ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ನಂದಿನಿ ಹೆದ್ದುರ್ಗ ನನ್ನದೆಯ ಗಾಯಗಳಾವೂ ನನ್ನವಲ್ಲ..ನೀನದರ ಒಡೆಯ..ನನ್ನ ವಾಸ್ತವ ,ಭ್ರಮೆ, ಕಲ್ಪನೆಗಳೂ‌ನಿನ್ನವೇ ಕೊಡುಗೆ..ನೊಂದು ನೋಯಿಸಿದ್ದಾದ ಮೇಲೆಒಂದು ಅಂತರದಲಿ ನೀ ನಿಂತು‌ ನೋಡುವೆ.ಈ ಕ್ರೂರ ಮೌನದೊಳಗೆಎಷ್ಟೊಂದು ಪ್ರಶ್ನೆಗಳು.. ಬಗೆದು ತೋರಬಹುದೇ ಒಲವ ಈ ಬಗೆಯನ್ನು?ಹಗಲು ಹೊಳೆಯುವುದೆ ಇರುಳ ಈ ಹುಣ್ಣಿಮೆಗೆ?ಎದೆಯೊಳಗೆ ನೋವು ಉಲಿಯುವ ಹಕ್ಕಿಗೆ ಹೆಸರಿದೆಯೇ?ನಾನು ಬರುವ ಮೊದಲು ಎಷ್ಟೊಂದು ಸುಖಿ ನೀನು!! ಮಾತು ಮಹಲುಗಳಿಗಿಲ್ಲಿ ನೋವ ಅಡಿಪಾಯಹೊರಡಲೇ ಎನುವಾಗಷ್ಟೇ ನರಳು ನಿಟ್ಟುಸಿರುಎರಡು ಹೂವೆಸಳು,ಬೆಳುದಿಂಗಳು,ಎದೆಯ ಆಲಾಪಕ್ಕೂಬಿಡುವಿಲ್ಲ ನಿನಗೆ ಶೂನ್ಯ ಹುಟ್ಟಿಸಿದ್ದೂ‌ ನೀನೇ.ಕೋಲಾಹಲಕ್ಕೆ ಕಾರಣವೂ ನೀನೇನಾನು ಅಮಾವಾಸ್ಯೆ ಇರುಳು…ನೀನು ನಡುರಾತ್ರಿ ಎರಗುವ ನೋವುಒಲವೂ ಅಲೌಕಿಕ…!!!ದಯಮಾಡಿ ನಿನ್ನ ಬರಡು ದೇವರಿಗೆ ತಿಳಿಹೇಳು.__—————————–

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ ದೀಪ್ತಿ ಭದ್ರಾವತಿ ಪರಿಚಯ: ದೀಪ್ತಿ ಭದ್ರಾವತಿ ಕನ್ನಡದ ಕತೆಗಾರ್ತಿ. ಮೂಲತಃ ದಕ್ಷಿಣ ಕನ್ನಡದವರಾದರು, ದೀಪ್ತಿ ನೆಲೆ ನಿಂತದ್ದು ಭದ್ರಾವತಿಯಲ್ಲಿ.‌ ಆರೋಗ್ಯ ಇಲಾಖೆಯಲ್ಲಿ ನೌಕರಿ. ಕವಿತೆ ಬರೆಯುತ್ತಿದ್ದ ದೀಪ್ತಿ ಆರಂಭದಲ್ಲಿ ಕಾಗದದ ಕುದುರೆ, ಗ್ರೀನ್ ರೂಂನಲ್ಲಿ ಎಂಬ ಎರಡು ಕವಿತಾ ಸಂಕಲನ ಪ್ರಕಟಿಸಿದರು. ಆ‌ ಬದಿಯ ಹೂ, ಗೀರು ಇವರ ಕಥಾ ಸಂಕಲನಗಳು. ಆ ಬದಿಯ ಹೂ ಸಂಕಲನಕ್ಕೆಕತೆಗಳಿಗೆ ಮಾಸ್ತಿ ಕಥಾ ಪ್ರಶಸ್ತಿ ಪಡೆದವರು‌, ಗೀರು ಕಥಾ ಸಂಕಲನಕ್ಕೆ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ತನ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಸಹ ಈಚಿಗೆ ದಕ್ಕಿದೆ.ಬಸವರಾಜ ಕಟ್ಟೀಮನಿ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ , ದೇವಾಂಗನ ಶಾಸ್ತ್ರಿ ಪ್ರಶಸ್ತಿ ಸಹ ಇವರಿಗೆ ಒಲಿದಿವೆ ರಂಗಭೂಮಿ ಸಹ ಇವರ ಆಸಕ್ತಿ. ಕಲಾವಿದೆ. ಜೀವಪರ ಮನಸ್ಸುಳ್ಳವರು.‌ಕಷ್ಟಕ್ಕೆ ಮುಖಕೊಟ್ಟು ಮಾತಾಡಿಸುವವರು. ಬಡತನ ಮತ್ತು ಅಸಹಾಯಕತೆಯ ಜೊತೆ ಕುಳಿತು ಮಾತಾಡುವ ತಾಳ್ಮೆ ಕಾರಣ ಕತೆ ಬರೆದ ದೀಪ್ತಿ, ಬದುಕಿನ ವಿಶಾಲತೆಯ ಹುಡುಕಿ ಹೊರಟ ಕತೆಗಾರ್ತಿ. ನಿರ್ಲಕ್ಷ್ಯ ಎಂಬುದರ ಕಡೆಗೆ ತುಡಿದು ಅದನ್ನು ಅಕ್ಷರಗಳಲ್ಲಿ ಹಿಡಿದವರು. ಸೂಕ್ಷ್ಮ ಗ್ರಹಿಕೆ ಇವರ ಕತೆಗಳ ಜೀವಾಳ.…………….. ಸಂದರ್ಶನ ಕತೆ -ಕವಿತೆಗಳನ್ನು ಯಾಕೆ ಬರೆಯುತ್ತೀರಿ ?             ಕತೆ ಕವಿತೆ ಬರೆಯುವುದು ನನಗೆ ಬಿಡುಗಡೆಯಂತೆ ಕಾಣಿಸುತ್ತದೆ. ಆ ಕ್ಷಣಗಳಲ್ಲಿ ನಾನು ನಾನಾಗಿರುತ್ತೇನೆ. ಕವಿತೆ ಕತೆ ಹುಟ್ಟುವ ಕ್ಷಣ ಯಾವುದು ?             ಇಂತದ್ದೇ ಎನ್ನುವ ಕ್ಷಣ ಇರುವುದಿಲ್ಲ. ಅದು ಯಾವಾಗ ಬೇಕಿದ್ದರೂ ನಮ್ಮೊಳಗೆ ಬಂದು ಕೂತು ಬಿಡುತ್ತದೆ. ಒಂದು ನಿರ್ದಿಷ್ಟ ಕಾಲದಲ್ಲಿ ಬರೆಸಿಕೊಳ್ಳುತ್ತದೆ. ನಿಮ ಕತೆ ಕವಿತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು?             ಯಾವುದಕ್ಕು ಸೀಮಿತಗೊಂಡಿಲ್ಲ. ಆದರೂ ನನಗೆ ನೋವು, ಬಡತನ, ಸ್ತ್ರೀಯರ ಸಮಸ್ಯೆಗಳು ಹೆಚ್ಚು ಕಾಣಿಸುತ್ತದೆ. ಮಾನವೀಯ ನೆಲಗಟ್ಟುಗಳು ಮುಖ್ಯ ಎನ್ನಿಸುತ್ತವೆ. ನೀವು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವುದು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದೆಯೇ ?             ಹೌದು. ಆಸ್ಪತ್ರೆ ಎನ್ನುವುದು ಸಂತನ ಹಾಗೆ ನನಗೆ ಕಾಣಿಸುತ್ತದೆ. ಇಲ್ಲಿ ಹುಟ್ಟು ಮತ್ತು ಸಾವು ಎರಡೂ ಮುಖಾಮುಖಿಯಾಗುತ್ತಲೆ ಇರುತ್ತದೆ. ನನಗೆ ವಿನಯತೆ, ಮನುಷ್ಯತ್ವ ಮತ್ತು ಮನುಷ್ಯರನ್ನು ನಿಷ್ಕಾರಣವಾಗಿ ಪ್ರೀತಿಸುವುದನ್ನು, ಬದುಕಿನ ಮತ್ತೊಂದು ಮಗ್ಗಲನ್ನು ಅರಿವುದಕ್ಕೆ  ಮತ್ತು ನಿರ್ಲಿಪ್ತವಾಗಿ ಎಲ್ಲವನ್ನು ನೊಡುವುದು ಸಾಧ್ಯವಾಗಿರುವುದು ನನ್ನ ವೃತ್ತಿಯಿಂದಲೆ. ವೃತ್ತಿ ಮತ್ತು ಸೃಜನಶೀಲತೆ ಹಾಗೂ ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು ? ಹೇಗೆ ನಿಭಾಯಿಸುವಿರಿ?             ನನಗಿದು ಸವಾಲಿನದ್ದೆ. ಆದರೆ ಅನಿವಾರ‍್ಯ. ಎಷ್ಟೋ ಖಾಸಗಿ ಕಾರ‍್ಯಕ್ರಮವನ್ನು, ಸಾಹಿತ್ಯದ ಚಟುವಟಿಕೆಗಳನ್ನು ತಪ್ಪಿಸಿಕೊಂಡಿದ್ದೇನೆ. “ಎಲ್ಲೂ ಬರಲ್ಲ” ಎನ್ನುವ ದೂರನ್ನು ಕೇಳಿಸಿಕೊಂಡಿದ್ದೇನೆ. ಕೋವಿಡ್ನ ಕಾರಣಕ್ಕೆ ಕಳೆದ ಒಂಭತ್ತು ತಿಂಗಳಿಂದ ಹೆಚ್ಚು ಓದಿಲ್ಲ ಬರೆದಿಲ್ಲ. ಹೇಗೆಲ್ಲ ಸಮಯ ಸಿಗುತ್ತದೆಯೋ ಹಾಗೆ ಹೊಂದಿಸಿಕೊಳ್ಳುವ ಯತ್ನದಲ್ಲಿರುತ್ತೇನೆ. ನಿಮ್ಮ ಕತೆಗಳಲ್ಲಿ ಪಾತ್ರ ಹಾಗೂ ವಸ್ತು ನಿರ್ವಹಣೆಯಲ್ಲಿ ಪ್ರಜ್ಞಾಪೂರ್ವಕ ನಿರೂಪಣೆ ಇದೆಯಾ? ಇಲ್ಲ. ನಾನು ಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಬರೆಯುವುದಿಲ್ಲ. ಕತೆ ಹೇಗೆ ತನ್ನ ದಾರಿಯನ್ನು ಹುಡುಕಿಕೊಳ್ಳುತ್ತದೆಯೋ ಅದನ್ನು ಕುತೂಹಲದಿಂದ ಗಮನಿಸುತ್ತೇನೆ. ಪಾತ್ರಗಳ ಆಯ್ಕೆಯೂ ಹಾಗೆಯೇ ಕತೆಗೆ ತಕ್ಕಂತಹ ಪಾತ್ರಗಳು ಅವಾಗಿಯೇ ರೂಪುಗೊಳ್ಳುತ್ತವೆ. ಕೆಲವೊಂದು ಕತೆ ಬರೆದಾಗ ಈ ಕತೆ ನನ್ನೊಳಗೆ ಎಲ್ಲಿತ್ತು ಅಂತ ಅಚ್ಚರಿ ಪಟ್ಟಿದ್ದೇನೆ. ಕನ್ನಡ ವಿಮರ್ಶಾಲೋಕ ನಿಮ್ಮ ಕತೆಗಳನ್ನು ಗಮನಿಸಿದೆಯಾ ?             ನನ್ನ ಮೊದಲ ಕಥಾ ಸಂಕಲನ ಬಂದಾಗ ಅಂತಹ ಯಾವ ಗುರುತಿಸುವಿಕೆಯೂ ಸಿಗಲಿಲ್ಲ. ಆದರೆ ಓದಿದ ಎಲ್ಲರೂ ಹಿರಿಯರನ್ನು ಸೇರಿದಂತೆ ಒಳ್ಳೆಯ ಮಾತಾಡಿದ್ದರು. ಎರಡನೇ ಸಂಕಲನಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂತು. ಬಹಳಷ್ಟು ಜನ ಇಲ್ಲಿನ ಕತೆಗಳ ಬಗ್ಗೆ ಮಾತಾಡಿದ್ರು. ಬರೆದ್ರು. ಅದು ಖುಷಿ ಕೊಟ್ಟಿದೆ. ಮಹಿಳಾ ಬರಹಗಾರ್ತಿಯಾಗಿ ನೀವು ಎದುರಿಸಿದ ಸಮಸ್ಯೆ, ಸವಾಲುಗಳೇನು ?              ನಾನೊಬ್ಬಳೆ ಅಲ್ಲ,  ಬಹುತೇಕ ಎಲ್ಲಾ ಬರಹಗಾರ್ತಿಯರ ಸಮಸ್ಯೆಯೂ ಕೂಡ ಇದೆ ಆಗಿರುತ್ತದೆ. ಬರಹದೊಳಗೆ ಬರಹಗಾರ್ತಿಯರನ್ನೆ ಹುಡುಕುವ ಮನಸ್ಥಿತಿಯೊಂದು ಬೆಳೆದು ಬಂದಿದೆ. ಪುರುಷರ ಬರವಣಿಗೆ ಲೋಕಕ್ಕೆ ಸಂಬಂಧಿಸಿದ್ದು ಮಹಿಳೆಯರು ಬರೆದರೆ, ಅದು ಸ್ವಂತದ್ದು ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ಆ ಎಚ್ಚರದಲ್ಲಿಯೇ ಬರೆಯಬೇಕಾಗುತ್ತದೆ. ಮನೆ, ಸಂಸಾರ ಸಮಾಜದ ಚೌಕಟ್ಟುಗಳು ಒಮ್ಮೊಮ್ಮೆ ಹೇಳಬೇಕಾದದ್ದು ಹೇಳುವಲ್ಲಿ ತಡೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಹೀಗಾಗಿ ಹೇಳಬೇಕಾದ್ದು ಕೆಲವೊಮ್ಮೆ ಉಳಿದು ಬಿಡುವ ಸಾಧ್ಯತೆಗಳು ಹೆಚ್ಚು. ನನ್ನ ಮೊದಲ ಕಥಾ ಸಂಕಲನ ಬಂದಾಗ ಅದರಲ್ಲಿ ಸ್ತ್ರೀ ಕೇಂದ್ರಿತ ಕತೆಗಳು ಇರಲಿಲ್ಲ. ಕವನ ಸಂಕಲನದಲ್ಲಿಯೂ ಕೂಡ . ಆಗ ಕೆಲವೊಬ್ಬರು ನೀವು ಮಹಿಳೆಯಾಗಿ ಮಹಿಳೆಯರ ನೋವು ಬರೆಯಲ್ವಾ ಎಂದಿದ್ದರು. ನೀವು ಈ ರೀತಿ ಯಾರದ್ದೋ ಕತೆಯನ್ನು ಹೇಳಿದ್ರೆ ಅದರಲ್ಲಿ ಪ್ರಾಮಾಣಿಕತೆ ಎಲ್ಲಿರತ್ತೆ ಎಂದಿದ್ರು. ಮಹಿಳೆ ವೈಯಕ್ತಿಕ ನೋವು, ದಾಂಪತ್ಯ, ಲೈಂಗಿಕತೆಯ ಬಗ್ಗೆ ಬರೆದರೆ ಮಾತ್ರ ಅದು ಪ್ರಾಮಾಣಿಕ ಬರಹ ಅಂದುಕೊಳ್ಳುವುದು ತಪ್ಪು. ಮಹಿಳೆಯರಿಗೆ ಹೊರ ಪ್ರಪಂಚದ ಅರಿವು ಇರುವುದಿಲ್ಲ ಎಂದುಕೊಳ್ಳುವುದೇ ಮಿತಿ. ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ ಮತ್ತು ಆಕೆ ಕಾಣುವ ಲೋಕವನ್ನು ದಾಖಲಿಸುವುದು ಕೂಡ ಇಂದಿನ ತುರ್ತು. ಸಾಹಿತ್ಯ ಲೋಕದಲ್ಲಿ ಮಹಿಳಾ ಬರಹಗಾರ್ತಿಯಾಗಿ ಲಿಂಗ ಅಸಮಾನತೆಯನ್ನು ನೀವು ಎಂದಾದರೂ ಎದುರಿಸಿದ್ದೀರಾ ?              ಇಲ್ಲ ಹಾಗೇನು ಇಲ್ಲ. ಬಹುತೇಕರು ಗೌರವದಿಂದಲೇ ನಡೆಸಿಕೊಳ್ಳುತ್ತಾರೆ. ಆದರೆ ಕೆಲವು ಸಂಘ ಸಂಸ್ಥೆಗಳಲ್ಲಿ ಅನುಭವಿಸಿದ್ದೇನೆ. ಪುರುಷರೆಲ್ಲ ವೇದಿಕೆಯಲ್ಲಿ ಕೂರುವ ಮತ್ತು ಮಹಿಳೆಯರನ್ನು ಹೂ ಗುಚ್ಛ ನೀಡುವುದಕ್ಕೆ ನಿಲ್ಲಿಸುವ ಕ್ರಮವನ್ನು ವಿರೋಧಿಸಿದ್ದೇನೆ. ಕೆಲವೊಂದು ಕಡೆ ಬಿಟ್ಟು ಬಂದಿದ್ದೇನೆ. ಎಡ ಪಂಥೀಯ, ,ಬಲ ಪಂಥೀಯ ತಿಕ್ಕಾಟದ ಗುಂಪುಗಳ ಬಗ್ಗೆ ನಿಮ್ಮ ಅನಿಸಿಕೆ ಏನು?              ಎರಡು ಕಲ್ಲು ಉಜ್ಜಿದಾಗ ಬೆಳಕು ಬರತ್ತೆ ಅಲ್ವಾ. ಎಡ ಮತ್ತು ಬಲದ ನಡುವೆ ತಿಕ್ಕಾಟವಿದ್ದಾಗಲೇ ಹೊಸದಾದ ಮೈಲಿಗಲ್ಲೊಂದು ಎದುರಾಗತ್ತೆ. ಅದಿಲ್ಲದಿದ್ದರೆ ಹರಿವು ಎನ್ನೋದು ಎಲ್ಲಿರತ್ತೆ. ಆದರೆ ಯಾವುದು ಅತಿಯಾದರೆ, ಪ್ರಶ್ನಾತೀತವಾದರೆ ಅದರಿಂದ ಹೊಸದೇನು ಉದ್ಭವಿಸುವುದಿಲ್ಲ. ಬದಲಾಗಿ ಅವನತಿ ಶುರುವಾಗತ್ತೆ. ಯಾವುದರಿಂದ ಮನುಷ್ಯರ ಬದುಕು ಹಸನಾಗತ್ತೊ ಅದಾಗಲಿ ಬಿಡಿ. ಅದರಲ್ಲೇನಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು?             ರಾಜಕೀಯದ ಕುರಿತು ಏನನ್ನು ಹೇಳಲಾರೆ. ಧರ್ಮ ಮತ್ತು ದೇವರ ವಿಷಯದಲ್ಲಿ ನಿಮ್ಮ ನಿಲುವೇನು?             ಧರ್ಮ ಯಾವತ್ತು ಮನುಷ್ಯನನ್ನು ರೂಪಿಸುವ ಮಾರ್ಗವಾಗಬೇಕು. ಅದು ಹೇರಿಕೆಯಾಗಬಾರದು. ಯಾವುದೇ ಧರ್ಮಕ್ಕು ಮನುಷ್ಯತ್ವ ಎನ್ನುವುದು ಮೂಲ ರೂಪವಾಗಬೇಕು. ಮತ್ತದು ಮನುಷ್ಯರ ಬದುಕನ್ನು ಹಸನುಗೊಳಿಸಲು ಯತ್ನಿಸಬೇಕೆ ಹೊರತು ಸಂಘರ್ಷ ಹುಟ್ಟು ಹಾಕಬಾರದು. ದೇವರು ಕೂಡ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹುಟ್ಟು ಹಾಕಿಕೊಂಡಿರುವಂತದ್ದು. ನಾನು  ದೇವರನ್ನು ನಂಬುವುದಿಲ್ಲ. ಆದರೆ ನಂಬುವವರನ್ನು ನಿರಾಕರಿಸುವುದಿಲ್ಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?             ಬದಲಾವಣೆ ಎನ್ನುವುದು ಎಲ್ಲ ಕಾಲಘಟ್ಟದ ಸಹಜ ಕ್ರಿಯೆ. ಪ್ರತಿಯೊಂದಕ್ಕು ಒಂದೊಂದು ಹೊರಳು ಇದ್ದೇ ಇರುತ್ತದೆ. ಅದೇ ಸ್ಥಿತಿಯಲ್ಲಿ ಇವತ್ತು ಸಾಂಸ್ಕೃತಿಕ ವಾತಾರವಣ ಇದೆ. ಪುಸ್ತಕಕ್ಕೆ ಮೀಸಲಾದ ಸಾಹಿತ್ಯ, ಆಡಿಯೋ, ವಿಡಿಯೋಗಳಾಗಿ, ವೆಬಿನಾರ್‌ಗಳು ಹೆಚ್ಚಿ ಎಲ್ಲೆಲ್ಲೋ ಇರುವವರನ್ನ ತಲುಪುತ್ತಿದೆ. ಜಗತ್ತು ಕೈಗೆಟುಕುತ್ತಿದೆ. ಸಾಹಿತ್ಯ ತಲುಪುವ ವ್ಯಾಪ್ತಿ ಹೆಚ್ಚಾಗುತ್ತಿದೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ತುಸು ಹೆಚ್ಚೇ ಇದೆ ಎಂದು ಕೆಲವು ವಿದ್ಯಮಾನಗಳನ್ನು ನೋಡಿದಾಗ ಅನ್ನಿಸೋದಕ್ಕೆ ಶುರುವಾಗಿದೆ. ಮತ್ತು ಮನುಷ್ಯರು ಇದ್ದಲ್ಲಿ ಇವೆಲ್ಲ ಸಹಜ ಕೂಡ. ಬೇಕಾದವರಿಗೆ ಅತೀ ಒತ್ತು ಕೊಡುವ. ಅಲ್ಲದವರನ್ನು ಗಮನಿಸದಂತೆ ನಟಿಸುವ ಪ್ರಕ್ರಿಯೆಗಳು ಇದ್ದೇ ಇವೆ. ಬಹುಶ: ಹಿಂದೆಯು ಹೀಗೆ ಇದ್ದಿರಬಹುದು. ನಾವು ಏನೆಲ್ಲ ಸರ್ಕಸ್ ಮಾಡಿದರೂ ಕೊನೆಗೆ ಉಳಿಯುವುದು ಸಾಹಿತ್ಯ ಮಾತ್ರ ಎನ್ನುವುದಷ್ಟನ್ನೆ ಮನಗಂಡಿದ್ದೇನೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ ?             ಚಲನೆ ಸ್ವಾಭಾವಿಕ ಪ್ರಕ್ರಿಯೆ. ಯಾವುದನ್ನು ಅಡಗಿಸಲಾಗಿರುತ್ತದೆಯೊ ಅದು ಒಂದು ಕಾಲಕ್ಕೆ ಮುನ್ನೆಲೆಗೆ ಬರುತ್ತದೆ. ಯಾವುದು ಮುಂಚೂಣಿಯಲಿ ನಿಂತಿರುತ್ತದೆಯೋ ಅದು ಹಿಂಸರಿಯುತ್ತದೆ. ದೇಶದ, ದೇಶಿಗರ ಮನಸ್ಥಿತಿಯು ಈಗ ಹೀಗೆ ಇದೆ. ಕುಸಿದಿರುವ ಆರ್ಥಿಕತೆ, ನಿರುದ್ಯೋಗ, ರೈತರ ಸಮಸ್ಯೆಗಳು, ಈ ಕುರಿತು ಹೆಚ್ಚು ಹೆಚ್ಚು ಆಲೋಚಿಸಬೇಕಾದ ಅವಶ್ಯಕತೆ ಇದೆ. ದೇಶ ಸ್ವಾವಲಂಬಿಯಾದಾಗ ಮಾತ್ರ ಜನರ ಮತ್ತು ದೇಶದ ಅಭಿವೃದ್ಧಿ ಸಾಧ್ಯ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?             