ನೆನಪುಗಳ ಸಂಗಾತಿ
“ನಮ್ಮಪ್ಪಯ್ಯ…ಚಂದಾವರ ಪೇಸ್ತು”ಪ್ರೇಮಾ ಟಿ ಎಂ ಆರ್ ಅವರ ನೆನಪುಗಳ ಯಾತ್ರೆಯ ಮುಂದುವರೆದ ಭಾಗ “ಏಸುವಿಗೂ ನಮಗೂ ಹೆಸರಿಸಲಾಗದ ಬಾಂಧವ್ಯ”
ಪ್ರೇಮಾ ಟಿ ಎಂ ಆರ್
“ಏಸುವಿಗೂ ನಮಗೂ
ಹೆಸರಿಸಲಾಗದ
ಬಾಂಧವ್ಯ”

ದೊಡ್ಹಿತ್ಲು ಏರಿಳಿದು ಚಾ ಭಟ್ರ ಅಂಗಡಿಯೆದುರು ಡಾಂಬರ್ ರಸ್ತೆಗೆ ತಿರುಗಿಕೊಳ್ಳವಾಗ ನಮ್ಮ ಕಾಲುಗಳು ಚುರುಕಾಗುತ್ತವೆ. ಕನ್ನಡ ಶಾಲೆಯ ಅಣೆಯೇರಿ ಆಚೆಗಿಳಿದರೆ ನಮ್ಮ ಕಾಲುಗಳು ಗೆಜ್ಜೆ ಕಟ್ಟಿಕೊಂಡಂತೆ ನೆಗೆನೆಗೆದು ಬೀಳುತ್ತವೆ.ಬಾಬ್ ಪಣ್ತ್ರ ಆಲ್ ಇನ್ ಒನ್ ಅಂಗಡಿಯ ಉಳಿಗೆಂಡಿ ಭಜಿಯ ‘ಚುಂಯ್’ ಗುಡುವ ಆವಾಜಿನೊಂದಿಗೆ ಪರಮಾಳವೂ ಮೂಗಿಗೆ ಹೊಸೆದು ಎಂಥವರ ಕಾಲುಗಳು ಸರಪಳಿ ಕಟ್ಟಿ ಎಳೆದಂತೆ ಆ ಕಡೆಗೆ ವಾಲಬೇಕು.. ಅಪ್ಪ ನಮ್ಮ ಮುಖವನ್ನು ನೋಡಿ ನೆಗಿಯಾಡ್ದ ಅಂದ್ರೆ ನಿಮ್ಗೆ ಅದು ಬೇಕಾ ಅಂತ ಅರ್ಥ. ನಾವು ದಿವ್ಯ ನಿರ್ಲಕ್ಯ ತೋರುತ್ತೇವೆ. ಬೇರೆ ದಿನಗಳಲ್ಲಾದ್ರೆ ನಾವು ಕುಸುಕುತ್ತಿದ್ದೆವು. ಆದ್ರೆ ಪೇಸ್ತಿಗೆ ಹೋಗುವ ಉಮೇದಿಯಲ್ಲಿದ್ದ ನಮಗೆ ಆ ದಿನದ ನಮ್ಮ ಲಕ್ಷ್ಯವೇ ಬೇರೆ. ಛೇ.. ನಾವು ಇಲ್ಲೆಲ್ಲ ಏನೂ ತಿನ್ನುವವರಲ್ಲ ಎನ್ನುವಂತೆ ಗಂಭೀರ ವದನರಾಗುತ್ತೇವೆ. ನಮಗೆ ಆದಿನ ಉಳಿಗೆಂಡೆ ಭಜಿ ದಮ್ಡಿ ಬಿಲ್ಲಿಗೂ ಬೇಡ..
