ಮಹಿಳಾ ಸಂಗಾತಿ
ಮೇಘ ರಾಮದಾಸ್ ಜಿ
“ಮಹಿಳಾ ಮುನ್ನಡೆಯೆಂಬ
ಸ್ತ್ರೀ ಸಂಗಾತಿ”

ಮಾರ್ಚ್ ತಿಂಗಳು ಎಂದಾಕ್ಷಣ ಅದು ಮಹಿಳೆಯರ ಮಾಸ ಎನ್ನುವಷ್ಟು ” ವಿಶ್ವ ಮಹಿಳಾ ದಿನ ” ಪ್ರಸಿದ್ಧಿ ಹೊಂದಿದೆ. ಇಡೀ ವಿಶ್ವದಾದ್ಯಂತ ಈ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸರ್ಕಾರಗಳು ತಮ್ಮ ಮಹಿಳಾ ಪರ ಯೋಜನೆಗಳನ್ನು ಜಾರಿಗೆ ತರಲು ಈ ದಿನವೇ ಸೂಕ್ತ ಎಂದು ಭಾವಿಸುತ್ತಾರೆ. ಈ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸುವುದು, ಮಹಿಳಾ ಹಕ್ಕುಗಳ, ಕಾನೂನುಗಳ ಕುರಿತು ಕಾರ್ಯಗಾರ ಮಾಡುವುದು, ಮಹಿಳಾ ಕವಯತ್ರಿಗಳಿಂದ ಗೋಷ್ಟಿಗಳನ್ನು ಮಾಡುವುದು, ಕಥೆ, ಕವನ, ಪ್ರಬಂಧ ಸ್ಪರ್ಧೆಗಳನ್ನು ಮಾಡುವುದನ್ನು ಗಮನಿಸಿದ್ದೇವೆ. ಇವೆಲ್ಲವೂ ಸಹಾ ಸಮಾಜದಲ್ಲಿ ಮಹಿಳೆಯರನ್ನು ಗುರುತಿಸಲು, ಪರಿಚಯಿಸಲು, ಸ್ಥಾನಮಾನ ನೀಡಲು, ಮುನ್ನೆಲೆಗೆ ತರಲು ಅವಶ್ಯಕವಾಗಿವೆ. ಆದರೆ ಈ ದಿನದ ಮೂಲ ಉದ್ದೇಶವನ್ನು ಬಹುಶಃ ನಾವೆಲ್ಲರೂ ಮರೆತಂತೆ ಭಾಸವಾಗುತ್ತಿದೆ. ಈ ಮಹಿಳಾ ದಿನಾಚರಣೆ ಉಗಮವಾಗಿದ್ದು ದುಡಿಯುವ ಮಹಿಳೆಯರ ಹಕ್ಕುಗಳಿಗಾಗಿ ನಡೆದ ಹೋರಾಟದ ಫಲವಾಗಿಯೇ ಹೊರತು, ಉಳ್ಳವರರನ್ನು ಮತ್ತಷ್ಟು ಮೇಲೇರಿಸಲು ಅಲ್ಲ.
