ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—18 ಆತ್ಮಾನುಸಂಧಾನ ಆಡುಂಬೊಲದಿಂದ ಅನ್ನದೇಗುಲಕ್ಕೆ! ನಾಡು ಮಾಸ್ಕೇರಿಯಲ್ಲಿ ಕಳೆದ ಪ್ರಾಥಮಿಕ ಶಿಕ್ಷಣದ ಕಾಲಾವಧಿ ಹಲವು ಬಗೆಯ ಜೀವನಾನುಭವಗಳಿಗೆ ಕಾರಣವಾಯಿತು. ಕೇರಿಯ ಯಾವ ಮನೆಯಲ್ಲಿ ಯಾರೂ ಹೊಟ್ಟೆ ತುಂಬ ಉಂಡೆವೆಂಬ ಸಂತೃಪ್ತಿಯನ್ನು ಕಾಣದಿದ್ದರೂ ಅಪರಿಮಿತವಾದ ಜೀವನೋತ್ಸಾಹಕ್ಕೆ ಕೊರತೆಯೆಂಬುದೇ ಇರಲಿಲ್ಲ. ಅಸ್ಪ್ರಶ್ಯತೆಯ ಬಗ್ಗಡವೊಂದು ಜಾತಿಗೇ ಅಂಟಿಕೊಂಡಿದ್ದರೂ ಅದನ್ನು ಅಷ್ಟೊಂದು ಗಂಭೀರವಾಗಿ ನಾವೆಂದೂ ಪರಿಗಣಿಸಲಿಲ್ಲ. ಊರಿನ ದೇವಾಲಯಗಳಿಗೆ ಹೋದರೆ ಕಂಪೌಂಡಿನ ಆಚೆಯೇ ನಮ್ಮ ನೆಲೆಯೆಂಬ ಅರಿವು ಮಕ್ಕಳಾದ ನಮಗೂ ಇತ್ತು. ಚಹಾದಂಗಡಿಗಳಲ್ಲಿ ಬೇಲಿಯ ಗೂಟಕ್ಕೆ ಸಿಗಿಸಿಟ್ಟ ಗ್ಲಾಸುಗಳನ್ನು ನಾವೇ ತೊಳೆದುಕೊಂಡು ಮೇಲಿಂದ ಹೊಯ್ಯುವ ಚಹಾ ಕುಡಿಯುವುದು ನಮಗೆ ಸಹಜ ಅಭ್ಯಾಸವಾಗಿತ್ತು. ಕಿರಾಣಿ ಅಂಗಡಿಗಳಲ್ಲೂ ಬೇಕಾದ ಸಾಮಾನು ಪಡೆಯಲು ಮೇಲ್ಜಾತಿಯ ಗ್ರಾಹಕರಿದ್ದರೆ ಅವರಿಂದ ಮಾರು ದೂರದ ಅಂತರವಿಟ್ಟುಕೊಂಡೇ ನಮಗೆ ಬೇಕಾದ ವಸ್ತುಗಳನ್ನು ಕೊಂಡು ಬರುವುದು ನಮಗೆ ಸಹಜ ರೂಢಿಯಾಗಿತ್ತು. ನಮ್ಮನ್ನು ಎಲ್ಲರಿಗಿಂತ ಭಿನ್ನವಾಗಿ ಪ್ರತ್ಯೇಕವಾಗಿ ಸಮಾಜವು ಪರಿಗಣಿಸುತ್ತದೆ ಎಂಬ ಅರಿವೇ ಮೂಡದ ಅಪ್ರಬುದ್ಧ ವಯಸ್ಸಿನ ಹಂತವದು. ಇದೊಂದು ಸಹಜ ಸಾಮಾಜಿಕ ಕ್ರಿಯೆ ಎಂದು ಒಪ್ಪಿಕೊಂಡಿರುವುದರಿಂದ ನಾವು ಬಹುಶಃ ಆ ದಿನಗಳಲ್ಲಿ ಯಾವುದನ್ನೂ ಪ್ರಶ್ನಿಸದೇ ನಿರಾಳವಾಗಿದ್ದುದೇ ಬಾಲ್ಯದ ಬದುಕು ಅಷ್ಟೊಂದು ಉಲ್ಲಾಸದಾಯಕವಾಗಿಯೇ ಕಳೆದು ಹೋಯಿತು. ಸಮಾನ ವಯಸ್ಸಿನ ನಾರಾಯಣ ವೆಂಕಣ್ಣ, ನಾರಾಯಣ ಮಾಣಿ, ಹೊನ್ನಪ್ಪ ವೆಂಕಣ್ಣ, ಗಣಪತಿ ಬುದ್ದು, ಕೃಷ್ಣ ಮಾಣಿ, ನಾನು ಮತ್ತು ನನ್ನ ತಮ್ಮ ನಾಗೇಶ ಎಲ್ಲರೂ ಸೇರಿ ಕಷ್ಟ ಸುಖಗಳನ್ನು ಹಂಚಿಕೊಂಡೇ ಬೆಳೆದೆವು. ಕೇರಿಯ ಎಲ್ಲರ ಮನೆಗಳಲ್ಲಿಯೂ ಕ್ಷೀಣವಾದ ಹಸಿವಿನ ಆಕ್ರಂದನವೊಂದು ಸಹಜವೆಂಬಂತೆ ನೆಲೆಸಿತ್ತು. ಹಾಗಾಗಿಯೇ ಬಹುಶಃ ನಮ್ಮ ಗೆಳೆಯರ ಬಳಗ ನಿತ್ಯವೂ ಹೊರಗೆ ಏನನ್ನಾದರೂ ತಿಂದು ಖಾಲಿ ಹೊಟ್ಟಗೆ ಕೆಲಸ ಕೊಡುವ ತವಕದಲ್ಲಿಯೇ ಇರುತ್ತಿತ್ತು. ಬೆಳೆದು ನಿಂತ ಯಾರದೋ ಶೇಂಗಾ ಗದ್ದೆಗಳಲ್ಲಿನ ಶೇಂಗಾ ಗಿಡಗಳನ್ನು ಕಿತ್ತು ತಂದು ಸುಟ್ಟು ತಿನ್ನುವುದಾಗಲಿ, ಗೆಣಸಿನ ಹೋಳಿಗಳಿಂದ ಗೆಣಸು ಕಿತ್ತು ಬೇಯಿಸಿ ತಿನ್ನುವುದಾಗಲಿ, ಕೊಯ್ಲಿಗೆ ಬಂದ ಭತ್ತದ ಕದಿರನ್ನು ಕೊಯ್ದು ತಂದು ಹುರಿದು ಕುಟ್ಟಿ ಅವಲಕ್ಕಿ ಮಾಡಿ ಮೇಯುವುದಾಗಲಿ, ಗೇರು ಹಕ್ಕಲಿಗೆ ನುಗ್ಗಿ ಗೇರು ಬೀಜಗಳನ್ನು ಕದ್ದು ತರುವುದಾಗಲಿ, ಯಾರದೋ ಮಾವಿನ ತೋಪಿನಲ್ಲಿಯ ಮಾವಿನ ಕಾಯಿ ಹಣ್ಣುಗಳನ್ನು ಉದುರಿಸಿ ತಿನ್ನುವುದಾಗಲಿ, ಹಳ್ಳದ ದಂಡೆಗುಂಟ ಬೆಳೆದು ನಿಂತ ತೆಂಗಿನ ಮರಗಳನ್ನು ಹತ್ತಿ ಎಳೆನೀರು ಕೊಯ್ದು ಕುಡಿಯುವುದಾಗಲಿ ನಮಗೆ ಅಪರಾಧವೆಂದೇ ಅನಿಸುತ್ತಿರಲಿಲ್ಲ. ಸಂಬಂಧಪಟ್ಟವರು ಒಂದಿಷ್ಟು ಬೈದಿರಬಹುದಾದರೂ ಅದರಾಚೆಗೆ ಯಾವ ದೊಡ್ಡ ಶಿಕ್ಷಯೇನನ್ನೂ ಕೊಡುತ್ತಿರಲಿಲ್ಲ. ಇದರಿಂದ ನಮಗೆಲ್ಲ ಇದೊಂದು ಮಕ್ಕಳಾಟಿಕೆಯ ಸಹಜ ಕ್ರಿಯೆ ಎಂದೇ ಅನಿಸುತ್ತಿತ್ತು. ಹಾಗಾಗಿಯೇ ನಾವು ನಮ್ಮ ದಾಂದಲೆ, ವಿನೋದಗಳನ್ನು ನಿರಾತಂಕವಾಗಿಯೇ ಮುಂದುವರಿಸಿದ್ದೆವು. ನಮ್ಮ ಏಳನೆಯ ತರಗತಿಯ ಅಭ್ಯಾಸ ಪರೀಕ್ಷೆಗಳು ಮುಗಿಯುವವರೆಗೂ ನಾಡು ಮಾಸ್ಕೇರಿಯ ನಮ್ಮ ಬಾಲ್ಯದ ಸುಂದರ ಬದುಕಿಗೆ ಮಾಸ್ಕೇರಿ ಮತ್ತು ಅಲ್ಲಿನ ಕೆರೆ, ತೋಟ, ಬೇಣ, ಬಯಲುಗಳೆಲ್ಲ ನಮ್ಮೆಲ್ಲರ ಆಡುಂಬೊಲವಾದದ್ದು ನಿಜವೇ! 