ಅಂಕಣ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಬದುಕಿನ ಪಯಣ

ಬದುಕು ಒಂದು ರೀತಿಯ ರೈಲು ಗಾಡಿಯ ಪಯಣ ಇದ್ದಂತೆ. ರೈಲುಗಾಡಿಯಲ್ಲಿ ಹತ್ತಿ ಕುಳಿತುಕೊಳ್ಳುವ ನಾವುಗಳು ಮಾರ್ಗ ಮಧ್ಯದಲ್ಲಿ ಹತ್ತುವ-ಇಳಿಯುವ, ನೂರಾರು ಜನರೊಂದಿಗೆ ಸ್ನೇಹ ಸಂಬಂಧಗಳನ್ನು ಬೆಳೆಸುತ್ತೇವೆ ಅವರವರ ನಿಲ್ದಾಣ ಬಂದಾಗ ಅವರವರು ಇಳಿದು ಹೋಗುತ್ತಾರೆ….. ಅಂತೆಯೇ ನಾವು ಕೂಡ
ನಮ್ಮ ಬದುಕಿನ ಪಯಣ ಕೂಡ ಹಾಗೆಯೇ…. ಆದರೆ ಈ ಪಯಣ ಅನಿರೀಕ್ಷಿತ ಸಂತೆಗಳ ಆಗರ.ಇದಮಿತ್ಥಂ ಎಂದು ಹೇಳುವ ಹಾಗೆಯೇ ಇಲ್ಲ. ನಮ್ಮ ಮುಂದಿನ ನಿಲ್ದಾಣ ಯಾವುದು ಎಂಬುದು ನಮಗೆ ಗೊತ್ತಿರುವುದಿಲ್ಲ.
ತಂದೆ ತಾಯಿಯ ಕೈ ಹಿಡಿದು ಬದುಕಿನ ಪಯಣವನ್ನು ಆರಂಭಿಸುವ ನಾವು ನಮ್ಮ ಜೀವಿತದ ಕೊನೆಯವರೆಗೂ ಅವರು ನಮ್ಮೊಂದಿಗೆ ಇರುತ್ತಾರೆ ಎಂಬ ಭರವಸೆಯ ಜೊತೆಗೆ ಜೀವಿಸುತ್ತೇವೆ…. ಆದರೆ ತಮ್ಮ ಪ್ರಯಾಣ ಪೂರೈಸುವ ಅವರು ಯಾವ ಘಳಿಗೆ ಯಲ್ಲಾದರೂ ನಮ್ಮನ್ನು ಬಿಟ್ಟು ಹೊರಟು ಹೋಗಬಹುದು ಹಾಗೂ ಅವರಿಲ್ಲದೆ ನಾವು ನಮ್ಮ ಬದುಕಿನ ಪಯಣವನ್ನು ಮುಂದುವರಿಸಬೇಕು ಎಂಬ ನಿಷ್ಟುರ ಸತ್ಯದ ಅರಿವಿದ್ದು ಕೂಡ ಅರಿವಿಲ್ಲದ ರೀತಿಯಲ್ಲಿ ನಾವು ಬಾಳುತ್ತೇವೆ.
ಆದರೂ ಕೂಡ ಯಾವುದೇ ಸೀಟುಗಳು ಖಾಲಿ ಉಳಿಯುವುದಿಲ್ಲ. ನಮಗೆ ಸ್ವಲ್ಪ ಹಿಂದು ಮುಂದಾಗಿ ನಮ್ಮ ಒಡಹುಟ್ಟಿದವರು, ಸ್ನೇಹಿತರು, ಸಂಬಂಧಿಗಳು ಹಾಗೂ ನಾವು ಪ್ರೀತಿಸುವ ಬದುಕಿನಲ್ಲಿ ನಮ್ಮೊಂದಿಗೆ ಇರಲಿ ಎಂದು ಬಯಸುವ ಹತ್ತು ಹಲವು ಸಂಗತಿಗಳು ನಮ್ಮೊಂದಿಗೆ ಬದುಕಿನ ಪಯಣದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ.
