ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ-23
ಗಲಭೆಗಳು ಬಂದ್ಗಳು ಇತ್ಯಾದಿ

ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೩
ನಾವು ವಿಭಾಗಿಯ ಕಚೇರಿಗೆ ವರ್ಗವಾಗಿ ಬಂದ ಸಮಯವೇ ಸರಿ ಇರಲಿಲ್ಲವೋ ಏನೋ ಡಿಸೆಂಬರ್ ೧೯೯೧ಲ್ ರಲ್ಲಿ ಕಾವೇರಿ ವಿವಾದ ಆರಂಭವಾಯಿತು. ಇಡೀ ತಿಂಗಳು ಗಲಭೆ . ಕನ್ನಡ ಚಳುವಳಿಯ ಜನಗಳು ಆಫೀಸಿಗೆ ನುಗ್ಗಿ ಕಚೇರಿಯನ್ನು ಬಂದ್ ಮಾಡಿಸುತ್ತಿದ್ದರು. ಸರಿ ನಂತರ ಅಲ್ಲಿಂದ ಮತ್ತೆ ಮನೆಯ ಕಡೆ ಪಯಣ. ಅಷ್ಟು ಹೊತ್ತಿಗೆ ಬಸ್ ಗಳ ಓಡಾಟ ನಿಂತು ಹೋಗಿರುತ್ತಿತ್ತು .ಆಟೋಗಳು ವಿಪರೀತ ದುಡ್ಡು ಕೇಳುತ್ತಿದ್ದರು. ಆದರೂ ಹೆಚ್ಚು ಜನರನ್ನು ಕೂಡಿಸಿಕೊಂಡು ಹೋಗುತ್ತಿದ್ದುದರಿಂದ ಎಲ್ಲರೂ ಸೇರುವ ಒಂದು ಕಾಮನ್ ಪ್ಲೇಸ್ ತನಕ ಆಟೋದಲ್ಲಿ ಬಂದು ಅಲ್ಲಿಂದ ಮುಂದೆ ನಟರಾಜ ಸರ್ವಿಸ್. ಒಂದು ರೀತಿಯ ಶಿಕ್ಷೆಯೇ ಸರಿ. ಆದರೆ ಆಫೀಸಿಗೆ ಬಂದು ಹಾಜರಾತಿಗೆ ಸಹಿ ಹಾಕದಿದ್ದಲ್ಲಿ ಅಂದು ಬಂದ್ ಇದ್ದರೂ ಸಹ ರಜೆ ಕೊಡಬೇಕಿತ್ತು . ಹೆಚ್ಚು ರಜೆಗಳು ಇರುತ್ತಿರಲ್ಲವಾದ್ದರಿಂದ ಕಷ್ಟಪಟ್ಟು ಹೇಗಾದರೂ ಬಂದು ಆಫೀಸ್ ಬಂದ್ ಆದ ನಂತರ ವಾಪಸ್ ಹೋಗುತ್ತಿದ್ದೆವು. ನಮ್ಮ ವಿಭಾಗೀಯ ಕಚೇರಿ ಹಾಗೂ ಶಾಖೆ ಎರಡು ಎರಡೂ ನಗರದ ಹೃದಯ ಭಾಗದಲ್ಲಿ ಇದ್ದುದರಿಂದ ಯಾವುದೇ ಒಂದು ಗಲಭೆ ಆದರೂ ಶಾಖೆಗಳು ಮುಚ್ಚುತ್ತಿದ್ದುದು ಗ್ಯಾರಂಟಿ.
ಮುಖ್ಯವಾಗಿ ಡಿಸೆಂಬರ್ 1991ರಲ್ಲಿ ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಾದ್ಯಂತ ತೀವ್ರವಾಗಿ ಭುಗಿಲೆದ್ದವು, ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಆದೇಶಗಳ ವಿರುದ್ಧ ನಡೆದ ಪ್ರತಿಭಟನೆಗಳಿಂದ ಪ್ರಾರಂಭವಾಗಿ, ತಮಿಳರ ಮೇಲೆ ಹಿಂಸಾಚಾರ, ಆಸ್ತಿಪಾಸ್ತಿ ಹಾನಿ ಮತ್ತು ತಮಿಳರು ರಾಜ್ಯ ತೊರೆಯುವ ಪರಿಸ್ಥಿತಿಗೆ ಕಾರಣವಾಯಿತು, ಇದು ರಾಜ್ಯದ ಇತಿಹಾಸದ worst riots ಎಂದು ಕರೆಯಲ್ಪಟ್ಟಿತು.

