ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಬ್ಬದ ಅಲಂಕಾರದಲಿ ಮುಳುಗದೆ ವಾಸ್ತವ ಸವಾಲುಗಳತ್ತ ಗಮನಹರಿಸಲಿ.

ಪ್ರತಿ ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವದ ಹರ್ಷದ ಧ್ವನಿ ನಾಡಿನ ಮೂಲೆಮೂಲೆಗೂ ಮೊಳಗುತ್ತದೆ. ಕೆಂಪು–ಹಳದಿ ಬಾವುಟಗಳು ಹಾರಾಡುತ್ತವೆ, ಕನ್ನಡದ ಹಾಡುಗಳು ಧ್ವನಿಸುತ್ತವೆ. ಆದರೆ, ಈ  ಹಬ್ಬದ ಹಿಂದೆ ಒಂದು ಆಳವಾದ ಅರ್ಥವಿದೆ ಅದು ಕೇವಲ ಉತ್ಸವವಲ್ಲ, ನಾಡಿನ ಆತ್ಮದ ಪ್ರತಿಬಿಂಬ.
ಒಂದು ನಾಡು, ನುಡಿಯ ಕನಸಾಗಿದೆ. ನವೆಂಬರ್ ೧,೧೯೫೬  ಕನ್ನಡಿಗರ ಏಕತೆಯ ಕನಸು ನನಸಾದ ದಿನ. ವಿಭಜಿತ ಪ್ರಾಂತ್ಯಗಳಲ್ಲಿ ಹರಡಿದ್ದ ಕನ್ನಡ ಭಾಷಿಕರು ಒಂದೇ ನಾಡಿನಡಿ ಸೇರಿಸುವುದು ಸುಲಭದ ಕೆಲಸವಲ್ಲ. ,ಆಲೂರು ವೆಂಕಟರಾವ್ ಅವರಂತಹ ಹೋರಾಟಗಾರರು “ಒಂದು ನಾಡು ಒಂದು ನುಡಿ” ಎಂಬ ಧ್ಯೇಯದತ್ತ ಜನರ ಮನಸ್ಸು ಒಗ್ಗೂಡಿಸಿದರು. ಅವರ ಶ್ರಮದಿಂದ ಹುಟ್ಟಿದ “ಮೈಸೂರು ರಾಜ್ಯ”ಕ್ಕೆ ೧೯೭೩ರಲ್ಲಿ “ಕರ್ನಾಟಕ” ಎಂಬ ಹೊಸ ಹೆಸರು ದೊರಕಿತು. ಈ ಇತಿಹಾಸವು ಕೇವಲ ಭೂತಕಾಲದ ಕಥೆಯಲ್ಲ; ಅದು ನಮ್ಮ ಆತ್ಮಸ್ಮರಣೆಯ ಭಾಗ. ಆದರೆ ಇಂದಿನ ತಲೆಮಾರಿಗೆ ಈ ಹೋರಾಟದ ಅರ್ಥ ಎಷ್ಟು ತಲುಪಿದೆ ಎಂಬ ಪ್ರಶ್ನೆ ಮೂಡುತ್ತದೆ.

ರಾಜ್ಯೋತ್ಸವದಂದು ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನಗಳು, ಕನ್ನಡ ಗೀತೆಗಳು ಎಲ್ಲೆಡೆ ಉತ್ಸವದ ವಾತಾವರಣ ರಂಗೆರುತ್ತದೆ ಆದರೆ ಈ ಉತ್ಸಾಹ ದಿನದ ತರುವಾಯ ಎಲ್ಲಿ ಮಾಯವಾಗುತ್ತದೆ?
ನಗರಗಳಲ್ಲಿ ಕನ್ನಡದ ಬಳಕೆ ಕುಸಿಯುತ್ತಿದೆ. ಶಾಲೆಗಳಲ್ಲಿ ಕನ್ನಡ ವಿಷಯವನ್ನು ಪೋಷಿಸಲು ಶಿಕ್ಷಕರ ಕೊರತೆ. ಉದ್ಯೋಗದಲ್ಲಿ ಇಂಗ್ಲಿಷ್ ಪ್ರಾಬಲ್ಯ. ಕೆಲವೊಮ್ಮೆ ಕನ್ನಡ ಮಾತನಾಡುವುದನ್ನೇ ಹಿಂಜರಿಯುವವರಿದ್ದಾರೆ.
ರಾಜ್ಯೋತ್ಸವದ ಹಬ್ಬ ಕೇವಲ ಪ್ರದರ್ಶನವಾಗಬಾರದು. ಅದು ಕನ್ನಡದ ಬದುಕಿನ ಅಸ್ಮಿತೆಗೆ ಪಾಠವಾಗಬೇಕು. ಕನ್ನಡ ನುಡಿಯಿಂದ ದೂರವಾಗುತ್ತಿರುವ ಹೊಸ ತಲೆಮಾರಿಗೆ ಭಾಷೆಯ ಮೌಲ್ಯವನ್ನು ಬೋಧಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಪ್ರಗತಿಯ ಮಧ್ಯೆ ಮರೆವಾಗುತ್ತಿರುವ ಭಾಷೆ

