ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನೆ ತಲುಪಿದ ಕೂಡಲೇ ಮಕ್ಕಳನ್ನು ಮಂಚದ ಮೇಲೆ ಕುಳ್ಳಿರಿಸಿ ದಣಿವಾರಿಸಿಕೊಳ್ಳುವಂತೆ ತಿಳಿಸಿ, ಅಡುಗೆ ಮನೆಗೆ ಹೋಗಿ ಕುಡಿಯಲು ನೀರನ್ನು ತಂದು ಮಕ್ಕಳ ಕೈಗೆ ಕೊಟ್ಟಳು. ಮೂರನೇ ಮಗಳು ತನ್ನ ಹೆಬ್ಬೆರಳಿಗೆ ಮತ್ತು ಮಂಡಿಗೆ ಆದ ಪೆಟ್ಟನ್ನು ತೋರಿಸಿದಳು. ಮಗಳ ಹೆಬ್ಬೆರಳಿನ ಉಗುರಿನ ಬಳಿ ರಕ್ತ ಒಸರುತಿತ್ತು. ಮಂಡಿ ತರಚಿ ಕೆಂಪಗಾಗಿ ರಕ್ತ ಜನುಗುತ್ತಿತ್ತು. ಸುಮತಿಗೆ ಗಾಬರಿಯಾಯಿತು.‌ ಕೂಡಲೇ ಅಡುಗೆ ಮನೆಯಿಂದ ಅರಿಶಿಣ ಪುಡಿಯನ್ನು ತಂದು ಮಗಳ ಕಾಲಿಗೆ ಹಚ್ಚಿದಳು. ಮಗಳು ಉರಿ ತಾಳಲಾರದೆ….” ಅಮ್ಮಾ”…. ಎಂದು ಕೂಗಿದಳು. ಎರಡನೇ ಮಗಳು ತಂಗಿಯ ಕಾಲಿಗೆ ಆದ ಗಾಯವನ್ನು ನೋಡುತ್ತಿದ್ದಳು. ಅವಳ ಮೈ ಸಣ್ಣಗೆ ನಡುಗುತ್ತಿತ್ತು. ಅವಳ ಬಿಕ್ಕುವಿಕೆ ಇನ್ನೂ ನಿಂತಿರಲಿಲ್ಲ. ಸುಮತಿ ಅವಳ ಬಳಿ ಸಾಗಿ ತಲೆ ನೇವರಿಸುತ್ತಾ…” ಏನಾಯ್ತು ಮಗಳೇ?… ಎಂದು ಕೇಳಿದಾಗ ಅಷ್ಟು ಹೊತ್ತೂ ಬಿಕ್ಕುತ್ತಿದ್ದ ಅವಳು ಅಮ್ಮನನ್ನು ಬಿಗಿಯಾಗಿ ಹಿಡಿದುಕೊಂಡು ಜೋರಾಗಿ ಅಳಲು ಪ್ರಾರಂಭಿಸಿದಳು. ಮಗಳು ಏಕೆ ಇಷ್ಟೊಂದು ಭಯಭೀತಳಾಗಿ ಅಳುತಿದ್ದಾಳೆ? ಎನ್ನುವುದು ಅರ್ಥವಾಗದೆ ಆತಂಕದಿಂದ …”ಏನಾಯ್ತು ಮಗಳೇ?… ಎಂದು ಮತ್ತೊಮ್ಮೆ ಕೇಳಿದಳು. ಆದರೆ ಅವಳು ಏನನ್ನೂ ಹೇಳದೆ ಅಮ್ಮನನ್ನು ಬಿಗಿಯಾಗಿ ಹಿಡಿದುಕೊಂಡು ಅಳುತ್ತಲೇ ಇದ್ದಳು. ಸುಮತಿ ಮೂರನೇ ಮಗಳ ಕಡೆಗೆ ನೋಡಲು….”ಅಮ್ಮಾ ಈವತ್ತು ಮನೆಗೆ ಬರುವಾಗ….. ಎಂದು ಹೇಳುತ್ತಾ ನಡೆದ ಘಟನೆಯ ಬಗ್ಗೆ ಅಮ್ಮನಿಗೆ ತಿಳಿಸಿದಳು. ಎಲ್ಲವನ್ನು ಕೇಳಿದ ಸುಮತಿ ಇಬ್ಬರೂ ಮಕ್ಕಳನ್ನು ಬಿಗಿಯಾಗಿ ಅಪ್ಪಿಕೊಂಡು ಏನೊಂದೂ ಮಾತನಾಡದೆ ಮಂಚದ ಮೇಲೆ ಕುಳಿತಳು. ಮಕ್ಕಳು ಭಯಬೀತರಾಗಿರುವ ಕಾರಣ ತಿಳಿದು ಆತಂಕಗೊಂಡಳು. 

