿದವರು. ಅವರ ತಾಯ್ತನ ಹೆತ್ತಮ್ಮನಿಗಿಂತ ಹಿರಿದು. ತನ್ನ ಮಕ್ಕಳಿಗೆ ತಾಯಿಯಾಗುವುದಕ್ಕಿಂತ ಲೋಕದ ಮಕ್ಕಳಿಗೆ ತಾಯಿಯಾಗುವುದು `ದೊಡ್ಡ’ ಸಂಗತಿ. ಗಾತ್ರಸೂಚಕವಾದ `ಸಣ್ಣ’ `ದೊಡ್ಡ’ ಎಂಬ ಈ ಎದುರಾಳಿ ಅಂಶಗಳು ಒಂದು ಹಂತದವರೆಗೆ ವಾಸ್ತವ. ಆದರೆ ಸಣ್ಣದು ದೊಡ್ಡದಾಗುವ ದೊಡ್ಡದು ಸಣ್ಣದಾಗುವ, ಎರಡೂ ಸೇರಿ ಮತ್ತೊಂದಾಗುವ ಪ್ರಕ್ರಿಯೆ ಲೋಕದಲ್ಲಿ ನಡೆಯುತ್ತಲೇ ಇರುತ್ತದೆ. ಸಮತೆಯ ದರ್ಶನವುಳ್ಳ ಎಲ್ಲರೂ ತಮ್ಮ ಆಲೋಚನೆ ಮತ್ತು ಕಾರ್ಯದ ಮುಖೇನ ಇದನ್ನು ಕಾಣಿಸುತ್ತ ಬಂದಿದ್ದಾರೆ. ಇಂತಹ ಗಹನ ದರ್ಶನವನ್ನು ನರಸಿಂಹಸ್ವಾಮಿ ಕವನದ ತಾಯಿ ತನ್ನ ಸಹಜ ದೈನಿಕ ಚಟುವಟಿಕೆಯ ಮೂಲಕ ಪ್ರಕಟಿಸುತ್ತಿರುವಳು. ಹೀಗಾಗಿಯೇ ಅವಳ ಹೊದಿಕೆ ಸರಿಪಡಿಸುವಿಕೆ, ಲೌಕಿಕವಾಗಿದ್ದರೂ ಲೋಕೋತ್ತರ ಕಾಯಕವೂ ಆಗಿದೆ. ಈ ಕ್ರಿಯೆ ತನ್ನ ಪ್ರಮಾಣದಲ್ಲಿ ಸಾಮಾನ್ಯ ಎನಿಸುತ್ತಿದ್ದರೂ ಪರಿಣಾಮದಲ್ಲಿ ಅಸಾಮಾನ್ಯ. ಆಗಸದಲ್ಲಿ ರೂಪುಗೊಂಡ ಕಾರ್ಮುಗಿಲು ಮಳೆಸುರಿಸಿ, ಆ ನೀರನ್ನು ನೆಲವು ಕುಡಿದು, ಅದು ಬಿಸಿಲಿಗೆ ಆವಿಯಾಗಿ ಗಾಳಿಯಲ್ಲಿ ಸೇರಿ, ತಂಪುಕ್ಷಣದಲ್ಲಿ ಜಲಬಿಂದುವಾಗಿ ನೆಲಕ್ಕಿಳಿಯುತ್ತದೆ. ನೀರು ಮಾಡುವ ದ್ಯಾವಾಪೃಥಿವಿಯ ಈ ವಿರಾಟ್ ಸಂಚಾರಕಥನವನ್ನು, ಹುಲ್ಲಿನೆಸಳ ತುದಿಯಲ್ಲಿ ವಜ್ರದ ಹರಳಿನಂತೆ ಕೂತಿರುವ ಇಬ್ಬನಿಯ ಪುಟ್ಟಹನಿ ಹೇಳುತ್ತಿರುತ್ತದೆ. ಇದೇನು ಸಣ್ಣ ಸಂಗತಿಯೇ? ********************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಪಡುವಣ ನಾಡಿನ ಪ್ರೇಮವೀರ ಪಡುವಣ ನಾಡಿನ ಪ್ರೇಮವೀರಇಂಗ್ಲಿಷ್ ಮೂಲ : ಜೆ.ಎಂ. ಸಿಂಜ್ ಕನ್ನಡಕ್ಕೆ : ಡಾ.ಬಸವರಾಜ ನಾಯ್ಕರ್ಗೀತಾಂಜಲಿ ಪಬ್ಲಿಕೇಷನ್ಸ್ಪ್ರಕಟಣಾ ವರ್ಷ : ೨೦೦೮ಬೆಲೆ : ರೂ.೧೨೫ಪುಟಗಳು : ೨೪೦ ಐರ್‌ಲ್ಯಾಂಡಿನ ಪ್ರಸಿದ್ಧ ನಾಟಕಕಾರ ಜೆ.ಎಂ.