ಹಾಸ್ಯ ಸಂಗಾತಿ
ಎಚ್. ಗೋಪಾಲಕೃಷ್ಣ
ಮೇಡಂಕೊಟ್ಟ ಶಿಕ್ಷೆ ಭಾಗ- ೩-

ಹೋದ ಎಪಿಸೋಡ್ ಹೀಗೆ ಮುಗಿದಿತ್ತು…
ಸ್ವಲ್ಪ ದಿವಸ ಈ ವಿಷಯ ಯಾರಿಗೂ ಹೇಳೋದು ಬೇಡ.. ಮುಂದಿನ ತಿಂಗಳು ಬರ್ತೀನಿ, ಆಗ ಒಂದು ಪರಿಹಾರ ಹುಡುಕಿರ್ತೀನಿ ಅಂತ ಬಂದಿದ್ದೀನಿ….”ಅಂದ ಅಜ್ಜ.
“ಏನಾದರೂ ಪ್ಲಾನ್ ಮಾಡಿದ್ದೀಯಾಜ್ಜಾ…..”
ಅಜ್ಜ ಅಂಗೈ ಅಡ್ಡ ಹಿಡಿದ. ಬಾಗಿಲು ಧಬ್ ಧಬ್ ಅಂತ ಬಡಿದ ಶಬ್ದ ಕೇಳಿಸಿತು.
“ಮುಂದಿನ ಕತೆ ಮುಂದೆ ಸಿಕ್ಕಿದಾಗ.. ಎಲ್ಲರೂ ಸದ್ಯಕ್ಕೆ ಚುಪ್ ಅಂದ. ಬಾಗಿಲು ಓಪನ್ ಮಾಡು….” ಅಂದ. ಪ್ರಭಕ್ಕ ಕನಕಜ್ಜಿ “ಅದೇನು ಬಾಗಿಲು ಹಾಕ್ಕೊಂಡು ಅದೇನು ಮಾಡ್ತಿದ್ದೀರಿ…..”ಅಂತ ಒಳಗೆ ಬಂದರು .
ಕತೆ ಮುಂದಕ್ಕೆ ಹೋಯ್ತು!
ಈಗ ಮುಂದಕ್ಕೆ..
ರಾಮಜ್ಜ ಏನೋ ಮುಂದಿನ ತಿಂಗಳು ಹೋಗುತ್ತಾನೆ, ಪ್ರಾಬ್ಲಂ ಸಾಲ್ವ್ ಮಾಡುತ್ತಾನೆ ಸರಿ. ಕತೆ ನಮ್ಮ ಕಿವಿಗೆ ಬೀಳೋದು ಯಾವಾಗ? ನನ್ನ ಕಸಿನ್ಸ್ ಮತ್ತು ಓದುಗ ಪ್ರಭುಗಳು ಅಷ್ಟೊಂದು ದಿವಸ ಕಾಯೋದು ಕಷ್ಟ ಕಣರ್ಯ್ಯಾ.. ಏನಾದರೂ ಪ್ಲಾನ್ ಮಾಡಿ ಅವತ್ತಿನ್ ಕತೆ ಅವತ್ತೇ ಮಹಾಭಾರತದಲ್ಲಿ ಸಂಜಯ ಧೃತರಾಷ್ಟ್ರನಿಗೆ ಲೈವ್ ಕತೆ ಹೇಳಿದಾಂಗೆ ಹೇಳಬೇಕು.. ಅಂತ ತಲೆ ಕೆಡಿಸಿಕೊಂಡರಾ?
“””ರಾಮಜ್ಜ ನ ಜತೆ ನೀನೇ ಹೋಗಿಬಿಡು. ಕತೆ ಚೆನ್ನಾಗಿ ಚಾಚೂ ತಪ್ಪದೇ ಹೇಳ್ತಿ ಅಂತ ಪ್ರಾಣೇಶ್ ಐಡಿಯ ಕೊಟ್ನಾ? ಎಲ್ಲಾ ಕಸಿನ್ಸ್ ಕೈ ಎತ್ತಿ ಇದೇ ಸರಿ ಇದೇ ಸರಿ ಇದೇ ಸರಿ … ಅಂತ ಒಕ್ಕೊರಲಿನ ಒತ್ತಾಯ ಮಾಡಿ ದ್ರಾ…?
ಅವರು ಹೇಳಿದ್ದಕ್ಕೆ ತಲೆ ಆಡಿಸ್ದೇ ಬೇರೆ ದಾರಿ ಇರಲಿಲ್ಲ. ನಾನು ಈ ಎಸ್ಪಿಡೀಶನ್(expedition) ನಲ್ಲಿ ಭಾಗವಾದೆ! ಇನ್ನು ಮುಂದೆ ಕಂಡದ್ದು ಕಂಡ ಹಾಗೇ ನಿಮಗೆ ವರದಿ ವ ಪ್ಪಿ ಸ್ತೇನೆ.
ಮಾರನೇ ದಿವಸವೇ ರಾಮಜ್ಜ ಆನ್ ಜಾಬ್ ಆದ. ಹೇಗೆ ಅಂದರೆ ಬೆಳಿಗ್ಗೆ ಪಾರ್ಕ್ ನಲ್ಲಿ ಆರು ರೌಂಡ್ ವಾಕಿಂಗ್ ಮುಗಿಸಿ ಕಾಫಿಗೆ ಅಂತ ಕೃಷ್ಣ ಭವನ ನುಗ್ಗಿದ. ನಾನೂ ಅವನ ಜತೆ ಇದ್ದೆ. ತಲಾ ಮೂರು ಪ್ಲೇಟ್ ಸೆಟ್ ದೋಸೆ ಆಯ್ತಾ…ನಾಲ್ಕು ಸ್ಟ್ರಾಂಗ್ ಸುಗರ್ಲೆಸ್ ತಗೊಂಡ.
“ನಾಲ್ಕೇಕೆ ಅಂತ ನಿನ್ನ ದಡ್ಡತನ ಎಕ್ಸಿಬಿಟ್ ಮಾಡಬೇಡ. ಎರಡು ನಿನಗೆ ಎರಡು ನನಗೆ…..”ಅಂದ. ನನಗೆ ಎರಡು ಅಂತ ಡಿಸೈಡ್ ಮಾಡಕ್ಕೆ ರಾಮಜ್ಜoಗೆ ಪರ್ಮಿಷನ್ ಕೊಟ್ಟೋರ್ ಯಾರು?
“ನನಗೆ ಒಂದೇ ಸಾಕು….”
