ವಚನಚಳುವಳಿಗೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಸ್ಥಾನವಿದೆ. ವಚನಗಳಲ್ಲಿ ಆಡಿದ, ಸಾರಿದ, ಸಾಧಿಸಿ ತೋರಿಸಿದ ಮೌಲ್ಯಗಳು ಕೇವಲ ಘೋಷಣೆಗಳಾಗದೆ ನಡೆ ನುಡಿಯಲ್ಲಿ ಒಂದಾಗಿ ಏಕವನ್ನು ಸ್ಥಾಪಿಸಿದ ಕಾರಣದಿಂದ ವಚನಕಾರರು ಈ ನೆಲದಲ್ಲಿ ಮಾನ್ಯ ಮತ್ತು ಮುಖ್ಯರಾಗುತ್ತಾರೆ.
ಅಂಕಣ ಬರಹ ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ ಹಂಸಪತಿ ಗರುಡಪತಿ ವೃಷಭಪತಿ ರ‍್ವಜೀವಾಧಿಪತಿ ದೇವರಾಯ ಮಹಾರಾಯನ ಅರಸುತನ ಹೊಸತು ಓಲಗಕ್ಕೆ ಬಾರ; ಸಿಂಹಾಸನದಲ್ಲಿ ಕುಳ್ಳಿರ; ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ; ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ. ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು. ತರೆದ ಬಾಗಿಲ ಮುಚ್ಚುವರಿಲ್ಲ; ಮುಚ್ಚಿದ ಬಾಗಿಲ ತೆರೆವರಿಲ್ಲ; ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು ಭಕ್ತರೆಂಬುವವರಿನ್ನು ಬದುಕಲೆಬಾರದು ೧ ಅಗ್ಘವಣಿಯ ಹಂಪಯ್ಯ ವಚನ ಚಳುವಳಿಯ ಕೊನೆಯ ಹಂತದಲ್ಲಿ ಬಂದವನು. ವಿಜಯನಗರದ ದೇವರಾಯ (ಕ್ರಿ.ಶ. ೧೨೮೬-೧೩೨೮) ನೆಂಬ ಅರಸನ ಕಾಲದಲ್ಲಿ ಇದ್ದವನೆಂದು, ರಾಘವಾಂಕ ಕವಿಯು ತನ್ನ ಹರಿಶ್ಚಂದ್ರ ಚಾರಿತ್ರ‍್ಯವನ್ನು ಈ ರಾಜನ ಆಸ್ಥಾನದಲ್ಲಿ ಓದಿದ್ದೆಂದೂ ತಿಳಿದುಬರುತ್ತದೆ ಎಂದು ಡಿ. ಎಲ್. ನರಸಿಂಹಾಚರ‍್ಯರು ಹೇಳಿದ್ದಾರೆ.೨ ಪ್ರಕೃತ ವಚನಕ್ಕೆ ಪಾಠಾಂತರವೂ ಇದ್ದು ಡಿ ಎಲ್ ಎನ್ ಶಕಟರೇಫೆಯನ್ನು ಎರಡು ಕಡೆ ಬಳಸಿದ್ದರೆ, ಎಂ. ಎಂ. ಕಲಬರ‍್ಗಿಯವರು ಸಾಮಾನ್ಯರಿಗಾಗಿ ಸಂಪಾದನೆ ಮಾಡುತ್ತಿರುವ ಕಾರಣದಿಂದ ರೇಫೆಯನ್ನು ಉಳಿಸಿಕೊಂಡು, ಶಕಟರೇಫೆಯನ್ನು ತೆಗೆದು ಹಾಕಲಾಗಿದೆ ಎಂದು ಸಂಪಾದಕೀಯದಲ್ಲಿ ಹೇಳಿದ್ದಾರೆ. ಜನಪ್ರಿಯ ಪ್ರತಿಯದನ್ನೇ ಈ ಲೇಖನಕ್ಕೆ ಬಳಸಿಕೊಳ್ಳಲಾಗಿದೆ. ಕುಂತಳದೇಶದಲ್ಲಿನ ಶಿವಭಕ್ತನಾದ ಹಂಪಯ್ಯನು, ಹದಿನಾರು ದಿಕ್ಕಿಗೂ ಹೋಗಿ ಪತ್ರಪುಷ್ಪಗಳನ್ನು ತಂದು ಶಿವನಿರ‍್ಪಿಸುವ ನಿಯಮವನ್ನು ಪಾಲಿಸುತ್ತಿದ್ದ. ಅದಲ್ಲದೆ ಶೀಲವಂತರಿಗೆ ಚಿಲುಮೆಯ ಅಗ್ಘವಣಿಯನ್ನು ತಂದುಕೊಡುವ ಕಾಯಕವನ್ನು ನಡೆಸುತ್ತಿದ್ದನೆಂದು ಇವನ ಶಿವಭಕ್ತಿಯ ಬಗೆಗೆ ಶಾಂತಲಿಂಗ ದೇಶಿಕನು ತನ್ನ ಭೈರವೇಶ್ವರ ಕಥಾಸೂತ್ರ ರತ್ನಾಕರ ಕೃತಿಯಲ್ಲಿ ತಿಳಿಸಿದ್ದಾನೆ.೩ ಅಗ್ಘವಣಿ ಹಂಪಯ್ಯನ ವಚನಗಳ ಅಂಕಿತ ‘ಹಂಪೆಯ ವಿರುಪಯ್ಯ’ ನೆಂದು ಎಲ್ಲ ವಿದ್ವಾಂಸರೂ ಹೇಳಿದ್ದಾರೆ. ಅವನ ನಾಲ್ಕು ವಚನಗಳು ಇದುವರೆವಿಗೂ ದೊರೆತಿವೆ.೪ ಡಾ. ಆರ್. ಚಲಪತಿಯವರು ‘ಪಂಚಾಕ್ಷರಿ, ಗುರು ಪಂಚಾಕ್ಷರಿ’ ಎಂಬೆರಡು ಹೊಸ ಅಂಕಿತಗಳನ್ನೂ ತಮ್ಮ ಕೃತಿಯಲ್ಲಿ ಅಗ್ಘವಣಿಯ ಹಂಪಯ್ಯನದೆಂದು ಸೂಚಿಸಿದ್ದಾರೆ.೫ ಶಿವಶರಣರ ವಚನ ಚಳುವಳಿಯಿಂದ ಗಾಢವಾಗಿ ಪ್ರಭಾವಿತನಾಗಿದ್ದ ಅಗ್ಘವಣಿಯ ಹಂಪಯ್ಯ, ಕಲ್ಯಾಣಕ್ರಾಂತಿಯ ನಂತರ ಪಲ್ಲಟವಾದ ಒಟ್ಟೂ ಚಳುವಳಿಯ ಉದ್ದೇಶ, ಅಧೋಗತಿಗೆ ಇಳಿದ ಸಾಮಾಜದ ಸ್ಥಿತಿಗತಿ ಮತ್ತು ರಾಜಪ್ರಭುತ್ವದ ನಡೆ ನುಡಿಗಳನ್ನು ತನ್ನ ವಚನದಲ್ಲಿ ಖೇದ, ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹೊರಹಾಕಿದ್ದಾನೆ. ಅಗ್ಘವಣಿಯ ಹಂಪಯ್ಯನ ವಚನದ ‘ದೇವರಾಯ ಮಹಾರಾಯನ ಅರಸುತನ ಹೊಸತು’ ಸಾಲಿನ ಓದಿನಿಂದ ಅವನ ಕಾಲದ ಬಗೆಗೆ ಕೆಲವು ಅನುಮಾನಗಳು ಮೂಡುತ್ತವೆ. ಡಿ. ಎಲ್. ನರಸಿಂಹಾಚರ‍್ಯರು ವಚನಕಾರರ ನಂತರದವನು ಎಂದೂ, ಅವನ ಕಾಲವನ್ನು ಕ್ರಿಶ ೧೩೦೦ ಎಂದು ಹೇಳಿದ್ದಾರೆ.೬ ಕವಿಚರಿತಾಕಾರರು ಮತ್ತು ಇತರರು ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.೭ ಹಂಪಯ್ಯ ತನ್ನ ವಚನದಲ್ಲಿ ನೇರವಾಗಿ ಸಂಬೋಧಿಸುವ ‘ದೇವರಾಯ’ ಕರ್ನಾಟಕವನ್ನಾಳಿದ ಪ್ರಖ್ಯಾತ ರಾಜಮನೆತನವಾದ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಳಿದ ನಾಲಕ್ಕು ವಂಶಗಳಾದ ಸಂಗಮ, ಸಾಳುವ, ತುಳುವ ಮತ್ತು ಅರವೀಡು ವಂಶಗಳಲ್ಲಿನ ಮೊದಲನೆಯ ವಂಶವಾದ ಸಂಗಮ ವಂಶದ ದೊರೆ ೧ ನೇ ದೇವರಾಯ. ಸಂಗಮ ವಂಶದಲ್ಲಿಯೂ ಇಬ್ಬರು ದೇವರಾಯರ ಎಂಬ ಹೆಸರಿನ ರಾಜರು ಬೇರೆ ಬೇರೆ ಕಾಲಘಟ್ಟದಲ್ಲಿ ಆಳ್ವಿಕೆ ಮಾಡಿದ್ದಾರೆ. ೧ ನೇ ದೇವರಾಯ ಸಾ.ಶ ೧೪೦೬ – ೧೪೧೨-೧೩ ವರೆವಿಗೂ, ೨ ನೇ ದೇವರಾಯ ಸಾ.ಶ ೧೪೧೪ ರಿಂದ ೧೪೪೪ ರ ವರೆವಿಗೂ ವಿಜಯನಗರವನ್ನು ಆಳ್ವಿಕೆಯನ್ನು ಮಾಡಿದ್ದಾರೆ.೮ ದೇಸಾಯಿ ಪಾಂಡುರಂಗರಾಯರು ಇದೇ ಶತಮಾನದಲ್ಲಿಯೇ ದೇವರಾಯನ ಕಾಲವನ್ನು ತಿಳಿಸಿದರೂ ಸ್ವಲ್ಪ ಭಿನ್ನವಾದ ಕಾಲವನ್ನು ಕೊಟ್ಟಿದ್ದಾರೆ.೯ ೧ ನೇ ದೇವರಾಯನು ಸಿಂಹಾಸನಾರೂಢನಾದ ಕಾಲವನ್ನು ಸಾ.ಶ ೧೪೦೬ ಎಂದು ಕೊಟ್ಟಿದ್ದಾರೆ.೧೦ ಅಗ್ಘವಣಿಯ ಹಂಪಯ್ಯನ ವಚನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತು ವಿಜಯನಗರದ ಅರಸರ ಇತಿಹಾಸವನ್ನು ಅವಲೋಕಿಸಿದರೆ, ಹಂಪಯ್ಯನು ೧ ನೇ ದೇವರಾಯನ ಆಸ್ಥಾನವನ್ನು ನೋಡಿರುವ, ಅವನ ಆಡಳಿತದಿಂದ ಬೇಸರವಾಗಿರು ಸಾಧ್ಯತೆಯೇ ಹೆಚ್ಚೆನಿಸುತ್ತದೆ. ಕವಿಚರಿತಾಕಾರರರು ಮಿ. ರ‍್ಬೌ ರವರು ಹೇಳುವ ದೇವರಾಯ ಇವನೇ ಆಗಿದ್ದಲ್ಲಿ ಇವನ ಕಾಲ ಸಾ.ಶ ೧೨೮೬-೧೩೨೮ ಆಗುತ್ತದೆ ಎಂದು ಕಾಲವನ್ನು ಆವರಣ ಚಿಹ್ನೆಯಲ್ಲಿ ಸೂಚಿಸಿದ್ದಾರೆ ಮತ್ತು ಡಿ ಎಲ್ ನರಸಿಂಗಾಚರ‍್ಯರೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.