ಗಲಾಟೆಗಳಿಗೆ ಕಾರಣ ಕಾವೇರಿ ನ್ಯಾಯಮಂಡಳಿ ಆದೇಶ. ಭಾರತ ಸರ್ಕಾರ ನೇಮಿಸಿದ ಕಾವೇರಿ ಜಲ ವಿವಾದ ನ್ಯಾಯಮಂಡಳಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಆದೇಶಿಸಿತ್ತು, ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು.
ನ್ಯಾಯಮಂಡಳಿಯ ಆದೇಶದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ನಿರಾಕರಿಸಿದಾಗ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು.
ಮೈಸೂರು, ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ನಗರಗಳಲ್ಲಿ ತಮಿಳರ ಮೇಲೆ ಗುಂಪುಗಳ ದಾಳಿಗಳು ನಡೆದವು. ತಮಿಳು ಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಯಿತು.ಸಾವಿರಾರು ತಮಿಳು ಕುಟುಂಬಗಳು ಭಯದಿಂದ ಕರ್ನಾಟಕವನ್ನು ತೊರೆದರು.ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ್ ಪ್ರತಿಭಟನೆಗಳು ಹಿಂಸಾಚಾರಕ್ಕೆ ಕಾರಣವಾದವು. ಪೊಲೀಸರ ಗುಂಡೇಟು ಸೇರಿದಂತೆ ಹಲವು ಸಾವುಗಳು ಸಂಭವಿಸಿದವು (ಅಂದಾಜು 28 ಜನರು ಮೈಸೂರಿನಲ್ಲಿ).ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸುಮಾರು ಒಂದು ತಿಂಗಳ ಕಾಲ ಮುಚ್ಚಬೇಕಾಯಿತು.
ಆರ್ಥಿಕ ನಷ್ಟ: ಆಸ್ತಿಪಾಸ್ತಿ ನಷ್ಟ ಅಂದಾಜು 19 ಕೋಟಿ ರೂ. ಇತ್ತು.
ಈ ಗಲಾಟೆಗಳು ಕಾವೇರಿ ವಿವಾದದ ಉದ್ವಿಗ್ನತೆಯನ್ನು ಮತ್ತು ಕನ್ನಡಿಗರು ಹಾಗೂ ತಮಿಳರ ನಡುವಿನ ಸಂಬಂಧದಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ತೋರಿಸಿಕೊಟ್ಟವು. ನಮಗೂ ಆ ಡಿಸೆಂಬರ್ ತಿಂಗಳಲ್ಲೇ 6 _ 7 ದಿನ ಕಚೇರಿಗಳನ್ನು ಮುಚ್ಚಿಸಿದ್ದರು.
ನಂತರದ 1993 ಡಿಸೆಂಬರ್ ನಲ್ಲಿ ಬಾಬರಿ ಮಸೀದಿ ಪ್ರಕರಣ ಸಂಬಂಧ ಮೈಸೂರಿನಲ್ಲಿ ಕೋಮು ಗಲಭೆಗಳು ಆರಂಭವಾದವು ನಮ್ಮ ಕಚೇರಿಗಳಿದ್ದ ನಜರ್ಬಾದ್ ಏರಿಯಾ ಸೂಕ್ಷ್ಮ ಪ್ರದೇಶ ಎಂಬ ಹೆಸರು ಪಡೆದಿತ್ತು. ಅಲ್ಲಿ ಮುಸ್ಲಿಂ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿತ್ತು ಹೆಚ್ಚು ಕಡಿಮೆ 27 ದಿನ ಕರ್ಫ್ಯೂ ಜಾರಿಯಲ್ಲಿತ್ತು. ಕರ್ಫ್ಯೂ ಹಾಕಿದ ವಿಷಯ ಮೊದಲೇ ಗೊತ್ತಿದ್ದ ಸಮಯದಲ್ಲಿ ಶಾಖೆಗೆ ಹೋಗುತ್ತಲೇ ಇರಲಿಲ್ಲ. ಕೆಲವೊಮ್ಮೆ ಕರ್ಫ್ಯೂ ಮುಂದುವರಿಸಿದ ವಿಷಯ ತಿಳಿಯದೆ ನಮ್ಮ ಏರಿಯಾಗಳ ಕಡೆ ಕರ್ಫ್ಯೂ ಜಾರಿಯಲ್ಲಿ ಇಲ್ಲದೆ ಇದ್ದಾಗ ಬಸ್ ಗಳು ಸಹ ಓಡಾಡುತ್ತಿದ್ದುದರಿಂದ ಶಾಖೆಗೆ ಹೋಗುತ್ತಿದ್ದೆವು. ದಾರಿಯಲ್ಲೇ ಪೊಲೀಸರು ತಡೆದು ಬೈದು ವಾಪಸ್ಸು ಕಳಿಸುತ್ತಿದ್ದರು ಅಲ್ಲದೆ ಒಂದು ರೀತಿಯ ಭಯ ಮಿಶ್ರಿತ ವಾತಾವರಣ. ಕೋಮುಗಲಭೆ ಅಂದರೆ ಹಾಗೆಯೇ. ಆಗ ಇಡೀ ಮೈಸೂರು ಪ್ರಕ್ಷುಬ್ಧ. ಹೊರಗೆ ಓಡಾಡಲು ಭಯ ಉಂಟಾಗುವ ಪರಿಸ್ಥಿತಿ. ಆ ಬಾರಿ ಎಂದು ಅರೆ ಮಿಲಿಟರಿ ಹಾಗೂ ಮಿಲಿಟರಿ ಪಡೆಗಳನ್ನು ಸಹ ಕರೆಸಿಬಿಟ್ಟಿದ್ದರಿಂದ ಓಡಾಡುವ ದಾರಿಯಲ್ಲಿ ಸೈನಿಕರನ್ನು ಕಾಣುವಂತೆ ಆಗಿತ್ತು .ಇದು ಅಪರೂಪದ ಸಂಗತಿ ಆದ್ದರಿಂದ ಅವರ ಕಡೆ ಭಯದಿಂದಲೇ ನೋಡಿಕೊಂಡು ಹೋಗಬೇಕಾಗಿತ್ತು. ನನಗೆ ಇನ್ನೂ ಚೆನ್ನಾಗಿ ನೆನಪಿದೆ ಡಿಸೆಂಬರ್ 6 ನಮ್ಮ ತಾಯಿಯ ಹುಟ್ಟುಹಬ್ಬ .ಅಂದು ಸಂಜೆ ಅದಕ್ಕಾಗಿಯೇ ಜಾಮೂನ್ ಮತ್ತು ಸಿಹಿ ಅಡಿಗೆ ಮಾಡಿದ್ದರು ಟಿವಿ ನೋಡುತ್ತಾ ಊಟ ಮಾಡುವಾಗ ಬಾಬರಿ ಮಸೀದಿ ಧ್ವಂಸದ ದೃಶ್ಯಗಳನ್ನು ನೋಡುತ್ತಾ ಊಟ ಮಾಡಿದೆವು .ಆದರೆ ಮಾರನೆಯ ದಿನದಿಂದ ಮೈಸೂರಿನಲ್ಲಿ ನಡೆದ ಆ ಹಿಂಸಾಚಾರ ಮತ್ತು ಭಯದ ವಾತಾವರಣ ನೆನೆಸಿಕೊಂಡಾಗ ಈಗಲೂ ಮನಸ್ಸಿಗೆ ಒಂದು ರೀತಿಯ ಕಸಿವಿಸಿ ಉಂಟಾಗುತ್ತದೆ.

