ಕಾವ್ಯ ಸಂಗಾತಿ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
“ಬಣ್ಣದ ಬದುಕು”
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
“ಬಣ್ಣದ ಬದುಕು”


ಕೆಲವು
ನಂಬಿಕೆಗಳೇ ಹಾಗೆ
ಕಣ್ಣು ಮುಚ್ಚಿ
ನಡೆದಾಗಲೆಲ್ಲಾ..
ಜೊತೆಗಿದ್ದೇ
ಹೃದಯದ ಬಡಿತವನ್ನೇ
ಅಡವಿಡುವ ಹಾಗೆ!
ಕೆಲವು
ಕಣ್ಣುಗಳೇ ಹಾಗೆ
ನೋಡು-ನೋಡುತ್ತಲೇ
ಆಂತರ್ಯವನು ತಿವಿದು
ಅಗಿಯುವ ಹಾಗೆ
ಕೆಲವು
ಬಂಧಗಳೇ ಹಾಗೆ
ಹೊರಗಿನಿಂದ
ರೇಷ್ಮೆಯ ನೂಲಿನಂತೆ..
ಆದರೆ
ಒಳಗೊಳಗೆ
ಉರುಳಾಗಿ ಕಾಡುವ ಹಾಗೆ!
ಕೆಲವು
ನೆರಳುಗಳೇ ಹಾಗೆ
ಬೆಳಕಿದ್ದಾಗ
ಬೆನ್ನಿಗಂಟಿಕೊಂಡಿದ್ದು..
ಕತ್ತಲಾಗುತ್ತಿದ್ದಂತೆಯೇ
ಕಾಣದಂತೆ……. ಮಾಯವಾಗುವ ಹಾಗೆ!
ಕೆಲವು
ಹಣ್ಣುಗಳೇ ಹಾಗೆ
ಉಣ್ಣು-ಉಣ್ಣುವಾಗಲೇ
ಒಂದು ಬದಿ ಸಿಹಿ
ಮಗದೊಂದು ಬದಿ ಕಹಿಯ ಹಾಗೆ
ಕೆಲವು
ಬಣ್ಣಗಳೇ ಹಾಗೆ
ಮನದೊಳಗೆ
ಕೊಳೆಯಿದ್ದರೂ ಹೊರಗೆ
ನಗು-ನಗುತ್ತಲೇ
ಪ್ರಪಾತಕ್ಕೆ ನೂಕುವ ಹಾಗೆ!
ಕೆಲವು
ಹೆಣ್ಣುಗಳೇ ಹಾಗೆ
ಮುದ್ದಿಸಿ ಮೈಮರೆಸುತ್ತಲೇ
ನಿದ್ದೆಯಲ್ಲೇ ಮೆಲ್ಲಗೆ
ಉಸಿರುಗಟ್ಟಿಸುವ ಹಾಗೆ!
ಈ ಮಣ್ಣೂ ಸಹ ಹಾಗೆಯೇ…
ತನಗೆ ಬೇಕೆಂದಾಗ
ತಕ್ಷಣವೇ ಕರೆದು
ಅಪ್ಪಿಕೊಂಡು ಶಾಶ್ವತವಾಗಿ
ಮಲಗಿಸಿಕೊಳ್ಳುವ ಹಾಗೆ!
ಶರಣಪ್ಪ ತಳ್ಳಿ ಕುಪ್ಪಿಗುಡ್ಡ