ಕನಸು ಅಂತೇನು ಇಲ್ಲ. ಸಾಹಿತ್ಯದ ಮೂಲಕ ಎಲ್ಲರನ್ನು ಪ್ರೀತಿಸುವಂತಾದರೆ ಅದಕ್ಕಿಂತ ಬೇರೇನು ಬೇಕು?. ನಿಮ್ಮ ಇಷ್ಟದ ಲೇಖಕರು ಯಾರು ?             ಬೇಂದ್ರೆ, ಮಹಾಶ್ವೇತಾದೇವಿ, ಓ ಹೆನ್ರಿ. ನೀವು ಈಚೆಗೆ ಓದಿದ ಕೃತಿಗಳು ಯಾವವು?             ಈಚೆಗೆ ಬಂದ ಹೊಸಬರ ಕೃತಿಗಳು. ಈಗ ದುರ್ಗಾಸ್ತಮಾನದ ಮರು ಓದು ನಿಮಗೆ ಇಷ್ಟದ ಕೆಲಸ ಯಾವುದು ?             ಏಕಾಂಗಿ ಸುಮ್ಮನೆ ಅಲೆಯುವುದು ನಿಮಿಗೆ ಇಷ್ಟವಾದ ಸ್ಥಳ ಯಾವುದು?             ಕಡಲಿರುವ ಯಾವುದೇ ಊರು ನಿಮ್ಮ ಪ್ರೀತಿಯ ಸಿನಿಮಾ ,ಇಷ್ಟದ ಸಿನಿಮಾ ಯಾವುದು ?             ಕಾನೂರು ಸುಬ್ಬಮ್ಮ ಹೆಗ್ಗಡತಿ, ತಮಿಳಿನ ಪ್ರಕಾಶ್ ರೈ ಅಭಿನಯದ ಕಾಂಜೀಪುರಂ ನೀವು ಮರೆಯಲಾರದ ಘಟನೆ ಯಾವುದು ?             ನನ್ನ ಮೊದಲ ಕಥಾ ಸಂಕಲನಕ್ಕೆ ಮಾಸ್ತಿ ಪ್ರಶಸ್ತಿ ಪಡೆದ ಕ್ಷಣ ಕನ್ನಡದಲ್ಲಿ ಬರೆಯುವವರಿಗೆ ಏನು ಹೇಳಲು ಬಯಸುವಿರಿ ?   ಹೇಳುವುದು ಅಂತೇನು ಇಲ್ಲ. ಎಲ್ಲ ಹಿರಿಯರ ಹೇಳಿದ್ದನ್ನೇ ಹೇಳುವೆ. ಬರಹಗಾರರಿಗೆ ಒಂದು ಸ್ಪಷ್ಟತೆ ಇರಬೇಕು. ಪರಂಪರೆಗಳ ಅರಿವು ಇರಬೇಕು. ಮುಖ್ಯವಾಗಿ ಕನ್ನಡದ ಕುರಿತಾಗಿ ಗೌರವದ ಜೊತೆಗೆ ಮಮತೆ ಇರಬೇಕು. ಇದು ನನ್ನದು ಎನ್ನುವ ಆಪ್ತತೆ ಇರಬೇಕು. ಸದಾ ಹೀಗಳೆಯುತ್ತ ಕೂತರೆ ಯಾವುದು ಸಾಧ್ಯವಾಗುವುದಿಲ್ಲ. ಬರಹ ಮತ್ತು ಬದುಕು ಬೇರೆ ಬೇರೆ ಅಂದುಕೊಂಡು ಬದುಕುವುದಾದರೆ ಮತ್ತೊಬ್ಬರಿಗೆ ಬೋಧಿಸುವ ಅಗತ್ಯ ಏನಿದೆ?. ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ   ವಸಾಹತುವಿನಿಂದ ಬಿಡುಗಡೆಗೆ ಭಾಷೆ ಕೊಟ್ಟವ ( ಬಸವಣ್ಣನವರ ಒಂದು ವಚನದ ಭಾಷಿಕ ವಿವೇಚನೆ ) ಕನ್ನಡ ಸಾಹಿತ್ಯ ಸಂಸ್ಕೃತದ ಪ್ರಭಾವಕ್ಕೆ ಸಿಕ್ಕು ವಸ್ತು, ರೂಪ, ಅಭಿವ್ಯಕ್ತಿಯ ಕ್ರಮದಲ್ಲಿ ಬೆಳವಣಿಗೆ ಹೊಂದಿ ಜನಸಾಮಾನ್ಯರಿಂದ ಬಹುದೂರ ನಿಂತಿದ್ದುದು ಎಲ್ಲಕಾಲದಲ್ಲಿಯೂ ಸತ್ಯವೇ ಸರಿ. ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಸಾಹಿತ್ಯ ರೂಪ ಮತ್ತು ಅದರೊಳಗಿನ ಸಂವೇದನೆಗಳು ನೆಲದ ಬೇಡಿಕೆ, ಸದ್ಯದ ತುರ್ತಿಗೆ ಸ್ಪಂದಿಸಿ ಜನಸಾಮಾನ್ಯರ ನಾಡಿಮಿಡಿತಕ್ಕೆ ಸ್ಪಂದಿಸಿದ್ದು. ಸಂಸ್ಕೃತದ ಮಾರ್ಗ ಸಂಪ್ರದಾಯಕ್ಕೆ, ಮಹಾಕಾವ್ಯ ಪರಂಪರೆಗೆ ವಿರುದ್ಧವಾಗಿ ತನ್ನದೇ ಆದ ಕ್ರಮವನ್ನು ಕಟ್ಟಿಕೊಂಡಿರುವುದು ತಿಳಿದೇ ಇದೆ. ವಚನಗಳು ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿರುವುದು ಅದರ ಬಹು ಮುಖ್ಯ ಅಂಶ. ಇದೇ ಮೊದಲ ಬಂಡಾಯ. ಮತ್ತು ಸಂಸ್ಕೃತಭೂಯಿಷ್ಟ ಮಾರ್ಗ ಪರಂಪರೆಗೆ ಕೊಟ್ಟ ಛಾಟಿ ಏಟಾಗಿದೆ. ವಿಷಯ ಹಸ್ತಾಂತರಕ್ಕೆ ಕಂಡುಕೊಂಡ ಸಾಹಿತ್ಯ ರೂಪ, ಬಳಸಿದ ಭಾಷೆ, ಸೂಕ್ಷ್ಮವಾದ ಪರ್ಯಾಯ ದಾರಿಯನ್ನು ನಾಡಿಗರಲ್ಲಿ ಇಂದಿಗೂ ಜಾಗೃತಗೊಳಿಸಿ ನಿಲ್ಲಿಸಿವೆ. ಪರ್ಯಾಯ ದಾರಿಯನ್ನು ಹುಟ್ಟುಹಾಕುವಲ್ಲಿ ಬಸವಣ್ಣನವರ ಪಾತ್ರ ಬಹುಮುಖ್ಯವಾದದ್ದು ಮತ್ತು ಆ ಕಾರ್ಯದ ಯಶಸ್ವಿಗೆ ಮಾರ್ಗಕ್ಕೆ ವಿರುದ್ಧವಾದ ಭಾಷೆಯನ್ನು ಬಳಸುವ ದಾರಿ ಬಸವಣ್ಣನವರ ಹಾದಿ ಓದುಗರನ್ನು ಬೆರಗಾಗಿಸುತ್ತದೆ. ಈ ವಚನವನ್ನು ಮತ್ತೊಮ್ಮೆ ಗಮನಿಸಿ. ಉಳ್ಳವರು ಶಿವಾಲಯ ಮಾಡುವರು ; ನಾನೇನ ಮಾಡವೆ ? ಬಡವನಯ್ಯಾ. ಎನ್ನ ಕಾಲೇ ಕಂಭ, ದೇಹವೇ ದೇಗುಲ, ಸಿರ ಹೊನ್ನ ಕಳಸವಯ್ಯಾ. ಕೂಡಲಸಂಗಮದೇವ, ಕೇಳಯ್ಯ; ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ೧ ಈ ವಚನ ಪ್ರಖ್ಯಾತವಾಗಿರುವುದು ‘ದೇವಾಲಯ’ಗಳ ವಿರುದ್ಧವಾಗಿ, ದೇಹವೇ ‘ದೇಗುಲ’ ಎನ್ನುವ ಗ್ರಹಿಕೆಯಿಂದ. ಸ್ಥಾವರಕ್ಕಿಂತ ಜಂಗಮ ಬಹುದೊಡ್ಡದು ಮತ್ತು ಕ್ರಿಯಾಶೀಲ, ಚಲನಶೀಲವಾದುದು ಎಂಬುದರಿಂದ. ಆ ಕಾಲದ ಪುರೋಹಿತಶಾಹಿ ಸೃಷ್ಟಿಸಿದ್ದ ವಸಾಹತುವಿನಿಂದ ಬಿಡಿಸಿಕೊಳ್ಳಲು ತಮ್ಮನ್ನು ತಾವು ಕಟ್ಟಿಕೊಳ್ಳಲು ನಿರ್ಮಿಸಿಕೊಂಡಿರುವ ಮಾರ್ಗದಿಂದ. ಇದೊಂದು ಮಹಾಮಾರ್ಗವಾಗಿ ಇಂದಿಗೂ ಜೀವಂತವಾಗಿದೆ. ಪ್ರತೀ ಕ್ಷೇತ್ರಗಳಲ್ಲಿಯೂ ಜ್ಞಾನವೆಂಬುದು ಅಮೂರ್ತ ಮತ್ತು ಸೀಮಾತೀತ. ಈ ಜ್ಞಾನವು ಭಾಷೆಯ ಮೂಲಕ ಬರುವುದೆನ್ನುವುದು. ವಸಾಹತೀಕರಣಕ್ಕೆ ಒಳಪಟ್ಟಾಗ ‘ಭಾಷೆ’ ಎನ್ನುವುದರ ಮೇಲೂ ಬಹುಸೂಕ್ಷ್ಮವಾಗಿ ಯಜಮಾನ್ಯ ಸಂಸ್ಕೃತಿಯು ಬಹುದೊಡ್ಡ ಪ್ರಭಾವ ಬೀರುತ್ತದೆ. ಕೊಟ್ಟ ಭಾಷೆಯಿಂದ ಬಿಡಿಸಿಕೊಳ್ಳುವುದು ಅಥವಾ ಅದಕ್ಕೆ ಪರ್ಯಾಯವಾದ ಭಾಷೆಯನ್ನು ಕಟ್ಟುವುದು, ಹುಟ್ಟಿಸಿಕೊಳ್ಳುವುದು ವಸಾಹತುವಿನಿಂದ ಮುಕ್ತಿರಾಗಲು ಪ್ರಮುಖವಾದ ದಾರಿಯಾಗಿದೆ. ಈ ಕೆಲಸವನ್ನು ಬಹು ಯಶಸ್ವಿಯಾಗಿ ಮತ್ತು ನೆಲದ ಕಣ್ಣಾಗಿ ಮಾಡುವಲ್ಲಿ ಬಸವಣ್ಣನವರ ಈ ವಚನ ಮಹತ್ತರವಾದ ಕಾರ್ಯ ನಿರ್ವಹಿಸಿದೆ. ಪ್ರಕೃತ ವಚನದಲ್ಲಿ ಬಸವಣ್ಣನವರಿಗಿದ್ದ ಅತೀ ಸೂಕ್ಷ್ಮ ಭಾಷಾ ಜ್ಞಾನ ಮತ್ತು ವಸಾಹತುವಿನಿಂದ ಮುಕ್ತರಾಗುವ ಹಂಬಲವಿರುವುದು ತಿಳಿಯುತ್ತದೆ. ಅವರಲ್ಲಿದ್ದ ಭಾಷಾ ಪ್ರಜ್ಞೆಯೇ ಇನ್ನೂ ಜೀವಂತವಾಗಿ ನಮ್ಮ ನಡುವೆ ಅವರನ್ನಿಟ್ಟಿರುವುದು. ವಚನದಲ್ಲಿನ ಕೆಲವು ಪದಗಳು ವಿಭಿನ್ನ ಮತ್ತು ಸೂಕ್ಷö್ಮ ಓದನ್ನು ಕೇಳುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಳಸುವ – ಅತೀ ಮೆಚ್ಚಿರುವ ಬಸವಣ್ಣನವರ ವಚನವಿದಾದ್ದರಿಂದ ಇದರಲ್ಲಿ ವಿಶಿಷ್ಟ ಮತ್ತು ಜಾಗೃತ ಪ್ರಜ್ಞೆ ಮಾಡಿರುವ ಕಾರ್ಯವನ್ನು ನೋಡಲೇಬೇಕೆನಿಸುತ್ತದೆ.  ‘ಉಳ್ಳವರು ಶಿವಾಲಯ ಮಾಡುವರು’ ಸಾಲಿನಲ್ಲಿ  ಅಧಿಕಾರದ ಮೂಲಾಂಶವಾದ ಹಣವನ್ನು ಹೋಂದಿರುವ ಉಳ್ಳವರು ಮತ್ತು ಪೌರೋಹಿತ್ಯದ ಕೇಂದ್ರವಾದ ‘ದೇವಾಲಯ’ದ ಬಗೆಗೆ ನೇರವಾಗಿಯೇ ಮಾತುಬಂದಿದೆ. ‘ಆಲಯ’ ಎನ್ನುವುದು ಸಂಸ್ಕೃತದ ಪದವಾಗಿದ್ದು, ಸಾಮಾನ್ಯ ಸರಳ ವಾಕ್ಯದಲ್ಲಿಯೇ ಹೇಳಿದ್ದಾರೆ. ‘ನಾನೇನ ಮಾಡವೆ? ಬಡವನಯ್ಯಾ.’ ಸಾಲು ಅಸಹಾಯಕತೆಯನ್ನು ತೋಡಿಕೊಳ್ಳುವ ಹಾಗೆ ಬಂದಿದ್ದರೂ, ಕೊನೆಯ ಪದ ವಾಸ್ತವವನ್ನು ಉಳ್ಳವರ ಎದುರು ನಿಲ್ಲಿಸುವಾಗ ‘ಬಡವ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಮಾರ್ಗದ ಸಂಸ್ಕೃತ ಪದಕ್ಕೆ ವಿರುದ್ಧವಾದ ಕನ್ನಡ ಪದ ಬಳಸುವ ಮೂಲಕ ಮುಂದಿನ ಮಾತುಗಳನ್ನು ಆಡುತ್ತಿರುವುದು ಅಸಹಾಯಕತೆಯೊಂದಿಗೇ ಅದರಲ್ಲಿನ ಅನನ್ಯತೆಯನ್ನು ಸಾದರಪಡಿಸುವ ಕ್ರಮವಾಗಿದೆ. ‘ಆಲಯ’ ಪದವು ಸಂಸ್ಕೃತದ್ದಾಗಿದ್ದು ಅದಕ್ಕೆ ಪರ್ಯಾಯವಾಗಿ ಕನ್ನಡದ ‘ದೇಗುಲ’ ಎನ್ನುವುದನ್ನು, ಮತ್ತದರ ವಿನ್ಯಾಸವನ್ನು ‘ಕಾಲು’ ‘ಕಂಭ’ ‘ದೇಹ’ ಎನ್ನುವ ಕನ್ನಡ ಪದವನ್ನು ಬಳಸಿರುವುದೇ ವಿಶೇಷವಾಗಿದೆ. ಸಂಸ್ಕೃತದ ‘ಶಿರ’ ಕ್ಕೆ ವಿರುದ್ಧವಾಗಿ ಕನ್ನಡದ ‘ಸಿರ’ ಎನ್ನುವುದನ್ನೂ, ‘ಕಳಶ’ ಕ್ಕೆ ಪರ್ಯಾಯವಾಗಿ ‘ಕಲಸ’ ಎನ್ನುವ ಪದವನ್ನು ಬಳಸಿ ಕಟ್ಟಿರುವ ಪ್ರತಿಮೆ ಏಕಕಾಲದಲ್ಲಿ ಭಾಷಿಕವಾಗಿಯೂ-ಆಚರಣೆಯಲ್ಲಿಯೂ ಯಜಮಾನ್ಯ ಸಂಸ್ಕೃತಿಗೆ ವಿರುದ್ಧವಾಗಿ ಕಟ್ಟಿರುವ ಸಂಕಥನವನ್ನು ಒಡೆಯುತ್ತಿರುವ ಮಹತ್ತರವಾದ ಹಾದಿಯನ್ನು ತಿಳಿಸುತ್ತಿದೆ. ಬಸವಣ್ಣನವರ ಅಂಕಿತದಲ್ಲಿಯೂ ಮೊದಲ ಪದ ‘ಕೂಡಲ’ ಎನ್ನುವುದು ಕನ್ನಡ ಪದವೇ ಆಗಿದ್ದು ‘ದೇವ’ ಎನ್ನುವುದನ್ನು ಹೇಳುತ್ತ ಹಿಂದಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವುದನ್ನು ತಳ್ಳಿಹಾಕುವ ಹಾಗೆ ಅನಿಸುತ್ತದೆ. ಪರ್ಯಾಯ ಸಂಸ್ಕೃತಿಯ ವಕ್ತಾರರಂತಿರುವ ಬಸವಣ್ಣನವರು ಏನು ಮಾಡಬೇಕಿತ್ತೋ ಯಶಸ್ವಿಯಾಗಿ ಮೊದಲು ಭಾಷೆಯ ಮೂಲಕವೇ ಮಾಡಿಬಿಟ್ಟಿದ್ದಾರೆ. ಇಲ್ಲಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ಸಾಲು ಒಂದರ್ಥದಲ್ಲಿ ವಚನದ ವ್ಯಂಗ್ಯಧ್ವನಿಯನ್ನು ಹೊರಹೊಮ್ಮಿಸಿ ಬಸವಣ್ಣ ಹುಸಿನಗುವಂತೆನಿಸುತ್ತಿದೆ. ‘ಬಡವನಯ್ಯಾ’ ಪದವು ತನ್ನ ಅರ್ಥ ಸಾಧ್ಯತೆಯನ್ನೇ ಕುಗ್ಗಿಸಿಕೊಂಡು ಹಿನ್ನಲೆಗೆ ಉಳಿಯುವಂತೆನಿಸುತ್ತದೆ. ಕೊನೆಯ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!’ ಸಾಲಿನಲ್ಲಿ ತಮ್ಮ ಉದ್ದೇಶವನ್ನು ವಾಚ್ಯವಾಗಿ ಸ್ಪಷ್ಟಪಡಿಸುವಲ್ಲಿ ಮತ್ತು ಯಜಮಾನ್ಯಕ್ಕೆ ನೇರವಾಗಿ ಉತ್ತರಿಸುವಲ್ಲಿ ಬಸವಣ್ಣ ಬಳಸಿರುವ, ಅನುಸರಿಸಿದ್ದ ‘ಜಂಗಮ’ ಸ್ಥಿತಿಯನ್ನು ‘ಸ್ಥಾವರ’ ಕ್ಕೆ ವಿರುದ್ಧವಾಗಿ ನಿಲ್ಲಿಸಿ ಬೆರಗಾಗಿಸುತ್ತಾರೆ. ‘ಉಂಟು’ ಮತ್ತು ‘ಇಲ್ಲ’ ಎನ್ನುವ ಎರಡು ವೈರುಧ್ಯಗಳು ಏಕಕಾಲದಲ್ಲಿ ಮತ್ತು ಒಂದಾದನಂತರ ಮತ್ತೊಂದು ಸಮಾನಾಂತರವಾಗಿ ಬಂದಿದ್ದು, ಕೊನೆಗೆ ಇಲ್ಲ ಎನ್ನುವುದು ಓದಿನ ಕೊನೆಯಲ್ಲಿ ಉಳಿಯುತ್ತದೆ. ಮತ್ತದ ಶಾಶ್ವತವಾದ ಸತ್ಯದ ಅವರ ಗ್ರಹಿಕೆಯನ್ನು ಸಾದರಪಡಿಸುತ್ತಿದೆ. ಸಂಸ್ಕೃತದ ಶಬ್ಧಗಳನ್ನೇ ಜಾಗಗಳಲ್ಲಿ ಬಳಸಿದ್ದರೆ ಪರ್ಯಾಯ ಸಂಸ್ಕೃತಿಯ ಅನಾವರಣದ ದಾರಿ ಎನ್ನುವುದನ್ನು ಮಾತನಾಡುವುದಾಗುತ್ತಲೇ ಇರಲಿಲ್ಲ. ಮತ್ತು ಇಷ್ಟೆಲ್ಲಾ ಸೂಕ್ಷ್ಮತೆ ವಚನಕ್ಕೆ ಬರುತ್ತಿರಲಿಲ್ಲವೆಂದೇ ಹೇಳಬಹುದು. ಬರಹಗಾರನೊಬ್ಬನಿಗೆ ಪ್ರಮುಖವಾದ ಎರಡು ನೆಲೆಯೆನಿಸುವುದು ‘ಆಯ್ಕೆ’ ‘ಪ್ರತ್ಯೇಕತೆ’ಗಳನ್ನು ಶೋಧಿಸುವ ಮತ್ತು ಸೃಜಿಸಿಕೊಳ್ಳುವ ಸ್ಥಿತಿ. ‘ಆಯ್ಕೆ’ಯೆನ್ನುವುದು ‘ಅಸ್ಥಿತ್ವ’ದ ಸ್ಥಿತಿ ಮತ್ತು ದಾರಿ, ಜೀವಂತವಾಗಿಡುವಲ್ಲಿ ಸ್ಥಿತಿ. ಇದನ್ನು ಕೈಗೊಳ್ಳುವ ಸಮಯದಲ್ಲಿ ಚಳುವಳಿಯ ಮುನ್ನೆಲೆಯಲ್ಲಿರುವ ನೇತಾರನೊಬ್ಬ ಅನುಸರಿಸಬೇಕಾದ ‘ಜಾಗೃತತೆ’ ಮತ್ತು ‘ನಿಖರತೆ’ ಬಸವಣ್ಣವರಲ್ಲಿದೆ. ಮತ್ತೊಂದು ‘ಪ್ರತ್ಯೇಕತೆ’ಯ ಪ್ರಶ್ನೆ ವಸಾಹತು ಸೃಜಿಸುವ ‘ಸಂಸ್ಥೆ’ಯಿಂದ ತಮ್ಮನ್ನು ಹೊರಗಿಟ್ಟು ನೋಡಿಕೊಳ್ಳುವ ಮತ್ತು ಅಂತರ ಕಾಯ್ದುಕೊಳ್ಳುವ, ಈ ಎರಡು ಕೆಲಸಗಳಿಂದ ನೇತಾರನಾಗಿ ಗುಂಪಿನ ಅಸ್ಥಿತ್ವಕ್ಕೆ ಹಾಕಿಕೊಟ್ಟ ದಾರಿಯಾಗಿ ಅವರ ಎಲ್ಲ ಉದ್ದೇಶಗಳನ್ನು ಏಕಕಾಲದಲ್ಲಿ ವಚನವು ತಿಳಿಸುತ್ತಿದೆ. ಆಳುವ ಮತ್ತು ಗಾಢ ಪ್ರಭಾವ ಇರುವ ಸಂಸ್ಕೃತಿ, ಭಾಷೆಗಳು ಒಂದು ಭ್ರಮೆಯಲ್ಲಿ ನಿಲ್ಲಿಸಿರುವುದು ಇಂದಿಗೂ ಸತ್ಯವೇ ಆಗಿದೆ. ಆದರೆ ಸೂಕ್ಷ್ಮಾವಾಗಿ ಮತ್ತು ಜಾಗೃತನಾಗಿರುವ ಲೇಖಕ, ಬರಹಗಾರ, ಚಿಂತಕ, ಸಾಮಾಜಿಕ ಹೋರಾಟಗಾರ ಆ ಭಾಷೆಗೆ ಪರ್ಯಾಯವಾಗಿ ಮತ್ತೊಂದನ್ನು ಅದೇ ಜಾಗದಲ್ಲಿ ನಿಲ್ಲಿಸುತ್ತಾನೆ. ಈ ಕಾರ್ಯವನ್ನು ಸೈದ್, ಫೂಕೋ, ಡೆರಿಡಾರೇ ಬಂದು ಕನ್ನಡದ ನೆಲದಲ್ಲಿ ಹೇಳಬೇಕಾಗಿಲ್ಲ. ಆ ಕೆಲಸವನ್ನು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಮಾಣದಲ್ಲಿ ಕನ್ನಡದ ನೆಲದ ಪ್ರಜ್ಞೆ ಸಾಧಿಸಿ ತೋರಿಸಿದೆ ಎನ್ನುವುದು ಅಚ್ಚರಿಯ ಜೊತೆಗೆ ಸತ್ಯವೂ ಆಗಿದೆ. ಭಾಷೆಯೊಂದನ್ನು ಬಳಸಿ ‘ಸಂಸ್ಥೆ’ಗಳು ಭ್ರಮೆಯನ್ನು ಸೃಜಿಸಿ, ಆ ಭ್ರಮೆಯಲ್ಲಿ ಸಿಲುಕಿದವರು ಕೊನೆಗೆ ಅಲ್ಲಿಯೂ ಸಲ್ಲದ – ಇಲ್ಲಿಯೂ ನಿಲ್ಲಲಾರದ ಅತಂತ್ರ ದ್ವಂದ್ವಸ್ಥಿತಿಯನ್ನು ಸೃಷ್ಟಿಸಿ ಹಾಳುಮಾಡಿಬಿಡುತ್ತವೆ.  