ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

” ಪ್ರಣೀತೆ” ಗುಂಗು ಹಿಡಿಸುವ ಗಜಲ್ ಸಂಕಲನ

ಬಿಸಿಲನಾಡಿನ ಕಲ್ಯಾಣ ಕರ್ನಾಟಕದ ನೆಲದ ಅಂತಃಸತ್ವವೇ ಹಾಗೆ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೇಗೆ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆಯೋ, ಗಜಲ್ ಸಾಹಿತ್ಯ ಪರಂಪರೆಯಲ್ಲೂ ಕೂಡ ಮುಂಚೂಣಿಯಲ್ಲಿದೆ.ಪ್ರಣೀತೆ ಎಂಬ ಅಭಿದಾನವನ್ನೆ ಹೊಂದಿರುವ ಸಹೋದರಿ ಶ್ರೀಮತಿ ಪ್ರೇಮಾ ಹೂಗಾರ, ನನ್ನ ಪ್ರೀತಿಯ ಹಾಗೂ
ನೆಚ್ಚಿನ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ. ಇವರ ಪ್ರಣೀತೆ ಸಂಕಲನದ ಗಜಲ್ ಗಳು ನನ್ನನ್ನು ಲೋಹಕ ಚುಂಬಕದಂತೆ ಸೆಳೆದಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಆತ್ಮೀಯತೆ ಹಮ್ಮು-ಬಿಮ್ಮುಗಳಿಲ್ಲದ ಸರಳ ವ್ಯಕ್ತಿತ್ವದಿಂದ ಅವರು ನನಗೆ ಬಹಳ ಹತ್ತಿರವಾಗಿದ್ದಾರೆ.
ನೇಸರನು ಕೂಡ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತಾನೆ. ಕಲ್ಯಾಣ ಕರ್ನಾಟಕದ ಜನತೆಗೆ ತನ್ನ ಶಾಖವನ್ನು ಹೆಚ್ಚು ಕೊಡುತ್ತಲೇ ‘ನಾನು ಸುಟ್ಟು ಕೊಳ್ಳುತ್ತೇನೆ, ನೀವು ಸುಟ್ಟುಕೊಳ್ಳಿ’ ರೆಂದು ಕಿವಿಯಲ್ಲಿ ಸೂಚ್ಯವಾಗಿ ಉಸುರುತ್ತಾನೆ.ಕಮ್ಮಾರನ ತಿದಿಯಿಂದ ಬರುವ ಬೆಂಕಿಯಲ್ಲಿ ನಿಗಿನಿಗಿ ಸುಡುವ ಕಬ್ಬಿಣದಂತೆ ಕವಯಿತ್ರಿ ಶ್ರೀಮತಿ ಪ್ರೇಮ ಹೂಗಾರ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಬ್ಬಿಣ ಕಿಂತಲೂ ಹೆಚ್ಚು ಸುಟ್ಟುಕೊಂಡವರೇ. ಪ್ರೇಮ ಎಂದರೆ ನಂಜುಂಡ ಜೀವ. “ಪ್ರೇಮಾ ಎಂದರೆ ಗಜಲ್ ಸಾಹಿತ್ಯದಲ್ಲಿ ನುರಿತ, ಸುಂದರ ಮಾಲೆ ಕಟ್ಟುವ ಹೂವಾಡಗಿತ್ತಿ”

     ಪ್ರೇಮ ಹೂಗಾರ ಅವರ ಪ್ರಣೀತೆ ಗಜಲ್ ಸಂಕಲನ ಗಜಲ್ ಕಾವ್ಯ ಲೋಕದಲ್ಲಿ ಓದುಗರ ಮನಸ್ಸನ್ನು ತಟ್ಟಕೊಪ್ಪಳಗೂ ಹಲವಾರು ಪ್ರಶಸ್ತಿಗಳನ್ನು ಪಡೆದ ಗಜಲ್ ಸಂಕಲನ. ಅಷ್ಟೇ ಅಲ್ಲ ಪ್ರೇಮ ಹೂಗಾರ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟ ಪ್ರಥಮ ಗಜಲ್ ಸಂಕಲನವಾಗಿದೆ.ಈಗ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ವತಿಯಿಂದ ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿಗೆ ಪ್ರಣೀತೆ ಕೃತಿ ಆಯ್ಕೆಯಾಗಿರುವುದು ಸಂತಸ ತಂದಿದೆ.

     ಗಣೀತೆ  ಸಂಕಲನದಲ್ಲಿ ಒಟ್ಟು 35 ಗಜಲ್ ಗಳಿದ್ದು ಒಂದಕ್ಕಿಂತ ಒಂದು ವೈವಿಧ್ಯಮಯವಾಗಿವೆ. ಗಜಲ್ ಗಳನ್ನು ಓದುತ್ತಾ ಹೋದಾಗ ಅತ್ಯಂತ ಧ್ಯಾನಸ್ಥರಾಗಿ ಬರೆದಿರುವ ಪ್ರೇಮಾ ಈ ಪ್ರಕಾರವನ್ನು ತಮ್ಮ ಉಸಿರಿನ ಉಸಿರನ್ನಾಗಿ ಮಾಡಿಕೊಂಡು ಉತ್ತಮ ನ್ಯಾಯ ಒದಗಿಸಿದ್ದಾರೆ ಎಂಬುದು ನಮಗೆ ಗೊತ್ತಾಗುತ್ತದೆ.