1965 ನೇ ಇಸ್ವಿ ಎಂದು ನೆನಪು. ನನ್ನ ಪ್ರಾಥಮಿಕ ಶಿಕ್ಷಣದ ಅವಧಿ ಮುಗಿದಿತ್ತು. ಮುಂದೆ ಹೈಸ್ಕೂಲು ಸೇರಬೇಕಿತ್ತು. ಅದೇ ಸಂದರ್ಭದಲ್ಲಿ ನಮ್ಮ ತಂದೆಯವರಿಗೆ ಅಂಕೋಲೆಯ ತೆಂಕಣಕೇರಿ ಎಂಬಲ್ಲಿಯ ಪ್ರಾಥಮಿಕ ಶಾಲೆಗೆ ವರ್ಗವಾಯಿತು. ನಾನು ಅಂಕೋಲೆಯಲ್ಲಿ ಹೈಸ್ಕೂಲು ಓದುವುದು ಸುಲಭವೇ ಆಯಿತು. ಆದರೆ ನಮ್ಮ ತಂದೆಯವರಿಗೆ ನಮ್ಮ ಗೆಳೆಯರ ಇಡಿಯ ಗುಂಪು ಶಿಕ್ಷಣ ಮುಂದುವರಿಸಬೇಕು ಎಂಬ ಇಚ್ಛೆಯಿತ್ತು. ಇನ್ನೂ ಶಾಲೆಯ ಮೆಟ್ಟಿಲು ಹತ್ತದ ನಾರಾಯಣ ಮಾಣಿ ಎಂಬ ಗೆಳೆಯನನ್ನು ಬಿಟ್ಟು ಉಳಿದ ಎಲ್ಲರೂ ಪ್ರಾಥಮಿಕ ಶಿಕ್ಷಣದ ಕೊನೆಯ ಹಂತದಲ್ಲಿದ್ದರು. ನಾರಾಯಣ ವೆಂಕಣ್ಣ ಎಂಬುವವನು ಮಾತ್ರ ನನಗಿಂತ ಒಂದು ವರ್ಷ ಹಿರಿಯನಾಗಿದ್ದು ಹನೇಹಳ್ಳಿಯ ಆನಂದ್ರಾಶ್ರಮ ಹೈಸ್ಕೂಲು ಸೇರಿಕೊಂಡಿದ್ದ. ಆತನನ್ನು ಸೇರಿಸಿ ಎಲ್ಲರೂ ಅಂಕೋಲೆಯಲ್ಲಿ ಸರಕಾರಿ ವಿದ್ಯಾಥರ್ಿ ನಿಲಯಕ್ಕೆ ಸೇರಿ ಅಂಕೋಲೆಯಲ್ಲಿ ಶಿಕ್ಷಣ ಮುಂದುವರಿಸಿದರೆ ಸರಿಹೋಗಬಹುದು ಎಂಬುದು ತಂದೆಯವರ ಲೆಕ್ಕಾಚಾರವಾಗಿತ್ತು. ಅದಕ್ಕಾಗಿ ಅವರು ಎಲ್ಲ ಮಕ್ಕಳ ತಾಯಿ ತಂದೆಯರ ಮನ ಒಲಿಸಿ ಅಂಕೋಲೆಯ ಹಿಂದುಳಿದ ವರ್ಗ ವಸತಿನಿಲಯಕ್ಕೆ ಸೇರಿಕೊಳ್ಳಲು ಅನುಮತಿ ಪಡೆದುಕೊಂಡರು. ಮತ್ತು ಅವರೆಲ್ಲರ ಜೊತೆಯಲ್ಲಿ ನಾನು ಮತ್ತು ನನ್ನ ತಮ್ಮ ನಾಗೇಶನೂ ವಿದ್ಯಾಥರ್ಿ ನಿಲಯದಲ್ಲಿಯೇ ಉಳಿದು ಅಭ್ಯಾಸ ಮುಂದುವರಿಸಬೇಕೆಂದೂ ತೀಮರ್ಾನಿಸಿದರು. ಗೆಳೆಯರೆಲ್ಲರೂ ಒಟ್ಟಾಗಿ ಒಂದೇ ಕಡೆಯಲ್ಲಿ ನೆಲೆ ನಿಂತು ಓದುವ ಉತ್ಸಾಹದೊಂದಿಗೆ ನಾವೆಲ್ಲ ಸನ್ನದ್ಧರಾದೆವು. ಅದೇ ವರ್ಷದ ಜೂನ್ ತಿಂಗಳು ಶಾಲೆಗಳು ಆರಂಭವಾಗುವ ಹೊತ್ತಿಗೆ ಸರಿಯಾಗಿ ನಾವು ಹಾಸ್ಟೆಲ್ಲಿಗೆ ಹೊರಟು ನಿಂತೆವು. ಕೇರಿಯಲ್ಲಿ ಅದು ಒಂದು ಬಗೆಯಲ್ಲಿ ದುಗುಡ ಇನ್ನೊಂದು ಬಗೆಯಲ್ಲಿ ಉತ್ಸಾಹ ತುಂಬಿದ ದಿನ. ಕೇರಿಯ ಬಹುತೇಕ ಕುಟುಂಬಗಳಿಗೆ ಇದುವರೆಗೆ ತಮ್ಮ ಮಕ್ಕಳನ್ನು ಅಗಲಿ ಇದ್ದು ಅಭ್ಯಾಸ ಇರಲಿಲ್ಲ. ಇದೇ ಮೊದಲ ಬಾರಿಗೆ ಗಂಗಾವಳಿ ನದಿಯಾಚೆಗಿನ ಅಂಕೋಲೆಯಲ್ಲಿ ಬಿಟ್ಟು ಇರಬೇಕಾದ ಸಂಕಟದಲ್ಲಿ ತಾಯಿ ತಂದೆಯರು ನೊಂದುಕೊಂಡರು. ಆದರೆ ಅಕ್ಷರ ಕಲಿಕೆಯ ಆಸಕ್ತಿ ಎಲ್ಲ ತಾಯಂದಿರ ಹೃದಯದಲ್ಲಿ ಮೊಳಕೆಯೊಡೆಯುತ್ತಿದ್ದ ಕಾಲಮಾನದ ಪ್ರೇರಣೆ ಅವರೆಲ್ಲರ ಬಾಯಿ ಕಟ್ಟಿ ಹಾಕಿತ್ತು. ಅಂದು ಮುಂಜಾನೆ ಕಳೆದು, ಹೊತ್ತೇರುವ ಸಮಯಕ್ಕೆ ನಾವೆಲ್ಲ ನಮ್ಮ ನಮ್ಮ ಲಭ್ಯ ಬಟ್ಟೆ ಬರೆಗಳನ್ನು ಕೈ ಚೀಲದಲ್ಲಿ ತುಂಬಿ ಹೊರಟು ನಿಂತಾಗ ಕೇರಿಯ ಬಹುತೇಕ ಮಂದಿ ನಮ್ಮನ್ನು ಹಿಂಬಾಲಿಸಿ ಗಂಗಾವಳಿ ನದಿ ತೀರದವರೆಗೂ ನಡೆದು ಬಂದಿದ್ದರು. ಕಾಲುದಾರಿಯ ಪಯಣದುದ್ದಕ್ಕೂ ನಾವು ವಸತಿ ನಿಲಯದಲ್ಲಿ ಕೂಡಿ ಬಾಳುವ ಕುರಿತು ಓದಿನಲ್ಲಲ್ಲದೇ ಅನ್ಯ ವ್ಯವಹಾರಗಳಲ್ಲಿ ತೊಡಗದಿರುವಂತೆ, ಆರೋಗ್ಯದ ಕುರಿತು ಪರಸ್ಪರ ಕಾಳಜಿ ಪೂರ್ವಕ ಸಹಕರಿಸುವ ಸಲಹೆ ನೀಡುತ್ತಲೇ ಗಂಗಾವಳಿ ತೀರ ತಲುಪಿಸಿದ್ದರು. ನಾವೆಲ್ಲ ಒಂದು ಕತ್ತಲ ಲೋಕದ ಕರಾಳ ಬದುಕಿನಿಂದ ಬೆಳಕಿನ ಕಿರಣಗಳನ್ನು ಆಯ್ದುಕೊಳ್ಳಲು ನಕ್ಷತ್ರಲೋಕಕ್ಕೆ ಹೊರಟು ನಿಂತ ಯೋಧರೆಂಬಂತೆ ನಮ್ಮನ್ನು ಪ್ರೀತಿ ಅಭಿಮಾನ ಅಗಲಿಕೆಯ ವಿಷಾದ ತುಂಬಿದ ಕಣ್ಣುಗಳಿಂದ ನೋಡುತ್ತಲೆ ನಮ್ಮೆಲ್ಲರನ್ನು ದೋಣಿ ಹತ್ತಿಸಿ ನಾವೆಯು ಆಚೆ ದಡ ಸೇರುವವರೆಗೆ ಕಾದು ನಿಂತು, ನಾವು ಹತ್ತಿದ ಬಸ್ಸು ನಿರ್ಗಮಿಸುವವರೆಗೂ ನಮ್ಮ ಕಣ್ಣಳತೆಯಲ್ಲಿ ಕಾಣುತ್ತಲೇ ಇದ್ದರು. ಅಂಕೋಲೆಯ ಲಕ್ಷ್ಮೇಶ್ವರ ಎಂಬ ಭಾಗದಲ್ಲಿ ಇರುವ ‘ಆಯಿಮನೆ’ ಎಂಬ ಕಟ್ಟಡದ ಮಹಡಿಯ ಮೇಲೆ ಇರುವ ವಿದ್ಯಾಥರ್ಿ ನಿಲಯಕ್ಕೆ ಬಂದು ತಲುಪಿದ ಬಳಿಕ ಎಲ್ಲರಿಗೂ ಹೊಸತೊಂದು ಬದುಕಿನ ಮಗ್ಗಲು ಪ್ರವೇಶಿಸಿದಂತೆ ಮೂಕ ವಿಸ್ಮಿತರಾಗಿದ್ದೆವು. ಈಗ ‘ಆಯಿಮನೆ’ ಇರುವ ಸ್ಥಳದಲ್ಲಿ ‘ಅಮ್ಮ’ ಎಂಬ ಹೆಸರಿನ ಭವ್ಯ ಬಂಗಲೆಯೊಂದು ಎದ್ದು ನಿಂತಿದೆ. ವಸತಿ ನಿಲಯದ ಮೇಲ್ವಿಚಾರಕರು ಅಲ್ಲಿಯ ಸಹಾಯಕರು ಮತ್ತೆ ನಮಗಿಂತ ಮೊದಲೇ ಪ್ರವೇಶ ಪಡೆದಿದ್ದ ಸಹಪಾಠಿಗಳು ನಮ್ಮನ್ನು ಪ್ರೀತಿಯಿಂದಲೇ ಕಂಡರು. ನಮ್ಮ ನಮ್ಮ ಪಾಲಿಗೆ ದೊರೆತ ಹಾಸಿಗೆ ಹೊದಿಕೆ ಪಡೆದು ಕೊಠಡಿಗಳನ್ನು ಸೇರಿ ನಮ್ಮ ನಮ್ಮ ನೆಲೆಗಳನ್ನು ಗುರುತಿಸಿಕೊಂಡಾದ ಬಳಿಕ ಮಧ್ಯಾಹ್ನವೂ ಆಗಿ ಊಟದ ಪಂಕ್ತಿಯಲ್ಲಿ ಕುಳಿತು ಯಾವ ಸಂಕೋಚವೂ ಇಲ್ಲದೇ ಹೊಟ್ಟೆ ತುಂಬ ಉಣ್ಣುತ್ತಿದ್ದಂತೆ ನಮ್ಮೆಲ್ಲರ ಮನಸ್ಸಿನಲ್ಲಿಯೂ ನಾಡುಮಾಸ್ಕೇರಿಯ ಆಡೊಂಬಲದಿಂದ ನಿಜವಾಗಿಯೂ ಅನ್ನದೇಗುಲಕ್ಕೆ ಬಂದು ಸೇರಿದೆವು ಎಂಬ ಸಂತೃಪ್ತ ಭಾವ ಅರಳತೊಡಗಿತ್ತು. ********************************************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ—ಎರಡು ಟ್ರೀಣ್ … ಟ್ರೀಣ್.. ಅಬ್ಬಾ ಯಾರಿದು ಇಷ್ಟು ಹೊತ್ತಿಗೆ ಫೋನ್ ಮಾಡ್ತಿರೋದು ಎಂದು ಗಾಬರಿಯಲ್ಲಿ ಎದ್ದರೆ.. ಎಲ್ಲಿದ್ದೇನೆಂದು ತಿಳಿಯುವುದಕ್ಕೆ ಸ್ವಲ್ಪ ಹೊತ್ತು ಬೇಕಾಯ್ತು. ಎದ್ದು ಫೋನ್ ಕೈಗೆ ತಗೊಂಡೆ.. ಹಲೋ ಎನ್ನುವುದರೊಳಗೆ ಆ ಕಡೆಯಿಂದ ಮೇಡಮ್ ಇನ್ನು ಅರ್ಧ ಗಂಟೆಯೊಳಗೆ ರೆಡಿಯಾಗಿ ಲಾಂಜ್ ಗೆ ಬನ್ನಿ ಎನ್ನುವುದು ಕೇಳಿಸಿತು. ಹೂಂ ಎನ್ನುವುದರೊಳಗೆ ಫೋನ್ ಇಟ್ಟಾಯ್ತು. ಯಾವ ಮೇಡಮ್? ಯಾವ ಲಾಂಜ್! ಹೊತ್ತಲ್ಲದ ಹೊತ್ತಿನಲ್ಲಿ ಮಲಗಿ ಎದ್ದರೆ ಹೀಗೆ ಆಗುವುದು. ಇಡೀ ರಾತ್ರಿ ಬಯಲಾಟ ನೋಡಿ ಬಂದು ಮಲಗಿದವರಿಗೆ ಆಗುವಂಥದೇ ಅಮಲು ನನ್ನನ್ನು ಆವರಿಸಿತ್ತು. ಸ್ವಲ್ಪ ಸ್ವಲ್ಪವೇ ತಿಳಿಯಾದ ಮೇಲೆ ಎಲ್ಲವೂ ನೆನಪಿಗೆ ಬರಲು ಶುರುವಾಯ್ತು. ನಿನ್ನೆ ರಾತ್ರಿ ನಾವು ಇನ್ನೊವಾದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದು. ನಮಗೆ ಕೂತುಕೊಳ್ಳಲು ಆರಾಮಾಗಲಿ ಎಂದು ನಮ್ಮ ಎಲ್ಲಾ ಲಗ್ಗೇಜನ್ನು ವಾಹನದ ಮೇಲೆ ಜೋಡಿಸಿ ಕಟ್ಟಿದ್ದು. ನಮ್ಮ ದೊಡ್ಡವಳಿಗೆ ಸ್ವಲ್ಪ ಕೀಟಲೆ ಬುದ್ಧಿ. “ಅವರು ಅಷ್ಟು ಗಟ್ಟಿಯಾಗಿ ಕಟ್ಟಿಲ್ಲ ಅಂತ ಅನಿಸುತ್ತೆ ನನಗೆ, ಈಗ ಯಾವುದಾದರೂ ಬ್ಯಾಗ್ ಬಿದ್ದು ಹೋದರೆ? ಧಾತ್ರಿ ಬ್ಯಾಗ್ ಮೇಲೆ ಇಟ್ಟಿರೋದ್ರಿಂದ ಅದೇ ಮೊದಲು ಬೀಳೋದು. ಗೊತ್ತಾಗೋದ್ರೊಳಗೆ ಎಷ್ಟೋ ದೂರ ಬಂದು ಬಿಟ್ಟಿರುತ್ತೇವೆ.” ಎಂದೆಲ್ಲಾ ಹೇಳುತ್ತಾ ಇದ್ದಾಗ ನಾನು ಗದರಿದೆ. ಸುಮ್ನಿರು ನೀನು ಹಾಗೆಲ್ಲ ಹೇಳ್ಬೇಡ ಅಂದೆ. ಈಗ ಧಾತ್ರಿಗೆ ನಿಜವಾಗಲೂ ಭಯ ಶುರುವಾಯ್ತು. “ನನ್ನ ಬ್ಯಾಗ್ ಬಿದ್ರೆ ಇನ್ನು ಐದು ದಿನ ನಾನೇನು ಹಾಕಿಕೊಳ್ಳಲಿ? ನನ್ನ ಬಟ್ಟೆ ಒಂದೂ ಇಲ್ಲವಲ್ಲ!” ಬ್ಯಾಗ್ ಬೀಳುವುದಿಲ್ಲ ಎಂದು ಧೈರ್ಯ ಹೇಳೋದು ಬಿಟ್ಟು ಒಬ್ಬೊಬ್ಬರೂ ಒಂದೊಂದು ಸಲಹೆ ಕೊಡಲು ತೊಡಗಿದೆವು. ಅವಳು ಅಳುವುದೊಂದು ಬಾಕಿ. ಕೊನೆಗೆ ಅವಳೇ ಸಮಾಧಾನ ಮಾಡಿಕೊಂಡು. ಲಗ್ಗೇಜ್ ಗಟ್ಟಿಯಾಗಿ ಕಟ್ಟಿದ್ದೀರಲ್ಲ, ಬ್ಯಾಗ್ ಬೀಳೋದಿಲ್ಲ ಅಲ್ವಾ ? ಎಂದು ಡ್ರೈವರನ್ನೇ ಕೇಳಿದಳು. ಇಲ್ಲಮ್ಮ ಛಾನ್ಸೇ ಇಲ್ಲ ಎಂದು ಅವರಂದ ಮೇಲೆ ನೆಮ್ಮದಿಯಿಂದ ಕೂತಳು. ನಮ್ಮ ವಿಮಾನ ಪೋರ್ಟ್‌ಬ್ಲೇರ್ ನ ವೀರ ಸಾವರ್ಕರ್ ನಿಲ್ದಾಣದಲ್ಲಿ ಇಳಿದಾಗ ಹೊರಗೆ ಇಣುಕಿ ನೋಡಿ ನಾವು ಕನಸು ಕಂಡಿದ್ದು ನಿಜವಾಯಿತಲ್ಲ ಎಂದು ಮೈಮನವೆಲ್ಲ ಪುಳಕ. ವಿಮಾನದಿಂದ ಇಳಿಯಲು ಒಬ್ಬರ ಹಿಂದೆ ಒಬ್ಬರು ಸಾಲಾಗಿ ಬರುವಾಗ ಒಮ್ಮೆಲೇ ಏನೋ ನೆನಪಾಗಿ ಪಿಚ್ಚೆನಿಸಿತು. ನಮ್ಮಜ್ಜಿ ಒಮ್ಮೆ ಪೇಪರ್ ಓದುತ್ತಾ ಜೋರಾಗಿ, ಇವರನ್ನೆಲ್ಲಾ ಅಂಡಮಾನ್ ಜೈಲಿಗೆ ಕಳಿಸಬೇಕು. ಬ್ರಿಟಿಷರ ಕಾಲಾಪಾನಿ ಶಿಕ್ಷೆ ಕೊಡಿಸಬೇಕು. ಎಂದು ಗೊಣಗುತಿದ್ದಾಗ ಅಲ್ಲೇ ಕನ್ನಡಿಯ ಮುಂದೆ ನಿಂತು ತಲೆ ಬಾಚಿಕೊಳ್ಳುತಿದ್ದ ದೊಡ್ಡಪ್ಪ , ಯಾರನ್ನು ಕಳಿಸಬೇಕು ಅಂಡಮಾನಿಗೆ? ಕೊಲೆ ಸುಲಿಗೆ ಅತ್ಯಾಚಾರಕ್ಕೆಲ್ಲಾ ಅಂಡಮಾನಿಗೆ ಕಳಿಸುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುತಿದ್ದವರನ್ನು ಮಾತ್ರ ಕಳಿಸುತಿದ್ದರು. ಎಂದು ಹೇಳಿದಾಗ, ಅಲ್ಲೇ ಇದ್ದ ನನಗೆ ಕಾಲಾಪಾನಿ ಎಂದರೆ ಕಪ್ಪು ನೀರು ಅದ್ಯಾವ ತರದ ಶಿಕ್ಷೆ ಎಂದು ಯೋಚಿಸುವಂತಾಗಿತ್ತು. ನಾವೀಗ ಪ್ರವಾಸಕ್ಕೆಂದು ಖುಷಿಯಿಂದ ಬಂದಿದ್ದೇವೆ. ಮತ್ತೆ ನಮ್ಮ ಊರಿಗೆ ಹೋಗುವಾಗ ಇನ್ನಷ್ಟು ಸಂತೋಷದಿಂದ ಒಳ್ಳೆಯ ನೆನಪುಗಳನ್ನು ಹೊತ್ತು ಕೊಂಡೊಯ್ಯುತ್ತೇವೆ. ಆದರೆ.. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಇಲ್ಲಿಗೆ ಕರೆದುಕೊಂಡು ಬಂದಾಗ ಅವರು ಈ ನೆಲದ ಮೇಲೆ ಕಾಲಿಟ್ಟ ಗಳಿಗೆಯಲ್ಲಿ ಮತ್ತೆ ತಮ್ಮ ಊರಿಗೆ ಹಿಂತಿರುಗುವ ಕನಸು ಕೂಡ ಕಾಣದೆ, ಋಣ ಹರಿದುಕೊಂಡಂತೆ ಇಟ್ಟ ಆ ಒಂದೊಂದು ಹೆಜ್ಜೆಯೂ ಅದೆಷ್ಟು ಭಾರವಿದ್ದಿರಬಹುದು! ಯೋಚನೆಗೆ ಬಿದ್ದಿದ್ದೆ. ವಿಮಾನ ನಿಲ್ದಾಣದ ಹೊರಗೆ ಬಂದು ನಿಂತಾಗ ವತಿಕಾ ಇಂಟರ್ನ್ಯಾಷನಲ್ ಎಂಬ ಬೋರ್ಡ್ ಹಿಡಿದುಕೊಂಡು ನಿಂತ ಹುಡುಗ, ವಿಜಯ್ ನಮ್ಮನ್ನು ನಗುಮೊಗದಿಂದ ಸ್ವಾಗತಿಸಿ ನಮ್ಮ ಲಗ್ಗೇಜ್ ಗಳನ್ನೆಲ್ಲಾ ಒಂದು ವಾಹನಕ್ಕೆ ತುಂಬಿಸಿ, ನಮ್ಮನ್ನು ಮತ್ತೊಂದು ಮಿನಿಬಸ್ ಒಳಗೆ ಹತ್ತಲು ಹೇಳಿದಾಗ, ಅರೆಬರೆ ನಿದ್ದೆಯಿಂದ ಎದ್ದ ನನ್ನ ಯಜಮಾನರು ನಮ್ಮ ಬ್ಯಾಗು ನಮ್ಮ ಬ್ಯಾಗು ಎಂದು ಕಿರುಚಲು ಶುರು ಮಾಡಿದರು. ನಾವೆಲ್ಲರೂ ಸಮಾಧಾನದಿಂದ ನಾವು ಹೋಗುವಲ್ಲಿಗೇ ಬರುತ್ತೆ ಅದು ಎಂದರೆ ಒಂದು ಕ್ಷಣ ಒಪ್ಪಿದರೂ ಮರುಕ್ಷಣ ಮತ್ತೆ ಅದನ್ನೇ ಹೇಳುತ್ತಾ ಗಾಬರಿಯಾಗುತಿದ್ದರು. ಆಗ, ದೀಕ್ಷಾ ಮಾತು ಮರೆಸಲು “ಅಪ್ಪಾ.. ನೋಡಿಲ್ಲಿ. ನಾವೆಲ್ಲಿ ಬಂದಿದ್ದೇವೆ ಗೊತ್ತಾ? ಅಂಡಮಾನ್ ಇದು.” ಎಂದಳು. ” ಗೋವಾ ಕರಕೊಂಡು ಬಂದು ಅಂಡಮಾನ್ ಅಂದ್ರೆ ನಾನು ನಂಬಲ್ಲ.” ಅವರೆಂದಾಗ ನಮ್ಮ ಜೊತೆಯಲ್ಲಿದ್ದ ಉಳಿದವರು ಅರ್ಥವಾಗದೆ ಗಲಿಬಿಲಿಯಾಗಿದ್ದು ನಮಗೆ ತಿಳಿಯಿತು. ಪರಸ್ಪರ ಪರಿಚಯವಾಗದುದರಿಂದ ಯಾರೂ ಏನೂ ಕೇಳಲಿಲ್ಲ. ನಾವೂ ನಮ್ಮಷ್ಟಕ್ಕೆ ಇದ್ದೆವು. ಇವರು ನಡುನಡುವೆ ನಮ್ಮ ಲಗ್ಗೇಜನ್ನು ನೆನಪಿಸಿಕೊಂಡು ಕೇಳುತಿದ್ದರು. ನಮ್ಮ ಪಶ್ಚಿಮ ಕರಾವಳಿಯ ಊರುಗಳಂಥದ್ದೇ ಊರು ಇದು. ಅದೇ ರೀತಿಯ ಸಣ್ಣ ಸಣ್ಣ ಗಲ್ಲಿಗಳಂತ ರಸ್ತೆಗಳು. ಗೋವಾ ಎಂದು ಅನಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಬಾಗಿಲು ಬಡಿದ ಶಬ್ದವಾಯಿತು. ಮಕ್ಕಳು ಆಗಲೇ ತಯಾರಾಗಿ ಬಂದಿದ್ದರು. ನಾವೂ ತಯಾರಾಗಿಯೇ ಇದ್ದುದರಿಂದ ಮತ್ತೇನೂ ವಿಶೇಷವಾದ ಕೆಲಸವಿರಲಿಲ್ಲ. ಸತೀಶ್ ಅವರನ್ನು ನಿದ್ದೆಯಿಂದ ಎಚ್ಚರಿಸಿ ಕೂರಿಸಿದೆವು. ಒಂದು ನಿದ್ದೆಯಾದರೆ ಅದರ ಮುಂಚಿನ ವಿಷಯ ಮರೆತಿರುತ್ತದೆ ಅವರಿಗೆ. ಈಗ ಬ್ಯಾಗ್ ವಿಷಯ ಸಂಪೂರ್ಣ ಮರೆತಿದ್ದರು. ನಮ್ಮೊಂದಿಗೆ ಲಾಂಜ್‍ಗೆ ನಡೆದು ಬಂದರು. ಊಟ ಮುಗಿಸಿ ಸರಿಯಾಗಿ ಒಂದು ಗಂಟೆಗೆ ನಮ್ಮನ್ನು ಅಲ್ಲಿಯೇ ಬಂದು ಸೇರಲು ಹೇಳಿದರು ನಮ್ಮ ಟೂರ್ ಮ್ಯಾನೆಜರ್, ರಾಕೇಶ್ ಸರ್. ಮೊದಲೇ ತಯಾರಾಗಿ ನಿಂತ ಎರಡು ವಾಹನಗಳಲ್ಲಿ ನಾವೆಲ್ಲ ಹೊರಟೆವು. ಅಂಡಮಾನ್ ಪ್ರವಾಸದ ಬಹು ಮುಖ್ಯವಾದ ಪ್ರಸಿದ್ಧ ಸೆಲ್ಯುಲರ್ ಜೈಲ್‌ಗೆ ಭೇಟಿ ಆ ದಿನದ ನಮ್ಮ ಕಾರ್ಯಕ್ರಮವಾಗಿತ್ತು. ಜೈಲಿನ ಆವರಣ ವಿಶಾಲವಾಗಿದ್ದು ಎತ್ತರದ ಕಟ್ಟಡಗಳನ್ನು ನೋಡುವಾಗ, ಜೊತೆಗೆ ನಮಗೆಂದು ನೇಮಿಸಿದ ಗೈಡ್ ಪಟಪಟನೆ ಇತಿಹಾಸವನ್ನು ವಿವರಿಸುತ್ತಿರುವಾಗ ಗತಕಾಲಕ್ಕೆ ಹೋದಂತೆ ಭಾಸವಾಯಿತು. ಕಾಲಾಪಾನಿ ಎಂದರೆ ಕಪ್ಪು ನೀರು ಅಲ್ಲ. ಅದು ಕಾಲ್ ಕಾ ಪಾನಿ, ಕಾಲಾ ಪಾನಿ. ಕಾಲ್ ಎಂದರೆ ಕಾಲ ಅಥವಾ ಮೃತ್ಯು. ಆ ಬಂಗಾಳ ಕೊಲ್ಲಿಯ ಸಮುದ್ರದ ನೀರು, ದಾಟುತ್ತಿರುವಾಗ ಆಗಿನ ಖೈದಿಗಳಿಗೆ ಮೃತ್ಯುವಿನ ನೀರಾಗಿ ಕಂಡದ್ದರಲ್ಲಿ ಸತ್ಯವಿದೆ. ಒಮ್ಮೆ ಆ ಸಮುದ್ರ ದಾಟಿ ಅಂಡಮಾನ್ ನ ಈ ಜೈಲು ಪ್ರವೇಶಿಸಿದವರು ಮತ್ತೆಂದೂ ತಮ್ಮ ತಾಯ್ನಾಡಿಗೆ ಮರಳುವುದು ಕನಸಲ್ಲೂ ಸಾಧ್ಯವಿರಲಿಲ್ಲ. ಜೈಲಿನ ಕಟ್ಟಡ ನಕ್ಷತ್ರ ಮೀನಿಗಿರುವಂತೆ ಮಧ್ಯದ ಗೋಪುರದ ಕಟ್ಟಡಕ್ಕೆ ಸುತ್ತಲೂ ಏಳು ರೆಕ್ಕೆಗಳಿದ್ದಂತೆ ಕಟ್ಟಲ್ಪಟ್ಟಿತ್ತು. ಕಾಲಕ್ರಮೇಣ ಕಟ್ಟಡಗಳು ಬಿದ್ದು ಹೋಗಿ ಮೂರು ರೆಕ್ಕೆಗಳು ಮಾತ್ರ ಉಳಿದಿವೆ. ಇಲ್ಲಿ ನಾನು ನಿಮಗೆ ಇಸವಿಗಳು, ಆ ವೈಸ್‌ರಾಯ್ ಗಳ ಹೆಸರುಗಳನ್ನೆಲ್ಲಾ ಹೇಳುತ್ತಾ ಕುಳಿತರೆ, ನಿಮಗೆ ಇತಿಹಾಸದ ತರಗತಿಯಲ್ಲಿ ಪಾಠ ಕೇಳುವಂತಾಗಿ ನಿದ್ದೆ ಬಂದೀತು. ಜೈಲಿನ ಒಂದು ರೆಕ್ಕೆಯ ಮುಂಭಾಗದಲ್ಲಿ ಇನ್ನೊಂದು ರೆಕ್ಕೆಯ ಹಿಂಭಾಗವಿದ್ದು ಪ್ರತಿ ರೆಕ್ಕೆ ಅಥವಾ ವಿಂಗ್, ಮೂರು ಮೂರು