ಧಾರಾವಾಹಿ ಸಂಗಾತಿ-114
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಸುಮತಿಯ ತಳಮಳ


ಮಕ್ಕಳಿಗೆ ಊಟವನ್ನು ಬಡಿಸಿ ನಂತರ ತಾನು ತಟ್ಟೆಯಲ್ಲಿ ಅನ್ನ-ಸಾರು, ಹೀರೇಕಾಯಿ ಪಲ್ಯವನ್ನು ಬಡಿಸಿಕೊಂಡು
ಅನ್ನಕ್ಕೆ ಸಾರನ್ನು ಹಾಕಿ ಕಲಸಿ ಪಲ್ಯ ಸೇರಿಸಿ ಮೂವರಿಗೂ ಒಂದೊಂದು ತುತ್ತು ತಿನಿಸಿ ತಾನು ಊಟ ಮಾಡಿದಳು. ಅಮ್ಮ ಊಟ ಮಾಡುವ ಮುನ್ನ ಅಮ್ಮನ ಕೈಯಿಂದ ಒಂದೊಂದು ತುತ್ತು ತಿನ್ನುವುದೆಂದರೆ ಮಕ್ಕಳಿಗೆ ಪಂಚಪ್ರಾಣ. ಸುಮತಿ ಮಾಡುತ್ತಿದ್ದ ಅಡುಗೆಯೂ ಅಷ್ಟೇ ರುಚಿಕರವಾಗಿರುತ್ತಿತ್ತು. ಒಮ್ಮೊಮ್ಮೆ ಮನೆಯಲ್ಲಿ ಏನೂ ಇಲ್ಲದಿದ್ದಾಗ ಒಣ ಮೆಣಸಿನಕಾಯಿಯನ್ನು ಕೆಂಡದ ಮೇಲೆ ಹಾಕಿ ಸುಟ್ಟು ಈರುಳ್ಳಿಯನ್ನು ಸಣ್ಣ ಸಣ್ಣದಾಗಿ ಹೆಚ್ಚಿ ಹುಣಸೆಹಣ್ಣನ್ನು ಸೇರಿಸಿ ಸ್ವಲ್ಪ ಉಪ್ಪು ಹಾಕಿ ಕಿವುಚಿ ಅಮ್ಮ ಮಾಡವ ಗೊಜ್ಜು ಬಹಳ ರುಚಿಕರವಾಗಿರುತ್ತದೆ ಎಂದು ಹೇಳುತ್ತಾ ಮಕ್ಕಳು ಬೆರಳುಗಳನ್ನು ಚಪ್ಪರಿಸಿ ನೆಕ್ಕುತ್ತಾ ಆಸ್ವಾದಿಸುತ್ತಿದ್ದರು. ಊಟದ ನಂತರ ಮಕ್ಕಳು ಚಾಪೆ ಹಾಸಿ ಸುಮತಿಯ ಕೈಯನ್ನು ದಿಂಬಾಗಿಸಿಕೊಂಡು ಮಲಗಿ ಅಮ್ಮ ಹೇಳುವ ಕಥೆಯನ್ನು ಕೇಳುತ್ತಾ ಮಕ್ಕಳು ನಿದ್ರೆಗೆ ಜಾರಿದರು. ಸುಮತಿ ಬೆಳಗ್ಗೆ ಬೇಗನೆ ಎದ್ದು ತಿಂಡಿ ಮಾಡಿದಳು. ಭಾನುವಾರ ಬೆಳಗ್ಗೆ ಸುಮತಿಯ ಜೊತೆ ಮೂವರು ಮಕ್ಕಳು ಶಾಲೆಗೆ ಹೊರಟರು. ಮಕ್ಕಳು ಬಂದರೆ ಸುಮತಿಗೆ ಸ್ವಲ್ಪ ನಿರಾಳವಾಗಿರುತ್ತಿತ್ತು. ತೋಟದ ಕೂಲಿ ಕೆಲಸಗಾರರ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಮಕ್ಕಳು ಅವಳಿಗೆ ನೆರವಾಗುತ್ತಿದ್ದರಿಂದ ಅಷ್ಟು ಆಯಾಸವಾಗುತ್ತಿರಲಿಲ್ಲ. ಶಾಲೆಗೆ ಹೊರಡುವ ಮುನ್ನ ಮಧ್ಯಾಹ್ನದ ಊಟಕ್ಕೆ ಬೇಕಾದ ಬುತ್ತಿ ತುಂಬಿಕೊಳ್ಳುತ್ತಿದ್ದರು. ಅಲ್ಲಿನ ಬಂಗಲೆಯ ಮೇಲ್ವಿಚಾರಕ ಬಂಗಲೆಯ ಸುತ್ತಲಿರುವ ಹಣ್ಣಿನ ಗಿಡಗಳಿಂದ ಹಣ್ಣುಗಳನ್ನು ಕಿತ್ತು ತಂದು ಕೊಡುವರು.. ಆ ಹಣ್ಣುಗಳನ್ನು ಶಾಲೆಯ ಮಕ್ಕಳಿಗೂ ಕೊಟ್ಟು ಸುಮತಿ ಮತ್ತು ಮಕ್ಕಳು ತಿನ್ನುತ್ತಿದ್ದರು.
