“ಬಣ್ಣ v/s ಅಸ್ಮಿತೆ” ವೈಚಾರಿಕ ಬರಹ-ಮೇಘ ರಾಮದಾಸ್ ಜಿ

ಆಕೆ ಹುಟ್ಟಿನಿಂದಲೇ ಸುಕೋಮಲೆ, ಚಂದ್ರನ ಬಿಳುಪು ಕೊಂಚ ಅವಳಿಗೂ ಬಂದಿತ್ತು ಅನ್ನಿಸುತ್ತೆ. ಆದರೆ ಚಂದ್ರನ ಮೇಲಿನ ಯಾವುದೇ ಕಲೆ ಅವಳ ಮುಖದಲ್ಲಿ ಇರಲಿಲ್ಲ. ಹುಡುಗರಷ್ಟೇ ಅಲ್ಲ ಹುಡುಗಿಯರೂ ಕೂಡ ಆಕೆಯನ್ನು ನೋಡಿ ವಾವ್ ಎನ್ನುವಷ್ಟು ಚಂದ ಇದ್ದಳು. ಹುಟ್ಟಿದ ದಿನದಿಂದಲೇ ಅವಳ ಸೌಂದರ್ಯಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿತ್ತು. ಆಕೆ ಜನಿಸಿದ ಆಸ್ಪತ್ರೆಯಲ್ಲಿ ಇದ್ದವರೆಲ್ಲ ಅವಳನ್ನು ಮೋಡಕ್ಕೆ ಹೋಲಿಸಿದರು. ಅಲ್ಲಿದ್ದ ಒಬ್ಬ ಮುಸ್ಲಿಂ ಮಹಿಳೆ ಆಕೆಗೆ ನಾಮಕರಣ ಕೊಡ ಮಾಡಿಬಿಟ್ಟರು. ಅವರು ಹೇಳಿದ ಹೆಸರೇ ಮುಂದೆ ಅವಳ ನಾಮಧೇಯವಾಯಿತು. ಆದರೆ ಅವಳಿಗೆ ಬಣ್ಣ ಒಂದು ಹೆಮ್ಮೆ ಎಂದು ಎಂದಿಗೂ ಅನ್ನಿಸಲಿಲ್ಲ. ದೊಡ್ಡವಳಾಗುತ್ತಾ ಆಕೆ ಆ ಸೌಂದರ್ಯಕ್ಕೆ ಯಾವುದೇ ಪ್ರಾಮುಖ್ಯತೆ ನೀಡಿರಲಿಲ್ಲ.

 ಬೆಳೆದು ಬಾಲೆಯಾಗಿ ಶಾಲೆಗೆ ಹೋಗಲು ಆರಂಭಿಸಿದಾಗಂತೂ ಆಕೆ ಎಲ್ಲದರಲ್ಲಿಯೂ ಬಹಳ ಮುಂದಿದ್ದಳು. ನೃತ್ಯ, ಚಿತ್ರಕಲೆ, ಕ್ರೀಡೆ,  ಎಲ್ಲದರಲ್ಲಿಯೂ ಭಾಗವಹಿಸುತ್ತಿದ್ದಳು. ನಗರದಲ್ಲಿ ಹುಟ್ಟಿ ಕೆಲವರ್ಷ ಅಲ್ಲೇ ಬೆಳೆದು ನಂತರ ತನ್ನೂರಿಗೆ ಅಪ್ಪ ಅಮ್ಮನ ಜೊತೆಗೆ ಬಂದಳು ಈ ಸುಂದರಿ. ಇಲ್ಲಿ ಆಕೆಗೆ ಹೊಸತೇ ಲೋಕ ಕಾಣ ಸಿಗುತ್ತದೆ. ನಗರದಲ್ಲಿ ತನ್ನಿಚ್ಚೆಯಂತೆ ಹಕ್ಕಿಯಂತೆ ಹಾರಾಡುತ್ತಿದ್ದವಳಿಗೆ ಹಳ್ಳಿ ಹಲವು ಕಡಿವಾಣಗಳ ಸೆರೆಮನೆಯಾಗುತ್ತದೆ.

