ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-ಗೊರೂರು ಅನಂತರಾಜು, ಹಾಸನ.

 ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದು ಬರೆಯಲು ಪ್ರಾರಂಭಿಸಿದ್ದು ೨೦೨೦ರ ಕರೋನ ಸಮಯದಲ್ಲಿ. ಊರು ಹೋಗು ಕಾಡು ಬಾ ಎನ್ನುವ ವಯಸ್ಸಿನಲ್ಲಿ. ನನ್ನ ಹವ್ಯಾಸ ಬಟ್ಟೆ ಹೊಲಿಯುವುದು, ಕರಕುಶಲ ಕಲೆ, ಕೃತಕ ಆಭರಣಗಳ ತಯಾರಿಕೆ ಕ್ರೋಶಾವರ್ಕ್, ನಿಬ್ ಪೈಂಟಿಂಗ್, ಪರ್ಸ್ ವ್ಯಾನಿಟಿ ಬ್ಯಾಗ್ ತಯಾರಿಕೆ, ಸೀರೆ ಕುಚ್ಚು ಹಾಕುವುದು ಕಸೂತಿ ಇವುಗಳನ್ನು ಮನೆಯಲ್ಲಿಯೇ ಕಲಿಸಿ ತರಬೇತಿ ಕೊಡುತ್ತಿದ್ದೆ. ಕೊರೋನ ಮಾರಿಯಿಂದ ಸಂಪರ್ಕವಿಲ್ಲದೆ ಕೆಲಸಗಳಿಗೆ ಅಡೆ ತಡೆಯಾಗಿ ದುಡಿಮೆ ಇಲ್ಲದೆ ಮನೆಯಲ್ಲಿ ಕೂರುವಂತಾಗಿ ಸಾಲದಿದ್ದಕ್ಕೆ ಕರೋನ ಬರುವ ಒಂದು ತಿಂಗಳ ಮುಂಚೆ ೫-೨-೨೦೨೦ರಲ್ಲಿ ನನ್ನ ಪೂಜ್ಯ ಪತಿಯವರು ಕ್ಯಾನ್ಸರ್ ಕಾಯಿಲೆಯಿಂದ ತೀರಿಕೊಂಡರು. ಅದರ ನೋವು ಹೆಚ್ಚಿರುವಾಗ ಮಾರ್ಚ್ನಲ್ಲಿ ಕೊರೋನ ಬೇರೆ ಶುರುವಾಗಿ ಮನೆಯಲ್ಲಿಯೇ ಕೂತು ನೆಂಟರಿಷ್ಟರ ಮನೆಗಳ ಮಕ್ಕಳಿಗೆ ಆಡಲು ಚೌಕಾಬಾರೆ ಹಾಸುಗಳು ಸಾವಿರಗಟ್ಟಲೆ (೭ ಮನೆ ಮತ್ತು ೫ ಮನೆ) ಕವಡೆಗಳು, ಪಗಡೆ ಹಾಸುಗಳು, ಮಾಸ್ಕ್ಗಳನ್ನು ಬಟ್ಟೆಯಲ್ಲಿ ಹೊಲಿದು ಕಸೂತಿ ಮಾಡಿ ಉಚಿತವಾಗಿ ಹಂಚಿದ ಸಮಾಧಾನ ತೃಪ್ತಿಯಿದೆ. ಅಂದು ನಾನು ಬರೆದ ಮೊದಲ ಲೇಖನ ‘ಹಿಂಗಿತ್ತು ನಮ್ಮ ಹಳೇ ಹಾಸ್ನ’ ಇದು ನನ್ನ ಬಾಲ್ಯದ ಹಾಸನವನ್ನು ಬಳಸುತ್ತಿದ್ದ, ಅಂದಿನ ನಾಣ್ಯಗಳು ಪರಿಕರಗಳು ವಿಸ್ತಾರ ಸಂತೆ ಜಾತ್ರೆಗಳ ಬಗ್ಗೆ  ಬರೆದ ೨೦ ಪುಟ ಲೇಖನ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಗೊಂಡು ಅಭಿನಂದನೆ ಪ್ರೋತ್ಸಾಹಗಳ ಮಹಾಪೂರವೇ ಹರಿದುಬಂತು.. ಹೀಗೆ  ಸಾವಿತ್ರಿ ಮೇಡಂ ಮೆಸೇಜ್ ಮಾಡಿದ್ದರು.