1857 ಮಾರ್ಚ್ 8 ರಂದು ನ್ಯೂಯಾರ್ಕ್ ನಗರದಲ್ಲಿ ನಡೆದ ಲಕ್ಷಾಂತರ ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರ ದೊಡ್ಡ ಪ್ರತಿಭಟನೆ, ದುಡಿಯುವ ಮಹಿಳಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಸತತವಾಗಿ 12 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ಮಹಿಳಾ ಕಾರ್ಮಿಕರು ಬೀದಿಗಿಳಿದಿದ್ದರು. ತಮ್ಮ ಕೆಲಸದ ಅವಧಿಯನ್ನು 8 ಗಂಟೆಗಳಿಗೆ ಇಳಿಸಬೇಕು ಎಂದು ಒತ್ತಾಯಿಸಿ ತಮ್ಮ ಹೋರಾಟದಲ್ಲಿ ಗೆದ್ದಿದ್ದರು ಕೂಡ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ಗೆದ್ದ ಈ ದಿನವನ್ನು ಅಮೇರಿಕಾದ ಸಮಾಜವಾದಿ ಪಕ್ಷವು ” ಮಹಿಳಾ ದಿನ ” ಎಂದು 1909 ಫೆಬ್ರುವರಿ 28 ರಂದು ಆಯೋಜಿಸಿತು. ಇದು ಜಗತ್ತಿನ ಮೊದಲ ಮಹಿಳಾ ದಿನ ಎಂದು ಇತಿಹಾಸ ಹೇಳುತ್ತದೆ. ಇದನ್ನು ಅಂತರಾಷ್ಟ್ರೀಯ ದುಡಿಯುವ ಮಹಿಳಾ ದಿನವೆಂದೇ ಕರೆಯಲಾಗಿತ್ತು.

ಇದರ ಮುಂದುವರೆದ ಭಾಗವಾಗಿ ಅಮೇರಿಕಾ, ಯುರೋಪ್ ಸೇರಿದಂತೆ ಮಹಿಳೆಯರು ತಮ್ಮ ಮತದಾನದ, ಸಮಾನತೆಯ, ಅವಕಾಶಗಳ, ದೌರ್ಜನ್ಯಗಳ ವಿರುದ್ಧದ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದರು. ಹಲವು ಸಮಾಜವಾದಿ ಸಭೆಗಳು, ಅಂತಾರಾಷ್ಟ್ರೀಯ ಸಮ್ಮೇಳನಗಳು ನಡೆದವು. ತದನಂತರ ” ಅಂತಾರಾಷ್ಟ್ರೀಯ ದುಡಿಯುವ ಮಹಿಳೆಯರ ದಿನ ” ವು, ” ವಿಶ್ವ ಮಹಿಳಾ ದಿನ ” ವಾಗಿ ಮಾರ್ಪಟಾಗಿ ಆಚರಣೆಯಲ್ಲಿದೆ. ಆದರೆ ದುಡಿಯುವ ಮಹಿಳೆಯರನ್ನು ಈ ದಿನ ಮರೆತೇ ಬಿಟ್ಟಿದ್ದೇವೆ. ನಮ್ಮ ಮನೆಯ ದುಡಿಯುವ ಮಹಿಳೆಯರನ್ನೂ ಸಹಾ ಸ್ಮರಿಸದೇ ಇರುವಷ್ಟು ಯಾಂತ್ರಿಕವಾಗಿದ್ದೇವೆ ಎನ್ನುವುದೇ ವಿಪರ್ಯಾಸ.
