ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳು ಶಾಲಾ ಕಾಲೇಜಿಗೆ ಹೋದ ನಂತರ ಸುಮತಿ ಆದಷ್ಟು ಬೇಗ ಕೆಲಸವನ್ನು ಮುಗಿಸಿ ಎಂದಿನಂತೆ ಕೆಲಸಗಾರರ ಮನೆಗಳ ಹತ್ತಿರ ಹೋಗಿ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಹೋದಳು. ಅಂದು ಮಕ್ಕಳಿಗೆ ಅಕ್ಷರರಾಭ್ಯಾಸ ಮಾಡಿಸುವಾಗ ಬಹಳ ವಿಹ್ವಲಳಾಗಿದ್ದಳು. ಎರಡು ದಿನಗಳಿಂದ ಅವಳು ಬಹಳ ಚಿಂತೆಗೀಡಾಗಿದ್ದಳು. ಒಮ್ಮೆ ಸಂಜೆಯಾದರೆ ಸಾಕು ಎಂದು ಚಿಂತಿಸುತ್ತಾ ಚಡಪಡಿಸುತ್ತಿದ್ದಳು. ಅಂದು ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಾಗಲಿಲ್ಲ. ತಾನು ಸರಿಯಾಗಿ ಊಟ ಮಾಡದಿದ್ದರೆ ಸಕ್ಕರೆ ಅಂಶ ತುಂಬಾ ಕೆಳ ಮಟ್ಟಕ್ಕೆ ಹೋಗಿ ಕೈಕಾಲು ಅದುರುವಂತಾಗಿ ತಲೆ ಸುತ್ತಿದಂತೆ ಅನುಭವವಾಗುತ್ತಿತ್ತು. ಹಾಗಾಗಿ ಸಂಜೆ ಮನೆಗೆ ಬಂದೊಡನೆ ಒಂದು ಲೋಟ ಕಾಫಿ ಮಾಡಿಕೊಂಡು ಕುಡಿದು, ಬಿಸ್ಕತ್ತನ್ನು ತಿಂದು ಬೇಗನೆ ತೋಟದ ದೊಡ್ಡ ಬಂಗಲೆಯ ಕಡೆಗೆ ಹೊರಟಳು. ಎಷ್ಟು ಬೇಗ ಹೆಜ್ಜೆ ಹಾಕಿದರೂ ದಾರಿ ಸಾಗದಂತೆ ಅನಿಸುತ್ತಿತ್ತು. ಎತ್ತರದ ಪ್ರದೇಶಗಳಲ್ಲಿ ನಡೆಯುವಾಗ ಏದುಸಿರು ಬಿಡುತ್ತಾ ಆಯಾಸಗೊಂಡಳು. ಸ್ವಲ್ಪ ಮುಂದೆ ಸಾಗಿ ದೇವಸ್ಥಾನದ ತಿರುವಿನಲ್ಲಿ ಇರುವ ಹಳೆಯ ಕಾಲದ ದೊಡ್ಡ ಮಾವಿನ ಮರದ ಕೆಳಗೆ ನಿಂತು ಕೆಲ ನಿಮಿಷಗಳ ಕಾಲ ವಿಶ್ರಾಂತಿ ಪಡೆದಳು. ಬಂಗಲೆಯ ಬಳಿಗೆ ಸಾಗಲು ಅವಳು ಇನ್ನೂ ಬಹಳ ದೂರ ಕ್ರಮಿಸಬೇಕಿತ್ತು. ದೇವರನ್ನೇ ಧ್ಯಾನಿಸುತ್ತಾ ಆಯಾಸ ಪಡುತ್ತಾ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆದಳು. ದಾರಿ ಹೋಕರು ಹಲವರು ಸುಮತಿಯನ್ನು ಕಂಡು ವಂದಿಸಿದರು. ತೋಟದ ಅಕ್ಕ ಪಕ್ಕ ವಾಸವಿರುವ ರೈತರಿಗೆ ಸುಮತಿ ಎಂದರೆ ಬಹಳ ಗೌರವ. 

ಅವರಿಗೆಲ್ಲ ಪ್ರತಿವಂದಿಸಿ ಸುಮತಿ ಮುಂದೆ ಸಾಗಿದಳು. 