“ಸರಿ ಬಿಡು ನಿನ್ನಕರ್ಮ…”
ಮೂರೂ ಲೋಟ ಅವನೆದುರು, ಒಂದು ನನ್ನೆದುರು. ಮೇಜಿನ ಈ ಕಡೆ ನಾನು ಆಕಡೆ ಅವನು.. ಇದು ಸೀನು.
“ತಿಪ್ಪ ನ ಅಮ್ಮನ ಹತ್ತಿರ ಮಾತಾಡ್ತೀನಿ. ತೆಪ್ಪಗೆ ಕುಕ್ಕರಿಸ್ಕೋ….”ಅಂದ ರಾಮಜ್ಜ. ತಲೆ ಆಡಿಸಿದೆ.
“ನಿನ್ನ ಜತೆ ನಾನೂ ಇರ್ತೀನಿ ಅಜ್ಜ…”ಅಂತ ರಿಕ್ವೆಸ್ಟ್ ಇಟ್ಟಿದ್ದೆ, ನಿನ್ನೆ ರಾತ್ರಿ.
“ನೀನ್ಯಾಕೆ ಶಿವಪೂಜೆಲಿ ಕರಡಿ…?”ಅಂತ ರೇಗಿದ್ದ.
“ಕನಕಜ್ಜಿ ಹೇಳಿದ್ದಾಳೆ ನಿನ್ನ ಜತೆ ಇರು ಅಂತ. ಕೊರಳಿಗೆ ನೊಗ ಇಲ್ಲ ಅಂದರೆ ನೀನು ದೇವರಿಗೆ ಬಿಟ್ಟ ಬಸವ ಅಂತೇನೋ ಹೇಳಿದಳು. ಏನು ದೇವರಿಗೆ ಬಿಟ್ಟ ಬಸವ ಅಂದರೆ ರಾಮಜ್ಜ….”ಅಂತ ಕೇಳಿದೆ.
“ಹಾಗೆ ಹೇಳಿದಳಾ….”ಅಂತ ಒಂದು ನಿಮಿಷ ಪೆಚ್ಚಾದ.
“ಬಿಡು ಅದರ ಕತೆ ಈಗ್ಯಾಕೆ…. ತೆಪ್ಪಗೆ ನನ್ನ ಜತೆ ಇರು. ಮಧ್ಯ ಮಧ್ಯ ಅದೇನು ಇದೇನು ಅಂತ ಕೇಳಬಾರದು…”ಅಂತ ಕಂಡೀಶನ್ ಮೇಲೆ ಅವನ ಜತೆಗೆ ನನ್ನ ಇಟ್ಕೊಂಡ…!
ಜೇಬಿನಿಂದ ಮೊಬೈಲ್ ತೆಗೆದ. ಪಟ್ ಪಟ ನಂಬರು ಒತ್ತಿದ. ತೋರು ಬೆರಳು ನನ್ನ ಕಡೆ ತೋರಿಸಿ ಶಟ್ ಯುವರ್ ಮೌತ್ ಅಂತ ಸನ್ನೆ ಮಾಡಿದ. ನಾನು ಶಟ್ ಯುವರ್ ಮೌತ್ ಮಾಡಿದೆ.
“ಹಲೋ ಯಾರೇ ಮಾತಾಡ್ತಿರೋದು? ಪಾರ್ವತೀ ನಾ…”ಅಂತ ಪೋನಿನಲ್ಲಿ ಅರಚಿಕೊಂಡ.
ಪಾರ್ವತೀ ತಿಪ್ಪ ನ ಅಮ್ಮ. ಇವನಿಗೆ ನಂಟರಲ್ಲಿ ಯಾರೂ ಅಂದರೆ ಯಾರೂ ಬಹುವಚನದವರು ಇಲ್ಲವೇ ಇಲ್ಲ. ಗಂಡಸಾದರೆ ಹೋಗೋ ಬಾರೋ ಹೆಂಗಸು ಆದರೆ ಹೋಗೇ ಬಾರೇ! ಇವನ ತರಹವೇ ನಾನೂ ಮಾತಾಡಲು ನನ್ನ ಮದುವೆ ಆದ ಬಿಗಿನಿಂಗ್ ನಲ್ಲಿ ಟ್ರೈ ಮಾಡಿದ್ದೆ. ನನ್ನಾಕೆ “ಲಂಗು ಲಗಾಮು ಇಲ್ಲದೇ ಹಾಗೆ ಮಾತಾಡಿದ್ರೆ ಬಾಯ್ಮೇಲೆ ಬರೆಹಾಕ್ತಿನಿ …..”ಅಂತ ಹೇಳಿ ಅದನ್ನು ಅಂದರೆ ಏಕ ವಚನ ಪ್ರಯೋಗ ನಿಯಂತ್ರಿಸಿದ್ದಳು! ಈಗಲೂ ಕೆಲವು ಸಲ ಅವಳು ಸುತ್ತ ಮುತ್ತ ಇಲ್ಲ ಅನ್ನುವುದನ್ನು ನೋಡಿಕೊಂಡು ಕೆಲವು ಹೆಣ್ಣು ಕಸಿನ್ಸ್ ಗಳಿಗೆ ಹೋಗೇ ಬಾರೇ ಪ್ರಯೋಗ ಮಾಡ್ತೀನಿ. ಅದರ ಮಜವೇ ಬೇರೆ! ಇದು ನಿಮ್ಮಲ್ಲೇ ಇರಲಿ.
“ಹೌದು ನಾನೇ.ರಾಮಜ್ಜ.ಅದೇನು ಅಪರೂಪಕ್ಕೆ ನಾನು ನೆನಪಾದೇ…..”ಅಂದಳು ಪಾತಿ. ಪಾರ್ವತೀ ಇನ್ನುಮುಂದೆ ಪಾತಿ ಆಗ್ತಾಳೆ.ರಾಮಜ್ಜ ಪೋನು ಯಾವಾಗಲೂ ದೊಡ್ಡ ದನಿಯಲ್ಲಿ ಇಡ್ತಾನೆ, ಅವನಿಗೆ ಕಿವಿ ಮಂದ. ಹಾಗೆ ನೋಡಿದರೆ ನಮ್ಮ ಖಾನ್ ದಾನ್ ಗೆ ಕಿವಿ ಮಂದವೋ ಮಂದ. ಅದರಿಂದ ಅವನ ಫೋನಿನ ಮಾತುಗಳು ಇಡೀ ಪ್ರಪಂಚಕ್ಕೆ ಕೇಳಿಸತ್ತೆ!