ತಮ್ಮ ತಮ್ಮ ಪಯಣ ಮುಗಿಸಿ ಕೆಲವರು ನಿರೀಕ್ಷಿತ ಸಮಯಕ್ಕೆ ಇಳಿದು ಹೊರಟು ಹೋದರೆ ಮತ್ತೆ ಕೆಲವರು ನಮ್ಮ ಬದುಕಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುವ ನಮ್ಮಲ್ಲಿ ಖಾಲಿತನವನ್ನು
ಹುಟ್ಟು ಹಾಕುವ ರೀತಿಯಲ್ಲಿ ಕಣ್ಮರೆಯಾಗುತ್ತಾರೆ…. ಮತ್ತೆ ಕೆಲವರ ನಿರ್ಗಮನ ಅದೆಷ್ಟು ಅನಿರೀಕ್ಷಿತವಾಗುತ್ತದೆ೦ದರೆ ಅದನ್ನು ಅರಗಿಸಿಕೊಳ್ಳುವುದು ಬಹಳವೇ ಕಷ್ಟ .
ಈ ಪಯಣವು ಸುಖ ದುಃಖಗಳ ಏರಿಳಿವುಗಳ ಮೇಲೆ ತೂಗುಯ್ಯಾಲೆಯಂತೆ ಭಾಸವಾಗುತ್ತದೆ. ಕೆಲ ಭೇಟಿಗಳು ಮನಸ್ಸನ್ನು ಪ್ರಫುಲ್ಲಗೊಳಿಸಬಹುದು ಎಷ್ಟೋ ಬಾರಿ ಭರವಸೆಗಳು ಹುಸಿಯಾಗಬಹುದು…. ವಿದಾಯಗಳು ಎದೆಯ ಭಾರವನ್ನು ಹೆಚ್ಚಿಸಬಹುದು ಕೆಲವರ ಜೊತೆಯು ಸಂತಸವನ್ನು ಉಂಟುಮಾಡಿದರೆ ಮತ್ತೆ ಕೆಲವರ ಸಾಂಗತ್ಯ ರೇಜಿಗೆಯನ್ನುಂಟು ಮಾಡಬಹುದು
ಬದುಕಿನಲ್ಲಿ ಪಯಣದಲ್ಲಿ ಚೆನ್ನಾಗಿ ಬದುಕುವುದು ಎಂದರೆ ನಮ್ಮ ಜೊತೆಗಿರುವ ಸಹ ಪ್ರಯಾಣಿಕರ ಕುರಿತು ಒಳ್ಳೆಯ ಅರಿವನ್ನು ಹೊಂದಿರಬೇಕು. ಉತ್ತಮ ಸಂವಹನವನ್ನು ಹೊಂದಿರಬೇಕು…. ಅದರಲ್ಲೂ ಮುಖ್ಯವಾಗಿ ನಮ್ಮ ಬದುಕಿನ ಹೊರೆಗಳನ್ನು ಹಂಚಿಕೊಂಡಿರುವವರೊಂದಿಗೆ ಅತ್ಯಂತ ಆತ್ಮೀಯವಾದ ಸಂಬಂಧವನ್ನು ಮುಂದುವರಿಸಬೇಕು
ಜೀವನದ ಪಯಣದಲ್ಲಿ ನಮ್ಮ ಪಯಣದ ಆರಂಭದ ಸಮಯದಲ್ಲಿ ನಮಗೆ ನೀಡಲಾದ ಟಿಕೇಟಿನಲ್ಲಿ ಆರಂಭಿಸಿದ ಸಮಯ ದಿನ, ತಿಂಗಳು ವಾರ ಮತ್ತು ವರ್ಷಗಳನ್ನು ನಮೂದಿಸುತ್ತದೆ ನಿಜ ಆದರೆ ಯಾವಾಗ ನಾವು ಜೀವನದ ಪಯಣ ಮುಗಿಸಿ ಇಳಿಯಬಹುದು ಎಂಬ ಸಣ್ಣ ಸುಳಿವು ಕೂಡ ನಮಗೆ ಇರುವುದಿಲ್ಲ.
ನಮ್ಮ ಪಯಣದ ಹಾದಿಯನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಬದುಕಿನ ಗುಣಮಟ್ಟವನ್ನು ಅಳೆಯಬಹುದು.. ನಾವು ದೇವರನ್ನು ಪ್ರೀತಿಸಬೇಕು ಅತ್ಯಂತ ಸರಳವಾಗಿ ಕ್ಷಮಿಸಬೇಕು ಜೊತೆಗೆ ನಮ್ಮ ನೈಜತೆಯನ್ನು ಹೊರ ಹಾಕಬೇಕು.