ಅಂತಸ್ತುಗಳನ್ನು ಹೊಂದಿವೆ. ಸಣ್ಣ ಸಣ್ಣ ಕೊಠಡಿಗಳಿಗೆ ಎತ್ತರದ ಸೂರು. ಹತ್ತು ಅಡಿಗಳಷ್ಟು ಎತ್ತರದಲ್ಲಿ ಗಾಳಿ ಬೆಳಕು ಒಳ ಬರಲು ಒಂದು ಸಣ್ಣ ಕಿಂಡಿ. ಹಾಗಾಗಿ ಒಬ್ಬರ ಸಂಪರ್ಕ ಇನ್ನೊಬ್ಬರಿಗಿರಲಿಲ್ಲ. ಕೊಠಡಿಯ ಚಿಲಕ, ಬೀಗಗಳು ಕೈಗೆ ಎಟುಕದಷ್ಟು ದೂರವಿದ್ದವು. ನಾವು ಹೋದಾಗ ರಿಪೇರಿ ಕಾರ್ಯ ನಡೆಯುತಿದ್ದು ಒಂದು ವಿಂಗ್ ನ್ನು ನೋಡಲು ಅನುಮತಿ ಇದ್ದಿತ್ತು. ವೀರ ಸಾವರ್ಕರ್ ಅವರನ್ನು ಆಗ ಮೂರನೆಯ ಅಂತಸ್ತಿನ ಕೊನೆಯ ಕೊಠಡಿಯಲ್ಲಿಟ್ಟಿದ್ದರು. ಅವರ ಜ್ಞಾಪಕಾರ್ಥ ಆ ಕೊಠಡಿಯೊಳಗೆ ಅವರ ಭಾವಚಿತ್ರವನ್ನು ಇಡಲಾಗಿದೆ. ವಿನಾಯಕ ಸಾವರ್ಕರ್ ಅವರ ಸಹೋದರನನ್ನೂ ಅದೇ ಜೈಲಿನಲ್ಲಿಟ್ಟರೂ ಎಂದೂ ಪರಸ್ಪರ ಭೇಟಿಯಾಗಿರಲಿಲ್ಲವಂತೆ. ಆಗಿನ ಉಗ್ರಾಣ, ಅಡುಗೆ ಕೋಣೆಗಳು, ಗಲ್ಲು ಶಿಕ್ಷೆಯ ಕೋಣೆ, ಮತ್ತು ಕಠಿಣ ಶಿಕ್ಷೆಗಳನ್ನು ಕೊಡುತಿದ್ದ ಜಾಗ ಎಲ್ಲವನ್ನೂ ನೋಡಿದೆವು. ಎತ್ತುಗಳಂತೆ ಗಾಣವನ್ನು ಸುತ್ತಿ ಕೊಬ್ಬರಿ ಮತ್ತು ಸಾಸಿವೆಯಿಂದ ಎಣ್ಣೆ ತೆಗೆಯಬೇಕಿತ್ತು. ಒಬ್ಬರಿಗೆ ದಿನಕ್ಕೆ ಇಂತಿಷ್ಟು ಎಣ್ಣೆ ಎಂದು ನಿಗದಿ ಮಾಡುತಿದ್ದರು. ಕೈ ಕಾಲುಗಳಿಗೆ ಸರಪಳಿಗಳನ್ನು ಕೋಳಗಳನ್ನು ಕಟ್ಟಿ ಇಡುತಿದ್ದರು. ಕಠಿಣ ಶಿಕ್ಷೆಯ ದೊರಗಾದ ಬಟ್ಟೆಯ ಉಡುಪನ್ನು ಧರಿಸಬೇಕಿತ್ತು. ಅದರಿಂದ ಅವರಿಗೆ ಭಯಂಕರ ಶೆಖೆ, ನವೆ, ಉರಿ, ತುರಿಕೆಗಳು ಶುರುವಾಗುತಿದ್ದವು. ಖೈದಿಗಳನ್ನು ಶಿಕ್ಷಿಸುತಿದ್ದ ಎಲ್ಲಾ ಕ್ರಮಗಳನ್ನು ಅಲ್ಲಿ ಪ್ರದರ್ಶನಕಿಟ್ಟಿದ್ದಾರೆ‌. ಮಧ್ಯದ ಗೋಪುರದ ಮೇಲ್ಭಾಗದಿಂದ ಕಾಣುವ ಸುಂದರ ಸಮುದ್ರದ ದೃಶ್ಯ ರಮಣೀಯ. ಜೈಲಿನ ಅಧಿಕಾರಿಗಳು, ಕಾವಲುಗಾರರು ಆ ಗೋಪುರದ ಮೇಲಿನಿಂದ ಎಲ್ಲಾ ಆಗುಹೋಗುಗಳನ್ನು ವೀಕ್ಷಿಸುತಿದ್ದರಂತೆ. ಸ್ವಾತಂತ್ರ್ಯಾ ನಂತರ ಈಗ ಆವರಣದೊಳಗೆ ಐನೂರು ಹಾಸಿಗೆಗಳ, ನಲವತ್ತು ವೈದ್ಯರಿರುವ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಶ್ರೀ ಗೋವಿಂದ ವಲ್ಲಭ ಪಂತ್ ಆಸ್ಪತ್ರೆ. ಎರಡು ಜ್ಯೋತಿಗಳು ಹುತಾತ್ಮರ ಸ್ಮರಣಾರ್ಥ ಹಗಲು ರಾತ್ರಿ ಬೆಳಗುತ್ತಲೇ ಇವೆ. ಅವುಗಳನ್ನು ಉರಿಸಲು ಪ್ರತಿ ತಿಂಗಳಿಗೆ ನಲವತ್ತೆಂಟು ಗ್ಯಾಸ್ ಸಿಲಿಂಡರ್ ಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್  ಉಚಿತವಾಗಿ ಪೂರೈಸುತ್ತಿದೆ. ಮದ್ಯಾಹ್ನ ಒಂದೂವರೆಯಿಂದ ಸಾಯಂಕಾಲ ಐದರವರೆಗೆ ಜೈಲಿನ ವೀಕ್ಷಣಾ ಸಮಯ. ಮತ್ತೆ ಸಂಜೆ ಆರರಿಂದ ಏಳೂವರೆಯ ವರೆಗೆ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವಿತ್ತು. ನಡುವಿನ ಒಂದು ಗಂಟೆಯ ಸಮಯವನ್ನು ಕಳೆಯಲು ನಮ್ಮನ್ನು ಕೊರ್ಬಿನ್ಸ್ ಬೀಚ್ ಗೆ ಕರೆದುಕೊಂಡು ಹೋದರು. ಪ್ರತಿಯೊಂದು ಕಡೆಯೂ ಟಿಕೇಟ್ ಗಳನ್ನು ಖರೀದಿಸುವುದು, ಸೀಟುಗಳನ್ನು ಕಾಯ್ದಿರಿಸುವುದೆಲ್ಲವನ್ನೂ ಅವರೇ ಮಾಡುತ್ತಾರೆ. ಹಾಗಾಗಿ ಯಾವ ಗಡಿಬಿಡಿಯೂ ನಮಗಿರಲಿಲ್ಲ. ಹಾಯಾಗಿ ಸಮುದ್ರವನ್ನು ನೋಡುತ್ತಾ ಕುಳಿತುಕೊಂಡೆವು. ಸರಿಯಾದ ಸಮಯಕ್ಕೆ ನಮ್ಮನ್ನು ಮತ್ತೆ ಜೈಲಿನ ಬಳಿ ಕೊಂಡೊಯ್ದು ವ್ಯವಸ್ಥಿತ ರೀತಿಯಲ್ಲಿ ನಮ್ಮನ್ನೆಲ್ಲಾ ಆಸನಗಳಲ್ಲಿ ಕೂರಿಸಲಾಯಿತು. ವಾರದಲ್ಲಿ ನಾಲ್ಕು ದಿನ ಈ ಪ್ರದರ್ಶನ ಹಿಂದಿ ಇಂಗ್ಲೀಷ್ ಎರಡೂ ಭಾಷೆಗಳಲ್ಲಿರುತ್ತದೆ. ಕಾರ್ಯಕ್ರಮ ಶುರುವಾಗುತಿದ್ದಂತೆ ಅಲ್ಲಿದ್ದ ಪುರಾತನ ಅರಳಿ ಮರ ಮಾತನಾಡಲು ತೊಡಗಿತು. ( ಮುಂದುವರೆಯುವುದು..) **************************** ಶೀಲಾ ಭಂಡಾರ್ಕರ್. ಗೃಹಿಣಿ, ಹಲವಾರು ಹವ್ಯಾಸಗಳಲ್ಲಿ ಬರವಣಿಗೆಯೂ ಒಂದು. ಅನೇಕ ಕವನಗಳು, ಲಲಿತ ಪ್ರಬಂಧಗಳು, ಪೌರಾಣಿಕ ಪಾತ್ರಗಳ ಸ್ವಗತಗಳನ್ನು ಬರೆದಿದ್ದು.ತಪ್ತ ಮೈಥಿಲಿ, ರಾಮಾಯಣದ ಊರ್ಮಿಳೆಯ ಪಾತ್ರದ ಕಥನವು ಎಚ್ಚೆಸ್ಕೆಯವರ ನೂರರ ಸಂಭ್ರಮದಲ್ಲಿ ಬಿಡುಗಡೆಯಾಗಿರುತ್ತದೆ.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಹಳೆಯ ಅಂಕಣ ಹೊಸ ಓದುಗರಿಗೆ