ಮೊದಮೊದಲು ಇದೆಲ್ಲಾ ಏಕೆ ನಡೆಯುತ್ತಿದೆ ಎಂದು ಅರ್ಥವಾಗದ ಅವಳಿಗೆ, 10 ನೆ ತರಗತಿಯ ಪರೀಕ್ಷೆಗೆ ಕೂರುವ ಮುನ್ನ ಭರ್ತಿ ಮಾಡಿದ ಒಂದು ಸ್ವ ವಿವರದ ಅರ್ಜಿಯಿಂದ ಆಕೆಗೆ ತನ್ನ ಅಸ್ಮಿತೆಯ ಅರಿವಾಯಿತು. ಈ ಅಸ್ಮಿತೆಯೇ ತನಗೆ ಎದುರಾಗುತ್ತಿರುವ ಎಲ್ಲಾ ಕಡಿವಾಣಗಳಿಗೆ ಕಾರಣ ಎಂದು ತಿಳಿಯಿತು.

 ಆ ಆಸ್ಮಿತೆಯೇ ಅವಳ ಜಾತಿ.  ಭರ್ತಿ ಮಾಡಿಕೊಂಡು ಬನ್ನಿ ಎಂದು ಮನೆಗೆ ಕೊಟ್ಟಿದ್ದ  ಅರ್ಜಿಯನ್ನು ತನ್ನ ತಂದೆಯ ಸಹಾಯ ಪಡೆದು ಎಲ್ಲಾ ಪ್ರಶ್ನೆಗಳಿಗೂ ಒಂದೊಂದಾಗಿ ಉತ್ತರಿಸುತ್ತಾ ಬಂದಳು. ಆ ಅರ್ಜಿಯಲ್ಲಿ ಜಾತಿ ಎನ್ನುವ ಪ್ರಶ್ನೆ ಇತ್ತು. ಅದಕ್ಕೆ ಅವಳ ಅಪ್ಪ SC ಎಂದು ಬರೀ ಎಂದು ತಿಳಿಸಿದರು. ಅವಳು ಬರೆದ ನಂತರ ಅದರ ಅರ್ಥ ಕೇಳಿದಳು. ಅವರು ವಿವರಿಸಿದರು. ಆಗ ಅವಳಿಗೆ ತಾನು ದಿನನಿತ್ಯ ಅನುಭವಿಸುತ್ತಿರುವ ಅಸ್ಪೃಶ್ಯತೆ ಈ ಜಾತಿಯಿಂದಲೇ ಎನ್ನುವುದು ಸ್ಪಷ್ಟವಾಯಿತು. 

ಅವಳ ಅಪ್ಪನಿಗೆ ಜಾತಿ ತಾರತಮ್ಯದ ಭಾವನೆಯಾಗಲಿ, ಇತರರನ್ನು ಜಾತಿಯ ಕಾರಣಕ್ಕೆ ದೂರ ಇಡುವ ಮನಸ್ಥಿತಿಯಾಗಲಿ ಇರಲಿಲ್ಲ. ಆದ್ದರಿಂದಲೇ ಅವಳು 16 ವರುಷದವಳಾದರೂ ತನ್ನ ಅಸ್ಮಿತೆಯ ಅರಿವೇ ಆಕೆಗೆ ಇರಲಿಲ್ಲ, ಅವಳಪ್ಪ ಹೇಳಿರಲೂ ಇಲ್ಲ. ಆದರೆ ಮರುದಿನ ಶಾಲೆಯಲ್ಲಿ ಇಲ್ಲಿಯವರೆಗೆ ಆಕೆ ಬಣ್ಣದ ಕಾರಣಕ್ಕೆ ಸವರ್ಣೀಯಳು ಎಂದು ಭಾವಿಸಲ್ಪಟ್ಟಿದ್ದ ಅವಳು, ಅಸ್ಪೃಶ್ಯಳು ಎಂದು ಎಲ್ಲರಿಗೂ ಗೋಚರಸಿದಳು.

