ಕಾವ್ಯ ಸಂಗಾತಿ
ಟಿ.ಪಿ.ಉಮೇಶ್ ಚಿತ್ರದುರ್ಗ
“ನಾನು ಕವಿ! ನಿನ್ನ ಸೃಷ್ಟಿಕರ್ತ!!”


ಒಲವೇ ನಾನು ಕವಿ
ನಿನ್ನ ಬದುಕಿನ ಕವಿತೆಗಳನ್ನು ಬರೆಯುವ ಲೇಖನಿ!
ನಿನ್ನ ನಗುವಿನ ಅಮಲನ್ನೆಲ್ಲ ಹಿಡಿದಿಡುವ ಪ್ರೇಮಿ!
ಅಕ್ಷರಗಳಿಗೆ ತಮ್ಮದೇ ಆದ ಪ್ರಿತಿಶಕ್ತಿ ಇದೆ;
ಅದನ್ನೆಲ್ಲ ಒಟ್ಟುಗೂಡಿಸಿ ಅಂದದ ಎರಕ ಹೊಯ್ದು;
ಒಲವಿನ ಮಿಂಚ ಪೂಸಿ
ನೀ ಯುಗಯುಗಗಳಿಗು ಹೊಳೆಯುವಂತೆ ಮಾಡುವೆ!
ಕಂಡವರೆಲ್ಲ ಯಾರ ಸೃಷ್ಟಿ ಅದ್ಭುತವಿದೆಂದು ಅಚ್ಚರಿಪಡುವರು!
ಪದಗಳ ಮಾಂತ್ರಿಕತೆಯಲ್ಲಿ ನಿನ್ನ ಸಾಮಾನ್ಯ ಸೌಂದರ್ಯ ಅಸಾಮಾನ್ಯವಾಗುವುದು!
ನಿನ್ನನ್ನು ಜಗತ್ತಿನೆಲ್ಲ ಸುಂದರ ಕಲಾಕೃತಿಗಳ ರೂಪಕವೆಂದು ಬಣ್ಣಿಸುವರು!
ಇನ್ನು ಮುಂದೆ ನಿನ್ನ ಹೊರತು ಪ್ರೀತಿ ಮೀಮಾಂಸೆ ಅರ್ಥಪೂರ್ಣವಾಗದೆಂದು ಗುನುಗುವರು!
ಒಲವೇ
ನಾನು ನಿನಗೆ ಈ ಜಗತ್ತನ್ನೇ ತೋರಿಸಿದೆ
ನೀನೇ ಜಗತ್ತಿನ ಬೇಳಕೆಂದು ಕಾಣಿಸಿದೆ
ನಿನಗೆ ನಿನ್ನ ಪ್ರೀತಿಯ ಶಕ್ತಿ ತೋರಿಸಿದೆ
ನಿನಗೆ ನಿನ್ನ ಜೀವನ ಔನ್ನತ್ಯ ಕಾಣಿಸಿದೆ

ಆ ಮಳೆಬಿಲ್ಲ ಬಗ್ಗಿಸಿ ನಿನ್ನ ಹುಬ್ಬಾಗಿಸಿದೆ
ನೀಲಾಗಸದ ಹೊಳಪ ನಿನ್ನ ರಂಗಾಗಿಸಿದೆ
ಚಂದಿರನ ತಂಪ ನಿನ್ನ ಎದೆಗೂಡಾಗಿಸಿದೆ
ನೇಸರನ ಬಿಸಿಯ ನಿನ್ನ ಚೈತನ್ಯವಾಗಿಸಿದೆ
ನಕ್ಷತ್ರಗಳ ಜೋಡಿ ಕಣ್ಗಳಿಗಿಳಿಸಿ ಸಿಂಗರಿಸಿದೆ
ಜಗದ ಮಧುರ ರಾಗಗಳ ತುಟಿಗಳಿಗಂಟಿಸಿದೆ
ವಿಶ್ವದಿರುಳ ದೃಶ್ಯಕಾವ್ಯಗಳ ನಿನ್ನ ಹೆರಳಾಗಿಸಿದೆ