“ರಾತ್ರಿ ನೀನು ಕನಸಲ್ಲಿ ಬಂದೆ ಕಣೇ….”ರಾಮಜ್ಜ ಫುಲ್ ರೊಮ್ಯಾಂಟಿಕ್ ಆಗಿದ್ದ. ಪಾತಿ ಕೆನ್ನೆ ಕೆಂಪಾಯಿತಾ… ಗೊತ್ತಾಗಲಿಲ್ಲ, ಅವಳು ಫೋನಿನ ಇನ್ನೊಂದು ತುದಿಯಲ್ಲಿದ್ದಳು!
“ಹೂಂ ಇನ್ನೊಂದು ಇಪ್ಪತ್ತು ವರ್ಷ ಆದ್ಮೇಲೆ ನಿನ್ ಕನಸಲ್ಲಿ ಬರ್ತೀನಿ… ಈಗೇನು ಪೋನು ಮಾಡಿದ್ದು….”ಅಂದಳು.
ರಾಮಜ್ಜ ನ ಮಾತು ಯಾರೂ ಸಿರಿಯಸ್ ಆಗಿ ತಗೊಳ್ಳೇದೆ ಇಲ್ಲ.ಅವನೇನು ಮಾತು ಆಡಿದರೂ ಎಲ್ಲರೂ ಅದನ್ನ ಜೋಕ್ ತರಹ ಟ್ರೀಟ್ ಮಾಡ್ತಾರೆ, ನನಗೆ ನಿಮಗೆ ಇಲ್ಲದೇ ಇರೋ ಸ್ಪೆಶಲ್ ಪ್ರಿವಿಲೇಜ್ ಇದು ರಾಮಜ್ಜನಿಗೆ!ಯಾರಿಗಾದರೂ ಚೆನ್ನಾಗಿ ಬೈದು ಉಪ್ಪು ಹಾಕಿದರೂ ಸಹ ಅದು ಒಂದು ಜೋಕು ಎಂದು ಪರಿಗಣಿತವಾಗುತ್ತದೆ!
“ಮಗ ಪೋನ್ ಮಾಡಿದ್ನೇನೇ…. ಅದೇ ತಿಪ್ಪ ನ ಪೋನು ಬಂದಿತ್ತಾ….”ದ್ವನಿಯಲ್ಲಿ ಕಾತರ ತುಂಬಿದ್ದ.
“ಇಲ್ವಲ್ಲಾ. ಅವತ್ತು ನೀನು ಕರಸಿ ಕೊಂಡ ಮೇಲೆ ಅವನ ಸುದ್ದಿನೇ ಇಲ್ಲ..”
“ಸರಿ ಅದಕ್ಕೇ ಪೋನು ಮಾಡಿದ್ದು. ಎಲ್ಲಾ ನಿನ್ನ ಚಾಳಿನೇ ಕಲ್ತಿದೆ ಅದು…..”ಅಂದ.
“ಅದೇನಾಯ್ತು ಅಂತದ್ದು, ನನ್ನ ಚಾಳಿದು ….”ಇದು ಪಾತಿ. ದನಿಯಲ್ಲಿ ಕೊಂಚ ಆತಂಕ.
“ಅದಕ್ಕೇ ಬಂದೆ.. ಅದೇ ಕಳ್ಳೆಪುರಿ ಗೊತ್ತಲ್ಲಾ ನಿನ್ನ ಲೂಸ್ ಕಸಿನ್ನು..?”ರಾಮಜ್ಜ
“ಹೂಂ . ಮಠದ ಸಾಮಿನೋ ಅದೇನೋ ಆಗಿದ್ದಾನಲ್ಲಾ? ಅದ್ಯಾರೋ ಮೇಡಂ ನ ಲವ್ ಮಾಡಿ ಮದುವೆ ಆದ್ನಲ್ಲಾ….”
“ಹೂಂ ಅವನೇ ಕಣೇ….”
“ಅದೇನು ಹೇಳು ಅವನ ಮಠಕ್ಕೆ ಅಲ್ವಾ ನೀನು ತಿಪ್ಪ ನ್ನ ಸೇರಿಸಿದ್ದು..”ಪಾತಿ
“”ಹೌದು ಕಣೇ ನಿನ್ಮಗ ಪೋಲಿ ಬಿದ್ದು ಹಾಳಾಗಿದ್ಧ ಅಂತ ಆಲ್ಲಿ ಸೇರಿಸಿದ್ದು. ಈಗ ನೋಡಿದರೆ…..”ರಾಮಜ್ಜ.
“ಆದೇನಾಯ್ತು ಹೇಳಪ್ಪ ಮೊದಲು….”ಪಾತಿ
“ಕಳ್ಳೆಪುರಿ ಹೆಂಡತಿ ತಂಗಿನ ಲವ್ ಮಾಡ್ತಾ ಇದಾನಂತೆ…”ರಾಮಜ್ಜ ನಿಧಾನಕ್ಕೆ ಪಾತಿಗೆ ಸುದ್ದಿ ಸುಳ್ಳು ಸುದ್ದಿ ಹರವಿದ.
“ನೀನೂ ಪಿಯೂಶೀಲಿ ಯಾರನ್ನೋ ಲವ್ ಮಾಡಿದ್ಯಲ್ಲಾ….. ಅದೇ ಚಾಳಿ. ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆ……”ಇದು ನನಗೆ ಹೊಸಾ ಸುದ್ದಿ.ಯಾವಾಗಲಾದರೂ ಇದರ ಪೂರ್ತಿ ಕತೆ ತಿಳ್ಕೊ ಬೇಕು…
“ಈಗ್ಯಾಕೆ ಹಳೇ ಪುರಾಣ..? ಕಮ್ ಟು ದಿ ಪಾಯಿಂಟ್….”ಇದು ಪಾತಿ ,ದನಿಯಲ್ಲಿ ಕೋಪ ಇತ್ತು.