ಎಂದು ಹೇಳುವ ಸಾಲುಗಳು ಅತ್ಯಂತ ಅರ್ಥಗರ್ಭಿತ.ಬುದ್ದ-ಬಸವ-ಗಾಂಧಿ-ಅಂಬೇಡ್ಕರ್ ಮೊದಲಾದ ದಾರ್ಶನಿಕರು ಕೇವಲ ಒಂದು ಜಾತಿಗೆ, ಒಂದು ಧರ್ಮಕ್ಕೆ ಸೀಮಿತವಲ್ಲ. ಅವರು ವಿಶ್ವಮಾನವರು. ಅವರನ್ನು ಜಾತಿ ಧರ್ಮಕ್ಕೆ ಸೀಮಿತ ಗೊಳಿಸುವುದನ್ನು ಖಂಡಿಸುತ್ತಾರೆ.ಮಂದಿರ-ಮಸೀದಿ ಚರ್ಚುಗಳಲ್ಲಿ ಇರುವ ದೇವರು ಒಬ್ಬನೇ ದೇವರ ಹಾಗೂ ಧರ್ಮದ ಹೆಸರಿನಲ್ಲಿ ಜಾತೀಯತೆ ಬೇಧ ಭಾವ ತಾರತಮ್ಯ ಮಾಡುತ್ತಾ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಜನಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡು ಎಲ್ಲರೂ ಒಂದಾಗಿ ಬಾಳುವುದೇ ಬದುಕಿನ ಸಾರ್ಥಕತೆ, ಇಲ್ಲಿ ಯಾವುದು ಶಾಶ್ವತವಲ್ಲ. ಪ್ರೀತಿ ವಿಶ್ವಾಸ ಶಾಶ್ವತವಿಲ್ಲಿ ಎಂದು ನಿಷ್ಠುರವಾಗಿ ತಿಳಿಸಿದ್ದಾರೆ.
ತಾವು ಬದುಕಿನಲ್ಲಿ ಅನುಭವಿಸಿದ ಪ್ರೀತಿ- ಪ್ರೇಮ ವಿರಹ-ವಿಷಾದ ನೋವು- ನಲಿವುಗಳಿಗೆ ಅಕ್ಷರದ ರೂಪ ನೀಡಿದ್ದಾರೆ. ಸಾಮಾಜಿಕ ಅಸಮಾನತೆ, ಅನ್ಯಾಯ, ಅತ್ಯಾಚಾರಗಳ ಬಗೆಗೆ ಕುದಿಯುವ ಪ್ರೇಮಾ ಲೋಕದ ತಲ್ಲಣ ತಳಮಳಗಳಿಗೆ ತನ್ಮೂಲಕ ಸ್ಪಂದಿಸಿದ್ದಾರೆ. ಛಂದಸ್ಸು ಗೇಯತೆ ಹಾಗೂ ಭಾವತೀವ್ರತೆಯಿಂದಾಗಿ ಇವು ಗುಂಗು ಹಿಡಿಸುವ ಗಜಲ್  ಗಳು.

ಗಣೀತೆ ಗಜಲ್ ಸಂಕಲನದ ಮೂಲಕ ಸಾಹಿತ್ಯ ಲೋಕದಲ್ಲಿ ಭರವಸೆಯ ಹಾಗೂ ಬೆರಗುಗೊಳಿಸುವ ಗಜಲ್ ಕವಯತ್ರಿಯಾಗಿ ಪ್ರೇಮ ಹೋಗಾರ ತಮ್ಮದೇ ಆದ ವೈಶಿಷ್ಟವನ್ನು ಮೆರೆದಿದ್ದಾರೆ. ಪ್ರಣೀತೆ ಓದುತ್ತಿದ್ದಂತೆ ಇವು ಕೇವಲ ಗಜಲ್ ಗಳಷ್ಟೇ ಅಲ್ಲ ಬದುಕಿನ ಅನುಭಾವದ ಸಿದ್ಧಾಂತಗಳು ಎನಿಸುವಷ್ಟು ಓದುಗರನ್ನು ತಲ್ಲಣಗೊಳಿಸುತ್ತವೆ.ಇಂತಹ ಗಜಲ್ ಸಂಕಲನಗಳು ಪ್ರೇಮ ಹೂಗಾರ ಅವರಿಂದ ಇನ್ನೂ ಹೆಚ್ಚು ಹೆಚ್ಚು ಬರಲಿ ಅವರ ಗಜಲ್ ಗಳನ್ನು ಓದುವ ಭಾಗ್ಯ ನಮ್ಮದಾಗಲಿ. ಸದಾ ಶುಭವಾಗಲಿ ಎಂದು ಆಶಿಸುವೆ.


About The Author

1 thought on “ಪ್ರೇಮಾ ಹೂಗಾರ, ಅವರ “ಪ್ರಣೀತೆ” ಗಜಲ್‌ ಸಂಕಲನದ ಅವಲೋಕನ ಅರುಣಾ ನರೇಂದ್ರ”

  1. ಪ್ರೇಮಾ ಹೂಗಾರ ಅವರ ಪ್ರಣಿತೆ ಎಂಬ ಗಜಲ್ ಸಂಕಲನ ಪುಸ್ತಕದ ಅವಲೋಕನ ಚೆನ್ನಾಗಿ ಮೂಡಿ ಬಂದಿದೆ

Leave a Reply

You cannot copy content of this page

Scroll to Top