ವೃದ್ದಾಪ್ಯ ಸಂಗಾತಿ
ಶಿವಲೀಲಾ ಶಂಕರ್
“ವೃದ್ಧಾಪ್ಯ ನಮಗೂ ಬರುತ್ತೆ..
ಕಾಯಬೇಕು ಅಷ್ಟೇ. ”

ನನಗೂ ವಯಸ್ಸಾಗುತ್ತೆ, ಕೈ ಕಾಲು ಅದುರುತ್ತೆ,ಕಣ್ಣು ಮಂಜಾಗುತ್ತೆ,ಮಾತು ತೊದಲುತ್ತೆ,ದೇಹ ಬ್ಯಾಲೆನ್ಸ್ ಕಳಕೊಳ್ಳತ್ತೆ, ಜೊತೆಗಿದ್ದವರೆಲ್ಲ ನಿಧಾನವಾಗಿ ದೂರಾದರು..ಅನಾರೋಗ್ಯ ಒಂದೇ ಸಾಕು! ಬದುಕಿನ ನಿಜವಾದ ಬಣ್ಣ ಬಯಲು ಮಾಡಲು.’ಯೌವ್ವನ’ದ ಒಂದಿಷ್ಟು ವರ್ಷಗಳು ಹರ್ಷದಿಂದ,ಹುಮ್ಮಸ್ಸಿನಿಂದ ಕಳೆದು..ಗಳಿಸುವ ನೆಪದಲ್ಲಿ ಕಳೆದುಕೊಂಡ ಅಮೂಲ್ಯವಾದ ಸಂಬಂಧಗಳು ಮತ್ತೆ ಪಡೆಯಲು ಸಾಧ್ಯವಾ? ಅಥವಾ ಪುನಃ ಮೊದಲಿನಂತೆ ಅವು ಉಳಿದುಕೊಳ್ಳುವುದಾ? ನಾನು ನಮ್ಮವರು “ಕೊನೆಗೆ ನಮಗೆ ನಾವೆ ಗೋಡೆಯ ಮಣ್ಣಿನಂತೆ” ಎಂಬ ಗಾದೆಮಾತಿನಂತೆ ಉಳಿದುಬಿಡುತ್ತೆವೆ.
ಇದ್ದಾಗ ಅದರ ಬೆಲೆ ಗೊತ್ತಾಗದು!. ನಿಜ ಅಲ್ಲವಾ? ಇನ್ನೂ ಎಷ್ಟೋ ಜನ ತೋರಿಕೆಗೆ ಕಾಣುವಂತೆ ವ್ಯವಹರಿಸುತ್ತಾರೆ. ಅದು ಅಹಂ ನ ವರ್ತನೆ ಹೊರತು ಮತ್ತೇನಿಲ್ಲ!. ಸಮಾಜದ ಎಲ್ಲ ಮುಖಗಳು ತಮ್ಮ ನೈಜ ಚಹರೆಗಳನ್ನು ಮುಚ್ಚಿಡುವಲ್ಲಿ ಹೆಚ್ಚಿನ ಶ್ರಮವಹಿಸುತ್ತಿರುವುದು ದುರಂತ.

ವಯಸ್ಸು…. ಹೆಚ್ಚಾಗುವುದು…ದೇಹ ಕ್ರಮೇಣ ತನ್ನ ಶಕ್ತಿಯನ್ನು ಹಂತ ಹಂತವಾಗಿ ಕಳೆದುಕೊಳ್ಳುವುದು ನೈಸರ್ಗಿಕ ನಿಯಮ. ಆದರೆ ಅದನ್ನು ಸ್ವಾಭಾವಿಕವಾಗಿ ಸ್ವೀಕರಿಸುವ ಗುಣ ಲಕ್ಷಣಗಳು ಎಲ್ಲರಿಗೆ ಒಂದೆ ರೀತಿ ಇರದು.ಕೆಲವರು ಆಧ್ಯಾತ್ಮಿಕ ಚಿಂತನೆಯತ್ತ ವಾಲಿದರೆ,ಇನ್ನೂ ಕೆಲವರು ಭೌತಿಕ ವ್ಯಾಮೋಹದತ್ತ ವಾಲುವರು,ಐಷಾರಾಮಿ ಜನರು ಆಧುನಿಕ ತಂತ್ರಜ್ಞಾನದ ಮೂಲಕ ಯೌವ್ವನವನ್ನು ಸ್ವಲ್ಪ ಸಮಯ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಹೊಂದಬಹುದು.