ಧಾರವಾಡದ ಹೇಮಾಮಾಲಿನಿ

ಸಣ್ಣ ಕಥೆ

ಬಸವರಾಜ ಹೂಗಾರ

ಆಕೆ ಒಡೆದ ಪ್ರತಿಮೆಯಂತಿದ್ದಳು. ಬಿದ್ದ ಪ್ರತಿಮೆಯ ಯಾವುದೇ ಚೂರಾದ ಸಂಗತಿಯನ್ನು ಎತ್ತಿಕೊಂಡರೂ ಅಲ್ಲಿಂದ ಬಿಂಬಗಳು ಕಾಣಿಸುತ್ತಿದ್ದವು . ಆಕೆ ಹೆಚ್ಚು ಪ್ರೇಮದ ಕುರಿತು ಮಾತನಾಡುತ್ತಿದ್ದಳು ಆಕೆಯ ಡ್ರೆಸ್ಸಿನದೇ ಒಂದು ವಿಚಿತ್ರ ಡಿಸೈನ್ .ಕಟ್ಟಿಕೊಂಡ ಬಣ್ಣದ ಬಟ್ಟೆಯ ತುಣುಕುಗಳು ,ಬೊಚ್ಚು ಬಾಯಿ ,ಅರ್ಧ ಗೌನೊ ,ಬಣ್ಣದ ಗಗ್ಗರಿಯನ್ನೊ ಉಟ್ಟುಕೊಂಡು ಬಗಲಿಗೆ ಜೋಳಿಗೆ ಏರಿಸಿ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾ ಕೆಲವು ಸಾರಿ ದಿವ್ಯ ಮೌನ ವಹಿಸುತ್ತಾ ಚಿಂದಿ ಆಯುತ್ತಿದ್ದರೆ, ಅದು ಧಾರವಾಡ ಗೊತ್ತಿದ್ದವರಾಗಿದ್ದರೆ‌  ಖಂಡಿತ  ಆಕೆ ಹೇಮಾಮಾಲಿನಿ.   

