ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ನೀವೆಂದರೆ ಜಗವೆಂದು ಭಾವಿಸುವುದನು ಬಿಟ್ಟಿದ್ದೇನೆ
ಯಾರಿಲ್ಲದೆಯೂ ಬದುಕುವೆನೆಂಬ ನಿಲುವು ತೊಟ್ಟಿದ್ದೇನೆ
ಯಾರ ಗಾಯಕೆ ಯಾರು ಮುಲಾಮು ಆಗುವರಿಲ್ಲಿ
ಮುಚ್ಚಿಟ್ಟು ನೋವನು , ನಗುವನಷ್ಟೇ ತೆರೆದಿಟ್ಟಿದ್ದೇನೆ
ಬರೀ ಮಾತಲಿ ಪ್ರೀತಿ, ತೋರಿಕೆಯ ಬಾಂಧವ್ಯ
ಜಗದ ಈ ಮುಖವಾಡಕೆ ಮನಸನೇ ಬಲಿ ಕೊಟ್ಟಿದ್ದೇನೆ
ಎಷ್ಟು ಮಾಡಿದರೂ ತೃಪ್ತಿಯಾಗದ ಜನರಿವರು
ಇವರನು ನಗಿಸಲು ನನ್ನ ನಾನೇ ತೇಯ್ದಿಟ್ಟಿದ್ದೇನೆ
ಸಾಕಿನ್ನು ಅವರಿವರಿಗಾಗಿ ಬಾಳಿದ್ದು ವಾಣಿ
ಉಳಿದಿರುವ ದಿನಗಳನು ನನ್ಹೆಸರಿಗೆ ಬರೆಟ್ಟಿದ್ದೇನೆ
—————————
.ವಾಣಿ ಯಡಹಳ್ಳಿಮಠ