ಉತ್ತಮ ಆಹಾರ,ವ್ಯಾಯಾಮ, ನೆಮ್ಮದಿ ಇವೆಲ್ಲವೂ ಎಲ್ಲರಿಗೂ ಸಮನಾಗಿ ದಕ್ಕುವುದಿಲ್ಲ.ವಯಸ್ಸಾದಂತೆ ಕಾಯಿಲೆಗಳು ವಿವಿಧ ರೂಪದಲ್ಲಿ ಬರುತ್ತವೆ. ಕಾಯಿಲೆಗಳೆ ಮನುಷ್ಯನನ್ನು ಮುಪ್ಪಾಗಿಸುವುದು.ಗೊತ್ತಿದೆ, ಆದರೂ ಅನಿವಾರ್ಯವಾಗಿ ನಾವು ಅನಾರೋಗ್ಯವನ್ನು ನಮಗರಿವಿಲ್ಲದೆ ಬರಮಾಡಿಕೊಳ್ಳುತ್ತೆವೆ.ತಡೆದುಕೊಳ್ಳುವ ತಾಕತ್ತು ಇಲ್ಲದಾಗ ಆಸ್ಪತ್ರೆಗೆ ದಾಖಲಾಗಿ ಜೀವಮಾನವಿಡೀ ಮಾತ್ರೆಗಳ ಗುಲಾಮರಾಗಿ ಜೀವಿಸಿಬಿಡುತ್ತೆವೆ.ಮನುಷ್ಯನ ಜೀವನ ಎಷ್ಟು ವಿಚಿತ್ರ ಅನ್ನಿಸಿದರೂ ನಾವೆಲ್ಲ ಅದರ ಕೈವಶವಾಗಿ ಬಿಟ್ಟಿದ್ದೆವೆ.
ವಯೋಸಹಜ ಕಾಯಿಲೆಗಳಿಗೆ ತುತ್ತಾದ ವೃದ್ದರು ನರಳುವ ರೀತಿ ನೋಡಿದಾಗ ಕರುಳು ಕಿತ್ತು ಬರುತ್ತದೆ.ಪಾಪ! ಅವರಿಗೆ ಒಂದು ತುತ್ತು ಹೆಚ್ಚು,ಒಂದ ತುತ್ತು ಕಡಿಮೆ ಒತ್ತಾಯದ ಊಟ ಅವರಿಗೆ ಸಲ್ಲ.ನಿದ್ರೆಯ ಕೊರತೆ.ಅನಿಯಂತ್ರಿತ ಶೌಚ…ಹೀಗೆ ಹಲವಾರು ನೋವುಗಳು ಬಳಲಿಕೆ ಹೆಚ್ಚು ಮಾಡಿದಷ್ಟು ಅವರು ಚಿಕ್ಕ ಮಕ್ಕಳಂತಾಗಿ ಬಿಡುತ್ತಾರೆ. ಅಂತವರ ನಿಯಂತ್ರಣ ಮಾಡುವುದು ಕಠಿಣ.ಹೊತ್ತು ಹೊತ್ತಿಗೆ ಬದಲಾಗುವ ಅವರ ಮನಸ್ಥಿತಿ ಕಣ್ಣಾರೆ ಕಂಡವರಿಗೆ ಮಾತ್ರ ಗೊತ್ತು ನಿಜವಾದ ಬದುಕಿನ ಅರ್ಥ. ನಾವು ಕಲಿತ ವಿದ್ಯೆ ಬದುಕ ರೂಪಿಸಿದರೆ,ಜೀವನ ಕಲಿಸುವ ಪಾಠ ಇಡೀ ವ್ಯಕ್ತಿತ್ವ ಮೇಲೆ ಪ್ರಭಾವ ಬೀರುತ್ತದೆ. ಮನೆಯಲ್ಲಿ ಕೆಲಸಕ್ಕೆ ಬಾರದ ಎಷ್ಟೋ ವಸ್ತುಗಳು ನಮ್ಮ ಅವಶ್ಯಕತಗೂ ಮೀರಿ ಜಮಾ ಆಗಿದ್ದು,ಮೊದಮೊದಲು ಅವು ಭಾರ ಎನ್ನಿಸುತ್ತಿಲ್ಲ… ಕೊನೆಕೊನೆಗೆ ಅವುಗಳನ್ನು ಎಸೆದಾಗ ಅಥವಾ ಮಾರಿದಾಗ ಎನೋ ಸಮಾಧಾನ!..ಹಾಗಾಗಿದೆ ಇಂದು.ಅಮಾನುಷವಾಗಿ, ಅಮಾನವೀಯವಾಗಿ ಹಿರಿಜೀವಗಳು ಹೀನಾಯ ಸ್ಥಿತಿಗೆ ಬಂದು ನಿಂತಿವೆ.

