ಕಾವ್ಯ ಸಂಗಾತಿ
ಸುಮಶ್ರೀನಿವಾಸ್
ಸ್ನೇಹವೋ ಮೋಹವೋ

ಈಗೀಗ ನೀ ರಿಂಗಣಿಸದೆ
ನಾ ನಿದ್ರಿಸಿಲ್ಲಾ ನಿಜ
ಅಮ್ಮೂ ಪುಟ್ಟು ಎಂದೆಲ್ಲಾ
ಕರ್ಣ ಕಳಗುಳಿಗಿಳಿಸಿದ್ದ ನೀ
ಸದ್ಯ ಮೌನದಲೆ ಆವರಿಸಿದೆ
ಗೊತ್ತಿಲ್ಲ ಈಗಲೂ ಸದಾ
ಒಳಗೊಳಗೆ ಆ ನಲ್ನುಡಿಗಳ
ನಾ ಆಲಿಸಿದಂತೆಯೇ ಭಾಸ
ದೂರಿರದ ದೂರಕ್ಕೆ
ಮೌನವೇ ಶರಣಾಗಿದೆ
ಜೊತೆಗೂಡಿ ನಕ್ಕುನಲಿದ
ಸಿಹಿ ಕಹಿ ಸಾಂಗತ್ಯದ ನೆನಪು
ಈಗಲೂ ಕಾಡಹತ್ತಿವೆ
ಬೆಂಬಿಡದ ದೇವರಕ್ಕಸರಂತೆ
ಬಿಡಿಸಿಕೊಳ್ಳಲು ಮನವೊಪ್ಪದು
ಆ ಒಡನಾಟವ ಕಂಡು
ಒಳಗೊಳಗೆ ನರಳಿದವರೆದೆಗೂ
ತಂಪು ತಂಗಾಳಿಯಾದವರು
ಇಂದೆಕೋ ಬಿಸಿ ಉಸಿರಾದೆವು
ಒಂದೂ ತಿಳಿವಿಗೆ ದಕ್ಕುತ್ತಿಲ್ಲ
ಹಿಮ್ಮುಖ ಹೆಜ್ಜೆಯಾದವರು
ಅರೆ ಕ್ಷಣ ತಿರುಗಿದರೂ
ಕಣ್ಣಾಲೆಗಳು ತುಂಬಿ
ನೆನಪ ಕಡಲಲಿ ತೇಲಿಸಿ
ತೋಳ ತೆಕ್ಕೆ ತೆರೆವವು
ಹೌದು…. ನಮ್ಮನ್ನಗಲಿಸಿದ್ದು
ಬೇರುಬಿಟ್ಟ ಪ್ರೀತಿಎಳೆಯಷ್ಟೆ
ಎಂದು ಸೇರುವೆವೊ ಅರಿಯೆ
ಅರಿವಾಗಲಿ ಬಿಡಿ ಹೃದಯಕ್ಕೆ
ಬೆಸುಗೆ ಸ್ನೇಹವೋ ಮೋಹವೋ!!
ಸುಮಶ್ರೀನಿವಾಸ್

Super