ಈ ದಮ್ಡಿ ಬಿಲ್ಲಿ ಅಂದ್ರೆ ಏನು ಅಂತ ನಿಮ್ಗೆ ಗೊತ್ತಾ? ನಮ್ಮ ಕಾಲಕ್ಕೂ ದಮ್ಡಿ ಇರ್ಲಿಲ್ಲ.. ಅದ್ರೆ ಬಿಲ್ಲಿ ನಮ್ಮಜ್ಜಿಯ ಕವ್ಳ ಚಂಚಿಯಲ್ಲಿ ಇದ್ದಿದ್ದನ್ನು ನಾನು ನೋಡಿದ್ದೇನೆ.. ಅದು ತಾಮ್ರದ ನಾಣ್ಯವಾಗಿತ್ತು. ಅಜ್ಜಿ ಕಾಲದ ನಾಣ್ಯಗಳಾದ ಅವು ನಮ್ಮ ಕಾಲಕ್ಕೆ ಡೇಟ್ ಬಾರ್ ಆದವುಗಳು. ನಮ್ಮ ಬಾಲ್ಯದಲ್ಲಿ ಒಂದು ಪೈಸ, ಎರಡು ಪೈಸ, ಐದು ಪೈಸ , ಅಲ್ಲಿಂದ ತಟ್ಟನೆ ಜಿಗಿದು ಹತ್ತು ಪೈಸ, ಅಲ್ಲಿಂದ ಸೀದಾ ಬಡ್ತಿ ಪಡೆದು ಇಪ್ಪತ್ತು ಪೈಸ ಒಂದಾಣಿ ಎರಡಾಣಿ ನಾಕಾಣಿ ಎಂಟಾಣಿ ಹೀಗೆ..ಒಂದಾಣೆಯ ತಾಮ್ರದ ನಾಣ್ಯ ಹಿಂದೆ ಸರಿದು ಒಂದಾಣೆಗೆ ಐದು ಪೈಸೆ ಮತ್ತು ಒಂದು ಪೈಸೆ ಸೇರಿಸಿ ಒಂದಾಣೆಯ ಲೆಕ್ಕದಲ್ಲಿ ಆಲಿಮನ್ (ಅಲ್ಯೂಮೀನಿಯಮ್) ನಾಣ್ಯ ಚಲಾವಣೆಯಲ್ಲಿದ್ದ ಕಾಲದವರು ನಾವು. ಈ ಒಂದಾಣಿ ಯೆಯ್ಡಾಣಿ ಲೆಕ್ಕ ನಮ್ಮ ಹರಯದ ಕಾಲಕ್ಕೇ ಹೈರಾಣಾಗಿ ಹಿಂದೆ ಸರಿದರೆ, ಮತ್ತೆ ಈ ಐದು ಹತ್ತು ಇಪ್ಪತ್ತು ಪೈಸೆ ನಾಕಾಣೆ(ನಾಲ್ಕಾಣೆ) ನಾಣ್ಯಗಳು ತೀರಾ ಇತ್ತೀಚೆಗೆ, ನಮ್ಮ ಮಕ್ಕಳು ಹುಟ್ಟಿ, ಹರ್ದಾಡಿ, ಕೆಜಿ ಕ್ಲಾಸ್ ಗೆ ಹೋಗ್ವಾಗ ಜೀವ ಬಿಟ್ಟವು.. ಎಂಟಾಣಿ ಅಂದ್ರೆ ಅದೇ ನಮ್ಮ ಐವತ್ತು ಪೈಸೆ ನಾಣ್ಯಗಳು ಈಗಲೂ ಜೀಂವ ಹಿಡ್ಕಂಡಿವೆಯಾದ್ರೂ ಆಟಕ್ಕುಂಟು ಲೆಕ್ಕಕ್ಕಿಲ್ಲ.. ‘ಒಂದ್ ಬಿಲ್ಲಗೂ ಬೇಡ’ ‘ದಮ್ಡಿ ಕಾಸ್ನ ಕಿಮ್ಮತ್ತೆಲ್ಲ’ ಇಂತಹ ಮಾತುಗಳು ಅಂದು ನಿಕೃಷ್ಠತೆಯನ್ನು ಹೇಳುವಾಗ ಬಳಸುತ್ತಿದ್ದ ಮಾತುಗಳು. ಛೇ ನೋಡಿದ್ರಾ ನಾನು ಎಲ್ಲಿಂದೆಲ್ಲಿಗೋ ಜಿಗಿದುಬಿಡುತ್ತೇನೆ.. ಇದೆಂತ ದಮ್ಡಿ ಬಿಲ್ಲಿ ಸುದ್ದಿ ತೆಕ್ಕಂಡಿ ಕೂತೆ ನಾನು?