ಇದು ಕೇವಲ ಸಾಂಕೇತಿಕ.ನಮ್ಮ ಜೀವನ ಶೈಲಿಯನ್ನು ಆಡಂಬರದತ್ತ ವಾಲಿಸಿದರೆ,ಕೃತಕ ಜೀವನದ ರೂವಾರಿಗಳಾಗಿ ಹೆಮ್ಮರವಾಗಿ ಬೆಳೆದು ಬಿಡುತ್ತೆವೆ.ಎಷ್ಟೋ ಹಳ್ಳಿಗಳಲ್ಲಿ ವಾಸಿಸುವ ಅದೆಷ್ಟೋ ವಯಸ್ಸಾದವರು ಒಬ್ಬಂಟಿಯಾಗಿ ಬದುಕುತ್ತಿದ್ದಾರೆ!. ಅವರ ನಿರೀಕ್ಷೆಗಳು ಹುಸಿಯಾದ ಸಮಯಕ್ಕೆ ಮರಗುತ್ತಿದ್ದಾರೆ.ಜವರಾಯನ ಆಗಮನಕ್ಕೆ ಪರಿತಪಿಸುವ ವೃದ್ಧ ಜೀವಿಗಳು ಸಾಮಾನ್ಯ!. ನಮ್ಮ ಬದುಕನ್ನು ರೂಪಿಸಲು ಹಗಲು ರಾತ್ರಿ ದುಡಿದು,ರಟ್ಟೆಯಲ್ಲಿ ಶಕ್ತಿ ಕುಂದಿದಾಗ ಅವರು ನಿಷ್ಪ್ರಯೋಜಕರೆಂದು ಅವರಿಂದ ದೂರ ಸರಿವ ಮನಸ್ಸುಗಳು ಇಂದು ಖುಷಿಯಾಗಿರಬೇಕು.ಆದರೆ ಮುಂದೊಂದು ದಿನ ತಾನು ಈ ಅವಸ್ಥೆಯ ಭಾಗಿಯಾಗುತ್ತೆನೆ ಎಂಬುದು ಕಟ್ಟಿಟ್ಟ ಬುತ್ತಿ.ಅವರಿಗ ದುಡಿಯಲಾರರು.
ಅವರ ಬ್ಯಾಂಕ್ ಬ್ಯಾಲೆನ್ಸ್ ಜೀರೋ!. ಆಸ್ಪತ್ರೆಯ ಖರ್ಚಿಗೆ ಹಣ ಹೊಂದಿಸಲಾರದೆ ಬೀದಿ ಹೆಣವಾದ ಹಿರಿಜೀವಗಳು.ಅದಕ್ಕೆಲ್ಲ ಯಾರು ಹೊಣೆ? ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದತ್ತ ಜನಜೀವನ ಸಾಗಿದೆ. ಚಿಕ್ಕ ಕುಟುಂಬದಂತೆ ಮನಸ್ಸು ಸಂಕುಚಿತವಾಗುತ್ತ ಸಾಗುತ್ತಿದೆ.ಅನವಶ್ಯಕ ವಸ್ತುಗಳು ಬೇಕು.ಆದರೆ ಹೆತ್ತವರು ಬೇಡ.ಅವರ ಯೋಗಕ್ಷೇಮ ವಿಚಾರಿಸುವಂತ ಮನಸ್ಸು ಇಲ್ಲದ ಮಕ್ಕಳು ಇದ್ದರೆಷ್ಟು? ಬಿಟ್ಟರೆಷ್ಟು? ಎಂದು ಕೊಗುವ ಜೀವಿಗಳನ್ನು ನೋಡಿದಾಗ ನಮ್ಮದು ಒಂದು ಬದುಕೇ ಎಂಬ ಪ್ರಶ್ನೆ ಕಾಡದಿರದು!.