ದೂರದಿಂದ ಮಾತಿನಲ್ಲಿ ಏನಾದರೂ ಹೇಳಿ ಚೇಡಿಸುತ್ತಿದ್ದರೇ ಹೊರತು, ಇಲ್ಲಿಯವರೆಗೂ ಅವರನ್ನು ಸ್ಪರ್ಶಿಸುವ ಸಾಹಸ ಯಾರೂ ಮಾಡಿರಲಿಲ್ಲ. ಹಿಂದೆಯೇ ಟಾರ್ಚ್ ಲೈಟ್ ಬೆಳಗಿಸಿಕೊಂಡು ಬಂದರು ಎಂದರೆ ಬಹುಶಃ ಹೊರಗಿನವರು ಯಾರಾದರೂ ಇರಬೇಕು. ಮಕ್ಕಳು ಶಾಲಾ-ಕಾಲೇಜಿಗೆ ಹೋಗುವ ಸಮಯವನ್ನು ಹಾಗೂ ಮನೆಗೆ ಹಿಂದಿರುಗುವ ಸಮಯವನ್ನು ಮತ್ತು ಈ ದಿನ ಬಸ್ ತಡವಾಗಿದ್ದನ್ನು ಮನದಲ್ಲಿ ಲೆಕ್ಕವಿಟ್ಟುಕೊಂಡೇ ಈ ದುಷ್ಕೃತ್ಯವನ್ನು ಮಾಡಲು ಹುನ್ನಾರ ನಡೆಸಿರುತ್ತಾರೆ ಎಂಬುದು ಸುಮತಿಗೆ ಖಾತ್ರಿಯಾಯಿತು. ಯಾರ ಬಗ್ಗೆಯಾದರೂ ಸಂಶಯವಿದೆಯೇ ಎಂದು ಮಕ್ಕಳನ್ನು ವಿವಿಧ ರೀತಿಯಲ್ಲಿ ಕೇಳಿದಳು. ಕತ್ತಲೆ ಇದ್ದುದರಿಂದ ಯಾರೆಂದು ತಿಳಿಯಲಿಲ್ಲ ಎಂದು ಮಕ್ಕಳು ಹೇಳಿದರು. ಅಂದು ರಾತ್ರಿ ಅವರ್ಯಾರಿಗೂ ನಿದ್ರೆ ಬರಲಿಲ್ಲ. ತನ್ನನ್ನು ತಾನು ಕಾಪಾಡಿಕೊಳ್ಳಲು ಸಾಧ್ಯವಾಗಿದ್ದು ಒಂದು ಪವಾಡವೆಂದೇ ಆ ಹುಡುಗಿ ಅಂದುಕೊಂಡಳು.‌ ಇಲ್ಲದಿದ್ದರೆ ತನ್ನ ಮನಸ್ಥಿತಿಯು ಈಗ ಹೇಗಾಗಿರುತ್ತಿತ್ತು ಎನ್ನುವುದನ್ನು ಅವಳು ಊಹಿಸದಾದಳು. ಒಂಟಿಯಾಗಿ ಕಾಫಿ ತೋಟದ ರಸ್ತೆಯಲ್ಲಿ ಓಡಾಡುವ ಈ ಹೆಣ್ಣು ಮಕ್ಕಳನ್ನು ಕಂಡು ಹಲವರು ಹಲವು ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ಯಾರಾದರೂ ಏನಾದರೂ ಮಾಡಿದರೆ ಏನು ಮಾಡುತ್ತೀರಾ? ಎಂದು ಕೇಳುವ ಪ್ರಶ್ನೆಗೆ ಮನದೊಳಗೆ ಭಯವಿದ್ದರೂ ಎರಡನೆಯ ಮಗಳಲ್ಲಿ ಸದಾ ಒಂದು ಉತ್ತರ ಇರುತ್ತಿತ್ತು….”ನಮ್ಮನ್ನು ಕಾಪಾಡಲು ಶ್ರೀ ಕೃಷ್ಣ ನಮ್ಮ ಜೊತೆ ಇದ್ದಾನೆ….. ಕೃಷ್ಣನಿದ್ದೂ ಅಹಿತವಾದದ್ದೇನಾದರೂ ನಡೆದರೆ ನನ್ನ ಹಣೆಬರಹವನ್ನು ನಾನೇ ಬರೆದುಕೊಳ್ಳುವೆ.‌….