ಕೆರೆಯ ಏರಿಯ ಬಳಿ ನಡೆಯುತ್ತಿದ್ದಾಗ ಬಸ್ಸು ಬರುವ ಸದ್ದು ಕೇಳಿಸಿತು. ಇಂದು ಬೇಗ ಬಸ್ ಬಂದಿದೆ ಎಂದು ಅಂದುಕೊಳ್ಳುತ್ತಾ ಮಣ್ಣಿನಿಂದ ಮಾಡಿದ ಮೆಟ್ಟಿಲುಗಳನ್ನು ಆತುರಾತುರವಾಗಿ ಹತ್ತುತ್ತಾ ಏದುಸಿರು ಬಿಡುತ್ತಾ ಗುಡ್ಡದಂತೆ ಇದ್ದ ಪ್ರದೇಶವನ್ನು ಹತ್ತುತ್ತಿದ್ದಳು. ಅಷ್ಟು ಹೊತ್ತಿಗೆ ಬಸ್ ಶಬ್ದ ನಿಂತಿತು. ಓಹ್!! ಮಕ್ಕಳು ಬಸ್ಸಿನಿಂದ ಈಗ ಇಳಿದಿರುತ್ತಾರೆ ಎಂದುಕೊಳ್ಳುತ್ತಾ ಕಷ್ಟಪಟ್ಟು ಮೆಟ್ಟಿಲುಗಳನ್ನು ಹತ್ತಿದಳು. ವೇಗವಾಗಿ ಮೆಟ್ಟಿಲುಗಳನ್ನು ಹತ್ತಿದ್ದರಿಂದ ಜೋರಾಗಿ ಉಸಿರಾಡುತ್ತಿದ್ದಳು. ತುಂಬಾ ಸೆಕೆ ಅನಿಸಿತು. ಸೀರೆಯ ಸೆರಗಿನಿಂದ ಗಾಳಿ ಬೀಸಿಕೊಳ್ಳುತ್ತಾ, ಬಸ್ ನಿಲ್ದಾಣದ ಕಡೆಗೆ ಬಂದಳು. ಅಷ್ಟೊತ್ತಿಗಾಗಲೇ ಮಕ್ಕಳು ಬಸ್ ಇಳಿದು ಬಂಗಲೆಯ ಗೇಟಿನ ಬಳಿ ತನ್ನನ್ನು ಕಾಯುತ್ತಿರುವುದು ಸುಮತಿ ಕಂಡಳು. ಮಕ್ಕಳ ಬಳಿಗೆ ಬಂದು…. “ಬನ್ನಿ ಮಕ್ಕಳೇ ಆಫೀಸಿನ ಬಳಿ ಸಾಹುಕಾರರಿಗಾಗಿ ಕಾಯೋಣ”… ಎಂದು ಹೇಳಿ ತಾನು ಮುನ್ನಡೆದಳು. ಮಕ್ಕಳಿಬ್ಬರೂ ಸುಮತಿಯನ್ನು ಹಿಂಬಾಲಿಸಿದರು. ಆಫೀಸಿನ ಬಳಿ ಸುಮತಿ ಕಾಯುತ್ತಿರುವುದನ್ನು ಬಂಗಲೆಯ ನೌಕರರು ಸಾಹುಕಾರರಿಗೆ ತಿಳಿಸಿದರು…”ಸುಮತಿ…. ಹೇಗಿದ್ದೀರಾ? ಎಂದು ಕೇಳುತ್ತಾ ಆಫೀಸಿನ ಬಳಿಗೆ ಸಾಹುಕಾರರು ಬಂದರು. ಸಾಹುಕಾರರನ್ನು ಕಂಡ ಒಡನೆ ಮೂವರೂ ಕೈಮುಗಿದರು…”ಏನು ವಿಶೇಷ ಸುಮತಿ?… ಮಕ್ಕಳೊಡನೆ ಬಂದಿದ್ದೀರಿ”…. ಎಂದು ಸಾಹುಕಾರರು ಕೇಳಿದಾಗ ನಡೆದ ಘಟನೆಯನ್ನು ಅಳುಕುತ್ತಲೇ ಸುಮತಿ ಸಾಹುಕಾರರಿಗೆ ತಿಳಿಸಿದಳು. 