ಒಟ್ಟಾರೆಯಾಗಿ ಹೇಳುವುದಾದರೆ, ಕಾಲಚಕ್ರ ಒಂದೇ ತರ ಇರದು.ಅದು ತನ್ನ ಗತಿ ಬದಲಾಯಿಸಿದಂತೆ ನಮ್ಮೆಲ್ಲರ ಬದುಕು.ಮನೆಯಲ್ಲಿ ಹಿರಿಯರು ಇರಬೇಕು..ಅವರು ಹಿರಿಯರ ಎಲ್ಲ ಜವಾಬ್ದಾರಿ ನಿರ್ವಹಿಸಿರಬೇಕು.ಮನೆಯ ಅಮೂಲ್ಯ ವ್ಯಕ್ತಿಯಾಗಿ ಅವರನ್ನು ಕಾಣಬೇಕು. ಅವರು ಜೀವನದಲ್ಲಿ ಏನೆಲ್ಲಾ ತ್ಯಾಗ ಮಾಡಿದ್ದಾರೋ ಅದಕ್ಕಿಂತ ಹೆಚ್ಚಿನ ಗೌರವ ನೀಡಬೇಕು. ಮಗುವಾಗಿ ಬದಲಾಗುವ ಅವರ ಗುಣಗಳನ್ನು ಮಗುವಿನಂತೆ ಮನಗಾಣಬೇಕು.ಗದರಿಸಿ, ಎಚ್ಚರಿಸಿ,ಪ್ರೀತಿ ತೋರುತ ಅವರ ವೃದ್ದಾಪ್ಯ ಶಾಪವಲ್ಲ…ಎಂಬಂತೆ ಆಹಾರ ಕ್ರಮಗಳನ್ನು ರೂಢಿಸಬೇಕು.ಕುಟುಂಬದ ಒಗ್ಗೂಡಿಸಿಕೊಂಡು ಹೋಗುವ ಮನಸ್ಸು ಬರುವಂತೆ ಮಾಡಬೇಕು..ಕೊನೆಗಾಲದಲ್ಲಿ ಹೆತ್ತಮಕ್ಕಳೇ ಶತ್ರುಗಳಾದರೆ ವೃದ್ಧ ತಂದೆತಾಯಿ ಯಾರ ಬಳಿ ಹೋಗಬೇಕು? ಆಸ್ತಿ ಅಂತಸ್ತನ್ನು ಮಾಡದಿರುವುದೇ ಒಳ್ಳೆಯದು.
ಮಕ್ಕಳನ್ನು ಆಸ್ತಿಯಾಗಿ ಬೆಳೆಸಿ ಅದರ ಬಡ್ಡಿಯಲ್ಲಿ ಬದುಕುವಂತಹ ಸಂಸ್ಕಾರ ಬೆಳೆಸಿಕೊಂಡಷ್ಟು ಜೀವನ ಸುಖಮಯ!.ಏನೇ ಆಗಲಿ ನಮಗೂ ಈ ದಿನಗಳು ಬರುತ್ತವೆಂಬ ಪರಿಕಲ್ಪನೆ ಇದ್ದರೆ ಸಾಕು!.
ಶಿವಲೀಲಾ ಶಂಕರ್





ಚೆನ್ನಾಗಿದೆ ಲೇಖನ , ವಾಸ್ತವದ ಚಿತ್ರಣ
……..ಶುಭಲಕ್ಷ್ಮಿ ನಾಯಕ್
ಮನಸಿಗೆ ತಟ್ಟಿದ ಲೇಖನ ❤️.. ಕಣ್ಣು ತೇವಗೊಂಡಿತು.. ಸುಂದರವಾಗಿ ಬರೆದಿದ್ದೀರಿ ಮೇಡಂ ❤️
ವಾಸ್ತವದಲ್ಲಿ ಎಲ್ಲಿ ನೋಡಿದರಲ್ಲಿ ಹಿರಿಯರೆಂಬ ಭಾವ ಮರೆತು ನಡೆಯುವ ಮಕ್ಕಳೇ ಕಾಣುತ್ತಿರುತ್ತಾರೆ.
ಈಗಿನ ಸಮಾಜಕ್ಕನುಗುಣವಾಗಿದೆ.ಲೇಖನ.
ವಾಸ್ತವಕ್ಕೆ ಸರಿಯಾದ ಲೇಖನ.
ಸುಂದರವಾಗಿದೆ.
ತುಂಬಾ ಸುಂದರವಾದ ಲೇಖನ. ಇಂದಿನ ಜೀವನದ ನೈಜ ಚಿತ್ರಣವನ್ನು ಪ್ರತಿಬಿಂಬಿಸುವಂತೆ ಇದೆ. ನನಗೆ ನನ್ನ ಅಮ್ಮನ ನೆನಪಾಗಿ ಕಣ್ತುಂಬಿ ಬಂತು.
ಇನ್ನಷ್ಟು ಇಂತಹ ವಿಚಾರಗಳು ನಿಮ್ಮಿಂದ ಬರುವಂತಾಗಲಿ
ಅತೀ ಸುಂದರ ಮನ ಮುಟ್ಟುವ ಲೇಖನ. ಇಂತಹ ಹೆಚ್ಚಿನ ಲೇಖನಗಳು ಮೂಡಿ ಬರಲಿ ಎಂಬ ಆಶಯ………..ಅಭಿನಂದನೆಗಳು.