ಕಾವ್ಯ ಸಂಗಾತಿ
ಎಮ್ಮಾರ್ಕೆ
“ಆಹಾರ ಸರಪಳಿ”

ನಾನೇ ನೋಡಿರಣ್ಣ ಹುಲ್ಲು
ಬೆಳೆದಿಹೆ ಎಲ್ಲೆಂದರಲ್ಲೂ,
ಮೆಲ್ಲಮೆಲ್ಲ ಮಿಡತೆ ಬಂದು
ಖುಷಿ ಪಡುವದೆನ್ನ ತಿಂದು
ನಾನೇ ನೋಡಿರಣ್ಣ ಮಿಡತೆ
ಹುಲ್ಲಿನಲ್ಲಿ ಅಡಗಿ ಕುಳಿತೆ,
ಸುತ್ತ ಮುತ್ತ ಹಸಿರು ತೋಟ
ತಪ್ಪಿದ್ದಲ್ಲ ನನಗೆ ಕಪ್ಪೆ ಕಾಟ
ನಾನೇ ನೋಡಿರಣ್ಣ ಕಪ್ಪೆ
ಮಿಡತೆ ತಿಂದದ್ದೇ ತಪ್ಪೇ?,
ಬಿಟ್ಟಿದ್ದಲ್ಲ ನನಗೂ ಸಾವು
ನನ್ನ ನುಂಗಿ ನಲಿವ ಹಾವು
ನಾನೇ ನೋಡಿರಣ್ಣ ಹಾವು
ಹುತ್ತವೇ ನನ್ನಯ ಠಾವು,
ಮಾಡದಂತೆ ಯಾವ ಸದ್ದು
ಹೊತ್ತೆನ್ನ ಹಾರಿತಲ್ಲ ಹದ್ದು
ಪರಿಸರದ ಅಂಗಳದಿ ನಿತ್ಯ
ಆಹಾರ ಸರಪಳಿ ಆಟವು,
ಪ್ರಕೃತಿಯೊಡಲಲಿ ಅಡಗಿದೆ
ಇನ್ನೂ ಕಲಿಯದ ಪಾಠವು
ಎಮ್ಮಾರ್ಕೆ