“ನನ್ನ ಮೈ ಮುಟ್ಟಿ ಶೀಲಹರಣವನ್ನು ಮಾಡಲು ಪ್ರಯತ್ನಿಸಿದವನನ್ನು ಅವನು ಎಂತಹವನೇ ಆಗಿರಲಿ ಅವನನ್ನೇ ವಿವಾಹವಾಗುವೆ. ಇಲ್ಲದಿದ್ದರೆ ಅವನನ್ನು ಕೊಂದು ನಾನೂ ಸಾಯುವೆ…. ಈ ನಿರ್ಧಾರವನ್ನು ಮನದಲ್ಲಿ ಇಟ್ಟುಕೊಂಡೇ ಓಡಾಡುತ್ತಿರುವೆ…. ಆದರೂ ವಿದ್ಯಾಭ್ಯಾಸವನ್ನು ನಿಲ್ಲಿಸಲು ನನ್ನಿಂದ ಸಾಧ್ಯವಿಲ್ಲ…. ನಾವು ಅಕ್ಕ-ತಂಗಿಯರು ವಿದ್ಯಾಭ್ಯಾಸವನ್ನು ಮುಗಿಸಿ, ಉತ್ತಮ ಕೆಲಸಗಳಿಗೆ ಸೇರಿಕೊಂಡು ನಮಗಾಗಿ ತನ್ನ ಜೀವನದ ಸಕಲ ಸುಖ ಸಂತೋಷಗಳನ್ನು ತ್ಯಾಗ ಮಾಡಿದ ನಮ್ಮ ಅಮ್ಮನಿಗೆ ಆಸರೆ ಆಗಬೇಕಿದೆ…. ತೋಟದ ಕೂಲಿ ಕೆಲಸಗಳಿಗೆ ಕಳುಹಿಸಲು ಅಮ್ಮನಿಗೆ ಇಷ್ಟವಿಲ್ಲ… ನಾವು ಸುಶಿಕ್ಷಿತರಾಗಿ, ವಿದ್ಯಾವಂತರಾಗಿ ಉತ್ತಮ ಜೀವನ ನಡೆಸುವುದೇ ಅಮ್ಮನ ಮಹಾದಾಸೆಯಾಗಿದೆ….ಅದೂ ಅಲ್ಲದೆ ಅಪ್ಪ-ಅಣ್ಣ-ತಮ್ಮನ ನೆರಳಿಲ್ಲದ ಹೆಣ್ಣುಮಕ್ಕಳು ಈ ಪ್ರಪಂಚದಲ್ಲಿ ಬದುಕುವುದು ಕಷ್ಟ…. ಈ ಲೋಕದಲ್ಲಿ ಎಲ್ಲಿದ್ದರೂ ನಮ್ಮ ಮೇಲೆ ಮುಗಿ ಬೀಳಲು ಕಾದಿರುವವರು ಇದ್ದೇ ಇರುತ್ತಾರೆ…. ಗಂಡಿನ ಆಶ್ರಯವಿಲ್ಲದ ಹೆಣ್ಣು ಜೀವಗಳು ಎಂದಿಗೂ ಸುರಕ್ಷಿತರಲ್ಲ ಎಂದು ಅಮ್ಮ ತಿಳಿಸಿದ್ದಾರೆ…. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು ಎನ್ನುವ ಎಚ್ಚರಿಕೆಯ ಮಾತನ್ನೂ ಹೇಳಿದ್ದಾರೆ….. ಅಂತಹ ಪರಿಸ್ಥಿತಿ ಬಂದಾಗ ನೋಡೋಣ….ನಮ್ಮಲ್ಲಿ ಎಲ್ಲಿಯ ತನಕ ಒಳ್ಳೆಯ ಗುಣಗಳಿರುವುದೋ ಅಲ್ಲಿಯ ತನಕ ನಾವು ನಂಬಿರುವ ಭಗವಂತನು ನಮ್ಮ ಕೈ ಬಿಡದೇ ಕಾಯುತ್ತಾನೆ….ಯಾರೂ ದಿಕ್ಕಿಲ್ಲದವರಿಗೆ ಭಗವಂತನಿದ್ದಾನೆ…. ಅವನೇ ಸೃಷ್ಟಿಸಿದ ಜೀವಗಳನ್ನು ಕಾಪಾಡದೇ ಇರುವುದಿಲ್ಲ ಎಂದು ಅಮ್ಮ ಹೇಳುವಳು”… ಎನ್ನುವ ಸಿದ್ಧ ಉತ್ತರವನ್ನು ಕೇಳಿದವರಿಗೆಲ್ಲಾ ನೀಡಿ ಆ ಹುಡುಗಿ ಅವರ ಬಾಯಿ ಮುಚ್ಚಿಸುತ್ತಿದ್ದಳು.