೧೧ ಅದರಂತೆ ಮತ್ತಿನ್ನೊಂದು ದಾರಿಯಲ್ಲಿ ಅವಲೋಕಿಸುವುದಾದರೆ, ವಚನದಲ್ಲಿ ಬರುವ ‘ದೇವರಾಯ’ಎಂಬ ಪದವು ಸಾಂಕೇತಿಕವಾಗಿ ಪುರಾಣಪ್ರತೀಕವಾಗಿ ಬಳಕೆಯಾಗಿದ್ದು ಎಂದಿಟ್ಟುಕೊಂಡರೆ ದೇವತೆಗಳ ರಾಜನಾದ ‘ಇಂದ್ರ’ನ ಬಗೆಗಿನ ರ‍್ಥವನ್ನೂ ಧ್ವನಿಸುತ್ತದೆ. ಆದರೆ ಎರಡನೆಯದನ್ನ ಒಪ್ಪುವುದು ಕಷ್ಟ ಮತ್ತು ವಾಸ್ತವವಾಗಿ ಬದುಕಿದ ವಚನಕಾರರಿಗೆ ಮಾಡಿದ ದ್ರೋಹವಾಗುವ ಸಾಧ್ಯತೆ ಇರುವುದರಿಂದ ಮೊದಲನೆಯದನ್ನೇ ಒಪ್ಪಬಹುದು. ರಾಜರ ಎದುರಿಗೇ ಅವರ ಮತ್ತವರ ಪ್ರಭುತ್ವದ ಸಮಸ್ಯೆಗಳನ್ನು ಎತ್ತಿ ಮಾತನಾಡಿರುವುದಕ್ಕೆ ವಚನಕಾರರಲ್ಲಿ ಬಹಳಷ್ಟು ಸಾಕ್ಷಿಗಳು ದೊರೆಯುತ್ತವೆ. ಬಸವಾದಿ ಪ್ರಮಥರ ಪ್ರಭಾವದಿಂದ ಕೇವಲ ಪುರಾಣಪ್ರತೀಕವಾಗಿ ಮೇಲಿನ ‘ದೇವರಾಯ’ ಎಂಬುದನ್ನು ಅಗ್ಘವಣಿಯ ಹಂಪಯ್ಯ ಬಳಸಿರಲಾರನು. ಹಂಪಯ್ಯನ ಕಾಲದ ಬಗೆಗೆ ನಿಖರ ಮಾಹಿತಿ ನೀಡದಿದ್ದರೂ ಕವಿಚರಿತಾಕಾರರು ಮತ್ತು ಡಿ ಎಲ್ ನರಸಿಂಹಾಚರ‍್ಯರು ಊಹಿಸಿರುವ ‘ದೇವರಾಯನ ಕಾಲದವನು’ ಎನ್ನುವ ಮಾತನ್ನು ಹಾಗೂ ಸದ್ಯ ವಚನವೇ ಸ್ಪುರಿಸುವ ‘ದೇವರಾಯ ಮಹಾರಾಯನ ಆಸ್ಥಾನ ಹೊಸತು’ ಎನ್ನುವ ಸಾಲಿನ ‘ಆಸ್ಥಾನ ಹೊಸತು’ ಎನ್ನುವ ಪದದ ಮೂಲಕ ೧ ನೇ ದೇವರಾಯನ ಆರಂಭಿಕ ಕಾಲವನ್ನು ಸ್ಪಷ್ಟವಾಗಿ ಈ ವಚನ ಸೂಚಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಮತ್ತು ಪಠ್ಯದ ಬಹುಮುಖ್ಯ ಪದಗಳ ಆಧಾರದ ಮೇಲೆ ಅಗ್ಘವಣಿಯ ಹಂಪಯ್ಯನು ವಿಜಯನಗರ ಸಾಮ್ರಾಜ್ಯವನ್ನು ಆಳಿದ ಸಂಗಮ ವಂಶದ ದೊರೆ ೧ ನೇ ದೇವರಾಯನ ಕಾಲದಲ್ಲಿ ಅಂದರೆ ಸಾ.ಶ ೧೪೦೬ – ೧೪೧೨-೧೩ ರಲ್ಲಿ ಇದ್ದನೆಂದು ಹೇಳಬಹುದು. ಇವನು ೧ ನೇ ದೇವರಾಯನ ನೈತ್ತಿಕ ಅಧಃಪತನವನ್ನು ಗಮನಿಸಿದ್ದನೆಂದು ವಚನದಲ್ಲಿನ ‘ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ’ ‘ತರೆದ ಬಾಗಿಲ ಮುಚ್ಚುವರಿಲ್ಲ; ಮುಚ್ಚಿದ ಬಾಗಿಲ ತೆರೆವರಿಲ್ಲ’ ಸಾಲುಗಳಿಂದ ತಿಳಿದು ಬರುತ್ತದೆ. ಇದೇ ವಿಷಯವನ್ನೂ ಇತಿಹಾಸಕಾರ ರಾಬರ್ಟ್ ಸಿವಿಲ್ಲರು ಫರಿಸ್ತಾ ಹೇಳಿದನೆಂದು ತಮ್ಮ ಕೃತಿಯಲ್ಲಿ ರಾಯನು ಹೆಣ್ಣಿಗಾಗಿ ಇಳಿದ ಅಧಃಪತನವನ್ನು ಕುರಿತು ಪ್ರಸ್ತಾಪಮಾಡಿದ್ದಾರೆ.೧೨ ಮೇಲಿನ ಅಭಿಪ್ರಾಯವನ್ನು ಭಾರತೀಯ ಇತಿಹಾಸಕಾರರಾದ ನೀಲಕಂಠ ಶಾಸ್ತ್ರಿಗಳೂ ದಾಖಲಿಸಿದ್ದಾರೆ.೧೩ ರಾಬರ್ಟ್ ಸಿವಿಲ್ಲರು ಫೆರಿಸ್ತಾ ಬರೆದಿರುವುದನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿರುವಂತೆ ರಾಯನು ಹುಡುಗಿಯನ್ನು ಪಡೆಯಲೋಸುಗ ನಡೆಸಿದ ಹುಚ್ಚುತನದ ಯಾತ್ರೆಯಲ್ಲಿ ಸಿಕ್ಕಿಹಾಕೊಕೊಂಡ ‘ರೈತ’ ಮನೆತದ ಹುಡುಗಿಯೆಂದು ಹೇಳಿದ್ದರೆ, ನೀಲಕಂಠ ಶಾಸ್ತ್ರಿಗಳು ‘ಚಿನ್ನಗೆಲಸ ಮಾಡುವ ಅಕ್ಕಸಾಲಿಗ’ ನ ಮಗಳೆಂದು ಹೇಳಿದ್ದಾರೆ. ಉಳಿದ ಅಭಿಪ್ರಾಯಗಳಲ್ಲಿ ಸಮಾನತೆಯಿದೆ. ನೈತ್ತಿಕತೆಯನ್ನೇ ಬುನಾದಿಯಾಗಿಟ್ಟು ಸಮಾಜವನ್ನ ಕಟ್ಟುವ ಕರ‍್ಯ ನರ‍್ವಹಿಸಿದ ವಚನಕಾರರ ಮರ‍್ಗವನ್ನು ಅಗ್ಘವಣಿಯ ಹಂಪಯ್ಯ ಮೆಚ್ಚಿದ್ದದ್ದನೆಂದು ಅವನ ವಚನದ ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು ಸಾಲಿನಿಂದಲೂ, ವಚನಕಾರರ ನಡೆ ನುಡಿಗೆ ವಿರುದ್ಧವಾದದ್ದನ್ನೂ ತನ್ನ ಕಣ್ಣಾರೆ ಕಂಡುದರ ಬಗೆಗೆ ಬೇಸರ, ಹಿಂಸೆಯಲ್ಲಿ ವಚನದ ‘ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು, ಭಕ್ತರೆಂಬುವವರಿನ್ನು ಬದುಕಲೆಬಾರದು’ ಎಂಬ ಮಾತುಗಳು ಬಂದಿವೆ. ಪ್ರಭುತ್ವದ ಮೇಲಿನ ಬೇಸರ, ಸಿಟ್ಟು, ವ್ಯಂಗ್ಯ ಅಭಿವ್ಯಕ್ತಿಯೇ ಪ್ರಸ್ತುತ ವಚನದ ಭಾವಕೇಂದ್ರವಾಗಿದೆ. ವಚನಕಾರರ ನಂತರ ವೈಶ್ಣವಪಂಥ ಬಂದ ನಂತರವು ವಚನಗಳು ರಚನೆಯಾಗುತ್ತಿದ್ದುದಕ್ಕೆ ಪ್ರಸ್ತುತ ವಚನವು ಸಾಕ್ಷಿಯಾಗಿದೆ. ಬದಲಾದ ಪ್ರಭುತ್ವ ಅದರ ನಾಯಕನಾದವನ ವೈಯುಕ್ತಿಕ ತರ‍್ತಿಗೆ ಅನುಗುಣವಾಗಿ ಪಲ್ಲಟವಾಗುವ ಸಾಮಾಜಿಕ ಉದ್ದೇಶ, ಮೌಲ್ಯಗಳ ಪಲ್ಲಟತೆಯ ಬಹುದೊಡ್ಡ ಸ್ಥಿತಿಯನ್ನ ವಾಚ್ಯವಾಗಿಯೇ ವಚನದಲ್ಲಿ ತಿಳಿಸುತ್ತಿದ್ದಾನೆ. ‘ಹಂಸಪತಿ’, ‘ಗರುಡಪತಿ’, ‘ವೃಷಭಪತಿ’ ಎಂದು ವಾಹನದ ಮೇಲೆ ಆರೂಢರಾಗುವ ಬ್ರಹ್ಮ, ವಿಷ್ಣು ಮತ್ತು ಶಿವನನ್ನ ಹೇಳುತ್ತಲೇ-ಪ್ರಭುತ್ವದಲ್ಲಿನ ಸೃಷ್ಟಿ, ಸ್ಥಿತಿ ಮತ್ತು ಲಯವನ್ನ ಹೇಳುತ್ತಿದೆ. ವಚನದ ನಂತರದ ಸಾಲಾದ ‘ರ‍್ವಜೀವಾಧಿಪತಿ’ ಪದವು ಬಹುದೊಡ್ಡ ವ್ಯಂಗ್ಯವಾಗಿ ರ‍್ವಹಿಸುತ್ತಿದೆ. ಮಾನವ ಜಾತಿಯನ್ನು ಒಂದೆಂದು ಬಗೆದ ವಚನಕಾರರ ಅನಂತರ ಪ್ರಭುತ್ವವು ತನ್ನ ಇರುವಿಕೆಯನ್ನು ರ‍್ಪಡಿಸುತ್ತಿರುವಾಗ ಹಂಪಯ್ಯ ವ್ಯಂಗ್ಯವಾಡುತ್ತಲೇ ಪ್ರಭುತ್ವಕ್ಕೆ ವಿರುದ್ಧವಾಗಿ ತನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದಾನೆ. ‘ದೇವರಾಯನ ಆಸ್ಥಾನ ಹೊಸತು’ ಎನ್ನುವಾಗ ಆಗತಾನೆ ಪ್ರಾರಂಭದ ಹಂತದಲ್ಲಿದ್ದ ಸಾಮ್ರಾಜ್ಯವನ್ನ ಅಥವಾ ಸಿಂಹಾಸನಾರೂಢನಾದ ೧ ನೇ ದೇವರಾಯನ ಬಗೆಗೆ ನೇರವಾಗಿಯೆ ಮಾತನಾಡುತ್ತಿದ್ದಾನೆ. ‘ಬಾರ’ ‘ಕುಳ್ಳಿರ’ ಅನ್ನುವ ನಿಧಿಷ್ಟ ಕ್ರಿಯಾಪದಗಳು ಮುಂದಿನ ಸಾಲು ಅತೀವ್ಯಂಗ್ಯವಾಗಿ ಕೆಲಸ ಮಾಡುತ್ತ, ರಾಜನಲ್ಲಿದ್ದ ‘ಸ್ತ್ರೀಲಂಪಟತೆ’ ಯ ಬಗೆಗೆ ನೇರವಾಗಿ ಹೇಳಿ ‘ಅಂತಃಪುರಬಿಟ್ಟು ಹೊರವಡ’ ಎನ್ನುವ ಪದವನ್ನ ಬಳಸಿ ಸ್ಪಷ್ಟವಾಗಿ ಆ ಕಾಲಘಟ್ಟದ ೧ ನೇ ದೇವರಾಯನ ರಾಜನ ಬಗೆಗೆ ಹೇಳುತ್ತಿದ್ದಾನೆ. ರಾಜ್ಯದ ಪ್ರಮುಖ ಆದಾಯದ ಹೊಣೆಯನ್ನೂ ನಿಭಾಯಿಸಲಾರದ ರಾಯನ ಹೀನಸ್ಥಿತಿಯನ್ನ ‘ಕಪ್ಪ ಕಾಣಿಕಯನ್ನೊಪ್ಪಿಸಿಕೊಂಬವರಿಲ್ಲ’ ಎನ್ನುವುದನ್ನ ಹೇಳಿದಾಗಲೇ, ರಾಜ್ಯ ಮತ್ತದರಲ್ಲಿನ ಪ್ರಭುತ್ವ ನೈತ್ತಿಕವಾಗಿ ಮತ್ತು ರ‍್ಥಿಕವಾಗಿ ದಿವಾಳಿತನಕ್ಕೆ ಮುಖಮಾಡಿರುವುದನ್ನ ಕಾಣಿಸುತ್ತಿದ್ದಾನೆ. ನಂತರದ ‘ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು’ ಸಾಲಿನ ಮೂಲಕ ಬಹುಮುಖ್ಯವಾದ ಒಂದು ಅಂಶದ ಬಗೆಗೆ ಗಮನ ಸೆಳೆಯುತ್ತಾನೆ. ತನ್ನ ಹಿಂದಿನ ವಚನ ಚಳುವಳಿಯಲ್ಲಿನ ಗುರುವಿನ ಮಹತ್ವದ ಬಗೆಗೆ, ‘ಅರಿವೇ ಗುರು’ ವಾದ ಸ್ಥಿತಿಯಿಂದ ಕೆಳಗಿಳಿದಿರುವುದರಿಂದಲೇ ಆದ ಬಹುದೊಡ್ಡ ಸಂಚಲನದ ಬಗೆಗೆ ಗಮನವಿದ್ದೇ ‘ಕೆಟ್ಟಿತ್ತು’ ಎನ್ನುವಾಗ ನಿದಿಷ್ಟ ರ‍್ತಮಾನ ಕ್ರಿಯಾಪದಗಳನ್ನ ಬಳಸಿದ್ದಾನೆ. ‘ತೆರೆದ ಬಾಗಿಲ’ ಅನ್ನುವ ಪದ ದೇಹದ ಅರಿಷಡ್ರ‍್ಗಗಳನ್ನ ತಿಳಿಸುತ್ತಿದೆ (ಗಮನಿಸಿ- ದೇಹವೇ ದೇಗುಲ ಅನ್ನುವುದರ ಪ್ರಭಾವವಿದೆ.) ‘ಮುಚ್ಚುವರಿಲ್ಲ’ ಅನ್ನುವ ಪದವೂ ಸಹಾ ನಿದಿಷ್ಟ ಕ್ರಿಯಾ ಪದವಾಗಿದ್ದು ಇದರಲ್ಲಿ ಒಂದು ವ್ಯಥೆಯ ಧ್ವನಿ ಹೊಮ್ಮುತ್ತಿದೆ. ‘ಮುಚ್ಚಿದ ಬಾಗಿಲ’ ಅನ್ನುವುದು ಜ್ಞಾನವನ್ನ, ನೈತ್ತಿಕತೆಯ ಪ್ರಜ್ಞೆಯನ್ನ ಸಂಕೇತಿಸುತ್ತಲೇ ಇಲ್ಲೂ ರ‍್ಧಿಷ್ಟ ಕ್ರಿಯಾಪದವನ್ನ ತಿಳಿಸುತ್ತಲೇ ‘ತೆರೆವರಿಲ್ಲ’ ಅನ್ನುವಾಗ ತನ್ನ ಅಸಹಾಯಕತೆಯನ್ನ ಜೊತೆಗೆ ಪ್ರಭುತ್ವದ ಅಧೋಗತಿಯನ್ನ ತಿಳಿಸುತ್ತಲೇ ಮುಂದಿನ ಕೆಟ್ಟಿರುವ ‘ಅರಸುತನ’ ವನ್ನ ಹೇಳುತ್ತಿದ್ದಾನೆ. ಅದರಲ್ಲಿಯೂ ಆ ಸಾಲಿನ ಬಹುಮುಖ್ಯ ಪದವೂ ‘ಕೆಟ್ಟಿತ್ತು’ ಇಂದಿಗೆ ಓದಿದರೆ ಭೂತಕಾಲ ಕ್ರಿಯಾಪದ ಮತ್ತೆ ರ‍್ತಮಾನಕಾಲದಲ್ಲಿಯೂ ಸ್ಪಷ್ಟವಾದ ಕೆಲಸ ಮಾಡುತ್ತ ‘ಕೆಟ್ಟ ಅರಸುತನ’ ವನ್ನ ಧ್ವನಿಸಿ, ಕೊನೆಗೆ ಈ ಹೀನಾವಸ್ಥೆಯನ್ನ ಕಂಡು ತನ್ನ ಒಟ್ಟೂ ಉದ್ದೇಶವಾದ ಬದುಕಿಯೂ ಪ್ರಯೋಜನವಿಲ್ಲವೆಂಬುದನ್ನ ಹೇಳುತ್ತಿದ್ದಾನೆ. ಕೊನೆಯ ಸಾಲಿನಲ್ಲಿನ ‘ಬದುಕಲೆ’ ಅನ್ನುವಾಗ ಅವನಲ್ಲಿನ ಒಳಗುದಿಯ ಕಾವನ್ನ ಹೇಳುವಲ್ಲಿ ಸಾಮಾನ್ಯವಾದ ಇಂದಿನ ದುಖಃದ ಸ್ಥಿತಿಯನ್ನೂ ಧ್ವನಿಸುವ ಹಾಗೆ ಮಾಡುತ್ತಿದೆ. ಆಶ್ಚರ್ಯದ ಸಂಗತಿ ಎಂದರೆ ರಾಜನ ಅಥವಾ ಪ್ರಭುತ್ವದ ವಿರುದ್ಧ ಆ ಕಾಲದಲ್ಲಿಯೇ ಬಹಳ ನೇರವಾಗಿ ಖಂಡಿಸುವ ಗುಣ ಮೆಚ್ಚಲೇಬೇಕಾದುದು. ಅದೇ ರಾಜ್ಯದಲ್ಲಿದ್ದು. ಈ ಗುಂಡಿಗೆಗೆ ಪ್ರಭಾವ ಬಸವಣ್ಣನ ನಡೆ ಇದ್ದರೂ ಇರಬಹುದು (ಊರಮುಂದೆ ಹಾಲಹಳ್ಳ ಹರಿಯುತಿರಲು ಬಿಜ್ಜಳನ ಭಂಡಾರವೆನಗೇಕಯ್ಯಾ, ನೆಲನಾಳ್ದನ ಹೆಣನೆಂದೊಡೆ ಒಂದಡಿಕೆಗೆ ಕೊಂಬರಿಲ್ಲ … ಇತ್ಯಾದಿ ಬಸವಣ್ಣನ ವಚನ ಮತ್ತು ನಡೆಯ ಪ್ರಭಾವ ಇದ್ದರೂ ಇರಬಹುದು) ಎಲ್ಲಕಾಲದಲ್ಲಿಯೂ ಬಂಡಾಯವನ್ನ ನಡೆಸುವವನ ಒಳ ಹೊರ ಸ್ಥಿತಿಯ ಶುಚಿತ್ವದ ದ್ಯೋತಕವಾಗಿ ಈ ವಚನ ನಿಂತಿದೆ. ಅಧಿಕಾರದಲ್ಲಿರುವವನ ನೈತ್ತಿಕ ಅಧಃಪತನ ಮತ್ತು ಅವನನ್ನಾಶ್ರಯಿಸಿರುವ ಎಲ್ಲರ ಪತನಕ್ಕೂ ನಾಂದಿ. ಕೊನೆಗೆ ಅದರ ಪರಿಣಾಮ ಸಮಾಜದಲ್ಲಿ ಕ್ಷುದ್ರತೆಯ ಅನಾವರಣಕ್ಕೆ ನಾಂದಿ. ವಚನಕಾರರಿಗೆ ಇದ್ದ ಭಾಷೆಯ ಬಳಕೆಯಲ್ಲಿನ ಬಹುಸೂಕ್ಷ್ಮತೆ ಬೆರಗಾಗಿಸುತ್ತದೆ. ಒಂದು ಕ್ರಿಯಾಪದವನ್ನ ಬಳಸುವಾಗಲಂತೂ ಅವರಲ್ಲಿನ ಸದ್ಯ-ಶಾಶ್ವತವನ್ನ ಹಿಡಿದಿಡುವಲ್ಲಿ ಅನುಭವ-ಅನುಭಾವ ಅಥವಾ ಭವಿಷ್ಯವನ್ನು ನುಡಿಯುವ ಮುಂಗಾಣ್ಕೆ, ಎಲ್ಲ ಕಾಲದಲ್ಲಿಯೂ ಅವರನ್ನು ಸಲ್ಲುವಂತೆ ಮಾಡಿದೆ. ಅಡಿಟಿಪ್ಪಣಿ ೦೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲಬುರಗಿ. ಪು ೯೭೩ ಮತ್ತು ೯೭೪ (೨೦೧೬) ೦೨. ಪೀಠಿಕೆಗಳು ಲೇಖನಗಳು. ಡಿ ಎಲ್ ನರಸಿಂಹಾಚಾರ್. ಪುಟ ೪೬೯. (೧೯೭೧) ೦೩. ಶಿವಶರಣ ಕಥಾರತ್ನಕೋಶ. ತ ಸು ಶಾಮರಾಯ. ಪುಟ ೦೪. (೧೯೬೭) ೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲರ‍್ಗಿ. ಪು ೯೩೫. (೨೦೧೬) ೦೫. ಪ್ರಾಚೀನ ಕನ್ನಡ ಸಾಹಿತ್ಯದ ಸಮಗ್ರ ಸೂಚಿ-೧. ಡಾ. ಆರ್.
ಅಂಕಣ ಬರಹ ರುದ್ರಭೂಮಿಯಲೇ ಜ್ಞಾನೋದಯ ಅಲ್ಲಮಪ್ರಭು ಭಾರತೀಯ ದಾರ್ಶನಿಕ ಚರಿತ್ರೆಯಲ್ಲಿ ಬಹಳ ದೊಡ್ಡ ಹೆಸರು. ಹನ್ನೆರಡನೆಯ ಶತಮಾನದ ಬಹುದೊಡ್ಡ ತಾತ್ವಿಕ ವಚನಕಾರ. ಇವನಷ್ಟು ನಿಖರ, ನೇರ ಮತ್ತು ಸ್ಪಷ್ಟವಾಗಿ ತಾತ್ವಿಕ ಸಂಘರ್ಷಕ್ಕೆ ನಿಲ್ಲುವ ಮತ್ತೊಬ್ಬನನ್ನು ಹುಡುಕಿದರೂ ವಚನಕಾರರಲ್ಲಿ ಸಿಕ್ಕುವುದು ಬಹಳ ಕಷ್ಟ ಮತ್ತು ವಿರಳ. ಸಾಮಾಜಿಕ ಸುಧಾರಣೆಯೇ ಪ್ರಮುಖ ಧ್ಯೇಯವಾಗಿ ನಡೆದ ಚಳುವಳಿಯ ಉಪೋತ್ಪನ್ನವಾಗಿ ಹುಟ್ಟಿದವು ವಚನಗಳು. ಕೊಂಡುಗೊಳಿ ಕೇಶಿರಾಜನಿಂದ ಕೊನೆ ಕೊನೆಯ ವಚನಕಾರನೆಂದು ಕರೆವುದಾದರೆ ಅಗ್ಘವಣಿಯ ಹಂಪಯ್ಯನವರೆಗೂ ಈ ವಚನ ಚಳುವಳಿಯ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳು ಹರಿದಿವೆ. ಇಂದಿನ ಸಮಾಜಿಕ ಸಾಮರಸ್ಯ-ಅಭಿವೃದ್ಧಿಗೆ ವಚನಕಾರರನ್ನು ಮಾದರಿಯೆಂದೇ ಭಾವಿಸಿರುವಾಗ, ವಚನಗಳ ಪ್ರಭಾವ ಕಾಲಾತೀತವಾಗಿ ನಿಂತಿರುವುದು, ವಚನಗಳ ಹೊಂದಿರುವ ಧ್ಯೇಯದ ತೀವ್ರತೆ ಮತ್ತು ತುರ್ತು ಎಷ್ಟು ಮಹತ್ತರವಾದುದು ಎಂದು ತಿಳಿಯುತ್ತದೆ. ಕಾಶ್ಮೀರದ ರಾಜನೂ ಕಲ್ಯಾಣಕ್ಕೆ ಬಂದು, ಕಾಯಕಕ್ಕೆ ತೊಡಗುವಲ್ಲಿ ಪ್ರೇರಣೆಯಾದವರೆಂದರೆ ಅವರ ಕಾಯಕ ನಿಷ್ಟೆ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳು ತಿಳಿಯುತ್ತದೆ. ಅನುಭವ ಜನ್ಯ ಜ್ಞಾನ, ಭಾರತೀಯ ತತ್ವಶಾಸ್ತ್ರ ಪರಂಪರೆಯ ಆಳವಾದ ಅಧ್ಯಯನ, ಮತ್ತು ಆ ತತ್ವಗಳನ್ನು ಒಡೆದು ಆ ಜಾಗದಲ್ಲಿ ಮತ್ತೊಂದನ್ನು ಕಟ್ಟುವ ವಚನಕಾರರ ಕಾರ್ಯ ಮುಖ್ಯವಾದದ್ದು. ತಮ್ಮ ಕಾಲದಲ್ಲಿನಿಂತು ಹಿಂದಿನ ತತ್ವಗಳನ್ನು ಒರೆಗೆ ಹಚ್ಚಿ ಉತ್ತರ ಕಂಡುಕೊಳ್ಳುವ-ಉತ್ತರ ದೊರೆಯದಿದ್ದರೆ ಸಾರಸಗಟಾಗಿ ತಿರಸ್ಕರಿಸುವ ಅವರ ಕಾರ್ಯ ಎಲ್ಲ ಕಾಲಕ್ಕೂ ಮಾದರಿ. ಸಾಮಾಜಿಕವಾಗಿ ಬಸವಣ್ಣನನ್ನೂ, ಧಾರ್ಮಿಕವಾಗಿ ಚೆನ್ನ ಬಸವ್ಣನನ್ನೂ ನೋಡಿದಹಾಗೆ ವೀರಶೈವದ ತಾತ್ವಿಕ ದೊಡ್ಡ ಸಾಧ್ಯತೆಯನ್ನ ಕಂಡದ್ದು ಅಲ್ಲಮಪ್ರಭುವಿಲ್ಲಿ. ನಿಷ್ಟುರ, ವಿಡಂಬನೆ, ಸಂಕೀರ್ಣ ಭಾಷಾ ಪ್ರಯೋಗ, ವಿರುದ್ಧ ನೆಲೆಗಳ ಚಿತ್ರ ಸರನಿಯ ಪ್ರತಿಮೆಗಳು ಅಲ್ಲಮನ ವಿಶೇಷತೆಗಳು. ಅವನ ವಚನಗಳ ಅಧ್ಯಯನ ಇತರ ಭಾರತೀಯ ದರ್ಶನಗಳ ಅಧ್ಯಯನಕ್ಕೆ ದಾರಿ ಮಾಡಿ ಹೊಸ ಹೊಳಹುಗಳನ್ನ ನೀಡುತ್ತವೆ. “ಬೆಡಗು” ಅಲ್ಲಮನ ವಚನಗಳ ಶೈಲಿ ಎಂದೇ ಹೇಳಬಹುದು. ಅವಧೂತ ಪರಂಪರೆಯಲ್ಲಿ ಬೆಡಗಿಗೆ ಬಹುದೊಡ್ಡ ಶಕ್ತಿಯಿದೆ. ನೂರು ಮಾತುಗಳಲ್ಲಿ ಹೇಳುವುದನ್ನು ಒಂದು ಪದದಲ್ಲಿ ಹೇಳಿ, ಸಾವಿರ ಅರ್ಥಗಳು ಒಮ್ಮಿದ್ದೊಮ್ಮೆಗೆ ಹುಟ್ಟಿಬಿಡುವಂತೆ ಮಾಡುವ ಮಾತಿನ ಅತೀಉತ್ಕೃಷ್ಟ ಅಭಿವ್ಯಕ್ತಿಯದು. ಅನಿಮಿಷನಿಂದ ಇಷ್ಟಲಿಂಗ ದೊರೆಯುವವರೆಗೂ ಮಾಯೆಯ ಹೊಡೆತಕ್ಕೆ ಸಿಕ್ಕಿ ಮದ್ದಲೆ ಬಾರಿಸಿ ತೊಳಲಿದವನು ಅನಂತರ ಅದಕ್ಕೆ ವಿಮುಖವಾದ ಮೋಹಬಂಧ ಕಿತ್ತೆಸೆದು ಆಚೆಗೆ ನಿಂತು ಎಲ್ಲವನೂ ಜಾಗೃತ ಪ್ರಜ್ಞೆಯ ಮೂಲಕವೇ ನೋಡುವ ಕಣ್ಣು ಅಲ್ಲಮನದು. ಅವನ ವಚನಗಳ ಹಿಂದೆ ಜಾಗೃತಪ್ರಜ್ಞೆ ನಿರಂತರವಾಗಿ ಹರಿದಿರುವುದು ಇಂದಿಗೂ ತಿಳಿಯುತ್ತಿದೆ. ಈ ಪ್ರಜ್ಞಾನದಿಯ ಹರಿಯುವಿಕೆ ನಿರಂತರವಾಗಿ ಕೊನೆಗೆ ಭೋರ್ಗರೆತದ ನದಿಯಾಗಿ ನಿಂತದ್ದು ಅತಿಶಯೋಕ್ತಿಯಲ್ಲ. ಆ ಪ್ರಜ್ಞಾನದಿಯ ನೀರನ್ನು ಒಂದೆಡೆ ನಿಲ್ಲಿಸಿ ಎಲ್ಲರಿಗೂ ದೊರೆವಂತೆ ಶೋನ್ಯಸಿಂಹಾಸನದಲ್ಲಿ ನೆಲೆಯೂರುವಂತೆ ಮಾಡಿದ ಬಸವಣ್ಣನ ಕಾರ್ಯವೂ ಬಹುದೊಡ್ಡದು. ಅಲ್ಲಮನ ವಚನಗಳಲ್ಲಿ ಅಮೂರ್ತದ ದೈವದ ದಿಕ್ಕಿಗೆ ಕರೆಕೊಡುವ ದಾರಿ ಕಾಣುತ್ತದೆ. ಬಸವಣ್ಣ ಮೂರ್ತದಿಂದ ಅಮೂರ್ತಕ್ಕೆ ಕರೆಕೊಟ್ಟರೆ, ಅಲ್ಲಮ ಬಹಳ ನೇರ ನಡಿಗೆ ಅಮೂರ್ತದ ಕಡೆಗೆ ಕರೆ ಕೊಡುತ್ತಾನೆ. ಮೇಲ್ನೋಟಕ್ಕೆ ಇದು ವೈರುಧ್ಯ ಎನಿಸಿದರೂ ಯಾವುದೇ ಧರ್ಮದ ಮೂಲ ನೆಲೆಯೂ ಮೂರ್ತದಿಂದ ಅಮೂರ್ತಕ್ಕೆ ಚಲನೆಯೇ ಅಗಿರುತ್ತದೆ. ಕಾಲಾನಂತರ ಆಚರಣೆ ಮುಂದಾಗಿ ಅದರೊಡಲಿನ ತತ್ವ ಹಿಂದೆ ಸರಿದು, ಪ್ರಜ್ಞೆಯು ನಿಂತ ನೀರಾಗಿ ಹೋಗುತ್ತದೆ. ಧರ್ಮದ ಮೂಲ ಧ್ಯೇಯ ಜ್ಞಾನೋಪಾಸನೆ – ಜ್ಞಾನಸಂಪಾದನೆ. ಇವುಗಳು ಆದಾಗ ತನ್ನಿಂದ ತಾನೇ ಅಮೂರ್ತಕ್ಕೆ ಚೆಲಿಸುತ್ತದೆ. ಅಂತಹಾ ಚೆಲನೆಗೆ ಸಂಬಂಧಿಸಿದ ಅಲ್ಲಮನ ವಚನವೊಂದು ಅದ್ಭುತವಾಗಿದೆ. ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು ಆ ದೇಶದಲ್ಲಿ ಬರನಾಯಿತ್ತು! ಆ ದೇಶದ ಪ್ರಾಣಿಗಳೆಲ್ಲರೂ ಮೃತರಾದರು ಅವರ ಸುಟ್ಟ ರುದ್ರಭೂಮಿಯಲಿ ನಾ ನಿಮ್ಮನರಸುವೆ ಗುಹೇಶ್ವರ೧ ಮೊದಲ ಓದಿನಲ್ಲಿ ವಿಚಿತ್ರವೆಂಬಂತೆ ಕಂಡರೂ, ಇರದ ಒಳಗೆ ಬಹುದೊಡ್ಡ ಹಿಂದಿನ ಚಿಂತನೆಯನ್ನು ಒಡೆವ ಕ್ರಮವಿದೆ. ಇದು ಎರಡು ಪ್ರಮುಖ ಆಯಾಮಗಳಲ್ಲಿ ನಿರ್ವಚನಕ್ಕೆ ಒಳಪಡುತ್ತದೆ. ದೇಹದ ಮಟ್ಟದಲ್ಲಿ ಮತ್ತು ದೇಹವನ್ನು ನೆಚ್ಚಿಕೊಂಡು ಪ್ರಜ್ಞೆಯನ್ನು ಹಿಡಿತಕ್ಕೆ ತಂದುಕೊಳ್ಳುವ ತಂತ್ರಮಾರ್ಗಕ್ಕೆ ಏಕಕಾಲದಲ್ಲಿ ಅವುಗಳ ಕಾರ್ಯರೂಪದನ್ವಯ ಉತ್ತರ ಕೊಟ್ಟದ್ದಾಗಿದೆ. ದೇಹದ ಮಟ್ಟದಲ್ಲಿ ಈ ವಚನವು ‘ಉತ್ತರಾ ಪಥ’ ಎಂದರೆ ‘ತಲೆ’, ‘ಮೇಘವರ್ಷ’ವೆಂದರೆ ‘ಸುಧಾಧಾರಾ’ – ‘ಅಮೃತವರ್ಷಿಣಿ’ (ಜ್ಞಾನೋದಯವನ್ನ ಭಾರತೀಯ ತತ್ವಶಾಸ್ತ್ರಸಲ್ಲಿ ಗುರುತಿಸುವ ಪರಿಭಾಷೆ), ‘ದೇಶ’ಎಂದರೆ ‘ದೇಹ’, ‘ಪ್ರಾಣಿ’ಗಳು ಎಂದರೆ ‘ಪಂಚೇಂದ್ರಿಯ’ ಎನ್ನುವ ಅಂಶಗಳನ್ನು ತಿಳಿದರೆ, ದೇಹ ಮತ್ತು ಪಂಚೇಂದ್ರಿಯಗಳು ಲೋಲುಪತೆಯನ್ನು ಜ್ಞಾನೋದಯ ಕಾರಣದಿಂದ ಕಳೆದುಕೊಂಡರೆ, ಕಳೆದುಕೊಂಡು ಸುಮ್ಮನಾದರೆ, (ರಮಣರು ಇದನ್ನೇ ‘ಚುಮ್ಮಾಇರು’ ಎನ್ನುತ್ತಾರೆ) ಅಲ್ಲಿ ಸುಟ್ಟ ರುದ್ರಭೂಮಿಯು ನಿರ್ಮಾಣವಾಗುತ್ತದೆ. ಲೋಲುಪತೆ ಕಳೆದ ಅನಂತರ ಘಟಿಸುವ ಶೂನ್ಯಭಾವದಲ್ಲಿ ದೈವದ ಅಥವಾ ದೈವತ್ವದ ಸಾಕ್ಷಾತ್ಕಾರ ಸಾಧ್ಯವೆನ್ನುವುದು ಅಲ್ಲಮನ ಅಭಿಪ್ರಾಯ. ಇದನ್ನೇ ಮತ್ತೊಂದು ಪ್ರಮುಖವಾದ ಆಯಾಮದಲ್ಲಿಯೂ ವಿವೇಚನೆ ಮಾಡಬಹುದು. ತಾಂತ್ರಿಕ ಪದ್ದತಿಗಳಲ್ಲಿ ‘ಪಂಚ ಮ ಕಾರ’ಕ್ಕೆ ಬಹಳ ಪ್ರಾಧಾನ್ಯತೆ. ಮದ್ಯ, ಮಾಂಸ, ಮಾನಿನಿ, ಮೈಥುನ ಮತ್ತು ಮಂತ್ರಗಳ ಸಹಾಯದಿಂದ ಜ್ಞಾನವನ್ನು ಪಡೆಯಬಹುದೆಂದು ದೊಡ್ಡ ಚಲನೆಯನ್ನೇ ಉತ್ತರದಲ್ಲಿ ನಡೆಯಿತು. ಇಂದ್ರಿಯಕ್ಕೆ ಏನು ಬೇಕೋ ಅದನ್ನು ಪೂರೈಸಿಯೇ ಮನುಷ್ಯ ಅಸ್ಥಿತ್ವವನ್ನು ಕಂಡುಕೊಳ್ಳಬಹುದೆಂಬ ಮಾತಿಗೆ ಪ್ರಚೋದನೆಯಾಗಿ ಜ್ಞಾನಕ್ಕಿಂತ ಇಂದ್ರಿಯ ಸುಖಕ್ಕೆ ಒಳಗಾಗಿ ಹೋದವರೇ ಆ ಕಡೆಗೆ ಹೆಚ್ಚಾಗಿ ವಾಲಿದರು. ಇದರಿಂದ ಸಮಾಜದಲ್ಲಿ ಉಂಟಾಗುವ ಪ್ರಜ್ಞೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಜ್ಞಾನೋದಯಕ್ಕೆ ಅಶಿಸಿದವರು ಹೆಚ್ಚಾಗುವುದನ್ನ ಅರಿತ ಅಲ್ಲಮ, ಕಾಶ್ಮೀರದಲ್ಲಿ ಈ ಚಿಂತನೆ ಪ್ರಾರಂಭವಾಗಿದ್ದಕ್ಕೆ ಇಲ್ಲಿ ಕಲ್ಯಾಪಟ್ಟಣದಲ್ಲಿ ಕುಳಿದು ಅದು ಸರಿಯಲ್ಲವೆಂದು ಕೊಟ್ಟ ಉತ್ತರವೆಂದೇ ಎನಿಸುತ್ತಿದೆ. ಇದೇ ಆಶಯವನ್ನು ಸ್ಪುರಿಸುವ ಮತ್ತೊಂದು ಅಲ್ಲಮನ ವಚನವನ್ನು ಗಮನಿಸಿ. ಊರೊಳಗಣ ಘನ ಹೇರಡವಿಯೊಳಗೊಂದು ಬೇರು ಮೇಲು ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು] ಆರೈದು ನೀರೆರೆದು ಸಲುಹಲಿಕ್ಕೆ ಅದು ಸಾರಾಯದ ಫಲವಾಯಿತ್ತಲ್ಲಾ ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರಸಂಸಾರಭವಕ್ಕೆ ಸಿಕ್ಕಿದ ಬೇರಿಂದಲಾದ ಫಲವ ದಣಿದುಂಡವ ಊರಿಂದ ಹೊರಗಾದ ಕಾಣಾ ಗುಹೇಶ್ವರ ಈ ವಚನವು ಬಹಳ ಕುತೂಹಲಕರವಾದ ಕೆಲವು ಮಾಹಿತಿಗಳನ್ನು ಮೇಲೆ ಹೇಳಿದಷ್ಟೇ ನಿಖರವಾಗಿ ಬಿಟ್ಟುಕೊಡುತ್ತಿದೆ. ಇಲ್ಲಿನ ವಿಶೇಷತೆಯೇ ಎರಡು ಅರ್ಥಗಳನ್ನು ಸ್ಪುರಿಸುವ ಪದವಾದ ‘ಊರು’. ವಚನದ ಆರಂಬದಲ್ಲಿ ‘ಊರು’ ಪದವು ‘ದೇಹ’ವೆಂದು ಅರ್ಥವಾದರೆ, ಕೊನೆಯಲ್ಲಿ ಬರುವ ‘ಊರು’ ‘ತೊಡೆ’ ಎಂದು ಅರ್ಥವಾಗುತ್ತದೆ. ಇದೊಂದು ಇತ್ಯಾತ್ಮಕ ಚಲನೆಯ ಆಸೆಹೊತ್ತ ನೇತ್ಯಾತ್ಮಕ ಪ್ರತಿಮೆಗಳ ಸಹಜ ಸಂಘಟ್ಟಣೆಯಲ್ಲಿ ಮೂಡಿದ ಅರ್ಥ. ಇದರ ಅನುಸಂಧಾನವೂ ಬಹಳ ಕುತೂಹಲಕರವಾಗಿದೆ. ‘ಆರೈದು’ ಎಂಬ ಸಂಖ್ಯಾ ಪದವನ್ನು ಬಿಡಿಸಿದರೆ, ‘ಆರು’ ಷಟ್ ಚಕ್ರಗಳನ್ನು, ‘ಐದು’ ಪಂಚೇಂದ್ರಿಯಗಳನ್ನು ತಿಳಿಸುತ್ತಿದೆ. ಮುಖ್ಯವಾಗಿ ತಲೆಕೆಳಕಾದ ವೃಕ್ಷದ ಪ್ರತಿಮೆ ‘ಬೇರು ಮೇಲು ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]’ ಬಂದಿದೆ. ಆ ಮರ ಕೊಡುವ ಫಲದ ಸ್ಥಾನ ಕೆಳಗಿದೆ. ಅದನ್ನರಿಸಿ ‘ಹಣ್ಣ ಮೆಲಿದವ ಘೋರಸಂಸಾರಭವಕ್ಕೆ ಸಿಕ್ಕಿದ’. ಮತ್ತೊಂದು ಉಲ್ಟಾ ಪ್ರತಿಮೆ ಕೊನೆಯಲ್ಲಿ ಕೊಡುತ್ತಾನೆ ‘ಬೇರಿಂದಲಾದ ಫಲ’. ಇದನ್ನು ಬಹಳ ಕಷ್ಟದಲ್ಲಿ ಸಾಧಿಸಿಕೊಳ್ಳಬೇಕಾದ ಸ್ಥಿತಿ. ಆ ಫಲವನ್ನು ‘ದಣಿದುಂಡವ’ವನು ‘ಊರಿಂದ ಹೊರಗಾದ’. ಈ ವಚನದಲ್ಲಿಯೂ ದೇಹ, ದೇಹದ ಲೋಲುಪತೆ ಮತ್ತು ಪ್ರಜ್ಞೆಯನ್ನು ಹಿಡಿದುಕೊಳ್ಳುವ ಸಾಧ್ಯತೆಯ ಬಗೆಗೆ ಮಾತನಾಡುತ್ತಿದ್ದಾನೆ. ‘ಸಿಕ್ಕಿದ’ ಮತ್ತು ‘ಹೊರಗಾದ’ ಎಂಬ ಎರಡು ಕ್ರಿಯಾಪದವನ್ನು ಗಮನಿಸಿ. ಭೂತದ ಕ್ರಿಯೆಯನ್ನು ಹೇಳುತ್ತ ವರ್ತಮಾನದ ನಡೆಯನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಮಪ್ರಭುವಿನ ನೇರ ಹಣಾಹಣಿ ತಂತ್ರಾಲೋಕದ ಕಡೆಗಿದೆ. ಮತ್ತದನ್ನು ನೆಚ್ಚಿಕೊಂಡು ನಡೆದವರಿಗೆ ಕೊಟ್ಟ ಪ್ರತಿಸ್ಪಂದನೆಯೂ ಅಗಿರಬಹುದು. ಮೆಲ್ನೋಟಕ್ಕೆ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಸಣ್ಣ ಸಣ್ಣ ಸಾಲನ್ನು ಹೊಂದಿರುವ ವಚನವೆಂದು ಕರೆಸಿಕೊಳ್ಳುವ ಪ್ರಕಾರವೊಂದು, ಹೇರಳವಾಗಿ ರಚನೆಯಾಗಿದ್ದ ಅತಿಹೆಚ್ಚು ಶಿಷ್ಟವಾದ ‘ಅನುಷ್ಟಪ್’ ಛಂಧಸ್ಸಿಗೆ ಮುಖಾಮುಖಿಯಾಗುವುದು ದೇಸಿ ಮತ್ತು ಮಾರ್ಗದ ಮುಖಾಮುಖಿಯಲ್ಲದೆ ಮತ್ತಿನ್ನೇನೂ ಅಲ್ಲ. ಸಂಕೀರ್ಣವಾಗಿಯೇ ಹೇಳುವುದಾದರೆ, ಹನ್ನೆರಡನೆಯ ಶತಮಾನ ಕನ್ನಡನಾಡಿನಲ್ಲಿ ಘಟಿಸಿದ ಸಾಹಿತ್ಯ ಚಳುವಳಿಯೊಂದರ ಉಪೋತ್ಪನ್ನವಾದ ವಚನ ರೂಪವೊಂದು ತನ್ನೆಲ್ಲಾ ತಾತ್ವಿಕ, ಶಾಸ್ತ್ರ ಮತ್ತು ಅನುಭವ ಜನ್ಯ ಜ್ಞಾನದಿಂದ ರೂಪುಗೊಂಡು – ಮತ್ತೊಂದು ಶಾಸ್ತ್ರೀಯ ಕಾವ್ಯರೂಪಕ್ಕೆ, ಅದರ ತಾತ್ವಿಕ ಮಾರ್ಗಕ್ಕೆ ಕೊಟ್ಟ ಸಂಘರ್ಷದ ಆಹ್ವಾನವೆಂದರೆ ಅತಿಶಯೋಕ್ತಿಯೇನಲ್ಲ. ಶೂನ್ಯಸಂಪಾದನೆಗಳಲ್ಲಿ ಅಕ್ಕಮಹಾದೇವಿಯನ್ನು ಪರೀಕ್ಷಿಸುವ ಬಹುಮುಖ್ಯವಾದ ಘಟ್ಟವೊಂದಿದೆ. ಆ ಭಾಗವು ತನ್ನ ನಾಟಕೀಯತೆ, ತತ್ವ, ವೀರಶೈವ ಧರ್ಮದ ಮೂಲ ತತ್ವಗಳ ಶೋಧ, ಶರಣರ ನಡೆ ನುಡಿಯಲ್ಲಿನ ವಿಶೇಷತೆ ಮುಂತಾದ ಅಂಶಗಳ ಅಭಿವ್ಯಕ್ತಿಯಿಂದ ಅತೀಉತ್ಕೃಷ್ಟ ಭಾಗವಾಗಿ ಇಂದಿಗೂ ಓದುಗರ ಮನದಲ್ಲಿ ನೆಲೆ ನಿಂತಿದೆ. ಅಕ್ಕನನ್ನು ಪರೀಕ್ಷಿಸಿ, ಅವಳು ಆ ಪರೀಕ್ಷೆಯಲ್ಲಿ ಗೆದ್ದ ನಂತರ ಬಸವಣ್ಣನು ಮಡಿವಾಳತಂದೆ ಮತ್ತು ಅಲ್ಲಮರ ಸಮಕ್ಷಮದಲ್ಲಿ ಅಕ್ಕನನ್ನು, ಅವಳ ಸತ್ವವನ್ನು ಕೊಂಡಾಡುತ್ತಾನೆ. ಆ ಸಂದರ್ಭದ ವಚನವೊಂದಲ್ಲಿ ಅಲ್ಲಮನನ್ನು ಸಂಬೋಧಿಸಿ “ತಲೆವೆಳಗಾದ ಸ್ವಯಜ್ಞಾನಿ” ಎಂಬ ವಿಶೇಷಣವೊಂದನ್ನು ಆರೋಪಿಸುತ್ತಾರೆ. ಈ ವಿಶೇಷಣ ನಿಜವಾಗಿ ಸಾರ್ಥಕವಾಗಿರುವುದು ಮೇಲಿನ ವಚನದಲ್ಲಿ ಅಲ್ಲಮ ಕೊಟ್ಟಿರುವ “ಬೇರು ಮೇಲು ಕೊನೆ ಕೆಳಕಾಗಿ ಸಸಿ ಹುಟ್ಟಿತ್ತು” ಎಂಬ ಪ್ರತಿಮೆ ಮತ್ತು ಆ ಪ್ರತಿಮೆ ಮಾಡುತ್ತಿರುವ ಕಾರ್ಯದಿಂದ. ಒಟ್ಟಾರೆ ಭಾರತೀಯ ತತ್ವಶಾಸ್ತ್ರದಲ್ಲಿ ಯಾವುದೇ ಮರವನ್ನು ಯಾವುದೇ ದೊಡ್ಡ ದಾರ್ಶನಿಕನ ಜ್ಞಾನೋದಯದ ನೆಲೆಯಾಗಿ ಕಾಣುವಾಗ ಅಂತಹಾ ವೃಕ್ಷವನ್ನೇ ತಲೆಕೆಳಕಾಗಿ ಮಾಡಿ, ತತ್ವಗಳಾಚೆ ಬದುಕಿದೆ ಎಂಬುದನ್ನು ದಿಟ್ಟವಾಗಿ ಸಾರಿದ “ತಲೆವೆಳಗಾದ ಸ್ವಯಜ್ಞಾನಿ” ಅಲ್ಲಮ. ಪರಾಮರ್ಶನ ಗ್ರಂಥಗಳು : ೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವಚನ ಸಂಖ್ಯೆ ೨೨೭. ಪು ೧೫೬ (೨೦೧೬) ೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವಚನ ಸಂಖ್ಯೆ ೯೬೪. ಪು ೨೨೭ (೨೦೧೬) ೩. ಎನ್ನ ಭಕ್ತಿ ಶಕ್ತಿಯು ನೀನೆ ಎನ್ನ ಯುಕ್ತಿ ಶಕ್ತಿಯು ನೀನೆ ಎನ್ನ ಮುಕ್ತಿ ಶಕ್ತಿಯು ನೀನೆ ಎನ್ನ ಮಹಾಘನದ ನಿಲವಿನ ಪ್ರಭೆಯನ್ನುಟ್ಟು ತಲೆವೆಳಗಾದ ಸ್ವಯಜ್ಞಾನಿ ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕನ ನಿಲವ ಮಡಿವಾಳನಿಂದಱಿದು ಬದುಕಿದೆನಯ್ಯಾ ಪ್ರಭುವೆ ಹಲಗೆಯಾರ್ಯನ ಶೂನ್ಯಸಂಪಾದನೆ. ಸಂ. ಪ್ರೊ. ಎಸ್. ವಿದ್ಯಾಶಂಕರ, ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. ವಚನ ಸಂಖ್ಯೆ ೧೦೭೫. ಪು ೪೬೭ ( ೧೯೯೮ ). ****************************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.
ಅಂಕಣ ಬರಹ ವಸಾಹತುವಿನಿಂದ ಬಿಡುಗಡೆಗೆ ಭಾಷೆ ಕೊಟ್ಟವ ( ಬಸವಣ್ಣನವರ ಒಂದು ವಚನದ ಭಾಷಿಕ ವಿವೇಚನೆ ) ಕನ್ನಡ ಸಾಹಿತ್ಯ ಸಂಸ್ಕೃತದ ಪ್ರಭಾವಕ್ಕೆ ಸಿಕ್ಕು ವಸ್ತು, ರೂಪ, ಅಭಿವ್ಯಕ್ತಿಯ ಕ್ರಮದಲ್ಲಿ ಬೆಳವಣಿಗೆ ಹೊಂದಿ ಜನಸಾಮಾನ್ಯರಿಂದ ಬಹುದೂರ ನಿಂತಿದ್ದುದು ಎಲ್ಲಕಾಲದಲ್ಲಿಯೂ ಸತ್ಯವೇ ಸರಿ. ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಸಾಹಿತ್ಯ ರೂಪ ಮತ್ತು ಅದರೊಳಗಿನ ಸಂವೇದನೆಗಳು ನೆಲದ ಬೇಡಿಕೆ, ಸದ್ಯದ ತುರ್ತಿಗೆ ಸ್ಪಂದಿಸಿ ಜನಸಾಮಾನ್ಯರ ನಾಡಿಮಿಡಿತಕ್ಕೆ ಸ್ಪಂದಿಸಿದ್ದು. ಸಂಸ್ಕೃತದ ಮಾರ್ಗ ಸಂಪ್ರದಾಯಕ್ಕೆ, ಮಹಾಕಾವ್ಯ ಪರಂಪರೆಗೆ ವಿರುದ್ಧವಾಗಿ ತನ್ನದೇ ಆದ ಕ್ರಮವನ್ನು ಕಟ್ಟಿಕೊಂಡಿರುವುದು ತಿಳಿದೇ ಇದೆ. ವಚನಗಳು ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿರುವುದು ಅದರ ಬಹು ಮುಖ್ಯ ಅಂಶ. ಇದೇ ಮೊದಲ ಬಂಡಾಯ. ಮತ್ತು ಸಂಸ್ಕೃತಭೂಯಿಷ್ಟ ಮಾರ್ಗ ಪರಂಪರೆಗೆ ಕೊಟ್ಟ ಛಾಟಿ ಏಟಾಗಿದೆ. ವಿಷಯ ಹಸ್ತಾಂತರಕ್ಕೆ ಕಂಡುಕೊಂಡ ಸಾಹಿತ್ಯ ರೂಪ, ಬಳಸಿದ ಭಾಷೆ, ಸೂಕ್ಷ್ಮವಾದ ಪರ್ಯಾಯ ದಾರಿಯನ್ನು ನಾಡಿಗರಲ್ಲಿ ಇಂದಿಗೂ ಜಾಗೃತಗೊಳಿಸಿ ನಿಲ್ಲಿಸಿವೆ. ಪರ್ಯಾಯ ದಾರಿಯನ್ನು ಹುಟ್ಟುಹಾಕುವಲ್ಲಿ ಬಸವಣ್ಣನವರ ಪಾತ್ರ ಬಹುಮುಖ್ಯವಾದದ್ದು ಮತ್ತು ಆ ಕಾರ್ಯದ ಯಶಸ್ವಿಗೆ ಮಾರ್ಗಕ್ಕೆ ವಿರುದ್ಧವಾದ ಭಾಷೆಯನ್ನು ಬಳಸುವ ದಾರಿ ಬಸವಣ್ಣನವರ ಹಾದಿ ಓದುಗರನ್ನು ಬೆರಗಾಗಿಸುತ್ತದೆ. ಈ ವಚನವನ್ನು ಮತ್ತೊಮ್ಮೆ ಗಮನಿಸಿ. ಉಳ್ಳವರು ಶಿವಾಲಯ ಮಾಡುವರು ; ನಾನೇನ ಮಾಡವೆ ? ಬಡವನಯ್ಯಾ. ಎನ್ನ ಕಾಲೇ ಕಂಭ, ದೇಹವೇ ದೇಗುಲ, ಸಿರ ಹೊನ್ನ ಕಳಸವಯ್ಯಾ. ಕೂಡಲಸಂಗಮದೇವ, ಕೇಳಯ್ಯ; ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ೧ ಈ ವಚನ ಪ್ರಖ್ಯಾತವಾಗಿರುವುದು ‘ದೇವಾಲಯ’ಗಳ ವಿರುದ್ಧವಾಗಿ, ದೇಹವೇ ‘ದೇಗುಲ’ ಎನ್ನುವ ಗ್ರಹಿಕೆಯಿಂದ. ಸ್ಥಾವರಕ್ಕಿಂತ ಜಂಗಮ ಬಹುದೊಡ್ಡದು ಮತ್ತು ಕ್ರಿಯಾಶೀಲ, ಚಲನಶೀಲವಾದುದು ಎಂಬುದರಿಂದ. ಆ ಕಾಲದ ಪುರೋಹಿತಶಾಹಿ ಸೃಷ್ಟಿಸಿದ್ದ ವಸಾಹತುವಿನಿಂದ ಬಿಡಿಸಿಕೊಳ್ಳಲು ತಮ್ಮನ್ನು ತಾವು ಕಟ್ಟಿಕೊಳ್ಳಲು ನಿರ್ಮಿಸಿಕೊಂಡಿರುವ ಮಾರ್ಗದಿಂದ. ಇದೊಂದು ಮಹಾಮಾರ್ಗವಾಗಿ ಇಂದಿಗೂ ಜೀವಂತವಾಗಿದೆ. ಪ್ರತೀ ಕ್ಷೇತ್ರಗಳಲ್ಲಿಯೂ ಜ್ಞಾನವೆಂಬುದು ಅಮೂರ್ತ ಮತ್ತು ಸೀಮಾತೀತ. ಈ ಜ್ಞಾನವು ಭಾಷೆಯ ಮೂಲಕ ಬರುವುದೆನ್ನುವುದು. ವಸಾಹತೀಕರಣಕ್ಕೆ ಒಳಪಟ್ಟಾಗ ‘ಭಾಷೆ’ ಎನ್ನುವುದರ ಮೇಲೂ ಬಹುಸೂಕ್ಷ್ಮವಾಗಿ ಯಜಮಾನ್ಯ ಸಂಸ್ಕೃತಿಯು ಬಹುದೊಡ್ಡ ಪ್ರಭಾವ ಬೀರುತ್ತದೆ. ಕೊಟ್ಟ ಭಾಷೆಯಿಂದ ಬಿಡಿಸಿಕೊಳ್ಳುವುದು ಅಥವಾ ಅದಕ್ಕೆ ಪರ್ಯಾಯವಾದ ಭಾಷೆಯನ್ನು ಕಟ್ಟುವುದು, ಹುಟ್ಟಿಸಿಕೊಳ್ಳುವುದು ವಸಾಹತುವಿನಿಂದ ಮುಕ್ತಿರಾಗಲು ಪ್ರಮುಖವಾದ ದಾರಿಯಾಗಿದೆ. ಈ ಕೆಲಸವನ್ನು ಬಹು ಯಶಸ್ವಿಯಾಗಿ ಮತ್ತು ನೆಲದ ಕಣ್ಣಾಗಿ ಮಾಡುವಲ್ಲಿ ಬಸವಣ್ಣನವರ ಈ ವಚನ ಮಹತ್ತರವಾದ ಕಾರ್ಯ ನಿರ್ವಹಿಸಿದೆ. ಪ್ರಕೃತ ವಚನದಲ್ಲಿ ಬಸವಣ್ಣನವರಿಗಿದ್ದ ಅತೀ ಸೂಕ್ಷ್ಮ ಭಾಷಾ ಜ್ಞಾನ ಮತ್ತು ವಸಾಹತುವಿನಿಂದ ಮುಕ್ತರಾಗುವ ಹಂಬಲವಿರುವುದು ತಿಳಿಯುತ್ತದೆ. ಅವರಲ್ಲಿದ್ದ ಭಾಷಾ ಪ್ರಜ್ಞೆಯೇ ಇನ್ನೂ ಜೀವಂತವಾಗಿ ನಮ್ಮ ನಡುವೆ ಅವರನ್ನಿಟ್ಟಿರುವುದು. ವಚನದಲ್ಲಿನ ಕೆಲವು ಪದಗಳು ವಿಭಿನ್ನ ಮತ್ತು ಸೂಕ್ಷö್ಮ ಓದನ್ನು ಕೇಳುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಳಸುವ – ಅತೀ ಮೆಚ್ಚಿರುವ ಬಸವಣ್ಣನವರ ವಚನವಿದಾದ್ದರಿಂದ ಇದರಲ್ಲಿ ವಿಶಿಷ್ಟ ಮತ್ತು ಜಾಗೃತ ಪ್ರಜ್ಞೆ ಮಾಡಿರುವ ಕಾರ್ಯವನ್ನು ನೋಡಲೇಬೇಕೆನಿಸುತ್ತದೆ. ‘ಉಳ್ಳವರು ಶಿವಾಲಯ ಮಾಡುವರು’ ಸಾಲಿನಲ್ಲಿ ಅಧಿಕಾರದ ಮೂಲಾಂಶವಾದ ಹಣವನ್ನು ಹೋಂದಿರುವ ಉಳ್ಳವರು ಮತ್ತು ಪೌರೋಹಿತ್ಯದ ಕೇಂದ್ರವಾದ ‘ದೇವಾಲಯ’ದ ಬಗೆಗೆ ನೇರವಾಗಿಯೇ ಮಾತುಬಂದಿದೆ. ‘ಆಲಯ’ ಎನ್ನುವುದು ಸಂಸ್ಕೃತದ ಪದವಾಗಿದ್ದು, ಸಾಮಾನ್ಯ ಸರಳ ವಾಕ್ಯದಲ್ಲಿಯೇ ಹೇಳಿದ್ದಾರೆ. ‘ನಾನೇನ ಮಾಡವೆ? ಬಡವನಯ್ಯಾ.’ ಸಾಲು ಅಸಹಾಯಕತೆಯನ್ನು ತೋಡಿಕೊಳ್ಳುವ ಹಾಗೆ ಬಂದಿದ್ದರೂ, ಕೊನೆಯ ಪದ ವಾಸ್ತವವನ್ನು ಉಳ್ಳವರ ಎದುರು ನಿಲ್ಲಿಸುವಾಗ ‘ಬಡವ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಮಾರ್ಗದ ಸಂಸ್ಕೃತ ಪದಕ್ಕೆ ವಿರುದ್ಧವಾದ ಕನ್ನಡ ಪದ ಬಳಸುವ ಮೂಲಕ ಮುಂದಿನ ಮಾತುಗಳನ್ನು ಆಡುತ್ತಿರುವುದು ಅಸಹಾಯಕತೆಯೊಂದಿಗೇ ಅದರಲ್ಲಿನ ಅನನ್ಯತೆಯನ್ನು ಸಾದರಪಡಿಸುವ ಕ್ರಮವಾಗಿದೆ. ‘ಆಲಯ’ ಪದವು ಸಂಸ್ಕೃತದ್ದಾಗಿದ್ದು ಅದಕ್ಕೆ ಪರ್ಯಾಯವಾಗಿ ಕನ್ನಡದ ‘ದೇಗುಲ’ ಎನ್ನುವುದನ್ನು, ಮತ್ತದರ ವಿನ್ಯಾಸವನ್ನು ‘ಕಾಲು’ ‘ಕಂಭ’ ‘ದೇಹ’ ಎನ್ನುವ ಕನ್ನಡ ಪದವನ್ನು ಬಳಸಿರುವುದೇ ವಿಶೇಷವಾಗಿದೆ. ಸಂಸ್ಕೃತದ ‘ಶಿರ’ ಕ್ಕೆ ವಿರುದ್ಧವಾಗಿ ಕನ್ನಡದ ‘ಸಿರ’ ಎನ್ನುವುದನ್ನೂ, ‘ಕಳಶ’ ಕ್ಕೆ ಪರ್ಯಾಯವಾಗಿ ‘ಕಲಸ’ ಎನ್ನುವ ಪದವನ್ನು ಬಳಸಿ ಕಟ್ಟಿರುವ ಪ್ರತಿಮೆ ಏಕಕಾಲದಲ್ಲಿ ಭಾಷಿಕವಾಗಿಯೂ-ಆಚರಣೆಯಲ್ಲಿಯೂ ಯಜಮಾನ್ಯ ಸಂಸ್ಕೃತಿಗೆ ವಿರುದ್ಧವಾಗಿ ಕಟ್ಟಿರುವ ಸಂಕಥನವನ್ನು ಒಡೆಯುತ್ತಿರುವ ಮಹತ್ತರವಾದ ಹಾದಿಯನ್ನು ತಿಳಿಸುತ್ತಿದೆ. ಬಸವಣ್ಣನವರ ಅಂಕಿತದಲ್ಲಿಯೂ ಮೊದಲ ಪದ ‘ಕೂಡಲ’ ಎನ್ನುವುದು ಕನ್ನಡ ಪದವೇ ಆಗಿದ್ದು ‘ದೇವ’ ಎನ್ನುವುದನ್ನು ಹೇಳುತ್ತ ಹಿಂದಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವುದನ್ನು ತಳ್ಳಿಹಾಕುವ ಹಾಗೆ ಅನಿಸುತ್ತದೆ. ಪರ್ಯಾಯ ಸಂಸ್ಕೃತಿಯ ವಕ್ತಾರರಂತಿರುವ ಬಸವಣ್ಣನವರು ಏನು ಮಾಡಬೇಕಿತ್ತೋ ಯಶಸ್ವಿಯಾಗಿ ಮೊದಲು ಭಾಷೆಯ ಮೂಲಕವೇ ಮಾಡಿಬಿಟ್ಟಿದ್ದಾರೆ. ಇಲ್ಲಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ಸಾಲು ಒಂದರ್ಥದಲ್ಲಿ ವಚನದ ವ್ಯಂಗ್ಯಧ್ವನಿಯನ್ನು ಹೊರಹೊಮ್ಮಿಸಿ ಬಸವಣ್ಣ ಹುಸಿನಗುವಂತೆನಿಸುತ್ತಿದೆ. ‘ಬಡವನಯ್ಯಾ’ ಪದವು ತನ್ನ ಅರ್ಥ ಸಾಧ್ಯತೆಯನ್ನೇ ಕುಗ್ಗಿಸಿಕೊಂಡು ಹಿನ್ನಲೆಗೆ ಉಳಿಯುವಂತೆನಿಸುತ್ತದೆ. ಕೊನೆಯ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!’ ಸಾಲಿನಲ್ಲಿ ತಮ್ಮ ಉದ್ದೇಶವನ್ನು ವಾಚ್ಯವಾಗಿ ಸ್ಪಷ್ಟಪಡಿಸುವಲ್ಲಿ ಮತ್ತು ಯಜಮಾನ್ಯಕ್ಕೆ ನೇರವಾಗಿ ಉತ್ತರಿಸುವಲ್ಲಿ ಬಸವಣ್ಣ ಬಳಸಿರುವ, ಅನುಸರಿಸಿದ್ದ ‘ಜಂಗಮ’ ಸ್ಥಿತಿಯನ್ನು ‘ಸ್ಥಾವರ’ ಕ್ಕೆ ವಿರುದ್ಧವಾಗಿ ನಿಲ್ಲಿಸಿ ಬೆರಗಾಗಿಸುತ್ತಾರೆ. ‘ಉಂಟು’ ಮತ್ತು ‘ಇಲ್ಲ’ ಎನ್ನುವ ಎರಡು ವೈರುಧ್ಯಗಳು ಏಕಕಾಲದಲ್ಲಿ ಮತ್ತು ಒಂದಾದನಂತರ ಮತ್ತೊಂದು ಸಮಾನಾಂತರವಾಗಿ ಬಂದಿದ್ದು, ಕೊನೆಗೆ ಇಲ್ಲ ಎನ್ನುವುದು ಓದಿನ ಕೊನೆಯಲ್ಲಿ ಉಳಿಯುತ್ತದೆ. ಮತ್ತದ ಶಾಶ್ವತವಾದ ಸತ್ಯದ ಅವರ ಗ್ರಹಿಕೆಯನ್ನು ಸಾದರಪಡಿಸುತ್ತಿದೆ. ಸಂಸ್ಕೃತದ ಶಬ್ಧಗಳನ್ನೇ ಜಾಗಗಳಲ್ಲಿ ಬಳಸಿದ್ದರೆ ಪರ್ಯಾಯ ಸಂಸ್ಕೃತಿಯ ಅನಾವರಣದ ದಾರಿ ಎನ್ನುವುದನ್ನು ಮಾತನಾಡುವುದಾಗುತ್ತಲೇ ಇರಲಿಲ್ಲ. ಮತ್ತು ಇಷ್ಟೆಲ್ಲಾ ಸೂಕ್ಷ್ಮತೆ ವಚನಕ್ಕೆ ಬರುತ್ತಿರಲಿಲ್ಲವೆಂದೇ ಹೇಳಬಹುದು. ಬರಹಗಾರನೊಬ್ಬನಿಗೆ ಪ್ರಮುಖವಾದ ಎರಡು ನೆಲೆಯೆನಿಸುವುದು ‘ಆಯ್ಕೆ’ ‘ಪ್ರತ್ಯೇಕತೆ’ಗಳನ್ನು ಶೋಧಿಸುವ ಮತ್ತು ಸೃಜಿಸಿಕೊಳ್ಳುವ ಸ್ಥಿತಿ. ‘ಆಯ್ಕೆ’ಯೆನ್ನುವುದು ‘ಅಸ್ಥಿತ್ವ’ದ ಸ್ಥಿತಿ ಮತ್ತು ದಾರಿ, ಜೀವಂತವಾಗಿಡುವಲ್ಲಿ ಸ್ಥಿತಿ. ಇದನ್ನು ಕೈಗೊಳ್ಳುವ ಸಮಯದಲ್ಲಿ ಚಳುವಳಿಯ ಮುನ್ನೆಲೆಯಲ್ಲಿರುವ ನೇತಾರನೊಬ್ಬ ಅನುಸರಿಸಬೇಕಾದ ‘ಜಾಗೃತತೆ’ ಮತ್ತು ‘ನಿಖರತೆ’ ಬಸವಣ್ಣವರಲ್ಲಿದೆ. ಮತ್ತೊಂದು ‘ಪ್ರತ್ಯೇಕತೆ’ಯ ಪ್ರಶ್ನೆ ವಸಾಹತು ಸೃಜಿಸುವ ‘ಸಂಸ್ಥೆ’ಯಿಂದ ತಮ್ಮನ್ನು ಹೊರಗಿಟ್ಟು ನೋಡಿಕೊಳ್ಳುವ ಮತ್ತು ಅಂತರ ಕಾಯ್ದುಕೊಳ್ಳುವ, ಈ ಎರಡು ಕೆಲಸಗಳಿಂದ ನೇತಾರನಾಗಿ ಗುಂಪಿನ ಅಸ್ಥಿತ್ವಕ್ಕೆ ಹಾಕಿಕೊಟ್ಟ ದಾರಿಯಾಗಿ ಅವರ ಎಲ್ಲ ಉದ್ದೇಶಗಳನ್ನು ಏಕಕಾಲದಲ್ಲಿ ವಚನವು ತಿಳಿಸುತ್ತಿದೆ. ಆಳುವ ಮತ್ತು ಗಾಢ ಪ್ರಭಾವ ಇರುವ ಸಂಸ್ಕೃತಿ, ಭಾಷೆಗಳು ಒಂದು ಭ್ರಮೆಯಲ್ಲಿ ನಿಲ್ಲಿಸಿರುವುದು ಇಂದಿಗೂ ಸತ್ಯವೇ ಆಗಿದೆ. ಆದರೆ ಸೂಕ್ಷ್ಮಾವಾಗಿ ಮತ್ತು ಜಾಗೃತನಾಗಿರುವ ಲೇಖಕ, ಬರಹಗಾರ, ಚಿಂತಕ, ಸಾಮಾಜಿಕ ಹೋರಾಟಗಾರ ಆ ಭಾಷೆಗೆ ಪರ್ಯಾಯವಾಗಿ ಮತ್ತೊಂದನ್ನು ಅದೇ ಜಾಗದಲ್ಲಿ ನಿಲ್ಲಿಸುತ್ತಾನೆ. ಈ ಕಾರ್ಯವನ್ನು ಸೈದ್, ಫೂಕೋ, ಡೆರಿಡಾರೇ ಬಂದು ಕನ್ನಡದ ನೆಲದಲ್ಲಿ ಹೇಳಬೇಕಾಗಿಲ್ಲ. ಆ ಕೆಲಸವನ್ನು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಮಾಣದಲ್ಲಿ ಕನ್ನಡದ ನೆಲದ ಪ್ರಜ್ಞೆ ಸಾಧಿಸಿ ತೋರಿಸಿದೆ ಎನ್ನುವುದು ಅಚ್ಚರಿಯ ಜೊತೆಗೆ ಸತ್ಯವೂ ಆಗಿದೆ. ಭಾಷೆಯೊಂದನ್ನು ಬಳಸಿ ‘ಸಂಸ್ಥೆ’ಗಳು ಭ್ರಮೆಯನ್ನು ಸೃಜಿಸಿ, ಆ ಭ್ರಮೆಯಲ್ಲಿ ಸಿಲುಕಿದವರು ಕೊನೆಗೆ ಅಲ್ಲಿಯೂ ಸಲ್ಲದ – ಇಲ್ಲಿಯೂ ನಿಲ್ಲಲಾರದ ಅತಂತ್ರ ದ್ವಂದ್ವಸ್ಥಿತಿಯನ್ನು ಸೃಷ್ಟಿಸಿ ಹಾಳುಮಾಡಿಬಿಡುತ್ತವೆ. ಸಮಾಜಿಕ ಹೋರಾಟಗಾರ, ಬರಹಗಾರ, ಲೇಖಕ ಮತ್ತು ಚಿಂತಕನ ಜೀವದ ಮತ್ತು ಅವನ ನಡೆ, ಉದ್ದೇಶಗಳನ್ನು ಪ್ರಕೃತ ವಚನವು ಶಾಶ್ವತವಾಗಿ ಸಾರುತ್ತಿದೆ. ಒಂದು ಹೋರಾಟದ ಮುನ್ನೆಲೆಯಲ್ಲಿರುವ ವ್ಯಕ್ತಿ ‘ಜೀನಿಯಸ್’ (ತಕ್ಷಣದಲ್ಲಿ ಇದಕ್ಕೆ ಪರಿಣಾಮದ ದೃಷ್ಟಿಯಿಂದ ಪರ್ಯಾಯ ಪದವನ್ನು ಬೇಕೆಂದೇ ಬಳಸುತ್ತಿಲ್ಲ) ಎನಿಸುವುದು ವಸಾಹತು ಸೃಜಿಸಿರುವ ಅಥವಾ ಕೊಟ್ಟ ಭಾಷೆಯನ್ನೇ ಬಳಸಿ ಹೋರಡುವವರನ್ನಲ್ಲ–ಅದಕ್ಕೆ ಪ್ರತಿಸ್ಪರ್ಧಿಯಾಗಿ-ವಿರುದ್ಧವಾಗಿ ಮತ್ತೊಂದನ್ನು ತನ್ನಿಂದಲೇ ತನ್ನೊಳಗಿನಿಂದಲೇ ಸೃಜಿಸುವವರನ್ನು ಮತ್ತು ಪರಿಣಾಮಕಾರಿಯಾಗಿ ಬಳಸುವವರನ್ನು ಎನ್ನುವುದನ್ನು ತಳಿದರೆ ಕನ್ನಡದ ನೆಲದ ಅಸ್ಥಿತ್ವ ಮತ್ತು ಹೋರಾಟ ಹೆಚ್ಚು ಉಜ್ವಲವಾದದ್ದು ಎನಿಸದೆ ಇರದು. ಸಮಕಾಲೀನದಲ್ಲಿ ‘ಆಯ್ಕೆ’ ಮತ್ತು ‘ಪ್ರತ್ಯೇಕತೆ’ ಯ ಸಮಸ್ಯೆಗೆ ಬಸವಣ್ಣನವರಲ್ಲಿ ಉತ್ತರ ಸಿಕ್ಕಬಹುದೆನ್ನುವುದಂತೂ ಸತ್ಯವೇ ಆಗಿದೆ. ಈ ವಚನಕ್ಕೆ ಬೇರೆ ಪಾಂಠಾಂತರಗಳು ಎಂ. ಆರ್. ಶ್ರೀನಿವಾಸಮೂರ್ತಿ ಯವರ ‘ವಚನ ಧರ್ಮಸಾರ.