ಅಪ್ಪ ನಾಕಾಣಿ ಕೊಟ್ಟು ಎರಡು ದೊಡ್ಡದೊಡ್ಡ ಮೆಣ್ಬತ್ತಿ ಅಂದ್ರೆ ಅದೇ ಮೋಂಬತ್ತಿ , ಓಹ್ ಈ ಭಾಷೆನೂ ಈಗ ಡೌನ್ ಮಾರ್ಕೆಟ್ಟು ಅಲ್ವಾ? ಅದೇ ನಿಮ್ಮ ಕೆಂಡಲ್ ಕೊಡಿಸುತ್ತಾನೆ .. ಈಗ ನಾವು ಕೆಂಡಲ್ ಕೈಗೆ ಬಂದ ಖುಷಿಯಲ್ಲಿ ಸರಬರ ಹೆಜ್ಜೆ ಹಾಕುತ್ತೇವೆ.. ಮಲ್ಲಪುರ ಕತ್ರಿ ದಾಟಿದ್ದೇ ತಡ ನಾವು ಪೇಸ್ತಿನ ತೆಕ್ಕೆಗೆ ಬಂದುಬಿದ್ದಷ್ಟು ಸಂಭೃಮಿಸುತ್ತ ಹೆಜ್ಜೆ ಎತ್ತಿಡುತ್ತೇವೆ.. ಶೆಡ್ಮಣ್ಣ ಗಟ್ಗಿ ಇಳಿಯುವದೆರ ತಡ ನಮ್ಮ ಮೊಖ ಊರಗಲವಾಗುತ್ತದೆ ಇನ್ನೇನು ಪೇಸ್ತಿನಂಗಳದಲ್ಲಿ ನಿತಷ್ಟು ಸುಖ. ಸುಮಾರು ಮೂರುವರೆ ಕಿಲೋಮೀಟರುಗಳ ದೂರ ಆ ಚಿಕ್ಕ ವಯಸ್ಸಿಗೂ ನಮಗೆ ದೂರ ಅನ್ನಿಸಿದ್ದೇ ಇಲ್ಲ. ಪೇಸ್ತಿನ ದಿನ ರಸ್ತೆಯ ಇಕ್ಕೆಲಗಳಲ್ಲಿ ಸುತ್ತಲಿನ ಸುಮಾರು ಐವತ್ತು ಹಳ್ಳಿಗಳಿಂದ ಬರುವ ರೈತರು, ತಾವು ಬೆಳೆದ, ದೀರ್ಘಕಾಲ ಕೆಡದೆ ಉಳಿಯುವ, ತರಕಾರಿಗಳನ್ನು ರಾಶಿ ಹಾಕಿಕೊಂಡು ಮಾರುತ್ತಿದ್ದರು. ಗೋವಾ ಬೊಂಬೇ ಮಂಗ್ಳೂರಿನಿಂದ ದರ್ಶನಕ್ಕೆ ಬರುವ ಜನ ಮುಗಿಬಿದ್ದು ಕೊಂಡು ಗಾಡಿ ತುಂಬಿಸುವ ತರಾತುರಿಯಲ್ಲಿ ರಸ್ತೆ ಗಿಜಿಬಿಜಿಗುಟ್ಟುತ್ತಿತ್ತು. ಹೆಚ್ಚಾಗಿ ಅಲ್ಲಿ ಗಡ್ಡೆ ಗೆಣಸುಗಳದೇ ದರ್ಬಾರು. ಗೆಣಸುಗಳಲ್ಲಿ ಬೆಲಗಿನಗೆಂಡೆ (ಸಿಹಿ ಗೆಣಸು), ಮರ್ಸಣಗಿ, ಬೂದ್ಗೆಸು , ಪಂಜರಗೆಂಡೆ(ಸುವರ್ಣ ಗಡ್ಡೆ), ಮೊಟ್ಟ್ಗೆಸು, ಕಪ್ಪುಕೆಸು, ಬಿಳಿಕೆಸು, ಗುಟ್ಟ ಗೆಣ್ಸುಗಳು ರಾಶಿರಾಶಿ ಬಿದ್ದಿರುತ್ತಿದ್ದವು. ಒಂಥರಾ ಇಂದಿನ ಹಲಸಿನ ಮೇಳ ಮಾವಿನ ಮೇಳ ಹೇಗೋ ಹಾಗೇನೆ ವಿಧವಿಧ ಗೆಣಸುಗಳ ಮೇಳ ನೆರೆಯುವದನ್ನು ನೋಡುವದೇ ಚಂದ.. ಈಗ ನಾವು ಮತ್ತೆಲ್ಲೂ ನಿಲ್ಲದೇ ಸೀದಾ ಚರ್ಚ್ ಎದುರಿಗೆ ಬಂದು ಮುಟ್ಟಿದ್ದೇವೆ ಅಕ್ಕ ಪಕ್ಕ ರಸ್ತೆಯಲ್ಲಿ ತೆರೆದುಕೊಂಡ ತಿಂಡಿ ತಿನಿಸುಗಳ ಅಂಗಡಿಗಳನ್ನು ಬಿಟ್ಟ ಕಣ್ಣು ಮುಚ್ಚದೇ ನಿರುಕಿಸುತ್ತ ಕಣ್ತುಂಬಿಕೊಳ್ಳುತ್ತ ನಾವು ಸಾಗಿ ಬಂದಿದ್ದೇವೆ.. ನಮ್ಮ ಮನಸ್ಸನ್ನು ಪೂರಾ ತಮ್ಮ ತೆಕ್ಕೆಯೊಳಗೆಳೆದುಕೊಳ್ಳುವ ಬಣ್ಣದ ಸ(ಶ)ರಬತ್ತುಗಳು, ಪಕ್ಕದಲ್ಲಿಯೇ ಸೈಕಲ್ಲಿನ ಮೇಲೆ ಡಬ್ಬಿ ಇಟ್ಕೊಂಡು ಗರ್ದಿ ಯಾಪಾರ ಮಾಡ್ತಿದ್ದ ಐಸ್ಕೇಂಡಿ ದತ್ತ ಆ ಗಡಿಬಿಡಿಯಲ್ಲೂ ನಮನ್ನು ನೋಡಿ ಒಂದು ವಾತ್ಸಲ್ಯದ ಮುಗುಳ್ನಗುವೆಸೆದು ಅಪ್ಪನ ನೋಡಿ “ನಾಯ್ಕ್ರು ಯಾವಾಗ್ಬಂದದ್ದು?” ಎಂದು ಮಾತಾಡಿಸ್ತಾನೆ.. ಅಪ್ಪ, “ಕಡೀಗ್ಬತ್ತೆ ” ಎಂದು ಹೆಗಲ ಮೇಲಿನ ಚಂದದ ಮೋಟು ಟವಲ್ಲು ಒಮ್ಮೆ ಸರಿಪಡಿಸಿಕೊಂಡು ಒಳ ಪ್ರವೇಶ ಮಾಡುತ್ತಾನೆ.

ಮುಸ್ಸಂಜೆಗೆ ಗುಂಪು ವಿರಳವಾಗುವ ಹೊತ್ತು.. ಕ್ರಿಶ್ಚಿಯನ್ನರು ಬೆಳಗಿನ ಹೊತ್ತಿಗೆ ಪ್ರಾರ್ಥನೆ ಮುಗಿಸಿದರೆ ಇತರೇ ಧರ್ಮೀಯರು ದರ್ಶನಕ್ಕೆ ಬರುವದು ಸಂಜೆಯ ಸಮಯಕ್ಕೆಂದು ಅಲಖಿತ ಒಪ್ಪಂದವೆಂಬ ರೀತಿಯಲ್ಲಿ ಜನ ನೆರೆಯುತ್ತಿದ್ದರು. ಹೊರಗಿನ ಅಬ್ಬರದ ವ್ಯಾಪಾರಗಳ ನಡುವೆಯೇ ಒಳಗೆ ಪೂರ್ತಿ ನಿಶ್ಯಬ್ದ ಶಾಂತಿ… ಎಂತವರೂ ಕ಼್ಷಣ ವಿಲೀನವಾಗುವ ಮೌನ.. ಯಾವುದೋ ದಿವ್ಯತೆಯ ತಂಪು.. ನಾವು ಕೆಂಡಲ್ ಬೆಳಗಿಸಿ ಏಸು ಬಾಬಾನ ಎದುರಿಗೆ ಕೈಮುಗಿದು ತುಸು ಹೆಚ್ಚು ಹೊತ್ತೇ ನಿಲ್ಲುತ್ತೇವೆ.. ಕೈಕಾಲುಗಳಿಗೆ ಮೊಳೆ ಹೊಡೆಸಿಕೊಂಡು ನೇತಾಡುತ್ತಿದ್ದ ಪುಣ್ಯಾತ್ಮನನ್ನು ನೋಡುತ್ತಿದ್ದಂತೆ ಯಾಕೋ ನಮಗೆ ತಿಂಡಿತಿನಿಸು ಎಲ್ಲ ಮರೆತು ಹೋಗಿ ಅಳು ಬರುತ್ತದೆ. ‘ಅಯ್ಯೋಪಾಪ’ ಅಂದುಕೊಳ್ಳುತ್ತ ಅಲ್ಲೇ ನಿಲ್ಲುತ್ತೇವೆ.. ಏಸು ನಮಗೆ ದೇವರಂತೆ ಎಂದೂ ಗೋಚರಿಸದೇ ಇರೋದು ಮಾತ್ರ ವಿಸ್ಮಯ.. ಆ ಮೊಗದಲ್ಲಿ ತುಳುಕುವ ವಾತ್ಸಲ್ಯ, ಕರುಣೆ ನಮಗರಿಯದ ಹೆಸರಿಸಲಾಗದ ಯಾವುದೋ ಆಪ್ತ ಬಾಂಧವ್ಯವನ್ನು ನೆನಪಿಸುತ್ತದೆ.. ಅದಕ್ಕೊಂದು ಹೆಸರು ಅನಿವಾರ್ಯವೇ ಆಗಿದ್ದಲ್ಲಿ ಅಮ್ಮನಂತೆ….? ಜಾತಿ ಮತ ತಾರತಮ್ಯವಿಲ್ಲದ ಬಡವ ಬಲ್ಲಿದರೆನ್ನುವ ಭಾವ ಬಲಿಯದ ಸರ್ವರೂ ಒಂದಾಗಿ ಬೆರೆತು ಹೋಗುವ ಒಂಚೂರು ಗಲಭೆ ಗದ್ದಲಗಳಿಲ್ಲದ ಅದ್ಭುತ ತಾಣವಾಗುವ ಚಂದಾವರ ಪೇಸ್ತು ನಿಜಕ್ಕೂ ಪ್ರಶಾಂತನಿಲಯ.. (ಅಂದು ಹೇಗೋ ಇಂದೂ ಹಾಗೇ..). ಮೋಂಬತ್ತಿಗಳು ಕರಗುತ್ತಿವೆ. ಜೊತೆಗೆ ಹಗಲೂ. ಅಪ್ಪನಿಗೆ ಹೊತ್ತಾಗುತ್ತದೆ.. ಹೆಚ್ಚು ಹೊತ್ತು ನಿಲ್ಲುವಂತಿಲ್ಲ.. ತಂಡೋಪತಂಡವಾಗಿ ಒಳಪ್ರವೇಶಿಸುವ ಜನರಿಗಾಗಿಯೂ ನಾವು ತೆರವಾಗಬೇಕು.. ಹೊರಬಂದೊಡನೆ ಅಪ್ಪ ಐಸ್ಕೇಂಡಿ ಪೆಟ್ಟಿಗೆಯೆದುರು ನಿಲ್ಲತ್ತಾನೆ. ನಾವು ಬಾಯಲ್ಲಿರುವ ಎಲ್ಲ ಹಲ್ಲುಗಳು ಕಾಣುವಂತೆ ಕಿಸಿಯುತ್ತೇವೆ. ಸಾದಾ ಐಸ್ಕೇಂಡಿಗೆ ಐದು ಪೈಸೆ, ದೂದ್ಕೇಂಡಿಗೆ ಹತ್ತು.. ಅಪ್ಪ ನಮಗಾಗಿ ದೂದ್ಕೇಂಡಿಯನ್ನೇ ಕೊಡಿಸುವದು.. ಅಪ್ಪನಿಗೆ ಸಾಧ್ಯವಾಗಿದ್ರೆ ಜಗತ್ತನ್ನೇ ನಮ್ಮ ಅಂಗೈಲಿ ಇಟ್ಟುಬಿಡುವಷ್ಟು ವಾತ್ಸಲ್ಯಮಯಿ.

