ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಅಪ್ಪನ ಹೆಗಲುʼ

ನನ್ನ ಎಳೆಯ ಬಾಲಕ
ಅಪ್ಪನ ಹೆಗಲು
ಸಾರೋಟಿಗೆ ನನಗೆ
ಜಾತ್ರೆ ಬೆತ್ತಾಸ ತೇರು
ನಾಟಕ ಗರದೀ ಗಮ್ಮತ್ತು
ಅಲಾವಿ ಕುಣಿತ
ಜಗ್ಗಲಿಗೆ ಜಾತ್ರೆ

ಘಂಟೆಗಟ್ಟಲೆ ಟಿಕೇಟಿಗೆ
ಚಿತ್ರಮಂದಿರ ಮುಂದೆ
ಸರತಿ ಸಾಲು
ದಣಿವಿರಲಿಲ್ಲ ಅಪ್ಪನಿಗೆ
ನನಗೋ ಒಳಗೊಳಗೇ ಖುಷಿ
ನನ್ನ ನಗುವಿನಲ್ಲಿ
ಅಪ್ಪನೂ ನಗುತ್ತಿದ್ದ

ಮೈ ಕೈ ನೋವು ಜ್ವರ
ಹಲ್ಲು ಹೊಡೆತ
ಎತ್ತಿಕೊಂಡವನೆ ಹೆಗಲಲಿ
ಓಡುತ್ತಿದ್ದ ಆಸ್ಪತ್ರೆಗೆ
ಔಷಧಿ ಮಾತ್ರೆ ಉಪಚಾರ
ಗುಡಿ ಮಸಿದೆ ಕಾಲೂರಿ
ಬೇಡಿಕೊಳ್ಳುತ್ತಿದ್ದ ಕಣ್ಣೀರು ಕೋಡಿ

ಅಪ್ಪ ವಯೋವೃದ್ಧ
ಕೈ ಕಾಲು ನಡುಗುತ್ತಿದ್ದವು
ಹೀಗೊಂದು ಮುಂಜಾನೆ
ಸದ್ದಿಲ್ಲದೆ ಅಪ್ಪನ ಯಾತ್ರೆ
ನನ್ನ ಹೆಗಲ ಮೇಲಿನ ಪಲ್ಲಕ್ಕಿ
ಅಪ್ಪನ ನಿರಾಳ ನಗೆ ಕಣ್ಣು ಮುಚ್ಚಿದ್ದ
ನಾನು ಅಪ್ಪನ ನೋಡುತ್ತ ಬಿಕ್ಕುತ್ತಿದ್ದೆ

ಅಪ್ಪನ ಹೆಗಲ ಮೇಲೆ
ನಾನು ನಕ್ಕಿದ್ದೆ ಅವನೂ ನಕ್ಕಿದ್ದ
ನನ್ನ ಹೆಗಲ ಮೇಲೆ
ಅಪ್ಪ ನಕ್ಕ ಮೌನದಲಿ
ನಾನು ನಗಲಿಲ್ಲ
ದಶಕಗಳೇ ಕಳೆದವು
ನಿಲ್ಲಲೊಲ್ಲವು ಕಣ್ಣೀರು ಅಪ್ಪನ ನೆನಪು
———————————————————-

3 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಅಪ್ಪನ ಹೆಗಲುʼ

  1. ಅಪ್ಪನ ತುಂಬು ಪ್ರೀತಿಯನ್ನು ಅನುಭವಿಸಿ ಬರೆದ ಆಳವಾದ ಮನದ ಭಾವನೆಗಳ ಅದ್ಭುತ ಸಾಲುಗಳು

    ಸುತೇಜ

  2. ಅಪ್ಪ ಎಂದರೆ ಅದ್ಭುತ,ಅವನೇ ಪ್ರಪಂಚ,ದಾರಿದೀಪ ನೆನಪುಗಳು ಎಂದಿಗೂ ಮಾಸುವದಿಲ್ಲ. ಎಳೆ ಎಳೆಯಾಗಿ ಮೂಡಿ ಬಂದಿವೆ.

Leave a Reply

Back To Top