ಆದರೆ ಅವಳು ಗೆಳೆತನದ ವಿಷಯದಲ್ಲಿ ಬಹಳ ಅದೃಷ್ಟವಂತೆ. ಈ ಯಾವುದೇ ವಿಚಾರಗಳು ಆಕೆಯ ಗೆಳೆತನದ ಮೇಲೆ ಪ್ರಭಾವ ಬೀರಲಿಲ್ಲ. ಆದರೆ ಊರಲ್ಲಿ ಅವಳು ಪ್ರತಿಸಲ ಅನುಭವಿಸುತ್ತಿದ್ದ ಅವಮಾನ, ನೋವುಗಳಿಗೆ ಈ ಜಾತಿಯೇ ಕಾರಣ ಎಂದು ನೆನೆದಾಗಲೆಲ್ಲ ಈ ಜಾತಿ ವ್ಯವಸ್ಥೆಯನ್ನು ಶಪಿಸುತ್ತಿದ್ದಳು. ಆಕೆ ಎಷ್ಟೇ ರೂಪವತಿಯಾದರೂ ಸಹಾ ಆಕೆಯ ಬಣ್ಣ ಅವಳಿಗೆ ಹೊಸ ಗುರುತನ್ನು ಕೊಡಲಿಲ್ಲ. ಈ ಘಟನೆ ಆಕೆಯ ಜೀವನದ ಶೈಲಿಯನ್ನೇ ಬದಲಿಸಿತು. ಅಲ್ಲಿಯವರೆಗೆ ಎಲ್ಲರೊಂದಿಗೆ ಸಹಜವಾಗಿ ಬೆರೆಯಲು ಪ್ರಯತ್ನಿಸುತ್ತಾ ಪಾದರಸದಂತಿದ್ದ ಅವಳು, ಮೌನಿಯಾದಳು. ತಾನಾಯಿತು ತನ್ನ ಶಾಲೆ, ಓದು, ಮನೆ, ಅಷ್ಟಕ್ಕೇ ಸೀಮಿತಳಾದಳು.

ತನ್ನ ಶಿಕ್ಷಣ ಮುಗಿದ ನಂತರ ನೇರ ಸಮಾಜಕಾರ್ಯ ಕ್ಷೇತ್ರ ಆರಿಸಿಕೊಂಡ ಅವಳಿಗೆ ಮತ್ತೆ ಹೊಸ ಕನಸು ಚಿಗುರು ತೊಡಗಿತು. ಇಲ್ಲಿ ಅವಳಿಗೆ ಸಮಾನ ಗೌರವ, ಅವಕಾಶ, ಸ್ಥಾನಮಾನ ಸಿಗುತ್ತಿತ್ತು. ಈ ಕ್ಷೇತ್ರ ಅವಳನ್ನು ಸಮಾಜ ಗುರುತಿಸುವಂತೆ ಮಾಡಿತು. ಆದರೆ ತನ್ನೂರಲ್ಲಿ ಆಕೆಯ ಸ್ಥಿತಿ ಹೆಚ್ಚೇನು ಬದಲಾಗಲಿಲ್ಲ. ಈ ವಿಚಾರ ಆಕೆಯನ್ನು ಬಹಳ ಗಾಢವಾಗಿ ಕಾಡತೊಡಗಿತ್ತು. ಹೀಗೆ ಆಕೆ ಅದೇ ಗ್ರಾಮದ ಅನ್ಯ ಜಾತಿಯ ತನ್ನ ಸ್ನೇಹಿತನನ್ನೇ ಮದುವೆಯಾಗಿ ನಂತರವೂ ತನ್ನೂರಲ್ಲಿಯೇ ನೆಲೆಸಿದ್ದಳು. 

ತನ್ನ ಸಾಮಾಜಿಕ ಕಾರ್ಯದ ನಿಮಿತ್ತ ಆಕೆ ಊರೂರು ಸುತ್ತುತ್ತಿದ್ದ ಕಾರಣ ಅವಳ ಸೌಂದರ್ಯ ಕೊಂಚ ಮಾಸಿತ್ತು. ಆದರೆ ಅದನ್ನು ಮತ್ತೆ ಹೆಚ್ಚಿಸಿಕೊಳ್ಳಲು ಆಕೆ ಯಾವುದೇ ಪ್ರಯತ್ನ ಪಡಲಿಲ್ಲ, ಕಾರಣ ಅವಳಿಗೆ ಹೊರಗಿನ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯವೇ ನಿಜವಾದ ಸೌಂದರ್ಯ ಎಂದು ನಂಬಿದ್ದವಳು.

