ಮಹಿಳಾ ಸಂಗಾತಿ
ಪ್ರೇಮಾ ಟಿ ಎಂ ಆರ್
ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ


ಮಹಿಳಾ ದಿನಾಚರಣೆ ಹತ್ತಿರ ಬಂದಂತೆ ಎದೆ ಮಿಸುಗುತ್ತದೆ.. ಒಂದಷ್ಟು ಭಾಷಣ ಗಾಯನ ನರ್ತನ ಪಾರ್ಟಿಗಳಲ್ಲಿಯೇ ಮುಗಿದು ಹೋಗುವ ದಿನವೇಕೋ ನೆಮ್ಮದಿ ಕೆಡಿಸುತ್ತದೆ. ಹೆಣ್ಣು ಸುಖವಾಗಿ ಬದುಕುತ್ತಿದ್ದಾಳೆ, ಯಂತ್ರಗಳ ಬಳಕೆಯಿಂದ ಅವಳ ಶ್ರಮ ಕಡಿಮೆಯಾಗಿದೆ, ಹಾಗೆ ಹೀಗೆ ಅಂತ ಉರುಹೊಡೆದ ಭಾಷಣ ಬಿಗಿವ ನಾವುಗಳು ನೋಡುವದು ನಮ್ಮ ಕಣ್ಣಳತೆಯಲ್ಲಿ ನಡೆವುದನ್ನಷ್ಟೇ .ನಿಜ ಅರ್ಬನ್ ಏರಿಯಾಗಳಲ್ಲಿ ಹೆಣ್ಣು ಆಜಾಶಕ್ಕೆ ಕೈಚಾಚಿ ಪೈಲಟ್ ಆಗಿ ಬಾಹ್ಯಾಕಾಶದಲ್ಲಿಯೂ ತನ್ನ ಕೌಶಲ್ಯ ಮೆರೆಯುವ ಮಟ್ಟಿಗೆ ಬೆಳೆದದ್ದು ಒಪ್ಪಿಕೊಳ್ಳಬೇಕಾದ ವಿಷಯವಾದರೂ, ಎಷ್ಟು ಪ್ರತಿಶತ ಎನ್ನುವದಿಲ್ಲಿ ಪ್ರಶ್ನೆ .ಇರಲಿಬಿಡಿ, ತೀರ ಹಿಂದುಳಿದ ಹಳ್ಳಿಗಳಲ್ಲಿ ಇಂದಿಗೂ ನೀ ಹೆಣ್ಣು ,ಇರುವಾಂಗೇ ಇರು, ಹೆಂಗಿರ್ಬೇಕೋ ಹಾಂಗೇ ಇರು ಎನ್ನುವ ಚೂಪು ಮೊನೆಯ ಮಾತುಗಳು ಅವಳೆದೆಯ ಚುಚ್ಚುವದು ಮಾಮೂಲು .ಹತ್ತು ದಾಟುವದೇ ತಡ ಎದೆಯ ಒಳ ಉಡುಪು ಬಿಗಿಗೊಳ್ಳತೊಡಗುತ್ತವೆ .ಬೆನ್ನು ಬಾಗಿಸಿ ಎದೆ ಹುದುಗಿಸಿ ನಡೆವಂತೆ ಮತ್ತೆ ಮತ್ತೆ ಕತ್ತಿ ಅಲುಗಿನ ಮಾತುಗಳನ್ನು ಎಳೆಕಂದಮ್ಮಗಳು ಸಹಿಸಬೇಕು .ಹೆಣ್ಣು ಬೆಳೆದಂತೆ ಅವಳು ಮನೆಯ ಮರ್ಯಾದೆಯಾಗಿ ಬದಲಾಗುವದು ವಿಪರ್ಯಾಸ . ಹೆಣ್ಣು ಕಂದಮ್ಮಗಳು ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಒಳಗಾದರೂ ಕೂಡ ಅದು ಸುದ್ದಿಯಾಗದಂತೆ ಹೆತ್ತವರೇ ಮುಖ ಮೈಮನಸ್ಸುಗಳ ಮೊಟಕಿ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಾರೆ. “ಮನೆ ಮರ್ಯಾದೆ ಕಳೆದೆಯಲ್ಲೇ ಯಾಕೆ ಹುಟ್ಟಿದೆ ನಮ್ಮ ಹೊಟ್ಟೆಯಲ್ಲಿ ” ಎಂದು ಯಾರದೋ ತಪ್ಪಿಗೆ ಅವಳ ಹುಟ್ಟನ್ನು ಹಳಿಯಲಾಗುತ್ತದೆ. ಒಳಗೊಳಗೇ ಹುದುಗಿ ಹೋಗುವ ಅಂಥ ಹೆಣ್ಣುಗಳ ಅಂತರಾತ್ಮದ ಗಾಯದ ನೋವು ಆಗದ ವೈರಿಗೂ ಬೇಡ. ಹತ್ತು ಕಳೆಯಿತೋ ಬಾಲ್ಯದ ಚೇಷ್ಟೆಗಳೆಲ್ಲ ಕಳೆದು ಹೆಣ್ಣು ಕಂದಮ್ಮಗಳು ಕಿರಿಕಿರಿ ಸಂಕೋಚ ವಿಸ್ಮಯ ಆತಂಕದ ಜೊತೆಗೆ ಒಳಹೊರಗೂ ವಿಲಕ್ಷಣ ಅನುಭವಗಳೊಂದಿಗೆ ತಮಗೆ ತಾವೇ ಅಪರಿಚಿತ ಲೋಕಕ್ಕೆ ಜಿಗಿದು ನಿಂತಂತೇ ಗಲಿಬಿಲಿಗೊಳ್ಳುವ ಹೊತ್ತು. ಎದೆ ಚಿಗುರತೊಡಗುತ್ತದೆ. ಮೊದಲಮುಟ್ಟು ಕಾಡಿದಷ್ಟು ಬೇರಾವುದೂ ಅವಳನ್ನು ಕಾಡಲಿಕ್ಕಿಲ್ಲ . ಇಂಥ ಹೊತ್ತಲ್ಲಿ ಹೆತ್ತವರ ಹಿತವಾದ ಆರೈಕೆ ಒಂದಷ್ಟು ಸಾಂತ್ವನ ತಿಳುವಳಿಕೆ ವಿಶ್ವಾಸವನ್ನು ತುಂಬುವದು ಅತ್ಯವಶ್ಯ . ಇಲ್ಲದಿದ್ದರೆ ತನ್ನದೇ ಮನೆಯಲ್ಲಿ ಅವಳು ಪರಿತ್ಯಕ್ತೆಯಾಗಿ ನಿಲ್ಲುತ್ತಾಳೆ.

ಜಗತ್ತಿನ ಬಹುತೇಕ ರಾಷ್ಟ್ರಗಳ ಹಳ್ಳಿಗಾಡುಗಳಲ್ಲಿ ಬದುಕುವ ಜನಾಂಗಗಳಲ್ಲಿ, ಕಾಮುಕರೆಂಬ ಕೆಟ್ಟ ಕ್ರಿಮಿಗಳು ಹುಟ್ಟಿಕೊಳ್ಳುವದಕ್ಕೆ, ಹೆಣ್ಣಿನ ಋತುಮತಿಯಾಗುವ ಕ್ರಿಯೆ ಹಾಗೂ ಬೆಳೆಯುವ ಎದೆಯೇ ಕಾರಣವೆಂದು ನಂಬಲಾಗುತ್ತದೆ . ದಕ್ಷಿಣ ಆಫ್ರಿಕಾದ ಕೆಮರೂನ್ ನಲ್ಲಿ, ಕಿಶೋರಿಯರ ಮುಟ್ಟು ಮುಚ್ಚಿಡುವದಕ್ಕಾಗಿಯೇ ಹೆಣ್ಣುಗಳು ಮೈನೆರೆವ ಮೊದಲು, ಅಥವಾ ಮೈನೆರೆದ ತಕ್ಷಣ ಬ್ರೀಸ್ಟ್ ಫ್ಲಾಟನಿಂಗ್ ಅಥವಾ ಬ್ರೀಸ್ಟ್ ಐರನಿಂಗ್ ಎನ್ನುವ ಅಸಾಧ್ಯ ನೋವು ಕೊಡುವ ಅಮಾನುಷ ಪದ್ಧತಿಯಿಂದ, ಅವರ ಚಿಗುರುವ ಎದೆಯನ್ನ ವಿರೂಪಗೊಳಿಸುವ ಪದ್ಧತಿಯೊಂದು ಇಂದಿಗೂ ಜಾರಿಯಲ್ಲಿದೆ ಅಂದರೆ ನೀವು ನಂಬಲೇಬೇಕು. ಯುನೈಟೆಡ್ ನೇಶನ್ಸ್ ಯಾವುದನ್ನು ಫೈವ್ ಫೊರಗೊಟನ್ ಕ್ರೈಮ್ಸ ಎಂದು ಕರೆಯುತ್ತದೆಯೋ ಅದರಲ್ಲಿಯೇ ಒಂದಾದ ಈ ಬ್ರೀಸ್ಟ ಐರನಿಂಗ್ ಗೆ ಪ್ರತಿ ನಾಲ್ಕರಲ್ಲಿ ಒಬ್ಬರಂತೆ ಅಲ್ಲಿ ಶಿಖಾರಿಗಳಾಗುತ್ತಿದ್ದಾರೆ. ಈ ಪದ್ಧತಿ ನಶಿಸುವದರ ಬದಲು ವೃದ್ಧಿಯಾಗುತ್ತಲೇ ಇದೆ. ಪುಟ್ಟಹೆಣ್ಣುಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಈ ಕ್ರಿಯೆ ಅತ್ಯಂತ ಗಂಬೀರ ಪರಿಣಾಮವನ್ನು ಉಂಟುಮಾಡುತ್ತದೆ. ಒಬಿಯಾಮಾ ಮರ್ಸಿ ಎಂಬ ನೈಜೀರಿಯಾದ ಯುವ ವೈದೈ ಹೇಳುತ್ತಾಳೆ, “ಕೆಮರೂನ್ ನಲ್ಲಿ ಅದೆಷ್ಟೋ ಹುಡುಗಿಯರು ಈ ಎದೆ ಸಪಾಟು ಮಾಡುವ ಕ್ರಿಯೆಯ ಅಡ್ಡ ಪರಿಣಾಮಗಳಿಂದ ಬಳಲುತ್ತಿರುತ್ತಾರೆ . ಬರೀ ತಾತ್ಕಾಲಿಕವಾಗಲ್ಲ, ಕೆಲವೊಂದು ಪ್ರಕರಣಗಳಲ್ಲಿ ಇದು ಶಾಶ್ವತವಾದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಎಷ್ಟೋ ಹುಡುಗಿಯರ ಸ್ಥನಗಳು ಸಂಪೂರ್ಣ ನಾಶವಾಗಿ ಮುಂದೆ ಅವರು ಹುಟ್ಟುವ ಮಕ್ಕಳಿಗೆ ಎದೆಯೂಡಲಾಗದೇ ಹಳಹಳಿಸುತ್ತಾರೆ .ಎದೆಯ ಜೀವಕೋಶಗಳು ಸುಟ್ಟು ವಿಕಲತೆಯನ್ನುಂಟುಮಾಡುತ್ತದೆ. ಕೆಲವರು ಖಿನ್ನತೆಗೆ ಒಳಗಾದರೆ ಇನ್ನು ಕೆಲವರು ಶಾಶ್ವತವಾಗಿ ಮಾನಸಿಕ ರೋಗಿಗಳಾಗಿಯೇ ಇದ್ದುಹೋಗುತ್ತಾರೆ .ಇನ್ನು ಕೆಲವು ಸಂದರ್ಭಗಲ್ಲಿ ಎದೆ ಬಾತು ಕೊಳೆತುಹೋದ ಉದಾಹರಣೆಗಳಿಗೂ ಕೊರತೆಯಿಲ್ಲ. ಎದೆ ಸಪಾಟುಮಾಡುವಾಗ ಪೈಪಿನಂಥ ಉದ್ದದ ಕಲ್ಲುಗಳನ್ನು ಕಾಯಿಸಿ ಹೆಣ್ಣುಗಳ ಸ್ಥನಗಳನ್ನು ಜಜ್ಜಲಾಗುತ್ತದೆ ಅಥವಾ ಮೆರೆಯಲಾಗುತ್ತದೆ. ಕೆಲವೊಮ್ಮೆ ಕಟ್ಟಿಗೆ ಅಥವಾ ಕಬ್ಬಿಣದ ತುಂಡುಗಳನ್ನು ಬೆಂಕಿಗಿಟ್ಟು ಅದರಿಂದ ಸುಡಲಾಗುತ್ತದೆ. ಕೆಲವೊಮ್ಮೆ ಬಿಸಿ ಕೆಂಡಗಳು ಸುಟ್ಟತೆಂಗಿನ ಚಿಪ್ಪು ಸುಟ್ಟ ಸಾಣೆಕಲ್ಲುಗಳನ್ನು ಬಳಸಲಾಗುತ್ತದೆ.” ಎಂದು

“ಅದರಿಂದ ಅನುಭವಿಸುವ ನೋವು ಅಸಾಧ್ಯ. ಮಾತಿಗೆ ನಿಲುಕುವದಿಲ್ಲ ಆ ನೋವು. ಅದರ ಜೊತೆಗೆ ನಮ್ಮನ್ನು ನಾವು ನೋಡಿಕೊಂಡರೆ ನಮಗೇ ಹೇಸಿಗೆ ಹುಟ್ಟುವಂತಿರುತ್ತವೆ ನಮ್ಮೆದೆಗಳು” ಎಂದು ಕೆಮರೂನಿನ ಎದೆ ಸಪಾಟು ಮಾಡಿಸಿಕೊಂಡ ಎಳೆಯ ಹೆಣ್ಣುಮಕ್ಕಳು ಅತೀವ ಸಂಕಟದಿಂದ ನುಡಿಯುತ್ತಾರೆ .ಒಂದು ದು:ಖ್ಖದಾಯಕ ವಿಷಯವೆಂದರೆ ಸ್ವತಹ ಹೆತ್ತ ತಾಯಂದಿರೇ ತಮ್ಮ ಮಕ್ಕಳ ಎದೆ ಸಪಾಟು ಮಾಡುವ ಕ್ರಿಯೆಗೆ ಸಂಪೂರ್ಣ ಸಹಮತ ತೋರಿ, ಅವರೇ ಮುಂದೆನಿಂತು ಮಕ್ಕಳ ಎದೆಯನ್ನು ಸುಡಿಸಿ ಮೆರೆಯಿಸಿ ಜಜ್ಜಿಸಿ ಆವರೆದೆಗಳನ್ನು ನಾಶಪಡಿಸುತ್ತಾರೆ. ನ್ಯೂಲೆ ಬ್ಲೆಸ್ಸಿಂಗ್ ಎಂಬ ಕೆಮರೂನಿನ ತಾಯಿಯೊಬ್ಬಳು ಹೇಳುವದೇನು ಗೊತ್ತಾ? “ಹೌದು, ನಾನು ನನ್ನ ಮಗಳಿಗೆ ಅದನ್ನು ಮಾಡಿದೆ .ನನಗೆ ನನ್ನದೇ ಕಾರಣಗಳಿದ್ದವು. ನನ್ನ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಹಸಿಮಾಂಸದ ಥರ ನೋಡುತ್ತಾರೆ .ಅವಳೆದೆ ಒಂಚೂರು ಆಕಾರಗೊಳ್ಳುವದೇ ತಡ ಗಂಡಸರು ,ಪುಂಡ ಹುಡುಗರು ಹಸಿದ ತೋಳಗಳಂತೆ ಅವರ ಸುತ್ತ ಸುತ್ತುತ್ತಾರೆ. ಅವರನ್ನು ಹೊರಗೆ ಕಳಿಸುವದಕ್ಕೇ ಭಯವಾಗುತ್ತದೆ. ನನ್ನ ಮಗಳಿಗೆ ತಾನು ಓದಬೇಕು ವಿದ್ಯಾವಂತಳಾಗಬೇಕೆಂಬ ಆಸೆ. ಈಗವಳು ಭಯವಿಲ್ಲದೇ ಅವಳ ಗುರಿ ಮುಟ್ಟಬಹುದು” ಎನ್ನುತ್ತ ತನ್ನ ಮಗಳ ಸಪಾಟಾದ ಎದೆಯನ್ನು