ಆದರೆ ದುಡಿಯುವ ಮಹಿಳೆಯರ ಏಳಿಗೆಗಾಗಿಯೇ ಕೆಲಸ ಮಾಡುತ್ತಿರುವ ಹಲವು ಸಂಘಟನೆಗಳು ನಮ್ಮ ಸುತ್ತಲೂ ಸದ್ದಿಲ್ಲದೆ ತಮ್ಮ ಕಾಯಕ ಮಾಡುತ್ತಿವೆ. ಇಂತಹ ಸಂಘಟನೆಗಳಲ್ಲಿ ದುಡಿಯುವ ಅದರಲ್ಲಿಯೂ ಅಸಂಘಟಿತ ಮಹಿಳಾ ಕೂಲಿ ಕಾರ್ಮಿಕರ ಹಕ್ಕುಗಳಿಗಾಗಿ, ಘನತೆಗಾಗಿ, ಸಮಾನತೆಗಾಗಿ ಹಾಗೂ ಸೌಲಭ್ಯಗಳನ್ನು ದೊರಕಿಸುವುದಕ್ಕಾಗಿ ಕೆಲಸ ಮಾಡುತ್ತಿವೆ. ದಾವಣಗೆರೆಯ ” ಮಹಿಳಾ ಮುನ್ನಡೆ ” ಇಂತಹ ಸಂಘಟನೆಗಳಲ್ಲಿ ಒಂದಾಗಿದ್ದು ಬಹಳ ವಿಶಿಷ್ಟವಾದ ಮಹಿಳಾ ಗುಂಪಾಗಿದೆ. ಇದು ಅಸಂಘಟಿತ ಟೈಲರ್ ಹಾಗೂ ಮನೆಕೆಲಸದ ಸುಮಾರು 50 ಮಹಿಳಾ ಕಾರ್ಮಿಕರ ಗುಂಪಾಗಿದ್ದು, ಹೆಚ್ಚಿನವರು ಮುಸ್ಲಿಂ ಮಹಿಳೆಯರಾಗಿದ್ದಾರೆ. ಮನೆಯಿಂದ ಹೊರಗೆ ಹೆಜ್ಜೆ ಇಡಲು ಪುರುಷರ ಅನುಮತಿ ಕಡ್ಡಾಯವಾಗಿರುವ ಸಮುದಾಯದ ಮಹಿಳೆಯರು ತಮ್ಮ ಹಕ್ಕುಗಳು ಹಾಗೂ ಸೌಲಭ್ಯಗಳಿಗಾಗಿ ಸಂಘಟಿತರಾಗಿ ಅಧಿಕಾರಿಗಳನ್ನು ಹಾಗೂ ಸರ್ಕಾರಗಳನ್ನು ಒತ್ತಾಯಿಸಲು, ಹೋರಾಟ ಮಾಡಲು ಸಿದ್ಧರಾಗಿ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ.
ಅಂತಾರಾಷ್ಟ್ರೀಯ ದುಡಿಯುವ ಮಹಿಳೆಯರ ದಿನದ ಅಂಗವಾಗಿ ಮಹಿಳಾ ಮುನ್ನಡೆಯ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನವನ್ನು ವಿಶಿಷ್ಟವಾಗಿ ಏರ್ಪಾಟು ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಕಟ್ಟಡ ಕಾರ್ಮಿಕರ ಕುರಿತು ಪಿ ಹೆಚ್ ಡಿ ಮಾಡಿರುವ ದಾವಣಗೆರೆಯ ಪ್ರತಿಷ್ಠಿತ ಕಾನೂನು ಕಾಲೇಜಿನ ಪ್ರಾಧ್ಯಾಪಕಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅಸಂಘಟಿತ ಮಹಿಳಾ ಕಾರ್ಮಿಕರ ಕಾನೂನುಗಳು, ಸವಲತ್ತುಗಳ, ಯೋಜನೆಗಳ ಬಗ್ಗೆ ಈ ಕಾರ್ಯಕ್ರಮ ಬೆಳಕು ಚೆಲ್ಲಲು ಸಹಾಯಕವಾಯಿತು. ಮಹಿಳಾ ಕಾರ್ಮಿಕರು ಸಂಘಟಿತರದಾಗ ಸಾಮಾಜಿಕವಾಗಿ ಗುರುತಿಸಿಕೊಳ್ಳಲು, ಅವಕಾಶ ಪಡೆಯಲು, ಘನತೆಯ ಜೀವನ ನಡೆಸಲು ಸಹಕಾರಿಯಾಗುತ್ತದೆ. ಈ ಸಂಘಟನೆಗಳ ಮೂಲಕ ಮಹಿಳೆಯರು ಸಾಮಾಜಿಕವಾಗಿ ತೆರೆದುಕೊಳ್ಳಲು, ಆರ್ಥಿಕವಾಗಿ ಸಬಲರಾಗಲು, ರಾಜಕೀಯವಾಗಿ ಅಕ್ಷರಸ್ಥರಾಗಲು ಸಾಧ್ಯವಾಗುತ್ತದೆ.