            ಬಾಸೆಲ್ ಮಿಷನ್ ಸ್ಕೂಲ್ ರಸ್ತೆಯಲ್ಲಿಯೋ, ಅಥವಾ ಎಲ್ಐಸಿ ಮುಂದೆಯೊ ಆಕೆ ನಡೆದು ಹೋಗುತ್ತಿದ್ದರೆ ನೋಡುವ ಹುಡುಗರಿಗೆ ತಮಾಷೆ, ಹುಡುಗರ ಹಾಸ್ಟೆಲ್ ಸುತ್ತಮುತ್ತ ಆಕೆ ಬಂದರೆ ಆಕೆಯ ಬಾಯಲ್ಲಿ ಬೈಗುಳ ಕೇಳಬೇಕಿತ್ತು . ಸ್ವರ್ಗಕ್ಕೆ ಮೂರೇ ಗೇಣು. ಅಷ್ಟು ಚಂದದ ಬೈಗುಳಗಳು.ಹುಡುಗ-ಹುಡುಗಿಯರ ಕುರಿತಾಗಿ ಆಕೆ ಬೈಯುತ್ತಿದ್ದಳು.  ಯಾರಿಗೆ  ಬೈಯುತ್ತಾಳೊ? ಯಾಕಾಗಿ ಬೈಯುತ್ತಾಳೊ? ಒಬ್ಬರಿಗೂ ಅರ್ಥವಾಗುತ್ತಿರಲಿಲ್ಲ .ಹಲಕಟ್ಟ ಭಾಷೆಯಲ್ಲಿ ಆಕೆ ಬೈಯುತ್ತಿದ್ದರೆ ನೀವು  ತಕ್ಷಣವೇ ಚೆನ್ನಾಗಿ ಮಾತನಾಡಿಸಿದರೆ ಸಾಕು ಪ್ರೀತಿಯ ಹಾದಿಗೆ ಬರುತ್ತಿದ್ದಳು .ನಾವು ಎಷ್ಟೋ ಸಾರಿ ಆಕೆಯನ್ನು ‘ಏನ್ ಮೇಡಂ ,ತುಂಬ ಸಿಟ್ಟಾಗೆದ್ದೀರಿ? ಎಂದರೆ ಆಕೆ ಗೆಳತಿ ಗೆಳೆಯನಿಗೆ ಹೇಳುವ ಅಕ್ಕರೆಯ ಮಾತುಗಳಂತೆ ತನ್ನ ಕಾಡಿಸಿದವರ, ತಾನು ಅವರನ್ನು ಸೋಲಿಸಿದ ಕಥೆ ಹೇಳುತ್ತಿದ್ದಳು .ಅದಕ್ಕೆ ಆರಂಭ ಅಂತ್ಯ ಇರುತ್ತಿರಲಿಲ್ಲ.ಚಿಂದಿ‌ ಆಯುವಾಗ ನೋಟುಗಳು ಸಿಕ್ಕ ಕತೆ, ತಾನು ಬೆಳಗ್ಗೆ ನಾಷ್ಟಾ ಮಾಡಿದ ಕತೆ ,ಒಬ್ಬರ ಹತ್ತಿರ ಇಟ್ಟ ಗಂಟಿನ ಕತೆ,ಯಾವುದೋ ಹುಡುಗಿ ಇನ್ನಾವುದೋ ಹುಡುಗನಿಗೆ ಮೋಸ ಮಾಡಿದ ಕತೆ ,ಕೈಕೊಟ್ಟು ಹೋದರೂ ಪ್ರಾಮಾಣಿಕವಾಗಿ ನಡಕೊಂಡ ವ್ಯಥೆ, ಆಕೆ  ಲೊಚಗುಟ್ಟುತ್ತ ಮುಂದೆ ಹೋಗುತ್ತಿದ್ದರೆ ಆಕೆಯನ್ನು ನೋಡಿದ ಯಾರಾದರೂ ಇದು ಪ್ರೇಮದ ಕೇಸೆ ಎನ್ನುತ್ತಿದ್ದರು. ಆಕೆಯನ್ನು ಸಿಟ್ಟಿಗೆಬ್ಬಿಸಿ ಜೀವನದಲ್ಲಿ ಯಾರಿಂದಲೂ ಬೈಸಿಕೊಳ್ಳದವರು ಹಲಕಟ್ಟ ಬೈಗುಳ ಬೈಸಿಕೊಂಡ ದೊಡ್ಡಪಡೆಯೇ ಕರ್ನಾಟಕದಲ್ಲಿ ಇದೆ. ಹಾದಿಯಲ್ಲಿ ಹೊರಟರೆ ‘ನೋಡಲೇ ಅಲ್ಲಿ ,ಹೇಮಾ ಬರಕತ್ತ್ಯಾಳ ಎನ್ನುವವರೆ.  