ಶಮಾ ಜಮಾದಾರ ಅವರ ಕವಿತೆ-ಸೋತ ಗಳಿಗೆ

ಪ್ರೇಮವೆಂಬುದು ಪದವಾಗಿ
ಗಜಿಬಿಜಿ ಗೊಂದಲ ಗೂಡಾಗಿ
ಜಿಗಿಜಿಗಿ ಬೆಲ್ಲದ ಜಿಗುಟಾಗಿ
ಬಿಡಲೊಲ್ಲದೀಗ ಬಂಧವಾಗಿ

ಸುಡುವ ನಿಗಿನಿಗಿ ಕೆಂಡವಾಗಿ
ಆಶೆತುಂಬಿಗಳ ತಂಡವಾಗಿ
ಚುಯಿಂಗ್ಮನ ತುಂಡಾಗಿ
ಅಗಿಯುತಿರುವೆ ಅಖಂಡವಾಗಿ

ನುಂಗಲಾರೆ ಉಗಿಯಲಾರೆ
ಇದರೊಂದಿಗೆ ಬಾಳಲಾರೆ
ಕಂಡವರ ಮಾತು ಕೇಳಲಾರೆ
ಈ ನೋವನಿನ್ನು ತಾಳಲಾರೆ

ಮೊದಲೆಷ್ಟು ಪ್ರೀತಿ ಮುದವಿತ್ತು
ಸೊಗದ ಸ್ವರ್ಗಕ್ಕಾಗ ಕದವಿತ್ತು
ಎಲ್ಲದರಲ್ಲೂ ಒಂದು ಹದವಿತ್ತು
ಜಗವನೇ ಗೆಲುವ ಮದವಿತ್ತು

ಹಳಿ ತಪ್ಪಿದೆ ಬದುಕಿನ ಸರಿಗಮ
ದುಃಖ ದುಮ್ಮಾನಗಳ ಸಮಾಗಮ
ಬರಿದಾಗುತಿದೆ ಸಾಗರದ ಸಂಯಮ
ಮಾಡಿದುದೆಲ್ಲವೂ ನೀರಿನಲಿ ಹೋಮ

ಸರಿದೂಗಿಸಿದಷ್ಟು ಅಸಮ ಪರಡೆ
ಮೂದಲಿಕೆಯ ಮಾತೇ ಎಲ್ಲೆಡೆ
ಹೆಣ್ಣೇತಕೆ ಯಾವತ್ತೂ ಪ್ರಾಣಿಗಿಂತ ಕಡೆ
ಪುರಸ್ಕರಿತವಿಲ್ಲಿ ಸದಾ ಗಂಡಿನ ನಡೆ

ಎಲ್ಲ ಹಂಗುಗಳ ತೊರೆದು ಹಾರಲೇ
ಹೊಟ್ಟೆಯೊಳಗಿನ ಕೆಂಡವನು ಕಾರಲೇ 
ನ್ಯಾಯ ನೀತಿಯನು ಸಂತೆಯಲಿ ಮಾರಲೇ
ಇಲ್ಲಾ, ಜೀವಂತವಾಗಿ ಸಿದಿಗೆ ಏರಲೇ

ಬೆನ್ನ ಕಾಯುವವರು ಇಲ್ಲಿ ಯಾರಿಲ್ಲ
ಮಾತು ಮೀರಿ ನಡೆದ ಆ ದಿನ ಮರೆತಿಲ್ಲ
ಅವರ ಅಂತಃಕರಣವಿನ್ನು ಕರಗಿಲ್ಲ
ಮನದ ಕದಗಳಿನ್ನೂ ನನಗೆ ತೆರೆದಿಲ್ಲ.

ಮೋಹದ ಗಿಳಿಯೀಗ ಗಿಡುಗವಾಗಿದೆ
ಮೇಣದ ಮನಸು ಕೂಡ ಶಿಲೆಯಾಗಿದೆ
ನಳನಳಿಸಿದ ವನವೀಗ ಬರಡಾಗಿದೆ
ಒಂದಾಗಿದ್ದ ದಾರಿಯೀಗ ಕವಲಾಗಿದೆ.


One thought on “ಶಮಾ ಜಮಾದಾರ ಅವರ ಕವಿತೆ-ಸೋತ ಗಳಿಗೆ

  1. ಧನ್ಯವಾದಗಳು ಸಂಗಾತಿ ಸಂಚಾಲಕರಿಗೆ.. ನನ್ನ ಪ್ರಕಟಿಸಿದಕ್ಕೆ ತುಂಬಾ ಖುಷಿಯಾಯಿತು..

Leave a Reply

Back To Top