ಮಹಿಳಾ ಮುನ್ನಡೆ ಸಂಘಟನೆಯ ಮತ್ತೊಂದು ವಿಶೇಷತೆಯೆಂದರೆ ಅದು ಮಹಿಳೆಯರನ್ನು ಮಾತ್ರವಲ್ಲದೆ ಅವರ ಕುಟುಂಬವನ್ನೂ ಸಹಾ ಒಳಗೊಳ್ಳಿಸಿಕೊಂಡಿದೆ. ಕುಟುಂಬದ ಮಕ್ಕಳಿಗೆ ಶಾಲಾ ಪರಿಕರಗಳನ್ನು ನೀಡುವುದು, ಕುಟುಂಬದ ಯುವಜನತೆಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರಗಳನ್ನು ನಡೆಸುತ್ತಿದೆ. ಇವೆಲ್ಲವೂ ಮಹಿಳೆಯರಷ್ಟೇ ಅಲ್ಲದೆ, ಅವರ ಕುಟುಂಬಗಳ ಅಭಿವೃದ್ಧಿಗೂ ಪೂರಕವಾಗುತ್ತದೆ. ಒಂದು ಸಂಘಟನೆ ಒಂದು ಅಸಂಘಟಿತ ಕಾರ್ಮಿಕರ ಗುಂಪನ್ನು ಒಟ್ಟುಗೂಡಿಸಿ ಆ ಗುಂಪಿನ ಸದಸ್ಯರಿಗೆ ಬೆಂಬಲವಾಗಿ ನಿಲ್ಲುವುದು ಸಕಾರಾತ್ಮಕ ನಡೆಯಾಗಿದೆ. ಈ ಸಂಘಟನೆಯಲ್ಲಿನ ಮಹಿಳೆಯರೆಲ್ಲರೂ ಒಗ್ಗಟ್ಟಿನಿಂದ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿ ತಮಗೇ ಅಂತಲೇ ಮೀಸಲಿರುವ ಕೂಲಿ ಕಾರ್ಡ್, ಈಶ್ರಮ್ ಕಾರ್ಡ್ ಗಳಂತಹ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ನಗರದಲ್ಲಿ ನಡೆಯುವ ಮಹಿಳಾ ಹೋರಾಟಗಳಲ್ಲಿ ಭಾಗಿಯಾಗಿ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿಯ ಕುರಿತು ಅರಿತುಕೊಳ್ಳುತ್ತಾರೆ. ಇವೆಲ್ಲವೂ ಒಂದು ಸಂಘಟಿತ ಶಕ್ತಿಯಿಂದ ಆದ ಕಾರ್ಯವಾಗಿವೆ.
ಆದ್ದರಿಂದ ಇಂತಹ ಸದುದ್ದೇಶ ಉಳ್ಳ, ಸಮಾಜಕ್ಕೆ ಪೂರಕ ಕೆಲಸ ಮಾಡುವ ಶುದ್ಧ ಧ್ಯೇಯ ಇರುವ ಸಂಘಟನೆಗಳು ಈಗಿನ ಜಗತ್ತಿಗೆ ಬಹಳ ಅವಶ್ಯಕವಾಗಿವೆ. ಈ ಸಂಘಟನೆಗಳು ಪ್ರಮುಖವಾಗಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ಸಮಾನತೆಗಾಗಿ ಮತ್ತು ಘನತೆಯ ಬದುಕಿಗಾಗಿ ಕೆಲಸ ಮಾಡಿದಾಗ ಬಹುಶಃ ಬಾಬಾ ಸಾಹೇಬರ ಮಾತಿನಂತೆ ಒಂದು ಸಮುದಾಯದ ಏಳಿಗೆ ಆ ಸಮುದಾಯದ ಹೆಣ್ಣಿನ ಅಭಿವೃದ್ಧಿಯಿಂದ ನಿರ್ಧಾರವಾಗುವ ಕಾಲ ಬಂದೇ ಬರುತ್ತದೆ.
ಮೇಘ ರಾಮದಾಸ್ ಜಿ
