ಕಾವ್ಯ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಓ ಹೆಣ್ಣೆ!

ಸಪ್ತ ಸಾಗರದಷ್ಟು ನೋವಿದ್ದರೂ
ಬೆಂಕಿಯೊಂದಿಗೆ ಸೆಣಸಾಟವಿದ್ದರೂ
ದಿನ ದೂಡುವುದು ಹರಸಾಹಸವಾಗಿದ್ದರೂ
ಕುಂದಿಲ್ಲ ನಗು ಮುಖದ ಕಳೆ
ಓ ಹೆಣ್ಣೆ! ಆ ದೇವರೇ ಬೆರಗಿಹನು ನಿನ್ನ ಸಹನೆಗೆ
ನಂಬಿಸಿ ಬೆನ್ನಿಗೆ ಚೂರಿ ಇರಿದರೂ
ಚಿಂತೆಯ ಸಂತೆಯಲ್ಲಿ ಬಾಡಿಸಿದರೂ
ಹಾಡು ಹಗಲ ಕನಸುಗಳಿಗೆ ತಣ್ಣೀರೆರಚಿದರೂ
ಇನಿತೂ ಕಡಿಮೆಯಾಗಿಲ್ಲ ಅಪ್ಪಿ ಮುದ್ದಾಡುವ ಮಮತೆ
ಓ ಹೆಣ್ಣೆ! ಆ ದೇವರೇ ಬೆರಗಾಗಿಹನು
ನಿನ್ನ ಕ್ಷಮೆಗೆ
ಭೋಗದ ವಸ್ತುವಾಗಿಸಿ ಸುಖ ಪಟ್ಟು ಬೀಸಾಡಿದರೂ
ಕಂಡ ಕಂಡವರಿಗೆ ಹಣದಾಸೆಗೆ ಮಾರಿದರೂ
ಕೋಪ ತಾಪದ ಕೆಂಡಗಳನು ಕಾರಿದರೂ
ಸೊರಗಿಲ್ಲ ಚಿಮ್ಮುವ ಕೆಚ್ಚೆದೆಯ ಕಾರಂಜಿ
ಓ ಹೆಣ್ಣೆ! ಆ ದೇವರೇ ಬೆರಗಾಗಿಹನು ನಿನ್ನ ಛಲಕೆ
ಅಕ್ಷರ ಭಾಗ್ಯವ ಕಸಿದರೂ ಆಕಾಶ ಮುಟ್ಟುವ ಗುರಿ ನಿನ್ನದು
ದ್ರೋಹ ಬಗೆದವರಿಗೂ ಒಳಿತು ಬಗೆಯುವ ಹೊನ್ನ ಮನಸ್ಸು ನಿನ್ನದು
ಪಾಪ ಮಾಡದ ಪಾಪಿ ನೀನು ಕೊಳೆಯ ತೊಳೆವ ಗಂಗೆ ನೀನು
ಕತ್ತು ಹಿಸುಕಿದರೂ ಗತ್ತು ಬಿಡದೇ ಬಾಳುವ ಸ್ಪೂರ್ತಿದಾಯಿ ನೀನು
ಓ ಹೆಣ್ಣೆ! ಆ ದೇವರೇ ಬೆರಗಾಗಿಹನು ನಿನ್ನ ಸ್ಪೂರ್ತಿ ಸೆಲೆಗೆ

ಕೀಳು ಕೀಳೆಂದು ಜರಿದರೂ ತುಂಬಿವೆ ಹೊಂಗನಸು ಕಂಗಳಲಿ
ಭಾಗ್ಯವ ಕಸಿದುಕೊಂಡರೂ ಭರವಸೆಯ ಕಿರುನಗೆ ಕೆಂದುಟಿಯಲಿ
ವಿಷ ವರ್ತುಲದಲಿ ಸಿಕ್ಕಿಸಿದರೂ ಅರಳುವ ಚೆಲುವಾದ ಹೃದಯ ಎದೆಯಲಿ
ಗರ್ಭದಲ್ಲಿರುವಾಗಲೇ ಕೊಂದು ಬೀಸಾಡಿದರೂ ಮೃತ ಸಂಜೀವಿನಿ
ಓ ಹೆಣ್ಣೆ! ಆ ದೇವರೇ ಬೆರಗಾಗಿಹನು ನಿನ್ನ ಜೀವನ ಪ್ರೀತಿಗೆ
ನಿನ್ನ ಪ್ರೀತಿಗೆ
ಅದರ ರೀತಿಗೆ
ಜಯಶ್ರೀ.ಜೆ. ಅಬ್ಬಿಗೇರಿ


Super madam
ಧನ್ಯವಾದಗಳು ಸರ್
Amazing ♥️♥️