ಆದರೆ ಒಮ್ಮೆ ಅವಳ ತಂಗಿಯ ಮದುವೆಯ ಸಂದರ್ಭದಲ್ಲಿ ಅವಳು ಬ್ಯೂಟಿ ಪಾರ್ಲರ್ ಗೆ ಹೋಗುವ ಪ್ರಸಂಗ ಬರುತ್ತದೆ. ಅಲ್ಲಿಯವರೆಗೆ ತನ್ನ ಗೆಳತಿಯೊಂದಿಗೆ ಒಂದು ಬಾರಿ ಮಾತ್ರ ಪಾರ್ಲರ್ ಗೆ ಹೋಗಿದ್ದ ಅನುಭವ ಇದ್ದವಳಿಗೆ ಈ ಬಾರಿ ಏಕೋ ತಾನು ಕೂಡ ಸುಂದರವಾಗಿ ಕಾಣಲು ಇದೆಲ್ಲ ಬೇಕು ಎನ್ನುವ ಆಸೆ ಮನಸಿನಲ್ಲಿ ಮನೆ ಮಾಡಿತ್ತು. ಬಹುಶಃ ಇದು ಆಕೆಗೆ ತನ್ನ ಸುತ್ತಲ ಸಮಾಜದಿಂದ ಸಿಕ್ಕ ಪ್ರೇರಣೆ ಇರಬಹುದು. ಈ ಪ್ರೇರಣೆಯ ಬೆನ್ನು ಹತ್ತಿದವಳು ಪಾರ್ಲರ್ಗೆ ಹೋದಾಗ ತನ್ನ ಸೌಂದರ್ಯವನ್ನು ಮೊದಲಿನಂತೆ ಮಾಡಲು ಏನೇನು ಬೇಕೋ ಎಲ್ಲವನ್ನೂ ಪ್ರಾಯೋಗಿಕವಾಗಿ ಮಾಡಿಸಿಕೊಂಡಳು. ಅನಂತರ ತನ್ನ ಮುಖ ಕೈಕಾಲುಗಳನ್ನು ಒಮ್ಮೆ ನೋಡಿಕೊಂಡಳು, ಎಲ್ಲವೂ ಬಹಳ ಮೃದುವಾಗಿದ್ದವು, ಕೋಮಲವಾಗಿದ್ದು. ಅಲ್ಲಿಯವರೆಗೆ ಈ ಅಲ್ಪಕಾಲೀಕ ಚಿಕಿತ್ಸೆಗಳನ್ನೆಲ್ಲ ವಿರೋಧಿಸುತ್ತಿದ್ದ ಅವಳು ಅಂದೇಕೋ ಆ ಹೊಸತನಕ್ಕೆ ಮಾರುಹೋಗಿದ್ದಳು. ಆದರೆ ಹಿಂದಿನ ಸೌಂದರ್ಯ ಕಾಣದಿದ್ದರೂ ಸ್ವಲ್ಪಮಟ್ಟಿಗೆ ಅವಳ ಮುಖ ಕಳೆಕಟ್ಟಿತ್ತು.

ಅಲ್ಲಿಂದ ಹಿಂತಿರುಗಿ ಬಂದ ಅವಳ ಮನಸ್ಸಲ್ಲಿ ಕಾಡಿದ್ದು ಒಂದೇ ಪ್ರಶ್ನೆ. ನನ್ನ ಮುಖ ಸೌಂದರ್ಯ, ಬಣ್ಣ, ಲಕ್ಷಣ ನನ್ನ ಅಸ್ಮಿತೆಯನ್ನು ಅಳಿಸಬಲ್ಲದೆ? ಒಂದಷ್ಟು ಸಾಮಾಜಿಕವಾಗಿ ಗುರುತಿಸಿಕೊಂಡು, ಸನ್ಮಾನ, ಅಭಿಮಾನ, ಗೌರವಗಳನ್ನೆಲ್ಲ ಗಳಿಸಿದ್ದರೂ ಮರೆಯಾಗದ ತನ್ನ ಅಸ್ಮಿತೆ, ಈ ಕೃತಕ ಮಾರ್ಪಾಟುಗಳಿಂದ ಛದುರುವುದೇ? ಏನೇ ಫೇಶಿಯಲ್ ಮಾಡಿಸಿದರು ನನ್ನೂರಿನ ಆಂಜನೇಯ ನನ್ನನ್ನು ತನ್ನ ಆಸ್ಥಾನದ ಒಳಗೆ ಸೇರಿಸುವಂತೆ ಎಲ್ಲರಿಗೂ ತಿಳಿಸುವನೆ? ಏನೇ ಬಿಳುಪಾಗಿ ಕಂಡರೂ ಸವರ್ಣಿಯರು ತಮ್ಮ ಮನೆಗೆ ನನ್ನನ್ನು ಸೇರಿಸುವರೇ? ಎಲ್ಲಾ ಪ್ರಶ್ನೆಗಳನ್ನು ಮನದಲ್ಲಿ ಇಟ್ಟು ಕನ್ನಡಿ ಮುಂದೆ ನಿಂತ ಅವಳಿಗೆ ಕನ್ನಡಿಯೇ ನಕ್ಕು “ಇಲ್ಲ” ಎನ್ನುವ ಉತ್ತರ ನೀಡಿತ್ತು.


Leave a Reply

Back To Top