“ಅವರುಗಳು ಯಾರೆಂದು ನಿಮಗೆ ತಿಳಿದಿದೆಯೇ?…. ಎಂದು ಸಾಹುಕಾರರು ಮಕ್ಕಳನ್ನು ಪ್ರಶ್ನಿಸಿದರು. ಮಕ್ಕಳು ಮಾತನಾಡದೆ ನೆಲ ನೋಡುತ್ತಾ ನಿಂತಾಗ… “ಹೆದರದೇ ಹೇಳಿ ಮಕ್ಕಳೇ …. ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಿಸುತ್ತೇನೆ…. ಯಾರವರು ಎಂಬುದು ತಿಳಿದರೆ ಪೊಲೀಸರಿಗೆ ಕಂಪ್ಲೇಂಟ್ ಕೊಡಬಹುದು”…. ಎಂದು ಸಾಹುಕಾರರು ಹೇಳಿದಾಗ ಮಕ್ಕಳಿಬ್ಬರೂ ಏನೂ ಮಾತನಾಡದೆ ನಿಂತರು. ಹಿಂದಿನ ದಿನವೇ ಅಮ್ಮ ಹೇಳಿದ್ದು ನೆನಪಾಯಿತು. ಆ ಯುವಕರಿಬ್ಬರೂ ಸಿರಿವಂತ ಮನೆತನದ ಹುಡುಗರಾಗಿದ್ದರು. ಅವರ ಬಗ್ಗೆ ಕಂಪ್ಲೇಂಟ್ ಕೊಟ್ಟರೆ ನಾಳೆಯ ದಿನ ನಮಗೆ ತೊಂದರೆ ಆಗಬಹುದು ಹಾಗಾಗಿ ಕತ್ತಲೆಯಲ್ಲಿ ಅವರನ್ನು ಕಾಣಲು ಸಾಧ್ಯವಾಗಲಿಲ್ಲ ಎಂದಷ್ಟೇ ಹೇಳಬೇಕು ಎಂದಿದ್ದಳು. ಅಮ್ಮನ ಮಾತಿನಂತೆ ಮಕ್ಕಳು ತಮಗೆ ಗೊತ್ತಿಲ್ಲ ಎನ್ನುವಂತೆ ತಲೆ ಆಡಿಸಿ,…”ಕತ್ತಲೆಯಲ್ಲಿ ಅವರು ಯಾರೆಂದು ತಿಳಿಯಲಿಲ್ಲ ಸರ್”…. ಎಂದಾಗ, ಮಕ್ಕಳು ಹೆದರಿರುವರು ಎನ್ನುವುದನ್ನು ಅರಿತ ಸಾಹುಕಾರರು ಹೆಚ್ಚು ಬಲವಂತ ಮಾಡಲಿಲ್ಲ…..”ಸುಮತಿ ಈಗ ನೀವು ಮನೆಗೆ ಹೋಗಿ ನಾನು ಆಲೋಚಿಸಿ ತಿಳಿಸುತ್ತೇನೆ….. ಆದಷ್ಟು ಬೇಗ ಒಂದು ಉಪಯುಕ್ತ ಪರಿಹಾರವನ್ನು ಕಾಣುತ್ತೇನೆ”… ಎಂದರು….”ಹಾಗೆಯೇ ಆಗಲಿ ಸರ್”…. ಎನ್ನುತ್ತಾ ಸಾಹುಕಾರರಿಗೆ ವಂದಿಸ, ಸುಮತಿ ಮಕ್ಕಳೊಂದಿಗೆ ಗೇಟಿನ ಬಳಿಗೆ ನಡೆದಳು. ಸಾಹುಕಾರರ ಮಾತು ಸುಮತಿಯ ಮನಸ್ಸಿಗೆ ನೆಮ್ಮದಿಯನ್ನು ಕೊಟ್ಟಿತು. 

ಏನಾದರೂ ಒಂದು ಒಳ್ಳೆಯ ಪರಿಹಾರವನ್ನು ಸಾಹುಕಾರರು ಸೂಚಿಸುವರು ಎನ್ನುವ ದೃಢನಂಬಿಕೆ ಸುಮತಿಯ ಮನದಲ್ಲಿ ಮೂಡಿತು. 

