ಧೋ ಎಂದು ಸುರಿಯುವ ಮಳೆಯನ್ನು ನಿಲ್ಲಿಸಲು ನನಗೆ ಸಾಧ್ಯವಿಲ್ಲ ನಿಜ ಆದರೆ ನಾನು ಮಳೆಯಿಂದ ರಕ್ಷಿಸಲು  ಕೊಡೆಯನ್ನು ಹಿಡಿಯಬಲ್ಲೆಅಂತೆಯೇ ನನ್ನ ಮಕ್ಕಳು ಅದಷ್ಟೇ ದೊಡ್ಡವರಾಗಲಿ ಎತ್ತರವಾಗಲಿ ಬೆಳೆದು ಹೆಮ್ಮರವಾಗಲಿ ಎಂದು ಆಶಿಸುವ ನಾನು ಬದುಕಿನಲ್ಲಿ ಸೂರ್ಯನ ಬಿಸಿಲು ಮತ್ತು ಮಳೆ ಎರಡೂ ಬೇಕು ಎಂಬುದನ್ನು ಅರಿತಿರುವೆ.ಅತ್ಯಂತ ಸಂತೋಷ ಮತ್ತು ಕಠಿಣಾತಿಕಠಿಣ ತಿರುವುಗಳನ್ನು ಈ ಬದುಕು ಹೊಂದಿದೆ…. ಅವರ ಬದುಕಿನಲ್ಲಿ ಸುರಿಯುವ ಕಷ್ಟ, ಸವಾಲುಗಳೆಂಬ ಸುರಿ ಮಳೆಯನ್ನಂತೂ ನಿಲ್ಲಿಸಲು ಸಾಧ್ಯವಿಲ್ಲ ನನಗೆ, ಆದರೆಆಸರೆ ಎಂಬ ಕೊಡೆಯನ್ನಂತೂ ಹಿಡಿಯುವೆ.

 ಅವರಿಗೆ ನನ್ನಲ್ಲಿರುವ  ಸಮಸ್ತ ಚೇತೋಹಾರಿ ಪ್ರೀತಿಯನ್ನು ಬೇಶರತ್ತು ನೀಡುವೆ. ಬದುಕಿನಲ್ಲಿ ಅವರಿಗೆ ಎದುರಾಗುವ ನೋವುಗಳು, ತೊಂದರೆಗಳು, ಕಂಡು ಕಾಣದ ಏರಿಳಿತಗಳ ಸಮಯದಲ್ಲಿ ಅವರಿಗೆ ಆಸರೆಯಾಗುವೆ. ಮಳೆಯನ್ನು ನಾನು ತಡೆಯಲಾರೆ ಆದರೆ ಕೊಡೆಯನ್ನಂತೂ ಹಿಡಿಯುವೆ.

 ನನ್ನ ಅವಶ್ಯಕತೆ ಅವರಿಗೆ ಇದೆಯೋ ಇಲ್ಲವೋ ಎಂಬುದನ್ನು ಅಷ್ಟಾಗಿ ನಾನರಿಯೇ ಆದರೆ ನನ್ನ ಜವಾಬ್ದಾರಿಗಳ ಅರಿವು ನನಗಿದೆ.. ಜೀವನದ ಹತ್ತು ಹಲವು ಸುಳಿಗಳಲ್ಲಿ ತಿರುಗಿ ಸುತ್ತುವ ಅವರನ್ನು ಆ ಸುಳಿಗಳಲ್ಲಿ ಬದುಕಲು ಮತ್ತೆ ಅದರಿಂದ ಹೊರ ಬೀಳಲು ಅವಶ್ಯಕ ಜಾಣ್ಮೆಯನ್ನು ನಾನು ಕಲಿಸುವೆ. ಸೋಲು ಗೆಲುವುಗಳೆಂಬ ಏರಿಳಿತಗಳ  ಅಲೆಗಳನ್ನು ಎದುರಿಸಿ ಕಷ್ಟದ ಕಡಲನ್ನು ಈಜಿ ಬದುಕಿನ ಸಾಗರವ ದಾಟಲು ನಾ ಅವರಿಗೆ ಕಲಿಸುವೆ.

 ಬರದ, ಕ್ಷಾಮದ ಅರಿವು ಅವರಿಗೆ ಮೂಡಿಸುವೆ. ನೆರೆ ಪ್ರವಾಹಗಳ ತಿಳಿವು ನೀಡುವೆ. ಬದುಕಿನಲ್ಲಿ ಕೆಲ ಸಮಯ ಬರ ಬಂದರೂ, ಪ್ರವಾಹವೇ ಅವರನ್ನು ಮುಳುಗಿಸಿದರೂ ಈಜಿ ದಡ ಸೇರಲು ನಾ ಕಲಿಸುವೆ.  ಮಳೆ ಬದುಕಿಗೆ ಅತ್ಯವಶ್ಯಕ ಎಂಬುದರ ಅರಿವನ್ನು ಅವರಿಗೆ ಮೂಡಿಸುವೆ.

 ಮಕ್ಕಳು ಹಾಕುವ ತಾಳಗಳಿಗೆ ಅವರಿಷ್ಟದಂತೆ ನಾನು ಕುಣಿಯುವೆ. ನನ್ನ ಕುಣಿತವ ಕಂಡು ಅವರು  ಚಪ್ಪಾಳೆ
ತಟ್ಟಲಿ ಎಂದು ಬಯಸದೆ ಹೋದರೂ ಕುಣಿಯುತ್ತಿರುವೆ ಎಂಬುದರ ಕಿಂಚಿತ ಅರಿವು ಅವರಿಗಿರಲಿ ಎಂದು ಕೂಡ ಆಶಿಸುವೆ. ಬದುಕಿನಲ್ಲಿ ಏನೇ ಕಷ್ಟ ಬಂದರೂ ದೃಢವಾಗಿ ನಿಂತು ಎದುರಿಸಬೇಕು ಸವಾಲುಗಳನ್ನು ಸ್ವೀಕರಿಸಿ ಗೆಲ್ಲಬೇಕು ಎಂಬ ಪಾಠವನ್ನು ಕಲಿಸುವೆ.
.
 ಬದುಕು ಅವರಿಗೊಡ್ದುವ ಸವಾಲುಗಳ ಶೂಲಕ್ಕೆ ಗುರಾಣಿಯಾಗಿ ನಾನು ರಕ್ಷಿಸುವೆ… ಅವರ ಸ್ವಾತಂತ್ರ್ಯವನ್ನು ಇಚ್ಚಿಸುವ ಜೊತೆಗೆ ಆತ್ಮ ನಿರ್ಭರರಾಗಿ ಬದುಕಲಿ ಎಂದು ಆಶಿಸುವೆ. ನಂದು ನನ್ನ ಆಸರೆಯ ಬಯಸಿ ಬಂದಾಗ ಮಡಿಲ ಮಗುವಾಗಿಸಿ ಪೊರೆಯುವೆ.

 ರಕ್ಷಿಸುವ ಮತ್ತು ಪೋಷಿಸುವ ಭರದಲ್ಲಿ ತಮ್ಮನ್ನು ತಾವು ಕಳೆದುಕೊಳ್ಳದಂತೆ ಸದಾ ರಕ್ಷಣೆಯ ತಡೆಗೋಡೆಯಾಗದೆ ಅವರು ಕೂಡ ತಮ್ಮನ್ನು ತಾವು ಸಂಭಾಳಿಸಿಕೊಳ್ಳಲಿ ಎಂದು ಬಯಸುವೆ, ಜೊತೆಗೆ ಅವರ ಬದುಕಿನ ಕುರಿತಾದ ಮಹತ್ತರ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುವಂತೆ ಸಮರ್ಥರಾಗಲಿ ಎಂದು ಆಶಿಸುವೆ. ಅವರು ನನ್ನಿಂದ ದೂರವಾಗುತ್ತಾರೆ ಎಂಬ ಭಯ ಕಾಡಿದರೂ ಅವರ ಸ್ವಾವಲಂಬನೆ ನನ್ನ ಹೆಮ್ಮೆ ಎಂಬುದನ್ನು ಅರಿತಿರುವೆ ಜೊತೆಗೆ ಇದು ನನ್ನ ಜವಾಬ್ದಾರಿ ಕೂಡ

 ಅದೇನೇ ಆದರೂ ಕೂಡ ನನಗೆ ಸಾಧ್ಯವಿರುವಷ್ಟು ದಿನ ನಾನು ನನ್ನ ಮಕ್ಕಳಿಗೆ ಕೊಡೆ ಹಿಡಿಯುತ್ತೇನೆ. ಬದುಕು ಧೋ ಎಂದು ಸುರಿಸುವ ಅನಿರೀಕ್ಷಿತ ಮಳೆಯನ್ನು ನನಗೆ ನಿಲ್ಲಿಸಲಾಗುವುದಿಲ್ಲ… ಆದರೆ ನಾನು ಯಾವಾಗಲೂ ನಿಮ್ಮ ಜೊತೆಗಿದ್ದೇನೆ ಎಂಬ ಬೆಚ್ಚಗಿನ ಭಾವ ನನ್ನ ಮಕ್ಕಳಲ್ಲಿ ಭರವಸೆಯನ್ನು ಮೂಡಿಸುತ್ತದೆ. ಆ ಭರವಸೆಯನ್ನು ನೀಡಲು ನಾನು ಸದಾ ಸಿದ್ದಳಾಗಿದ್ದೇನೆ. ನನ್ನನ್ನು ಪ್ರೀತಿಸುವ ನನ್ನ ಸುಖ ದುಃಖಗಳಲ್ಲಿ ನನಗೆ ಹೆಗಲಾಗುವ ನಮ್ಮವರೊಬ್ಬರು ಇದ್ದಾರೆ ಎಂಬ ಭಾವವೇ ನನ್ನ ಮಕ್ಕಳಲ್ಲಿ ಚೈತನ್ಯವನ್ನು ತುಂಬುತ್ತದೆ ಎಂಬುದರ ಅರಿವು ನನಗಿದ್ದು ನಾನು ಸದಾ ನನ್ನ ಮಕ್ಕಳ ರಕ್ಷಣೆಗಾಗಿ ಕೊಡೆಯನ್ನು ಹಿಡಿಯುವೆ.

 ಆದರೆ…ಮನದ ಒಂದು ಮೂಲೆಯಲ್ಲಿ ಬದುಕು ಬೀಸುವ ವೃದ್ಧಾಪ್ಯವೆಂಬ ಬಿರುಗಾಳಿಯಲ್ಲಿ ನಾನು ತೋಯದೆ ನಲುಗದೆ, ಮಕ್ಕಳ ಪ್ರೀತಿಯ ಆಸರೆಯಲ್ಲಿ ಬೆಚ್ಚಗಿರಲು ನನ್ನ ಮಕ್ಕಳು ನನಗೂ ಕೊಡೆ ಹಿಡಿಯಲಿ ಎಂದು ಆಶಿಸುತ್ತೇನೆ. ತಾಯಿಯಾಗಿ ಇದು ನನ್ನ ಸಹಜ ಬಯಕೆ.
ನೀವು ಕೂಡ ಹೀಗೆ ಯೋಚಿಸುತ್ತೀರಾ ಸ್ನೇಹಿತರೆ?


Leave a Reply

Back To Top