ಕೇಂಡಿ ಮುಗಿದ ಮೇಲೆ ಅಪ್ಪ ಸೀದಾ ನಮ್ಮನ್ನು ಹಕ್ಕಿ ಬಿಸ್ಕೀಟ್ ಅಂಗಡಿಯೆದುರು ತಂದು ನಿಲ್ಲಿಸುತ್ತಾನೆ.. ಇದು ಪೇಸ್ತಿನ ದಿನದಲ್ಲಿ ನಮ್ಮ ಪರಮ ಗುರಿ.. ಹೌದು ಅಂದು ಚಂದಾವರ ಪೇಸ್ತಿನಲ್ಲಿ ಮಾತ್ರ ಸಿಗುವ ವಿವಿಧ ಹಕ್ಕಿಗಳ ಆಕಾರದಲ್ಲಿರುವ ಬಿಸ್ಕೂಟುಗಳು ನಮ್ಮನ್ನು ಆಕರ್ಷಿಸಿದಷ್ಟು ಬಹುಶಹ ಬೇರಾವುದೂ ಇರಲಿಲ್ಲ. “ತಂಗಿ ಈಗ್ಲೂ ಪೇಸ್ತನ ಪ್ಯಾಟೀಲಿ ಒಂದ್ ಅಂಗ್ಡೀಲಿ ಹಕ್ಕಿ ಬಿಸ್ಕುಟ್ ಸಿಕ್ತದೆ” ಅಂದಿದ್ದ ಸಣ್ಣಣ್ಣ.. ಹೌದು, ಸಣ್ಣಣ್ಣ ಈ ಹಕ್ಕಿ ಬಿಸ್ಕೀಟು ನೆನಪಿಸಿದ್ದೇ ತಡ ನಾನು ಸೀದಾ ಚಂದಾವರ ಪೇಸ್ತಿನ ಪೇಟೆಗೆ ಹೋಗಿ ಬಿದ್ದಿದ್ದೆ… ನೋಡೋದಕ್ಕೆ ಎಷ್ಟು ಮಜವೋ ಅದರ ರುಚಿಯಂತೂ ದುಪ್ಪಟ್ಟು ಗಮ್ಮತ್ತು.. ಅಪ್ಪಟ ಬೆಣ್ಣೆ ಬಳಸಿ ತಯಾರಿಸುತ್ತಿದ್ದ ಬಿಸ್ಕುಟ್ ನಲ್ಲಿಕಲಬೆರಕೆ ಇಲ್ಲ… ಅಪ್ಪ ದೊಡ್ಡ ಪೊಟ್ಲೆ(ಪೊಟ್ಟಣ) ಬಿಸ್ಕುಟು ಕೊಡಿಸುತ್ತಾನೆ.. ನಾವಂತೂ ಫುಲ್ ಖುಷ್.. “ಮತ್ತೆಂತದೂ ಬ್ಯಾಡ ಅಪ್ಪಯ್ಯ” ಅಂದ್ರೂ ಅಪ್ಪಯ್ಯನಿಗೆ ನಮ್ಮ ಅರಳು ಕಣ್ಣುಗಳನ್ನು ಓದುವ ಮಿಡಿತವಿದೆ. ಜಿಲೇಬಿ ಅಂಗಡಿ, ಖರ್ಜೂರದ ಅಂಗಡಿಗಳ ಎದುರು ನಮ್ಮ ನೋಟಗಳು ಠಳಾಯಿಸುವದನ್ನು, ಮತ್ತೆ ಮತ್ತೆ ಅತ್ತಿತ್ತ ಹರಿದಾಡುವದನ್ನು ಅವನು ಬಲ್ಲ. ಸರಿ ಅವುಗಳ ಪೊಟ್ಲೆಗಳು ನಮ್ಮ ಕೈಸೇರುತ್ತವೆ... ಒಂದಷ್ಟು ಸಿಹಿ ಗೆಣಸು ಚೀಲ ಭಾರವಾಗಿಸುತ್ತವೆ… ಈಗ ಅಪ್ಪಯ್ಯ ಅವಸರಿಸುತ್ತಾನೆ…ಮತ್ತೆ ಬಡಾಳ ಹೊಲ್ಟಿಂಗ್ ಬಸ್ ಕೂಜಳ್ಳಿ ಕತ್ರಿಗೆ ಬರುವ ಮುನ್ನ ಅವನು ನಮ್ಮನ್ನು ದೊಡ್ಹಿತ್ತಲು ಏರು ಹತ್ತಿಸಬೇಕು..