ಅಂತಿಮ ಪಯಣದ ಸಮಯದಲ್ಲಿ ನಮಗೆ ದೊರೆಯುವ ಸಂಜ್ಞೆಗಳನ್ನು ಗುರುತಿಸಿ ಮೆಲ್ಲಗೆ ಹೊರಟು ಬಿಡಬೇಕು. ಮರದ ಗೊಂಬೆಯನ್ನು ಆಶ್ರಯಿಸಿದ ಹಕ್ಕಿ ಒಂದೇ ಏಟಿಗೆ ರೆಕ್ಕೆಗಳನ್ನು ಅಗಲಿಸಿ ಹಾರಿ ಹೋಗುವಂತೆ ನಾವು ಕೂಡ ಬದುಕಿನ ಈ ಪಯಣವನ್ನು ಮುಗಿಸಿ ಹೊರಟು ಬಿಡಬೇಕು.. ಉಳಿದವರ ಬದುಕಿನ ಅತ್ಯಂತ ಸುಂದರ ನೆನಪಾಗಿ ನಾವು ಉಳಿದುಕೊಳ್ಳಬೇಕೆ ಹೊರತು ಅವರ ಚಿತ್ತವನ್ನು ಕಲಕಿ ಮಾನಸಿಕ ಸ್ವಾಸ್ಥ್ಯವನ್ನು ಕದಡುವ, ನಮ್ಮ ನೆನಪು ಅವರಲ್ಲಿ ಬೇಸರ ಹುಟ್ಟಿಸುವ ರೀತಿಯಲ್ಲಿ ಬದುಕಬಾರದು.
ಬದುಕಿನ ಪ್ರಯಾಣದಲ್ಲಿ ಸಂತೋಷ, ತೃಪ್ತಿ,ನೆಮ್ಮದಿ ಇಂತಹ ಹಗುರವಾದ ಭಾವಗಳನ್ನು ನಮ್ಮ ಲಗೇಜ್ ಗಳನ್ನಾಗಿ ಕೊಯ್ಯಬೇಕೇ ಹೊರತು ಮನಸ್ಸನ್ನು ಭಾರವಾಗಿಸುವ ನೋವು ನಿರಾಶೆ ಅತೃಪ್ತಿ ಆ ಸಂತೋಷಗಳೆಂಬ ಭಾರವಾದ ವಸ್ತುಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದೆ ಹೊರಡಬೇಕು.
ಲೆಸ್ ಲಗೇಜ್ ಮೋರ್ ಕಂಫರ್ಟ್ ಎಂಬ ಮಾತು ಬದುಕಿನ ಪಯಣಕ್ಕೂ ಸೂಕ್ತವಾಗಿದೆ.
ನಮ್ಮ ಬದುಕಿನಲ್ಲಿ ನಾವು ಬಹು ದೂರ ಸಾಗಬೇಕಾದ ಪರಿಸ್ಥಿತಿಯಲ್ಲಿ ನಮ್ಮೊಂದಿಗೆ ಹೆತ್ತವರು, ಒಡಹುಟ್ಟಿದವರು, ಸಂಗಾತಿ, ಮಕ್ಕಳುಸಂಬಂಧಿಗಳು ಸ್ನೇಹಿತರು ಜೊತೆ ಇರಬೇಕು. ನಮ್ಮ ಹೆಗಲ ಮೇಲೆ ನಾವು ಮಲಗಲು ಸಾಧ್ಯವಿಲ್ಲ…. ನಮ್ಮ ಮನದ ಭಾವನೆಗಳನ್ನು ಹಂಚಿಕೊಂಡು ಹಗುರವಾಗಲು ನಮಗೆ ಬೇರೊಬ್ಬರ ಹೆಗಲು ಬೇಕೇ ಬೇಕು.
ನಮ್ಮ ಬದುಕಿನ ಉದ್ದೇಶ ಮತ್ತು ಗುರಿಗಳು ಸ್ಪಷ್ಟವಾಗಿದ್ದು ತಲುಪುವ ಗಮ್ಯದ ಅರಿವು ನಮಗಿರಬೇಕು….. ಅಂದರೆ ನಮ್ಮ ಪಯಣ ಅತ್ಯಂತಸುರಕ್ಷಿತ ಹಾಗೂ ತೃಪ್ತಿದಾಯಕವಾಗಿರುತ್ತದೆ.
ಏನಂತೀರಾ ಸ್ನೇಹಿತರೇ?….. ನೀವು ಕೂಡ ನಿಮ್ಮ ಬದುಕಿನ ಪಯಣವನ್ನು ಅತ್ಯಂತ ಸರಳ ಹಾಗೂ ಸುಂದರವಾದ ಬದುಕಿನ ಪಯಣ ನಿಮ್ಮದಾಗಿರಲಿ
ವೀಣಾ ಹೇಮಂತ್ ಗೌಡ ಪಾಟೀಲ್




