ಕವಿತೆ
ನಾಗರಾಜ ಹರಪನಹಳ್ಳಿ
ತಲೆಗೂದಲ ಮುದ್ದಿಸಬೇಕು
ಅವುಗಳ ಒಂದೊಂದೇ ಎಣೆಸುತ
ಪ್ರೀತಿಸಬೇಕು
ನಿನಗೆ ಊಹಿಸಲು ಅಸಾಧ್ಯ
ಉಸಿರಲ್ಲಿ ಹೆಸರು ಬೆರೆಸುವ
ಕಲೆ ನನಗೆ ಮಾತ್ರ ಗೊತ್ತು
ಪ್ರೀತಿ ಅಂದರೆ ಹುಡುಗಾಟವಲ್ಲ
ಅದು ಕಣ್ಬೆಳಕು
ಹಾಗಾಗಿ
ಪ್ರತಿನೋಟದಲ್ಲಿ ನನ್ನ ಬಿಂಬ
ದೂರ ತಳ್ಳಲಾಗದು ಒಲವು
ಅದು ಹಠಮಾರಿ
ನಿನ್ನ ತುಟಿಗಳ ಮೇಲೆ
ನಿನ್ನಿನಿಯದೇ ಹೆಸರು
ಯಾರು ಏನೇ ಹೇಳಲಿ
ಎಷ್ಟೇ ಹತ್ತಿರದವರಿರಲಿ
ಪ್ರೇಮದ ಮುಂದೆ
ಅವು ನಿಲ್ಲಲಾರವು
ಹೃದಯದ ಬಡಿತವೇ ನಿಲ್ಲುವ
ಕ್ಷಣ ಬಂದರೂ
ಕೊನೆಯಲ್ಲಿ ನೆನಪಾಗುವುದು
ಇನಿಯ ದನಿಯೇ
ಒಲವು ಮಳೆ
ಅದನ್ನೆಂದೂ ಭೂಮಿ ನಿರಾಕರಿಸದು
ನದಿಯ ಎಷ್ಟೇ ಹಿಡಿದಿಟ್ಟರು ಅದರ ಚಲನೆ ಕಡಲಕಡೆಗೆ
ನೀ ನಿನ್ನ ಮನಸ ಜೊತೆ ಮಾತಾಡುವುದೇ ಇನಿಯ
ಎದುರಿಟ್ಟು
ಅದೇ ಬದುಕಿನ ಗುಟ್ಟು
ಮನಸು ಬಂಡೇಳುತಿದೆ
ನದಿಗೆ ಕಟ್ಟಿದ ಕಟ್ಟುಪಾಡುಗಳ
ಮುರಿಯಲು
ತಲೆಯ ಮುಡಿ ಸಿಕ್ಕುಗಳ
ಹೆಣಿಗೆಯಿಂದ ಬಿಡಿಸಿದಂತೆ
ಬಂಧನಗಳ ಕಳಚಿ
ಇನಿದಾರಿಯ ಕಡೆ ನಡೆಯಲು
ಅಕ್ಕ ಕದಳಿಯ ಕಡೆಗೆ ನಡೆದಂತೆ
ಮಾತಾಡು ; ಎದೆಬಿಚ್ಚಿ ಮಾತಾಡು
ಮನಕೆ ಸಮಧಾನವಾಗುವತನಕ
ಭವ ಬಂಧನದ ಚಾಡಿ ರಾಕ್ಷಸರ ಮಾತಿನಲಗಿನಿಂದ ಇರಿದು ಹಾಕು
ಆ ರಕ್ತದಲ್ಲಿ ಪ್ರೇಮದ ಓಘ
ಜಗಕೆ ತಿಳಿಯಲಿ
ಪ್ರೇಮ ವ್ಯಭಿಚಾರವಲ್ಲ
ಅದು ಬೆಳಕೆಂದು
ಒಲವೇ ಬಂದು ಬಿಡು
ನದಿಯಾಗಿ, ಸುಳಿವಗಾಳಿಯಾಗಿ,ಪ್ರೇಮದ ಕಡಲಾಗಿ
**********************************************
ಎಳೆ ಎಳೆಯಾದ ನಿವೇದನೆ
ಒಳ್ಳೆ ಭಾವನೆ
ತುಂಬಾ ಅರ್ಥವತ್ತಾಗಿದೆ ಕವಿತೆ ಪ್ರೀತಿಸುವವರಿಗೆ ಧೈರ್ಯ ತುಂಬುವ ಕವಿತೆ ನಿಜ ಪ್ರೀತಿಯೇ ಬೆಳಕು ಪ್ರೀತಿಯೇ ದೇವರು
“ಯಾವ ಪ್ರೀತಿಯೂ ಅನೈತಿಕವಲ್ಲ ” ಸಂತೋಷ ಕುಮಾರ ಮೆಹಂದಳೆ ಯವರ ಮಾತು ನೆನಪಿಗೆ ಬರುತ್ತದೆ ಪ್ರೀತಿ ವ್ಯಭಿಚಾರ ವಲ್ಲ ಎಂಬುದನ್ನು ಅರುಹುವ ಸಲುವಾಗಿಯೇ ರಾಧಾ ಕೃಷ್ಣ ರೂಪಕ ವನ್ನು ಜನ ಮಾನಸಕ್ಕೆ ತರಲಾಗಿದೆಯೇನೋ!
ಸುಂದರ ಭಾವಗಳ ಕವಿತೆ. ಚೆನ್ನಾಗಿದೆ.
ಹಿತವಾದ ಭಾವ…ಸೂಪರ್ ಬ್ರದರ್