ತೋರುತ್ತಾಳೆ. ಮತ್ತವಳು ಕಣ್ಣಲ್ಲಿ ನೀರು ತುಂಬಿಕೊಂಡು ನುಡಿಯುತ್ತಾಳೆ, “ಆದರೆ ಅದಕ್ಕಾಗಿ ನಾನು ನನ್ನ ಮಗಳ ದೈಹಿಕ ಆರೋಗ್ಯ ಹಾಗೂ ಸೌಂದರ್ಯವನ್ನು ಹಾಳುಗೆಡಹುವ ಒಪ್ಪಂದವನ್ನು ಮಾಡಿಕೊಂಡೆ. ಈಗ ನೋಡಿ ಅವಳು ಅಂದಗೆಟ್ಟಿದ್ದಾಳೆ .ಅದರರ್ಥ ಅವಳೀಗ ಸುರಕ್ಷಿತ .ಹೆಣ್ಣುಮಕ್ಕಳು ಅಸಾಧ್ಯ ನೋವಿಗೆ ವಿಲಗುಡುತ್ತ ತಮ್ಮೆದೆಯ ಅಸಹ್ಯ ಬದಲಾವಣೆಗೆ ಬೇಯುತ್ತ ತಮ್ಮ ತಾಯಂದಿರನ್ನು ಪ್ರಶ್ನಿಸಿದರೆ ಬರುವ ಉತ್ತರವೇನು ಗೊತ್ತಾ?”ನೀವು ಲೈಂಗಿಕ ದೌರ್ಜನ್ಯಕ್ಕೆ ಅತ್ಯಾಚಾರಕ್ಕೆ ಒಳಗಾಗದಿರಲೆಂದು ನಾವು ಇದನ್ನು ಮಾಡಬೇಕಾಗಿದೆ .ಹಾಗೇನಾದರೂ ನೀನು ಬಸುರಿಯಾದರೆ ಇಡೀ ಕುಟುಂಬದ ಘನತೆ ಕೀರ್ತಿ ಮಣ್ಣುಪಾಲಾಗಿ ಹೋಗುತ್ತದೆ”. ಓ ದೇವ್ರೇ ಇದಕ್ಕಿಂತಲೂ ಎಚ್ಚಿನ ನರಕದರ್ಶನ ಬೇರೊಂದಿರಬಹುದೇ…
ಒಂದು ನೆನಪಿರಲಿ, ಈ ಎದೆ ಸಪಾಟು ಮಾಡುವ ಪದ್ಧತಿಯಲ್ಲಿ ಬಳಕೆಯಾಗುವದು ನುರಿತ ಸರ್ಜನ್ ಗಳ ವೈದ್ಯಕೀಯ ಕಿಟ್ ಗಳಲ್ಲ, ನೋವು ನಿವಾರಕ ಇಂಜಕ್ಷನ್ ಗಳಿಲ್ಲ , ಎಲ್ಲವೂ ಹಸಿಹಸಿ ಜೀವ ಸುಡುವ ಗಾಂವ್ಟಿ ಪದ್ಧತಿಗಳು. ಸಹಿಸುವ ಪುಟ್ಟ ಹೆಣ್ಣುಗಳ ಮನಸ್ಥಿತಿ ದೇಹಸ್ಥಿತಿಗಳನ್ನು ಊಹಿಸಬಲ್ಲಿರಾ?
ಭೂಮಿಯಮೇಲೆ ಹೆಣ್ಣುಗಳು ಕುಟುಂಬದ ಗೌರವ ಘನತೆ ಮರ್ಯಾದೆಗಳನ್ನು ಗುತ್ತಿಗೆ ಪಡೆದೇ ಹುಟ್ಟುತ್ತಾರೆ. ಅದನ್ನು ಹೊತ್ತುಕೊಂಡೇ ಬದುಕುತ್ತಾರೆ. ನಮ್ಮಲ್ಲೇನು ಕಡಿಮೆಯಿಲ್ಲ…. ಆಯುಧಗಳನ್ನು ಬಳಸೋದಿಲ್ಲ ಅಷ್ಟೇ… ಅದೆಂತ ಹಾಗೆ ಎದೆ ಮೀರಿಸ್ಕೊಂಡು ನಡ್ದಾಡ್ತೆ, ಅದೆಂತಕೆ ಹಾಂಗೆ ಗಲಗಲ ಅಲುಗಸ್ತಾ ತಿರ್ಗಾಡ್ತೆ ಎಡ್ನಾಡಿ, ಅದ್ನ ಸರಿ ಬಿಗ್ದು ಕಟ್ಕೊಂಬುಕೆ ಏನ್ ಧಾಡಿ, ಆಯುಧಗಳಿಗಿಂತ ಹರಿತ ಮಾತುಗಳು ಚಿಗುರುವ ಎದೆಯನ್ನು ಜಜ್ಜಿ ಬಿಡುತ್ತವೆ. “ದೇವ್ರೆ ನನ್ನನ್ನು ಈ ನೆಲ ನುಂಗಬಾರದೇ..?” ಎಂದು ಅಮಾಯಕ ಜೀವಗಳು ನರಳುತ್ತವೆ.. ಹೊರುವ ಹೆರುವ ಮೈಯೊಳಗೆರಡು ಊಡುವ ಅಪ್ಪಿ ಎದೆಗೊತ್ತಿಕೊಳ್ಳುವ ವಾತ್ಸಲ್ಯದ ವೇದಗಳು.. ಆದರೆ ಅದನ್ನೋದುವ ನೋಟ ಕೊಳಕು ಕೆಡುಕು ಕೊಂಕು ಕೆಣಕು ಕೀಸು ಅಣುಕು ಹುಳುಕು. ಅಯ್ಯೋ ಎಲ್ಲವೂ ಸೂಜಿ ಚುಚ್ಚಿದ ನೋವುಗಳು. ಎದೆ ಭಾವದಲ್ಲಿ ಸಾವಿರ ಸುಟ್ಟ ಬೊಬ್ಬೆಗಳು.. ಬೆಂದ ಹುಣ್ಣುಗಳು.. ಒಂದು ಹನಿ ಕಣ್ಣೀರು ಸಾಕೇ? ಒಂದು ದಿನದ ಆಚರಣೆ ತಂಪು ತಂದೀತೇ..? ಹಾಂ, ಲೋಕದ ಕಣ್ಣಿಗೆ ಹೆಣ್ಣು ಮಾಧುರ್ಯವೇ ಇರಬಹುದು, ನಿಜದ ಕಣ್ಣಿಗೆ ಅವಳು ನೋವು ತುಂಬಿಕೊಳ್ಳಲೆಂದೇ ಹುಟ್ಟುವ ಪಾತ್ರೆಗಳು ಅಥವಾ ಪಾತ್ರಗಳೇ… ? ಬಿಟ್ಟುಬಿಡು ದೇವರೇ….. ಮತ್ತೆ ಹುಟ್ಟಿಸಬೇಡ ಎನಬೇಡಿ. ನಮ್ಮ ಮೊರೆ ಮುಟ್ಟುವದಿಲ್ಲ ಅಲ್ಲಿಗೆ… ಮುಟ್ಟಿದರೆ ಈ ನೆಲ ಸುಟ್ಟು ಬೂದಿಯಾಗಿಬಿಡಬಹುದು.. ಪಟವಾಗಿ ಪೂಜೆಗೊಳ್ಳುವ ಹೆಣ್ಣು ನಿತ್ಯ ಉಸಿರಿಗೆ ಮಿಸುಗುತ್ತಲೇ ಇದ್ದಾಳೆ. ಊದಿನಕಡ್ಡಿ ಕರ್ಪೂರದ ಆರತಿ ಬೇಡ. ನಮಗೂ ನೋವಾಗುತ್ತದೆ.. ಬದುಕಲು ಬಿಟ್ಟುಬಿಡಿ, ಅಷ್ಟು ಸಾಕು ಎಂಬ ಆಶಯಗಳೊಂದಿಗೆ……… ನಿಮ್ಮ ಪ್ರೇಮಾ ಟಿ ಎಂ ಆರ್
ಪ್ರೇಮಾ ಟಿ ಎಮ್ ಆರ್





ಅಬ್ಬಾ ದಕ್ಷಿಣ ಆಫ್ರಿಕಾದ ನೈಜೀರಿಯಾ ದೇಶದ ಹೆಣ್ಣು ಮಕ್ಕಳಿಗೆ ಕೊಡುವ ವಿಚಿತ್ರ ಸಂಪ್ರದಾಯ ಕೇಳಿ ಮನ ಕಲಕುವ ದೃಶ್ಯ ಕಣ್ಣ ಮುಂದೆ ಕಟ್ಟುವಂತೆ ಬರೆದಿರುವಿರಿ. ತಮ್ಮ ಮನದಾಳದ ಮಾತುಗಳು,ಬರಹಕ್ಕೆ ಧನ್ಯವಾದಗಳು ಮೇಡಮ್.