ಸಮಾಜಿಕ ಹೋರಾಟಗಾರ, ಬರಹಗಾರ, ಲೇಖಕ ಮತ್ತು ಚಿಂತಕನ ಜೀವದ ಮತ್ತು ಅವನ ನಡೆ, ಉದ್ದೇಶಗಳನ್ನು ಪ್ರಕೃತ ವಚನವು ಶಾಶ್ವತವಾಗಿ ಸಾರುತ್ತಿದೆ. ಒಂದು ಹೋರಾಟದ ಮುನ್ನೆಲೆಯಲ್ಲಿರುವ ವ್ಯಕ್ತಿ ‘ಜೀನಿಯಸ್’ (ತಕ್ಷಣದಲ್ಲಿ ಇದಕ್ಕೆ ಪರಿಣಾಮದ ದೃಷ್ಟಿಯಿಂದ ಪರ್ಯಾಯ ಪದವನ್ನು ಬೇಕೆಂದೇ ಬಳಸುತ್ತಿಲ್ಲ) ಎನಿಸುವುದು ವಸಾಹತು ಸೃಜಿಸಿರುವ ಅಥವಾ ಕೊಟ್ಟ ಭಾಷೆಯನ್ನೇ ಬಳಸಿ ಹೋರಡುವವರನ್ನಲ್ಲ–ಅದಕ್ಕೆ ಪ್ರತಿಸ್ಪರ್ಧಿಯಾಗಿ-ವಿರುದ್ಧವಾಗಿ ಮತ್ತೊಂದನ್ನು ತನ್ನಿಂದಲೇ ತನ್ನೊಳಗಿನಿಂದಲೇ ಸೃಜಿಸುವವರನ್ನು ಮತ್ತು ಪರಿಣಾಮಕಾರಿಯಾಗಿ ಬಳಸುವವರನ್ನು ಎನ್ನುವುದನ್ನು ತಳಿದರೆ ಕನ್ನಡದ ನೆಲದ ಅಸ್ಥಿತ್ವ ಮತ್ತು ಹೋರಾಟ ಹೆಚ್ಚು ಉಜ್ವಲವಾದದ್ದು ಎನಿಸದೆ ಇರದು. ಸಮಕಾಲೀನದಲ್ಲಿ ‘ಆಯ್ಕೆ’ ಮತ್ತು ‘ಪ್ರತ್ಯೇಕತೆ’ ಯ ಸಮಸ್ಯೆಗೆ ಬಸವಣ್ಣನವರಲ್ಲಿ ಉತ್ತರ ಸಿಕ್ಕಬಹುದೆನ್ನುವುದಂತೂ ಸತ್ಯವೇ ಆಗಿದೆ.  ಈ ವಚನಕ್ಕೆ ಬೇರೆ ಪಾಂಠಾಂತರಗಳು ಎಂ. ಆರ್. ಶ್ರೀನಿವಾಸಮೂರ್ತಿ ಯವರ ‘ವಚನ ಧರ್ಮಸಾರ.೨ಬಸವನಾಳ ಶಿವಲಿಂಗಪ್ಪನವರ ‘ಬಸವಣ್ಣನವರ ಷಟ್ ಸ್ಥಲದ ವಚನಗಳು.೩ಡಾ. ಎಸ್. ವಿದ್ಯಾಶಂಕರರ ಸಂಪಾದನೆಯ ‘ಎನ್ನ ನಾ ಹಾಡಿಕೊಂಡೆ.೪ಮತ್ತು ಡಾ. ಎಂ. ಎಂ. ಕಲಬುರ್ಗಿ ಯವರ ಸಂಪಾದನೆಯ ‘ಬವಸಯುಗದ ವಚನ ಮಹಾಸಂಪುಟ’.೫ ಪುಸ್ತಕಗಳಲ್ಲಿದೆ. ಆದರೆ ಸಂ. ಶಿ. ಭೂಸನೂರುಮಠರ ಸಂಪಾದನೆಯಲ್ಲಿರುವ ಈ ಮೇಲಿನ ವಚನದ ಪಾಠಾಂತರವು ಬಸವಣ್ಣನವರ ವ್ಯಕ್ತಿತ್ವ ಮತ್ತು ಅವರ ಹೋರಾಟದ ಬದುಕನ್ನು ಸಂಪಾದಕ ಬಹುಸೂಕ್ಷ್ಮವಾಗಿ ಗಮನಿಸಿರುವುದು ತಿಳಿದುತ್ತದೆ. ಪರಾಮರ್ಶನ ಗ್ರಂಥ : ೧. ವಚನ ಸಾಹಿತ್ಯ ಸಂಗ್ರಹ. ಸಂ. ಶಿ ಭೂಸನೂರು ಮಠ. ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್. ಮೈಸೂರು. ಪು ೬೨೬ (೧೯೬೫) ೨. ವಚನಧರ್ಮಸಾರ. ಎಂ. ಆರ್. ಶ್ರೀನಿವಾಸಮೂರ್ತಿ. ಪ್ರಸಾರಾಂ, ಮೈಸೂರುವಿಶ್ವವಿದ್ಯಾನಿಲಯ. ಪು ೨೪೯ (೧೯೪೪) ೩. ಬಸವಣ್ಣನವರ ಷಟ್ ಸ್ಥಲದ ವಚನಗಳು. ಬಸವನಾಳ ಶಿವಲಿಂಗಪ್ಪ. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ. ಧಾರವಾಡ. ವ. ಸಂ ೮೨೦. ಪು ೨೧೬ (೧೯೫೪) ೪. ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ವ. ಸಂ ೮೨೦. ಪು ೬೪೮ (೨೦೧೨) ೫. ಬವಸಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ವ. ಸಂ ೮೨೧. ಪು ೭೪ (೨೦೧೬) ************************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….7 ಅಲಗೇರಿಯಲ್ಲಿ ಬೆಂಕಿ ಮತ್ತು ಮೊಲ             ನಾಗಮ್ಮಜ್ಜಿಯ ಅಂತ್ಯಸಂಸ್ಕಾರ ಅನಿವಾರ್ಯವಾಗಿ ಕಾರವಾರದಲ್ಲಿ ನಡೆದುಹೋಯಿತು. ಕ್ರಿಯಾ ಕರ್ಮಗಳನ್ನು ಪೂರ್ಣಗೊಳಿಸುವವರೆಗೆ ಊರಿಗೆ ಮರಳುವ ಹಾಗೆಯೂ ಇರಲಿಲ್ಲ. ತಾತ್ಕಾಲಿಕವಾಗಿ ನಮ್ಮ ಪರಿವಾರ ಕಾರವಾರ ತಾಲೂಕಿನ ಅರಗಾ ಎಂಬಲ್ಲಿ ಶಾನುಭೋಗಿಕೆಯಲ್ಲಿರುವ ನಾರಾಯಣ ಆಗೇರ ಎಂಬ ಜಾತಿ ಬಂಧುವೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡಬೇಕಾಯಿತು. ಶಾನುಭೋಗರ ಪತ್ನಿ (ಅವಳ ಹೆಸರೂ ನಾಗಮ್ಮ) ನನ್ನ ಯೋಗಕ್ಷೇಮಕ್ಕೆ ನಿಂತಳು. ತಬ್ಬಲಿ ತನದಲ್ಲಿ ನೊಂದು ಹಾಸಿಗೆ ಹಿಡಿದ ಅವ್ವ, ತರಬೇತಿಯ ಜವಾಬ್ದಾರಿಯಲ್ಲಿ ದಿಕ್ಕು ತೋಚದಂತಿದ್ದ ಅಪ್ಪ ಮತ್ತು ಹಸುಳೆಯಾದ ನನಗೆ ಅಂದು ನಾರಾಯಣ ಶಾನುಭೋಗ ದಂಪತಿಗಳು ನೀಡಿದ ಆಶ್ರಯ, ಮಾಡಿದ ಉಪಕಾರಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಅವ್ವ ಈಗಲೂ ನೆನಪಿಸಿಕೊಳ್ಳುತ್ತಾಳೆ. ಆದರೆ ಅವರಿಗೆ ಕೃತಜ್ಞತೆ ಹೇಳಲು ಇಬ್ಬರೂ ಬದುಕಿ ಉಳಿದಿಲ್ಲ ಎಂಬುದು ನಮ್ಮ ದೌರ್ಭಾಗ್ಯ!             ಮರಳಿ ಮಾಸ್ಕೇರಿಯ ತೌರಿಗೆ ಬಂದು ಸೇರುವಾಗ ಅವ್ವನಿಗೆ ತಾಯಿಯಿಲ್ಲದ ತೌರುಮನೆಯಾಗಿತ್ತು ಅದು. ಹಾಗೆಂದು ಅವ್ವ ನೊಂದುಕೊಂಡಿದ್ದರೂ ಮಾಸ್ಕೇರಿಯ ಜಾತಿ ಬಂಧುಗಳೆಲ್ಲರೂ ತಾಯಿ ತಂದೆಯರ ಹಾಗೆ ಅಕ್ಕರೆ ತೋರಿದರಂತೆ. ಅದರಲ್ಲಿಯೂ ಸಾಕವ್ವ ಎಂಬ ಮುದುಕಿ ಸರಿಯಾದ ಬಾಣಂತನವಿಲ್ಲದೆ ಅವ್ವನ ಮುಖ ಸೊರಗಿದುದನ್ನು ಗ್ರಹಿಸಿ ಎರಡು ತಿಂಗಳು ಕಟ್ಟು ನಿಟ್ಟಿನ ಬಾಣಂತನ ಮಾಡಿದಳಂತೆ. ತನ್ನ ಮನೆಯಿಂದ ಹತ್ತಾರು ಮಾರು ಅಂತರದಲ್ಲಿದ್ದ ನಮ್ಮ ಮನೆಗೆ ಮುಂಜಾನೆ ಸಂಜೆ ತಪ್ಪದೇ ಬರುತ್ತ ಅರಶಿನ ಎಣ್ಣೆ ತಿಕ್ಕಿ, ಅಡಕಲ ತುಂಬ ಬಿಸಿನೀರು ಹೊಯ್ದು, ಧೂಪದ ಹೊಗೆ ಹಾಕಿ ತಾಯಿ ಮಗುವನ್ನು ಉಪಚರಿಸಿದ ಸಾಕವ್ವ ಅವ್ವನಿಗೆ ಹದವಾದ ಕಾಳು ಮೆಣಸಿನ ಚಟ್ನಿಯನ್ನು ಮಾಡಿ ಉಣ್ಣಿಸುತ್ತಿದ್ದಳಂತೆ. ಸಾಕವ್ವನ ಅಂಥ ಕಟ್ಟುನಿಟ್ಟಿನ ಬಾಣಂತನದಿಂದಾಗಿಯೇ ಮುಂದೆ ಮತ್ತೆ ಐದು ಜನ ಮಕ್ಕಳನ್ನು ಹೆತ್ತರೂ ತನ್ನ ದೇಹದ ಚೈತನ್ಯ ಉಡುಗದೆ ಉಳಿಯುವುದು ಸಾಧ್ಯವಾಯಿತು ಅನ್ನುತ್ತಾಳೆ ಅವ್ವ.             ಬೆಳ್ಳಗೆ ಎತ್ತರದ ನಿಲುವಿನ ಸಾಕವ್ವ’ ಅವ್ವನಿಗೆ ಮಾತ್ರ ಸಾಕವ್ವನಾಗಿರದೆ ಕೇರಿಗೇ ಅಕ್ಕರೆಯ ಅವ್ವನಾಗಿದ್ದಳಂತೆ. ಶುಚಿಯಾಗಿ ಅಡಿಗೆ ಮಾಡುವ ಅವಳು, ಕೇರಿಯಲ್ಲಿ ಯಾರಿಗೇ ಕಾಯಿಲೆಯಾದರೂ ನಾರುಬೇರುಗಳ ಕಷಾಯ ಮಾಡಿ ಕುಡಿಸಿ ಕಾಯಿಲೆಗಳನ್ನು ಗುಣ ಪಡಿಸುತ್ತಿದ್ದಳಂತೆ. ೧೯೬೧-೬೨ ರ ಸುಮಾರಿಗೆ ನಾವೆಲ್ಲ ಬನವಾಸಿಯಲ್ಲಿರುವಾಗ ಊರಲ್ಲಿ ಹಬ್ಬಿದ ಆಮಶಂಕೆ’ ಕಾಯಿಲೆ ನಮ್ಮಕೇರಿಯ ಒಂದಿಷ್ಟು ಪ್ರಾಯದ ಮತ್ತು ಎಳೆಯ ಮಕ್ಕಳನ್ನು ಬಲಿತೆಗೆದುಕೊಂಡಿತ್ತು. ಸಾಕವ್ವಜ್ಜಿ ಕೂಡ ಇದೇ ಕಾಯಿಲೆಯಲ್ಲಿ ಸಾವು ಕಂಡಿದ್ದಳು.             ಕಾರವಾರದ ಶಿಕ್ಷಕ ತರಬೇತಿಯ ಬಳಿಕ ಕೆಲವು ವರ್ಷಗಳಲ್ಲಿ ಅಪ್ಪನಿಗೆ ಅಂಕೋಲಾ ತಾಲೂಕಿನ ಅಲಗೇರಿ’ ಎಂಬ ಹಳ್ಳಿಯ ಸರಕಾರಿ ಶಾಲೆಗೆ ವರ್ಗವಾಯಿತು. ನನಗೆ ಮೂರೋ ನಾಲ್ಕೋ ವರ್ಷ ತುಂಬಿರಬಹುದು. ಆಗಿನ್ನೂ ಬಾಲವಾಡಿ, ಅಂಗನವಾಡಿ ಇತ್ಯಾದಿ ವ್ಯವಸ್ಥೆ ಇರಲಿಲ್ಲ. ನಾನು ಮನೆಯಲ್ಲೇ ಆಡಿಕೊಂಡಿದ್ದೆ. ನಮಗೆ ನಮ್ಮ ಜಾತಿಯ ಜನರ ಕೇರಿಯಲ್ಲೇ ವಾಸ್ತವ್ಯಕ್ಕೆ ಒಂದು ಚಿಕ್ಕ ಹುಲ್ಲಿನ ಮನೆ ವ್ಯವಸ್ಥೆಯಾಗಿತ್ತು. ಅಪ್ಪ ಅದಾಗಲೇ ಹಳ್ಳಿಯ ಜನರ ಯಕ್ಷಗಾನ ಬಯಲಾಟಗಳಿಗೆ ಅರ್ಥಬರೆದುಕೊಡುವುದೂ, ಕುಣಿತ ಕಲಿಸುವುದೂ ಇತ್ಯಾದಿ ಮಾಡುತ್ತಿದ್ದ. ಇದರಿಂದ ಇತರ ಸಮಾಜದ ಜನರು ಅಪ್ಪನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ಸಮಯಕ್ಕೊದಗಿ ಸಹಾಯವನ್ನು ಮಾಡುತ್ತಿದ್ದರು. ಹೆಚ್ಚಾಗಿ ಅಲ್ಲಿನ ಹಾಲಕ್ಕಿಗಳು ಮನೆಯವರೆಗೂ ಬಂದು ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದರು. ತಾವು ಬೆಳೆದ ತರಕಾರಿಗಳನ್ನು ಪುಕ್ಕಟೆಯಾಗಿ ತಂದು ಕೊಡುತ್ತಿದ್ದರು. ಒಬ್ಬ ಹಾಲಕ್ಕಿ ಗೌಡನಂತೂ ಒಂದು ಮೊಲವನ್ನು ಜೀವಂತ ಹಿಡಿದು ತಂದು ಅಪ್ಪನಿಗೆ ಕಾಣಿಕೆಯಾಗಿ ಒಪ್ಪಿಸಿದ್ದ. ಅಪ್ಪ ಅದಕ್ಕೊಂದು ಪಂಜರ ಮಾಡಿ ಸೊಪ್ಪು ಸದೆ ತಿನ್ನಿಸಿ ಅಕ್ಕರೆ ತೋರುತ್ತಿದ್ದರೆ, ನನಗೋ ಅದು ಜೀವಂತ ಆಟಿಗೆಯ ವಸ್ತುವಾಗಿತ್ತು. ಒಂದೆರಡು ತಿಂಗಳಲ್ಲೇ ನಮಗೆ ಹೊಂದಿಕೊಂಡ ಮೊಲ ಪಂಜರದ ಹೊರಗೂ ಅಷ್ಟೇ ನಿರಾಳವಾಗಿ ಓಡಾಡತೊಡಗಿತು. ಅಪ್ಪ ಶಾಲೆಗೆ ಹೊರಟರೆ ಹತ್ತು ಹೆಜ್ಜೆಯಾದರೂ ಅವನೊಟ್ಟಿಗೆ ಕುಪ್ಪಳಿಸಿ ನಡೆದು ಮತ್ತೆ ಆಚೀಚೆ ಬೆಕ್ಕು ನಾಯಿಗಳ ಸದ್ದು ಕೇಳಿದರೆ ಮರಳಿ ಬಂದು ಗೂಡು ಸೇರುತ್ತಿತ್ತು.             ಯಾವ ಊರಿನಲ್ಲಾದರೂ ಸಜ್ಜನರ ನಡುವೆಯೇ ಒಂದಿಬ್ಬರಾದರೂ ನಯವಂಚಕ ಜನ ಇದ್ದೇ ಇರುತ್ತಾರೆ ಎಂಬ ಸರಳ ಸತ್ಯದ ಅರಿವು ನಮ್ಮ ಮುಗ್ಧ ತಾಯಿ ತಂದೆಯರ ಗಮನಕ್ಕೆ ಬರಲೇ ಇಲ್ಲ. ಮೊಲವನ್ನು ಕಾಣಿಕೆ ನೀಡಿದ ಅದೇ ಜಾತಿಯ ಮನುಷ್ಯನೊಬ್ಬ ಮೆತ್ತಗಿನ ಮಾತನಾಡಿ, “ಮೊಲಕ್ಕೆ ಹುಲ್ಲು ಮೇಯಿಸಿ ತರುವೆ” ಎಂದು ಸುಳ್ಳು ಹೇಳಿ ಕೊಂಡೊಯ್ದವನು ಅದನ್ನು ಕೊಂದು ತಿಂದು ವಂಚನೆ ಮಾಡಿದ. ಅಪ್ಪ-ಅವ್ವ ಮತ್ತು ನಾನು ಮೊಲದ ಸಾವಿಗಾಗಿ ಮರುಗುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುವಂತಿರಲಿಲ್ಲ.             ಅಲಗೇರಿಯಲ್ಲಿ ನನ್ನನ್ನು ಆಡಿಸುವುದಕ್ಕೂ ಆಯಿತು ತಾನು ಶಾಲೆ ಕಲಿಯುವುದಕ್ಕೂ ಆಯಿತು ಎಂಬ ಉದ್ದೇಶದಿಂದ ಅವ್ವನ ಚಿಕ್ಕಪ್ಪನ ಮಗ (ನನ್ನ ಸೋದರ ಮಾವ) ರಾಮ ಎಂಬ ಹುಡುಗ ಬಂದು ನಮ್ಮ ಜೊತೆಗೆ ಉಳಿದುಕೊಂಡಿದ್ದ. ಅಗ್ಗರಗೋಣದ ನಮ್ಮ ಸೋದರತ್ತೆಯ (ನಮ್ಮ ತಂದೆಯವರ ಅಕ್ಕ) ಮಗ ನಾರಾಯಣ ಎಂಬುವವನೂ ಕೆಲವು ದಿನ ನಮ್ಮೊಡನೆಯೇ ಇದ್ದ. ಇಬ್ಬರೂ ನನ್ನನ್ನು ಮುದ್ದು ಮಾಡುತ್ತ, ಹಟ ಮಾಡಿದರೆ ಬಡಿದು ತಿದ್ದುತ್ತ ಅಕ್ಕರೆಯಿಂದ ಆಟವಾಡಿಸುತ್ತಿದ್ದರು. ನಮಗೆ ಇಂಥಹುದೇ ಆಟಿಗೆ ವಸ್ತು ಎಂಬುದೇನೂ ಇರಲಿಲ್ಲ. ಮುರಿದ ತೆಂಗಿನ ಹೆಡೆ, ಗರಟೆ ಚಿಪ್ಪು, ಬಿದಿರಿನ ಕೋಲು, ಹುಲ್ಲಿನ ಬಣವೆ ಇತ್ಯಾದಿ ನಿಸರ್ಗ ಸಹಜ ವಸ್ತುಗಳೇ ನಮಗೆ ಆಟಿಕೆಯಾಗಿದ್ದವು.             ಒಂದು ಮುಸ್ಸಂಜೆಯ ಹೊತ್ತು. ಅವ್ವ ಮೀನು ಕೊಯ್ಯುತ್ತಾ ಅಂಗಳದ ಆಚೆ ಕುಳಿತಿದ್ದಳು. ಬದಿಯ ಮನೆಯವಳು ಕತ್ತಲಾಯಿತೆಂದು ನಮ್ಮ ಮನೆಯ ದೀಪದ ಬುರುಡಿಯನ್ನು ತನ್ನ ಮನಗೊಯ್ದು ಎಣ್ಣೆ ಹಾಕಿ ಹೊತ್ತಿಸಿ ತಂದ… ************************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಶಾಲಾರಂಗದೊಳಗೊಂದು ಕೋಲಾಟ ಠಣ್…ಠಣ್… ಠಣ್.. ಗಂಟೆಯ ಸದ್ದು ಒಂಭತ್ತು ಸಾರಿ  ಕೇಳಿಸಿತಾ! ಹಾಂ!! ಅದು ನಮ್ಮ ಶಾಲೆಯ ಬೆಳಗಿನ ಗಂಟೆ.   ನನ್ನಜ್ಜಿಯ ಹಣೆಯ ನಡುವಿನ ಕುಂಕುಮದ ಬೊಟ್ಟಿನಂತೆ ನಮ್ಮ ಊರಿನ ಕೇಂದ್ರ ಭಾಗದಲ್ಲಿ ಆಧಾರ ಸ್ತಂಭದಂತೆ ಕೂತಿತ್ತು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಹೌದು ಅದು ನಮ್ಮ ಶಾಲೆ.  ನಮ್ಮ ಹಳ್ಳಿಯ ಶಾಲೆ.  ಬಲಗಾಲಿಟ್ಟು ಒಳಗೆ ಬರಬೇಕು. ಮೊದಲು ಕಾಣಿಸುವುದೇ ಬಿಳೀ ಕಂಬದ ಧ್ವಜಸ್ತಂಭ. ಅದರ ಬುಡದಲ್ಲಿ ಕಟ್ಟೆ . ಅದರ ಹಿಂದೆ, ತೆರೆದ ಎದೆ ಮತ್ತು ಅಕ್ಕ ಪಕ್ಕದ ಭುಜಗಳಂತೆ,  ಮುರ ಕಲ್ಲಿನ ಗೋಡೆಯ, ಹೆಂಚಿನ ಮಾಡಿನ ಶಾಲೆಯ ಕಟ್ಟಡ ನೆಲೆ ಕಂಡಿದೆ  ಈ ಧ್ವಜಸ್ವಂಭದ ಎದುರು ವಾರಕ್ಕೆ ಎರಡು ಸಲ ಡ್ರಿಲ್ ಮಾಡುವುದು, ಸೋಮವಾರ ಹಾಗೂ ಶುಕ್ರವಾರ. ಆಗ ಪ್ರತಿಯೊಬ್ಬರಿಗೂ ಸಮವಸ್ತ್ರ ಕಡ್ಡಾಯ. ಒಂದು ಗಂಟೆ ಬಾರಿಸಿದ ಕೂಡಲೇ ಶಾಲೆಯ ಮಡಿಲಿಂದ ಹೊರಕ್ಕೆ ಜಂಪ್ ಮಾಡಿ ಮಕ್ಕಳು  ಓಡುವುದು. ಸಾಲಾಗಿ ತರಗತಿ, ವಿಭಾಗದ ಪ್ರಕಾರ ಸಾಲು ಜೋಡಿಸಲ್ಪಡುತ್ತದೆ.   ಹುಡುಗಿಯರಿಗೆ ನೀಲಿ ಸ್ಕರ್ಟ್ ಬಿಳಿ ಅಂಗಿ. ಹುಡುಗರಿಗೆ ನೀಲಿ ಚಡ್ಡಿ ಬಿಳಿ ಅಂಗಿ. ತಪ್ಪಿದರೆ  ಬಿಸಿಲಲ್ಲಿ ನಿಲ್ಲುವ ಶಿಕ್ಷೆ ಮಾತ್ರವಲ್ಲ ಜೊತೆಗೆ  ಕೈಗೆ ಬಿಸಿ ಬಿಸಿ ಪೆಟ್ಟು ಹಾಗೂ ಬಸ್ಕಿ ಇಪ್ಪತ್ತೈದು. ಅದೆಷ್ಟೋ ಸಲ ಯುನಿಫಾರ್ಮ್ ಮರೆತು ಬಣ್ಣದ ಫ್ರಾಕ್,ಉದ್ದಲಂಗ ಹಾಕಿ ಬಂದು ಶಂಕಿಬಾಯಿ ಟೀಚರ್ ಹತ್ತಿರ ಪೆಟ್ಟು ತಿಂದದ್ದು, ಚುರ್ ಚುರ್ ಎನ್ನುವ ಚೂಪು ನೆನಪು. ಆ ಧ್ವಜಸ್ತಂಭ ನೋಡಿದಾಗೆಲ್ಲ ಚಿತ್ತದಲ್ಲಿ ಅದರ ಎದುರು ಸಾಲಾಗಿ ಒಂದೇ ಬಗೆಯ ದಿರಿಸು ತೊಟ್ಟ ವಿಧ್ಯಾರ್ಥಿಗಳ ಚಿತ್ರವೇ ತುಂಬಿಕೊಳ್ಳುವುದು. ಅದೆಷ್ಟು ಅಂದ- ಚೆಂದ. ಒಬ್ಬರು ಬಟ್ಟೆಯ ಬಣ್ಣ ಬೇರೆಯಾದರೂ ಬಿಳಿ ಅಂಗಿಗೆ ಶಾಹಿ ಕಲೆಯಾದಂತೆ, ನೂರು ಸರಿಗಳ ನಡುವೆ ತಪ್ಪೊಂದು ಎದ್ದು ನಿಂತಂತೆ  ಕಾಣಿತ್ತಿತ್ತು. ನಮ್ಮ ಶಂಕಿ ಟೀಚರ್, ಶೇಖರ ಮಾಸ್ಟ್ರು ಧ್ವಜಸ್ತಂಭದ ಬಳಿಯಿಂದಲೇ ಅಂತಹ ಅಂಗಿಗಳ ಲೆಕ್ಕ ಹಾಕಿ ಬಿಡುತ್ತಿದ್ದರು‌.  