ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ ಅವರ
ಮುಖವಾಡ

ಎಲ್ಲೆಲ್ಲೂ ನಿನ್ನದೇ ದರ್ಬಾರ
ಒಳ ಹೊಕ್ಕಿದೆ ಭಿನ್ನ ರಾಗ
ಗಾಳ ಹಾಕುವ ಧಾವಂತದಿ
ಮುಖಕ್ಕೊಂದು ಮುಖವಾಡ ಧರಿಸಿ.
ಸದ್ದಿಲ್ಲದೇ ಹರಿದಿದೆ
ಮದ್ದಿಲ್ಲದ ರೋಗದಂತೆ
ವೃದ್ಧಿಸುತಿದೆ ಸ್ವಾರ್ಥ ಸಾಧನೆಗಾಗಿ
ಬದ್ಧತೆಯ ತಿರುಚಿ ಹಾಕಲು.
ಬುಗುರಿ ಆಟದ ಬದುಕಿಗೆ
ನಗಾರಿ ಬಾರಿಸುತ
ಹುರುಳಿಲ್ಲದ ಕಾಯಕೆ
ಪ್ರತಿಬಿಂಬಿಸುವ ಹೆಬ್ಬಯಕೆ ಹೊತ್ತು.
ಕರುಳ ಕುಡಿಗಳು ಬಿರುಕಾಗಿ
ನರಳುವ ಯಾತನೆಗೆ ಅಡಿಪಾಯ
ಬೆರಳು ಹಿಡಿವ ಕರವು ನೆಪವ ಹೂಡಿ
ಬಣ್ಣ ಬಣ್ಣದ ರಂಗು ಮೂಡಿಸುತಿದೆ.
ಕೊಡು ಕೊಳ್ಳುವಿಕೆ ವಾದದಿ
ನುಣುಚು ಕೊಳ್ಳುವಿಕೆಯಲಿ
ಕಳ ಕಳಿ ತೋರಿಕೆಗೆ
ಮುಖಕ್ಕೊಂದು ಮುಖವಾಡ ಧರಿಸಿ ನಡೆದಿವೆ.
ರೇಷ್ಮಾ ಕಂದಕೂರ