ಸಿಂಜ್‌ನ ಐದು ನಾಟಕಗಳು ಇಲ್ಲಿವೆ. ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದ ಸಿಂಜ್ ತನ್ನ ಬಾಲ್ಯವನ್ನು ದಕ್ಷಿಣ ಡಬ್ಲಿನ್‌ನ ಗುಡ್ಡಗಾಡು ಪ್ರದೇಶದಲ್ಲಿ ಕಳೆದಿದ್ದ. ಆದ್ದರಿಂದಲೇ ನಿಸರ್ಗ ಸೌಂದರ್ಯದ ಬಗ್ಗೆ ಅಪಾರ ಒಲವನ್ನು ಅವನು ಬೆಳೆಸಿಕೊಂಡ. ಅವನ ನಾಟಕಗಳಲ್ಲಿ ಹಳ್ಳಿಯ ಬದುಕಿನ ಸನ್ನಿವೇಶಗಳು ಮತ್ತು ವರ್ಣನೆಗಳು ಯಥೇಚ್ಛವಾಗಿ ಕಾಣ ಸಿಗುತ್ತವೆ.  ಸಿಂಜ್ ಬದುಕಿದ್ದು ಮೂವತ್ತೇಳು ವರ್ಷಗಳ ಕಾಲ ಮಾತ್ರ. ಅದರೊಳಗೆ ಒಟ್ಟು ಆರು ನಾಟಕಗಳನ್ನು ಅವನು ಬರೆದ. ಅವುಗಳಲ್ಲಿ ಐದು ನಾಟಕಗಳು ಐರಿಷ್ ನ್ಯಾಷನಲ್ ಥಿಯೇಟರಿನಲ್ಲಿ ಪ್ರದರ್ಶನಗೊಂಡವು. ಅವು ಶಾಡೋ ಆಫ್ ದ ಗ್ಲೆನ್ , ರೈಡರ‍್ಸ್ ಟು  ದ ಸೀ, ದಿ ವೆಲ್ ಆಫ್ ದಿ ಸೇಂಟ್ಸ್, ದ ಪ್ಲೇಬಾಯ್ ಆಫ್ ದಿ ವೆಸ್ಟೆರ್ನ್ ವರ್ಲ್ಡ್ ಮತ್ತು ದಿ ಡೀಡ್ ಆಫ್ ದಿ ಸಾರೋಜ್. ಈ ಐದೂ ನಾಟಕಗಳನ್ನು ಬಸವರಾಜ ನಾಯ್ಕರ್ ಅವರು ಕನ್ನಡದ ಜಾಯಮಾನಕ್ಕೆ ಹೊಂದಿಕೊಳ್ಳುವಂತೆ  ರೂಪಾಂತರಿಸಿದ್ದಾರೆ.  ದಿ ಶಾಡೋ ಆಫ್ ದಿ ಗ್ಲೆನ್( ಕೊಳ್ಳದ ನೆರಳು) ನಾಟಕವು ಒಂದು ಹಳ್ಳಿಯ ಒಂಟಿ ಮನೆಯಲ್ಲಿ ನಡೆಯುವ ಘಟನೆಯನ್ನು ಚಿತ್ರಿಸುತ್ತದೆ. ಈ ನಾಟಕವು ಸಿಂಜ್‌ನ ಆತ್ಮ ಚರಿತ್ರೆಯಂತಿದೆ. ಸಾವಿನ ಬಗೆಗಿನ ಆತನ ಭಯವನ್ನು ಇದು ಚಿತ್ರಿಸುತ್ತದೆ. ಹೊರನೋಟಕ್ಕೆ ಇದು ಹಾಸ್ಯನಾಟಕದಂತೆ ಕಂಡರೂ ಹೆಣ್ಣಿನ ಮನಸ್ಸನ್ನು ಕಾಡುವ ಅಭದ್ರತೆಯ ಭಾವನೆ ಮತ್ತು ಹೆಣ್ಣು ಸದಾ ಗಂಡಿನ ಮೇಲೆ ಅವಲಂಬಿಸುವ ಹಾಗೂ ಗಂಡು ಅವಳ ಬಗ್ಗೆ ತೋರಿಸುವ ತಾತ್ಸಾರದಿಂದಾಗಿ ಸಂಭವಿಸುವ ದುರಂತಗಳನ್ನು ಅದು  ಚಿತ್ರಿಸುತ್ತದೆ. ‘ರೈಡರ‍್ಸ್ ಟು ದ ಸೀ’( ಸಾವಿನೆಡೆಗೆ ಸವಾರಿ) ನಾಟಕವು ಸಿಂಜ್ ವಾಸಿಸಿದ್ದ ಆರನ್ ಎಂಬ ಹಳ್ಳಿಯ ಹಿನ್ನೆಲೆಯನ್ನು ಹೊಂದಿದೆ. ಅಲ್ಲಿನ ಒಂದು ಕುಟುಂಬದಲ್ಲಿ ಜನಿಸುವ ಎಲ್ಲ ಮಕ್ಕಳೂ ಸಮುದ್ರ ಪಾಲಾಗಿ, ತಾಯಿ ಅನುಭವಿಸುವ ಯಾತನೆಯನ್ನು ಚಿತ್ರಿಸುತ್ತದೆ. ಇಲ್ಲೂ ಸಿಂಜ್‌ನ ಸಾವಿನ ಭಯವೇ ಇದೆ.  ‘ದ ಥಿಂಕರ‍್ಸ್ ವೆಡ್ಡಿಂಗ್ ‘( ಕಲಾಯಿಗಾರನ ಮದುವೆ) ಎನ್ನುವುದು ಒಂದು ವೈನೋದಿಕ. ಇಲ್ಲಿನ ಮುಖ್ಯ ಪಾತ್ರಗಳು ಐರಿಷ್ ಕಲಾಯಿಗಾರರು. ‘ದ ಪ್ಲೇಬಾಯ್ ಆಫ್ ದ ವೆಸ್ಟೆರ್ನ್ ವರ್ಲ್ಡ್’ (ಪಡುವಣ ನಾಡಿನ ಪ್ರೇಮವೀರ) ಬಹಳ ಪ್ರಸಿದ್ಧ ನಾಟಕ.  ಇದು ವೈನೋದಿಕದಂತೆ ಕಂಡರೂ ಒಂದು ದುರಂತ ಕಥೆ. ಕ್ರಿಸ್ತಿ ಮ್ಯಾಹನ್ ಎಂಬ ಯುವಕ ಹೇಳುವ ಸುಳ್ಳುಗಳಿಂದ  ಅವನು ಹೋಗುವ ಸಾರಾಯಿ ಅಂಗಡಿಯ ಮಾಲೀಕ ಫ್ಲಾಹರ್ಟಿಯ ಮಗಳು ಪೆಗೀನ್ ಮೈಕಳನ್ನು ಮದುವೆಯಾಗುವ ಅವಕಾಶವನ್ನು ಅವನು ಕಳೆದುಕೊಳ್ಳುತ್ತಾನೆ. ಕಾನೂನಿನ ಭಯದಿಂದಾಗಿ ಅವನೂ ಊರು ಬಿಟ್ಟು ಹೋದ ನಂತರ ಅವನ ವ್ಯಕ್ತಿತ್ವದ ಪ್ರಭಾವದಿಂದ ಅವನಲ್ಲಿ ಮೋಹಿತಳಾದ ಪೆಗೀನ್ ದುಃಖಿಸುತ್ತಾಳೆ.  ಕೊನೆಯ ನಾಟಕ ‘ದ ವೆಲ್ ಆಫ್ ದ ಸೇಂಟ್ಸ್’ ( ಜೋಗೀಭಾವಿ) ಮೂರು ಅಂಕಗಳಿರುವ ಒಂದು ನಾಟಕ.  ಮಾರ್ಟಿನ್ ಮತ್ತು ಮೇರಿ ಡೌಲ್ ಎಂಬ ಕುರುಡ ದಂಪತಿಗಳು ಸಂತನೊಬ್ಬನ ಸಹಾಯದಿಂದ ದೃಷ್ಟಿ ಪಡೆದುಕೊಂಡರೂ ತಮ್ಮ  ಪ್ರಮಾ ದದಿಂದಾಗಿ ಬದುಕನ್ನು ಹಾಳು ಮಾಡಿಕೊಳ್ಳುವ ಕಥೆ ಇಲ್ಲಿದೆ. ನಾಟಕದ ವಸ್ತುವಿಗೆ ಐರ್‌ಲ್ಯಾಂಡಿನ ಹಿನ್ನೆಲೆಯಿದ್ದರೂ ಇದು ಸಾರ್ವತ್ರಿಕ ಮಹತ್ವ ಪಡೆದಂತಹ ಕತೆ. ಈ ಎಲ್ಲ ನಾಟಕಗಳು ಕಲಬುರ್ಗಿ ಮತ್ತು ಧಾರವಾಡಗಳಲ್ಲಿ ರಂಗದ ಮೇಲೆ ಬಂದಿವೆ ಮತ್ತು ಆಕಾಶವಾಣಿಯಲ್ಲೂ ಪ್ರಸಾರವಾಗಿವೆ. ಅನುಭವಿ ಅನುವಾದಕರು ಮಾತ್ರವಲ್ಲದೆ ಭಾಷಾ ವಿದ್ವಾಂಸರೂ ಆಗಿರುವ ನಾಯ್ಕರ್ ಅವರು ಮಾಡಿದ ರೂಪಾಂತರವು ನಾಟಕಗಳಿಗೆ ಕನ್ನಡದ್ದೇ ಮೆರುಗನ್ನು ನೀಡಿವೆ. ***************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top