ನಮ್ಮ ಅ ಡ್ರಿಲ್ ಗೆ ಅನುಪಮ ಸೌಂದರ್ಯವಿತ್ತು. ಬೆಳಗ್ಗಿನ ಬಿಸಿಲೂ ಹೆಗಲು,ಕೆನ್ನೆ,ತಲೆ ಸವರಿ ಸಣ್ಣಗೆ ಬೆವರುತ್ತಿದ್ದೆವು. ಜೊತೆಜೊತೆಗೆ ನಡೆಸುತ್ತಿದ್ದ ಕವಾಯತ್. ಇರಲಿ. ಇಲ್ಲಿಂದ ಮುಂದೆ ಬಂದರೆ ನಮಗೆ ಕಾಣಿಸುವುದು ಬೆಳಗ್ಗೆ ಯಾವಾಗಲೂ ನಮಗಿಂತಲೂ ಬೇಗ ಬರುತ್ತಿದ್ದ ಗೌರಿ ಟೀಚರ್ . ಇವರು ಬೆಳ್ಳನೆ ಉದ್ದಕ್ಕಿದ್ದು  ಸೀರೆ  ಸ್ವಲ್ಪ ಮೇಲೆ ಉಡುತ್ತಿದ್ದರು. ಉರೂಟು ಕಣ್ಣು, ಬೈತಲೆ ತೆಗೆದು ಎಣ್ಣೆ ಹಾಕಿ ಬಾಚಿದ  ದಪ್ಪ ಮೋಟು ಜಡೆ,.ಕೈಯಲ್ಲಿ ಎರಡು ಪುಸ್ತಕದ ಜೊತೆ ಒಂದು ಸಪೂರ ಕೋಲು. ಆದರೆ ಅವರ ಕೋಲಿಂದ  ಪೆಟ್ಟು ತಿಂದವರು ಬಹಳ ಕಡಿಮೆ. ಇವರು ನಮ್ಮ ಇಷ್ಟದ ಟೀಚರ್. ಅವರದ್ದು ಮೂಲೆಯ ಕ್ಲಾಸ್. ಅಲ್ಲಿ ಕೊಂಚ ಸಪೂರ ಜಗಲಿ. ಶಾಲೆಯ ವರಾಂಡಾದ ಎದುರು ಹೂವಿನ ಹಾಗೂ ಬಣ್ಣದೆಲೆಗಳ ಕ್ರೋಟಾನ್ ಗಿಡಗಳು.  ವಾರಕ್ಕೆ ಒಂದು  ದಿನ  ಗಿಡಗಳ ಬಳಿ  ಬೆಳೆದ ಕಳೆ ಕೀಳುವ, ಕಸ ಹೆಕ್ಕುವ ಕೆಲಸ ಮಕ್ಕಳಿಗೆ ಅಂದರೆ ನಮಗೆ. ನಾವು ಕುಕ್ಕರುಗಾಲಲ್ಲಿ,ಮೊಣಕಾಲೂರಿ, ಬಗ್ಗಿ  ಬೇಡದ ಹುಲ್ಲು ಕೀಳುತ್ತಿದ್ದೆವು. ಕೆಲಸಕ್ಕಿಂತ ಮಾತೇ ಹೆಚ್ಚು.  ಟೀಚರ್ ಬಂದು ” ಎಂತ ಪಂಚಾತಿಗೆ ಕೂತು ಕೊಂಡದ್ದಾ. ಬೇಗಬೇಗ” ಎಂದು ಗದರಿಸಿದಾಗ    ಕಪ್ಪೆ ಹಾರಿದಂತೆ ಹಾರಿ ಹಾರಿ ದೂರವಾಗುತ್ತಿದ್ದೆವು. ಟೀಚರ್ ಬೆನ್ನು ಹಾಕಿದೊಡನೆ ಮತ್ತೆ ನಮ್ಮ ಮಾತು. ಗಂಡು ಹೆಣ್ಣು ಭೇದವಿಲ್ಲ. ಅದೂ ನಮ್ಮಲ್ಲಿ ಕ್ಲಾಸ್ ಲೀಡರ್ ಹುಡುಗಿಯರಾದರೆ ನಮಗೆ ಹುಡುಗರತ್ರ  ಕೆಲಸ ಮಾಡಿಸುವುದೇ ಬಹಳ ಖುಷಿ!. ಜಗಳವಾದರೆ ಮರು ಕ್ಷಣದಲ್ಲಿ ಕೈ ಕೈ ಹಿಡಿದು ಜಿಗಿದೋಡುವ ಕಲೆ ಕಲಿತದ್ದೇ ಹೀಗೆ. ಪಠ್ಯೇತರ ಚಟುವಟಿಕೆಗಳು ಬದುಕನ್ನು ರೂಪಿಸುವ, ಟೀಂವರ್ಕ್ ನಲ್ಲಿ ಹೊಂದಿ ನಡೆಯುವ, ಎಲ್ಲಾ ಕೆಲಸಗಳನ್ನು ಗೌರವಿಸುವ,  ರೀತಿ ಕಲಿಸಿತು. ನಾಟಕದಲ್ಲೂ ಅಷ್ಟೇ, ಪಾತ್ರಗಳು ಹೊಂದಿ ನಡೆದರೇ ಛಂದವೂ ಚಂದವೂ. ರಂಗಸ್ಥಳದಲ್ಲಿ ಪಾತ್ರಪೋಷಣೆ ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯ ಚೌಕಿಯಲ್ಲಿ ಬೆರೆಸುವ ಬಣ್ಣಗಳು, ನಟ ನಟಿಯರ ನಡುವಿನ ಕೆಮಿಸ್ಟ್ರಿ. ಆಗೆಲ್ಲ ಇಡೀ ಊರಿನ ಮಕ್ಕಳೆಲ್ಲ ಈ ಶಾಲೆಯಲ್ಲೇ ಓದುವುದು. ಒಂದು ಮನೆಯ ಹುಡುಗಿ ಮಾತ್ರ ಆಂಗ್ಲ ಮಾಧ್ಯಮ ಶಾಲೆಗೆ ಊರಿನಿಂದ ಹೊರ ಹೋಗುತ್ತಿದ್ದ ನೆನಪು. ನಮಗೆ ಅವಳು ಅಸ್ಪೃಶ್ಯ ಳು. ಆದರೆ ನಮ್ಮ ಮಾತುಕತೆಯ ಕೇಂದ್ರ ಆಕೆಯಾಗಿರುತ್ತಿದ್ದಳು. ಇಂಗ್ಲೀಷಿನಲ್ಲೇ ಎಲ್ಲ ಪಾಠವಂತೆ!. ಅದು ನಮಗೆ ವಿಸ್ಮಯ, ಅದ್ಭುತ. “ಒಂದನೇ ಕ್ಲಾಸಿನಲ್ಲಿ ABC’D ಕಲಿಸ್ತಾರಂತೆ, ಇಂಗ್ಲೀಷ್ ಮಾತನಾಡುದಂತೆ, ವಿಜ್ಞಾನ, ಗಣಿತ,ಸಮಾಜ ಎಲ್ಲವೂ ಇಂಗ್ಲೀಷ್.  ಅಲ್ಲಿ ಹೋದವರು ಮಾತನಾಡುವುದು ಹೇಗೆ ಗೊತ್ತುಂಟಾ..ಟುಸ್ ಟುಸ್ ವಾಸ್ ಶ್ ಸು !!” ಎಂದು ಚಿತ್ರ ವಿಚಿತ್ರವಾಗಿ ಬಾಯಿಯ ಚಲನೆ ಹೊಂದಿಸಿ ಮಾತಾಡಿ ಅಣಕಿಸಿ ಹೊಟ್ಟೆ ಬಿರಿಯೆ ನಗುತ್ತಿದ್ದೆವು. ನಮ್ಮ‌ಸಂಜೆಯ ಮನೆಯಾಟದಲ್ಲಿ ಒಂದು ಪಾತ್ರ ಅದೇ ಆಗಿರುತ್ತಿತ್ತು.  ಆಗಿನ ಊರ ಶ್ರೀಮಂತರ ಮನೆಯ ಮಕ್ಕಳೂ  ಸರಕಾರಿ ಶಾಲೆಯಲ್ಲೇ ಓದುವುದು. ಈ ಕಳೆ ಕೀಳುವ ಕೆಲಸಕ್ಕೆ ಒಂದಷ್ಟು ಬಡ್ತಿ ದೊರಕಿದ ನಂತರ ನಾವು ಆ ಮಕ್ಕಳ ಬಳಿ ಹೋಗಿ ” ಹೇ ಸಂದೀಪ ಸರಿ ಕಿತ್ತು ತೆಗೆ ಹುಲ್ಲು. ರಾಜೇಶ ಕಡ್ಡಿ, ಪೇಪರ್ ಹೆಕ್ಕು” ಎಂದು ಅವರಿಂದ ಚೂರು ಹೆಚ್ಚು ಕೆಲಸ ಮಾಡಿಸುವ ಖುಷಿ ಹೆಕ್ಕಿದ್ದೂ ಇದೆ. ಮುಗ್ದ ಮನಸ್ಸಿನ ದ್ವೇಷರಹಿತ ಕಾರ್ಯವದು. ಇಲ್ಲಿ ನೋಡಿ!  ಓಡಿಕೊಂಡು ಬಂದಂತೆ ಬರುತ್ತಿದ್ದಾರಲ್ವಾ!, ಅವರೇ ಸುಮನ ಟೀಚರ್. ತುಸು ಸಿಟ್ಟಿನ ಮುಖ.  ಇವರು ಐದನೆಯ ಕ್ಲಾಸಿಗೆ ಇಂಗ್ಲೀಷ್ ಪಾಠ ಮಾಡುವುದು. ನಮಗೆ ಇವರೆಂದರೆ ಬಹಳ ಭಯ. ಅವರ ಬಳಿ ಒಂದು ಹಳದಿ ಬಣ್ಣದ ಸೀರೆಯಿದೆ. ಅದನ್ನು ಉಟ್ಟು ಬಂದ ದಿನ ಅವರಿಗೆ ಹೆಚ್ಚು ಕೋಪ ಬರುತ್ತದೆ ಎಂಬುದು ನಮ್ಮಗಟ್ಟಿ ನಂಬಿಕೆ. ನಾವು ಬೆಳಗ್ಗೆ ಅವರು ಬರುವುದನ್ನೇ ಒಂದಷ್ಟು ಭಯದಿಂದ ಕಾಯುತ್ತಿದ್ದೆವು. ಒಬ್ಬರಿಗೆ ಅದೇ ಕೆಲಸ ವಹಿಸಿಕೊಟ್ಟಿದ್ದೆವು. ದೂರದಿಂದ ಅವರು ಓಡಿ ಬರುವಾಗ ಹಳದಿ ಬಣ್ಣ ಕಂಡರೆ ನಮ್ಮ ಭಯ ವಿಪರೀತ ಹೆಚ್ಚಿ ಕೂಡಲೇ ಗುಪ್ತ ಸಮಾಲೋಚನೆ ಆರಂಭಿಸುತ್ತಿದ್ದೆವು. ಯಾವ ಪಾಠದ ಪ್ರಶ್ನೆ ಕೇಳಬಹುದು. ಎಣ್ಣೆ ತಾಕಿದರೆ ಪೆಟ್ಟು ಹೆಚ್ಚು ನೋವಾಗುವುದಿಲ್ಲವಂತೆ.  ಅಂಗೈಗಳನ್ನು ಎಣ್ಣೆ ಹಾಕಿದ ತಲೆಗೆ ತಿಕ್ಕಿ ತಿಕ್ಕಿ ಪರೀಕ್ಷಿಸುವುದು.  ಕೆಲವು ಹುಡುಗಿಯರ ತಲೆತುಂಬ ಎಣ್ಣೆ. ನಮ್ಮ ಕ್ಲಾಸಿನಲ್ಲಿ ಮಮತಾ ಎಂಬ ಹುಡುಗಿಯ ತಲೆ ಕೂದಲಲ್ಲಿ ಬಹಳ ಎಣ್ಣೆ. ನಾವೆಲ್ಲ ಅವಳ ತಲೆಗೆ ನಮ್ಮ ಅಂಗೈ ತಿಕ್ಕಿ ಪೆಟ್ಟು ತಿನ್ನಲು ಮಾನಸಿಕವಾಗಿ ಸಿದ್ದಗೊಳ್ಳುತ್ತಿದ್ದೆವು. ಜೊತೆಗೆ ಪುಸ್ತಕ ತೆಗೆದು ವೇಗವಾಗಿ ಓದುವ ತಾಲೀಮು.  ಹೀಗೆ ಬನ್ನಿ! ಇಲ್ಲಿದ್ದಾರೆ ನಮ್ಮ ಶಂಕಿ ಟೀಚರ್. ಅವರಲ್ಲಿ ಪೆಟ್ಟಿನ ಖಾರವೂ ಇದೆ, ಜೊತೆಗೆ ಪ್ರೀತಿಯ ಸಿಹಿಯೂ ಉಂಟು. ಅಗಲಹಣೆಯ ಮುಖ, ವಾತ್ಸಲ್ಯ ಅವರ ಕಣ್ಣಿನಲ್ಲಿ ಒಸರುತ್ತದೆ. ಸ್ವಲ್ಪ ವಯಸ್ಸಾಗಿದೆ. ದೊಡ್ಡ ಸೂಡಿ ಕಟ್ಟಿ ಹೂ ಮುಡಿದು ಬರುತ್ತಿದ್ದರು. ನಾವು ಅವರಿಗಾಗಿ ಹೂವಿನ ಮಾಲೆ ತರುವಲ್ಲಿ ಪೈಪೋಟಿ ನಡೆಸುತ್ತಿದ್ದೆವು. ನನ್ನ ಪಕ್ಕ ಕೂತುಕೊಳ್ಳುವ ಶಾಲಿನಿ ಮನೆಯಲ್ಲಿ ರಾಶಿ ಅಬ್ಬಲಿಗೆ. ಹಾಗೆ ಅವಳಿಗೆ ನಾನೆಂದರೆ ಮೆಚ್ಚು. ಆಗಾಗ ಮನೆಯಿಂದ ಚಿಕ್ಕ ಮಾಲೆ ಪಾಟೀ ಚೀಲದೊಳಗೆ ಹಾಕಿ ನನಗೆ ತಂದು ಕೊಡುತ್ತಿದ್ದಳು. ಕೆಲವಷ್ಟು ಸಲ ನನ್ನಜ್ಜಿ ಜಾಜಿ ಮಲ್ಲಿಗೆ ದಂಡೆಯನ್ನು ಕೊಡುತ್ತಿದ್ದಳು.  ಶಾಲಿನಿ “ನೀನು ಮುಡಿ” ಎನ್ನುತ್ತಿದ್ದಳು. ಅವಳಿಗೆ ನನ್ನ ಉದ್ದದ ಎರಡು ಜಡೆ ಕಂಡರೆ ಇಷ್ಟ. ಆದರೆ ನಾನು ಕ್ಲಾಸಿನ ಹೊರಗೆ ಬಾಗಿಲ ಬಳಿ ಕೈಯಲ್ಲಿ ಹೂವನ್ನು ಹಿಡಿದು ಬಲು ಆಸೆಯಿಂದ ಶಂಕಿ ಟೀಚರ್ ಗೆ ಕೊಡಲು ಕಾಯುತ್ತಿದ್ದೆ. ನಮ್ಮ ಶಾಲೆಗೆ ಒಂದು ದಿನಪತ್ರಿಕೆಯೂ ಬರುತ್ತಿತ್ತು. ಅದನ್ನು ದಿನಕೊಬ್ಬರಂತೆ ಓದಿ ಮುಖ್ಯ ವಿಷಯಗಳನ್ನು ಬೋರ್ಡಿನಲ್ಲಿ ಕ್ರಮಪ್ರಕಾರ ಬರೆಯಬೇಕಿತ್ತು. ನಾವೆಲ್ಲ ಆಕಾಶವಾಣಿಯ ವಾರ್ತಾವಾಚಕರಿಗಿಂತಲೂ ಹೆಚ್ಚಿನ ಚೆಂದದಲ್ಲಿ ನಮ್ಮದೇ  ಶೈಲಿಯಲ್ಲಿ ಓದುವುದು, ಕೆಲವೊಮ್ಮೆ ಹಿಂದಿನಿಂದ ಬಂದ ಟೀಚರ್ ಕೈಯಲ್ಲಿ ಪೆಟ್ಟು ತಿಂದು ನಮ್ಮ ಬೆಂಚ್ ಗೆ ಓಡುವುದೂ ಆಗಾಗ ಚಾಲ್ತಿಯಲ್ಲಿದ್ದ  ವಿಷಯ. ಆಗ ನಾಲ್ಕನೆಯ ಎ ತರಗತಿಗೆ ರಾಘವ ಮೇಷ್ಟ್ರು , ಅವರು ಆಗಾಗ ಮಧ್ಯಾಹ್ನ ಎರಡೂ ತರಗತಿ ಸೇರಿಸಿ ಪಾಠ ಮಾಡುತ್ತಿದ್ದರು. ಜೊತೆಗೆ ಹಾಡು ಹಾಡುವಂತೆ ಪ್ರತಿಯೊಬ್ಬರಿಗೂ ತಾಕೀತು. ನನಗೆ ಅಂಜಿಕೆ,ನಾಚಿಕೆ. ಆದರೆ ಅಜ್ಜಿ ಹೇಳಿದ್ದಾಳೆ ದಂಡನಾಯಕಿಯಾಗಬೇಕು. ಆಗ ಒಂದು ಹಾಡು ಕಂಠಪಾಠ. ನನ್ನ ಕೆಲವು ಗೆಳತಿಯರೂ ಒಂದೊಂದು ಹಾಡು ಹಾಡುತ್ತಿದ್ದರು. ಈ ಒಂದೊಂದು ಹಾಡು ಎಂದರೆ ನಮಗೆ ಆ ವರ್ಷ ಪೂರ್ತಿಯಾಗಿ ಅದನ್ನು ಉಪಯೋಗಿಸಿ ಮುಂದಿನ ತರಗತಿಯಲ್ಲೂ ಹಾಡಲು ಹೇಳಿದರೆ ಅದೇ ಪದ್ಯ ಅಷ್ಟೇ  ಚೆಂದದಲ್ಲಿ  ಹಾಡುತ್ತಿದ್ದೆವು. ನನ್ನದು ಧರ್ಮಸೆರೆ ಚಿತ್ರದ ” ಕಂದಾ ಓ ನನ್ನ ಕಂದ..” ಎಂಬ ಹಾಡು. ನನಗೆ ಆ ಹಾಡಿನ ಮೇಲೆ ಎಂತಹ ಅಭಿಮಾನವೆಂದರೆ ಅಷ್ಟು ಉತ್ತಮವಾದ ಹಾಡು ಬೇರೊಂದಿಲ್ಲ. ನಾನು ಎದ್ದ ತಕ್ಷಣ ಎಲ್ಲ ಗಂಡು,ಹೆಣ್ಣೂ ಮಕ್ಕಳೂ “ಕಂದಾ..” ಎಂಬ ಆಲಾಪ ಶುರು ಮಾಡುತ್ತಿದ್ದರು. ಆದರೆ ಇದು ನನ್ನ ಒಬ್ಬಳದೇ ಸಮಸ್ಯೆಯಲ್ಲ. ಎಲ್ಲರ ಒಳಗೂ ಒಂದೊಂದು ಹಾಡಿನ ಮುದ್ರಿಕೆ ಅಚ್ಚಾಗಿ ಬಿಟ್ಟಿತ್ತು.  ನನಗೆ ನನ್ನ ಈ  ಹಾಡಿನ ವೃತ್ತದಿಂದ ಮೇಲೆದ್ದು ಹೊಸತೊಂದು ಹಾಡು ಹಾಡಬೇಕು  ಎಂಬ ಯೋಚನೆ, ಹಠದಿಂದ  ಬೇರೆ ಹಾಡನ್ನೂ ಕಲಿತಿದ್ದೆ. ಅದನ್ನು ಹಾಡಿ ಭೇಷ್ ಎನಿಸಿಕೊಳ್ಳಬೇಕು. ಈ ಹುಡುಗರ ” ಕಂದಾಆಆಅ” ಎಂಬ ಲೇವಡಿಯಿಂದ ಬಚಾವಾಗಬೇಕು. ನನಗೆ ಸಿಕ‌್ಕಿತು ಹೊಸ ಹಾಡು. ಹಾಡಲೂ ತಯಾರಾದೆ. ಹೊಸ ಹಾಡು. ಹಾಡಿನ ಸರದಿ ಆರಂಭ ಆಗುತ್ತಿದ್ದಂತೆ ಮನಸ್ಸಿನೊಳಗೆ ವೇಗವಾಗಿ,ನಿಧಾನವಾಗಿ ಶ್ರುತಿಬದ್ದವಾಗಿ ಹಾಡಿ ಅನುವಾದೆ. ಹೊಸದರ  ಪುಳಕ. ನನ್ನ ಹೆಸರು ಬಂದಾಗ‌ ಎದ್ದು ಮನದೊಳಗೆ ಮತ್ತೆ ಹೊಸ ಹಾಡು ಉರು ಹೊಡೆಯುತ್ತ ಎದುರು ಹೋದೆ. ಏಕ ಚಿತ್ತದಲ್ಲಿ ನಿಂತು  ಶುರು ಮಾಡಿದರೆ  ಕಂಠದಿಂದ ಮೈಕೊಡವಿ ಎದ್ದು  ಹೊರಬಂದದ್ದು “ಕಂದಾ..ಓ ನನ್ನ..”  ಇಂತಹ ಒಂದೆರಡು ಪ್ರಯತ್ಮ ಮತ್ತೆ ಮಾಡಿ ಕೊನೆಗೆ ನನ್ನ  ಈ ಹಾಡಿನೊಂದಿಗೆ ಜೊತೆಯಾಗಿ ಇರುವ ಸಂಕಲ್ಪವನ್ನೇ ಗಟ್ಟಿ ಮಾಡಿದ್ದೆ. ಈಗಲೂ ನಮ್ಮ ಕ್ಲಾಸಿನ ಸಹಪಾಠಿ ಗಳು ಸಿಕ್ಕರೆ ಅವರು ಹಾಡುತ್ತಿದ್ದ ಹಾಡು ನೆನಪಾಗುತ್ತದೆ. ಅದು ಉಳಿದವರಿಗೂ ಕಂಠಪಾಠ. ಬೆಲ್ಲದ ಸವಿ. ನಮ್ಮ ಶಾಲೆಯಲ್ಲಿ ಆಗ ಫ್ಯಾನ್ ಗಳು ಇರಲಿಲ್ಲ. ಹಾಗಾಗಿ  ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ತರಗತಿ ಸೆಖೆ. ಅದು ನಮಗೇನೂ ಆಗ ಭಾದೆ ಎಣಿಸುತ್ತಿರಲಿಲ್ಲ.  ಮಾಸ್ಟರ್ರು ಮಾತ್ರ ಕೆಲವು ಸಲ ಶಾಲೆಯ ಹೊರಗೆ ಹಿಂಬದಿಯ  ದೇಗುಲದ ತೋಪಿನಲ್ಲಿ ಪಾಠ ಮಾಡುತ್ತಿದ್ದರು.ಅಲ್ಲಿ ಹಳೆಯ ಹುಣಿಸೆ, ಮಾವು, ದೇವದಾರು ಮರಗಳಿದ್ದವು. ನಮಗದು ಬಹಳ ಮೋಜಿನ ತರಗತಿ. “ಸರ್, ಸಾರ್..ಇವತ್ತು ಕ್ಲಾಸ್ ಹೊರಗೆ ಮಾಡುವ. ಸಾರ್..ಅಲ್ಲಿ ಪಾಠ ಮಾಡಿ”  ನಮ್ಮದು ಗೋಗರೆತ. ಅವರು ” ಆಯಿತು” ಎಂದದ್ದೇ ತಡ ಹುಡುಗರು ಅವರು ಕುಳಿತುಕೊಳ್ಳುವ ಕುರ್ಚಿ ಎತ್ತಿ ಹಿಡಿದು ಓಡುತ್ತಿದ್ದರು. ನಾವು ಬೇಗ ಓಡಿ ಮೊದಲು ಹುಣಿಸೆ ಹಣ್ಣು ಬಿದ್ದಿದೆಯಾ ಎಂದು ಹುಡುಕಾಡಿ ಹೆಕ್ಕುತ್ತಿದ್ದೆವು. ಸಿಕ್ಕಿದರೆ ಸ್ವಲ್ಪ ಪಾಟಿ ಚೀಲದಲ್ಲಿ ಅಡಗಿಸಿ, ನಂತರ ಸಿಗದವರಿಗೆ ತೋರಿಸಿ  ಹಂಚಿ ತಿನ್ನುವ ಗಮ್ಮತ್ತು. ನಮ್ಮ‌ ಮೇಸ್ಟರಿಗೆ ಮಾತ್ರ ಕುರ್ಚಿ. ನಾವು ಅಲ್ಲಿ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಅರಿವಿನ ನಾವೆಯ ಮೇಲೆ ಸುಖ ಪಯಣ… “Every human being lives in a perpetual state of insuffiency. No matter who you are or what you have achieved, you still want a little more than what you have right now…“ -Sadhguru (Inner Engineering) ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮೊಳಗೆ ಸದಾ ಜಾಗೃತ ಮತ್ತು ಜೀವಂತ ಇಲ್ಲದೆ ಹೋಗಿದ್ದಿದ್ದರೆ ನಾವೆಲ್ಲ ಬಹುಶಃ ಕೈಕಟ್ಟಿ ಮೂಲೆಹಿಡಿದುಬಿಡುತ್ತಿದ್ದೆವು ಅನಿಸುತ್ತದೆ. ನನಗಂತೂ ಬಲೇ ಸೋಜಿಗವೆನಿಸಿಬಿಡುತ್ತದೆ ಒಮ್ಮೊಮ್ಮೆ. ಅರೆ ನನಗ್ಯಾಕೆ ಸುಮ್ಮನಿರಲಾಗುವುದಿಲ್ಲ ನನ್ನ ಪಾಡಿಗೆ. ಎಲ್ಲರೂ ಮನೆ, ಗಂಡ , ಮಕ್ಕಳು, ನೌಕರಿ, ಸಂಬಳ, ಚಂದದ ಬಟ್ಟೆ, ಮದುವೆ ದಿಬ್ಬಣ…. ಅಂತೆಲ್ಲ ಖುಷಿ ಎನ್ನುವುದು ಕಾಲು ಮುರಿದುಕೊಂಡು ಅವರ ಕಾಲ ಬುಡದಲ್ಲೇ ಬಿದ್ದಿದೆ ಎನ್ನುವಷ್ಟು ನೆಮ್ಮದಿಯಾಗಿರುವಾಗ ನಾವಾದರೂ ಹೀಗೆಲ್ಲ ಮನಸಿನ ಹುಚ್ಚಿಗೆ ಬಲಿಯಾಗಿ ಕಣ್ತುಂಬ ನಿದ್ದೆ ಮತ್ತು ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತಿರುತ್ತೇವಲ್ಲ ಏಕೆ… ಒಂದು ಕವಿತೆಯೋ, ಒಂದು ಕತೆಯೋ ಅಥವಾ ಒಂದು ಸಣ್ಣ ಬರಹದ ತುಣುಕೋ ಈ ಬೆರಳುಗಳ ಕುಟ್ಟುವಿಕೆಯಿಂದ ಹುಟ್ಟಿಬಿಟ್ಟರೆ ಸಿಗುವ ಸಂತೋಷ ಇದೆಯಲ್ಲ ಇನ್ಯಾವುದರಲ್ಲೂ ಅದು ಸಿಗಲಾರದು ಎನಿಸಿಬಿಡುತ್ತದೆ. “ಈ ಓದು ಬರಹ ಅಂತೆಲ್ಲ ಏನೇನೋ ಮಾಡೋದು ಬಿಟ್ಟು ಮನೆ, ಮಕ್ಕಳು, ಸಂಸಾರ ಅಂತ ಜವಾಬ್ದಾರಿಯಿಂದ ಬದುಕೋದನ್ನ ಕಲಿ…” ಎನ್ನುವ ಈ ಮಾತನ್ನ ನನ್ನಮ್ಮ ಅದೆಷ್ಟು ಬಾರಿ ಹೇಳಿದ್ದಾರೋ… “ಅಲ್ಲ ನಿಮ್ಗೆ ಟೈಮ್ ಎಲ್ಲಿಂದ ಸಿಗುತ್ತೆ ಇದನ್ನೆಲ್ಲ ಮಾಡೋಕೆ… ಮೋಸ್ಟ್ಲಿ ನೀವು ಮನೇಲಿ ಬರಿ ಬರೆಯೋದೆ ಕೆಲ್ಸ ಮಾಡ್ತೀರೇನೋ ಅಲ್ವ… ನಮ್ಗಂತು ಹಾಗಲ್ಲಪ್ಪಾ… ಮನೆಗ್ಹೋದ್ರೆ ಎಪ್ಪತ್ತಾರು ಕೆಲ್ಸ… ಇಂಥವೆಲ್ಲ ಮಾಡೋಕೆ ಟೈಮೇ ಸಿಗಲ್ಲ ಗೊತ್ತಾ…” ಅಂತೆಲ್ಲ ಮಾತಾಡುವ ಗೆಳೆಯರು, ಸಹೋದ್ಯೋಗಿಗಳು… ಇವೆಲ್ಲ ಸುಳ್ಳೂ ಅಲ್ಲ. ಹಾಗಂತ ಪೂರ್ಣ ಸತ್ಯವೂ ಅಲ್ಲ. ಎಲ್ಲರ ತೃಪ್ತಿಗೂ ಕಾರಣ ಒಂದೇ ಆಗಿರಲು ಸಾಧ್ಯವಿಲ್ಲ. ಹಕ್ಕಿಗೆ ಹಾರಾಟದಲ್ಲಿ ಖುಷಿ, ಮೀನಿಗೆ ಈಜಾಟದಲ್ಲಿ ಖುಷಿ. ಹಾರುವುದು ಹಕ್ಕಿಗೆ ಸಹಜ ಕ್ರಿಯೆ, ಈಜುವುದು ಮೀನಿಗೆ ಸಹಜ ಕ್ರಿಯೆ. ಹಾಗಯೇ ತನ್ನ ಮೆದುಳು ಮತ್ತು ಬುದ್ಧಿಶಕ್ತಿಯಿಂದ ಭಿನ್ನವಾಗಿ ನಿಲ್ಲುವ ಮನುಷ್ಯನಿಗೆ ಹಲವಾರು ಆಸಕ್ತಿ ಮತ್ತು ಅಭಿರುಚಿಗಳು. ಅಂತೆಯೇ ಅವನ ತೃಪ್ತಿಯ ಕಾರಣಗಳೂ ಸಹ. ನನಗೂ ಒಂದು ಬರೆಹ ಹುಟ್ಟಿದ ಕ್ಷಣ ಸಿಗುವ ಆನಂದ ಮತ್ಯಾವುದರಲ್ಲೂ ಸಿಗುವುದಿಲ್ಲ. ಇನ್ನು ಸಮಯದ ವಿಚಾರಕ್ಕೆ ಬಂದರೆ ಒಂದು ದಿನದಲ್ಲಿ ನಿರಂತರ ಕೆಲವು ಘಂಟೆಗಳು ಒಟ್ಟಾಗಿ ಸಿಗುವುದಿಲ್ಲ. ಆದರೆ ಸಿಗುವ ಸಣ್ಣ ಸಣ್ಣ ಸಮಯವನ್ನು ಪೋಣಿಸಿಟ್ಟುಕೊಂಡು ಪ್ರೀತಿಯಿಂದ ಬರಹ ಕಟ್ಟುವುದೂ ಒಂದು ಸವಾಲು. ಆದರೆ ಅದೊಂದು ಸುಖವಾದ ಸವಾಲು. ಪ್ರತಿ ಬಾರಿಯೂ ಆ ಸವಾಲನ್ನು ಗೆದ್ದು ಬರೆಯುವಾಗ ಸಿಗುವ ಖುಷಿ ಅನನ್ಯ. ಹಾಗಾಗಿ ಸಮಯ ಸಿಗುವುದಿಲ್ಲ, ಸಮಯವಿಲ್ಲ ನನಗೆ ಎನ್ನುವುದು ಸಮಸ್ಯೆಯಾಗಿ ಇದುವರೆಗೂ ಕಾಡಿಯೇ ಇಲ್ಲ. ಹಾಡು ಹಸೆ ಸಂಗೀತ ನೃತ್ಯದಂತೆ ಬರೆಹವೂ ಒಂದು ಆಸಕ್ತಿಕರ ಕ್ಷೇತ್ರ. ಮತ್ತದು ಬಹಳವೇ ಪರಿಣಾಮಕಾರಿ ಕ್ಷೇತ್ರವೂ ಹೌದು. ಬರೆಹ ಎನ್ನುವುದು ನಮ್ಮೊಳಗಿನ ಗ್ರಹಿಕೆಯನ್ನು ಹೊರ ಬರುವಂತೆ ಮಾಡುತ್ತದೆ. ಅದು ಮತ್ತೊಬ್ಬರ ಮನದ ಭಾವಕ್ಕೆ ಸಂತೈಕೆಯಾಗಿಯೂ, ಅವರ ಮನದ ಮಾತಿಗೆ ದನಿಯಾಗಿಯೂ ಸಮಾಧಾನ ಕೊಡುತ್ತದೆ. ಓದು ನಮ್ಮನ್ನು ಪ್ರಬುದ್ಧ ವ್ಯಕ್ತಿಗಳನ್ನಾಗಿ ಬದಲಾಯಿಸುತ್ತದೆ, ನಮ್ಮ ಅಹಂಕಾರವನ್ನು ಕಳೆಯುತ್ತದೆ. ಭಾವಗಳ ಹೊರಹೊಮ್ಮುವಿಕೆಗೆ ಮಾಧ್ಯಮವಾಗುವ ಬರೆಹ ನಮ್ಮ ದುಗುಡದ ಮೋಡಗಳನ್ನು ಕರಗಿಸಿ ತಿಳಿ ನೀಲ ಆಗಸವನ್ನಾಗಿ ಮಾರ್ಪಾಟು ಮಾಡುತ್ತದೆ. ಬರಹ ನನ್ನ ಜೀವನದ ಭಾಗವಾದ ಮೇಲೆ, ನನ್ನ ವ್ಯಕ್ತಿತ್ವದಲ್ಲಾಗಿರುವ ಬದಲಾವಣೆಯನ್ನು ಗಮನಿಸುವಾಗ, ಹಾದು ಬರಹ ನಮ್ಮನ್ನು ಗಟ್ಟಿಯಾಗಿಸುತ್ತದೆ. ಎಂತಹ ಸಮಸ್ಯೆ ಬಂದರೂ ಧೈರ್ಯ ಮತ್ತು ತಿಳುವಳಿಕೆಯಿಂದ ಎದುರಿಸುವ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ.   ಬರೀ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಂಡ ಅದೆಷ್ಟೋ ಜನ ಇದ್ದಾರೆ. ಆದರೆ ಬರೆಹಗಾರನಿಗೆ ಮಾತ್ರ ಎರಡೆರಡು ಉಪಯೋಗ. ಒಂದು ಓದಿದ್ದು, ಮತ್ತೊಂದು ಬರೆದದ್ದು. ಯಾವ ಕಲೆಯೇ ಆಗಿರಲಿ ತನಗೆ ಬೇಕಾದವರಿಂದ ತನ್ನ ಕ್ಷೇತ್ರಕ್ಕೆ ಬೇಕಾದ ಸೇವೆಯನ್ನು ಪಡೆಯುತ್ತದೆ. ಬರೆಹ ಕಲಿತವರೆಲ್ಲ, ಬರೆಯುವ ಶಕ್ತಿ, ಸಾಮರ್ಥ್ಯವಿದ್ದವರೆಲ್ಲ ಬರೆಯುವುದು ಸಾಧ್ಯವಾಗುವುದಿಲ್ಲ. ಬಹಳಷ್ಟು ಸಾರಿ ಬರೆಹವೇ ಬರೆಹಗಾರನ ಕೈಲಿರುವುದಿಲ್ಲ. ಆದರೆ ಅದರ ಮೇಲೆ ತನ್ನ ಹಕ್ಕು ಚಲಾಯಿಸಲು ಹೊರಡುವುದು ಯಾರಿಗೇ ಇರಲಿ ಹರಿವಿಗೆ ವಿರುದ್ಧವಾಗಿ ಈಜುವ ಹಾಗೆ ದುಸ್ಸಾಹಸವೇ ಸರಿ. ಶಿಕ್ಷಕನನ್ನು ಚಿರಂತನ ವಿದ್ಯಾರ್ಥಿ ಎನ್ನುವ ಹಾಗೆ ಬರೆಹಗಾರ ಚಿರಂತನ ಓದುಗನಾಗಿರಬೇಕಾಗಿರುತ್ತದೆ. ಬರೆಹಗಾರ ಇತಿಹಾಸಕಾರನೂ ಆಗುತ್ತಾನೆ, ಕಾಲಜ್ಞಾನಿಯೂ ಆಗುತ್ತಾನೆ. ಅದಕ್ಕೇ ಅವನಿಗೆ ಎಷ್ಟೊಂದು ಮಾನ್ಯತೆ! ಮಾನ್ಯತೆಗಾಗಿ ಬರೆಯ ಹೊರಟರೆ ಬಹಳ ಬೇಗ ಎದುಸಿರು ಹೆಚ್ಚಿ, ಸುಸ್ತಾಗಿಬಿಡುತ್ತದೇನೋ. ಆದರೆ ಎಷ್ಟೇ ಅದು ಬೇಡ ಎನ್ನುವ ಪ್ರಜ್ಞಾವಂತಿಕೆ ಇದ್ದರೂ ಅದನ್ನು ಮೀರಿ ನಿರ್ಲಿಪ್ತತೆಯನ್ನು ಸಾಧಿಸಿಕೊಳ್ಳುವುದು ಬಹಳ ಕಷ್ಟ. ಅದು ನಮ್ಮನ್ನು ನಾವು ಮೀರುವುದು. ಆದರೆ ಅದು ಯಾರೇ ಆಗಿರಲಿ, ನಮ್ಮಲ್ಲಿ ಎಷ್ಟೇ ಇರಲಿ, ಏನೇ ಇರಲಿ, ಇದ್ದುದರಲ್ಲಿ ತೃಪ್ತಿ ಪಡದಿರುವ ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮಲ್ಲಿ ತಲ್ಲಣದ ಸುಳಿ ಸೃಷ್ಟಿಸಿ ತೃಪ್ತಿಯನ್ನು ಕಿತ್ತುಕೊಳ್ಳುತ್ತದೆ. ಸಾಧನೆಗಳು, ಪ್ರಶಸ್ತಿಗಳು, ಕೀರೀಟ ಏರಿ ನಿಂತ ತುರಾಯಿಗಳ ಸಂಖ್ಯೆ ಹೆಚ್ಚಿದಷ್ಟೂ ಈ ಅತೃಪ್ತಿಯೂ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತದೆ. ಮತ್ತೆ ಅದರೊಂದಿಗೆ ಸಹಜವಾಗಿ ಬರುವ ಒತ್ತಡಕ್ಕೂ ಈಡಾಗಲೇ ಬೇಕು ಸಹ. ಇನ್ನಿದು ಸಾಕು ಎಂದು ಬುದ್ದಿ ಹೇಳಿದರೂ ನಮ್ಮ ಅತೃಪ್ತಿ ನಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ. ಆದರೆ ಹಕ್ಕಿಗೆ ಹಾರುವಿಕೆ, ಮೀನಿಗೆ ಈಜುವಿಕೆ ಸಹಜವಾದಷ್ಟೇ ಬರಹಗಾರನಿಗೂ ಬರಹ ಸಹಜವಾಗಬೇಕು. ಹಾರುತ್ತದೆ ಎಂದು ಹಕ್ಕಿಗಾಗಲಿ, ಈಜುತ್ತದೆ ಎಂದು ಮೀನಿಗಾಗಲೀ ಯಾರಾದರೂ ಪ್ರಶಸ್ತಿ ಕೊಡುತ್ತಾರಾ?! ಹಾಗೇ ಬರೆಹಗಾರನಿಗೆ ಬರೆಹ ಸಹಜವಾಗಬೇಕು. ಮನುಷ್ಯ ತನ್ನ ಬುದ್ಧಿ ಮತ್ತು ದೇಹವನ್ನು ಅದರ ಸಹಜ ಶಕ್ತಿಯನ್ನು ಮೀರಿ ಪಳಗಿಸಿ ಬಳಸಬಲ್ಲ. ಅದಕ್ಕೆ ಒಂದು ಅಭಿನಂದನೆ ಸಲ್ಲಲೇ ಬೇಕು ಅವನಿಗೆ. ಆದರೆ ಅದು ಅವನ ಬಲಹೀನತೆಯಾಗಬಾರದು. ಅತೃಪ್ತಿಯನ್ನು ಒಂದು ಹಂತದಲ್ಲಿಟ್ಟು ನಮ್ಮ ಯಶಸ್ಸಿಗೆ ಮೆಟ್ಟಿಲಾಗಿಸಿಕೊಳ್ಳುವುದರಲ್ಲಿ ನಿಜವಾದ ಬುದ್ಧಿವಂತಿಕೆ ಇದೆ. ಅದಕ್ಕೆ ದಾಸರಾಗುವುದರಲ್ಲಿ ಅಲ್ಲ. ಅದೂ ಒಂದರ್ಥದಲ್ಲಿ ಸಾಧನೆಯೇ. “ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?” -ಜಿ.ಎಸ್.ಶಿವರುದ್ರಪ್ಪ ಎನ್ನುವ ಜಿಎಸ್ಸೆಸ್ ರ “ಎದೆ ತುಂಬಿ ಹಾಡಿದೆನು” ಕವಿತೆಯ ಈ ಸಾಲುಗಳು ಯಾವಾಗಲೂ ನೆನೆದಾಗಲೊಮ್ಮೆ ಕಣ್ಮುಂದೆ ತೇಲಿ ಬರುತ್ತವೆ. ಅರಿವಿನ ನಾವೆಗೆ ಹತ್ತಿಸಿ ಸುಖವಾದ ಪ್ರಯಾಣಕ್ಕೆ ಹೊರಡಿಸುತ್ತವೆ. ********************************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ನಿರ್ಮಲಾ‌ ಶೆಟ್ಟರ್ ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ ಪರಿಚಯ: ನಿರ್ಮಲಾ ಶೆಟ್ಟರ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಧಾರವಾಡ ಜಿಲ್ಲೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಅತ್ಯುತ್ತಮ ಬೋಧನೆಯಿಂದ ತಾಲೂಕಾಮಟ್ಟದ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಈ ವರೆಗೂ ‘ಬೆಳಕಿನೊಡನೆ ಪಯಣ’ ಮತ್ತು ‘ನಿನ್ನ ಧ್ಯಾನಿಸಿದ ಮೇಲೂ’ ಎನ್ನುವ ಎರಡು ಪುಸ್ತಕಗಳು ಪ್ರಕಟಗೊಂಡಿರುತ್ತವೆ. ಅದರಲ್ಲಿ ಒಂದು ಕಾವ್ಯಸಂಕಲನವಾದರೆ, ಇನ್ನೊಂದು ಗಜಲ್ ಸಂಕಲನವಾಗಿದೆ. ಸಧ್ಯ, ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕಾವ್ಯಸಂಕಲನ ಬಿಡುಗಡೆಗೊಳ್ಳಲಿದೆ. ೨೦೧೭ರಲ್ಲಿ ಅನುಪಮಾ ನಿರಂಜನ ಕಥಾಬಹುಮಾನ, ೨೦೧೯ರ ಪ್ರಜಾವಾಣಿ ಸಂಕ್ರಾಂತಿ ಲಲಿತಪ್ರಬಂಧ ಬಹುಮಾನ ಪಡೆದಿರುತ್ತಾರೆ. ಕಥೆ ಮತ್ತು ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಉತ್ತರ ತುಸು ಕಷ್ಟ ಆದರೂ ಹೇಳಬೇಕೆಂದರೆ, ಹೇಳಲಾಗದ ನೋವುಗಳನ್ನು, ಬಿಚ್ಚಿಡಲಾಗದ ಗುಟ್ಟುಗಳನ್ನು ಹೇಳಲು ಕವಿತೆ ಮತ್ತು ಕಥೆ ಒಳ್ಳೆಯ ಮಾಧ್ಯಮ. ಎಲ್ಲ ನೋವುಗಳಿಗೆ ಧ್ವನಿಯಾಗಿ ಕಥೆಗಳನ್ನು ಮತ್ತು ಕವಿತೆಗಳನ್ನು ಬರೆಯುತ್ತೇನೆ. ಕಥೆ,ಕವಿತೆ ಹುಟ್ಟುವ ಕ್ಷಣ ಯಾವುದು? ಇಂಥದೇ ಘಳಿಗೆ ಅಥವಾ ಸಮಯ ಅದಕ್ಕಾಗಿ ನಿಗದಿಯಾಗಿರುವುದಿಲ್ಲ. ಒಮ್ಮೊಮ್ಮೆ ಕಾಡಿದ ಮತ್ತು ಕಾಡಿಸಿಕೊಂಡ ವಿಷಯ, ಘಟನೆಗಳು, ಚಿತ್ರಗಳು ಸರೋರಾತ್ರಿಯಲ್ಲಿ ಬರೆಯಲು ಹಚ್ಚುತ್ತವೆ. ನಿಮ್ಮ ಕಥೆ/ಕವಿತೆಯ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೆ-ಪದೆ ಕಾಡುವ ವಿಷಯ ಯಾವುದು? ಕವಿತೆ, ಕಥೆಗೆ ಇಂಥವೇ ವಸ್ತುವಾಗಬೇಕೆಂದು ನನಗನಿಸುವುದಿಲ್ಲ. ಯಾಕೆಂದರೆ, ಇಲ್ಲಿ ಎಲ್ಲವೂ ಮುಖ್ಯ ಆದರೆ, ಎದುರಿರುವ ವಸ್ತು,ವ್ಯಕ್ತಿ ನನ್ನೊಳಗೆ ಇಳಿದು ಬರೆಯಲು ಪ್ರೇರೇಪಿಸಿ ವಿಸ್ತಾರಗೊಳ್ಳುತ್ತಾ ಹೋದಂತೆ ಕಥೆ/ಕವಿತೆಯಾಗುತ್ತದೆ. ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ. ಪದೇ ಪದೇ ಕಾಡುವ ವಿಷಯ ಯಾವುದೇ ಆಗಿರಲಿ, ಅದು ಕೊನೆಗೆ ಕನೆಕ್ಟ್ ಆಗುವುದು ಮಾತ್ರ ಸಾಮಾಜಿಕ ಆಗುಹೋಗುಗಳೊಂದಿಗೆ ಎನ್ನುವುದಂತೂ ಸತ್ಯ.ಕಥೆ/ಕವಿತೆಯಲ್ಲಿ ಬಾಲ್ಯ, ಹರೆಯ ಇಣುಕಿದೆಯೆ?ಅರೆ, ಅವುಗಳಿಲ್ಲದ ಕಥೆ/ಕವಿತೆ ಬಾಲಂಗೋಚಿ ಇಲ್ಲದ ಪಟಗಳಂತೆ. ಆ ದಟ್ಟ ಅನುಭವ ಬೇರೆ-ಬೇರೆ ರೂಪಗಳಲ್ಲಿ ಬರವಣಿಗೆಯನ್ನು ಸಮೃದ್ಧಗೊಳಿಸುತ್ತವೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ರಾಜಕೀಯ ತನ್ನ ಮೂಲ ಆಶೋತ್ತರಗಳನ್ನು ಗಾಳಿಗೆ ತೂರಿದೆ. ಹಾಗಾಗಿ ನಮ್ಮಂಥವರು ಕುರುಡುಗಣ್ಣಲ್ಲಿ ಮೆಳ್ಳೆಗಣ್ಣು ಲೇಸು ಎಂಬಲ್ಲಿಗೆ ಬಂದು ತಲುಪಿದ್ದೇವೆ. ಇತ್ತೀಚೆಗಂತೂ ರಾಜಕೀಯ ಸನ್ನಿವೇಶ ಅಸಹ್ಯಕರ ಎನ್ನಿಸುವಷ್ಟು ಬೇಸರ ಹುಟ್ಟಿಸಿದೆ. ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಮಾನವತೆಯೆ ಧರ್ಮ. ಅದನ್ನು ಪ್ರತಿಯೊಬ್ಬರಲ್ಲಿ ಮೂಡಿಸಿ ಸಾಮಾಜಿಕ ಸ್ವಾಸ್ಥö್ಯವನ್ನು ಮತ್ತು ಸಾಮರಸ್ಯವನ್ನು ಉಂಟುಮಾಡುವ ಅರಿವೆ ದೇವರು.ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ?ಮನುಷ್ಯನಲ್ಲಿರುವ ಸೃಜನಶೀಲತೆಯ ಸಂಕೇತವೆ ಆತನೊಳಗಿನ ಸಾಂಸ್ಕೃತಿಕ ಪ್ರಜ್ಞೆ. ಅದು ಅವನನ್ನು ಹೊಸ-ಹೊಸ ಅನ್ವೇಷಣೆಯತ್ತ ಚಲಿಸುವಂತೆ ಮಾಡುತ್ತದೆ. ಆ ಮುಖಾಂತರ ಸಾಮಾಜಿಕ ಶ್ರೀಮಂತಿಕೆಯನ್ನು ಕಂಡುಕೊಳ್ಳಲು ಸಾಧ್ಯ. ಆದರೆ, ಅಲ್ಲಿ ಜಾತಿ ಮತಗಳು ರಾಜ್ಯಬಾರ ನಡೆಸಿ ಎಲ್ಲವನ್ನು ಕುಂಠಿತಗೊಳಿಸುತ್ತಿದೆ. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವುರು? ಸಾಹಿತ್ಯ ಮತ್ತು ರಾಜಕಾರಣ ವಿಭಿನ್ನ ವಿಚಾರಗಳಿಂದ ಕೂಡಿವೆ. ಅಲ್ಲದೆ ಎರಡೂ ಬೇರೆ ಬೇರೆ ಕ್ಷೇತ್ರಗಳು. ಅವೆರಡು ಪೂರಕವಾಗಿರಬೇಕು. ಹಾಗಾದಾಗ ಮಾತ್ರ ಸಮಾಜದ ಬೇಡಿಕೆ ಹಾಗೂ ಸ್ವಸ್ಥತೆಯನ್ನು ಪೂರ್ಣಗೊಳಿಸಲು ಸಾಧ್ಯ. ಆದರೆ, ಇಂದಿನ ರಾಜಕಾರಣ ತನ್ನ ಹಸ್ತಕ್ಷೇಪವನ್ನು ಸಾಹಿತ್ಯವಲಯದಲ್ಲಿ ಯಾವ ಮಟ್ಟದಲ್ಲಿ ಮಾಡುತ್ತಿದೆ ಎಂದರೆ, ಸರಿಯಾದ ನ್ಯಾಯವನ್ನು ಸಾಹಿತ್ಯಕ್ಷೇತ್ರದಿಂದ ಸಮಾಜಕ್ಕೆ ಒದಗಿಸಲಾಗುತ್ತಿಲ್ಲ. ಇದರಿಂದ ಓದುಗರ ವಲಯವು ದಾರಿ ತಪ್ಪುತ್ತಿದೆ ಎಂದೆನಿಸುತ್ತಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ದೇಶದ ಚಲನೆ ಎನ್ನುವುದು, ವಿಸ್ತಾರವಾದ ವಿಷಯ. ಕೇವಲ ಯಾವುದೋ ಒಂದು ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿರ್ಧರಿಸಲಾಗದು. ಆದಾಗ್ಯೂ ನಾವು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ನಮ್ಮ ನಾಡು-ನುಡಿಯ ಹರವು ದೊಡ್ಡದು. ಅದು ದೇಶದಲ್ಲಿಯೇ ತನ್ನನ್ನು ಗುರುತಿಸಿಕೊಂಡಿದೆ. ಅಲ್ಲದೇ ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಹೀಗೆ ಇನ್ನೂ ಅನೇಕ ವಿಚಾರಗಳಲ್ಲಿ ನೀಡಿದ ಕೊಡುಗೆ ಅಪಾರ. ಅದರಿಂದ ದೇಶವು ತನ್ನನ್ನು ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ದೇಶವನ್ನು ಸಮೃದ್ಧವಾಗಿ ಮುನ್ನೆಡೆಸುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸಾಹಿತ್ಯದ ಯಾವುದೇ ಪ್ರಕಾರದ ರಚನೆಗೆ ಸಂಬಂಧಿಸಿದ ವಿಷಯ ಬಂದಿತೆಂದರೆ, ಅಲ್ಲಿ ಪ್ರಥಮ ಆದ್ಯತೆ ರಚನಾಕಾರನ ಓದಾಗಿರಬೇಕು.