ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಗಜಲ್

ಸುಳಿವ ಗಾಳಿಯಲ್ಲಿ ಗಂಧ ಪೂಸಿದಾಂಗ ಗಜಲ್
ಮುದ ಗೊಂಡ ಹೃದಯಕ್ಕೆ ತಂಪು ತೀಡಿದಾಂಗ ಗಜಲ್
ಕಲ್ಪನೆಯ ಕಾನನದಿ ಶ್ರೀಗಂಧ ಕೊನರಿ ಬೆಳೆದು
ಘನಕ್ಕೆ ಘನ ಮಸೆದು ಘಮ್ಮನೆ ಹರುಹಿದಾಂಗ ಗಜಲ್
ಕೆರೆ ನೀರು ನೀಲಿಯಾಗಿ ಅಲೆಯಾಗಿ ದಡ ತಟ್ಟುವಲ್ಲಿ
ಹೊಂಗಿರಣ ಹೊಳೆದು ತೆರೆಗಂಟಿ ನಿಂತಾಂಗ ಗಜಲ್
ರಂಗು ರಂಗಿನ ಹೋಳಿ ಕೇಳಿಗೆ, ಪಡ್ಡೆ ದೇಹಕೆ
ಉತ್ಸಾಹ ಉಕ್ಕಿ ಮತ್ಸರ ಕಿತ್ತು ಹಾಕಿದಾಂಗ ಗಜಲ್
ಹದಿ ಹರೆಯದ ಷೋಡಶಿ ಕನ್ಯೆಯ ವದನಕೆ
ಕೆಂಪು ರಂಗಿನ ಓಕುಳಿ ಚೆಲ್ಲಿ ಚಿತ್ತಾರಗೈದಾಂಗ ಗಜಲ್
———————
ಶಾಂತಲಿಂಗ ಪಾಟೀಲ