ಸಂಜೆ ಹೊತ್ತಿಗೆ ಶಾಲೆಯಿಂದ ಹೊರಟು ಮಾತನಾಡುತ್ತಾ ಅಮ್ಮನ ಕೈಹಿಡಿದು ಮಕ್ಕಳು ಜೊತೆಗೆ ನಡೆಯುವರು. ದಾರಿ ಹೋಕರಿಗೆ ಈ ತಾಯಿ ಮಕ್ಕಳ ಬಾಂಧವ್ಯ ಕಂಡು ಸಂತಸವಾಗುತ್ತಿತ್ತು. ಸುಮತಿ ಟೀಚರಿಗೆ ಹಣ ಐಶ್ವರ್ಯ ಇಲ್ಲದಿದ್ದರೇನು, ಮಕ್ಕಳು ಆಕೆಗೆ ನೆರಳಾಗಿ ಇರುವರು ಎಂದು ಹೇಳಿಕೊಳ್ಳುತ್ತಿದ್ದರು. ಮಕ್ಕಳೊಂದಿಗೆ ಮಾತನಾಡುತ್ತಾ ನಡೆದರೆ ಸುಮತಿಗೆ ದಾರಿ ಸಾಗುವುದು ತಿಳಿಯುತ್ತಿರಲಿಲ್ಲ. ಮನೆ ತಲುಪಿದ ಮೇಲೆಯೂ ಮಕ್ಕಳು ಸುಮತಿಯ ಹಿಂದೆ ಮುಂದೆ ಸುಳಿದಾಡುತ್ತಾ ಕೀಟಲೆ ಮಾಡುತ್ತಾ ನಗಿಸುತ್ತಾ ಕಾಲ ಕಳೆಯುವರು. ಮಾರನೇ ದಿನ ಬೇಗನೆ ಎದ್ದು ಮಗಳು ಹೊರಡಲು ಅನುವಾದಳು. ವಾರಕ್ಕೊಮ್ಮೆ ಮಗಳು ಬರುವಾಗ ಎಷ್ಟು ಸಂಭ್ರಮಿಸುತ್ತಿದ್ದಳೋ ಅವಳನ್ನು ಕಳುಹಿಸಿಕೊಡುವಾಗ ಸುಮತಿಗೆ ಅಷ್ಟೇ ಸಂಕಟವಾಗುತ್ತಿತ್ತು. ಹೀಗೆ ಕೆಲವು ತಿಂಗಳುಗಳು ಕಳೆದವು. ಸುಮತಿಗೆ ಈಗ ಮೊದಲಿಗಿಂತ ಆಯಾಸ ಹೆಚ್ಚಾಗುತ್ತಿತ್ತು. ಒಂದು ದಿನ ಸುಮತಿ ಬೆಳಗಿನ ಬಸ್ಸಿನಲ್ಲಿ ಎರಡನೇ ಮಗಳು ಕೆಲಸ ಮಾಡುತ್ತಿದ್ದ ಅನಾಥಾಶ್ರಮದ ಕಡೆಗೆ ಹೊರಟಳು. ಮೂರನೇ ಮಗಳು ಬಸ್ಸು ಹತ್ತಲು ಅಮ್ಮನಿಗೆ ಸಹಾಯ ಮಾಡಿದಳು. ಸುಮತಿಯ ಬದಲಿಗೆ ಶಾಲೆಗೆ ಹೋಗಬೇಕಾಗಿದ್ದ ಕಾರಣ ಅವಳು ತಾಯಿಯೊಂದಿಗೆ ಸಕಲೇಶಪುರಕ್ಕೆ ಹೊರಡಲಿಲ್ಲ. ಒಂದು ದಿನವೂ ಶಾಲೆಯ ಕೆಲಸ ತಪ್ಪಿಸುವಂತೆ ಇರಲಿಲ್ಲ. ತಪ್ಪಿದರೆ ಎಲ್ಲಿ ಕೆಲಸ ಕೈಬಿಟ್ಟು ಹೋಗುವುದೋ ಎನ್ನುವ ಭಯ ಸುಮತಿಯನ್ನು ಸದಾ ಕಾಡುತ್ತಿತ್ತು. ವರಮಾನಕ್ಕೆ ಇದೊಂದೇ ಮಾರ್ಗವಿತ್ತು. ಎರಡನೇ ಮಗಳು ಈಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅವಳಿಗೆ ಸಿಗುವ ಸಂಬಳದಿಂದ ಮನೆಯ ಪೂರ್ತಿ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಧ್ಯವಾಗುತ್ತಿರಲಿಲ್ಲ.