ಆಗ ನಮ್ಮ ಬಳಿ ದ್ವಿಚಕ್ರ ವಾಹನಗಳು ಇಲ್ಲದಿದ್ದರಿಂದ ಬಸ್ ನಲ್ಲಿಯೇ ಓಡಾಟ ಹೋಗುತ್ತಾ ಬಸ್ ಸಿಕ್ಕಿದರು ಬರುವ ವೇಳೆಗೆ ಬಸ್ ಓಡಾಟ ನಿಂತು ಹೋಗಿರುತ್ತಿತ್ತು ಹಾಗಾಗಿ ಹೆಚ್ಚಿನ ಅಂಶ ನಡೆದೆ ಮನೆ ಸೇರುತ್ತಿದ್ದೆವು. ಆ ದಿಕ್ಕಿನಲ್ಲಿ ಹೋಗುವ ಎಲ್ಲರೂ ಒಟ್ಟಾಗಿ ನಡೆಯುವುದು ಅಂದಿನ ದಿನಗಳ ಸಾಮಾನ್ಯ ಪದ್ಧತಿಯಾಗಿ ಹೋಗಿತ್ತು. ಈ ನಡೆಯುವ ಕಷ್ಟಕ್ಕಾಗಿಯೇ ಬಂದಾದರೂ ಕಚೇರಿ ಬಂದ್ ಆಗುವುದು ಬೇಡಪ್ಪ ಎನ್ನಿಸಿ ಬಿಡುತ್ತಿತ್ತು ಮುಂದೆ ನಮ್ಮದೇ ದ್ವಿಚಕ್ರವಾಹನಗಳಲ್ಲಿ ಹೋಗುವಾಗ ರಜೆ ಸಿಕ್ಕಿದ ಖುಷಿ ಇರುತ್ತಿತ್ತು.
ಇನ್ನು ಕಚೇರಿಯ ಕೆಲಸದ ವಿಷಯಕ್ಕೆ ಬಂದರೆ ನನ್ನ ಜೊತೆ ಸಹಾಯಕರಾಗಿದ್ದ ರಾಮನ್ ಅವರು ಉನ್ನತ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿ ವರ್ಗವಾಗಿ ಹೋದರು ಈ ಹಿಂದೆ ಹೇಳಿದಂತೆ ವಿದ್ಯಾರಣ್ಯ ಅವರು ಹೋದಾಗಿನಿಂದ ನಮ್ಮ ವಿಭಾಗದಲ್ಲಿ ಉನ್ನತ ಶ್ರೇಣಿ ಸಹಾಯಕರು ಇರಲಿಲ್ಲ ಈಗ ಸತ್ಯನಾರಾಯಣ ಎನ್ನುವವರು ಸೋಮವಾರಪೇಟೆಯಿಂದ ವರ್ಗವಾಗಿ ಬಂದರು ಅಲ್ಲದೆ ರಾಮನ್ ಅವರ ಜಾಗಕ್ಕೆ ಸುಧಾ ಎನ್ನುವವರು ಸಿಎ ಬ್ರಾಂಚ್ ನಿಂದ ವರ್ಗವಾಗಿ ಬಂದರು. ಈ ವೇಳೆಗಾಗಲೇ ಎಸ್ಎಂಎಸ್ ಗೋಪಾಲನ್ ಅವರು ನನಗೆ ಒಳ್ಳೆಯ ಮಾರ್ಗದರ್ಶನ ನೀಡಿ ಚೆನ್ನಾಗಿ ತರಬೇತಿ ಕೊಟ್ಟುಬಿಟ್ಟಿದ್ದರು. ಒಳ್ಳೆ ಶಾಲೆಯ ಪರೀಕ್ಷೆಗೆ ಓದುವಂತೆ ಇಲಾಖೆಯ ಸುತ್ತೋಲೆಗಳನ್ನು ಚೆನ್ನಾಗಿ ಮನನ ಮಾಡಿಕೊಂಡಿರುತ್ತಿದ್ದೆ. ಹಾಗೆಲ್ಲ ಹೊಸ ಹೊಸ ಪ್ಲಾನ್ ಗಳು ಬಂದಾಗ ವಲಯ ಕಛೇರಿಯಿಂದ ಸುತ್ತೋಲೆಗಳು ಬರುತ್ತಿದ್ದವು ಹಾಗೆ ವಿಭಾಗಕ್ಕೆ ಸಂಬಂಧಿಸಿದ ಏನಾದರೂ ತಿದ್ದುಪಡಿಗಳು ಬದಲಾವಣೆಗಳು ಸಹ ಸುತ್ತೋಲೆಗಳ ಮೂಲಕವೇ ಬರುತ್ತಿತ್ತು ಇಲ್ಲಿ ಅವುಗಳನ್ನು