ಕಾವ್ಯ ಸಂಗಾತಿ
ಡಾ.ಭಾರತಿ ಅಶೋಕ್
ʼನನ್ನಪ್ಪʼ

ಅಪ್ಪಾ….
ನೀ ಬರೀ ಕವಿತೆಯಲ್ಲ
ಬದುಕಿನ ಅಣು ಅಣುವೂ..
ಎಂದೂ ನೋವಂದವನಲ್ಲ
ಬದುಕಿನುದ್ದಕೂ ಹೊರಲಾರದ
ನೊಗ ಹೊತ್ತು ದಾಪುಗಾಲಾಕಿದವನು
ಕೇಳದೇ ಎಲ್ಲವ ಗ್ರಹಿಸಿ
ಕೊರತೆಯ ಕಲ್ಪನೆ ತೋರದವನು.
ನೀನೆಂದರೆ ಹೆಬ್ಬಂಡೆ.
ಬಾಳಿನ ಬಿರುಗಾಳಿ, ಪ್ರವಾಹಕೂ
ಜಗ್ಗದೇ ಮತ್ತಷ್ಟು ಗಟ್ಟಿಗೊಂಡವನು
ಎಷ್ಟೊಂದು ಶ್ರಿಮಂತಕೆ ನಿನ್ನಲ್ಲಿ!
ಪ್ರೀತಿ, ಕರುಣೆ, ವಾತ್ಸಲ್ಯ ತ್ಯಾಗವನ್ನೆಲ್ಲಾ
ಕಂಡಿರುವೆ ನಿನ್ನ ಶ್ರೀಮಂತಿಕೆ ಖಜಾನೆಯಲಿ
ನೀನೊಂದು ತಾಳ್ಮೆಯ ಮೇರುಪರ್ವತ
ನಮ್ಮೆಲ್ಲರ ಗೂಡು ನಿನ್ನಡಿಯಲ್ಲಿ
ಭವದ ಬದುಕ ರಕ್ಷಣೆ ಹೊತ್ತ
ನೀ ಜೀವ ರಕ್ಷಕ ಭಾವುಕ.
ನೀನೆಂದರೆ ಸ್ನೇಹಿತ,
ಯಾವಾಗಲೂ ನಾಯಕ
ನಿನಗೆ ತಿಳಿದಿಲ್ಲ ನೀನಿಲ್ಲದೇ ನಿರರ್ಥಕ
ಬಕುಕಿಗೆ ಪ್ರೇರಕ, ನನ್ನ ಪ್ರೀತಿಯ ಜನಕ
ಉಂಡದ್ದು ಕಾಣೆ, ಮೈಮುಚ್ಚಿದರಷ್ಟೆ ಸಾಕು
ಎಲ್ಲಾ ನಮ್ಮದೇ ಸಡಗರ ತರತರ.
ನೀನೊಂದು ನಿರಾಡಂಬರ ನಿರಾಕಾರ
ಸಾಕಾರ ಮೂರ್ತಿ
ಬೇಡಿದ್ದು ನೀಡುವ ಭಕ್ತಗ್ರೇಸರ
ಭಗವಂತ
ನಿನ್ನಾಶ್ರಯದಿ
ನಾವೆಲ್ಲ ಅದೆಷ್ಟು ಸುಖಿ.
ಬದುಕಿನ ಗೋಜು ಗೊಂದಲಗಳಿಲ್ಲದೇ
ದಡ ಸೇರಿಸಲು ಹವಣಿಸುವ ಪರಿ ಅಪಾರ
ಅಪ್ಪಾ ನೀನೆಷ್ಟು ಅಮಾಯಕ,
ನಮ್ಮೆಲ್ಲಾ ಕೀಟಲೆಗೂ ಮೂಖ ಪ್ರೇಕ್ಷಕ
ಎಂದೂ ಗದರದ ಪ್ರೀತಿಯ ದ್ಯೋತಕ
ತೀರಸಲಾಗದು ಈ ಒಂದು ಕಾಣ್ಕೆಯ ಮೂಲಕ
ಏಳೇಳು ಜನ್ಮಕು ತೀರಲಾರದ ಋಣ ನಿನ್ನದು.
ಡಾ.ಭಾರತಿ ಅಶೋಕ್
