ಎಮ್ಮಾರ್ಕೆ ಅವರ ಗಜಲ್



ನನ್ನೆದೆಯ ಹಾಯಿದೋಣಿಯನೇರಿ ನೀ
ಊಹಿಸಲಾಗದ ತಪ್ಪು ಮಾಡಿದೆ,
ನನ್ನೆದೆಗಡಲಲಿ ಈ ತನುವ ತೇಲಿಸಿ ನೀ
ಕ್ಷಮಿಸಲಾಗದ ತಪ್ಪು ಮಾಡಿದೆ

ಕಣ್ಣ ಕನ್ನಡಿಯೊಳಗೆ ಮೂ(ತೀ)ಡಿದೆ
ಬರೀ ನಿನದೇ ನರ್ತಿಸುವ ಬಿಂಬ,
ಈ ಒಂಟಿ ಜೀವಕೆ ಜಂಟಿಯಾಗಿ ನೀ
ಸಹಿಸಲಾಗದ ತಪ್ಪು ಮಾಡಿದೆ

ಮೊದಲು ತೊದಲುತ್ತಿದ್ದ ಅಧರಗಳಿಗೆ
ನೀನಿತ್ತ ಚುಂಬನವೆ ಚೇತರಿಕೆ,
ಬೆತ್ತಲೆ ಭಾವಗಳ ಕತ್ತಲೊಳು ತಬ್ಬಿ ನೀ
ಅಳಿಸಲಾಗದ ತಪ್ಪು ಮಾಡಿದೆ

ಸುಮ್ಮನಿದ್ದೆ ನಾನು ನನ್ನ ಪಾಡಿಗೆ ನೀನೇ
ಸದ್ದು ಮಾಡದೇ ನಿದ್ದೆಗೆಡಿಸಿದ್ದು,
ಸನಿಹ ಸುಳಿದು ಸಲುಗೆ ತಲೆಗೇರಿಸಿ ನೀ
ಸೈರಿಸಲಾಗದ ತಪ್ಪು ಮಾಡಿದೆ

ಅಂದಿನ ‘ಹುಂ’ಗೆ ಇಂದು ‘ಊ’ ಸೇರಿಸಿ
‘ಊಹುಂ’ ಅಂದವಳು ನೀನಲ್ಲವೇ,
ಕುಂಬಾರನ ಕನಸ ಮೂಸೆ ಒಡೆದು ನೀ
ಜೋಡಿಸಲಾಗದ ತಪ್ಪು ಮಾಡಿದೆ

Leave a Reply

Back To Top