ನಾವು ಮತ್ತೆ ಟೈಪ್ ಮಾಡಿಸಿ ಸೈಕ್ಲೋ ಸ್ಟೈಲ್ ಮಾಡಿ ಪ್ರತಿಗಳನ್ನು ಮಾಡಿ ಶಾಖಾ ಕಚೇರಿಗಳಿಗೆ ಕಳಿಸಿಕೊಡುತ್ತಿದ್ದೆವು. ವಿಭಾಗಿಯ ಕಚೇರಿಯ ಕ್ರಮ ಸಂಖ್ಯೆಗಳು ಸಹ ಸುತ್ತೋಲೆಗಳಲ್ಲಿ ಇರುತ್ತಿದ್ದವು. ಇವೆಲ್ಲ ಸಂಖ್ಯೆಗಳನ್ನು ನನ್ನ ನೆನಪಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಯಾರಾದರೂ ಫೋನ್ ಮಾಡಿ ಕೇಳಿದಾಗ ಅಲ್ಲಲ್ಲೇ ಮಾರ್ಗದರ್ಶನ ನೀಡುವಷ್ಟು ಹೊಸ ವ್ಯವಹಾರ ವಿಭಾಗದಲ್ಲಿ ಪಳಗಿ ಬಿಟ್ಟಿದ್ದೆ .ಇದಕ್ಕೆಲ್ಲ ನಮ್ಮ ಆಡಳಿತಾಧಿಕಾರಿಗಳವರೇ ಕಾರಣ. ತಮಗೆ ತಿಳಿದ ಎಲ್ಲಾ ವಿಷಯಗಳು ನಮಗೆ ತಿಳಿಸಿಕೊಟ್ಟು ಸಹಾಯ ಮಾಡುತ್ತಿದ್ದರು.
ಸಹಾಯಕ ವಿಭಾಗಾಧಿಕಾರಿಗಳಾಗಿದ್ದ ಆಚಾರ್ಯ ಅವರು ಸಹ ನಿವೃತ್ತಿ ಹೊಂದಿ ವಿ ನರಸಿಂಹನ್ ಎನ್ನುವ ಅಧಿಕಾರಿಗಳು ಆ ಜಾಗಕ್ಕೆ ಬಂದಿದ್ದರು. ಅವರು ಸಹ ಆಗ ಫೆಲೋ ಶಿಪ್ ಮಾಡಿದ ಕೆಲವೇ ಜನಗಳಲ್ಲಿ ಒಬ್ಬರು. ತುಂಬಾ ವಿಷಯ ತಿಳಿದುಕೊಂಡಿದ್ದರು. ಆದರೆ ಮಾತೃ ಭಾಷೆ ತಮಿಳು ಆದ್ದರಿಂದ ಕನ್ನಡದಲ್ಲಿ ವ್ಯವಹರಿಸಲು ಸ್ವಲ್ಪ ತೊಡಕು ಇತ್ತು .ಹಾಗಾಗಿ ಯಾರದೇ ಫೋನ್ಗಳು ಬಂದರೆ ನನ್ನನ್ನು ಅಥವಾ ಆಡಳಿತ ಅಧಿಕಾರಿಗಳನ್ನು ಕರೆಯುತ್ತಾ ಇದ್ದರು.
ನಾನು ವಿಭಾಗೀಯ ಕಚೇರಿಗೆ ಬಂದ 3-4 ತಿಂಗಳಲ್ಲಿ ಅಲ್ಲಿನ ಶೀಘ್ರ ಲಿಪಿಕಾರ್ತಿ ಸುವರ್ಣ ಅವರು ಹೆರಿಗೆ ರಜೆಗೆ ಹೋಗಿದ್ದರು ಅಲ್ಪಕಾಲದ ರಜೆ ಆದ್ದರಿಂದ ಅವರ ಜಾಗಕ್ಕೆ ಬೇರೆಯವರನ್ನು ಕೊಟ್ಟಿರಲಿಲ್ಲ ನನಗೆ ಬೆರಳಚ್ಚು ಬರುತ್ತಿದ್ದುದರಿಂದ ನಾನೇ ಆ ಜಾಗದ ಕೆಲಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೆ. ಉಕ್ತಲೇಖನ ಕೊಡುವ ಪ್ರಮೇಯಗಳು ಅಷ್ಟೇನೂ ಬರುತ್ತಿರಲಿಲ್ಲ. ವಿಷಯ ಹೇಳಿದರೆ ಸಾಕು ನಾನೇ ಪತ್ರಗಳನ್ನು