ಮೇಡಂ ಪ್ರತಿ ತಿಂಗಳು ನಡೆಯುವ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಆಗಿಂದಾಗ್ಗೆ ಆಗಮಿಸಿ ತಮ್ಮ ಕವಿತೆ ವಾಚಿಸುತ್ತಿದ್ದರು. ಅದೇನೋ ನಾನು ಮನೆ ಮನೆ ಕವಿಗೋಷ್ಠಿ ಸಂಚಾಲಕನಾಗಿ ೨ ವರ್ಷ ತುಂಬುತ್ತಾ ಬಂದು ನನ್ನ ಸಂಚಾಲಕತ್ವದ ಕಡೆಯ ಕಾರ್ಯಕ್ರಮ ಮೇಡಂ ಅವರ ಪುಸ್ತಕ ವಿಮರ್ಶೆ ಮಾಡಿಸುವುದು ಎನಿಸಿತು.ಇಲ್ಲಿ ಭಾವನಾತ್ಮಕ ಅಂಶವಿತ್ತು.    
ಮೇಡಂ ಅವರ ಮತ್ತೊಂದು ಮೆಸೇಜ್ ಬಂತು.  ಕಲಿತು ಬರೆಯಲು ಅನುಕೂಲವಿದೆಯೆಂದು ಬರೆಯುತ್ತಿರುವೆ. ಆದರೂ ಬರೆಯುವುದೇ ಆಗಿ ನನ್ನ ಪುಸ್ತಕ ಬಿಡುಗಡೆಯ ಭಾಗ್ಯವೂ ಲಭಿಸಿದೆ. ಆದರೆ ಖರ್ಚು ಹೆಚ್ಚಾಗಿದೆಯೇ ಹೊರತು ಆದಾಯವಿಲ್ಲದಿದ್ದರೆ ಹೊಟ್ಟೆ ತುಂಬುವುದಿಲ್ಲವಲ್ಲ. ಬಿಡುಗಡೆಯಾದ ಪುಸ್ತಕವನ್ನು ಕೊಳ್ಳುವವರು ಯಾರೂ ಇಲ್ಲ. ಕವಿಗೋಷ್ಠಿ ಸಮ್ಮೇಳನ ಅಂತ ತಿರುಗುವುದರಿಂದ ನೆಡೆಯಲಾರದ ನಮ್ಮಂಥವರಿಗೆ ಆಟೋಗಳಿಗೆ ಹಣ ಹೊಂದಿಸಲಾಗುತ್ತಿಲ್ಲ. ಹೆಚ್ಚು ಬಳಗಗಳಿಗೆ ಬರೆಯುತ್ತಿರುವುದರಿಂದ ನಿದ್ರೆ ಊಟ ತಿಂಡಿಗೆ ಸಮಯವಿಲ್ಲ. ಹೊಲಿಯಲು ಸಮಯವಿಲ್ಲದೆ ಮಿಷನ್ ಮೇಲೆ ಕೂತು ವರ್ಷಗಳೇ ಸಂದಿವೆ. ವಯಸ್ಸಾದ ಕಾರಣ ಆರೋಗ್ಯದ ಸಮಸ್ಯೆ. ನನಗೀಗ ೭೭ ವರ್ಷ. ನನ್ನ ಕೆಲಸಗಳಿಗೆ ಬಿಡುವಿಲ್ಲ. ಬರೆದು ಈಗೇನು ಮಾಡಬೇಕು.. ಅರೇ.! ಹೌದಲ್ಲ. ಅವರಿಗೇಕೆ ಹೀಗೆ ಅನಿಸಿತು.  ನಾಲ್ಕು ವರ್ಷಗಳ ಹಿಂದೆ ಕಾವ್ಯ ಕ್ಷೇತ್ರಕ್ಕೆ ಕಾಲಿರಿಸಿ ಮೇಡಂ ಹೃದಯದ ಕವಿತೆ  ಎಂಬ ಲೇಖನ ಕವನ ಚುಟುಕು ಹಾಯ್ಕುಗಳ  ಸಂಕಲನ ಹೊರತಂದಿದ್ದಾರೆ. ಆಗಲೇ  ಅವರಿಂದ ಕಾವ್ಯ ದೂರವಾಗುತ್ತಿದೆಯೇ..ಛೇ..!
ಸಾಹಿತ್ಯ ಕ್ಷೇತ್ರವದು ಕಲಿತು ಬರೆಯಲು
ಅನುವು ಆಗಿಹುದು ಜ್ಞಾನವ ಪಡೆಯಲು
ಸಾವಿತ್ರಿ  ಮೇಡಂ ಅವರೇ ತಮ್ಮ ಕವಿತೆಯ ಸಾಲಿನಲ್ಲಿ ಹೀಗೇ ಬರೆದಿದ್ದಾರಲ್ಲಾ. ಯಾಕೋ ಮೆಸೇಜ್ ತುಂಬಾ ಕಾಡಿಸಿತು. ಇದನ್ನು ಪುಸ್ತಕದಲ್ಲಿ ಆಶಯ ನುಡಿ ಬರೆದ ಮಾಳೇಟರ ಸೀತಮ್ಮ ವಿವೇಕ್ ಮೇಡಂ ಅವರಲ್ಲಿ  ಹಂಚಿಕೊ೦ಡೆ. ಇತ್ತ ಸಾವಿತ್ರಿ  ಮೇಡಂ  ಜೊತೆ ಪೋನ್‌ಲ್ಲಿ ಮಾತನಾಡಲೆಂದರೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರೇ ‘ಸಾರ್, ನನಗೆ ಪೋನ್‌ನಲ್ಲಿ ಏನೂ ಮಾತು ಕೇಳಿಸುವುದಿಲ್ಲ. ತಾವು ಮೆಸೇಜ್ ಮಾಡಿ ಪ್ಲೀಸ್.. ಏನೆಂದು ಮೆಸೇಜ್ ಮಾಡಲಿ..? ಅದಕ್ಕಿಂತ ಅವರ ಪುಸ್ತಕ ಓದಿ  ಬರೆಯುವುದೇ ಉಚಿತವೆನಿಸಿತು. ಪುಸ್ತಕದ ಆಶಯ ನುಡಿಯಲ್ಲಿ   ಸೀತಮ್ಮ ಮೇಡಂ  ಒಂದು ಚುಟುಕು ಎತ್ತಿಕೊಂಡು ಕೆಲ ಸಾಲು ಬರೆದಿದ್ದಾರೆ.  
ಮೊಳಕೆಯೊಡೆವ ಮೊದಲ ಪ್ರೀತಿ
ಅದು ಹೆತ್ತವ್ವನ ಚುಂಬನದ ಪ್ರೀತಿ
ಅಪ್ಪಿ ಮುದ್ದಿನ ಮಳೆಗರೆವಾ ಪೀತಿ.
.
ಬೇರಾರೂ ಕೊಡಲಾಗದ ನಿಷ್ಕಲ್ಮಶ ಪ್ರೀತಿ ಎಂದು ಚುಟುಕಿನ ಮೂಲಕ ತಾಯಿ ಪ್ರೀತಿಯ ಭಾವ ವ್ಯಕ್ತಪಡಿಸಿರುವ ಇವರು ಹೆಣ್ಣು ಮನಸು ಮಾಡಿದರೆ ಯಾವಾಗ ಬೇಕಾದರೂ ಏನನ್ನು ಬೇಕಾದರೂ ಮಾಡಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ದೇಹ ಕ್ಷೀಣಗೊಂಡು ಕಾಡಿದರೂ ನೋವುಗಳನ್ನು ನಿರ್ಲಕ್ಷಿಸಿ ಛಲ ಬಿಡದೆ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಎಲ್ಲರೊಡನೆ ಒಡನಾಡುತ್ತ ತಾವು ಮಾಡ ಬೇಕೆಂದುಕೊಳ್ಳುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾ ಇರುತ್ತಾರೆ..