೨ಬಸವನಾಳ ಶಿವಲಿಂಗಪ್ಪನವರ ‘ಬಸವಣ್ಣನವರ ಷಟ್ ಸ್ಥಲದ ವಚನಗಳು.೩ಡಾ. ಎಸ್. ವಿದ್ಯಾಶಂಕರರ ಸಂಪಾದನೆಯ ‘ಎನ್ನ ನಾ ಹಾಡಿಕೊಂಡೆ.೪ಮತ್ತು ಡಾ. ಎಂ. ಎಂ. ಕಲಬುರ್ಗಿ ಯವರ ಸಂಪಾದನೆಯ ‘ಬವಸಯುಗದ ವಚನ ಮಹಾಸಂಪುಟ’.೫ ಪುಸ್ತಕಗಳಲ್ಲಿದೆ. ಆದರೆ ಸಂ. ಶಿ. ಭೂಸನೂರುಮಠರ ಸಂಪಾದನೆಯಲ್ಲಿರುವ ಈ ಮೇಲಿನ ವಚನದ ಪಾಠಾಂತರವು ಬಸವಣ್ಣನವರ ವ್ಯಕ್ತಿತ್ವ ಮತ್ತು ಅವರ ಹೋರಾಟದ ಬದುಕನ್ನು ಸಂಪಾದಕ ಬಹುಸೂಕ್ಷ್ಮವಾಗಿ ಗಮನಿಸಿರುವುದು ತಿಳಿದುತ್ತದೆ. ಪರಾಮರ್ಶನ ಗ್ರಂಥ : ೧. ವಚನ ಸಾಹಿತ್ಯ ಸಂಗ್ರಹ. ಸಂ. ಶಿ ಭೂಸನೂರು ಮಠ. ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್. ಮೈಸೂರು. ಪು ೬೨೬ (೧೯೬೫) ೨. ವಚನಧರ್ಮಸಾರ. ಎಂ. ಆರ್. ಶ್ರೀನಿವಾಸಮೂರ್ತಿ. ಪ್ರಸಾರಾಂ, ಮೈಸೂರುವಿಶ್ವವಿದ್ಯಾನಿಲಯ. ಪು ೨೪೯ (೧೯೪೪) ೩. ಬಸವಣ್ಣನವರ ಷಟ್ ಸ್ಥಲದ ವಚನಗಳು. ಬಸವನಾಳ ಶಿವಲಿಂಗಪ್ಪ. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ. ಧಾರವಾಡ. ವ. ಸಂ ೮೨೦. ಪು ೨೧೬ (೧೯೫೪) ೪. ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ವ. ಸಂ ೮೨೦. ಪು ೬೪೮ (೨೦೧೨) ೫. ಬವಸಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ವ. ಸಂ ೮೨೧. ಪು ೭೪ (೨೦೧೬) ************************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.
ಅಂಕಣ ಬರಹ ಘೋರಾರಣ್ಯದಲ್ಲಿ ಹಾರುವ ಹಂಸೆ ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಪರವಾದ ನಿಲುವನ್ನು ತಾಳಿದ ಸಾಹಿತ್ಯಕ ಮತ್ತು ಧಾರ್ಮಿಕ ಚಳುವಳಿಯೆಂದರೆ ಅದು ವಚನಸಾಹಿತ್ಯ. ಅದರ ಉಗಮಕ್ಕೆ ಕಾರಣವಾದದ್ದು ಬಸವಾದಿ ಪ್ರಮಥರ ಧಾರ್ಮಿಕ ತಾತ್ವಿಕ ಸುಧಾರಣೆಗಳು ಅದರೊಂದಿಗಿನ ಸಾಮಾಜಿಕ ಸುಧಾರಣೆ. ಅವಿದ್ಯಾವಂತರಿಂದ ವಿದ್ಯಾವಂತರವರೆವಿಗೂ ತಮ್ಮದೇಯಾದ ಸಾಮಾಜಿಕ, ಧಾರ್ಮಿಕವಾಗಿ ಜೀವನಕ್ರಮದ ಬಗೆಗಿನ ಕಾಳಜಿಯ ಅಭಿವ್ಯಕ್ತಿಯು ಮುಕ್ತವಾಗಿ ನಡೆದದ್ದಾಗಿದೆ. ಸಮಾಜ ಸುಧಾರಣೆಯು ಮುಖ್ಯ ಆಶಯವಾಗಿ ವಚನಗಳು ರಚನೆಯಾದರೂ ಅದರೊಂದಿಗಿನ ಸಾಹಿತ್ಯಿಕ ಅಂಶಗಳು ಉಪೋತ್ಪನ್ನವಾಗಿ ಹೊಂದಿ ವಚನಗಳು ರಚಿಸಲ್ಪಟ್ಟವು. ಆ ಚಳುವಳಿಯಲ್ಲಿನ ‘ಕಂಭದ ಮಾರಿತಂದೆ’ ಎಂಬ ವಚನಕಾರನ ಒಂದು ವಚನದ ವಿವೇಚನೆ ಪ್ರಸ್ತುತ ಲೇಖನದ ಉದ್ದೇಶವಾಗಿದೆ. ಬಸವಣ್ಣನವರು ಪುರಾತನ ವಚನಕಾರರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಅವರಲ್ಲಿ ಕಂಭದ ಮಾರಿತಂದೆಯೂ ಒಬ್ಬ. ಉಳಿದಂತೆ ಕಿನ್ನರಿ ಬೊಮ್ಮಣ್ಣ, ತೆಲಗು ಜೊಮ್ಮಯ್ಯ, ತಂಗಟೂರು ಮಾರಯ್ಯ, ಮಾದಾರಚೆನ್ನಯ್ಯ ಇತರರು ಇದ್ದಾರೆ. ವಿಶೇಷವೆಂದರೆ ‘ಮಾರಿತಂದೆ’ ಹೆಸರಿನ ಎಂಟು ಜನ ವಚನಕಾರರು ಇರುವರೆಂದು ತಿಳಿದುಬಂದಿದೆ.೧ ಕವಿಚರಿತಾಕಾರರು ಅನುಬಂಧದಲ್ಲಿಯೂ೨ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಪೀಠಿಕೆಗಳು ಲೇಖನಗಳು (ಕೆಲವು ವಚನಕಾರರು) ಕೃತಿಗಳಲ್ಲಿ ಮಾರಿತಂದೆಯ ಬಗೆಗೆ ಗಮನಸೆಳೆದಿದ್ದಾರೆ.೩ ಕಂಭದ ಮಾರಿತಂದೆಯು ಬೆಸ್ತರ ಜಾತಿಗೆ ಸೇರಿದವನಾಗಿದ್ದು, ಕ್ರಿ.ಶ. ೧೧೬೫ರಲ್ಲಿ ಬಸವಣ್ಣನವರ ಸಮಕಾಲೀನನಾಗಿದ್ದನೆಂದು ಹೇಳಿದ್ದಾರೆ. ಕಂಭದ ಮಾರಿತಂದೆಯು ವಚನ ಚಳುವಳಿಯನ್ನು ಗ್ರಹಿಸಿರುವ ರೀತಿಯೇ ಬೆರಗಾಗಿಸುತ್ತದೆ. ಕಂಭದ ಮಾರಿತಂದೆಯ ಅಂಕಿತನಾಮ ‘ಕದಂಬ ಲಿಂಗ’. ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ೪ ಪ್ರಕೃತ ವಚನವನ್ನು ಕವಿಚರಿತಾಕಾರರು ಮತ್ತು ಡಿ. ಎಲ್. ಎನ್ ಬೇರೆಯದೇ ರೀತಿಯ ವಿನ್ಯಾಸದಲ್ಲಿ ಮತ್ತು ಅಲ್ಪ ವಿರಾಮ ಚಿಹ್ನೆಗಳನ್ನಿಟ್ಟು ಕೊಟ್ಟಿದ್ದಾರೆ. ಮತ್ತು ಪಠ್ಯವು ಎರಡೂ ಕೃತಿಗಳಲ್ಲಿ ಸಮಾನವಾಗಿ ಬಂದಿದೆ.೫ ನಡುಗನ್ನಡ ಭಾಷಾರಚನೆಯ ಮುಖ್ಯ ಅಂಶವಾದ ಶಿಥಿಲದ್ವಿತ್ವವನ್ನು ಮತ್ತು ಶಕಟರೇಫೆಯನ್ನು ಕಲಬುರ್ಗಿಯವರು ಕೈ ಬಿಟ್ಟು ಸಂಪಾದಿಸಿದ್ದಾರೆ. ವಚನಸಾಹಿತ್ಯದ ಕಾವ್ಯಸೌಂದರ್ಯ, ಆಧ್ಯಾತ್ಮಿಕ ಸಾಧನೆ ಮತ್ತು ಸಾಮಾಜಿಕ ಔನ್ನತ್ಯದ ಬಗೆಗೆ ಸಮಾಜದಿಂದ ಬಹಿಷ್ಕೃತನೊಬ್ಬ ಬರೆದ ಸಾರ್ವಕಾಲಿಕ ಕಲಾತ್ಮಕ ವ್ಯಾಖ್ಯಾನವೇ ಪ್ರಸ್ತುತ ವಚನವಾಗಿದೆ. ಹನ್ನೇರಡನೆ ಶತಮಾನದ ವಚನ ಚಳುವಳಿಯು ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ, ರಾಜಪ್ರಭುತ್ವದ ವಿರುದ್ಧದ ನೇರ ಧ್ವನಿಯಾಗಿದೆ. ಪ್ರಭುತ್ವಕ್ಕೇ ಪ್ರಭುಸಂಹಿತೆಯಂತೆಯೂ, ಸಮಾಜದ ಜನರಿಗೆ ಮಿತ್ರಸಂಹಿತೆಯಂತೆಯೂ, ವೈಯುಕ್ತಿಕ ಆಧ್ಯಾತ್ಮಿಕ ಉನ್ನತಿಗೆ ಕಾಂತಾಸಂಹಿತೆಯಂತೆಯೂ ಕೆಲಸಮಾಡಿದೆ. ರಾಜರ ದಬ್ಬಾಳಿಕೆ, ದೌರ್ಜನ್ಯ ಮೇಲ್ವರ್ಣ ವರ್ಗಗಳ ಕಂದಾಚಾರ-ಧಾರ್ಮಿಕ ಹಿಡಿತಗಳು ಸಾಮಾನ್ಯ ಜನರನ್ನು ಅತಿಯಾಗಿ ಬಹಿಷ್ಕೃತರನ್ನಾಗಿಸುತ್ತಾ ಕಂದಕವನ್ನು ಸೃಷ್ಠಿಸಿತ್ತು. ಅವು ‘ಘೋರಾರಣ್ಯ’ ಆಗಿತ್ತೆಂಬುದನ್ನು ಮೊದಲನೆಯಸಾಲು ಪ್ರತಿನಧಿಸುತ್ತದೆ. ಘೋರಾರಣ್ಯ ಸ್ಥಿತಿಯ ಸಮಾಜದಲ್ಲಿ ಅಭಿವ್ಯಕ್ತಿಯು ಮಹಾಕಾವ್ಯಗಳ ರೂಪದಲ್ಲಿ ರಚನೆಯಾಗುತ್ತಿದ್ದು ಅವು ಪಂಡಿತರಿಗಾಗಿದ್ದುದು ಎಂಬುದು ತಿಳಿದೇ ಇದೆ. ಅವುಗಳ ಪ್ರತಿಯಾಗಿ ಸರಳವಾದ ಮಾತು ಮನಸ್ಸಿನ ಸಮರೂಪಿಯ ಚಿತ್ತದಲ್ಲಿ ಹೊರಹಾಕಿದ ಮಾತೇ ‘ವಚನ’ ಗಳಾಗಿವೆ. ಅವು ಒಬ್ಬ ವಚನಕಾರನಿಂದ ಮತ್ತೊಬ್ಬ ವಚನಕಾರನಿಗೆ ಭಿನ್ನವಾಗುತ್ತಾ, ಅನುಭವದ ಪರಿದಿಯಲ್ಲಿ ವಿಸ್ತರಣೆ ಹಾಗು ವಿಭಿನ್ನತೆ ಹೊಂದಿದೆ. ಕಲಾತ್ಮಕತೆಯ ದೃಷ್ಠಿಯಿಂದಂತೂ ಅದ್ಭುತವಾಗಿದೆ. ಅದೇ ಎರಡನೆಯ ಸಾಲು ‘ಆಡುವ ನವಿಲು’ ನ್ನು ಪ್ರತಿನಿಧಿಸುತ್ತದೆ. ಕಲಾತ್ಮಕತೆ-ಸೌಂದರ್ಯ ಎಂಬುದು ಅಂತರಂಗದ ದೃಷ್ಠಿಯಿಂದಲೇ ಹೊರತು ಬಾಹ್ಯ ನೋಟದಿಂದಲ್ಲ. ಬಾಹ್ಯದಿಂದ ಸೌಂದರ್ಯವನ್ನು ನೋಡಿದರೂ ಅದರ ನಿಜವಾದ ಸಾರ್ಥಕ್ಯತೆಯು ಅಂತರಂಗದಲ್ಲೇ ಇರುವುದು. ಸೌಂದರ್ಯವು ಆತ್ಮದ ಬಿಡುಗಡೆಯನ್ನು ಪ್ರತಿಕ್ಷಣವೂ ಮಾಡುತ್ತಿರುತ್ತದೆ. ಇದರಿಂದ ಕುರೂಪದಲ್ಲಿ- ಸುರೂಪಿಯನ್ನು, ಸುರೂಪಿಯಲ್ಲಿ- ಭವ್ಯತೆಯನ್ನು ಕಾಣಲು ಸಹಾಯಕವಾದ್ದಾಗಿದೆ. ಈ ‘ಘೋರಾರಣ್ಯದಲ್ಲಿಯೂ ‘ನವಿಲಿನ ನರ್ತನ’ವೂ ಆತ್ಮವನ್ನು ಬಿಡುಗಡೆಗೊಳಿಸುವ ‘ಹಾರುವ ಹಂಸೆ’ಯಾಗಿರುವ ವಚನಸಾಹಿತ್ಯದ ಆಧ್ಯಾತ್ಮಿಕ ಔನ್ನತ್ಯದ ಸ್ಥಿತಿಯನ್ನು ಮೂರನೆಯ ಸಾಲು ಪ್ರತಿನಿಧಿಸುತ್ತದೆ.