ಡ್ರಾಫ್ಟ್ ಮಾಡಿ ಟೈಪ್ ಮಾಡಿ ಕೊಟ್ಟು ಬಿಡುತ್ತಿದ್ದೆ. ಆಗ ಸೈಕ್ಲೊ ಸ್ಟೈಲ್ ಅಂದರೆ ಕಲ್ಲಚ್ಚು ಪ್ರತಿಗಳ ಕಾಲ ಈಗಿನ ಹಾಗೆ ಜೆರಾಕ್ಸ್ ಹೆಚ್ಚು ಉಪಯೋಗದಲ್ಲಿ ಇರಲಿಲ್ಲ ಕಾರ್ಬನ್ ಶೀಟ್ ಇರುವ ಸೈಕ್ಲೋ ಸ್ಟೈಲ್ ಶೀಟ್ ಗಳಲ್ಲಿ ಟೈಪ್ ಮಾಡಿ ಕೊಟ್ಟರೆ ಅದನ್ನು ಸಹಿ ಮಾಡಿ ಕೊಟ್ಟ ನಂತರ ಹೆಚ್ಚಿನ ಪ್ರತಿಗಳನ್ನು ಕಲ್ಲಚ್ಚು ಯಂತ್ರದಲ್ಲಿ ತೆಗೆದು ಕೊಡುತ್ತಿದ್ದರು. ಈಗ ಪ್ರತಿಯೊಂದಕ್ಕೂ ಜೆರಾಕ್ಸ್ ಬಂದಿದೆ ಕಾಗದದ ಪ್ರತಿಗಳ ಬಳಕೆಯೂ ಕಡಿಮೆಯಾಗಿದೆ ಎಲ್ಲವೂ ಕಂಪ್ಯೂಟರ್ಗಳಲ್ಲಿಯೇ. ನಾವು ನೋಡ ನೋಡುತ್ತಿದ್ದಂತೆಯೇ ಎಷ್ಟೆಲ್ಲಾ ಬದಲಾವಣೆಗಳಿಗೆ ಸಾಕ್ಷಿಯಾದೆವಲ್ಲ ಎನಿಸುತ್ತದೆ.
ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗೆ ಪರಿಶೀಲನೆಗೆಂದು ಹೋಗುವುದು ಒಂದು ಕ್ರಮ .ಆಗ ಅದಕ್ಕೆ ಕ್ವಾಲಿಟಿ ಕಂಟ್ರೋಲ್ ಎಂಬ ಪಾರಭಾಷಿಕ ಪದ ಇತ್ತು. ಈಗ ಅದನ್ನು ಕ್ವಾಲಿಟಿ ಮ್ಯಾನೇಜ್ಮೆಂಟ್ ಅನಾಲಿಸಿಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಒಬ್ಬರು ಅಧಿಕಾರಿ ಹಾಗೂ ಮತ್ತೊಬ್ಬರು ಉನ್ನತ ದರ್ಜೆ ಸಹಾಯಕರು ಅಥವಾ ಸಹಾಯಕರು ಅವರೊಂದಿಗೆ ಹೋಗುವುದು ವಾಡಿಕೆ. ಈವರೆಗೆ ರಾಮನ್ ಅವರು ಇದುದರಿಂದ ಅವರೇ ಎಲ್ಲಾ ಕಡೆಗೂ ಹೋಗುತ್ತಿದ್ದರು ನನಗೂ ವಿಭಾಗದ ಎಲ್ಲಾ ವಿಷಯಗಳು ಅಷ್ಟು ಚೆನ್ನಾಗಿ ತಿಳಿದಿರಲಿಲ್ಲ ಹಾಗಾಗಿ ನಾನು ಹೋಗಲು ಆಗಿರಲಿಲ್ಲಈಗ ರಾಮನ್ ಅವರು ಹೋದ ಮೇಲೆ ನಾನೇ ಸೀನಿಯರ್ ಆದ್ದರಿಂದ ಅಲ್ಲದೆ ಗೋಪಾಲನ್ ಸರ್ ಅವರಿಗೆ ನನ್ನ ಮೇಲೆ ತುಂಬಾ ನಂಬಿಕೆ ಇರುವುದರಿಂದ ನನ್ನನ್ನು ಅವರೊಂದಿಗೆ ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಬರಲು ಹೇಳುತ್ತಿದ್ದರು