ಮಾರನೇ ದಿನ ಸಂಜೆ ರೈಟರ್ ಸುಮತಿಯನ್ನು ತಮ್ಮ ಮನೆಗೆ ಬರಲು ಹೇಳಿದರು. ತಡ ಮಾಡದೆ ಸುಮತಿ ರೈಟರ್ ಮನೆಗೆ ಹೋದಳು….. ಸುಮತಿಯವರೇ, ನೀವು ಮತ್ತು ನಿಮ್ಮ ಮಕ್ಕಳು ಆದಷ್ಟು ಬೇಗ ದೊಡ್ಡ ತೋಟದ ಬಂಗಲೆಯ ಹತ್ತಿರವೇ ಇರುವ ಮನೆಯಲ್ಲಿ ವಾಸ್ತವ್ಯ ಹೂಡಲು ತಿಳಿಸಿದ್ದಾರೆ…. ಅಲ್ಲಿಗೆ ಹೋದರೆ ನಿಮಗೂ ನಿಮ್ಮ ಮಕ್ಕಳಿಗೂ ಯಾವುದೇ ತೊಂದರೆ ಇರುವುದಿಲ್ಲ…. ಬಸ್ ನಿಲ್ದಾಣದ ಬಳಿಯೇ ಮನೆ ಇರುವುದರಿಂದ ಮಕ್ಕಳಿಗೂ ಶಾಲೆ ಕಾಲೇಜಿಗೆ ಹೋಗಿ ಬರಲು ಅನುಕೂಲವಾಗುತ್ತದೆ….. ನೀವು ಅಲ್ಲಿಂದ ಇಲ್ಲಿನ ಶಾಲೆಗೆ ಬಂದು ಮಕ್ಕಳಿಗೆ ಅಕ್ಷರಾಭ್ಯಾಸ ಕಲಿಸಲಿ ಎಂದು ಸಾಹುಕಾರ ತಿಳಿಸಿದ್ದಾರೆ…. ಆದಷ್ಟು ಬೇಗ ನಿಮ್ಮ ವಸ್ತುಗಳನ್ನೆಲ್ಲಾ ಗಂಟುಮೂಟೆ ಕಟ್ಟಿಕೊಳ್ಳಿ…. ಅಲ್ಲಿಗೆ ಹೋಗಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾನು ಮಾಡುತ್ತೇನೆ…. ನಿಮ್ಮ ತಯಾರಿಯೆಲ್ಲಾ ಆದ ನಂತರ ನನಗೆ ತಿಳಿಸಿ…. ನಿಮ್ಮ ವಸ್ತುಗಳನ್ನೆಲ್ಲಾ ಸಾಗಿಸಲು ಸಾರಿಗೆ ವ್ಯವಸ್ಥೆ ಮಾಡುತ್ತೇನೆ….. ಎಂದರು. ರೈಟರ್ ಮಾತನ್ನು ಆಲಿಸಿದ ಸುಮತಿ ಒಂದು ನಿಮಿಷ ಹಾಗೆಯೇ ಯೋಚಿಸುತ್ತಾ ನಿಂತಳು. ಹೌದು ಸಾಹುಕಾರರು ಸೂಚಿಸಿರುವ ಪರಿಹಾರವು ಒಳ್ಳೆಯದೇ ಆಗಿದೆ. ಮಕ್ಕಳು ತಡರಾತ್ರಿಯಲ್ಲಿ ಈ ಕಾಡು ರಸ್ತೆಯಲ್ಲಿ ಸುಮಾರು ದೂರ ಕ್ರಮಿಸಿ ಬರುವ ಅಗತ್ಯವಿರುವುದಿಲ್ಲ. ಬಸ್ ನಿಲ್ದಾಣ ಹತ್ತಿರ ಇರುವುದರಿಂದ ಸಕಲೇಶಪುರಕ್ಕೆ ಹೋಗಲು ನನಗೂ ಅನುಕೂಲವಾಗುತ್ತದೆ. ಅಲ್ಲಿಂದ ಇಲ್ಲಿನ ಶಾಲೆಗೆ ಬರಲು ನನಗೆ ಸ್ವಲ್ಪ ಕಷ್ಟವಾಗಬಹುದು. ಆದರೂ ನಮಗೆ ಹೆಚ್ಚಿನ ಅನುಕೂಲವಿದೆ ಎಂದು ಸುಮತಿಗೆ ಅನಿಸಿತು. 


About The Author

Leave a Reply

You cannot copy content of this page

Scroll to Top