ಇದರಿಂದ ಸತ್ವಯುತ ಬರವಣಿಗೆ ಸಾಧ್ಯ. ಮತ್ತೆ ಅಂತಹ ಬರವಣಿಗೆ ಬರಹಗಾರ ಹಾಗೂ ಓದುಗನ ನಡುವೆ ಸಂವಾದಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಒಂದು ಓದುಗವಲಯವೇ ನಿರ್ಮಾಣ ಆಗುತ್ತದೆ. ಅಂತಹ ವಾತಾವರಣವು ರಾಜಕೀಯ, ದಾರ್ಮಿಕ, ಸಂಕುಚಿತತೆಯನ್ನು ದೂರಮಾಡಿ ಸಾಹಿತ್ಯವನ್ನು ವಿಶ್ವವ್ಯಾಪಿಯನ್ನಾಗಿಸುತ್ತದೆ. ಕನ್ನಡ ಹಾಗೂ ಆಂಗ್ಲಭಾಷಾಸಾಹಿತ್ಯದಲ್ಲಿ ನಿಮ್ಮ ಇಷ್ಟದ ಮತ್ತು ನಿಮ್ಮನ್ನು ಕಾಡಿದ ಸಾಹಿತಿ ಯಾರು? ಕನ್ನಡದಲ್ಲಿ ಇಷ್ಟವಾದ ಕವಿಗಳೆಂದರೆ, ಪ್ರತಿಭಾ ನಂದಕುಮಾರ ಹಾಗೂ ವಾಸುದೇವ ನಾಡಿಗ. ನನ್ನದು ಹಿಂದಿ ಸಾಹಿತ್ಯದ ಓದಾಗಿರುವುದರಿಂದ, ನಿರಾಲಾ ಮತ್ತು ಮಹಾದೇವಿ ವರ್ಮಾ ನನ್ನ ನೆಚ್ಚಿನ ಕವಿಗಳು. ಕತೆಯ ವಿಚಾರಕ್ಕೆ ಬಂದರೆ, ಲಂಕೇಶ, ಕೇಶವರೆಡ್ಡಿ ಹಂದ್ರಾಳ, ಸುನಂದಾ ಕಡಮೆ ಅನೇಕ ಹಿರಿಯರ ಕತೆಗಳು ನನಗಿಷ್ಟ. ಇತ್ತೀಚೆಗೆ ಓದಿದ ಕೃತಿಗಳಾವುವು? ಶಶಿಕಲಾ ವಸ್ತ್ರದ ರವರ ಆತ್ಮಕತೆಯಾದ, ‘ಇದ್ದೆನಯ್ಯಾ ಇಲ್ಲದಂತೆ’ ಮತ್ತುಲಕ್ಷ್ಮಣ ಕೊಡಸೆ ಅವರು ಬರೆದ ‘ನಾರಾಯಣ ಗುರುಗಳ ಆಪ್ತ ಪದ್ಮನಾಭನ್ ಪಲ್ಪು’ ಇತ್ತೀಚೆಗೆ ಓದಿದ ಪುಸ್ತಕಗಳು. ನಿಮಗೆ ಇಷ್ಟವಾದ ಕೆಲಸಗಳಾವುವು? ಓದುವುದು, ಬರೆಯುವುದು. ನಿಮಗೆ ಇಷ್ಟವಾದ ಸ್ಥಳ ಯಾವುದು? ಪ್ರಕ್ರತಿಯ ಯಾವುದಾದರೂ ಸ್ಥಳವಿರಲಿ, ಇಷ್ಟವಾಗುತ್ತದೆ. ವಿಶೇಷವಾಗಿ ಲಕ್ಷ್ಮೀಶ್ವರದ ಸೋಮನಾಥ ದೇವಸ್ಥಾನದ ಪ್ರಾಂಗಣ. ನಿಮ್ಮ ಪ್ರೀತಿಯ, ತುಂಬಾ ಇಷ್ಟಪಡುವ ಸಿನಿಮಾ ಯಾವುದು? ಗುರು-ಶಿಷ್ಯರು ನೀವು ಮರೆಯಲಾರದ ಘಟನೆ ಯಾವುದು? ಸಹೋದರನ ಅಕಾಲಿಕ ಸಾವು ಮರೆಯಲಾರದ ಘಟನೆ. ಬಹುಷಃ ಬದುಕಿನ ಕೊನೆಯವರೆಗೂ ಅವನನ್ನು ಯಾರಾರಲ್ಲೋ ಹುಡುಕುತ್ತಿರುತ್ತೇನೆ.ಇನ್ನು ಕೆಲ ಹೇಳಲೇಬೇಕಾದ ಸಂಗತಿಗಳಿದ್ದರೆ, ಹೇಳಿ…ಯಾರೋ ಗೊತ್ತಿರದ, ಪರಿಚಯವಿರದ ವ್ಯಕ್ತಿಗೆ ನೋವಾಗುವುದನ್ನು ಕಂಡರೆ, ಸಹಿಸಲಾಗುವುದಿಲ್ಲ. ಬಹುಷಃ ಅದೇ ನನ್ನೊಳಗಿನ ಮಾನವತೆ ಅನಿಸುತ್ತದೆ. ಹಾಗಾಗಿ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು, ಸುಂದರವಾಗಿಸಬಹುದು ಎಂದು ನಂಬಿರುವವಳು ನಾನು. ಆದರೆ, ಮಾನವನಿಂದ ಮಾನವಪ್ರೀತಿ ಸಾಧ್ಯವಾಗದಷ್ಟು ನಾಗರೀಕತೆಯ ಹಮ್ಮಿನಲ್ಲಿರುವ ನಾವು ತುಸುವಾದರೂ ಮಾನವರಾಗಬೇಕಾದ ತುರ್ತಿನಲ್ಲಿದ್ದೇವೆ. ನಡೆಯಂತೆ ನುಡಿಯಿರದ, ನುಡಿದಂತೆ ನಡೆಯದ ವಾತಾವರಣವು ಕೊನೆಯಾಗುವುದನ್ನು ಯಾವಾಗಲೂ ಹಂಬಲಿಸುತ್ತೇನೆ. ******************************************************************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಮಗುವಿನ ಪರಿಮಳ ಆ ಮಗು ಹುಟ್ಟಿ ಆಗಷ್ಟೇ ಮೂರು ತಿಂಗಳು ದಾಟಿರಬೇಕು. ಬೆಳಕಿನತ್ತ ಮುಖ ಮಾಡುತ್ತೆ. ಹೊಸ ಮುಖಗಳನ್ನು ನಿರ್ಮಲ ಕಣ್ಣುಗಳೊಳಗೆ ತುಂಬಿ ಏನೋ ನೆನಪಿಸಿಕೊಂಡಂತೆ ತನ್ನಷ್ಟಕ್ಕೇ ಮುಗುಳು ನಕ್ಕು ದೃಷ್ಟಿ ಬದಲಿಸುತ್ತೆ.  ಮಾಮನಿಗೆ ಆ ಮಗುವಿನೊಂದಿಗೆ ಆಡುವುದೆಂದರೆ ಇಷ್ಟ!. ಆತ, ಮಗುವಿನ ನುಣುಪು ಹೊಟ್ಟೆಗೆ, ಹೊಕ್ಕುಳ ಸುತ್ತ ತನ್ನ ಮೂಗು ಸವರಿ ” ಪಂಬಳ ಪಂಬಳ ಬತ್ತನ್ನೇ!” ( ಪರಿಮಳ ಪರಿಮಳ ಬರ್ತಿದೇ!) ಅಂತ ಆಘ್ರಾಣಿಸುತ್ತಾನೆ. ಮಗು ತನ್ನ ಬೊಚ್ಚುಬಾಯಿ ಅಗಲಿಸಿ ಗಟ ಗಟ ನಗುತ್ತೆ. ಪುಟ್ಟ ಕೈಗಳನ್ನು ಚಪ್ಪಾಳೆ ಹೊಡೆಯುವಂತೆ ಅಲುಗಾಡಿಸುತ್ತೆ!. ಹೌದು!! ಮಗುವಿಗೆ ಅನೂಹ್ಯ ಪರಿಮಳವಿದೆ.‌ ಆ ಪರಿಮಳ ಮುಗ್ಧ ಪರಿಮಳ. ಕಲಬೆರಕೆಯಾಗದ ಪರಿಮಳ. ಈ ಲೋಕದ್ದೇ ಅಲ್ಲವೋ ಎನ್ನುವ ಪ್ರೀತಿಯ ಪರಿಮಳ. ಮಗು ಬೆಳೆಯುತ್ತಾ ಹೋದಂತೆ, ಆ ಪರಿಮಳ ಮರೆಯಾಗಿ, ಕಲೆಯುತ್ತಾ, ಕಲಿಯುತ್ತಾ ಹೋದಂತೆ,  ಸಮಾಜದ ‘ವಾಸನೆ’ ದೇಹಕ್ಕಂಟುತ್ತೆ.  ಮಗುವಿನ ಪರಿಮಳವನ್ನು ಉಳಿಸಿಕೊಳ್ಳಲು ಸಾಧ್ಯವಿದೆಯೇ?. ಆರು ದಶಕಗಳ ಬದುಕಿನ ದಾರಿಯಲ್ಲಿ ಇಷ್ಟೊಂದು ಗಂಧಗಳು ಮೈ ಮನಸ್ಸಿಗೆ ಅಂಟಿಕೊಳ್ಳುವಾಗ ಮಗುವಾಗಿದ್ದಾಗಿನ ಪರಿಮಳ ಉಳಿಸಿಕೊಂಡು ಹಿಂತಿರುಗಿ ನೋಡಿದರೆ ಹೇಗಿರಬಹುದು!? ಬೆಂಗಳೂರಿನ –  ” ಇಷ್ಟು ಕಾರು, ಬಸ್ಸು,  ಮೆಟ್ರೋ ರೈಲುಗಳು ಓಡಾಡುವ ಜಾಗದಲ್ಲಿ, ಉಸಿರಿದ್ದರಷ್ಟೇ ಸಾಕು ಎಂದು ಜನರು ನಿಟ್ಟುಸಿರಿಡುವಲ್ಲಿ ದೊಡ್ಡದೊಂದು ತೆಂಗು ಗರಿ ತೇಲುತ್ತಾ ಮನೆಯೊಳಕ್ಕೆ ಬಂದು ಬಿದ್ದಿದ್ದನ್ನು ನಂಬುವುದು ಹೇಗೆ?!. ಮನುಷ್ಯರಿಗೆ ಮನುಷ್ಯನ ದನಿಯೇ ಕೇಳದ ಜಾಗದಲ್ಲಿ ಈ ವಲಸೆ ಗರಿಯ ಸದ್ದು ಅವಳಿಗೆ ಕೇಳಿದ್ದಾದರೂ ಹೇಗೆ?!” ಹೀಗೆ ಪೇಟೆಯಲ್ಲಿ ಮನೆಕಟ್ಟಿದ ವಯಸ್ಕ ಮನಸ್ಸೊಳಗೆ ಬಾಲ್ಯದ ನೆನಪಿನ ತೆಂಗಿನ ಮಡಲು ಹಾರಿ ಬರುತ್ತೆ.  ಆಕೆ, ಆ ಮಡಲಿನ ಒಂದೊಂದೇ ಪುಟ್ಟ ಗರಿಗಳನ್ನು ಕೀಳುತ್ತಾಳೆ. ಮೊದಲು ಹೆಣೆಯುವುದೇ ಚಾಪೆ!. ಅದರಲ್ಲಿ ಕುಳಿತು ಗರಿಯ ವಾಚು, ಊದಲು ಪೀಪೀ ಗೆಳೆಯರನ್ನು ಕರೆದು ಅವರಿಗೆಲ್ಲ ‘ಕನ್ನಡಕ’. ” ಕಣ್ಣ ಕನಸುಗಳು ಗರಿಯ ತೋರಣ ಕಟ್ಟಿದವು. ಎಲ್ಲರೂ ಗಿರಗಿಟ್ಟಲೆಯಾಗಿ ಗರಗರ ತಿರುಗಿದರು. ಒಂದೊಂದೇ ಗರಿಗಕ್ಕಿಗಳ ಮಾಡಿ ಹಾರಲು ಬಿಟ್ಟರು.” ಆ ಹಕ್ಕಿಗಳು, ನೆರೆಮನೆಗಳ ಜಜ್ಜಕ್ಕೆ ಬಡಿದು, ಚರಂಡಿಯಲ್ಲಿ ಸಿಕ್ಕಿ ಉಸಿರುಗಟ್ಟಿ, ಗಾಳಿಯ ಚಕ್ರಕ್ಕೆ ಸಿಕ್ಕಿ, ಸಾಯುತ್ತವೆ. ಚೆಲ್ಲಾಪಿಲ್ಲಿಯಾದ ಹಕ್ಕಿಗಳ ಬದುಕನ್ನು ಕಂಡ ಗೆಳೆಯರು ಜಾಗ ಖಾಲಿ ಮಾಡುತ್ತಾರೆ.  ಆದರೆ, ಆಕೆ ಉಳಿದ ಗರಿಗಳನ್ನು ಕಟ್ಟಿ ಪೊರಕೆ ಮಾಡಿ, ಕನಸಿನ ಹಿಡಿಕೆಯನ್ನು ಗರಿಯಲ್ಲೇ ಕಟ್ಟುತ್ತಾಳೆ!. ಅದಕ್ಕೇ ಆಕೆ ಮಗುವಾಗಿದ್ದಾಗಿನ ಪರಿಮಳ ಇನ್ನೂ ಇದೆ!. ಎಂ. ಆರ್. ಕಮಲಾ ಅವರ ಗದ್ಯಗಂಧೀ ಕವಿತೆಗಳು ಪುಸ್ತಕದ ಸಾಲುಗಳವು. ಇದೊಂದು ಆತ್ಮಕವಿತೆ! ಬಾಲ್ಯದ ನಿರ್ಮಲಾನಂದೋಬ್ರಹ್ಮನ ಅನುಭೂತಿಯನ್ನು ಹೊತ್ತು, ಜೀವಕೋಶಗಳು ಬಲಿತಂತೆ, ಸುತ್ತಲಿನ ಒಂದೊಂದೇ ವಾಸನೆಗಳನ್ನು ತುಂಬಿ ಲಯಿಸಿಕೊಂಡು, ಒಂದೊಂದೇ ಬಣ್ಣವನ್ನು ಕಲೆಸಿ ಲೇಪಿಸಿಕೊಂಡು, ತನ್ನ ಸುತ್ತಲೂ ಸ್ವರ ಮಂಡಲದ ಹಲವು ತರಂಗಗಳ ಸಂಕೀರ್ಣ ಪ್ರಸ್ತಾರವನ್ನು ಸಂಗೀತವಾಗಿಸಿಕೊಂಡು, ರುಚಿಗೆ ರುಚಿಯಾಗಿ ರುಚಿಕಟ್ಟಿ ಅಭಿರುಚಿ ಸೃಷ್ಟಿಸಿಕೊಂಡು ನಡೆದ ದಾರಿಯ ಇನ್ನೊಂದು ತುದಿಯಲ್ಲಿ ಕವಯಿತ್ರಿ ನಿಂತು, ಪ್ರತಿಫಲಿಸುತ್ತಾರೆ. ‘ಗದ್ಯಗಂಧೀ ಕವಿತೆಗಳು’, ಪುಸ್ತಕದಲ್ಲಿ, ಹಾಗೆ ನೋಡಿದರೆ ಒಂದೇ ಕವಿತೆಯಿದೆ, ಅಂತ ನನ್ನ ಅನಿಸಿಕೆ. ಒಂದೊಂದೇ ಪುಟವೂ ಒಂದು ಭಾವಕ್ಕೆ, ಇಂದ್ರಿಯಗ್ರಾಹ್ಯ ಅನುಭವಕ್ಕೆ, ನಗೆಯ ಚಿಗುರು ತುಟಿಗೆ, ನೋವಿನ ಕಣ್ಣೀರ ಬಿಂದುಗಳಿಗೆ ‘ಗಂಧ’ವಾಗುತ್ತೆ. ಮಹಾಭಾರತ ಆರಂಭವಾದದ್ದೇ ರಾಜ ಆಕರ್ಷಿತನಾದ ಆ ಗಂಧದಿಂದ. ಶಂತನು ಮಹಾರಾಜ ‘ಯೋಜನಗಂಧಿ’ ಯ ಪರಿಮಳಕ್ಕೆ ಸೋತ ಕ್ಷಣವದು. ‘ಗಂಧ’ ಕ್ಕೆ ಅಂತಹ ಅಪರಿಮಿತ ಶಕ್ತಿಯೂ ಇದೆ, ವ್ಯಾಪ್ತಿಯೂ ಇದೆ. ಗದ್ಯಗಂಧೀ ಕವಿತೆಗಳು, ಇದರ ಎಲ್ಲಾ ಪುಟಗಳ ತುಂಬಾ ಮನಸ್ಸಿನೊಳಗಿನ ಪದರಗಳಲ್ಲಿ ಮೂಡಿದ ಪ್ರತಿಮೆಗಳು ನಿತ್ಯನೋಟದ ವಸ್ತುಗಳ ರೂಪದಲ್ಲಿ ಪ್ರಕಟವಾಗುತ್ತದೆ. ಪ್ರತೀ ಪುಟದಲ್ಲೂ ಮಗು ಮನಸ್ಸು ಮತ್ತು ಸಮಾಜದ ಕಲೆಕ್ಟಿವ್ ಮನಸ್ಸುಗಳ ತುಯ್ದಾಟ ಹಲವು ರೂಪ ಪಡೆದು ಚಿಂತನೆಗೆ ಹಚ್ಚುತ್ತವೆ. ಗದ್ಯದಂತಹ ಸಾಲುಗಳಲ್ಲಿ, ಪದ್ಯಾತ್ಮ ಪ್ರತಿಷ್ಠೆ ಮಾಡುವ ಪ್ರಯತ್ನ ಎನಬಹುದೇ?. ಸಾಧಾರಣವಾಗಿ ಹಿಂದಿ/ ಉರ್ದು ಶಾಯರಿಗಳಲ್ಲಿ ಕಂಡು ಬರುವ ಪಂಚ್ ಲೈನ್ ನ ಹಾಗೆ ಪುಟದ ಕೊನೆಗೆ ಕವಯಿತ್ರಿ, ತನ್ನ ಥಾಟ್ ಲೈನ್ ಅನ್ನು ಪ್ರಕಟಿಸುತ್ತಾರೆ. ಆ ಸಾಲು, ಬಾಲ್ಯದ  ಗಂಧಕ್ಕೇ ವಾಲಿರುವುದೂ ಅಥವಾ ಅದನ್ನು ರಿ-ಇನ್ವೆಂಟ್ ಮಾಡುವ ಪ್ರಯತ್ನ ನಡೆಯುವುದೂ ಸ್ಪಷ್ಟ. ಇದಕ್ಕೆ ಸಾಮ್ಯವಿರುವ ಪ್ರಯತ್ನವೇ ಎಂದು ಹೇಳುವ ಭಾಷಾ ಪಾಂಡಿತ್ಯ ಇಲ್ಲದಿದ್ದರೂ, ವಿದ್ಯಾರ್ಥಿಯ ಕನವರಿಕೆಯ ಹಾಗೆ, ಇದನ್ನು ಉಲ್ಲೇಖಿಸ ಬಯಸುತ್ತೇನೆ. ಕೆ.ವಿ.ತಿರುಮಲೇಶ್ ಅವರ ಈ ಮಹತ್ತರವಾದ ಅಕ್ಷಯ ಕಾವ್ಯ ಪುಸ್ತಕದಲ್ಲಿ ಸುಮಾರು ೪೭೮ ಪುಟಗಳು. ಬಿಡಿ ಬಿಡಿಯಾದ,ಆದರೂ ಇಡಿಯಾದ ಕವಿತೆಗಳು. ತಮ್ಮ ಅಕ್ಷಯ ಕಾವ್ಯ ಪುಸ್ತಕದ ಮುನ್ನುಡಿಯಲ್ಲಿ, ಅವರು ಹೀಗೆ ಬರೆಯುತ್ತಾರೆ. ” ಸೂತ್ರಬದ್ಧತೆ, ಸುಸಂಬದ್ಧತೆ, ಕ್ರಮಬದ್ಧತೆ ಮುಂತಾದ ಯಾವುದೇ ಬದ್ಧತೆಗಳನ್ನು ಈ ಕಾವ್ಯ ಪರಿಪಾಲಿಸಿದ್ದಕ್ಕಿಂತ ಉಲ್ಲಂಘಿಸಿದ್ದೇ ಹೆಚ್ಚು. ಆದ್ದರಿಂದ ಸಾಲು ಸಾಲುಗಳ ನಡುವೆ ಕಂದಕಗಳು ನಿಜವಾದ ಕಂದಕಗಳು ಆದರೂ ಇಲ್ಲೆಲ್ಲೂ ಅಮಾನುಷ ಪ್ರಪಂಚವಿಲ್ಲ…ಕಾವ್ಯಕ್ರಿಯೆಯ ಒಳಹೊರಗಣ ಸೀಮೆಗಳ ಮಿತಿಗಳ ಸ್ಪರ್ಶಿಸುತ್ತಲು ಹಿಂದೆಗೆಯುತ್ತಲು ಮುಗಿಯದ ಕ್ರಿಯೆ ಸದ್ಯ ಇದೊಂದೇ ಸಾಧ್ಯ.” ಈಗ ಗದ್ಯಗಂಧೀ ಕವಿತೆಗಳಿಗೆ ಪುನಃ ಬರೋಣ. ಈ ಒಟ್ಟೂ ಪುಸ್ತಕದ  ಕವಿತೆಯ ಅಷ್ಟೂ ‘ಗಂಧ’ ಗಳನ್ನೂ ಬರೆಯಲು ಅಸಾಧ್ಯವಾದರೂ ಎರಡು  ಪರಿಮಳ ದ್ರವ್ಯಗಳನ್ನಾದರೂ ಗ್ರಹಿಸುವ ಪ್ರಯತ್ನ ನನ್ನದು. ” ಅವಳ ಮನೆಯಲ್ಲಿ ಮೂರು ಕನ್ನಡಿಗಳಿದ್ದವು.” ಎಂದು ಆರಂಭವಾಗುವ ಕವಿತಾದಳದಲ್ಲಿ, ನೆರೆಮನೆಯ ಹುಡುಗಿ ಮತ್ತು ಈಕೆ ಎರಡು ಕನ್ನಡಿಗಳನ್ನು ಎದುರು ಬದುರು ಇಡುತ್ತಾರೆ. ” ಆಹಾ! ಒಂದರೊಳಗೊಂದು ಒಂದರೊಳಗೊಂದು ಕನ್ನಡಿಗಳು! ಕೊಂಚ ಮುಖ ತೂರಿಸಿ ಲೆಕ್ಕವಿರದಷ್ಟು ಬಿಂಬಗಳನ್ನು ಎದೆಯಲ್ಲಿ ಸೆರೆಹಿಡಿದು ಕನ್ನಡಿಗಳ ಸ್ವ ಸ್ಥಾನಕ್ಕೆ ಸೇರಿಸಿದರು.” ಎರಡು ಪುಟ್ಟ ಮಕ್ಕಳ ಆಟದಂತೆ ಕಾಣುವ ಈ ಚಿತ್ರ, ಚಿತ್ತಗನ್ನಡಿಗಳ ನಡುವಿನ ಅಸಂಖ್ಯ ಪ್ರತಿಫಲನಗಳಲ್ಲವೇ? ಆ ಹುಡುಗಿಯ ಯೌವನದಲ್ಲಿ ದಿವಾನಖಾನೆಯ ಕನ್ನಡಿಯೊಳಗಿಂದ ಹುಡುಗ ಹಾಡತೊಡಗಿ, ಅವಳು “ಮಾಯಾಬಜಾರಿ”ನ ಶಶಿರೇಖೆಯಾದಳು. ಹೀಗೆ ಒಂದು ಕನ್ನಡಿಯ ಸುತ್ತ ಪ್ರತಿಫಲಿಸುತ್ತವೆ ಹಲವು ಪ್ರತಿಮೆಗಳು. ಈ ಪುಟದ ಕೊನೆಯ ಸಾಲು ಹೀಗಿದೆ. ” ಈಗಂತೂ ಕನ್ನಡಿಯನ್ನು ಬೀದಿಯ ಕಡೆಗೆ ಮುಖಮಾಡಿ ಇರಿಸಿಬಿಟ್ಟಿದ್ದಾಳೆ. ಹಾದು ಹೋಗುವ ಪ್ರತೀ ಜೀವಿಯ ನೋವು,ನಲಿವು ಅವಳ ಎದೆಯಲ್ಲಿ ಪ್ರತಿಫಲಿಸುತ್ತದೆ.” ಕನ್ನಡಿಯೇ ಕವಯಿತ್ರಿಯ ಹೃದಯವೂ ಆಯಿತು. ಅದು ಸದಾ ಸಮಾಜದ ಚಲನೆಯ, ಬೀದಿಯ ಅಷ್ಟೂ ಡೈನಾಮಿಕ್ಸ್ ಗೆ, ಭಾವ ವೈವಿಧ್ಯಕ್ಕೆ ಕನ್ನಡಿ ಆಗುತ್ತೆ, ಹೃದಯ ಬರೇ ಕನ್ನಡಿಯೇ?. ಇದೊಂದು ಸ್ಪಂದನೆಯ ಕನ್ನಡಿ. ಈ ಎಸಳಿನ ನಂತರ ಒಂದು ವೈಶಿಷ್ಟ್ಯವನ್ನು ಹೇಳುವೆ. ಬೆಲ್ಲ ತಯಾರಿಸುವ ಕಾರ್ಖಾನೆಯಲ್ಲಿ ಕಬ್ಬಿನ ರಸ ಕುದಿಸುವಾಗ ಅದರ ಪರಿಮಳ ಊರೆಲ್ಲಾ ಹರಡುತ್ರೆ. ಕುದಿಸುತ್ತಾ ಅ ರಸ, ಪಾಕವಾಗಿ ಜೇನಿನಂತೆ ಮಂದ, ಸ್ನಿಗ್ಧ ದ್ರವವಾಗುತ್ತೆ. ಈ ಹಂತದಲ್ಲಿ ಅದಕ್ಕೆ ಕಬ್ಬಿನ ರಸದ ಎಲ್ಲಾ ಗುಣಗಳೂ ಇರುತ್ತವೆ,ಆದರೆ ಸಾಂದ್ರವಾಗಿರುತ್ತದೆ. ಹರಿಯುವ ಗುಣವೂ,ಪರಿಮಳವೂ,ಸಿಹಿಯೂ. ಈ ಹಂತದಲ್ಲಿ ಅದನ್ನು ಸಂಗ್ರಹಿಸಲು ಬಾಟಲಿ ಬೇಕು. ಇದರ ಮುಂದಿನ ಹಂತದಲ್ಲಿ ಅದನ್ನು ಗಟ್ಟಿಯಾಗಿಸಿ, ಅಚ್ಚಾಗಿಸಿ, ಆಕರ್ಷಕ ಪ್ಲಾಸ್ಟಿಕ್ ಕವರಿನೊಳಗೆ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ, ಕಂಪೆನಿಯ ಬೆಲ್ಲದಚ್ಚಾಗಿ ಗ್ರಾಹಕರ ವಿಕ್ರಯದ ವಸ್ತುವಾಗಿ ಪ್ರಕಟವಾಗುತ್ತೆ.  