“ಅದೇ ತಿಪ್ಪ …ಕಳ್ಳೆಪುರಿ ಹೆಂಡತಿ ತಂಗಿನ ಲವ್ ಮಾಡ್ತಾ ಇದಾನಂತೆ…”
“ಅವಳು ಇವನಿಗಿಂತ ದೊಡ್ಡ ವಳು ರಾಮಣ್ಣಿ.. ನೀನು ಮಿಸ್ಟೆಕ್ ಮಾಡ್ಕೊಂಡಿದ್ದಿ….”ಪಾತಿ
“ದೊಡ್ಡವಳು ಆದರೆ ಲವ್ ಆಗಬಾರದು ಅಂತ ಇದ್ಯಾ..”ಇದು ರಾಮಜ್ಜ
“ನಿಂಗ್ಯಾರು ರೀಲ್ ಬಿಟ್ಟಿದ್ದು…”ಇದು ಪಾತಿ
“ರೀಲಾ? ತಿಪ್ಪ ನೇ ಬಂದು ನನ್ನ ಹತ್ತಿರ ಗುಟ್ಟಾಗಿ ಹೇಳಿದ…”ಇದು ರಾಮಜ್ಜ
“ಹುಡುಗಿ ಅವನಿಗಿಂತ ದೊಡ್ಡ ವಳು, ಬೇಡಾಂತ ಅಡ್ವೈಸ್ ಮಾಡಿದೆ ತಾನೇ…”ಇದು ಪಾತಿ
“ಅದನ್ನೇ ಹೇಳಿದೆ….”ಇದು ರಾಮಜ್ಜ
“ಸರಿ ಬಾಲ ಮುದುರಿಕೊಂಡು ಹೋದ ತಾನೇ “ಇದು ಪಾತಿ
“ಇಲ್ಲವೇ ಮಾರಾಯ್ತಿ.ಅವಳದ್ದು ಎಸೆಲ್ಸಿ ಮಾರ್ಕ್ಸ್ಕಾರ್ಡ್ ಹಿಡಕೊಂಡು ಬಂದಿದ್ದ. ಇವನಿಗಿಂತ ಒಂದೂವರೆ ತಿಂಗಳು ಚಿಕ್ಕದು ಅದು…”ಇದು ರಾಮಜ್ಜ.
“ಏನು ತರಲೆ ಅಡ್ವೈಸ್ ಮಾಡಿದೆ. ನಿನ್ನ ಲೂಸ್ ಐಡಿಯ ಏನು ತುಂಬಿದೆ ಅದಕ್ಕೆ…?”ಇದು ಪಾತಿ ದನಿ ಸ್ವಲ್ಪ ಏರಿತ್ತು, ಕೋಪದಲ್ಲಿತ್ತು ಮತ್ತು ಮೂಗಲ್ಲಿ ಬೆಂಕಿ ಬರ್ತಿತ್ತಾ ತಿಳಿಯದು, ಬರೀ ಪೋನ್ ನಲ್ಲಿ ಮಾತು ಕತೆ ಆಗ್ತಾ ಇದ್ದದ್ದು. ವಿಡಿಯೋ ಶೋ ಇರಲಿಲ್ಲ!
“ಬೇಡ ಇಲ್ಲಿಗೇ ನಿಲ್ಲಿಸು ತಿಪ್ಪ…..”ಅಂತ ಒಂದು ಗಂಟೆ ಪಾಠ ಮಾಡಿದೆ.
“ನೀನು ಪಿಯೂಷೀ ನಲ್ಲಿ ಆರ್ಸಲ ಫೇಲು…”ಇದು ರಾಮಜ್ಜ. ಪಾತಿ ಅರ್ಧದಲ್ಲೇ ಮಾತು ಕಟ್ ಮಾಡಿದಳು.
“ಆರಲ್ಲವೋ, ನಾಲ್ಕೇ ಸಲ ಅವನು ಫೇಲ್ ಆಗಿರೋದು. ನೀನು ಊರಿಗೆಲ್ಲಾ ಆರ್ಸಲ ಹತ್ಸಲ ಅಂತ ಡಂಗೂರ ಹೊಡಕೊಂಡು ಬರಬೇಡ….. ಸರೀಕರೆದುರು ಅವನನ್ನ ಚೀಪ್ ಮಾಡಬೇಡ….”
“ಸರಿ ಅವನಿಗೆ ಅದನ್ನೇ ಹೇಳಿದೆ. ನೀನು ಫೇಲು. ಅವಳು ಎಂ ಏ ಮಾಡಿದ್ದಾಳೆ. ಕಾಲೇಜು ಮೇಡಮ್ ಬೇರೆ. ಲವ್ ಗಿವ್ ಎಲ್ಲಾ ಮರ್ತು ಮತ್ತೆ ಎಕ್ಸಾಮ್ ಕಟ್ಟು…. ಅಂದೆ..’ ಇದು ರಾಮಜ್ಜ
“ಸರಿ ಆಮೇಲೇ…?”
“”ಅಮ್ಮನ್ನ ಒಪ್ಸು. ಇಲ್ಲಾಂದ್ರೆ ಹಿಮಾಲಯಕ್ಕೆ ಹೋಗಿ ಸನ್ಯಾಸಿ ಆಗ್ತೀನಿ ಅಂತ ಹಠ ಹಿಡಿದಿದ್ದಾನೆ ಕಣೇ ಪಾತಿ…”ಇದು ರಾಮಜ್ಜ.
“ಹಿಮಾಲಯಕ್ಕೆ ಬೇಡ , ಆಲ್ಲಿ ತುಂಬಾ ಚಳಿ ಅಂದೆ…… ಬೇಕಾದರೆ ಆಫ್ರಿಕಾ ಯೋಚಿಸು ಅಂದೆ……….”ಇದು ರಾಮಜ್ಜ
ಅತ್ತ ಕಡೆ ಇಂದ ಬಿಕ್ಕಿದ, ಮೂಗು ಸೊರಸಿರ ಅಂದ ಶಬ್ದ ಕೇಳಿಸಿತು.
“ನಿನಗೆ ಶಾಕ್ ಆಗಬಾರದು ಅಂತ ಮೊದಲೇ ಹೇಳಿದೆ.. ಅದೇನು ಯೋಚನೆ ಮಾಡ್ತೀರಿ ಗಂಡ ಹೆಂಡತಿ ಕೂತ್ಕಂಡು ಅದು ಮಾಡಿ….”ಇದು ರಾಮಜ್ಜ
“ಯೋಚನೆ ಮಾಡದು ಅದೂ ಇದರ ಜತೆ? ಮದ್ವೆ ಮಾಡ್ಕಲ್ಲಿ ಬಿಡು ಅನ್ನುತ್ತೆ ಇದು ಅಷ್ಟೇ.ಇದೊಂದು ಬೇಜವಾಬ್ದಾರಿ ಮುಂಡೇದು. ಇದು ಸರಿಯಾಗಿದ್ದರೆ ಅವನು ಪಿಯುಸಿ ಫೇಲ್ ಆಗ್ತಾ ಇದ್ನ……”ಮತ್ತೆ ಅತ್ತ ಕಡೆ ಇಂದ ಬಿಕ್ಕಿದ, ಮೂಗು ಸೊರಸಿರ ಅಂದ ಶಬ್ದ ಕೇಳಿಸಿತು.
“ಅಳಬೇಡ ಒಂದೆರೆಡು ದಿನ ತಡ್ಕಾ. ನಾನೇ ನಿಮ್ಮೂರಿಗೆ ಬರ್ತೀನಿ… ಯೋಚ್ನೆ ಮಾಡೋಣ…”ಅತ್ತ ಕಡೆ ಇಂದ ಬಿಕ್ಕಿದ, ಮೂಗು ಸೊರಸಿರ ಅಂದ ಶಬ್ದ ಮತ್ತೆ ಮತ್ತೆ ಕೇಳಿಸಿತು.
“ತಲೆ ಕೆಡಿಸ್ಕೋ ಬೇಡ ಕಣೇ ನಾಳೆ ಸಂಜೆ ನಿಮ್ಮನೇಲಿ ಇರ್ತೀನಿ. ಅಲ್ಲಿವರೆಗೂ ಕೋಪ ತಡ್ಕೊ…”ಅಂತ ಪೋನು ಡಿಸ್ಕನೆಕ್ಟ್ ಮಾಡಿದ. ನನ್ನ ಕಡೆ ತಿರುಗಿ ಇದು ಸಿಕ್ರೆಟ್ಟು, ಯಾರಿಗೂ ಬೊಗಳಬೇಡ ಈಗಲೇ…”ಅಂದ. ಅವನ ತಲೆ ಹೇಗೆ ವರ್ಕ್ ಮಾಡ್ತಾ ಇದೆ ಅಂತ ಅರ್ಥ ಆಗಿರಲಿಲ್ಲ. ಆಗಲಿ ಅಂತ ತಲೆ ಆಡಿಸಿದೆ. ತಿಪ್ಪನಿಗೆ ಮೇಡಂ ಅವನನ್ನ ಲವ್ ಮಾಡ್ತಾ ಇರೋದೇ ಗೊತ್ತಿಲ್ಲ, ಇವನು ನೋಡಿದರೆ ಹೀಗೆ ಹೇಳಿದನಲ್ಲ ಅಂತ ನನ್ನ ತಲೆ ಕೊರೆಯುತ್ತಿತ್ತು.
ರಾತ್ರಿ ಉಂಡೆವು. ಏನು ತಿಂದೆ ಹೇಗಿತ್ತು ಅನ್ನೋ ಕತೆಗೆ ನೀವು ಕಾಯ್ತಾ ಇದೀರಿ ಅಂತ ನನಗೆ ಗೊತ್ತು.ಆ ವಿ ಶಯ ಈಗ ಬೇಡ. ಕತೆ ಓಟಕ್ಕೆ ಏನು ಬೇಕೋ ಅದನ್ನ ಮಾತ್ರ ಹೇಳಿಬಿಡ್ತೀನಿ.
ರಾತ್ರಿ ಮಲಗುವ ಮುಂಚೆ ಅಜ್ಜನಿಗೆ ಒಂದು ಕೊಶ್ಚನ್ ಎಸೆದೆ , ತುಂಬಾ ಹೊತ್ತು ನನ್ನ ಮೆದುಳಿನಲ್ಲಿ ಈ ಪ್ರಶ್ನೆ ಗಿರಕಿ ಹೊಡೀತಾ ಇತ್ತು.
“ಅಜ್ಜಾ ತಿಪ್ಪ೦ಗೆ ಆ ಮೇಡಂ ಲವ್ ಮಾಡ್ತಾ ಇರೋದು. ನೀನು ನೋಡಿದರೆ ಪಾರ್ವತೀ ಕಕ್ಕಿಗೆ ಇವನೇ ಲವ್ ಮಾಡ್ತಾ ಇದಾನೆ ಅಂತ ಸುಳ್ಳು ಹೇಳಿದೆಯಲ್ಲಾ ಯಾಕಜ್ಜ ಸುಳ್ಳು?”ಅಂದೆ. ಅದಕ್ಕೆ ಮೊದಲು ಒಂದು ವಿವರಣೆ. ನಮ್ಮ ವಂಶದಲ್ಲಿ ಇನ್ನೂ ಆಂಟಿ ಅಂಕಲ್ ಪದಗಳು ನುಸುಳಿಲ್ಲ. ಆಂಟಿಗೆ
ಕಕ್ಕಿ ಎಂದೂ ಕಕ್ಕ ಪದವನ್ನು ಅಂಕಲ್ ಗೂ ಉಪಯೋಗಿಸುತ್ತೇವೆ.
ಅಜ್ಜ ಬಾಯ್ಬಿಟ್ಟ.”ಅಲ್ವೋ ಮಗನ್ನ ಯಾರೋ ಹುಡುಗಿ ಲವ್ ಮಾಡಿದ್ದಾಳೆ ಅಂದರೆ ಇವಳು ಆಕಾಶದ ಎತ್ತರ ಏರ್ತಾಳೆ, ಇಲ್ಲದ್ದೆಲ್ಲಾ ವರಾತ ತೆಗೀತಾಳೆ. ಇವಳ ಮಗನೇ ಲವ್ ನಲ್ಲಿ ಬಿದ್ದಿದ್ದಾನೆ ಅಂತ ಹೇಳಬೇಕೆು.. ಈಗ ನೋಡು ಅದೇ ವರ್ಕ್ ಆಗ್ತಾ ಇರೋದು…”ಅಂದ.
“ಏನು ಮುಂದಿನ ಪ್ಲಾನು….”ಅಂದೆ.
“ಬಾ ಮೂಲೆ ಅಂಗಡಿಗೆ ಹೋಗಿ ಬಾದಾಮಿ ಹಾಲು ಖಾರದ ಬನ್ನು ತಿನ್ದ್ಕೊಂಡು ಬರಾಣ….’
ತಲಾ ಎರಡು ಖಾರದ ಬನ್ನು, ಎರಡೆರಡು ಬಾದಾಮಿ ಹಾಲು ಮುಗಿಸಿದೆವು.
ವಾಪಾಸ್ ಬರೋವರ್ಗೂ ಅದೇನೋ ಚಿಂತಿಸ್ತಲೇ ಇದ್ದ. ರೂಮಿಗೆ ಬಂದ್ವಾ. ಪೋನು ಹಚ್ಚಿದ.
“ಲೇ ಕಲ್ಲೇ, ಹೆಂಡರು ಅವಳೇನೋ ಆಲ್ಲಿ…?”ಅಂದ.
“ಪಕ್ಕದ ರೂಮಲ್ಲಿ ಸಿಸ್ಟರ್ಸ್ ಜತೆ ಕೂತವೆ.. ಯಾಕೆ?..”ಅಂದ ಕಳ್ಳೆಪುರಿ.
“ನಿನ್ನ ಹೆಂಡ್ತಿ ತಂಗಿ ಅದೇ ಕೊನೆ ಅವ್ಳು, ಏನ್ಲಾ ಅವ್ಳ ಹೆಸ್ರು.. ಗುಲಾಬಿ ತಾನೇ?…”
“ಹೂಂ ಅದಕ್ಕೇನೀಗಾ……”ಅಂತ ಕಳ್ಳೆಪುರಿ ದನಿ ಕೇಳಿಸ್ತು.
