ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ಎಂದೋ ನೀ ಹಚ್ಚಿದ ಪ್ರೀತಿಯ ದೀಪ
ಇಂದಿಗೂ ಎದೆಯಲಿ ಉರಿಯುತಿದೆ
ನೀ ತೈಲ ಹಾಕಿದರೂ ,ಹಾಕದಿದ್ದರೂ
ಪ್ರೇಮ ಹಣತೆಯಿಂದ ಬೆಳಕು ಹರಿಯುತಿದೆ
ಅನುರಾಗದಿಂದಲೇ ಕಟ್ಟಿದ
ಪ್ರೀತಿಯ ಮಹಲ್ ಅದು
ಪ್ರತಿ ಇಟ್ಟೆಗೆಯೂ ನಿನ್ಹೆಸರು ಹೇಳಿ
ಕಣ್ಸೆಳೆವಂತೆ ಪಳ ಪಳ ಹೊಳೆಯುತಿದೆ
ಮೊದಲ ಪ್ರೇಮವದು , ಮೊದಲು
ಮೊಳಕೆಯೊಡೆದ ಪ್ರೀತಿಯ ಬೀಜವದು
ನಾನಷ್ಟೇ ಪ್ರೀತಿಯ ನೀರೆರೆಯುತಿದ್ದರೂ
ಎದೆಗೆ ಹಾಯೆನಿಸುವಷ್ಟು ಬೆಳೆಯುತಿದೆ
ಬಾಲ್ಯವೇ ಉರುಳಿ ಹೋದರೂ
ಆ ದಿನಗಳ ಒಲವು ಮಾಸಿಲ್ಲ
ಕಣ್ತುಂಬಿ ಬಂದಾಗೆಲ್ಲ ನೇವರಿಸಲು ನನಗೆ
ನಿನ್ನ ನೆನಪೇ ಕೈಯ ಹಿಡಿಯುತಿದೆ
ಜನುಮ ಜನುಮಗಳ ಬಾಂಧವ್ಯವದು
ಈ ಜನುಮಕೂ ಬಳುವಳಿಯಾಗಿದೆ ವಾಣಿ ,
ಮಾತಾಡಿಲ್ಲ , ಮೌನವೂ ಇರಲಿಲ್ಲ ಆದರೂ,
ಈ ಜೀವ ಆ ಜೀವಕ್ಕಾಗಿಯೇ ಮಿಡಿಯುತಿದೆ
—————————————————————————————————
ವಾಣಿ ಯಡಹಳ್ಳಿಮಠ

Very nice
Thank you