ಅದೂ ಅಲ್ಲದೇ ಇತ್ತೀಚೆಗೆ ಕೆಲವು ತಿಂಗಳುಗಳಿಂದ ತಾನೇ ಅವಳು ಕೆಲಸಕ್ಕೆ ಹೋಗುತ್ತಿರುವುದು. ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾಳೆ. ಹಾಗಾಗಿ ನನ್ನ ಬದಲು ಈ ಮಗಳಾದರೂ ಶಾಲೆಗೆ ಹೋಗಲೇಬೇಕು ಎಂದು ಆಲೋಚಿಸಿ ಮೂರನೇ ಮಗಳನ್ನು ಶಾಲೆಗೆ ಹೋಗುವಂತೆ ತಿಳಿಸಿದಳು. ಸಕಲೇಶಪುರ ನನಗೆ ಗೊತ್ತಿಲ್ಲದ ಊರಲ್ಲ. ಮಗಳು ಕೆಲಸ ಮಾಡುತ್ತಿರುವ ಅನಾಥಾಶ್ರಮ ಹುಡುಕುವುದು ಕಷ್ಟವೇನಲ್ಲ ಎಂದೂ ಮಗಳಿಗೆ ತಿಳಿಸಿದಳು. ಆದರೆ ಸಕಲೇಶಪುರದ ಬಸ್ ನಿಲ್ದಾಣ ಬಂದಾಗ ಬಸ್ಸಿಂದ ಕೆಳಗಿಳಿಯಲು ಸುಮತಿ ಬಹಳ ಕಷ್ಟ ಪಡಬೇಕಾಯಿತು. ಒಂದೊಂದು ಹೆಜ್ಜೆ ಇಡುವುದೂ ಅವಳಿಗೆ ಕಷ್ಟಕರವೆನಿಸುತ್ತಿತ್ತು. ಬಸ್ ನಿಲ್ದಾಣದಿಂದ ಮಗಳು ಇರುವ ಅನಾಥಾಶ್ರಮದ ಬಳಿಗೆ ಹೋಗಲು ಹೆಚ್ಚು ದೂರವೇನೂ ಇರಲಿಲ್ಲ. ಎಂದಿಲ್ಲದ ಇಂದೇಕೋ ಅವಳ ಕಣ್ಣುಗಳಿಗೆ ಎಲ್ಲವೂ ಮಸುಕಾಗಿ ಕಾಣುತ್ತಿತ್ತು. ತಡವರಿಸುತ್ತಾ ಹೇಗೋ ಮಗಳು ವಾಸವಿದ್ದ ಅನಾಥಾಶ್ರಮದ ಬಾಗಿಲ ಮುಂದೆ ಬಂದು ನಿಂತಳು. ತಲೆ ಸುತ್ತು ಬಂದಂತೆ ಅನುಭವವಾಯಿತು. ಅಲ್ಲಿಯೇ ಮೆಟ್ಟಿಲ ಮೇಲೆ ಕುಳಿತಳು. ಸ್ವಲ್ಪ ಸುಧಾರಿಸಿದ ನಂತರ ಮೆಲ್ಲನೆ ಎದ್ದು ಬಾಗಿಲನ್ನು ತಟ್ಟಿದಳು. ಅನಾಥಾಶ್ರಮದ ಮಕ್ಕಳಲ್ಲಿ ಒಬ್ಬ ಹುಡುಗಿ ಬಂದು ಬಾಗಿಲು ತೆರೆದಳು…. ಯಾರು ನೀವು? ಯಾರು ಬೇಕಿತ್ತು ನಿಮಗೆ? ಎಂದು ಕೇಳಿದಳು. ಆ ಹುಡುಗಿಯ ಮುಖ ಸುಮತಿಗೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ತನ್ನ ಮಗಳ ಹೆಸರನ್ನು ಹೇಳಿ…”ಅವರು ಇಲ್ಲಿದ್ದಾರೆಯೇ”…. ಎಂದು ಕೇಳಿದಳು. ಒಳಗೆ ಕುಳಿತು ಆಶ್ರಮಕ್ಕೆ ಬೇಕಾದ ದಿನಸಿಗಳ ಪಟ್ಟಿಯನ್ನು ಮಾಡುತ್ತಿದ್ದ ಸುಮತಿಯ ಎರಡನೇ ಮಗಳು ಅಮ್ಮನ ಧ್ವನಿ ಕೇಳಿದಂತಾಗಿ ಎದ್ದು ಹೊರಗೆ ಬಂದಳು.