ಆರ್.ದಿಲೀಪ್ ಕುಮಾರ್ ಬರೆಯುತ್ತಾರೆ-
ಅಕ್ಕನ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ. ಕೆಲವು ಕಡೆ ಶ್ರೀ ಎಂದು, ಸಿರಿ ಎಂದು, ಶ್ರೀಶೈಲ ಎಂದು ಮಲ್ಲಿಕಾರ್ಜುನನೊಡನೆ ಸೇರಿಕೊಳ್ಳುತ್ತದೆ‌. ಬಸವ ಯುಗದ ವಚನ ಮಹಾಸಂಪುಟದಲ್ಲಿ ಇದಕ್ಕೆ‌ ಸಾಕ್ಷಿಗಳೂ ದೊರೆಯುತ್ತವೆ. ಅಕ್ಕನ ವಚನಗಳ ವಿಶೇಷತೆಯೇ ಮಾರ್ದವತೆ. ಆ ವಚನ ಹೀಗಿದೆ

ಹಳೆಯ ಅಂಕಣ ಹೊಸ ಓದುಗರಿಗೆ Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ನಮ್ಮೂರಿನಲ್ಲಿ ಜಟ್ಟಿ ಮಾಣಿ ಆಗೇರ ಎಂಬಾತ ಇಂಥ ಎಲ್ಲ ಕೆಲಸದಲ್ಲಿ ಕುಶಲ ಕರ್ಮಿಯಾಗಿದ್ದು ಹಲವು ಬಗೆಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಹಿರಿಯರಲ್ಲಿ ಬಹಳ ಮುಖ್ಯ ವ್ಯಕ್ತಿಯಾಗಿದ್ದ. ಈತ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವ ಕೆಲಸದಲ್ಲಿಯೂ ಅತ್ಯಂತ ನಿಪುಣನಾಗಿದ್ದರೂ ಅದೇಕೋ ಆಗರದ ಕೆಲಸದಲ್ಲಿ ಬಹಳಕಾಲ ನಿಲ್ಲಲಿಲ್ಲ