ಆದರೆ ತುಂಬಾ ದೂರದ ಕಡೆಗಳಿಗೆ ನನಗೆ ಹೋಗಲು ಆಗುತ್ತಿರಲಿಲ್ಲ ಹಾಗಾಗಿ ಶ್ರೀರಂಗಪಟ್ಟಣ ನಂಜನಗೂಡು, ಮೈಸೂರಿನ ವಿವಿಧ ಶಾಖೆಗಳು ಕೆ ಆರ್ ನಗರ ಹುಣಸೂರು ಹಾಗೂ ಕೊಳ್ಳೇಗಾಲ ಒಂದು ಬಾರಿ ಚಾಮರಾಜನಗರಕ್ಕೂ ಸಹ ಹೋಗಿದ್ದ ನೆನಪು ಈ ರೀತಿ ಅವರೊಂದಿಗೆ ಹೋಗುತ್ತಿದ್ದೆ. ಅಲ್ಲಿ ಆಯಾಯಾ ಅವಧಿಯಲ್ಲಿ ವಿತರಿಸಿದ ಪಾಲಿಸಿಗಳ ಕಡತಗಳನ್ನು ತರಿಸಿ ಸರಿಯಾದ ರೀತಿಯಲ್ಲಿ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು. ಏನಾದರೂ ತಪ್ಪುಗಳು ಇದ್ದಲ್ಲಿ ಅವುಗಳನ್ನು ಬರೆದುಕೊಂಡು ಹೋಗುವುದು ಮತ್ತು ಅಲ್ಲಿಯೇ ನಡೆಯುತ್ತಿದ್ದ ಚರ್ಚೆಗಳಲ್ಲಿ ಅವುಗಳನ್ನು ಹೇಳಿ ತಿದ್ದಿಕೊಳ್ಳಲು ಹೇಳುತ್ತಿದ್ದೆವು. ವಾಪಸ್ಸು ಬಂದ ನಂತರ ಅದರ ಬಗ್ಗೆ ಒಂದು ವರದಿಯನ್ನು ತಯಾರಿಸಿ ವಿಭಾಗಿಯ ಅಧಿಕಾರಿಗಳ ಗಮನಕ್ಕೆ ತಂದು ಶಾಖೆಗೆ ಕಳುಹಿಸಿ ಕೊಡುತ್ತಿದ್ದೆವು.ಈ ರೀತಿ ತಿಂಗಳಲ್ಲಿ ನಾಲ್ಕು ಅಥವಾ ಐದು ದಿನಗಳು ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಹೋಗುತ್ತಿದ್ದು ಮಾಮೂಲಿ ಗಿಂತ ಸ್ವಲ್ಪ ಬೇಗನೆ ಹೊರಡಬೇಕಿತ್ತು ಹಾಗೂ ಬರುವುದು ಸಹ ತಡವಾಗುತ್ತಿತ್ತು ಆದರೆ ಈ ರೀತಿಯ ಟೂರ್ಗಳಿಗೆ ಪ್ರವಾಸ ಭತ್ಯೆ ಕೊಡುತ್ತಿದ್ದರಿಂದ ಅದು ಒಂದು ರೀತಿಯ ಆಕರ್ಷಣೆ .ಬಸ್ ಚಾರ್ಜ್ ಮಾತ್ರ ಖರ್ಚು ಮಾಡಿದರೆ ಬಸ್ ಚಾರ್ಜ್ ನೊಂದಿಗೆ ಒಂದು ದಿನದ ಪ್ರಯಾಣ ಭತ್ಯೆ ಸಿಗುತ್ತಿತ್ತು. ಆಗ ಒಂದು ದಿನಕ್ಕೆ ನೂರು ರೂಪಾಯಿಗಳ ವರೆಗೂ ಪ್ರವಾಸ ಭತ್ಯೆ ಸಿಗುತ್ತಿತ್ತು. ಈ ರೀತಿ ಮನಸ್ಸಿಗೆ ಒಂದು ರೀತಿ ಖುಷಿ ಕೊಡುವ ಕೆಲಸ. ದಿನಗಳು ಉರುಳುತ್ತಿದ್ದದು ಗೊತ್ತಾಗುತ್ತಲೇ ಇರಲಿಲ್ಲ.
ಮುಂದಿನ ವಾರ,ಇಲಾಖಾ ಪರೀಕ್ಷೆಗಳು
ಸುಜಾತಾ ರವೀಶ್




