ತೋಟದ ಕೂಲಿ ಕೆಲಸದವರು ಮಕ್ಕಳನ್ನು ಶಾಲೆಗೆ ಕಳುಹಿಸಲು ನಕಾರ ಸೂಚಿಸುತ್ತಿದ್ದರೂ ತನ್ನ ಪ್ರಯತ್ನವನ್ನು ಸುಮತಿ ಬಿಡುತ್ತಿರಲಿಲ್ಲ. ಈ ನಡುವೆ ಅವಳಿಗೇ ಆಗಾಗ ಬಳಲಿಕೆ ಹೆಚ್ಚುತ್ತಿತ್ತು. ಹಸಿವೆ ನೀರಡಿಕೆ ಹೆಚ್ಚಾದಂತೆ ಅನಿಸಿತು. ಜೊತೆಗೆ ಹಲ್ಲು ನೋವು ಕಾಡುತ್ತಿತ್ತು. ಕಣ್ಣು ಕೂಡಾ ಮಂಜಾಗಿ ಕಾಣಿಸತೊಡಗಿತು. ವೈದ್ಯರನ್ನು ಕಾಣಬೇಕೆಂದರೆ ಅವಳು ಕೆಲಸ ಮಾಡುತ್ತಿದ್ದ ತೋಟದಿಂದ ಸಕಲೇಶಪುರಕ್ಕೆ ಹೋಗಬೇಕಾಗಿತ್ತು. ಮೂರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸಿದ ನಂತರ, ದಿನಕ್ಕೆ ಎರಡು ಬಾರಿಯಂತೆ ಅಲ್ಲಿನ ನಿಲ್ದಾಣಕ್ಕೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಂಪು ಬಸ್ಸಿನಲ್ಲಿ ಪ್ರಯಾಣ ಮಾಡಬೇಕಿತ್ತು. ಬಸ್ಸು ಅಲ್ಲಿಗೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಬರುತ್ತಿತ್ತು. ಅಲ್ಲಿನ ಸುತ್ತಮುತ್ತಲ ಹಳ್ಳಿಯ ಜನರಿಗೆಲ್ಲಾ ಅದೊಂದೇ ಬಸ್ಸು ಇರುವುದು. ಸಕಲೇಶಪುರದ ಸಂತೆಯ ದಿನವಾದ ಗುರುವಾರ ಕೂಲಿ ಕಾರ್ಮಿಕರಿಗೆಲ್ಲಾ ರಜೆ ಇರುವುದರಿಂದ ಮಕ್ಕಳು ಶಾಲೆಗೆ ಬರುವುದಿಲ್ಲ ಎನ್ನುವ ಕಾರಣದಿಂದಾಗಿ ಸುಮತಿಗೆ ವಾರದ ರಜೆ ಇದ್ದದ್ದು ಆ ದಿನವೇ. ಹಾಗಾಗಿ ಅವಳು ಆ ದಿನವೇ ಸಕಲೇಶಪುರದ ಕಡೆಗೆ ಹೊರಡಬೇಕಿತ್ತು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸಿಸುವ ಜನರು ಹಾಗೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೂಡಾ ಆ ದಿನ ಸಂತೆಗೆ ಹೋಗುತ್ತಿದ್ದ ಕಾರಣ ಬಸ್ ತುಂಬಾ ಜನರು ತುಂಬಿರುತ್ತಿದ್ದರು. ಮೇಲೆ ಸಾಮಾನು ಸರಂಜಾಮುಗಳನ್ನು ತುಂಬಲು ಇರುತ್ತಿದ್ದ ಕ್ಯಾರಿಯರ್ ಮೇಲೆ ತಾವು ಸಂತೆಗೆ ಕೊಂಡುಹೋಗಲು ತರುತ್ತಿದ್ದ ವಸ್ತುಗಳ ಜೊತೆಗೇ ಜನರು ಕೂಡಾ ಕ್ಯಾರಿಯರ್ ನಲ್ಲಿ ಕುಳಿತುಕೊಳ್ಳುತ್ತಿದ್ದರು. ಬಸ್ಸಿನಲ್ಲಿ ಕುಳಿಕೊಳ್ಳಲು ಸ್ಥಳ ಸಿಗುವುದೇ ಅಪರೂಪ. ಕುಳಿತವರ ಮುಂದೆ ಸೀಟುಗಳ ನಡುವೆ ಮಕ್ಕಳು ನಿಂತಿರುತ್ತಿದ್ದರು. ಎರಡೂ ಕಡೆಯ ಸೀಟುಗಳ ನಡುವೆ ಇದ್ದ ಜಾಗದಲ್ಲಿಯೂ ಜನರು ಕಿಕ್ಕಿರಿದು ತುಂಬಿರುತ್ತಿದ್ದರು. ಹರಸಾಹಸ ಪಟ್ಟು ನೂಕು ನುಗ್ಗಲಿನ ನಡುವೆ ಬಸ್ ಹತ್ತಿದರೂ ಒಂಟಿ ಕಾಲಲ್ಲಿ ನಿಂತು ಪಯಣಿಸುವಂತಹ ಅನಿವಾರ್ಯತೆ. 

ಬಸ್ಸಿನ ಚಾಲಕನ ಹಿಂದೆ, ಆತನ ಅಕ್ಕಪಕ್ಕ, ವಿದ್ಯಾಭ್ಯಾಸಕ್ಕೆಂದು ಸಕಲೇಶಪುರದ ಹೈಸ್ಕೂಲಿಗೆ ಹೋಗುವ ಮಕ್ಕಳು ನಿಂತಿರುತ್ತಿದ್ದರು. ಬೇರೆ ದಿನಗಳಂದು ಬಸ್ ಖಾಲಿ ಇರುತ್ತಿತ್ತು ಆದರೆ ಗುರುವಾರ ಮಾತ್ರ ಬಸ್ ತುಂಬಿ ತುಳುಕುವಷ್ಟು ಜನ. ಎಲ್ಲರಿಗೂ ತಮಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಖರೀದಿ ಮಾಡಲು ಸಂತೆಯ ದಿನವೇ ಹೋಗಬೇಕಾಗಿ ಬರುವುದರಿಂದ ಆ ದಿನ ಎಲ್ಲರಿಗೂ ಬಸ್ಸಿನ ಪ್ರಯಾಣ ಬಹಳ ಸಾಹಸಮಯವಾಗಿರುತ್ತಿತ್ತು. ಅಲ್ಲಿಗೆ ಬರುತ್ತಿದ್ದ ಬಸ್ ಊರ ಒಳಗಿನ ಹಳ್ಳಿಯ ಕೊನೆಯ ನಿಲ್ದಾಣಕ್ಕೆ ಹೋಗಿ ಅಲ್ಲಲ್ಲಿ ಇಳಿಯುವ ಪ್ರಯಾಣಿಕರನ್ನು ಇಳಿಸಿ ಹಿಂತಿರುಗಿ ಬರುವವರೆಗೂ ಎಲ್ಲರೂ ತಾಳ್ಮೆಯಿಂದ ಕಾಯಬೇಕಿತ್ತು. ಎಷ್ಟೋ ಬಾರಿ ಜನರು ಕುಳಿತುಕೊಳ್ಳಲು ಸೀಟು ಸಿಗಲಿ ಎನ್ನುವ ಉದ್ದೇಶದಿಂದ ಹೋಗಿ ಬರುವ ಖರ್ಚನ್ನು ಲೆಕ್ಕಿಸದೇ ಹತ್ತಿ ಕುಳಿತುಕೊಳ್ಳುವ ಪ್ರಯತ್ನ ಮಾಡುವರು.