“ಹೋಗಿ ಮುಂಬಾಗಿಲು ಭದ್ರವಾಗಿ ಹಾಕ್ಕೊಂಡು ಬ. ಬಾಗಿಲಲ್ಲಿ ತಿಪ್ಪ ನ್ನ ಕಾವಲಿಗೆ ನಿಲ್ಸು… ಅರ್ಜೆಂಟ್ ಮಾತಾಡೋದು ಇದೆ…..”
ರಾಮಜ್ಜನ ಪ್ಲಾನ್ ಏನು ಅಂತ ತಿಳಿಯದೆ ಕನ್ಫ್ಯೂಸ್ ಆದೆ. ಎರಡು ನಿಮಿಷದಲ್ಲಿ ಆ ಕಡೆಯಿಂದ ಪೋನ್ ಕೇಳಿಸ್ತು..
“ಅಜ್ಜಾ ಬಾಗಿಲು ಬೋಲ್ಟ್ ಹಾಕಿ ಬೀಗಾ ನೂ ಜಡಿದಿವ್ನಿ.. ತಿಪ್ಪ ಆಚೇ ನಿಂತಿದ್ದಾನೆ. ಏನು ಸಮಾಚಾರ ಹೇಳು…”ಇದು ಕಲ್ಲೇ ಪುರಿ
“ಒಂದು ಹೊಸಾ ಡೇವಲಪ್ ಮೆನ್ಟ್ ಆದೆ. ಸರಿಯಾಗಿ ಕೇಳಿಸ್ಕೋ…..”ಇದು ರಾಮಜ್ಜ.
ಆಕಡೆ ಇಂದ ಏನೂ ದನಿ ಇಲ್ಲ..
“ಅವಳು ಗುಲಾಬಿ, ನಿನ್ನ ಹೆಂಡ್ತಿ ತಂಗಿ ಅದೇ ಕೊನೆ ಅವ್ಳು, ನಮ್ಮ ತಿಪ್ಪ ನ ಲವ್ ಮಾಡ ವಳೇ…..”
“ಇದು ಇಂಗೆ ಆಗ್ತದೆ ಅಂತ ಗೊತ್ತಿತ್ತು….”ಅಂದ ಕಲ್ಲು.
“ನಿನಗೆ ಗೊತ್ತಾ ಇದು?…”ರಾಮಜ್ಜ
“ಹೂಂ ಅಜ್ಜಾ….”
“ನನಗೆ ಹೇಳಲೇ ಇಲ್ವಲ್ಲೋ…”
“ಅದು ಹಿಂಗಾಯ್ತು ಅಜ್ಜ….”ಅಂತ ಕಲ್ಲು ಕತೆ ಹೇಳಿದ. ತಿಪ್ಪ ರೂಮಲ್ಲಿ ಸಾಮ್ ಮಾಡಬೇಕಾದರೆ ಗುಲಾಬಿ ಮರೆಲಿ ನಿಂತು ನೋಡ್ತಾ ಇದ್ದದ್ದು, ಅವನ ಪೋಟೋ ತೆಗೆಯೋಳು ಇವನಿಗೆ ಗೊತ್ತಿಲ್ದ ಹಾಗೆ….. ಆಗಲೇ ಇವನಿಗೆ ಡೌಟ್ ಬಂದಿತ್ತಂತೆ. ಟಿ ಶರ್ಟು ಪ್ಯಾಂಟು ಹಾಕುತ್ತಿದ್ದ ಅವನ ಡ್ರೆಸ್ ಕೋಡ್ ಇವನು ಚೇಂಜ್ ಮಾಡಿದ. ಬಿಳಿ ಪಂಚೆ, ಬಿಳಿ ಜುಬ್ಬಕ್ಕೆ. ಹೋದವಾರ ತಿಪ್ಪ ಬಂದು ಐದು ಸಾವಿರ ಬೇಕು ಅಂದೆ. ಇವನು ಯಾಕೆ ಅಷ್ಟೊಂದು ದುಡ್ಡು ಆಂತ ಕೇಳಿದ. ತಿಪ್ಪ ಆನ್ ಲೈನ್ ನಲ್ಲಿ ಡಜನ್ ಚೆಡ್ಡಿ ಆರ್ಡರ್ ಮಾಡಿದೀನಿ ಇವತ್ತು ಬರುತ್ತೆ, ಅದಕ್ಕೆ.. ಅಂದ. ಇವನು ಡಜನ್ ಯಾರಿಗೋ ಅಂತ ಕ್ವೀರಿ ಹಾಕಿದ. ಆರು ನಿನಗೆ, ಆರು ನನಗೆ. ಚೆಡ್ಡಿ ಮೇಲೆ ಕಾವಿ ಸುತ್ತುಕೋ ಚೆನ್ನಾಗಿರುತ್ತೆ ಅಂದ ಅವನು. ಇವನು ಆರು ಚೆಡ್ಡಿ ಅವನು ಆರು ಚೆಡ್ಡಿ ತಗೊಂಡರು.
ರಾಮಜ್ಜ ರೇಗಿದ..”ಇದಕ್ಕೂ ಅವನ ಲವ್ ನಿನಗೆ ಮೊದಲೇ ಗೊತ್ತಿದ್ದಕ್ಕೂ ಏನ್ಲಾ ಲಿಂಕು…..?”
“ಗುಲಾಬಿ ಪೋಟೋ ತೆಗೆಯೋದು ಗೊತ್ತಾಗೇ ಇವನು ಚೆಡ್ಡಿ ತರಿಸಿದ್ದು….”ಕಲ್ಲು ಸಂದೇಹ ಪರಿಹಾರ ಮಾಡಿದ!
“ಕಲ್ಲೂ, ನಿನ್ನ ತಲೇಲಿ ಸಹ ಕಲ್ಲೇ ಇದೆ ಕಣೋ. ಅವಳು ಅದೇ ಗುಲಾಬಿ ಲವ್ ಮಾಡ್ತಾ ಇರೋದು ತಿಪ್ಪ ನಿ ಗೊತ್ತಿಲ್ಲ ಅಂದು ಕೊಂಡಿದ್ದಾರೆ. ನಿನ್ನ ಹೆಂಡತಿ ತಿಪ್ಪನ್ನ ಒಪ್ಪಿಸು ಅಂತ ನನ್ನ ರಿಕ್ವೆಸ್ಟ್ ಮಾಡಿದ್ದಾಳೆ. ತಿಪ್ಪ ನನ್ನ ನಾವೇ ಒಪ್ಪಿಸಿದ ಹಾಗೆ ಮಾಡಾನ. ನಿನ್ನ ಪ್ಲಾನ್ ಏನಾದರೂ ಇದೆಯಾ ಲಿಂಕ್ ಮಾಡಕ್ಕೆ……?”
