ಕಾವ್ಯ ಸಂಗಾತಿ
ಎಮ್ಮಾರ್ಕೆ
ʼಅಪ್ಪ ಎಂಬ ಅಂಬಾರಿʼ

ಹೆಗಲ ಮೇಲೆ ಹೊತ್ತುಕೊಂಡು
ಜಗವ ಸುತ್ತಿ ತೋರುವ
ಕೈಯನ್ನು ಗಟ್ಟಿ ಹಿಡಿದುಕೊಂಡು
ಧೈರ್ಯವನ್ನು ತುಂಬುವ
ಅಪ್ಪ ಎಂಬ ಅಂಬಾರಿಯೇ…
ಪ್ರೀತಿಯ ರಾಯಭಾರಿಯೇ….
ನಿನ್ನೆದೆಯೇ ದಿವ್ಯ ದೇಗುಲ
ಕಂದನೇ ಅಲ್ಲಿ ದೇವರು
ಕಂದನಿಗೊಂದೇ ಹಂಬಲ
ಎಂದೆಂದೂ ಜೊತೆಗಿರು
ಅಪ್ಪ ಎಂಬ ಅಂಬಾರಿಯೇ….
ಹಾಡುವ ರಾಮಚಾರಿಯೇ……
ಮನೆ-ಮನಗಳ ಮಾಲೀಕ
ಬಾಡಿಗೆಯ ಕೇಳನು
ಬಾಳಬಂಡಿ ಹೊತ್ತ ಚಾಲಕ
ನಡುವೆಲ್ಲೂ ನಿಲ್ಲನು
ಅಪ್ಪ ಎಂಬ ಅಂಬಾರಿಯೇ…..
ಸಂತಸದ ಸಂಚಾರಿಯೇ…..
ಅಪ್ಪ ಎಂಬ ಎರಡಕ್ಷರವು
ಅಪ್ರತಿಮ ಸಂಪತ್ತು
ನೀನಿರದ ಬಾಳೇ ನಶ್ವರವು
ನಗುತಿರು ಯಾವತ್ತು
ಅಪ್ಪ ಎಂಬ ಅಂಬಾರಿಯೇ…
ನಮ್ಮ ಬಾಳ ರೂವಾರಿಯೇ…
ಎಮ್ಮಾರ್ಕೆ