ಕರ್ನಾಟಕ ಇಂದು ತಂತ್ರಜ್ಞಾನ, ಶಿಕ್ಷಣ, ಕೈಗಾರಿಕೆಗಳಲ್ಲಿ ಮುನ್ನಡೆಯ ರಾಜ್ಯ. ಬೆಂಗಳೂರು ವಿಶ್ವದ ಐಟಿ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಆದರೆ ಈ ಬೆಳಕಿನ ಹಿಂದೆ ಇನ್ನೊಂದು ಕತ್ತಲು ಇದೆ ಗ್ರಾಮೀಣ ಪ್ರದೇಶದ ಸಂಕಷ್ಟ, ರೈತರ ಹೋರಾಟ, ಶಿಕ್ಷಣದಲ್ಲಿ ಅಸಮಾನತೆ, ನಿರುದ್ಯೋಗಳು ತಾಂಡವವಾಡುತಿವೆ.
ರಾಜ್ಯೋತ್ಸವದ ದಿನ ನಾವು ಹಬ್ಬದ ಅಲಂಕಾರಗಳಲ್ಲಿ ಮುಳುಗದೇ, ಈ ವಾಸ್ತವ ಸವಾಲುಗಳತ್ತ ಗಮನ ಹರಿಸಬೇಕಿದೆ. ರಾಜ್ಯದ ನಿಜವಾದ ಗೌರವ ಅದರ ಪ್ರಗತಿಯ ನ್ಯಾಯಸಮ್ಮತ ಹಂಚಿಕೆಯಲ್ಲಿ ಇದೆ.

ನವ ಪೀಳಿಗೆಯ ಪಾತ್ರ

ಹೊಸ ತಲೆಮಾರಿನ ಯುವಕರು ಕನ್ನಡದ ಭವಿಷ್ಯದ ನಿರ್ಣಾಯಕ ಶಕ್ತಿ. ಅವರು ತಂತ್ರಜ್ಞಾನ, ಮಾಧ್ಯಮ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ಕನ್ನಡದ ಬಳಕೆಯನ್ನು ಬೆಳೆಸಬೇಕು. ಕನ್ನಡದ ಹೊಸ ಸಾಹಿತ್ಯ, ಸಂಶೋಧನೆ, ವಿಜ್ಞಾನ ಮತ್ತು ಆಡಳಿತ ಭಾಷೆಯಾಗಿ ಅಭಿವೃದ್ಧಿಪಡಿಸುವುದು ಕಾಲದ ಅಗತ್ಯ.
ರಾಜ್ಯೋತ್ಸವವನ್ನು “ಕನ್ನಡ ದಿನ” ಎಂದು ಆಚರಿಸುವುದಕ್ಕಿಂತ, “ಕನ್ನಡ ನಾಡಿನ ನವೀಕರಣದ ದಿನ” ಎಂದು ರೂಪಿಸಬೇಕು.

ನಿಜವಾದ ರಾಜ್ಯೋತ್ಸವ

ರಾಜ್ಯೋತ್ಸವದ ನಿಜವಾದ ಅರ್ಥ ಹಬ್ಬದಲ್ಲಿಲ್ಲ, ಬದುಕಿನ ಹಾದಿಯಲ್ಲಿ ಕನ್ನಡವನ್ನು ಉಳಿಸುವ ಮನೋಭಾವದಲ್ಲಿದೆ.
ಕನ್ನಡ ನಮ್ಮ ನಾಡಿನ ನಾಡಿಯ ನಾದ. ಆ ನಾದ ನಿಂತರೆ ನಾಡೇ ನಿಂತಂತೆ.
ಆದುದರಿಂದ ರಾಜ್ಯೋತ್ಸವದ ದಿನ ನಾವು ಕೇವಲ ಬಾವುಟ ಹಾರಿಸುವುದಷ್ಟೇ ಅಲ್ಲ — ನಮ್ಮ ನುಡಿಯ ಗೌರವವನ್ನು ಬದುಕಿನ ಪ್ರತಿಯೊಂದು ಹಂತದಲ್ಲೂ ನೆಲೆಗೊಳಿಸುವ ಪ್ರತಿಜ್ಞೆ ಮಾಡಬೇಕು.

ಜಯ ಹೇ ಕರ್ನಾಟಕ ಮಾತೆ ಇದು ಕೇವಲ ಗೀತೆ ಅಲ್ಲ, ಅದು ಬದುಕಿನ ಧ್ವನಿ.


About The Author

Leave a Reply

You cannot copy content of this page

Scroll to Top