(ಹಂಸೆಯು ಹಾರಲಾರದು ಎಂಬುದು ತಿಳಿದಿದ್ದರು ಅಧ್ಯಾತ್ಮದ ಪರಿಭಾಷೆಯಲ್ಲಿ ಜೀವವು ತಿಳುವಳಿಕೆ ಹೊಂದಿ ಮೇಲೆಹಾರುವ, ಬಿಡುಗಡೆ ಪಡೆಯುವ ಕ್ರಿಯೆಯನ್ನ ತಿಳಿಸುತ್ತದೆ. ) ಬಸವಣ್ಣನವರ ಆದಿಯಾಗಿ ಸಾಮಾಜಿಕ ಜಾಗೃತಿಯು, ಅಲ್ಲಮನ ಮುಂದಾಳತ್ವದಲ್ಲಿ ತಾತ್ವಿಕ ಚಿಂತನೆಯೂ, ಚೆನ್ನಬಸವಣ್ಣನ ಆದಿಯಾಗಿ ಧಾರ್ಮಿಕ ವೀರಶೈವ ಚಿಂತನೆಯೂ ಬೆಳೆದು ಅದನ್ನೊಂದು ವಿಶ್ವಧರ್ಮವಾಗಿ ರೂಪಿಸಿದೆ. ಇವೆಲ್ಲವನ್ನು ಸೂಕ್ಷö್ಮವಾಗಿ ಸಮಾಜದ ಒಳಗಡೆ ಇದ್ದು ಇಲ್ಲದಂತಿದ್ದ ಕಂಬದ ಮಾರಿತಂದೆಯು ಈ ಮೂರು ಪ್ರಮುಖ ವ್ಯಕ್ತಿಗಳಲ್ಲಿ ಯಾರನ್ನು ‘ಕೋಳಿ’ ಎಂದು ಭಾವಿಸಿದ್ದನೆಂದು ನಿಖರವಾಗಿ ಹೇಳುವುದು ಕಷ್ಟವಾದರೂ ಈ ಮೂವರು ಕೋಳಿಯೋಪಾದಿಯಲ್ಲಿ ಕೂಗಿ-ಕೂಗಿ ಬೆಳಕನ್ನು ಕಂಡು ಎಲ್ಲರಿಗೂ ಅದನ್ನು ಕಾಣಿಸುವ ಹಂಬಲದಿಂದ ಮಧ್ಯಕಾಲೀನ ಸಮಾಜದಲ್ಲಿ ಕಾರ್ಯವನ್ನು ನಿರ್ವಹಿಸಿದವರೇ, ಅದನ್ನು ನಾಲ್ಕನೆ ಸಾಲು ಪ್ರತಿನಿಧಿಸುತ್ತದೆ. ಒಟ್ಟಾರೆಯಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆಂತರಿಕವಾಗಿ ಕಲಾತ್ಮಕವಾಗಿ ಬಸವಾದಿ ಪ್ರಮಥರ ಮುಂದಾಳತ್ವದಲ್ಲಿ ನಡೆದ ಸಾಮಾಜಿಕ ಬದಲಾವಣೆಯ ಬೃಹತ್ ಚಳುವಳಿಯು ಸಾಮಾಜಿಕ ಹೊರತಳ್ಳುವಿಕೆಗೆ ಒಳಗಾಗಿದ್ದ, ಬೆಸ್ತರ ಜಾತಿಗೆ ಸೇರಿದ ಮಾರಿತಂದೆಯು ಪರಿಭಾವಿಸುವ ರೀತಿಯು ಅದ್ಭುತವಾಗಿದೆ. ಇದು ವಚನಸಾಹಿತ್ಯ ಚಳುವಳಿಯನ್ನು ಅತೀ ಸಶಕ್ತವಾಗಿ ವ್ಯಾಖ್ಯಾನ ಮಾಡಿರುವುದು ಎಂದರೆ ಅತಿಶಯೋಕ್ತಿ ಆಗಲಾರದು. ‘ಹಾರುವ ಹಂಸೆ’ ಎಂಬ ಪ್ರತಿಮೆಯು ಅಲ್ಲಮನಿಂದ ಬಂದಿದ್ದೂ ಆಗಿರಬಹುದು, ಇಲ್ಲವೇ ಅಲ್ಲಮನ ವಚನಕ್ಕೇ ಪ್ರೇರಣೆ ನೀಡಿದುದೂ ಆಗಿರಬಹುದು. ಇದು ಅಲ್ಲಮ ಪ್ರಭುವೇ ಹೇಳುವಂತೆ ‘ನಿಂದ ಹೆಜ್ಜೆ’ ಯನ್ನು ಅರಿಯಲು ‘ಹಿಂದಣ ಹೆಜ್ಜೆ’ ಯನ್ನು ಮೌಲಿಕವಾಗಿ ನೋಡಿರುವ ಉನ್ನತಮಟ್ಟದ ವೈಚಾರಿಕ ಮತ್ತು ಕಲಾತ್ಮಕತೆಯು ಮಾರಿತಂದೆಯಲ್ಲಿರುವುದನ್ನು ತಿಳಿಸುತ್ತದೆ. ಭಾಷೆಯು ಸಂವಹನದ ಮೊದಲ ಮತ್ತು ಮೂಲಭೂತವಾದ ಮಾಧ್ಯಮವಾಗಿರುವುದರಿಂದ ಮತ್ತು ‘ವಚನ’ ವೆಂಬ ಸಾಹಿತ್ಯಿಕ ಪ್ರಕಾರವೂ ಮಾತೇ ಆಗಿರುವುದರಿಂದ ಭಾಷಿಕವಾಗಿ ನೋಡುವುದಾದರೆ- ‘ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ’ ಎಂಬ ಸಾಲು ಸಾರ್ವಕಾಲಿಕ ಸಮಾಜದ ಸ್ಥಿತಿಯನ್ನು ಹೇಳುತ್ತಿದೆ. ‘ಹೋಗುತ್ತಿರಲಾಗಿ’ ಎಂಬುದು ವರ್ತಮಾನ ಕ್ರಿಯಾಪದವಾಗಿದ್ದು ಎಂದು ಈ ವಚನವನ್ನು ಓದಿದರೂ, ಯಾವ ಸ್ಥಳದಲ್ಲಿ ಓದಿದರೂ ಪ್ರಸ್ತುತಗೊಳ್ಳುತ್ತಾ ಸಾಗುತ್ತದೆ. ‘ಕಂಡು’ ಎಂಬುದು ಭೂತಕಾಲ ಪದವಾಗಿದ್ದು ಓದುಗನಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಲೇ, ಇಂದಿನ ಸಾಮಾಜಿಕ ಮತ್ತು ಕಾವ್ಯದ ವಿವೇಚನೆ ಮಾಡುವ ಹಾದಿಯನ್ನು ತೆರೆಯುತ್ತದೆ. ಬರೆದಿದ್ದೆಲ್ಲವೂ ಕಾವ್ಯವಾಗಬೇಕೆಂಬ ಹುಚ್ಚು ಹಠದಲ್ಲಿರುವಾಗ ‘ನವಿಲಿ’ನ ಕಲಾತ್ಮಕತೆ, ನರ್ತನವಿರದ, ಪ್ರಜ್ಞೆ – ಆತ್ಮದ ನಿರಸÀನದೊಂದಿಗೆ ಪ್ರಾರಂಭವಾಗುವ ‘ಹಾರುವ ಹಂಸೆ’ ಯ ಬಗೆಗೆ ಕೂತುಹಲವಿರದ ಅದನ್ನರಿಯದ ಸ್ಥಿತಿಯು ಇಂದು ಇರುವಾಗ ಮತ್ತೆ ಮತ್ತೆ ಬಿಡುಗಡೆಗೆ ಮಾರಿತಂದೆ ಕರೆಕೊಟ್ಟಂತೆ ಅನಿಸುತ್ತದೆ. ಕಾವ್ಯದ ಕಾರ್ಯ ಎಚ್ಚರಿಸಬೇಕಾಗಿರುವುದರಿಂದ, ವೈಯಕ್ತಿಕ ಬಿಡುಗಡೆಯೊಂದಿಗೆ ಸಾಮಾಜಿಕ ಬಿಡುಗಡೆಯು ಕಾವ್ಯದ ಕಾರ್ಯವಾಗಿರುವುದರಿಂದ ‘ಕೂಗುವ ಕೋಳಿ’ಯು ಹನ್ನೇರಡನೆ ಶತಮಾನದಲ್ಲಿ ಸಾಧ್ಯವಾಗಿದ್ದರಿಂದ ಮಾರಿತಂದೆಯು ‘ಕಂಡು’ ಎಂಬ ನಿಖರ ಕ್ರಿಯಾಪದವನ್ನು ಬಳಸಿರುವುದು ಔಚಿತ್ಯವಾಗಿದೆ. ಇಂದಿನ ಸಾಹಿತ್ಯಕ ಮತ್ತು ಕಾವ್ಯದ ಸ್ಥಿತಿಯನ್ನು ಪ್ರಶ್ನಿಸುವಂತೆ ಅಥವಾ ಅನುಮಾನದಿಂದ ನೊಡುವಂತೆ ಈ ವಚನ ಮಾಡುತ್ತದೆ. ‘ನವಿಲು’ ‘ಹಂಸ’ ‘ಕೋಳಿ’ ಯ ರೂಪಕಗಳು ಮತ್ತು ಅದರ ಕ್ರಿಯೆಗಳು ಒಂದು ಇಚ್ಚಾಶಕ್ತಿಯ ಜನಸಮೂಹದಿಂದ ಜರುಗಿದಾಗ ಉಂಟಾಗುವ ಬೆಳಕು ದಾರಿತೋರುವುದೇ ಪ್ರಥಮೋದ್ದೇಶವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಮಾರಿತಂದೆಯ ‘ಕದಂಬಲಿಂಗ’ ವೂ, ಬಸವಣ್ಣನವರ ‘ಕೂಡಲ ಸಂಗಮದೇವ’ ನೂ, ಅಲ್ಲಮನ ‘ಗುಹೇಶ್ವರ’ ನೂ ಕಾಣುತ್ತಾನೆಂದರೆ ಅತಿಶಯೋಕ್ತಿ ಎನಿಸಲಾರದು. ಹೀಗೆ ವಚನವೆಂಬ ಪ್ರಕಾರವು ಮೇಲ್ನೋಟಕ್ಕೆ ಕಂಡರೂ ತನ್ನೊಡಲಿನಲ್ಲಿ ಕಾಲಾತೀತವಾದ ಮಹತ್ತಿನ ಬಗೆಗೆ ಚಲನೆಯನ್ನು ಹೊಂದುತ್ತಾ ಆತ್ಮದ ಮತ್ತು ಸಮಾಜದ ಉನ್ನತಿಯನ್ನು ಬಯಸುತ್ತಲೇ ಸಾರ್ವಕಾಲೀನವಾಗಿ ಪ್ರಸ್ತುತವಾಗುತ್ತಿರುತ್ತದೆ. ಅಡಿಟಿಪ್ಪಣಿಗಳು ೦೧. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೪ (೧೯೭೧) ( ಕಂಭದ ಮಾರಿತಂದೆ, ಸತ್ತಿಗೆ ಕಾಯಕದ ಮಾರಿತಂದೆ, ಕನ್ನದ ಮಾರಿತಂದೆ, ಕೂಗಿನ ಮಾರಿತಂದೆ, ನಗೆಯ ಮಾರಿತಂದೆ, ಅರಿವಿನ ಮಾರಿತಂದೆ, ವiನಸಂದ ಮಾರಿತಂದೆ, ಗಾವುದಿ ಮಾರಿತಂದೆ.) ೦೨. ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ (೧೯೨೪) ೦೩. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ (೧೯೭೧) ೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವ ಸಂಖ್ಯೆ ೦೬. ಪು ೧೧೯೭ (೨೦೧೬) ೦೫. ಮಹಾಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾಱುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದೆ ಕದಂಬಲಿಂಗದಲ್ಲಿಗೆ ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ ಮತ್ತು ೪೫೮ ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ ************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.