ಇರುವೆಲ್ಲ ಮೃದುತ್ವ ತಂದಿಟ್ಟು ಹೃದ್ಯವಾಗಿಸಿದೆ
ನಾನು ನಿನ್ನ ಪ್ರೇಮಿ
ನಿನ್ನಂದವನ್ನೆಲ್ಲ ಕಾಪಿಡುವ ಧರ್ಮಿ
ನಿನಗಾಗಿಯೆ ಮಿಡುಕಾಡುವ ಕರ್ಮಿ
ಪ್ರಿಯೇ
ನಾನು ನಿನ್ನ ಕವಿಯೆ
ನಿನ್ನ ಹೃದಯದ ಬಡಿತ ಬಲ್ಲೆ
ನಿನ್ನ ಉತ್ಸಾಹಗಳ ಎಲ್ಲೆ ಬಲ್ಲೆ
ಮರೆವಿನ ನಿನ್ನ ಜೀವನ ಕಥನಗಳ ಬಲ್ಲೆ
ಸ್ಮರಣೆಯ ಒಲವ ಹೆಜ್ಜೆಗಳನ್ನೆಲ್ಲ ಬಲ್ಲೆ
ನಿನ್ನ ಪಿಸುಮಾತ ಸಪ್ಪಳ ನಾನಷ್ಟೆ ಕೇಳಿ ಬರೆದಿಡುವೆ
ನಿನ್ನ ಕಣ್ರೆಪ್ಪೆಗಳ ಗುರಿ ನಾನಷ್ಟೆ ಹಿಡಿದು ಪಳಗಿಸುವೆ
ಜಗದೆಲ್ಲ ನಂಬಿಕೆಗೆ ನಿನ್ನನ್ನೇ ಆಧಾರವಾಗಿಸಬಲ್ಲೆ
ಜಗದೆಲ್ಲ ಪ್ರಾರ್ಥನೆಗಳಿಗೆ ಚುಂಬಕವಾಗಿಸಬಲ್ಲೆ
ಹೇ ಮನವೇ
ನಿನ್ನ ಭಯ ನಡುಕಗಳ ನಾನರಿಯಬಲ್ಲೆ;
ನನ್ನ ಪದಗಳು ಅವನ್ನೆಲ್ಲ ತಣಿಸಿ ನಿವಾರಿಸವವು!
ನಿನ್ನ ಅನುಕಂಪ ಅನುರಾಗಗಳ ಕಾಣಬಲ್ಲೆ;
ನನ್ನ ಹಾಡುಗಳು ಅವುಗಳ ಅಂದವಾಗಿಸುವವು!
ನಿನ್ನ ಬಯಕೆಗಳ ನರಳಿಕೆಗಳ ಅರ್ಥೈಸಬಲ್ಲೆ;
ನನ್ನ ಸಾಲುಗಳು ಅವನ್ನೆಲ್ಲ ಸಾಕ್ಷಾತ್ಕರಿಸುವವು!
ಪ್ರಿಯೆ
ನನ್ನ ಮಾತು ಕೇಳು;
ನಿನ್ನೆಲ್ಲ ಗುರಿಯಿರದ ನಡಿಗೆಗೆ ದಾರಿ ನಾನು!
ನಿನ್ನೆಲ್ಲ ಜೀವನ ಶ್ರೇಷ್ಟತೆಗೆ ದುಡಿಮೆ ನಾನು!
ನಿನ್ನೆಲ್ಲ ಪ್ರೀತಿ ಉಳಿತಾಯದ ಕೀಲಿಕೈ ನಾನು!
ನಾನು ಕವಿ
ನಿನನ್ನಷ್ಟೇ ಪ್ರೇಮಿಸುವೆ
ನಿನ್ನನ್ನಷ್ಟೆ ಧ್ಯಾನಿಸುವೆ
ನಿನ್ನನ್ನಷ್ಟೆ ಆಲಾಪಿಸುವೆ
ನಿನ್ನಲ್ಲಷ್ಟೆ ಐಕ್ಯಗೊಳ್ಳುವೆ
ಟಿ.ಪಿ.ಉಮೇಶ್ ಚಿತ್ರದುರ್ಗ



