ಸುಧಾ ಪಾಟೀಲ ಅವರ ಕವಿತೆ‌ ಗೆಳೆತನವೆಂದರೆ

ಗೆಳೆತನವೆಂದರೆ
ಅದೊಂದು
ಆರಾಧನಾ ಭಾವ
ನಿಷ್ಕಲ್ಮಶ  ಪ್ರೀತಿ
ಕೊಡುವ  ತೆಗೆದುಕೊಳ್ಳುವ
ಏನೂ ಇರದ  ಒಂದು
ಸುಮಧುರ ಬಾಂಧವ್ಯ
ನೋಡದಿದ್ದರೂ
ಮಾತಾಡದಿದ್ದರೂ
ಹೃದಯದಲ್ಲಿರುವ ದಿವ್ಯ
ಅನುಭವ

ಗೆಳೆತನವೆಂದರೆ
ಅನನ್ಯತೆಯ ಅನುಭಾವ
ವ್ಯಕ್ತಪಡಿಸಲಾಗದ
ಮನದಾಳದ  ಪೂರ್ಣತ್ವದ
ಅನುಭೂತಿ
ಸಮತ್ವದ  ದಾರಿಯಲ್ಲಿ
ನಡೆಯುವ  ಸ್ನೇಹದ
ಪರಾಕಾಷ್ಟೆ

ಗೆಳೆತನವೆಂದರೆ  
ಮನದೊಳಗಣ  ವಿಶ್ವಾಸಕ್ಕೆ
ಇಂಬು ಕೊಡುವ  ಸಹಚರನ
ಮಾತುಗಳು
ಒಳ್ಳೆಯದೋ ಕೆಟ್ಟದೋ
ಎಲ್ಲವನ್ನೂ
ಹಂಚಿಕೊಳ್ಳುವ  ಇರಾದೆಯ
ನಿಲುವಿನ  ದಾರಿದೀಪ

ಗೆಳೆತನವೆಂದರೆ
ಭವಿತವ್ಯದ  ಲೆಕ್ಕಾಚಾರವಲ್ಲ
ಹಿಂದಿನ  ಕಥೆಗಳಲ್ಲ
ವಾಸ್ತವದ  ನೆಲೆಗಟ್ಟಿನಲ್ಲಿ
ನಿಲ್ಲುವ  ಅದ್ಭುತ  ಸಂಬಂಧ
ಅದಕೇನು ಹೆಸರು ಇರಬೇಕೆಂದಿಲ್ಲ
ಸ್ಪಟಿಕದಂಥ  ಮನವಿದ್ದರೆ
ಸಾಕು

Leave a Reply

Back To Top