ತಿಪ್ಪ” ಏನಿಲ್ಲ ಅಜ್ಜ…”ಅಂದ.
“ತಿಪ್ಪ ಮುಂಡೆ ಗಂಡ, ಸ್ವಲ್ಪ ನಿನ್ನ ಬ್ರೈನ್ ಉಪ್ಯೋಗಿಸೋ….”ಅಂದ ರಾಮಜ್ಜ.
“ಮದ್ವೆ ಆಗಲಿ ಬಿಡು. ನನ್ನ ಬ್ರೈನ್ ಯಾಕೆ ಬೇಕು ಇಲ್ಲಿ….”
“ಅಲ್ವೋ ಪೆದ್ದ ಮುಂಡೆ ದೇ, ತಿಪ್ಪ ನಿನ್ಕಸಿನು. ನಿನ್ನ ಇನ್ವಾಲ್ವ್ಮೆಂಟ್ ಇಲ್ದೆ ಮದುವೆ ಆಗಬಾರದು. ನಿನ್ನ ಹೆಂಡತಿ ಹತ್ರ ಈ ಮದುವೆ ಆಗಬೇಕೆಂದರೆ ನಾನು ಹೇಳೋ ಕಂಡೀಶನ್ ಒಪ್ಬೇಕು ಅಂತ ಹೇಳು….”
“ಏನು ಕಂಡೀಶನ್ ಹಾಕದು?..”ಇದು ಕಲ್ಲು.
“ಅದಕ್ಕೇ ಬ್ರೈನ್ ಉಪಯೋಗಿಸು ಅಂದಿದ್ದು… ಹೀಗೆ ಮಾಡು…”ಅಂತ ಅಜ್ಜ ಅವನಿಗೆ ಅದೇನೇನೋ ಹೇಳಿದ.
ಮಾರನೇ ಸಂಜೆ ಪಾರ್ವತೀ ಕಕ್ಕಿ ಮನೆ ಸೇರಿದೋ. ಪಾರ್ವತೀ ಕಕ್ಕಿ ಕಣ್ಣು ಊದಿತ್ತು, ಮುಖ ಧುಮ ಧೂಮ ಎನ್ನುತ್ತಿತ್ತು.
“ನೋಡು ಪಾರ್ವತೀ ನಿನಗೇ ಗೊತ್ತು ಡಬಲ್ ತ್ರಿ ಬಲ್ ಡಿಗ್ರೀ ಇರೋರಿಗೇ ಹುಡುಗೀರು ಸಿಕ್ತಾ ಇಲ್ಲ ಈಗ. ಅದರಲ್ಲೂ ಪಿಯೂಶೀೀ ಆರು ಸಲ ಫೇಲ್ ಆಗಿರೋ ಅವನಿಗೆ…..”
“…..ಹಾಗೆ ಗುರಿ ಇಟ್ಟು ಎಸೆಯ ಬೇಡ. ನಾನು ತಲೆ ಪಕ್ಕಕ್ಕೆ ವಾಲಿಸದೇ ಹೋಗಿದ್ದರೆ ಮೂಗು ಕಟ್ ಆಗಿ ಬಿಡ್ತಾ ಇತ್ತು….”ಅಂದ ಅಜ್ಜ.
ಆರು ಸಲ ಫೇಲ್ ಆಗಿರೋ ಅವನಿಗೆ…. ಅಂತ ಅಜ್ಜ ಹೇಳುತ್ತೀರಬೇಕಾದರೆ ಪಾರ್ವತೀ ಕಕ್ಕಿ ಎದುರಿಗೆ ಇದ್ದ ಲೋಟ ತೆಗೆದು ಇವನಿಗೆ ಬೀಸಿದ್ದಳು. ಲೋಟ ಸ್ವಲ್ಪದರಲ್ಲಿ ಗುರಿ ತಪ್ಪಿ ಎದುರಿನ ಕಿಟಕಿ ಮೂಲಕ ಹೊರಗೆ ಹೋಗಿ ಅಲ್ಲಿದ್ದ ನಾಯಿ ಕುನ್ನಿಗೆ ಬಡಿದಿತ್ತು. ಕುನ್ನಿ ಕುಯ್ಯೋ ಎಂದು ಕಿರುಚಿ ಪಕ್ಕ ಓಡಿತ್ತು…!
“ಅವನು ಆರು ಸಲ ಅಲ್ಲ ಫೇಲ್ ಆಗಿರೋದು, ನಾಲ್ಕೇ ಸಲ….”ಅಂತ ಪಾತಿ ಕಕ್ಕಿ ಕೋಪ ಕಕ್ಕಿದಳು.
“ನೋಡು ನಾಲ್ಕು ಆರು ಅಲ್ಲ ಮುಖ್ಯ. ಅವನಿಗೆ ಯಾರೂ ಕೂಗಿ ಹೆಣ್ಣು ಕೊಡಲ್ಲ. ಮನೇಲೇ ಕೂತು ಪೋಲಿ ಎದ್ದು ಹೋಗಿ ದಾನೆ. ಬೀಡಿ ಸಿಗರೇಟು ಕಲಿತಿ ದಾನೆ, ಹೆಂಡವೂ ಇದೆಯೋ ಏನೋ…. ಇದು ಹಾಗಿರಲಿ ಬಿಡು. ಮದ್ವೆ ಆದಮೇಲೆ ಚಟ ಬಿಡಿ ಸೋದು ಅವರ ಜವಾಬ್ದಾರಿ……. ಈಗ ಅದಾಗದೆ ದೇವರು ವರ ಕೊಟ್ಟ ಹಾಗೆ ಚಾನ್ಸ್ ಹೊಡೆದದೆ ಅದನ್ನು ಯೂಸ್ ಮಾಡ್ಕೋ ಬೇಕು ಅಷ್ಟೇ…”
“ರಾಮೀ ನಿನ್ನ ಐಡಿಯ ಏನು ಅದು ಮೊದಲು ಬಗುಳು…”ಅಂದಳು. ಪಾತಿ ಕಕ್ಕಿ ಗಂಡ ಅದೆಲ್ಲೋ ಹೋಗಿದ್ದ, ಮನೇಲಿ ಇರಲಿಲ್ಲ. ಅವನು ಖಿಲಾಡಿ, ಇಂತಹ ಫ್ಯಾಮಿಲಿ ಪ್ರಾಬ್ಲಂ ನಿಂದ ದೂರ ಇರ್ತಾನೆ.