ಹಾಗಾಗಿ ಹಿಂತಿರುಗಿ ಬರುವಾಗಲೇ ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡಲು ಸೀಟು ಸಿಗುತ್ತಿರಲಿಲ್ಲ. ಹೆಚ್ಚುವರಿ ಹಣ ಕೊಟ್ಟು ಬಸ್ ಹತ್ತಲು ಸಾಧ್ಯವಿಲ್ಲದ ಕಾರಣ ಸುಮತಿ ಹಾಗೂ ಅನೇಕ ಕಾರ್ಮಿಕರು ಬಸ್ ಹಿಂತಿರುಗಿ ತಾವುಗಳು ನಿಂತಿರುವ ನಿಲ್ದಾಣಕ್ಕೆ ಬರುವವರೆಗೂ ಕಾಯುತ್ತಿದ್ದರು. ನೂಕು ನುಗ್ಗಲಿನ ನಡುವೆ ಹತ್ತಿದರೂ ನೆಮ್ಮದಿಯಿಲ್ಲ. ಎಲ್ಲರಿಗೂ ಆ ದಿನವೇ ಸಂತೆಗೆ ಹೋಗಬೇಕಿದ್ದ ಕಾರಣ ಯಾರನ್ನೂ ಬಿಟ್ಟು ಹೋಗುವಂತೆ ಇರಲಿಲ್ಲ. ಹಾಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದ ಜನರನ್ನೆಲ್ಲಾ ಬಸ್ನಲ್ಲಿ ಹತ್ತಿಸಿಕೊಂಡು ಹೋಗುವ ಅನಿವಾರ್ಯತೆಯ ಜವಾಬ್ದಾರಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಇರುತ್ತಿತ್ತು. ಹೇಗೋ ಎಲ್ಲರನ್ನೂ ಬಸ್ನಲ್ಲಿ ಹತ್ತಿಸಿಕೊಂಡ ನಂತರ ಎಲ್ಲರಿಂದಲೂ ಹಣ ಸಂಗ್ರಹಿಸಿ ಉಳಿದ ಚಿಲ್ಲರೆ ಕೊಟ್ಟು ಟಿಕೆಟ್ ಕೊಡುವುದರೊಳಗೆ ನಿರ್ವಾಹಕ ಹಣ್ಣುಗಾಯಿ ನೀರುಗಾಯಿ ಆಗಿರುತ್ತಿದ್ದ. 

ಚಾಲಕನ ಸ್ಥಿತಿಯಂತೂ ದೇವರಿಗೇ ಪ್ರಿಯ. ಅತ್ತಿತ್ತ ಸ್ಟೇರಿಂಗ್ ತಿರುಗಿಸಲು ಕೂಡಾ ಕಷ್ಟವಾಗುತ್ತಿತ್ತು. ಜನರ ಭಾರಕ್ಕೆ ಬಸ್ ಪಕ್ಕಕ್ಕೆ ವಾಲಿ ಮಣ್ಣಿನ ರಸ್ತೆಯ ತಿರುವುಗಳಲ್ಲಿ ಚಲಿಸುವಾಗಲಂತೂ ಬಸ್ಸಿನಲ್ಲಿ ಇದ್ದ ಮಕ್ಕಳು ಕಿರುಚಿಕೊಳ್ಳುತ್ತಿದ್ದರು. ಡಾಂಬರು ಕಾಣದ ಆ ರಸ್ತೆಯ ಸ್ಥಿತಿ ಯಂತೂ ಹೇಳುವುದೇ ಬೇಡ. ರಸ್ತೆಯೂ ಕಿರಿದಾಗಿ ಇದ್ದ ಕಾರಣ ಅಪರೂಪಕ್ಕೆ ಎದುರಿನಿಂದ ಬರುವ ವಾಹನಗಳಿಗೆ ಹೋಗಲು ಅನುವು ಮಾಡಿಕೊಡುವಾಗ ತುಂಬಿ ತುಳುಕುತ್ತಿರುವ ಬಸ್ಸನ್ನು ರಸ್ತೆಯ ಬದಿಯಲ್ಲಿ ತೆಗೆದುಕೊಂಡು ಹೋಗಲು ಚಾಲಕನಿಗೆ ಬಹಳ ಕಷ್ಟವಾಗುತ್ತಿತ್ತು. ಆಗ ರಸ್ತೆಯ ಪಕ್ಕದಲ್ಲಿ ಬೆಳೆದಿರುತ್ತಿದ್ದ ಗಿಡ ಗಂಟಿಗಳ ಸಣ್ಣಸಣ್ಣ ರೆಂಬೆಗಳು ಕುಳಿತವರ ಮುಖಕ್ಕೆ ತಾಗಿಕೊಂಡು ಹೋಗುತ್ತಿತ್ತು. ಕೆಲವೊಮ್ಮೆ ಕಣ್ಣುಗಳಿಗೂ ಚುಚ್ಚಿ ಮುಖವನ್ನು ಗೀರಿ ಗಾಯ ಮಾಡುತ್ತಿದ್ದವು ಹಾಗಾಗಿ ಅನಿವಾರ್ಯವಾಗಿ ಪ್ರಯಾಣಿಕರು ಕಿಟಕಿಯ ಗಾಜುಗಳನ್ನು ಮುಚ್ಚಬೇಕಿತ್ತು. ಮುಚ್ಚಿದರೆ ಬಸ್ಸಿನ ಒಳಗೆ ಇರುವ ಪ್ರಯಾಣಿಕರಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಹೀಗೆ ಹರಸಾಹಸ ಪಟ್ಟು ಬಸ್ಸು ಮಣ್ಣಿನ ಕಚ್ಚಾರಸ್ತೆಯಲ್ಲಿ ಸಾಗುವಾಗ ಕುಲುಕಾಡುತ್ತಾ ಧೂಳೆಬ್ಬಿಸಿ ಮುಂದೆ ಚಲಿಸುವಾಗ ದಾರಿಹೋಕರ ಬಟ್ಟೆ ಕೂದಲು ಮೈಯೆಲ್ಲಾ ಧೂಳು ಕವಿಯುತ್ತಿತ್ತು. ರಸ್ತೆಯ ಪಕ್ಕದಲ್ಲಿ ಬೆಳೆದಿರುತ್ತಿದ್ದ ಬಿದಿರಿನ ಕೂಟಗಳಿಗೂ ಬಸ್ ಉಜ್ಜಿಕೊಂಡು ಮುಂದೆ ಸಾಗುತ್ತಿತ್ತು. ತಿರುವುಗಳನ್ನು ದಾಟುತ್ತಾ ಇಳಿಜಾರಿನಲ್ಲಿ ಇಳಿದು, ದಿಣ್ಣೆಗಳಲ್ಲಿ ಹತ್ತಿ ಇಳಿಯುತ್ತಾ ಚಲಿಸುವ ಬಸ್ ನಲ್ಲಿ ಪ್ರಯಾಣಿಸುವುದು ಕೆಲವರಿಗೆ ಮೋಜು ಎನಿಸಿದರೆ ಇನ್ನುಳಿದ ಕೆಲವರಿಗೆ ಭಯವಾಗುತ್ತಿತ್ತು. ಎತ್ತಿನಹಳ್ಳಕ್ಕೆ ಕಟ್ಟಿದ ಸೇತುವೆ ತಲುಪುವಾಗ ಸುಮತಿ ಭದ್ರವಾಗಿ ಬಸ್ಸಿನ ಕಂಬಿಗಳನ್ನು ಹಿಡಿದು ನಿಲ್ಲುತ್ತಿದ್ದಳು. ಸೇತುವೆಯ ಬದಿಯನ್ನು ಹತ್ತಿ “ಟಕ್” ಎನ್ನುವ ಸದ್ದಿನೊಂದಿಗೆ ಬಸ್ಸು ಪಕ್ಕದ ಪಟ್ಟಿಗಳಿಗೆ ತಗುಲುವಾಗ ಎಲ್ಲಾದರೂ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬೀಳುವುದೋ ಎಂದು ಹೆದರಿ ಕಣ್ಣನ್ನು ಬಿಗಿಯಾಗಿ ಮುಚ್ಚಿಕೊಳ್ಳುತ್ತಿದ್ದಳು. 

ಬಸ್ಸು ಹೀಗೆ ಸುಮಾರು ದೂರ ಕ್ರಮಿಸಿದ ನಂತರ ಡಾಂಬರು ಹಾಕಿದ ರಸ್ತೆ ತಲುಪುತ್ತಿತ್ತು. ಆಗ ಪ್ರಯಾಣಿಕರಿಗೆ ಸ್ವಲ್ಪ ನಿರಾಳ. ಆದರೂ ತಿರುವುಗಳು ಬಂದಾಗ ಮತ್ತದೇ ವಾಲುವಿಕೆ ಅದೇ ಹರಸಾಹಸ ಪಟ್ಟು ಪ್ರಯಾಣ ಮುಂದುವರೆದು ಎಲ್ಲರೂ ಸಕಲೇಶಪುರ ತಲುಪುತ್ತಿದ್ದರು.

