ರೈತನ ನೊಗ •••ರಾಜು ಪವಾರ್‌ ಕವಿತೆ

ಅತ್ತ ಗಡಿಯಲ್ಲಿ ಗುಂಡಿನ ಮಳೆ
ಇತ್ತ ಬಿಸಿಲಲ್ಲಿ ಬೆಂದ ಇಳೆ
ಮುಂಗಾರಿನ ಮಳೆಗೆ
ಮುಖ ಮಾಡಿಹನು ರೈತ
ಜಗದ ಭಾರ ಎಳೆಯುತ್ತಿದೆ ರೈತನ ನೊಗ !

ಅತ್ತ ವೈರಿಯ ವಕ್ರನೋಟ
ಇತ್ತ ಪ್ರಕೃತಿಯ ಚದುರಂಗದಾಟ
ಗಡಿಯಲ್ಲಿ ಅಡಿ ಅಡಿಯೂ ಕಣ್ಗಾವಲು ಯೋಧ,
ಮಣ್ಣಿನ ಕಣ ಕಣವೂ ಅಣಿಯಾಗಿಸುವ ರೈತ
ಜಗದ ಭಾರ ಎಳೆಯುತ್ತಿದೆ ರೈತನ ನೊಗ !

ಅಂತರಿಕ್ಷದ ಅಂತರ, ಸಾಗರದ ಆಳ
ಅಳೆಯುವ ನಾವು
ಮಣ್ಣಿನ ಮೌನ, ರೈತನ ಅಂತರಾಳ ಅರಿಯದಾದೇವು
ಜಗದ ಭಾರ ಎಳೆಯುತ್ತಿದೆ ರೈತನ ನೊಗ !

ಮಂತ್ರದಿಂದ ತಂತ್ರದೆಡೆಗೆ
ತಂತ್ರದಿಂದ ಕುತಂತ್ರದೆಡೆಗೆ
ಸಾಗುತಿದೆ ಈ ಜಗ,
ರೈತ ಮಣ್ಣಿನ ನೈಜ ಮಗ
ಜಗದ ಭಾರ ಎಳೆಯುತ್ತಿದೆ ರೈತನ ನೊಗ !

ಅರಸನ ಆಜ್ಞೆಗೆ ಕಾದ ಯೋಧ
ವೈರಿಯ ಎದೆ ಸೀಳಿಹನು, ದೇಶ ಕಾಯ್ದನು
ಮುಂಗಾರಿನ ದಾರಿ ಕಾಯುತಿಹನು ರೈತ
ಜಗದ ಹಸಿವು ನೀಗಲು,
ಜಗದ ಭಾರ ಎಳೆಯುತಿದೆ ರೈತನ ನೊಗ !!


One thought on “ರೈತನ ನೊಗ •••ರಾಜು ಪವಾರ್‌ ಕವಿತೆ

  1. ರೈತರ ಮತ್ತು ಯೋಧನ ಹೋಲಿಕೆಯ ಕವಿತೆ ಚೆನ್ನಾಗಿದೆ

Leave a Reply

Back To Top