ಆಕೆ ಇಂಗ್ಲಿಷ್ ಮಾತನಾಡುತ್ತಿದ್ದಳು. ಧಾರವಾಡ ಆಧುನಿಕತೆಗೆ ಕಣ್ಣು ತೆರೆಯುತ್ತಿರುವಾಗಲೇ ಧಾರವಾಡದ ಆಧುನಿಕ ಹೆಂಗಸರಂತಿದ್ದಳು.ಕೇಳುಗರಿಗೆ ಕರುಣೆಯ ಲೆಕ್ಕದಲ್ಲಿ ಹುಷಾರಿನ ಪಾಠ ಹೇಳುತ್ತಿದ್ದಳು .ವಯಸ್ಸಿನ ಹೆಂಗಸಾಗಿದ್ದರೂ ಕಾಲೇಜಿನ ಹುಡುಗ-ಹುಡುಗಿಯರಿಗೆ ಯಾಕೆ   ಆಕರ್ಷಣೀಯ ಕೇಂದ್ರವಾಗಿದ್ದಳು?ಕಳೆದುಕೊಂಡಿದ್ದನ್ನ ಹುಡುಕುತ್ತಿದ್ದಳೊ? ಸಿಗುವದಿಲ್ಲ‌ ಎಂದು ಗೊತ್ತಿದ್ದರೂ ಕನವರಿಸುತ್ತಿದ್ದಳೊ? ಪುರುಷರ  ದೌರ್ಜನ್ಯಕ್ಕೆ ಒಳಗಾಗಿದ್ದಳೊ?  ಆಕೆಯನ್ನು ಯಾರು ಈ ಪರಿಸ್ಥಿತಿಗೆ ತಂದಿಟ್ಟರೋ ಗೊತ್ತಿಲ್ಲ. ಆಕೆ ಯಾಕೆ ಹುಚ್ಚಿಯಾಗಿ ತಿರುಗುತ್ತಿದ್ದಾರೆ ಎನ್ನುವುದು ಬಹುತೇಕ ಧಾರವಾಡದ ಜನಕ್ಕೆ ಗೊತ್ತಿಲ್ಲ .ಧಾರವಾಡದ ಒಡೆದ ಪ್ರತಿಬಿಂಬದಂತೆ ಆಕೆ ಬದುಕಿದಳು .ಮೋಸ ಮಾಡಿದವರ  ಕ್ರೌರ್ಯದ ಗಾಯಗಳು ಆಕೆಯ ದೇಹದ ಮೇಲೆ ತುಂಬಾ ಗಾಯ ಮಾಡಿದ್ದವು .ಆ ಗಾಯದ ಗೀರುಗಳನ್ನ ಆಕೆ ಮುಟ್ಟಿಮುಟ್ಟಿ ನೋಡಿಕೊಳ್ಳುತ್ತಿದ್ದಳು .ಅದು ಕೆಲವರಿಗೆ ತಮಾಷೆಯಾಗಿತ್ತು .ಇನ್ನು ಕೆಲವರಿಗೆ ನೋವಿನ ಪರಿಭಾಷೆಯಾಗಿತ್ತು. ಆಕೆ ಭಿಕ್ಷೆ ಬೇಡಲಿಲ್ಲ .ಯಾರಿಗೂ ಜೀ ಎನ್ನಲಿಲ್ಲ.  ಆಕೆ ಎಲ್ಲಿ ಮಲಗುತ್ತಿದ್ದಳೊ?ಗೊತ್ತಿಲ್ಲ .ಪೂರ್ಣ ಹುಚ್ಚಿಯೋ ಅದೂ ಗೊತ್ತಿಲ್ಲ .ಉದ್ದೇಶಪೂರ್ವಕವಾಗಿಯೇ ಅಂತ ವ್ಯಕ್ತಿತ್ವವನ್ನು ಆವಗಾಹಿಸಿಕೊಂಡಳೋ  ಗೊತ್ತಿಲ್ಲ .ಧಾರವಾಡದಲ್ಲಿ ಓದಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾಗ ಒಂದು ಸಲ ಆಕೆ ಎಲ್ಲಿರಬಹುದೆಂದು ಹುಡುಕುತ್ತಿದ್ದೆ. ಒಂದು ಸರ್ಕಾರಿ ಆಶ್ರಮದಲ್ಲಿ ಆಕೆ ಸಿಕ್ಕಳು .ಇಳಿವಯಸ್ಸಿನವರ ಜೊತೆಗೆ ಆಕೆ ಬದುಕುತ್ತಿದ್ದಳು. ಮೊದಲಿನ ಹಾಗೆ ಆಕೆಯ ಹತ್ತಿರ ಆವೇಶವಿರಲಿಲ್ಲ. ಸಮಾಧಾನವಿತ್ತು. ಸಹಜತೆ ಇತ್ತು .