ಮಲೆನಾಡಿನ ರಸ್ತೆಗಳೇ ಹಾಗೆ ಇಳಿಜಾರು ತಿರುವುಗಳಿಂದ ಕೂಡಿ, ಪಕ್ಕದಲ್ಲಿ ಪ್ರಪಾತಗಳು ಸುತ್ತಮುತ್ತ ದಟ್ಟ ಹಸಿರು. ಇಲ್ಲಿನ ಪ್ರಯಾಣವೇ ಒಂದು ರೋಚಕ ಅನುಭವದಂತೆ ಇರುತ್ತಿತ್ತು. ಹೀಗೆಲ್ಲಾ ಹರಸಾಹಸ ಪಟ್ಟು ಪ್ರಯಾಣಿಸಿದ ಸುಮತಿ ಸಕಲೇಶಪುರದ ಸರಕಾರಿ ಆಸ್ಪತ್ರೆಯ ಬಳಿ ತಲುಪಿದಾಗ ಅಲ್ಲಿ ಇಳಿದುಕೊಂಡಳು. ಆಸ್ಪತ್ರೆಗೆ ಬಂದು ಅಲ್ಲಿನ ಸರತಿಯಲ್ಲಿ ನಿಂತು, ಚೀಟಿ ಪಡೆದು ದಂತವೈದ್ಯರನ್ನು ಕಂಡಳು. ವಸಡು ಹಾಗೂ ಹಲ್ಲುಗಳನ್ನು ಪರೀಕ್ಷಿಸಿದ ವೈದ್ಯರು…”ಸುಮತಿ ನಿಮ್ಮ ಹಲ್ಲುಗಳು ಭಾಗಶಃ ಹಾಳಾಗಿದೆ…ಕೆಲವು ಹಲ್ಲುಗಳನ್ನು ಕೀಳಬೇಕಾಗುತ್ತದೆ… ಅದಕ್ಕೂ ಮೊದಲು ನೀವು ಮೂತ್ರ ಹಾಗೂ ರಕ್ತ ಪರೀಕ್ಷೆಗಳನ್ನು ಮಾಡಿಸಬೇಕು. ಕೆಲವು ಅಂಶಗಳನ್ನು ಗಮನಿಸಬೇಕಿದೆ…ಅವು ಯಾವುವೆಂದು ಬರೆದುಕೊಡುವೆ…ಇಲ್ಲಿನ ಪ್ರಯೋಗಾಲದಲ್ಲಿ ಮೂತ್ರ ಹಾಗೂ ರಕ್ತವನ್ನು ಕೊಟ್ಟು ಸ್ವಲ್ಪ ಸಮಯದ ನಂತರ ಫಲಿತಾಂಶವನ್ನು ಪಡೆದು ನನ್ನಲ್ಲಿಗೆ ಬನ್ನಿ”…. ಎಂದು ಹೇಳಿ ಒಂದು ಚೀಟಿಯಲ್ಲಿ ಬರೆದುಕೊಟ್ಟರು. ಅದನ್ನು ಪಡೆದ ಸುಮತಿ ಪ್ರಯೋಗಾಲಯಕ್ಕೆ ಹೋಗಿ ವೈದ್ಯರ ಅಣತಿಯಂತೆ ಪರೀಕ್ಷೆಗೆ ಕೊಟ್ಟಳು. ಒಂದೆರಡು ಗಂಟೆ ಕಾದು ಅಲ್ಲೇ ಕುಳಿತಿದ್ದಳು. ಪ್ರಯೋಗಾಲಯದ ಸಿಬ್ಬಂದಿ ತನ್ನ ಹೆಸರು ಕರೆದಾಗ ಹೋಗಿ ಪರೀಕ್ಷೆಯ ವರದಿಯನ್ನು ಬರೆದಿದ್ದ ಚೀಟಿಯನ್ನು ಪಡೆದು ದಂತವೈದ್ಯರ ಬಳಿಗೆ ಹೋದಳು.


Leave a Reply

Back To Top