ಲೇಖಕಿ ಬರೆಯುತ್ತಾರೆ..ನಾನು ಹುಟ್ಟಿದ್ದು ೨೪-೮-೧೯೪೮. ದೇಶಕ್ಕೆ ಸ್ವತಂತ್ರ ಬಂದ ಮೊದಲನೆ ವರ್ಷದ ಸಂಭ್ರಮದ ಮಾಸದಲ್ಲಿ. ಹಾಸನದಲ್ಲಿ ನನ್ನ ತಂದೆ ತಿಮ್ಮಪ್ಪಗೌಡರು ಹಾಸನದ ದೊಡ್ಡಕೊಂಡುಗುಳದ ಹತ್ತಿರವಿರುವ ಹೊಸಕೊಪ್ಪಲು. ಹಿಂದಿನ ಕಾಲದಲ್ಲಿ ಒಮ್ಮೆ ಹುರುಳಿಯನ್ನು ಸಮೃದ್ಧಿಯಾಗಿ ಬೆಳೆದ ಕಾರಣ ಅಂದಿನಿಂದ ಹೊಸಕೊಪ್ಪಲು ಹೋಗಿ ಜನರ ನುಡಿಯಲ್ಲಿ ಹುರಳೀಕೊಪ್ಪಲು ಆಗಿದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು…
ಏಕೋ ಇದನ್ನು ಓದುತ್ತಿರಲು ನನಗೆ ಹಳೆಯ ವಿಚಾರವೊಂದು ತಟ್ಟನೆ ನನ್ನ ಮನದಲ್ಲಿ ಹಾಯ್ದುಹೋಯಿತು.
ನಮ್ಮ ತಂದೆ ಗೊರೂರಿನಲ್ಲಿದ್ದಾಗ ಭಾನುವಾರದ ಸಂತೆಯಲ್ಲಿ ಒಣ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದರು. ನಮ್ಮ ತಂದೆ ಬಸವಣ್ಣನವರ ಸಂತೆ ಕಟ್ಟೆಯಲ್ಲಿ ಸುಂಕದವರ ಕಾಟವೇ ಹೆಚ್ಚು. ಅದೇ ಗ್ರಾಮ ಪಂಚಾಯ್ತಿಗೆ ದೊಡ್ಡ ರೆವಿನ್ಯೂ. ಅದಕ್ಕೆ ವರ್ಷಕ್ಕೊಮ್ಮೆ ಟೆಂಡರ್ ಕರೆದು ಏಜೆನ್ಸಿ ಫಿಕ್ಸ್ ಆಗುತ್ತಿತ್ತು. ಸುಂಕದವರ ಮುಂದೆ ಸುಖದು:ಖ ಹೇಳಿಕೊಳ್ಳಲುಂಟೆ. ಅವನು ನಾಟಿ ಬೀಡಿ ವ್ಯಾಪಾರಿಯಾಗಿರಲಿ ಗುಡ್ಡೆ  ಬೆಳ್ಳುಳ್ಳಿ ವ್ಯಾಪಾರಿಯಾಗಿರಲಿ ಎಲ್ಲರಿಗೂ ಒಂದೇ ರೇಟು ಫಿಕ್ಸು. ಸುಂಕದವನ ನಿರ್ದಾಕ್ಷಿಣ್ಯ ಕ್ರಮ. ನಮ್ಮ ತಂದೆ ಬಿಸಿಲಿನ ರಕ್ಷಣೆಗೆ ಗುಡಾರ ಹೊಡೆಯುತ್ತಿದ್ದರು. ಈ ಗುಡಾರದ ನೆರಳಿಗೆ ಗುಡ್ಡೆ ಬೆಳ್ಳುಳ್ಳಿ ಸಾಹೇಬ್ರು, ನಾಟಿ ಬೀಡಿ ಮನೆಯಲ್ಲೇ ಕಟ್ಟಿ ತಂದು ಮಾರುತ್ತಿದ್ದ ಈಗಿನ ಪ್ರಸಿದ್ಧ ವಾಲ್ ರೈಟರ್ ಯಾಕೂಬ್ ಅವರ ಮದರ್ ಹೀಗೆ ಕೆಲವು ಸಣ್ಣ ಅತೀ ಸಣ್ಣ ವ್ಯಾಪಾರಿಗಳು ಆಶ್ರಯ ಪಡೆಯುತ್ತಿದ್ದರು. ಕೆಲವು ವ್ಯಾಪಾರಿಗಳು ಗುಡಾರ ಹೊಡೆಯಲು ಬಸ್ಸಿನಲ್ಲಿ ಗಳುಗಳನ್ನು ಡೇರೆಯನ್ನು ತರಲು ಕಷ್ಟವಾಗಿ ನಮ್ಮ ಮನೆಯ ಹೊರಾಂಡದಲ್ಲಿ ಇಟ್ಟು ಹೋಗುತ್ತಿದ್ದರು. ಅವರಿಂದ ನಮ್ಮ ತಂದೆಯೇನು ಬಾಡಿಗೆ ಪಡೆಯುತ್ತಿರಲಿಲ್ಲ. ಆದರೆ ನಮ್ಮ ಮನೆ ಎದುರಿಗೆ ಮಂಜಣ್ಣನ ಮನೆ  ಇತ್ತು. ಅದು ಸಂತೆಗೆ ಹತ್ತಿರವಾಗಿ ಬಹುಶ: ಅವರು ಕನಿಷ್ಟ ಬಾಡಿಗೆಗೆ ನಿಗದಿ ಮಾಡಿಕೊಂಡು ಸಾಕಷ್ಟು ಮಂದಿ ಅಲ್ಲಿ ತಮ್ಮ ಸಾಮಾನು ಸರಂಜಾಮು ಇಟ್ಟು ಹೋಗಲು ಅದೊಂದು ತರಹ ಗೋಡೌನ್ ತರಹವೇ ಆಗಿತ್ತು. ಇರಲಿ. ನಮ್ಮ ಊರ ಸಂತೆಗೆ ಹಾಸನದ ದೊಡ್ಡಕೊಂಡಗುಳದಿಂದ ಒಂದು ಹೆಂಗಸು ವ್ಯಾಪಾರಕ್ಕೆ ಬರುತ್ತಿತ್ತು. ಅದೇನೋ ವ್ಯಾಪಾರ ಎಂಬದು ತಕ್ಷಣಕ್ಕೆ ನೆನಪಾಗುತ್ತಿಲ್ಲ. ಆದರೆ ಆ ಹೆಂಗಸು ಬಹಳ ವರ್ಷ ರಾತ್ರಿ ನಮ್ಮ ಮನೆಗೆ ಬಂದು ತಂಗುತ್ತಿತ್ತು. ತನ್ನ ವ್ಯಾಪಾರಿ ಸಾಮಾಗ್ರಿಗಳ ಚೀಲವನ್ನು ಹೊರಾಂಡದಲ್ಲಿ ಇಟ್ಟು ಮನೆಯ ಹಾಲ್‌ನಲ್ಲಿ ಮಲಗಿ ಬೆಳಿಗ್ಗೆ ಎದ್ದು ಹಾಸನಕ್ಕೆ ಹೋಗುತ್ತಿತ್ತು. ಬಸ್ ಸೌಕರ್ಯಗಳ ಕೊರತೆ ಮತ್ತೇ ಹಳ್ಳಿಗೆ ಹೋಗಬೇಕಾಗಿದ್ದರಿಂದ ಪಾಪ ಆಕೆಗೆ ಇದು ಅನಿವಾರ್ಯವಾಗಿತ್ತು. ಅವರಿಗೆ ನಮ್ಮ ತಾಯಿ ದೊಡ್ಡಕೊಂಡುಗಳ್ಳದಮ್ಮ ಎಂದೇ ಕರದು ನಮಗೆ ಆಕೆಯ ಹೆಸರೇನಂದೇ ತಿಳಿಯದು. ನಮ್ಮ ತಾಯಿಯವರು ಮುತ್ತುಗದ ಎಲೆ ಕಟ್ಟಿ ಮಾರಿ ತಮ್ಮ ಎಲೆ ಅಡಿಕೆ ಖರ್ಚು ನಿಭಾಯಿಸಿಕೊಳ್ಳುತ್ತಿದ್ದರು. ಅವರಿಗೆ ಮಾತನಾಡಲು ಒಬ್ಬರು ಹೆಂಗಸು ಯಾವಾಗಲೂ ಇರಬೇಕಿತ್ತು. ಅದಕ್ಕಾಗಿಯೇ ನಾಲ್ಕೈದು ಕಟ್ಟು ಎಲೆ, ಅರ್ಧ ಕೆಜಿಯಷ್ಟು ಅಡಿಕೆ ಸಂತೆಯಲ್ಲಿ ಖರೀದಿಸುತ್ತಿದ್ದರು.  