ಜೊತೆಗೆ ಫೋಟೋ ತೆಗೆಸಿಕೊಂಡೆ.’ಬಾಳ ಸಂತೋಷಪಾ,ಹುಡುಕಿಕೊಂಡು ಬಂದಿಯಲ್ಲ ಅಷ್ಟೇ ಸಾಕು ,ಬಾಳ ಜನ ಅದಾರ  ನೆನಪು ಮಾಡ್ಕೋತಾರ ‘ಅಂದಳು .ನಿನ್ನ ಫ್ರೆಂಡ್ಸ್ ಗೆ ಕೇಳಿದೆ‌ ಅಂತ ಹೇಳು ಅಂದಳು. ಧಾರವಾಡವೆಂಬ ಇಡೀ ಧಾರವಾಡದ ಹುಡುಗ-ಹುಡುಗಿಯರಿಗೆ ಹೇಮಮಾಲಿನಿ ಪರಿಚಿತರೆ .ಅದು ಆಕೆಯ ನಿಜವಾದ ಹೆಸರಲ್ಲ. ವಯಸ್ಸಾದಾರೂ ಆಕೆಯನ್ನು ನೋಡಿದರೆ ಒಂದು ಕಾಲಕ್ಕೆ ಸುಂದರಿಯಾಗಿದ್ದಿರಬೇಕು ಎಂದೆನಿಸುತ್ತಿತ್ತು.ಹಳೇ ಜಮಾನಾ ಆಕೆಯನ್ನು ಆ ಹೆಸರನಿಂದ ಕರೆದಿರಬೇಕು.ದಾಟಿ ಹೋಗುವ ಕಾಲದಲ್ಲಿ ಇಂಥವರು ನಮ್ಮ ನಡುವೆ ಬಂದು ಹೋಗುತ್ತಾರೆ .ನಮ್ಮದಲ್ಲದ ದುರಂತಕ್ಕೆ ಪ್ರತಿಮೆ ಯಾಗುತ್ತಾರೆ .ಆಕೆ ಕಳೆದುಕೊಂಡ ಸಂಗತಿಗಳನ್ನು ಧಾರವಾಡದ ಬೀದಿ ಬೀದಿಯಲ್ಲಿ ಹುಡುಕುತ್ತಿದ್ದಳು. ಹುಡುಗ ಹುಡುಗಿಯರು ,ಹೆಚ್ಚಾಗಿ ನಿವೃತ್ತರು ಕಾಣುವ ಧಾರವಾಡದಲ್ಲಿ ಜಿಟಿ ಮಳೆ , ಮಿರ್ಚಿ ಬಜಿ ಚಾ , ಅಲ್ಲಲ್ಲಿ ಒಡೆದ ಹೇಮಾಮಾಲಿನಿಯ  ನೆನಪಿನ ಬಿಂಬಗಳು.ಯಾರ ಕನಸುಗಳಿಗೆ ಯಾರು ಬಣ್ಣ ಬಳಿಯುತ್ತಾರೋ? ,ಎಲ್ಲೋ ಕಳೆದುಕೊಂಡಿದ್ದನ್ನ ಇನ್ನೆಲ್ಲಿ ಹುಡುಕುತ್ತಾರೆಯೋ?ಹೇಮಾಮಾಲಿನಿ ಸತ್ತಳಂತೆ ಅಂತಾ ಸುದ್ದಿ ಗೊತ್ತಾದಾಗ ಇದೆಲ್ಲ ನೆನಪಾಯಿತು .ಹೋಗಿ ಬಾ ಹೇಮಾ ನಿನ್ನಂಥ ಲವ್ವರ್ ಗಳು ಎಷ್ಟೋ  ಜನ ಇನ್ನೂ ಧಾರವಾಡದಲ್ಲಿ ಇದ್ದಾರೆ.         

***********************

2 thoughts on “ಧಾರವಾಡದ ಹೇಮಾಮಾಲಿನಿ

  1. ಹೌದು ನಾನು ಸಹ ಹೇಮಾಮಾಲಿನಿಯನ್ನ ನೋಡಿದ್ದೀನಿ, ಅವಳದು ಲವ್ ಫೇಲ್ಯೂರ್ ಅಂತ ಹೇಳುತ್ತಿದ್ದರು…

Leave a Reply

Back To Top