ಕಮಲಾ ಅವರ ಗದ್ಯಗಂಧೀ ಕವಿತೆ ಬೆಲ್ಲದ ಅಚ್ಚು ಅಲ್ಲ. ಇದು ಸಾಂದ್ರವಾದ ಬೆಲ್ಲದ ಪಾಕ. ಇದಕ್ಕೆ ಹರಿವು,ಪರಿಮಳ, ರುಚಿ ಎಲ್ಲವೂ  ಇದೆ. ರೂಪ ಮಾತ್ರ ಪಾಕವನ್ನು ತುಂಬಿಸಿಕೊಂಡ  ಪಾತ್ರೆಯದ್ದೇ. ಗದ್ಯ ಗಂಧಿಯ ಇನ್ನೊಂದು ಎಸಳು ಹೀಗೆ ಆರಂಭವಾಗುತ್ತೆ. “ಅವಳು ಪುಟ್ಟವಳಿದ್ದಾಗ ಅಣ್ಣ ಕೊಟ್ಟ ನಾಲ್ಕಾಣೆ,ಎಂಟಾಣೆ ನಾಣ್ಯವನ್ನು ನೆಲದಲ್ಲಿ ಉರುಳಿ ಬಿಟ್ಟು ಎಷ್ಟು ದೂರ ಹೋಗುತ್ತದೆ ಎಂದು ನೋಡುತ್ತಿದ್ದಳು” ಈ ನಾಣ್ಯ, ಈ ನೆಲ, ಈ  ನಾಣ್ಯದ ಉರುಳು ಚಲನೆ,ಚಲಾವಣೆ ಏನನ್ನು ಧ್ವನಿಸುತ್ತೆ?. ಆಕೆಯ ಅಪ್ಪ , ಪ್ರೀತಿಯಿಂದ ನಾಣ್ಯವನ್ನು ಉರುಳಿಸಿ  ” ಅಂತಃಕರಣದ ನುಡಿಯನ್ನು ಹೀಗೇ ಉರುಳಿಸು. ಆ ಭಾಷೆ ಎಷ್ಟೋ ಜನಕ್ಕೆ ತಿಳಿದೇ ಇರುವುದಿಲ್ಲ. ಅದು ಅವರಿಗೆ ಅರ್ಥವಾಗದಿದ್ದರೂ ಸರಿ, ಉರುಳಿಸುತ್ತಾ ಹೋಗಬೇಕು, ಎಷ್ಟು ದೂರ ಸಾಧ್ಯವಾದರೆ ಅಷ್ಟು ದೂರ” ಉರುಳುವ ನಾಣ್ಯಕ್ಕೆ ಅಂತಃಕರಣದ ನುಡಿಯ ಸ್ವರೂಪ. ಕೊಡು ಕೊಳ್ಳುವಿಕೆಯ ಕ್ರಿಯೆಯಿಂದ, ಪ್ರೀತಿಯಲ್ಲಿ ಕರಗುವ, ಕರಗಿಸುವ, ದ್ರಾವಣದೊಳಗೆ ಒಂದೇ ಆಗುವ ಕ್ರಿಯೆ. ನೀರಲ್ಲಿ ಕರಗಿಸಿದ ಸಕ್ಕರೆಯ ಹಾಗೆ. ನೀರೂ,ಸಕ್ಕರೆಯೂ ಒಂದಕ್ಕೊಂದು ಅಂತಃಕರಣಿಸಿ ಸ್ವಂತ ರೂಪ ಕಳೆದು ಏಕಸ್ವರೂಪ ಹೊಂದಿದ ಹಾಗೆ. ಕೊನೆಯ ಸಾಲುಗಳಲ್ಲಿ ಮನಸ್ಸಿನ ಟ್ರಾನ್ಸ್ಫಾರ್ಮೇಟಿವ್ ಚೈತನ್ಯ ಪರಿಮಳಿಸುತ್ತೆ.  ” ಈಗ ನೀವು ನಿಮ್ಮೊಳಗಿನ ಯಾವ ನಾಣ್ಯವನ್ನಾದರೂ ಅವಳೆದುರಿಗೆ ಉರುಳಿಸಿ. ಎತ್ತಿಕೊಂಡು ಅಂತಃಕರಣದ ನುಡಿಯಾಗಿಸಿ ಉರುಳಿಬಿಡುತ್ತಾಳೆ” ಎಚ್ ನರಸಿಂಹಯ್ಯ ಅವರ ” ಹೋರಾಟದ ಹಾದಿ” ಪುಸ್ತಕದಲ್ಲಿ ಒಂದು ಘಟನೆಯಿದೆ. ಎಚ್. ಎನ್. ಅವರ ಗೆಳೆಯ ಮತ್ತು ಆತನ ಪುಟ್ಟ ಮಗು ಶಟಲ್ ಬ್ಯಾಡ್ಮಿಂಟನ್ ಆಡುತ್ತಿರುತ್ತಾರೆ. ಆ ಮಗು ಕೋರ್ಟ್ ನ ಎಡಭಾಗದಲ್ಲಿ ಇರುವಾಗ,ಎದುರಾಳಿ ಶಟಲ್ ಕಾಕ್ ಅನ್ನು ಕೋರ್ಟಿನ ಬಲಗಡೆಗೆ ಪ್ಲೇಸ್ ಮಾಡುತ್ತಾನೆ. ಮಗು ಕೋರ್ಟ್ನ ಬಲ ಭಾಗದಲ್ಲಿದ್ದರೆ ಎದುರಾಳಿ, ಶಟಲ್ ನನ್ನು ಕೋರ್ಟ್ ನ ಎಡ ಭಾಗಕ್ಕೆ ಹೊಡೆಯುತ್ತಾನೆ. ಮಗು ಬಹಳ ನೊಂದುಕೊಂಡು ಎಚ್. ಎನ್. ಹತ್ರ ಹೇಳುತ್ತೆ, “ಅಂಕಲ್! ಇದು ಚೀಟಿಂಗ್” ಅಂತ. ಇದು ಕೂಡಾ ಮಗುವಿನ ಪರಿಮಳ. ಅಂತಹಾ ಪರಿಮಳವನ್ನು ಮೇಟಿಕುರ್ಕೆ ಯ ಬಾಲ್ಯದ ದಿನದಿಂದ ನಾಗರಿಕ ಜಗತ್ತಿನ ಗಂಧಗಳ ನಡುವೆಯೂ ಉಳಿಸಿಕೊಂಡು, ಇಲ್ಲಿಯೂ ಅಲ್ಲಿಯೂ ಸಲ್ಲುವ ಮತ್ತು ಯಾವುದೇ ನಾಣ್ಯವನ್ನು ಅಂತಃಕರಣದ ನುಡಿಯಾಗಿ ಪರಿವರ್ತಿಸುವ ಕವಿತೆಗಳಿವು. ಕವಿತೆಯುದ್ದಕ್ಕೂ ಸ್ತ್ರೀ ಸಹಜ ಮಮತೆ, ಸಹನೆ, ಮಡಿಲಲ್ಲಿ ತುಂಬಿಕೊಳ್ಳುವ ಕ್ಷಮತೆ, ಹರಿಯುತ್ತಲೇ ಇರುವ ನಿರಂತರತೆ, ತನ್ನ ಗಾಯವಲ್ಲದೇ,ಇತರರ ಗಾಯಗಳನ್ನೂ ಸ್ಪರ್ಶಿಸಿ ಗುಣವಾಗಿಸುವ ಔಷಧೀಯ ಹಸ್ತದ ಮೃದುಲತೆ, ಇವೆಲ್ಲವನ್ನೂ ಚಿತ್ತಾರವಾಗಿಸಿದ್ದನ್ನು ಕಾಣಬಹುದು.  ಈ ಒಂದು ಚಿತ್ರವನ್ನು ಮನದಲ್ಲಿ ರೂಪಿಸಿಕೊಳ್ಳಿ. ಎರಡು ಗುಡ್ಡಗಳಿವೆ. ನಡುವೆ ಬಯಲು. ಒಂದು ಗುಡ್ಡದಲ್ಲಿ ಬಾಲ್ಯದ ಹಳ್ಳಿ, ಅಣ್ಣ ( ಅಪ್ಪ), ಅಮ್ಮ, ಮನೆ, ಕನ್ನಡಿ, ಕಲ್ಲುಗಳು, ತೆಂಗಿನ ಮರಗಳು, ಗಾಜಿನ ಬಳೆಗಳು, ಓಡಿದ ಓಣಿಗಳು, ಹೊಲಗಳು. ಸದಾ ಬೀಸುವ ಗಾಳಿ, ಪೋಸ್ಟ್ ಆಫೀಸ್, ನಕ್ಷತ್ರ, ಇವುಗಳೆಲ್ಲವೂ ಮಗುವಿನ ಪರಿಮಳದಂತೆ. ಮುಗ್ಧ, ನಿರ್ಮಲ, ನೇರ ನಿರಂತರ. ಭಾವ, ಮಮತೆ, ಜೀವಸಂಕುಲದ ಜತೆಗಿನ ತಾದಾತ್ಮ್ಯ ಸ್ಥಿತಿಗಳು ಈ ಗುಡ್ಡದ ತುಂಬಾ. ಎರಡನೆಯ ಗುಡ್ಡದಲ್ಲಿ, ಕಾರು, ಮೆಟ್ರೋ ರೈಲು, ಮುಖವಾಡಗಳು, ಕಲ್ಲು ಮನೆಗಳು, ಬೀಗ ಹಾಕಿದ ಬಾಗಿಲುಗಳು, ಸಿಮೆಂಟ್ ರಸ್ತೆಗಳು,  ತಾಜ್ ಮಹಲ್ ಗಳು ಮತ್ತು ಗಾಳಿಯೂ ಸ್ಥಿರವಾಗಿವೆ.  ಬಯಲಿನಲ್ಲಿ ಒಂದು ಸ್ಥಂಭದಲ್ಲಿ ಪೆಂಡುಲಮ್,ಈ ಎರಡು ಗುಡ್ಡಗಳ ನಡುವೆ ಓಲಾಡುತ್ತೆ. ಆ ಪೆಂಡುಲಮ್ನಲ್ಲಿ ಕವಯಿತ್ರಿ ಕುಳಿತಿದ್ದಾರೆ. ಪ್ರತೀ ಆಸ್ಸಿಲೇಷನ್, ಒಮ್ಮೆ ಮೊದಲ ಗುಡ್ಡದ ಹತ್ತಿರ, ಮತ್ತೆ ಎರಡನೇ ಗುಡ್ಡದ ಸಮೀಪ ಆಂದೋಳಿಸಿ  ತರುವ ಅನುಭೂತಿಯ ಸಂಕಲನವೇ ‘ಗದ್ಯಗಂಧೀ ಕವಿತೆಗಳು’. ********************************************** ಮಹಾದೇವಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಘೋರಾರಣ್ಯದಲ್ಲಿ ಹಾರುವ ಹಂಸೆ ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಪರವಾದ ನಿಲುವನ್ನು ತಾಳಿದ ಸಾಹಿತ್ಯಕ ಮತ್ತು ಧಾರ್ಮಿಕ ಚಳುವಳಿಯೆಂದರೆ ಅದು ವಚನಸಾಹಿತ್ಯ. ಅದರ ಉಗಮಕ್ಕೆ ಕಾರಣವಾದದ್ದು ಬಸವಾದಿ ಪ್ರಮಥರ ಧಾರ್ಮಿಕ ತಾತ್ವಿಕ ಸುಧಾರಣೆಗಳು ಅದರೊಂದಿಗಿನ ಸಾಮಾಜಿಕ ಸುಧಾರಣೆ. ಅವಿದ್ಯಾವಂತರಿಂದ ವಿದ್ಯಾವಂತರವರೆವಿಗೂ ತಮ್ಮದೇಯಾದ ಸಾಮಾಜಿಕ, ಧಾರ್ಮಿಕವಾಗಿ ಜೀವನಕ್ರಮದ ಬಗೆಗಿನ ಕಾಳಜಿಯ ಅಭಿವ್ಯಕ್ತಿಯು ಮುಕ್ತವಾಗಿ ನಡೆದದ್ದಾಗಿದೆ. ಸಮಾಜ ಸುಧಾರಣೆಯು ಮುಖ್ಯ ಆಶಯವಾಗಿ ವಚನಗಳು ರಚನೆಯಾದರೂ ಅದರೊಂದಿಗಿನ ಸಾಹಿತ್ಯಿಕ ಅಂಶಗಳು ಉಪೋತ್ಪನ್ನವಾಗಿ ಹೊಂದಿ ವಚನಗಳು ರಚಿಸಲ್ಪಟ್ಟವು. ಆ ಚಳುವಳಿಯಲ್ಲಿನ ‘ಕಂಭದ ಮಾರಿತಂದೆ’ ಎಂಬ ವಚನಕಾರನ ಒಂದು ವಚನದ ವಿವೇಚನೆ ಪ್ರಸ್ತುತ ಲೇಖನದ ಉದ್ದೇಶವಾಗಿದೆ.                         ಬಸವಣ್ಣನವರು ಪುರಾತನ ವಚನಕಾರರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಅವರಲ್ಲಿ ಕಂಭದ ಮಾರಿತಂದೆಯೂ ಒಬ್ಬ. ಉಳಿದಂತೆ ಕಿನ್ನರಿ ಬೊಮ್ಮಣ್ಣ, ತೆಲಗು ಜೊಮ್ಮಯ್ಯ, ತಂಗಟೂರು ಮಾರಯ್ಯ, ಮಾದಾರಚೆನ್ನಯ್ಯ ಇತರರು ಇದ್ದಾರೆ. ವಿಶೇಷವೆಂದರೆ ‘ಮಾರಿತಂದೆ’ ಹೆಸರಿನ ಎಂಟು ಜನ ವಚನಕಾರರು ಇರುವರೆಂದು ತಿಳಿದುಬಂದಿದೆ.೧ ಕವಿಚರಿತಾಕಾರರು ಅನುಬಂಧದಲ್ಲಿಯೂ೨ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಪೀಠಿಕೆಗಳು ಲೇಖನಗಳು (ಕೆಲವು ವಚನಕಾರರು) ಕೃತಿಗಳಲ್ಲಿ ಮಾರಿತಂದೆಯ ಬಗೆಗೆ ಗಮನಸೆಳೆದಿದ್ದಾರೆ.೩ ಕಂಭದ ಮಾರಿತಂದೆಯು ಬೆಸ್ತರ ಜಾತಿಗೆ ಸೇರಿದವನಾಗಿದ್ದು, ಕ್ರಿ.ಶ. ೧೧೬೫ರಲ್ಲಿ ಬಸವಣ್ಣನವರ ಸಮಕಾಲೀನನಾಗಿದ್ದನೆಂದು ಹೇಳಿದ್ದಾರೆ. ಕಂಭದ ಮಾರಿತಂದೆಯು ವಚನ ಚಳುವಳಿಯನ್ನು ಗ್ರಹಿಸಿರುವ ರೀತಿಯೇ ಬೆರಗಾಗಿಸುತ್ತದೆ. ಕಂಭದ ಮಾರಿತಂದೆಯ ಅಂಕಿತನಾಮ ‘ಕದಂಬ ಲಿಂಗ’. ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ೪             ಪ್ರಕೃತ ವಚನವನ್ನು ಕವಿಚರಿತಾಕಾರರು ಮತ್ತು ಡಿ. ಎಲ್. ಎನ್ ಬೇರೆಯದೇ ರೀತಿಯ ವಿನ್ಯಾಸದಲ್ಲಿ ಮತ್ತು ಅಲ್ಪ ವಿರಾಮ ಚಿಹ್ನೆಗಳನ್ನಿಟ್ಟು ಕೊಟ್ಟಿದ್ದಾರೆ. ಮತ್ತು ಪಠ್ಯವು ಎರಡೂ ಕೃತಿಗಳಲ್ಲಿ ಸಮಾನವಾಗಿ ಬಂದಿದೆ.೫ ನಡುಗನ್ನಡ ಭಾಷಾರಚನೆಯ ಮುಖ್ಯ ಅಂಶವಾದ ಶಿಥಿಲದ್ವಿತ್ವವನ್ನು ಮತ್ತು ಶಕಟರೇಫೆಯನ್ನು ಕಲಬುರ್ಗಿಯವರು ಕೈ ಬಿಟ್ಟು ಸಂಪಾದಿಸಿದ್ದಾರೆ. ವಚನಸಾಹಿತ್ಯದ ಕಾವ್ಯಸೌಂದರ್ಯ, ಆಧ್ಯಾತ್ಮಿಕ ಸಾಧನೆ ಮತ್ತು ಸಾಮಾಜಿಕ ಔನ್ನತ್ಯದ ಬಗೆಗೆ ಸಮಾಜದಿಂದ ಬಹಿಷ್ಕೃತನೊಬ್ಬ ಬರೆದ ಸಾರ್ವಕಾಲಿಕ ಕಲಾತ್ಮಕ ವ್ಯಾಖ್ಯಾನವೇ ಪ್ರಸ್ತುತ ವಚನವಾಗಿದೆ.             ಹನ್ನೇರಡನೆ ಶತಮಾನದ ವಚನ ಚಳುವಳಿಯು ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ, ರಾಜಪ್ರಭುತ್ವದ ವಿರುದ್ಧದ ನೇರ ಧ್ವನಿಯಾಗಿದೆ. ಪ್ರಭುತ್ವಕ್ಕೇ ಪ್ರಭುಸಂಹಿತೆಯಂತೆಯೂ, ಸಮಾಜದ ಜನರಿಗೆ ಮಿತ್ರಸಂಹಿತೆಯಂತೆಯೂ, ವೈಯುಕ್ತಿಕ ಆಧ್ಯಾತ್ಮಿಕ ಉನ್ನತಿಗೆ ಕಾಂತಾಸಂಹಿತೆಯಂತೆಯೂ ಕೆಲಸಮಾಡಿದೆ. ರಾಜರ ದಬ್ಬಾಳಿಕೆ, ದೌರ್ಜನ್ಯ ಮೇಲ್ವರ್ಣ ವರ್ಗಗಳ ಕಂದಾಚಾರ-ಧಾರ್ಮಿಕ ಹಿಡಿತಗಳು ಸಾಮಾನ್ಯ ಜನರನ್ನು ಅತಿಯಾಗಿ ಬಹಿಷ್ಕೃತರನ್ನಾಗಿಸುತ್ತಾ ಕಂದಕವನ್ನು ಸೃಷ್ಠಿಸಿತ್ತು. ಅವು ‘ಘೋರಾರಣ್ಯ’ ಆಗಿತ್ತೆಂಬುದನ್ನು ಮೊದಲನೆಯಸಾಲು ಪ್ರತಿನಧಿಸುತ್ತದೆ.                         ಘೋರಾರಣ್ಯ ಸ್ಥಿತಿಯ ಸಮಾಜದಲ್ಲಿ ಅಭಿವ್ಯಕ್ತಿಯು ಮಹಾಕಾವ್ಯಗಳ ರೂಪದಲ್ಲಿ ರಚನೆಯಾಗುತ್ತಿದ್ದು ಅವು ಪಂಡಿತರಿಗಾಗಿದ್ದುದು ಎಂಬುದು ತಿಳಿದೇ ಇದೆ. ಅವುಗಳ ಪ್ರತಿಯಾಗಿ ಸರಳವಾದ ಮಾತು ಮನಸ್ಸಿನ ಸಮರೂಪಿಯ ಚಿತ್ತದಲ್ಲಿ ಹೊರಹಾಕಿದ ಮಾತೇ ‘ವಚನ’ ಗಳಾಗಿವೆ. ಅವು ಒಬ್ಬ ವಚನಕಾರನಿಂದ ಮತ್ತೊಬ್ಬ ವಚನಕಾರನಿಗೆ ಭಿನ್ನವಾಗುತ್ತಾ, ಅನುಭವದ ಪರಿದಿಯಲ್ಲಿ ವಿಸ್ತರಣೆ ಹಾಗು ವಿಭಿನ್ನತೆ ಹೊಂದಿದೆ. ಕಲಾತ್ಮಕತೆಯ ದೃಷ್ಠಿಯಿಂದಂತೂ ಅದ್ಭುತವಾಗಿದೆ. ಅದೇ ಎರಡನೆಯ ಸಾಲು ‘ಆಡುವ ನವಿಲು’ ನ್ನು ಪ್ರತಿನಿಧಿಸುತ್ತದೆ.                         ಕಲಾತ್ಮಕತೆ-ಸೌಂದರ್ಯ ಎಂಬುದು ಅಂತರಂಗದ ದೃಷ್ಠಿಯಿಂದಲೇ ಹೊರತು ಬಾಹ್ಯ ನೋಟದಿಂದಲ್ಲ. ಬಾಹ್ಯದಿಂದ ಸೌಂದರ್ಯವನ್ನು ನೋಡಿದರೂ ಅದರ ನಿಜವಾದ ಸಾರ್ಥಕ್ಯತೆಯು  ಅಂತರಂಗದಲ್ಲೇ ಇರುವುದು. ಸೌಂದರ್ಯವು ಆತ್ಮದ ಬಿಡುಗಡೆಯನ್ನು ಪ್ರತಿಕ್ಷಣವೂ ಮಾಡುತ್ತಿರುತ್ತದೆ. ಇದರಿಂದ ಕುರೂಪದಲ್ಲಿ- ಸುರೂಪಿಯನ್ನು, ಸುರೂಪಿಯಲ್ಲಿ- ಭವ್ಯತೆಯನ್ನು ಕಾಣಲು ಸಹಾಯಕವಾದ್ದಾಗಿದೆ. ಈ ‘ಘೋರಾರಣ್ಯದಲ್ಲಿಯೂ ‘ನವಿಲಿನ ನರ್ತನ’ವೂ ಆತ್ಮವನ್ನು ಬಿಡುಗಡೆಗೊಳಿಸುವ ‘ಹಾರುವ ಹಂಸೆ’ಯಾಗಿರುವ ವಚನಸಾಹಿತ್ಯದ ಆಧ್ಯಾತ್ಮಿಕ ಔನ್ನತ್ಯದ ಸ್ಥಿತಿಯನ್ನು ಮೂರನೆಯ ಸಾಲು ಪ್ರತಿನಿಧಿಸುತ್ತದೆ.(ಹಂಸೆಯು ಹಾರಲಾರದು ಎಂಬುದು ತಿಳಿದಿದ್ದರು ಅಧ್ಯಾತ್ಮದ ಪರಿಭಾಷೆಯಲ್ಲಿ ಜೀವವು ತಿಳುವಳಿಕೆ ಹೊಂದಿ ಮೇಲೆಹಾರುವ, ಬಿಡುಗಡೆ ಪಡೆಯುವ ಕ್ರಿಯೆಯನ್ನ ತಿಳಿಸುತ್ತದೆ. )                         ಬಸವಣ್ಣನವರ ಆದಿಯಾಗಿ ಸಾಮಾಜಿಕ ಜಾಗೃತಿಯು, ಅಲ್ಲಮನ ಮುಂದಾಳತ್ವದಲ್ಲಿ ತಾತ್ವಿಕ ಚಿಂತನೆಯೂ, ಚೆನ್ನಬಸವಣ್ಣನ ಆದಿಯಾಗಿ ಧಾರ್ಮಿಕ ವೀರಶೈವ ಚಿಂತನೆಯೂ ಬೆಳೆದು ಅದನ್ನೊಂದು ವಿಶ್ವಧರ್ಮವಾಗಿ ರೂಪಿಸಿದೆ. ಇವೆಲ್ಲವನ್ನು ಸೂಕ್ಷö್ಮವಾಗಿ ಸಮಾಜದ ಒಳಗಡೆ ಇದ್ದು ಇಲ್ಲದಂತಿದ್ದ ಕಂಬದ ಮಾರಿತಂದೆಯು ಈ ಮೂರು ಪ್ರಮುಖ ವ್ಯಕ್ತಿಗಳಲ್ಲಿ ಯಾರನ್ನು ‘ಕೋಳಿ’ ಎಂದು ಭಾವಿಸಿದ್ದನೆಂದು ನಿಖರವಾಗಿ ಹೇಳುವುದು ಕಷ್ಟವಾದರೂ ಈ ಮೂವರು ಕೋಳಿಯೋಪಾದಿಯಲ್ಲಿ ಕೂಗಿ-ಕೂಗಿ ಬೆಳಕನ್ನು ಕಂಡು ಎಲ್ಲರಿಗೂ ಅದನ್ನು ಕಾಣಿಸುವ ಹಂಬಲದಿಂದ ಮಧ್ಯಕಾಲೀನ ಸಮಾಜದಲ್ಲಿ ಕಾರ್ಯವನ್ನು ನಿರ್ವಹಿಸಿದವರೇ, ಅದನ್ನು ನಾಲ್ಕನೆ ಸಾಲು ಪ್ರತಿನಿಧಿಸುತ್ತದೆ.                         