Read Post »

ಅಂಕಣ ಸಂಗಾತಿ, ಕಾಲಾ ಪಾನಿ, ನಿಮ್ಮೊಂದಿಗೆ

ಅಂಕಣ ಬರಹ

ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ

ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ

ಸರಣಿಬರಹ………..

ಅದ್ಯಾಯ—ಒಂದು

Read Post »

ಕಬ್ಬಿಗರ ಅಬ್ಬಿ, ಕಾವ್ಯಯಾನ

ಒಬ್ಬಂಟಿ…!

ಕವಿತೆ ಒಬ್ಬಂಟಿ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಅನಾಥಎಲ್ಲ ಒಬ್ಬೊಬ್ಬರೂ ಅಪ್ರತಿಮಅನಾಥತೆಯ ಒಬ್ಬಂಟಿ! ಇರುವವರೆಲ್ಲ ಒಂದಿನಿತು ಇದ್ದುಎದ್ದು ಎತ್ತೆತ್ತಲೋ ಸಾಗುವವರುಬರುವವರೆಲ್ಲ ಸಹ ಕ್ಷಣಕಾಲಬಂದು ಹಾಗೇ ಹೋಗುವವರು ಕೊನೆಗೆಮತ್ತೆ ಒಬ್ಬಂಟಿಮತ್ತೆ ಮತ್ತೆ ಅಂಥದೇ ಒಬ್ಬಂಟಿತನಆಜೀವಪರ್ಯಂತ…ಇದು ಬದುಕುಯಾರಿದ್ದರೇನುಎಲ್ಲರೂ ಕೂಡಿದಂತೆ ಇದ್ದರೇನುಎಲ್ಲರ ನಡುವೆಯೇತಾನಿದ್ದೂ ಇಲ್ಲದಂಥತುಂಬು ಒಬ್ಬಂಟಿತನಬಾಧಿಸುವ ಒಬ್ಬಂಟಿಯಾಗಿ…!ಅತೀ ದೊಡ್ಡ ಮನೆಯಕಂಬಗಳ ಸುತ್ತ ಬಳಸಿಬದುಕಿದ ಹಾಗೆ… ಬದುಕು ಕ್ರೂರ ಹಲವರಿಗೆಧನ್ಯವಾದ ಓ ಬದುಕೆಮತ್ತೆ ಮತ್ತೆ ನಿನಗೆನಿನ್ನ ಥಳಕು ನಾಟಕಕೆಧನ್ಯವಾದ ಓ ಬದುಕೇ…! ಎಲೆ ಯಾತನಾಮಯ ಬದುಕೆಇಷ್ಟೊಂದು ಯಾತನೆ ಏತಕೆಯಾತನೆ ಇಲ್ಲದ ಬದುಕಬದುಕಲೊಲ್ಲೆಯಾ ನೀ ಓ ಬದಕೆಅಥವ ಅಂಥ ಬೆಳಕಿನ ಬದುಕನೀಡಲೊಲ್ಲೆಯಾ ಒಮ್ಮೆ ನಮಗೆ…? ಹೌದುಇಷ್ಟೊಂದು ಯಾತನಾಸಮೂಹಗಳ ನಡುವೆಅಲ್ಲೊಂದು ಇಲ್ಲೊಂದುಸಂತಸದ ಬೆರಗು ಕ್ಷಣಗಳೂ ಇವೆಬೆರಳ ಸಂದುಗಳ ಮಧ್ಯೆಬ್ಯಾಟರಿ ಬೆಳಕು ಬಿಟ್ಟ ಹಾಗೆ…!ಆ ಬೆಳಕ ಕಸುವು ತಾನೆ ಎಷ್ಟುಮತ್ತದು ನಿಲುವ ಸಮಯವೆಷ್ಟುಎಲ್ಲದರ ಮೊತ್ತ ಕೂಡಿದರುಇಡೀ ಬದುಕೊಂದರ ದಾರಿಉದ್ದಗಲಕು ತೋರಬಲ್ಲುದೆ ಬೆಳಕುಆ ಬೆಳಕು ಹೊನಲಾಗುವಷ್ಟು…?ಕನಸಲಿ ಕಂಡಂಥ ಮಹಾಮಹಲು! ಬಂದಂತೆಮತ್ತೆ ಅದೇ ದಾರಿ ಹಿಡಿದುಹೋಗೇ ಹೋಗುವಂತೆಒಬ್ಬೊಬ್ಬರೂ ಒಬ್ಬಂಟಿಬದುಕುವುದೂ ಹಾಗೆ ಖಾತರಿಗೋರಿಯೊಳಗೆ ಮಲಗಿದಂತೆ…ಒಬ್ಬಂಟಿಎಲ್ಲರೂ ಎಲ್ಲ ಕಡೆಮತ್ತೆ ಮತ್ತೆ ಒಬ್ಬಂಟಿನಿಶ್ಚಿತವಾಗಿ…! ********