ಬೆಳಗಿನ ಜಾವದ ಹೊತ್ತಿಗೆ ಅಮ್ಮ ಮಕ್ಕಳಿಗೆ ನಿದ್ದೆ ಹತ್ತಿತ್ತು. ಆದರೂ ಕೋಳಿ ಕೂಗಿದ ಕೂಡಲೇ ಎದ್ದರು. ಹಿಂದಿನ ರಾತ್ರಿಯೇ ಬಚ್ಚಲ ಒಲೆಗೆ ಉರಿ ಹಾಕಿದ್ದರಿಂದ ನೀರು ಬಿಸಿಯಾಗಿಯೇ ಇತ್ತು. ಮೊದಲು ಸುಮತಿ ಸ್ನಾನ ಮಾಡಿಕೊಂಡು ಅಡುಗೆ ಮನೆಯ ಕಡೆ ನಡೆದಳು. ಅಕ್ಕ ತಂಗಿಯರಿಬ್ಬರೂ ಒಬ್ಬರ ನಂತರ ಒಬ್ಬರು ಸ್ನಾನ ಮುಗಿಸಿ ದೇವರಿಗೆ ಕೈ ಮುಗಿದರು. ಅಕ್ಕನ ಕಾಲೇಜು ಬೇಗ ಪ್ರಾರಂಭವಾಗುವುದರಿಂದ ಅವಳು ಏಳು ಗಂಟೆಯ ಬಸ್ಸಿಗೆ ಹೊರಟಳು. ತಂಗಿಯು ಒಂಬತ್ತು ಗಂಟೆಯ ಬಸ್ಸಿನಲ್ಲಿ ಶಾಲೆಗೆ ಹೋದಳು. ಶಾಲೆ ಮತ್ತು ಕಾಲೇಜು ಒಂದೇ ಕಟ್ಟಡದಲ್ಲಿ ಇರುವುದರಿಂದ ಅಕ್ಕ ತಂಗಿಯರಿಬ್ಬರೂ ಅಲ್ಲಿ ಭೇಟಿಯಾಗುತ್ತಿದ್ದರು. ಅಕ್ಕ ಎಂದಿನಂತೆ ಕಾಲೇಜಿನ ನಂತರ ಟೈಪಿಂಗ್ ಕಲಿಯಲು ಹೋಗಿ ನಂತರ ಹಿರಿಯಕ್ಕನ ಮನೆಗೆ ಹೋದಳು. ಸಂಜೆ 5 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದು ತಂಗಿಗಾಗಿ ಕಾಯುತ್ತಿದ್ದಳು. ಸ್ವಲ್ಪ ಹೊತ್ತಿಗೆಲ್ಲಾ ತಂಗಿಯೂ ಬಂದಳು. 5:30 ರ ಬಸ್ಸು ಬಂದಿತ್ತು ಇಬ್ಬರೂ ಬಸ್ಸಿನಲ್ಲಿ ಹತ್ತಿ ಕುಳಿತರು. ಇವರನ್ನು ಸದಾ ಚೇಡಿಸುತ್ತಿದ್ದ ಯುವಕರಿಬ್ಬರೂ ಇಂದೇಕೋ ಬೇಗ ಬಸ್ಸು ಹತ್ತಿಕೊಂಡರು. ಮುಂದೆ ಸ್ಥಳವಿದ್ದರೂ ಅಕ್ಕ ತಂಗಿಯರು ಕುಳಿತ ಸೀಟಿನ ಬಳಿಯಲ್ಲಿಯೇ ನಿಂತರು. ಸೀಟಿನಲ್ಲಿ ಕುಳಿತಿದ್ದ ಇವರಿಬ್ಬರೂ ಆ ಯುವಕರನ್ನು ಗಮನಿಸದೆ ಎಂದಿನಂತೆ ತಮ್ಮ ಪಾಡಿಗೆ ಮಾತನಾಡುತ್ತಾ ಕುಳಿತಿದ್ದರು. ಆಗ ಇಬ್ಬರಲ್ಲಿ ಒಬ್ಬಾತ… ಹೇಯ್…. ಅಕ್ಕ ತಂಗಿಯರು ಬಹಳ ಅದೃಷ್ಟವಂತರು….. ಅಲ್ವೇನೋ?….ಎಂದು ಸ್ವಲ್ಪ ಜೋರಾಗಿ ಹೇಳಿದ. ಅವರ ಮಾತನ್ನು ಆಲಿಸಿದ ಅಕ್ಕ ತಂಗಿಯರು ಏಕೆ ಹೀಗೆ ಯುವಕರು ಮಾತನಾಡಿಕೊಳ್ಳುತ್ತಿದ್ದಾರೆ? ಎನ್ನುವಂತೆ ಪರಸ್ಪರ ಮುಖ ನೋಡಿಕೊಂಡರು. 



About The Author

Leave a Reply

You cannot copy content of this page

Scroll to Top