ಒಟ್ಟಾರೆಯಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆಂತರಿಕವಾಗಿ ಕಲಾತ್ಮಕವಾಗಿ ಬಸವಾದಿ ಪ್ರಮಥರ ಮುಂದಾಳತ್ವದಲ್ಲಿ ನಡೆದ ಸಾಮಾಜಿಕ ಬದಲಾವಣೆಯ ಬೃಹತ್ ಚಳುವಳಿಯು ಸಾಮಾಜಿಕ ಹೊರತಳ್ಳುವಿಕೆಗೆ ಒಳಗಾಗಿದ್ದ, ಬೆಸ್ತರ ಜಾತಿಗೆ ಸೇರಿದ ಮಾರಿತಂದೆಯು ಪರಿಭಾವಿಸುವ ರೀತಿಯು ಅದ್ಭುತವಾಗಿದೆ.  ಇದು ವಚನಸಾಹಿತ್ಯ ಚಳುವಳಿಯನ್ನು ಅತೀ ಸಶಕ್ತವಾಗಿ ವ್ಯಾಖ್ಯಾನ ಮಾಡಿರುವುದು ಎಂದರೆ ಅತಿಶಯೋಕ್ತಿ ಆಗಲಾರದು. ‘ಹಾರುವ ಹಂಸೆ’ ಎಂಬ ಪ್ರತಿಮೆಯು ಅಲ್ಲಮನಿಂದ ಬಂದಿದ್ದೂ ಆಗಿರಬಹುದು, ಇಲ್ಲವೇ ಅಲ್ಲಮನ ವಚನಕ್ಕೇ ಪ್ರೇರಣೆ ನೀಡಿದುದೂ ಆಗಿರಬಹುದು. ಇದು ಅಲ್ಲಮ ಪ್ರಭುವೇ ಹೇಳುವಂತೆ ‘ನಿಂದ ಹೆಜ್ಜೆ’ ಯನ್ನು ಅರಿಯಲು ‘ಹಿಂದಣ ಹೆಜ್ಜೆ’ ಯನ್ನು ಮೌಲಿಕವಾಗಿ ನೋಡಿರುವ ಉನ್ನತಮಟ್ಟದ ವೈಚಾರಿಕ ಮತ್ತು ಕಲಾತ್ಮಕತೆಯು ಮಾರಿತಂದೆಯಲ್ಲಿರುವುದನ್ನು ತಿಳಿಸುತ್ತದೆ.                         ಭಾಷೆಯು ಸಂವಹನದ ಮೊದಲ ಮತ್ತು ಮೂಲಭೂತವಾದ ಮಾಧ್ಯಮವಾಗಿರುವುದರಿಂದ ಮತ್ತು ‘ವಚನ’ ವೆಂಬ ಸಾಹಿತ್ಯಿಕ ಪ್ರಕಾರವೂ ಮಾತೇ ಆಗಿರುವುದರಿಂದ ಭಾಷಿಕವಾಗಿ ನೋಡುವುದಾದರೆ-                         ‘ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ’ ಎಂಬ ಸಾಲು ಸಾರ್ವಕಾಲಿಕ ಸಮಾಜದ ಸ್ಥಿತಿಯನ್ನು ಹೇಳುತ್ತಿದೆ. ‘ಹೋಗುತ್ತಿರಲಾಗಿ’ ಎಂಬುದು ವರ್ತಮಾನ ಕ್ರಿಯಾಪದವಾಗಿದ್ದು ಎಂದು ಈ ವಚನವನ್ನು ಓದಿದರೂ, ಯಾವ ಸ್ಥಳದಲ್ಲಿ ಓದಿದರೂ ಪ್ರಸ್ತುತಗೊಳ್ಳುತ್ತಾ ಸಾಗುತ್ತದೆ. ‘ಕಂಡು’ ಎಂಬುದು ಭೂತಕಾಲ ಪದವಾಗಿದ್ದು ಓದುಗನಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಲೇ, ಇಂದಿನ ಸಾಮಾಜಿಕ ಮತ್ತು ಕಾವ್ಯದ ವಿವೇಚನೆ ಮಾಡುವ ಹಾದಿಯನ್ನು ತೆರೆಯುತ್ತದೆ. ಬರೆದಿದ್ದೆಲ್ಲವೂ ಕಾವ್ಯವಾಗಬೇಕೆಂಬ ಹುಚ್ಚು ಹಠದಲ್ಲಿರುವಾಗ ‘ನವಿಲಿ’ನ ಕಲಾತ್ಮಕತೆ, ನರ್ತನವಿರದ, ಪ್ರಜ್ಞೆ – ಆತ್ಮದ ನಿರಸÀನದೊಂದಿಗೆ ಪ್ರಾರಂಭವಾಗುವ ‘ಹಾರುವ ಹಂಸೆ’ ಯ ಬಗೆಗೆ ಕೂತುಹಲವಿರದ ಅದನ್ನರಿಯದ ಸ್ಥಿತಿಯು ಇಂದು ಇರುವಾಗ ಮತ್ತೆ ಮತ್ತೆ ಬಿಡುಗಡೆಗೆ ಮಾರಿತಂದೆ ಕರೆಕೊಟ್ಟಂತೆ ಅನಿಸುತ್ತದೆ. ಕಾವ್ಯದ ಕಾರ್ಯ ಎಚ್ಚರಿಸಬೇಕಾಗಿರುವುದರಿಂದ, ವೈಯಕ್ತಿಕ ಬಿಡುಗಡೆಯೊಂದಿಗೆ ಸಾಮಾಜಿಕ ಬಿಡುಗಡೆಯು ಕಾವ್ಯದ ಕಾರ್ಯವಾಗಿರುವುದರಿಂದ ‘ಕೂಗುವ ಕೋಳಿ’ಯು ಹನ್ನೇರಡನೆ ಶತಮಾನದಲ್ಲಿ ಸಾಧ್ಯವಾಗಿದ್ದರಿಂದ ಮಾರಿತಂದೆಯು ‘ಕಂಡು’ ಎಂಬ ನಿಖರ ಕ್ರಿಯಾಪದವನ್ನು ಬಳಸಿರುವುದು ಔಚಿತ್ಯವಾಗಿದೆ. ಇಂದಿನ ಸಾಹಿತ್ಯಕ ಮತ್ತು ಕಾವ್ಯದ ಸ್ಥಿತಿಯನ್ನು ಪ್ರಶ್ನಿಸುವಂತೆ ಅಥವಾ ಅನುಮಾನದಿಂದ ನೊಡುವಂತೆ ಈ ವಚನ ಮಾಡುತ್ತದೆ. ‘ನವಿಲು’ ‘ಹಂಸ’ ‘ಕೋಳಿ’ ಯ ರೂಪಕಗಳು ಮತ್ತು ಅದರ ಕ್ರಿಯೆಗಳು ಒಂದು ಇಚ್ಚಾಶಕ್ತಿಯ ಜನಸಮೂಹದಿಂದ ಜರುಗಿದಾಗ ಉಂಟಾಗುವ ಬೆಳಕು ದಾರಿತೋರುವುದೇ ಪ್ರಥಮೋದ್ದೇಶವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಮಾರಿತಂದೆಯ ‘ಕದಂಬಲಿಂಗ’ ವೂ, ಬಸವಣ್ಣನವರ ‘ಕೂಡಲ ಸಂಗಮದೇವ’ ನೂ, ಅಲ್ಲಮನ ‘ಗುಹೇಶ್ವರ’ ನೂ ಕಾಣುತ್ತಾನೆಂದರೆ ಅತಿಶಯೋಕ್ತಿ ಎನಿಸಲಾರದು.                         ಹೀಗೆ ವಚನವೆಂಬ ಪ್ರಕಾರವು ಮೇಲ್ನೋಟಕ್ಕೆ ಕಂಡರೂ ತನ್ನೊಡಲಿನಲ್ಲಿ ಕಾಲಾತೀತವಾದ ಮಹತ್ತಿನ ಬಗೆಗೆ ಚಲನೆಯನ್ನು ಹೊಂದುತ್ತಾ ಆತ್ಮದ ಮತ್ತು ಸಮಾಜದ ಉನ್ನತಿಯನ್ನು ಬಯಸುತ್ತಲೇ ಸಾರ್ವಕಾಲೀನವಾಗಿ ಪ್ರಸ್ತುತವಾಗುತ್ತಿರುತ್ತದೆ.    ಅಡಿಟಿಪ್ಪಣಿಗಳು ೦೧. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೪ (೧೯೭೧) ( ಕಂಭದ ಮಾರಿತಂದೆ, ಸತ್ತಿಗೆ ಕಾಯಕದ ಮಾರಿತಂದೆ, ಕನ್ನದ ಮಾರಿತಂದೆ, ಕೂಗಿನ ಮಾರಿತಂದೆ, ನಗೆಯ ಮಾರಿತಂದೆ, ಅರಿವಿನ ಮಾರಿತಂದೆ, ವiನಸಂದ ಮಾರಿತಂದೆ, ಗಾವುದಿ ಮಾರಿತಂದೆ.) ೦೨. ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ (೧೯೨೪) ೦೩. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ (೧೯೭೧) ೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವ ಸಂಖ್ಯೆ ೦೬. ಪು ೧೧೯೭ (೨೦೧೬) ೦೫. ಮಹಾಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾಱುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದೆ೵ ಕದಂಬಲಿಂಗದಲ್ಲಿಗೆ        ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ ಮತ್ತು ೪೫೮        ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ ************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….6 ನಾಗಮ್ಮಜ್ಜಿಯ ಅಂತಿಮಯಾತ್ರೆ                 ನಮ್ಮ ತಂದೆಯವರಿಗೆ ಶಿಕ್ಷಕ ವೃತ್ತಿ ದೊರೆಯಿತಾದರೂ ಇಲಾಖೆಯ ನಿಯಮದಂತೆ ಶಿಕ್ಷಕ ತರಬೇತಿ ಮುಗಿಸುವುದು ಅನಿವಾರ್ಯವಾಗಿತ್ತು. ತರಬೇತಿಗಾಗಿ ಆಯ್ಕೆಗೊಂಡು ಅವರು ಕಾರವಾರದ ಟ್ರೇನಿಂಗ್ ಕಾಲೇಜ್ ಸೇರುವಾಗ ಅವ್ವನ ಗರ್ಭದಲ್ಲಿ ನಾನು ಆಡಲಾರಂಭಿಸಿದ್ದೆನಂತೆ. ನಾಗಮ್ಮಜ್ಜಿಯ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಅವ್ವನ ಸೀಮಂತ ಇತ್ಯಾದಿ ಸಡಗರದಲ್ಲಿ ಸಂಭ್ರಮಿಸುತ್ತ ತನ್ನ ಕಣ್ಗಾವಲಿನಲ್ಲಿ ಮಗಳ ಬಾಣಂತನಕ್ಕೆ ಬೇಕು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಊರ ಸುತ್ತಲಿನ ಎಲ್ಲಾ ಗ್ರಾಮದೇವತೆಗಳಿಗೆ ಹಣ್ಣು ಕಾಯಿ ನೀಡಿ ಮೊಮ್ಮಗನೇ ಹುಟ್ಟಬೇಕೆಂದು ಹರಕೆ ಹೊತ್ತು ಬಂದಳಂತೆ. ಕೊನೆಗೂ ಅವ್ವನಿಗೆ ಹೆರಿಗೆಯ ನೋವು ಕಾಣಿಸುವಾಗ ಅಂಕೋಲೆಯ ಸಂಬಂಧಿಯೋರ್ವರ ಮನೆಗೆ ಕರೆತಂದು ಉಳಿಸಿಕೊಂಡಳು. ಏಕೆಂದರೆ ಆಗಿನ ಕಾಲದಲ್ಲಿ ಸರಿಯಾದ ಔಷಧೋಪಚಾರ ಸಿಗುವುದು ಅಂಕೋಲೆಯ ಮಿಶನರಿ ಆಸ್ಪತ್ರೆಯಲ್ಲಿ ಮಾತ್ರ ಎಂಬ ನಂಬಿಕೆ ಆಸುಪಾಸಿನಲ್ಲಿ ಬಲವಾಗಿತ್ತು. ನಾಗಮ್ಮಜ್ಜಿ ಸಾಕಷ್ಟು ಮುಂಜಾಗ್ರತೆ ವಹಿಸಿ ಮಗಳ ಹೆರಿಗೆಗೆ ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿಯೇ ಮಾಡಿಕೊಂಡಿದ್ದಳು.                 ಮಾರ್ಚ್ ತಿಂಗಳ ಇಪ್ಪತ್ಮೂರನೆಯ ದಿನ, ಸಾವಿರದ ಒಂಬೈನೂರಾ ಐವತ್ಮೂರು ನನ್ನ ಜನನವಾಯಿತು. ನಾಗಮ್ಮಜ್ಜಿಯ ಸಂತೋಷಕ್ಕೆ ಪಾರವೇ ಇರಲಿಲ್ಲವೆಂದು ಅಮ್ಮ ನೆನೆಸಿಕೊಳ್ಳುತ್ತಾಳೆ. ದೇವರಿಗೆ ಹರಕೆ ಹೊತ್ತುದರಿಂದಲೇ ತನಗೆ ಮೊಮ್ಮಗ ಹುಟ್ಟಿದ್ದಾನೆ ಎಂಬ ಮುಗ್ದ ಬಿಂಕದಲ್ಲಿ ಬೇಡಿಕೊಂಡ ಎಲ್ಲಾ ದೇವರಿಗೆ ಹರಕೆಯೊಪ್ಪಿಸಿ, ಬಾಣಂತಿಯನ್ನೂ ಮಗುವನ್ನೂ ಊರಿಗೆ ಕರೆತಂದು ಆರೈಕೆಗೆ ನಿಂತಳು.                 ಮೂರು ತಿಂಗಳ ಕಾಲ ಬಾಣಂತನ ಮುಗಿಸಿ ಕಾರವಾರದಲ್ಲಿ ತರಬೇತಿ ಪಡೆಯುತ್ತಿರುವ ಅಪ್ಪನ ಕೈಗೊಪ್ಪಿಸಿ ಬಿಟ್ಟರೆ ತನ್ನ ಬಹುದೊಡ್ಡ ಜವಾಬ್ದಾರಿ ಮುಗಿಯಿತು ಎಂದುಕೊಂಡಿದ್ದಳು ನಾಗಮ್ಮಜ್ಜಿ. ಮಗುವಿಗೆ ಕೈಬಳೆ, ಕಾಲ್ಕಡಗ, ಹೊಸಬಟ್ಟೆ ತೊಡಿಸಿ ಮಗಳನ್ನೂ ಸಿಂಗರಿಸಿಕೊಂಡು ತೊಟ್ಟಿಲ ಹೊರೆ ಹೊತ್ತು ಕಾರವಾರಕ್ಕೆ ಬಂದಿಳಿದಳು. ಅಂದು ದಿನವಿಡೀ ಮಗಳು, ಅಳಿಯ, ಮೊಮ್ಮಗುವಿನೊಂದಿಗೆ ಆನಂದದಲ್ಲಿ ಮೈಮರೆತಿದ್ದ ನಾಗಮ್ಮಜ್ಜಿಗೆ ಸರಿರಾತ್ರಿ ನಿದ್ದೆಯಲ್ಲಿರುವಾಗ ಹೊಟ್ಟೆನೋವು ಕಾಣಿಸಿಕೊಂಡಿತು.                 ಸಾಮಾನ್ಯವಾಗಿ ತನಗೆ ಎಂಥ ಸಣ್ಣಪುಟ್ಟ ಕಾಯಿಲೆ ಬಂದರೂ ತಾನೇ ಏನಾದರೊಂದು ಔಷಧಿ ಮಾಡಿ ತಿಂದು ಸರಳವಾಗಿ ಬಿಡುತ್ತಿದ್ದ ನಾಗಮ್ಮಜ್ಜಿ ಅಂದು ಮಾತ್ರ ಧೃತಿಗೆಟ್ಟು ನರಳ ತೊಡಗಿದಳಂತೆ! ಅಪರಾತ್ರಿಯ ಹೊತ್ತಿನಲ್ಲಿ ಅಪ್ಪ ಕಾರವಾರದ ಎಲ್ಲಾ ಆಸ್ಪತ್ರೆಗಳ ಬಾಗಿಲು ಬಡಿದು ಕಳಕಳಿಯಿಂದ ಹುಡುಕಾಡಿದರೂ ವೈದ್ಯರೊಬ್ಬರೂ ದೊರೆಯಲಿಲ್ಲ.                 ಸಿಕ್ಕ ಒಬ್ಬಿಬ್ಬರು ಮಧ್ಯರಾತ್ರಿಯ ಹೊತ್ತಿನಲ್ಲಿ ಮನೆ ಬಿಟ್ಟು ಬರಲು ಒಪ್ಪಲಿಲ್ಲ. ರಾತ್ರಿಯೆಲ್ಲಾ ನೋವಿನ ಯಮಯಾತನೆಯಲ್ಲಿ ನರಳಿದ ನಾಗಮ್ಮಜ್ಜಿ ನಸುಕು ಹರಿಯುವ ಹೊತ್ತಿಗೆ ಗಾಢನಿದ್ದೆಗೆ ಶರಣಾಗಿದ್ದಳು.                 ಅವಳು ಈಗ ಮಲಗಿದ್ದಾಳೆ ನೋವು ಕಡಿಮೆಯಾಗಿರಬಹುದು ಎಂದೇ ಭಾವಿಸಿದ ಅಪ್ಪ ಅವ್ವ ಅಜ್ಜಿಯನ್ನು ಅವಳ ಪಾಡಿಗೆ ಬಿಟ್ಟು ದೈನಂದಿನ ಚಟುವಟಿಕೆಗಳಿಗೆ ಸಿದ್ಧರಾದರು. ಅಪ್ಪ ಉಪಹಾರ ಮುಗಿಸಿ ಮಂಜಾನೆಯೇ ಆರಂಭಗೊಳ್ಳುವ ತರಗತಿಗೆ ಹಾಜರಾಗಲು ಅತ್ತ ಹೋದಬಳಿಕ ಅವ್ವ ಕಸಮುಸುರೆ ಇತ್ಯಾದಿ ಕೆಲಸಗಳಲ್ಲಿ ಮೈಮರೆತಿದ್ದಳು. ಅಜ್ಜಿಯ ಪಕ್ಕದಲ್ಲಿಯೇ ನನಗೂ ಸೊಗಸಾದ ನಿದ್ದೆ ಬಿದ್ದುದರಿಂದ ಅವ್ವ ಇತ್ತ ಲಕ್ಷ್ಯ ಕೊಡುವ ಅಗತ್ಯವೂ ಬೀಳಲಿಲ್ಲವಂತೆ.                 ಮನೆಗೆಲಸವನ್ನೆಲ್ಲ ಮುಗಿಸಿ ಹತ್ತು ಹೊಡೆಯುವ ಹೊತ್ತಿಗೆ ಇಷ್ಟು ಹೊತ್ತಾದರೂ ಅವ್ವ ಏಕೆ ಏಳಲಿಲ್ಲ? ಎಂಬ ಅನುಮಾನ ಬಲವಾಗಿ ಬಳಿ ಬಂದು ಎಬ್ಬಿಸಿ ನೋಡುವಾಗ ನಾಗಮ್ಮಜ್ಜಿ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಳು!                 ಅಪರಿಚಿತವಾದ ಊರು. ಉಳಿದುಕೊಂಡದ್ದು ಯಾರದೋ ಮನೆ. ಹೇಳ ಕೇಳುವ ಬಂಧುಗಳು ಯಾರೂ ಹತ್ತಿರವಿಲ್ಲ. ಇಂಥ ಸಂದರ್ಭದಲ್ಲಿ ತೀರ ನಂಬಲೂ ಆಗದ ಸ್ಥಿತಿಯಲ್ಲಿ ಅಜ್ಜಿ ಹೆಣವಾಗಿ ಮಲಗಿದ್ದಾಳೆ….                 ಕಾರವಾರದ ಬೀದಿಗಳಲ್ಲಿ ಬೊಬ್ಬೆಯಿಡುತ್ತಲೆ ಶಿಕ್ಷಕರ ತರಬೇತಿ ಕೇಂದ್ರದತ್ತ ಓಡಿದ ಅವ್ವ ಅಪ್ಪನಿಗೆ ವಿಷಯ ತಿಳಿಸಿ ಅಪ್ಪನನ್ನು ಬೀಡಾರಕ್ಕೆ ಕರೆತರುವಷ್ಟರಲ್ಲಿ ಒಂದು ತಾಸಾದರೂ ಕಳೆದು ಹೋಗಿರಬಹುದು. ಹೆಣದ ಪಕ್ಕದಲ್ಲಿ ಯಾವ ಅರಿವೂ ಇಲ್ಲದೆ ಆಡುತ್ತ ಮಲಗಿದ ನನ್ನನ್ನು ನೆರೆ ಮನೆಯವರಾರೋ ನೋಡಿ ಎತ್ತಿಕೊಂಡಿದ್ದರಂತೆ.                 ಊರಿಗೆ ಸುದ್ದಿ ಮುಟ್ಟಿಸುವುದೂ ಕಷ್ಟವಾಗಿದ್ದ ಕಾಲ. ಸಮೀಪವೆಂದರೆ ಅಂಕೋಲೆಯ ದಾರಿಯಲ್ಲಿ ಅಮದಳ್ಳಿ ಎಂಬಲ್ಲಿ ಶಾನುಭೋಗಿಕೆ ಮಾಡಿಕೊಂಡಿರುವ ನಾಗಣ್ಣ ಎಂಬ ಪರಿಚಿತ ವ್ಯಕ್ತಿ ಮಾತ್ರ. ಅಪ್ಪ ಹೇಗೋ ನಾಗಣ್ಣನಿಗೆ ಸುದ್ದಿ ಮುಟ್ಟಿಸಿ ಅವನಿಂದ ಊರಿನವರೆಗೂ ನಾಗಮ್ಮಜ್ಜಿಯ ಮರಣ ವಾರ್ತೆ ತಲುಪುವಾಗ ಅರ್ಧ ದಿನ ಕಳೆದು ಹೋಗಿತ್ತು. ಅಲ್ಲಿಂದ ಬಂಧು ಬಾಂಧವರು ಹೊರಡ ಬೇಕೆಂದರೂ ಬಸ್ಸು ಇತ್ಯಾದಿ ಸೌಕರ್ಯಗಳಿಲ್ಲ! ಇದ್ದರೂ ಕೈಯಲ್ಲಿ ಕಾಸು ಇಲ್ಲದ ಜನ. ಕಾಲ್ನಡಿಗೆಯಲ್ಲೇ ಹೊರಟು ಕಾರವಾರ ಸೇರುವ ಹೊತ್ತಿಗೆ ಮತ್ತೆ ನಡುರಾತ್ರಿ.                 ಸರಿರಾತ್ರಿಯಲ್ಲಿ ನಾಗಮ್ಮಜ್ಜಿಯ ಶವವನ್ನು ಕಾರವಾರದ ಸ್ಮಶಾನದಲ್ಲಿ ಮಣ್ಣು ಮಾಡಿದರಂತೆ. ಮಗಳು ಮೊಮ್ಮಗನನ್ನು ಅತ್ಯಂತ ಸಡಗರದಿಂದ ಕರೆತಂದು ಅಳಿಯನ ಕೈಗೊಪ್ಪಿಸಿ ನಾಗಮ್ಮಜ್ಜಿ ತನ್ನ ಕನಸುಗಳೊಂದಿಗೆ ಕಣ್ಮರೆಯಾಗಿಬಿಟ್ಟಳು ಎಂಬ ಕತೆಯನ್ನು ಅವ್ವ ಹೇಳತೊಡಗಿದಾಗ ಅಜ್ಜಿಯ ಆಕೃತಿ, ಚಡಪಡಿಕೆ, ಕನಸುಗಳು, ತೀವೃವಾದ ಜೀವನೋತ್ಸಾಹಗಳು ನನ್ನ ಕಣ್ಣೆದುರೇ ಚಿತ್ರ ಶಿಲ್ಪವಾಗಿ ಮೂಡಿದಂತೆನಿಸುತ್ತದೆ. ಅಷ್ಟೊಂದು ಅಕ್ಕರೆ ತೋರುವ ಅಜ್ಜಿಯ ಪ್ರೀತಿ ಆರೈಕೆಗಳನ್ನು ಇನ್ನಷ್ಟು ಕಾಲ ಪಡೆಯುವ ಯೋಗ ನನಗಿದ್ದರೆ? ಎಂದೂ ಚಡಪಡಿಸುತ್ತದೆ. ********************************************

Read Post »

You cannot copy content of this page

Scroll to Top