ಒಬ್ಬಂಟಿ…! Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಆರ್.ದಿಲೀಪ್ ಕುಮಾರ್
ವಚನ ವಿಶ್ಲೇಷಣೆ ಮಾಡುತ್ತಾ-
ಇಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ವ್ಯಕ್ತಿಗೆ ಪಾಯಸವನ್ನು ಕೊಡುವ ಚಿತ್ರಣವನ್ನು ಕೊಟ್ಟು ದೈವವೆನ್ನುವುದು, ಆತ್ಮಜ್ಞಾನವೆನ್ನುವುದು ಬಾಯಾರಿಗೆಯನ್ನು ತೊಡೆಯುವ ಪರಿಶುದ್ಧವಾದ ನೀರಿನ ಹಾಗೆ ಎಂದು ಸೂಚಿಸುತ್ತಾನೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-16 ಆತ್ಮಾನುಸಂಧಾನ ಗಂಗಾವಳಿಯಲ್ಲಿ ಮೂಲ್ಕಿ ಓದಿದ ದಿನಗಳು ನಮ್ಮ ಊರಿನಲ್ಲಿ ಪೂರ್ಣ ಪ್ರಾಥಮಿಕ ಶಾಲೆ ಇರಲಿಲ್ಲ. ಮುಂದಿನ ತರಗತಿಗಳಿಗಾಗಿ ಗಂಗಾವಳಿ ಭಾಗದ “ಜೋಗಣೆ ಗುಡ್ಡ” ಎಂಬಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಸೇರಬೇಕಾಯಿತು. ಹಾರು ಮಾಸ್ಕೇರಿ ಶಾಲೆಯ ಕುಪ್ಪಯ್ಯ ಗೌಡ, ಗಣಪತಿ ಗೌಡ ಮುಂತಾದವರೊಡನೆ ಮಾಸ್ಕೇರಿಯ ದೇವರಾಯ ಇತ್ಯಾದಿ ಗೆಳೆಯರೊಂದಿಗೆ ಗಂಗಾವಳಿಯ ಶಾಲೆಗೆ ಸೇರಿಕೊಂಡೆವು.             ಅಲ್ಲಿ ಗಾಬಿತ ಸಮಾಜದ ರಾಧಾಕೃಷ್ಣ ಎಂಬುವವರು ಬಹುಶಃ ಮುಖ್ಯಾಧ್ಯಾಪಕರಾಗಿದ್ದರು ಎಂದು ನೆನಪು. ತುಂಬ ಶಾಂತ ಸ್ವಭಾವದ ಅವರು ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಶಾಲೆಯಲ್ಲಿ ನಮ್ಮ ಸಹಪಾಠಿಗಳಾಗಿದ್ದ ಗೋವಿಂದ ನಾಯ್ಕ, ಗಣಪತಿ ನಾಯ್ಕ, ವಿಶ್ವನಾಥ ನಾಯಕ, ಶಾರದಾ ನಾಯಕ, ಸರಸ್ವತಿ ಗುನಗಾ, ಉಲ್ಕಾ ನಾರ್ವೇಕರ್ ಮುಂತಾದವರು ಆತ್ಮೀಯ ಸ್ನೇಹಿತರಾಗಿ ದೊರೆತರು.             ಮೂಲ್ಕಿ (ಏಳನೆಯ ತರಗತಿ) ಓದುವ ಹೊತ್ತಿಗೆ ನಮಗೆ ತರಗತಿಯ ಶಿಕ್ಷಕರಾಗಿ ಅಬ್ದುಲ್ ಮಾಸ್ತರ್ ಎಂಬ ಮುಸ್ಲಿಂ ಯುವ ಅಧ್ಯಾಪಕರು ದೊರೆತರು. ಇನ್ನೂ ಅವಿವಾಹಿತರಾಗಿದ್ದ ಅವರು ಆಟ ವಿನೋದಗಳಲ್ಲಿ ಮಕ್ಕಳೊಡನೆ ಮಕ್ಕಳಂತೆ ಬೆರೆತು ವ್ಯವಹರಿಸುತ್ತಿದ್ದರಾದರೂ ತರಗತಿಯ ಪಾಠದಲ್ಲಿ ಕಟ್ಟುನಿಟ್ಟಿನ ಶಿಸ್ತುಪಾಲನೆ ಮಾಡುತ್ತಿದ್ದರು. ಅವರ ತಂದೆಯವರು ಊರಿನ ಗಣ್ಯ ವ್ಯಕ್ತಿಗಳೆನ್ನಿಸಿ ಹೆಸರು ಮಾಡಿದ್ದರು. ಬಹುಶಃ ಶಿಕ್ಷಕ ವೃತ್ತಿಯನ್ನೇ ಪೂರೈಸಿ ನಿವೃತ್ತಿ ಹೊಂದಿದವರಾಗಿರಬೇಕು. ಸಾಮಾನ್ಯವಾಗಿ ಊರಿನ ಎಲ್ಲರೂ ಮಾಸ್ತರ ಸಾಹೇಬರು ಎಂದೇ ಕರೆಯುವ ವಾಡಿಕೆ ಇತ್ತು. ಹೀಗಾಗಿ ಅವರ ನಿಜವಾದ ಹೆಸರು ಏನೆಂಬುದು ನಮಗೆ ತಿಳಿಯಲೇ ಇಲ್ಲ. ಮಾಸ್ತರ ಸಾಹೇಬರು ಊರಿನ ಮಸೀದಿಯ ಮೇಲ್ವಿಚಾರಣೆಗೆ ನೋಡಿಕೊಂಡು ಮಂತ್ರ ತಂತ್ರಗಳಿಗೂ ಖ್ಯಾತರಾಗಿದ್ದರು. ಭೂತ ಪಿಶಾಚಿ ಕಾಟದಿಂದ ಬಳಲುವವರಿಗೆ ಮಂತ್ರಿಸಿದ ಅಕ್ಷತೆ ಮತ್ತು ವಿಭೂತಿಯನ್ನು ನೀಡಿ ಗುಣಪಡಿಸುತ್ತಿದ್ದರು. ನಾಗರ ಹಾವುಗಳಿಗೆ ತಡೆ ಹಾಕುವುದರಲ್ಲಿಯೂ ಪರಿಣಿತರಾಗಿದ್ದರು. ನಾಗರ ಹಾವುಗಳಿಗೆ ಗಾಯ ಮಾಡಿದವರು, ನಾಗ ದೋಷಕ್ಕೆ ಗುರಿಯಾದವರು ಮಾಸ್ತರ ಸಾಹೇಬರ ಬಳಿಗೆ ಬಂದು ಅಕ್ಷತೆ ಪಡೆದು ತಡೆ ಹಾಕಿಸಿ ಪರಿಹಾರ ಕಾಣುತ್ತಿದ್ದರು. ಊರಿನಲ್ಲಿ ಮಾತ್ರವಲ್ಲದೆ ನೆರೆಯ ಅಂಕೋಲಾ, ಕುಮಟಾ, ಹೊನ್ನಾವರ ಇತ್ಯಾದಿ ಜಿಲ್ಲೆಯ ಬೇರೆ ಕಡೆಯಿಂದ ಜನರು ಇವರ ಬಳಿಗೆ ಬರುತ್ತಿದ್ದರಲ್ಲದೇ ಬೇರೆ ಬೇರೆ ಊರುಗಳಿಗೂ ಸಾಹೇಬರನ್ನು ಕರೆಸಿಕೊಳ್ಳುತ್ತಿದ್ದರು. ಇದರಿಂದಾಗಿ ಮಾಸ್ತರ ಸಾಹೇಬರ ಕುರಿತು ಆಗಲೇ ಎಳೆಯರಾಗಿರುವ ನಮ್ಮ ಮನಸ್ಸಿನಲ್ಲಿಯೂ ಗೌರವದ ಭಾವನೆ ಇತ್ತು. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಧರ್ಮಿಯರಿಗೂ ಅವರು ಪ್ರಿಯರಾಗಿದ್ದರು. ಅಬ್ದುಲ್ ಮಾಸ್ತರರು ಇಂಥವರ ಮಗನೆಂಬುದಕ್ಕಾಗಿ ಅವರ ಒಡನಾಟಕ್ಕೆ ಮುನ್ನವೇ ನಮ್ಮೆಲ್ಲರ ಪ್ರೀತಿಗೆ ಪಾತ್ರರಾದುದು ಸಹಜವೇ ಆಗಿತ್ತು.             ಅಬ್ದುಲ್ ಮಾಸ್ತರರು ನಮ್ಮ ವರ್ಗಶಿಕ್ಷಕರಾಗಿ ದೊರೆತಮೇಲೆ ಅವರ ಪಾಠದ ಶಿಸ್ತು, ಆಟದ ಅಕ್ಕರೆ ಇತ್ಯಾದಿಗಳು ಪರಿಚಯವಾಗುತ್ತ ಅವರ ವ್ಯಕ್ತಿತ್ವವು ಅಸಾಧಾರಣವೆಂಬುದು ನಮ್ಮ ಅರಿವಿಗೆ ಬರುತ್ತ ಬಹುಶಃ ನಮ್ಮೆಲ್ಲರ ಬದುಕಿನಲ್ಲಿ ಮರೆಯಲಾಗದ ಅವಿಸ್ಮರಣೀಯ ವ್ಯಕ್ತಿಯಾಗಿಯೇ ಸೃತಿಪಟಲದಲ್ಲಿ ನೆಲೆಗೊಂಡಿದ್ದಾರೆ.             ಹಗಲಿನ ತರಗತಿಯ ಪಾಠವಲ್ಲದೆ “ರಾತ್ರಿ ಶಾಲೆ”ಯ ಪದ್ಧತಿಯನ್ನು ಅವರು ಆರಂಭಿಸಿದ್ದರು. ಅಂದಿನ ದಿನಗಳಲ್ಲಿ ಶಾಲೆಯ ಬಹುತೇಕ ಮಕ್ಕಳು ತೀರ ಬಡ ಕುಟುಂಬದಿಂದ ಬರುತ್ತಿದ್ದರು. ಯಾರ ಮನೆಯಲ್ಲೂ ವಿದ್ಯುತ್ ಸಂಪರ್ಕವಾಗಲೀ ರಾತ್ರಿ ಓದಿಗೆ ಸಮರ್ಪಕ ಬೆಳಕಿನ ವ್ಯವಸ್ಥೆಯಾಗಲೀ ಇರಲಿಲ್ಲ. ಇದನ್ನು ಗೃಹಿಸಿದ ಅಬ್ದುಲ್ ಮಾಸ್ತರರು ಮೂಲ್ಕಿ ಪರೀಕ್ಷೆಗೆ ಕೂಡ್ರುವ ಎಲ್ಲ ಮಕ್ಕಳಿಗಾಗಿ ಶಾಲೆಯಲ್ಲಿಯೇ ಸಾಮೂಹಿಕ ಓದಿನ ಅನುಕೂಲ ಕಲ್ಪಿಸಿ ಬೆಳಕಿನ ವ್ಯವಸ್ಥೆ ಮಾಡಿದ್ದರು. ಸರಿರಾತ್ರಿಯ ಹೊತ್ತಿಗೆ ನಮ್ಮ ನಮ್ಮ ಪಾಲಕರು ಬಂದು ನಮ್ಮನ್ನು ಮನೆಗೆ ಕರೆದೊಯ್ದು ಸಹಕಾರ ನೀಡುತ್ತಿದ್ದರು.                     ಮೂಲ್ಕಿ ಪರೀಕ್ಷೆ ನಡೆಯುವ ಗೋಕರ್ಣಕಡೆಯ ಪರೀಕ್ಷೆ ಕೇಂದ್ರಕ್ಕೆ ನಮ್ಮನ್ನು ಕರೆದೊಯ್ಯುವವರೆಗಿನ ಕಾಳಜಿಯನ್ನು ತೋರಿದ ಅಬ್ದುಲ್ ಮಾಸ್ತರರ ಕರ್ತವ್ಯ ದಕ್ಷತೆ ಎಲ್ಲ ಮಕ್ಕಳ ಮನಸ್ಸನ್ನು ಗೆದ್ದುಕೊಂಡಿತ್ತು. ನಮ್ಮ ಪರೀಕ್ಷೆಯ ಸಮಯದಲ್ಲಿಯೇ ನಡೆಯಬೇಕಿದ್ದ ತಮ್ಮ ವಿವಾಹ ಸಮಾರಂಭವನ್ನೇ ಮುಂದೆ ಹಾಕಿದ ಮಾಸ್ತರರು ನಮ್ಮ ಪರೀಕ್ಷೆಗಳು ಮುಗಿದ ಮರುದಿನ ಎಲ್ಲ ವಿದ್ಯಾರ್ಥಿಗಳನ್ನು ಮದುವೆಗೆ ಆಮಂತ್ರಿಸಿ ಮದುವೆ ಮಾಡಿಕೊಂಡದ್ದು ಇನ್ನೊಂದು ವಿಶೇಷವೇ ಆಗಿದೆ!             ಗಂಗಾವಳಿ ಶಾಲೆಯ ಅಂದಿನ ದಿನಗಳು ನಮಗೆ ಅತ್ಯಂತ ಪ್ರೀತಿಯ ದಿನಗಳಾಗಿದುದ್ದಕ್ಕೆ ಮತ್ತೊಂದು ಪ್ರಬಲ ಕಾರಣವಿದೆ. ಅದು ಶಾಲೆಯಲ್ಲಿ ದೊರೆಯುವ ಉಪ್ಪಿಟ್ಟು-ಹಾಲು!             ಭಾರತದ ಬಡತನವನ್ನು ಗೃಹಿಸಿದ ಅಮೇರಿಕೆಯ ಸಂಸ್ಥೆಯೊಂದು ಶಾಲಾ ಮಕ್ಕಳಿಗಾಗಿ ಗೋವಿನ ಜೋಳದ ರವೆ ಮತ್ತು ಹಾಲಿನ ಪೌಡರ್ ಪಾಕೇಟ್‌ಗಳನ್ನು ಉಚಿತವಾಗಿ ಪೂರೈಸಿ ಮಕ್ಕಳಿಗೆ ಮಧ್ಯಾಹ್ನದ ಹೊತ್ತು ಉಪ್ಪಿಟ್ಟು-ಹಾಲು ಸೇವಿಸುವ ಅವಕಾಶ ಕಲ್ಪಿಸಿತ್ತು. ಈ ಸೌಲಭ್ಯವು ನಮ್ಮ ಗಂಗಾವಳಿಯ ಶಾಲೆಗೂ ದೊರೆತಿತ್ತು. ಅಂದು ಅಲ್ಲಿ ಓದುವ ಬಹುತೇಕ ಮಕ್ಕಳು ಬಡ ರೈತರ, ಕೂಲಿ ಕಾರ್ಮಿಕರ ಕುಟುಂಬದಿಂದಲೇ ಬಂದವರಾದುದರಿಂದ ಎಲ್ಲರಿಗೂ ಇದು ಅರ್ಧ ಹಸಿವು ಹಿಂಗಿಸಿಕೊಳ್ಳುವ ಸದವಕಾಶವೇ ಎನಿಸಿತ್ತು.!             ಉಪ್ಪಿಟ್ಟು – ಹಾಲು ಸಿದ್ಧ ಪಡಿಸುವುದಕ್ಕಾಗಿ ಪ್ರತಿದಿನವೂ ಮೈದಿನ್ ಸಾಬ್ ಎಂಬ ಮುಸ್ಲಿಂ ಗ್ರಹಸ್ಥರೊಬ್ಬರು ಬರುತ್ತಿದ್ದರು. ಶಿಕ್ಷಕರ ಅನುಮತಿಯಿಂದಲೇ ನಾಲ್ಕು ಜನ ವಿದ್ಯಾರ್ಥಿಗಳು ಪಾಳಿಯ ಪ್ರಕಾರ ಮೈದಿನ್ ಸಾಬರಿಗೆ ನೆರವಿಗೆ ನಿಲ್ಲುತ್ತಿದ್ದರು. ಹೀಗೆ ಸಹಕರಿಸುವ ನಾಲ್ವರಿಗೆ ಉಪ್ಪಿಟ್ಟಿನ ಒಂದು ವಿಶೇಷ ಹೆಚ್ಚುವರಿ ಪಾಲು ಲಭಿಸುತ್ತಿತ್ತು. ಆದರೆ ಈ ಹೆಚ್ಚುವರಿ ಪಾಲಿನ ಆಸೆಯಿಂದ ಈ ಕೆಲಸಕ್ಕೆ ತಾ ಮುಂದೆ ನಾ ಮುಂದೆ ಎಂದು ಪೈಪೋಟಿ ನಡೆಸುವ ನಮ್ಮ ಸ್ನೇಹಿತರು ಹೇಗೆ ಮೇಲಾಟ ನಡೆಸುತ್ತಿದ್ದರು ಎಂಬುದನ್ನು ಇಂದು ನೆನೆಯುವಾಗ ನಗುವೇ ಬರುತ್ತದೆ. ಆದರೆ ಅಂದಿನ ಆ ದಿನಗಳ ಹಸಿವಿನ ತೀವೃತೆಯ ಕುರಿತು ವಿಷಾದವೂ ಎನಿಸುತ್ತದೆ.             ಗಂಗಾವಳಿ ಶಾಲೆಯ ಓದಿನ ದಿನಗಳು ನಮ್ಮೆಲ್ಲರ ಮನಸ್ಸಿನ ಪುಟಗಳಲ್ಲಿ ಅವಿಸ್ಮರಣೀಯವಾಗಿರುವುದಕ್ಕೆ ಅಲ್ಲಿನ ಶಿಕ್ಷಕರು, ಸಹಪಾಠಿಗಳು, ಕಾರಣರಾಗಿದ್ದಾರೆ. ಅಂದು ಪರೀಕ್ಷೆ ಮುಗಿಸಿ ಶಾಲೆಯಿಂದ ನಿರ್ಗಮಿಸುವ ದಿನ ಅಪಾರವಾದ ನೋವು ನಮ್ಮೆಲ್ಲರ ಎದೆ ತುಂಬಿತ್ತು. ಇದಕ್ಕಿಂತ ಮುನ್ನ ಮತ್ತು ನಂತರವೂ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮತ್ತು ಓದು ಮುಗಿಸಿ ನಿರ್ಗಮಿಸುವ ಸನ್ನಿವೇಶಗಳು ಎದುರಾಗಿವೆ. ಆದರೆ ಗಂಗಾವಳಿಯ ಹಿರಿಯ ಪ್ರಾಥಮಿಕ ಶಾಲೆಯ ಅಗಲುವಿಕೆಯಲ್ಲಿ ಉಂಟಾದ ನೋವಿನ ಅನುಭವ ಮತ್ತೆಂದೂ ನಮ್ಮನ್ನು ಬಾಧಿಸಲಿಲ್ಲ ****************************************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಇನ್ನೊಂದು ‘ಹಕ್ಕಿ-ಕಂಬಳ’. ನಮ್ಮೂರಿನ ಗದ್ದೆ ಬಯಲಿನಲ್ಲಿರುವ ಕೆರೆದಂಡೆ, ಹಳ್ಳದ ದಂಡೆಗಳ ಮೇಲೆ ಬೆಳೆದು ನಿಂತ ಮುಳ್ಳು ಪೊದೆಗಳಲ್ಲಿ, ಕೇದಗೆ ಹಿಂಡುಗಳಲ್ಲಿ ‘ಹುಂಡು ಕೋಳಿ’ ಎಂಬ ಹಕ್ಕಿಗಳ ಗುಂಪು ಸದಾ ನೆಲೆಸಿರುತ್ತಿದ್ದವು.

Read Post »

You cannot copy content of this page

Scroll to Top