ಈ ಎಲೆ ಅಡಿಕೆ ಮತ್ತು ಕಾಫಿ ಈ ಹಂಗೆಳೆಯರ ಮಧ್ಯದ ಒಡನಾಡಿಯಾಗಿತ್ತು. ಅಂತೆಯೇ ಈ ದೊಡ್ಡಕೊಂಡಗೊಳ್ಳದಮ್ಮ ಭಾನುವಾರ ಸಂಜೆಯ ವಿಶೇಷ ಅತಿಥಿ. ಇಂತಹ ವಿಷಯಗಳೇ ಒಮ್ಮೊಮ್ಮೆ ಒಂದು ಒಳ್ಳೆಯ ಲಲಿತ ಪ್ರಬಂಧಗಳಾಗುವುದು0ಟು.  ಹೃದಯದ ಕವಿತೆಯ ಈ ಒಂದು ಕವಿತೆ ನನ್ನ ಬಾಲ್ಯವನ್ನು ನೆನಪಿಸಿತ್ತು.  
ತವರಿನ ತೊಟ್ಟಿಲಿನಲ್ಲಿ ಜೀಕೋಣ
ತಾಯಿಯ ಮಡಿಲಲ್ಲಿ ಮಲಗೋಣ
ತಿಳಿನೀರ ಕೊಳದಲ್ಲಿ ಮೀಯೋಣ..
ತುಂತುರು ಮಳೆಯಲ್ಲಿ ನೆನೆಯೋಣ

ತಮ್ಮ ಅನುಭವ ಜನ್ಯ ಬದುಕಿನ ಹಲವಾರು ವಿಚಾರಗಳನ್ನು ಮೆಲುಕು ಹಾಕುತ್ತಾ ಸಾಹಿತ್ಯದ ಹಲವು ಪ್ರಕಾರಗಳಾದ ಕತೆ ಕವನ ಲೇಖನ ಹಾಯ್ಕು ಟಂಕಾ ಲಿಮರಿಕ್ ಕವನ ಚುಟುಕು ಅತ್ಯಂತ ಶ್ರದ್ಧೆಯಿಂದ ಕಲಿತು ಬರೆಯುತ್ತಾ ತಮ್ಮ ಬಾಳ ಸಂಜೆಯನ್ನು ಅತ್ಯಂತ ಚಂದಗಾಣಿಸಿ ಕೊಳ್ಳುತ್ತಿದ್ದಾರೆ ಎಂದು ಬೆನ್ನುಡಿಯಲ್ಲಿ ಕವಯಿತ್ರಿ ಮಾಲಾ ಚೆಲುವನಹಳ್ಳಿ ಬರೆದಿದ್ದಾರೆ. ಇಳಿಯ ವಯಸ್ಸಿನಲ್ಲಿ ಏರುಗತಿಯಲ್ಲಿರುವ ಸಾಹಿತ್ಯ ಕೃಷಿಯ ಉತ್ಸಾಹ ಸಾಧನೆಯ ಸಂಕಲ್ಪ ತೊಟ್ಟವರಿಗೆ ವಯಸ್ಸಿನ ಹಂಗಿಲ್ಲ, ಅನಾಸಕ್ತಿಯ ಗುಂಗಿಲ್ಲ. ಇಳಿ ವಯಸ್ಸಿನಲ್ಲಿಯೂ ಪಿಹೆಚ್‌ಡಿಯಂತಹ ಉನ್ನತ ಶಿಕ್ಷಣ ಪಡೆದವರೂ ನಮ್ಮಲ್ಲಿದ್ದಾರೆ..ಇದು ಪರಮೇಶ್ ಹೊಡೇನೂರರ ಮುನ್ನುಡಿಯ ಆರಂಭಿಕ ಸಾಲು.   ಹೌದು ಇದು ಖರೆ. ಇದಕ್ಕೆ ಸಾಕ್ಷಿ ತಾ.ನಂ.