“ಬಾ ಇಲ್ಲೇ ಎದುರಿಗೇ ಕೂತ್ಕೋ. ಲೋಟ ಪಾ ಟ ತಟ್ಟೆ ಚಾಕು ಮಚ್ಚು ಕೊಡಲಿ ಯಾವುದೂ ನಿನ್ನ ಹತ್ತಿರ ಇರಬಾರದು. ಕೇಳಿಸ್ಕೋ.. ಒಂದು ಪ್ಲಾನ್ ಮಾಡೋಣ….”
ಪ್ಲಾನ್ ಪ್ರಕಾರ ಗುಲಾಬಿ ಅಕ್ಕನೇ ಪಾತಿ ಹತ್ರ ಬಂದು ತಿಪ್ಪ ನ್ನ ಮದುವೆಗೆ ಅಪ್ರೋಚ್ ಮಾಡಬೇಕು. ತಿಪ್ಪ ಪಿಯೂಸಿ ಪಾಸಾಗೋದು ಗುಲಾಬಿ ಅಕ್ಕ ,ಗುಲಾಬಿ ಅವರ ಜವಾಬ್ದಾರಿ.ಅದನ್ನ ಅವರೇ ನೋಡ್ಕೋಬೇಕು. ಆಮೇಲೆ ಅವನಿಗೆ ಹೇಗಾರೂ ಒಂದು ಡಿಗ್ರಿ ಬರೋ ತರ ಮಾಡೋದು ಕೂಡ ಅವರದ್ದೇ ಜವಾಬ್ದಾರಿ… ಆಮೇಲೆ ಯಾವುದೋ ಸ್ಕೂಲು ಕಾಲೇಜ್ನಲ್ಲಿ ಪ್ರಿನ್ಸಿಪಾಲ್ ಮಾಡೋದು ಅವರಿಗೆ ಬಿಟ್ಟದ್ದು…!
“ನೀನು ಹೋಗು ಇನ್ನ…..”ಅಂದ ಅಜ್ಜ.
“ಇನ್ನೂ ಕತೆ ಮುಗಿದಿಲ್ಲ. ಅಜ್ಜಿ ನಿನ್ನ ಒಬ್ಬನ್ನೇ ಬಿ ಡಬೇಡ ಅಂತ ಬೇರೆ ಹೇಳಿದ್ದಾಳೆ….”
“ಸರಿ ಸಂಜೆ ಕಳ್ಳೆಪುರಿ ಭೇಟಿ….”ಅಂದ.
ಕಳ್ಳೆಪುರಿ ಎದುರಿಗೇ ಏನೇನು ಹೇಗೆ ಹೇಗೆ ಅಂತ ಅಜ್ಜ ವಿವರಿಸಿದ. ಗುಲಾಬಿ, ಅದರಕ್ಕ ಒಪ್ಪಿದ್ರಾ..ತಿಪ್ಪ ನ್ನ ಬೇರೆ ಸಪರೇಟ್ ಆಗಿ ಕೂಗೀ ಅಜ್ಜ ಒಂದೂವರೆ ಗಂಟೆ ಕೊರೆದ…
ಮುಂದಿನ ಕತೆ ಹೂವಿನ ಹಾರ ತೆಗೆದು ಅಲ್ಲಿಂದ ಇಲ್ಲಿ ಇಟ್ಟಷ್ಟು ಸುಲಭವಾಗಿ ನಡೆದು ಹೋಯ್ತು. ತಿಪ್ಪ ಗುಲಾಬಿ ಗಂಡ ಹೆಂಡಿರು ಅಂತ ಆದರು. ಕಳ್ಳೆಪುರಿ ಗೆ ಏನು ಫಾಯಿದಾ ಆಯ್ತು ಅಂತಿರಾ? ಇನ್ಮೇಲೆ ಅಕ್ಕ ತಂಗಿಯರು ಯಾರೂ ಇವನಿಗೆ ಇಂಪೋಸಿಷನ್ ಕೊಡೋ ಹಾಗಿಲ್ಲ! ಇದು ರಾಮಜ್ಜನ ಪ್ಲಾನ್ ಅಂತ ಕಳ್ಳೆಪುರಿ ರಾತ್ರಿ ಇಬ್ಬರೂ ಪಾರ್ಟಿ ಮಾಡಬೇಕಾದರೆ ತುಂಬಾ ಕುಶಿಯಿಂದ ಹೇಳಿದ, ಒಂದೆರೆಡು ಸ್ಟೆಪ್ ಬೇರೆ ಹಾಕಿದ!
ಒಂದೇ ಒಂದು ಕೊರಗು ನನ್ನಲ್ಲಿ ಉಳಿಯಿತು
ಅದೇನು ಅಂದ್ರಾ. ಅದೇ ಕನಕ ಜ್ಜಿ ಹೇಳಿದ ಕೊರಳಿಗೆ ನೊಗ ಇಲ್ಲ ಅಂದರೆ ಅಜ್ಜ ದೇವರಿಗೆ ಬಿಟ್ಟ ಬಸವ ಅನ್ನುವ ವಿವರ. ಅದು ಗೊತ್ತಾದರೆ ಖಂಡಿತ ನಿಮಗೆ ತಿಳಿಸುತ್ತೇನೆ.. ಕೆಲವು ಸಂತೋಷ ಅಥವಾ ನೆಮ್ಮದಿ ಕ್ಷಣ ಸಹ ಇದ್ದವು. ಅದೇನು ಅಂತೀರಾ…? ಹಾಸ್ಯಬರಹ ಒಂದೇ ಕಂತಿನಲ್ಲಿ ಮುಗಿಸು, ನಮ್ಮ ತಾಳ್ಮೆ ಪರೀಕ್ಷೆ ಬೇಡ ಅಂತ ಗೆಳೆಯರು ಕಿವಿ ಹಿಂಡಿದರು, ನನಗೆ ಜ್ಞಾನೋದಯ ಆಯ್ತು!

ಎಚ್. ಗೋಪಾಲಕೃಷ್ಣ
“
ನನಗಂತೂ ತಿಳಿಹಾಸ್ಯದ ಒಂದು ಅಪ್ಪಟ ಲೋಕಾಭಿರಾಮ ಸಿನಿಮಾ ನೋಡಿದ ಹಾಗಾಯಿತು.
-ಎಚ್. ಆನಂದರಾಮ ಶಾಸ್ತ್ರೀ
ಶ್ರೀ ಶಾಸ್ತ್ರೀ ಅವರೇ,ಧನ್ಯವಾದಗಳು.