ಓಹ್!! ಅಮ್ಮ ಬಂದಿದ್ದಾಳೆ…. ಎಂದು ಹೇಳುತ್ತಾ ಕೋಣೆಯಿಂದ ಹೊರ ಬಂದ ಮಗಳ ಮುಖದಲ್ಲಿ ಮಂದಹಾಸ ಮೂಡಿತು. ಆದರೆ ಮರುಕ್ಷಣವೇ ಅವಳ ಹಣೆಯಲ್ಲಿ ಗೆರೆಗಳು ಮೂಡಿದವು. ಅಮ್ಮ ಏಕೆ ಇಷ್ಟು ಬೆಳಗ್ಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾಳೆ?
ನಾನು ಮನೆಗೆ ಹೋಗಿ ಬಂದು ಒಂದೆರಡು ದಿನಗಳಷ್ಟೇ ಆಗಿವೆ ಎಂದುಕೊಳ್ಳುತ್ತಾ ಅಚ್ಚರಿಯಿಂದ ಅಮ್ಮನನ್ನು ಒಮ್ಮೆ ನೋಡಿದಳು. ಓಡು ನಡಿಗೆಯಲ್ಲಿ ಸುಮತಿಯ ಬಳಿ ಬಂದು ಕೈಹಿಡಿದುಕೊಂಡು, … “ನಾನು ಇಲ್ಲೇ ಇರುವುದು…. ಅಮ್ಮ ಒಳಗೆ ಬಾ”…. ಎಂದಳು. ಮಗಳ ಧ್ವನಿ ಕೇಳಿ ಸುಮತಿ ಅವಳೆಡೆಗೆ ನೋಡಿದಳು. ಅವಳ ಮುಖ ಅಸ್ಪಷ್ಟವಾಗಿ ಕಂಡಿತು. ಕಣ್ಣುಗಳು ಹನಿಗೂಡಿದವು. ಮಗಳ ಕೈ ಹಿಡಿದು ತಡವರಿಸುತ್ತಾ ಅನಾಥಾಶ್ರಮದ ಒಳಗೆ ಹೆಜ್ಜೆ ಇಟ್ಟಳು. ಕುತೂಹಲದಿಂದ ಯಾರಿರಬಹುದೆಂದು ನೋಡಲು ಅನಾಥಾಶ್ರಮದ ಮಕ್ಕಳೆಲ್ಲ ಅಲ್ಲಿ ಬಂದು ಸೇರಿದರು….”ಇವರು ನನ್ನ ತಾಯಿ”…. ಎಂದು ಮಕ್ಕಳಿಗೆ ಪರಿಚಯಿಸಿದಳು. ಮಕ್ಕಳೆಲ್ಲರೂ….”ನಮಸ್ತೆ ಅಮ್ಮಾ”….ಎಂದು ಕೈ ಮುಗಿದರು. ಸುಮತಿ ಮುಗುಳ್ನಕ್ಕಳಷ್ಟೇ, ಮಾತನಾಡಲು ಅವಳಿಂದ ಸಾಧ್ಯವಾಗಲಿಲ್ಲ. ಇದನ್ನರಿತ ಮಗಳು ತನ್ನ ಕೋಣೆಯ ಕಡೆಗೆ ಅಮ್ಮನನ್ನು ಕರೆದುಕೊಂಡು ಹೋದಳು. ಸುಮತಿಯ ಕೈಗಳು ನಡುಗುತ್ತಿದ್ದವು. ಬಾಯಿ ಒಣಗಿತ್ತು. ಏನೋ ಹೇಳಲು ಮುಂದಾದಳು ಆದರೆ ಧ್ವನಿ ಗಂಟಲಿನಿಂದ ಆಚೆ ಬರಲಿಲ್ಲ. ಅಮ್ಮನ ಈ ಸ್ಥಿತಿಯನ್ನು ಕಂಡು ಮಗಳಿಗೆ ತುಂಬಾ ಗಾಬರಿಯಾಯಿತು. ಮೂರು ಬೆಂಚುಗಳನ್ನು ಸೇರಿಸಿ ಮಂಚದಂತೆ ಮಾಡಿಕೊಂಡಿದ್ದ ಹಾಸಿಯ ಮೇಲೆ ಅಮ್ಮನನ್ನು ಕುಳ್ಳಿರಿಸಿ, ಒಬ್ಬ ಹುಡುಗಿಯನ್ನು ಕರೆದು ಸ್ವಲ್ಪ ನೀರನ್ನು ತರುವಂತೆ ತಿಳಿಸಿದಳು.