ಕುಮಾರಸ್ವಾಮಿಯವರು ‘ಕರ್ನಾಟಕದಲ್ಲಿ ಚೋಳರ ಕನ್ನಡ ಶಾಸನಗಳು-ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮುಗಿಸಿ ಕೃತಿ ಪ್ರಕಟಿಸಿದ ಕಾಲಕ್ಕೆ ಅವರಿಗೆ ವಯಸ್ಸು ೮೦ ಆಗಿತ್ತು. ಈಗಾಗಲೇ ಅವರ ೫೦೦ ಪುಟದ ಆ ಪುಸ್ತಕ ಓದಿ ಆನಂದಿಸಿ ಬರೆದಿದ್ದೇನೆ. ಇರಲಿ  ಇತ್ತ ಸಂಕಲನ ಮತ್ತೊಂದು ಕವಿತೆ:
ಮುಪ್ಪಿನಾ ಕಾಲದಲಿ ನೋಯಿಸದಿರಿ
ಹೆತ್ತವರ ಇಂದು ನಿಮಗಿರುವ ಸೌಲತ್ತು
ಅಂದು ಅವರಿಗಿರಲಿಲ್ಲ ಆ ಹೊತ್ತು
ನಿಂದಿಸದಿರಿ ಹೆತ್ತವರ ನಿಮ್ಮೇಳಿಗೆಗೆ
ಕಾರಣ ಅವರೇ ಎಂಬುದ ತಿಳಿಯಿರಿ

ಆಧುನಿಕ ತಂತ್ರಜ್ಞಾನ ಹೆಚ್ಚು ಆವರಿಸಿ ಸಾಮಾಜಿಕ ಜಾಲತಾಣಗಳು ವಿಜೃಂಭಿಸುತ್ತಿರುವ ಪ್ರಸಕ್ತ ದಿನಗಳಲ್ಲಿ ಹಲವಾರು ವಾಟ್ಸಾಪ್ ಗ್ರೂಪ್‌ಗಳು ಬೆಳೆಸುತ್ತಿರುವ ಕವಿ ಸಾಹಿತಿಗಳಲ್ಲಿ ಸಾವಿತ್ರಿ ಮೇಡಂ ಕೂಡ ಒಬ್ಬರೆಂದು ಹೇಳಬಹುದು. ಇದು ಕರೋನ ಕಾಲದಲ್ಲಿ ಹುಟ್ಟಿಕೊಂಡ ಹೊಸ ಬೆಳವಣಿಗೆ. ಮೇಡಂ ತಮ್ಮ ಕಾಲಘಟ್ಟದ ಹಳ್ಳಿ ಬದುಕನ್ನು ಕಟ್ಟಿಕೊಡಲು ಶಶಕ್ತರಿದ್ದಾರೆ.  ನಾವು ಬಾಲ್ಯದಲ್ಲಿ ಅನೇಕ ಘಟನೆಗಳಿಗೆ ಸಾಕ್ಷಿಯಾಗಿರುತ್ತೇವೆ. ಆದರೆ ಅದನ್ನು ದಾಖಲಿಸಲು ಆಗ ನಮಗೆ ಸಾಧ್ಯವಾಗಿರುವುದಿಲ್ಲ. ಏಕೆಂದರೆ ಆಗ ನಮಗೆ ಬರವಣಿಗೆ ಸಿದ್ಧಿಸಿರುವುದಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೇ  ನಾನು ಓದಿನ ದಿನಗಳಲ್ಲೇ ಸಾವಿರಾರು ಪುಸ್ತಕಗಳನ್ನು ಓದಿ ಅರಗಿಸಿಕೊಂಡಿದ್ದೆ. ಏನು ಮನರಂಜನೆ ಇಲ್ಲದ ಕಾಲದಲ್ಲಿ ಪುಸ್ತಕವೇ ನನಗೆ ಮನರಂಜನಾ ಮಾಧ್ಯಮವಾಗಿ ಹಳ್ಳಿಗಾಡಿನಲ್ಲಿ ಸಂತೋಷದ ಜೀವನ ಕಳೆಯುವುದು