ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ಪ್ರೇಮವ ಬರೆದಿಟ್ಟು ವಿಳಾಸ ಬರೆಯದಿರುವ
ಪತ್ರಗಳು ಇಲ್ಲೇ ಎದೆಯಲ್ಲುಳಿದಿವೆ
ಜಗದಿಂದ ಮುಚ್ಚಿಟ್ಟ, ರವಾನಿಸದ ರಸಮಯ
ಭಾವನೆಗಳು ಇಲ್ಲೇ ಎದೆಯಲ್ಲುಳಿದಿವೆ
ನನ್ನೆದೆಯೊಂದು ಅಂಚೆ ಪೆಟ್ಟಿಗೆಯಂತಾಗಿದೆಯೋ ಏನೋ
ಮುಟ್ಟಿಸಲಾಗದ ಅದೆಷ್ಟೋ ಮನಮುಟ್ಟಿದ ಅನುಭವಗಳು ಇಲ್ಲೇ ಎದೆಯಲ್ಲುಳಿದಿವೆ
ಮೊದಲ ನೋಟ ಮಾಡಿದ ಗಾಯ
ಇಂದಿಗೂ ಸಿಹಿ ನೋವು ನೀಡುತಿದೆ
ಎಳೆ ಎಳೆಯಾಗಿ ನೆನಪಿಟ್ಟು ಬರೆದಿಟ್ಟ
ಆ ಕ್ಷಣಗಳು ಇಲ್ಲೇ ಎದೆಯಲ್ಲುಳಿದಿವೆ
ಹುಣ್ಣಿಮೆಯಿರದೇ ತುಂಬು ಚಂದಿರನನು
ಬಾನಂಗಳದಿ ನೋಡಿದ ಅನುಭವ
ಸುಮ್ ಸುಮ್ಮನೆ ನಕ್ಷತ್ರಗಳ ನೋಡಿ ನಗುವ
ಆ ಇರುಳುಗಳು ಇಲ್ಲೇ ಎದೆಯಲ್ಲುಳಿದಿವೆ
ಜಗಕೆ ಓದಲು ಕೆಲ ಕವಿತೆಗಳನು
ಪ್ರಕಟಿಸಿ ನೀಡಿಹಳು ವಾಣಿ
ನಿವೇದಿಸದ ಆ ಮೊಹಬ್ಬತ್ತಿನ ಅದೆಷ್ಟೋ
ಶಾಯರಿಗಳು ಇಲ್ಲೇ ಎದೆಯಲ್ಲುಳಿದಿವೆ
————–
ವಾಣಿ ಯಡಹಳ್ಳಿಮಠ




