ಪ್ರಜ್ಞಾ ಮತ್ತಿಹಳ್ಳಿ
ಯಾರಿಗೂ ಹೇಳದೇ ಊರು ಬಿಟ್ಟಿದೆ ಮಳೆ
ಹುಡುಕಿ ಕಂಗೆಟ್ಟ ಆಷಾಢ ಭುಸುಗುಡುತಿದೆ
ಗಾಳಿಯ ಗಂಟಲಲಿ ವಿರಹದ ಶಹನಾಯಿ
ಹಲಿವುಳಿದ ಮೋಡಕ್ಕೆ ಬಿಕ್ಕಲಾರದ ಬಾಯಿ
ಎಲ್ಲಿ ಅಡಗಿದೆಯೊ ಮಳೆರಾಯಾ
ಮುಖಗವಸಿನ ಜಗಕೆ ಹೆದರಿದೆಯಾ
ಕಾಡು-ಕಣಿವೆ ಹೊಲ-ತೋಟಕ್ಕೆ
ಹಸಿರುಗವಸು ತೊಡಿಸಲಾರೆಯಾ
ಮುಟ್ಟುವುದನ್ನೇ ಬಿಟ್ಟು ಒಳಗೋಡಿ
ಮುಚ್ಚಿದ ಕದದ ಹಿಂದೆ ಗುಟ್ಟಾಗಿದ್ದೇವೆ
ಬಾಲ್ಯದಂಗಳದ ಸಿಹಿ ಒಗರಿನ ಗೇರು ಬೇಣ
ಗೆಲ್ಲು ಗೆಲ್ಲಿಗೂ ತೂಗುವ ಹಣ್ಣು ಹಳದಿ ಕೆಂಪು
ಹೋದಷ್ಟೂ ಮುಗಿಯದ ತಂಪು ಕಾಲ್ದಾರಿ
ಮುಗಿದದ್ದು ತಿಳಿವ ಮೊದಲೇ ಕವಲೊಡೆದ ಉರಿ
ಶಂಕೆಯ ರಾವಣ ಕಾವಲಿದ್ದಾನೆ
ಅಳುವೇ ನಿಲ್ಲುವುದಿಲ್ಲ ಸೀತೆಗೆ
ಕದವಿಕ್ಕಿದ ರಾಮನರಮನೆಗೆ ವೈರಾಣು ಭೀತಿ
ಮನದ ಗೆಲ್ಲು ಗೆಲ್ಲುಗಳಲೂ
ಕುಣಿದು ಕುಪ್ಪಳಿಸುವ ಕಪಿಸೈನ್ಯ
ತಾವೇ ಹಚ್ಚಿಕೊಂಡ ಉರಿಯ ಹಬ್ಬ
ದಂತೆ ಹಬ್ಬಿಸುತ್ತಿದ್ದಾವೆ ಊರಿಗೆಲ್ಲ
ಎಷ್ಟು ಬೈದರೂ ಸಿಟ್ಟಿಗೇಳುವುದಿಲ್ಲ
ಪಟದೊಳಗಿನ ದೊಡ್ಡಪ್ಪ
ಕನಸಿನ ಕಲ್ಯಾಣಿಯೊಳಗೆ ತಣ್ಣಗಿದ್ದಾನೆ
ಸಣ್ಣ ತುಣುಕಿನ ಚಂದ್ರಾಮ
ಕನಸು ನೇಯಬೇಕು ಹೊರ ಬರಲಿಕ್ಕೆ
ಪತ್ರ ಬರೆಯ ಬೇಕು ಮಳೆಗೆ ಬೀಳಲಿಕ್ಕೆ
*************
ಚಂದದ ಕವಿತೆ.
ಇಷ್ಟವಾಯಿತು.