ಅಜ್ಜೇರಿ ತಿಪ್ಪೇಸ್ವಾಮಿ ಚಿನ್ನೋಬನಹಳ್ಳಿ ಅವರಕವಿತೆ “ವಿಧವೆಯೊಬ್ಬಳ ಆತ್ಮ ನಿವೇದನೆ”

ಹಾದರವ ಮಾಡಿ
ಸೂಳೆ ನಾನಾಗಲಾರೆ..!
ವಿಧವೆ ನಾನು.
ವೈಧವ್ಯ ನಾ ಬೇಡಿದ್ದಲ್ಲ॥
ಗಂಡ ಸತ್ತ ನಂತರ
ಸಮಾಜ ಕಟ್ಟಿದ ಹೆಸರು
‘ವಿಧವೆ’ !

ವೇಶ್ಯೆಯೆಂಬಂತೆ ನೋಡದಿರಿ
ಸುಕ್ಕುಗಟ್ಟದ, ಜಿಡ್ಡು ಮಾಸದ ಅಂದ
ಉಬ್ಬಿದೆದೆಯ ಮೈಮಾಟಕೆ
ಹಾದರತನವ ಹೆಗಲಿಗೆ ಕಟ್ಟದಿರಿ॥

ನಿಮಗೆ ಶುಭವೆನ್ನಿಸಿದ ಕಾರ್ಯದಲ್ಲಿ
ರಂಡೆ ಎದುರಾದರೆ
ಅಶುಭವೆಂದು ಅವಮಾನಿಸದಿರಿ,
ಅವಳ ಮನಸ್ಸು ಸ್ವಚ್ಛವಿದೆ
ಮೀಸೆ ಹೊತ್ತವರಲ್ಲೂ
ವಿಧುರರಿಲ್ಲವೇ ನನ್ನಂತೆ ?!

ಗಂಡ ಕಟ್ಟಿದ ತಾಳಿ ,ಕಾಲುಂಗುರ॥
ಅಂತೆ ಬಂದದ್ದು ಹೋಗಲಿ ಬಿಡು,।
ಸಿಂಧೂರ ,ಮೂಗುತ್ತಿ ,ಕಾಲ್ಗೆಜ್ಜೆ
ಮುಡಿಮಲ್ಲಿಗೆ ಹೆಣ್ಣಿನ ಜನ್ಮಾಂತರದ
ಹಕ್ಕು,। ನಿರ್ಬಂಧಿಸಲು ನೀನ್ಯಾರು..?

ನಿಮ್ಮ ಮಂಗಳ ಕಾರ್ಯಗಳಿಗೆ ನನ್ನ ಮಂಗಳ
ಹೃದಯಕ್ಕೆ ಆಹ್ವಾನವಿರಲಿ,
ಬೆನ್ನ ಹಿಂದಾದರೂ ನಿಂತು ಹರಸುವೆ॥

ಬೆನ್ನ ಹಿಂದೆ ನಿಂತ ವಿಟನೆಂಬ ಜೊಲ್ಲುಗ
ಇದೇನು ಕಬ್ಬಡಿ ಮೈದಾನದಂತಿದೆ
ನೋಡಿದರೆ ಇವಳೆಷ್ಟು
‘ಚೆನ್ನ’
ನನ್ನ ಬೆನ್ನು ವರ್ಣಿಸುವ ಮಿಟಗಾರನಿಗೆ
ಅವನ ಮನೆಯ ಹೆಣ್ಣು ಜೀವ ಕಾಣದು,
ಕಾಮ ಕೇಳಿಗೆ ಕರೆವ ಗಂಡು ಸಮಾಜಕ್ಕೆ
‘ಬಸವಿ ‘
ನಾನಲ್ಲವೆಂದು ಬದುಕಿ ತೋರಿಸುವೆ…!

————————————————————————————–

Leave a Reply

Back To Top