ಸಾಧ್ಯವಾಗಿತು. ಈಗಲೂ ಏನಾದರೂ ಬರೆಯಲೂ ಹೊರಟರೆ ಅದೇ ಬಾಲ್ಯದ ಆ ದಿನಗಳು  ಹೇನಿನಂತೆ ತಲೆಯಲ್ಲಿ ಓಡಾಡುತ್ತಿರುತ್ತವೆ. ರಾತ್ರಿ ಕನಸಿನಲ್ಲೂ ಹುಟ್ಟಿದೂರೇ ಸಿನಿಮಾ ರೀಲ್‌ನಂತೆ  ಓಡುತ್ತಿರುತ್ತದೆ. ಆದರೆ ಎಚ್ಚರಗೊಂಡಾಗ ಎಲ್ಲಾ ಮಾಯವೋ..! ಈ ಸಿಟಿ ಲೈಫು  ನಮಗೆ ಕಥೆ, ಪ್ರಬಂಧ ಕಟ್ಟಲು ನೆರವಾಗುತ್ತಿಲ್ಲ. ಈ ದಿಶೆಯಲ್ಲಿ ಮೇಡಂ ಪ್ರಯತ್ನಿದ್ದಾರೆ.  ಅವರು ಮದುವೆಯಾಗಿ ಗಂಡನ ಮನೆಗೆ ಹೋದದನ್ನು ಸ್ಮರಿಸುತ್ತಾ ೧೯೭೪ನೇ ಇಸವಿಯಲ್ಲಿ ನನ್ನ ಮದುವೆ ಆಲೂರು ತಾ. ಕುಂದೂರಿನ ದಿವಂಗತ ಛೇ: ತಿಮ್ಮೇಗೌಡ್ರು ಮತ್ತು ಕೆಂಚಮ್ಮನವರ ಕಿರಿಯ ಪುತ್ರರಾದ ಛೇ: ಕೆ.ಟಿ.ಬಸವೇಗೌಡ (ಶಾಮಣ್ಣ)ರವರೊಂದಿಗೆ ನನ್ನ ವಿವಾಹವಾಗಿ ಕುಂದೂರು ಸೇರಿದ್ದೆ.  ಆದರೆ ನಮ್ಮೆಜಮಾನ್ರು ನಾನೇ ಕೆಲಸದಲ್ಲಿಲ್ಲ ನಿಮಗ್ಯಾಕೆ ರಿಸೈನ್ ಮಾಡಿ ಅಂದ್ರು, ರಿಸೈನ್ಮಾಡ್ದೆ. ನಮ್ಮೆಜಮಾನ್ರು ನನಗೆ ಬಹುವಚನದಲ್ಲಿ ಹೇಳಿದ ಮಾತುಗಳನ್ನು ಓದುಗರು ಗಮನಿಸಿರಬಹುದು. ಹೌದು ಅವರು ಯಾವಾಗಲೂ ಹೆಣ್ಣು ಮಕ್ಕಳಿಗೆ ದೊಡ್ಡವರಾಗಲೀ, ಚಿಕ್ಕವರಾಗಲೀ ಗೌರವದಿಂದ ಬೆಲೆ ಕೊಟ್ಟು ಬಹುವಚನದಲ್ಲಿ ಮಾತನಾಡಿಸುವ ಸ್ವಭಾವ. ಅವರ ಅತ್ತಿಗೆಯಂದಿರನ್ನೆಲ್ಲ ಅತ್ಗೆ ಯಮ, ನಾದಿನಿಯರನ್ನು, ಸೊಸೆ ಮೊಮ್ಮಕ್ಕಳನ್ನು ಸಹ ಬನ್ರಮ್ಮ, ಹೋಗ್ರಮ್ಮ ಅಂತಾನೆ ಮಾತನಾಡಿಸುತ್ತಿದ್ದರು. ಅದು ಅವರ ಸಂಸ್ಕಾರ. ನನ್ನ ತಾಯಿ ಅಜ್ಜಿಗೆ ಗುಣವಂತ ಅಳಿಯ ಅಂತ ಅಚ್ಚುಮೆಚ್ಚಾಗಿತ್ತು. ಅದೆಲ್ಲಾ ಈಗ ಸಿಹಿ ನೆನಪುಗಳು ಮಾತ್ರ..


Leave a Reply

Back To Top