ಕಾವ್ಯ ಸಂಗಾತಿ
ಹನಿಬಿಂದು
“ಪ್ರೀತಿ”

ನಾನೇ ನೆಟ್ಟ ಗಿಡ ಹೂ ಬಿಟ್ಟು ಕಾಯಾದಾಗಿನ ಖುಷಿಯ ಅನುಭವ!
ಅಮ್ಮನ ಅಪ್ಪುಗೆಯಲ್ಲಿ ಮೈ ಮರೆತ ಸಂಭ್ರಮದ ಸದ್ಭಾವ!
ತಾನು ಬಗೆದುದು ತನಗೆ ದಕ್ಕಿದಾಗಿನ ಸಂತಸದ ಮುಖಭಾವ!
ಮನಸೆಲ್ಲ ಹಾಯಾಗಿ ಗಾಳಿಯಲ್ಲಿ ತೇಲಾಡಿದ ಮಧುರತೆಯ ಕಾವ!
ಏಕಾಂತತೆಯಲ್ಲೂ ನೆನೆದು ನಕ್ಕು ನೀರಾಗುವ ಮನಸ್ಸು!
ಒಂಟಿತನದಲ್ಲೂ ಒಡಲೊಳಗೆ ನುಗ್ಗಿ ಕಚಗುಳಿ ಇಡುವ ಹವಿಸ್ಸು!
ಯಾರಿಲ್ಲದೆಯೂ ನೆನಪಿಸಿ ತಾನೇ ನಗುವ ಕವಿ ಕನಸು!
ಪ್ರೀತಿಯಲಿ ದಶಕಗಳಷ್ಟು ಹಿಂದಕ್ಕೆ ಜಾರಿದ ಮಾನಸಿಕ ವಯಸ್ಸು !!
ಮತ್ತೊಮ್ಮೆ ಮಗದೊಮ್ಮೆ ದೇವರ ನೆನೆಯುವ ಕಾರ್ಯ!
ಸುಮ್ಮನೆ ಕುಳಿತರೂ ಒಂದಿಷ್ಟು ಹೊತ್ತು ಹೊತ್ತೊಯ್ಯುವ ಶೌರ್ಯ!
ಬದುಕ ಹಾದಿಯಲಿ ನಡೆಯುತ್ತಾ ಸಾಗಿದಂತೆ ಅದೇನೋ ಹೊಸ ಧೈರ್ಯ!
ಮತ್ತೆ ಮತ್ತೆ ಚುಂಬಿಸುತ್ತಿದೆ ನುಗ್ಗಿ ಬಂದು ಕೌಮಾರ್ಯ!!
ಅಲ್ಲಿ ಮೇಲು ಕೀಳು ದೊಡ್ಡ ಚಿಕ್ಕವರೆಂಬ ಬೇಧವಿಲ್ಲ!
ಬಡತನ ಸಿರಿತನಗಳ ರಾಶಿ ರಗಳೆಯು ಇಲ್ಲ!
ನಿನಗೆ ನಾನು ನನಗೆ ನೀನೆಂಬ ಮಾತಿನ ಹೊರತು ಕೂಡಕಳೆಯುವಲೆಕ್ಕಾಚಾರವಿಲ್ಲ!
ಒಂದೆಂಬ ಗುಣದ ನಡುವಿನ ಪರಿಶುದ್ಧ ಪ್ರೇಮದ ಹೊರತಾಗಿ ಮತ್ತೇನೂ ಕಾಣುತ್ತಿಲ್ಲ!!
ಪುಟ್ಟ ಹಕ್ಕಿ ಬಂದು ಎದೆಯೊಳಗೆ ಕಚಗುಳಿ ಇಟ್ಟಂತೆ
ಮುದ್ದು ಮಗು ಆಟವಾಡುತ್ತಾ ಹೊಟ್ಟೆಗೆ ಒದೆಯುತ್ತಾ ಚೀಪಿ ಹಾಲ ಕುಡಿದಂತೆ
ಕದ್ದ ಚಿನ್ನವ ಕಳ್ಳ ದೇವರೆದುರು ಅರ್ಪಿಸಿ ಬೇಕಾದಷ್ಟು ಇಟ್ಟುಕೊಂಡು ಉಳಿದುದ ಕೊಡು ಎಂದಾಗ ಸಿಕ್ಕಿದ ನಿಧಿಯಂತೆ ಪುನಃ ಪುನಃ ಕರೆದು ಸಂತೈಸಿ ಹರಸಿ ಆಶೀರ್ವದಿಸಿ ಕೈ ಹಿಡಿದ ಬಂಧುವಿನಂತೆ
ಬಾನ ಬಯಲಲಿ ಸ್ವಚ್ಚಂದದಿ ಹಾರುವ ಹೊಸ ಹಕ್ಕಿಯ ನುಲಿಯದು
ಸ್ಥಾನ ಪಡೆದು ಮೇಲೇರಿದ ಮಂತ್ರಿಯ ನಗೆಯದು
ಮಾನ ಕಾಪಾಡಿಕೊಂಡು ಬದುಕುಳಿದ ಹೆಣ್ಣಿನ ಸೌಜನ್ಯದ ತುಡಿತವಿದು
ಮತ್ತದೇ ಎಳೆ ನಗು ಮತ್ತೊಂದು ತುಟಿ ಬಿರಿದ ಸಾಕ್ಷಿಯದು
ಹನಿಬಿಂದು

ತುಂಬಾ ಚೆನ್ನಾಗಿದೆ ಮೇಡಂ ಕವನ