ಕೂಜಳ್ಳಿಯ ಕತ್ರಿ ಮುಟ್ಟುವದರಲ್ಲಿ ಕತ್ತಲಿಣುಕತೊಡಗುತ್ತದೆ..ಅಪ್ಪಯ್ಯ, “ಸಾವ್ಕಾಶ ಹೋಗಿ ಮಗಾ ಅಪ್ಪಯ್ಯ ಹೋಗ್ಬತ್ತೆ.” ಎನ್ನುತ್ತಾನೆ. ನಮ್ಮ ಕಣ್ಣುಗಳು ಹನಿಯುತ್ತವೆ.. ಅಪ್ಪಯ್ಯನ ಎದೆ ಹನಿಯುತ್ತದೆ. “ಗನಾ ಓದ್ಕಣಿ ಮಗಾ.. ಎಂದು ಮೂವರನ್ನೂ ಬಾಚಿಕೊಳ್ಳುತ್ತಾನೆ. ಕಿರಿಯಳು ನಾನೆಂದ್ರೆ ಅಪ್ಪಯ್ಯನಿಗೆ ಒಂದುಗುಂಜಿ ಜಾಸ್ತಿ ಮುದ್ದು.. “ಅಪ್ಪಯ್ಯ, ನಾನೂ ಬರ್ಲಾ? ಅಮ್ಮನ ನೆನ್ಪಾತದೆ..” ನಾನು ಬಿಕ್ಕುತ್ತೇನೆ.. ಈಗ ಅಮ್ಮನ ಹಂಬಲದ ಮುಂದೆ ಹಕ್ಕಿ ಬಿಸ್ಕೀಟು ಹಗುರವಾಗುತ್ತದೆ.. “ಒಂದೇ ತಿಂಗ್ಳು ಮಗಾ ಸಂಕ್ರತಿ ಹಬ್ಬಕೆ ಅಮ್ಮ ನಾನು ಇಬ್ರೂ ಬತ್ರು . ಈಗ್ಬ್ಯಾಡ ಮಗ್ಳೇ… ಸಾಲಿ ತಪ್ತದೆ.. ನನ್ಮಗ್ಳು ರಾಸಿ ಸಾಲಿ ಕಲಿಬೇಕು ಅಲ್ಲಾ?” ಅಪ್ಪ ಪೋಚರಿಸುತ್ತಾನೆ.. ಹೆಗಲ ಮೇಲಿನ ಚಂದ ಟುವಾಲಿನಿಂದ ಕಣ್ಣೊರಸುತ್ತಾನೆ.. ಬಸ್ಸು ಬಂದೇ ಬಿಡ್ತು… “ಸತ್ತೋಗ್ಲಿ ಇದು” ಶಾಪ ಹಾಕುತ್ತದೆ ನನ್ನೆದೆ. ಅಪ್ಪನ ಕಿರಿಬೆರಳನ್ನು ನಾನು ಗಟ್ಟಿ ಹಿಡ್ಕೊಂಡೇ ಇದ್ದೇನೆ. ಕಣ್ಣು ಮೂಗು ಸುರಿಯುತ್ತದೆ.. ಅಪ್ಪನೆದೆಯಲ್ಲಿ ಕಣ್ಣಿಗೆ ಕಾಣದ ರೋದನ. ಬಸ್ಸು ಹತ್ತಿ ಕಿಟಕಿಯಲ್ಲಿ ಮೊಖ ತೂರಿ ಅಮ್ಮನ್ ಕರ್ಕಂಡಿ ಬ್ಯಾಗ ಬತ್ತೆ ಮಗಾ ಎನ್ನುವಷ್ಟರಲ್ಲಿ ಬಸ್ಸು ಹೋಗೇ ಬಿಡ್ತದೆ… ದೂರದ ಮೋರಿಗಂಡಿತನಕ ಅಪ್ಪ ಕಿಡ್ಕೀಲಿ ಇಣುಕುತ್ತಲೇ ಇದ್ದಾನೆ… ನಾವು ಕೈಬೀಸುತ್ತಲೇ ಇದ್ದೇವೆ… ನಾವೀಗ ದೊಡ್ಹಿತ್ಲು ಏರು ಹತ್ತುತ್ತಿದ್ದೇವೆ… ಹೋಗುವಾಗಿನ ಖುಷಿ ಈಗಿಲ್ಲ… ಹಕ್ಕಿಗಳು ಕೈಲಿವೆ… ಅಪ್ಪ ಜೊತೆಯಲ್ಲಿಲ್ಲ…
ಪ್ರೇಮಾ ಟಿ ಎಮ್ ಆರ್
