ಸಿದ್ದಲಿಂಗಪ್ಪ ಬೀಳಗಿ ಅವರ ಹಾಯ್ಕುಗಳು



ಅರೆಬೆತ್ತಲೆ
ನೇಕಾರ; ಊರ ಮಂದಿ
ಮಾನ ಮುಚ್ಚಿದ

ದೇವರಿಗಾಗಿ
ದೇಶ ಸುತ್ತಿದ; ಅವ್ವ
ಮನೆಲಿದ್ದಳು

ಮುತ್ತು ಮಾರುವ
ಅಂಗಡಿ ತುಂಬ; ಬರೀ
ಕೊಡುವವರೆ

ಕಲ್ಲ ನಾಗಕೆ
ಎರೆವ ಹಾಲು; ಭಕ್ತಿ
ನೆಲದ ಪಾಲು

ರಸಿಕತನ
ಇದ್ದರದು; ದಿನವೂ
ಪ್ರಥಮ ರಾತ್ರಿ

ನೆಲ ನಂಬಿದ
ರೈತನಂಗಿ ತುಂಬೆಲ್ಲ
ಸಾಲದ ತೂತು

ದೇವಸ್ಥಾನಕ್ಕೆ
ಹೋದ ಬಹುಮಂದಿಗೆ
ಚಪ್ಪಲಿ ಧ್ಯಾನ

ಮದ್ಯದಂಗಡಿ
ಮುಂದೆ; ದೊಡ್ಡ ಸಾಲದು
ಮಾಲೂ ಸಾಲದು

ಬೆಲ್ಲ ಕೊಡಲು
ಬಂದವನನು ನೋಡಿ
ನಾಚಿತಿರುವೆ
೧೦
ತುಟಿ ಎರಡು
ಮಾಡದವ; ತುಂಬಿದ
ಬಾಯ್ತುಂಬ ಪ್ರೀತಿ






Leave a Reply

Back To Top