
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್

ನಂಬಿಕೆಗಳು ಹಾದಿ
ತಪ್ಪಿದರೆ ಉಳಿಗಾಲವಿಲ್ಲ.

ಯಾಕೋ ಏನೋ ಇತ್ತಿತಲಾಗಿ ಜೀವನದ ಸುಮಧುರ ಕ್ಷಣಗಳು ಒಂದು ರೀತಿಯಲ್ಲಿ ಮುಖವಾಡ ಧರಿಸುತ್ತಿರುವುದು,ಮುಂದಿನ ದಿನಗಳಿಗೆ ಇದೊಂದು ಆಘಾತಕಾರಿ ಸೂಚನೆ ಎಂದರೆ ತಪ್ಪಾಗಲಾರದು. ಇಷ್ಟು ದಿನ ಪ್ರಕೃತಿ ಕೈಕೊಡುತ್ತಿದೆ,ನಮ್ಮ ಬದುಕು ನಶ್ವರ ಅಂತ ಭಾವಿಸುವ ಸಂಗತಿ ಒಂದಾದರೆ,ಇನ್ನೊಂದು ಕೌಟುಂಬಿಕ ಸಂಬಂಧಗಳು ಅವನತಿಯತ್ತ ಹೆಜ್ಜೆ ಇಡುತ್ತಿರುವುದು ಕಂಡು ಕಾಣದಂತೆ ಅಡಗಿಕೊಳ್ಳುವ ಪರಿಸ್ಥಿತಿ ಬರುತ್ತಿದೆ.
ಹಿಂದಿನವರು ಬದುಕುತ್ತಿದ್ದ ರೀತಿಗಳು,ಇಂದಿನ ಜೀವನ ಆಕಾಶ, ಭೂಮಿಗಿರುವ ಅಂತರದಲ್ಲಿ ತೇಲಾಡುತ್ತಿದೆ.ಮದುವೆಯ ಬಂಧನವೇ ಆತಂಕದಲ್ಲಿದೆ.ಮದುವೆಯಾದ ಮೇಲೆ ಆ ಸಂಬಂಧಗಳು ಕೊನೆಯವರೆಗೂ ತಾಳಿಕೆಯಿಲ್ಲದೆ ನೆಲಕಚ್ಚುತ್ತಿರುವುದು ಸಮಾಜದ ಮೌಲ್ಯಗಳು ಪತನವಾದಂತೆ.ಮಾನಸಿಕ ನೆಮ್ಮದಿ ಕಳಕೊಂಡ ವ್ಯಕ್ತಿ ಸಮಾಜದ ಸ್ವಾಸ್ಥ್ಯ ಕೆಡಲು ಕಾರಣವಾಗುತ್ತಾನೆ.
ಮೊನ್ನೆಯೊಬ್ಬರು ಅನಿರೀಕ್ಷಿತವಾಗಿ ಸತ್ತರೆಂಬ ಸುದ್ದಿ ಕೇಳಿ ಒಂದು ಕ್ಷಣ ಮನಸ್ಸು ಭಾರವಾಯಿತು.ವಯಸ್ಸು ಸಾವನ್ನು ಹತ್ತಿರ ಕರೆಯುವಂತಹುದಲ್ಲ! ಯಾರಿಗೂ ನಿರೀಕ್ಷೆಯಿರಲಿಲ್ಲ.ಮಗ,ಮಗಳು ಕಲಿಯಲು ದೂರದ ಊರುಗಳಲ್ಲಿ, ಗಂಡ ಕೆಲಸವೆಂದು ಇನ್ನೆಲ್ಲೋ..ಒಂಟಿ ಬದುಕು ಎಲ್ಲರಿಗೂ ಅನಿವಾರ್ಯಯೆಂಬಂತೆ ಭಾಸವಾಗುತ್ತಿದೆ.ದೂರ ದೂರ ಒಂಟಿತನದಲ್ಲಿ ಬದುಕುವ ಅನಿವಾರ್ಯ ಪರಿಸ್ಥಿತಿ ಇದ್ದುದು ಕೆಟ್ಟದ್ದಲ್ಲ.ದುಡಿಯದಿದ್ದರೆ ಬದುಕಿಲ್ಲ ಅಷ್ಟೇ. ಆದರೆ ಗಂಡಾಗಲಿ,ಹೆಣ್ಣಾಗಲಿ ದೂರ ಇದ್ದ ಮಾತ್ರಕ್ಕೆ, ತಮ್ಮ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿ ಬದುಕುವುದು ಎಷ್ಟು ಸರಿ? ಮನುಷ್ಯನ ಜೀವನದಲ್ಲಿ ಪ್ರಾಣಿಗಳಂತೆ ವರ್ತಿಸುವ ಪರಿಪಾಠ ಬೆಳೆಸಿಕೊಂಡರೆ ಏನು ಉಳಿತು? ನಂಬಿಕೆಗಳು ಹಾದಿ ತಪ್ಪಿದರೆ ಉಳಿಗಾಲವಿಲ್ಲ.ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ!.ಇನ್ನಷ್ಟೋ ಜೀವಗಳು ಕೊಲೆಯಾಗಿವೆ!. ಅನ್ಯಾಯ ಕಂಡು ಕಾಣದಂತೆ, ಇದ್ದು ಸತ್ತ ರೀತಿಯಲ್ಲಿ ಜೀವಿಸುವವರ ಸಂಖ್ಯೆ ಸಾಕಷ್ಟಿದೆ.ಮಕ್ಕಳು ಮರಿ ನೋಡಿಕೊಂಡು ತುಟಿಕಚ್ಚಿ ಜೀವನ ಸಾಗಿಸುವ ಸಂಬಂಧಗಳಿಗೇನು ಕೊರತೆಯಿಲ್ಲ. ಒಳಗೊಳಗೆ ಬೇಯುವ ಮನಸ್ಸು ಹೃದಯದೊತ್ತಡಕ್ಕೆ ಬಲಿಯಾಗುತ್ತಿರುವುದು,ಮೇಲ್ನೋಟಕ್ಕೆ ಹಾರ್ಟ್ ಅಟ್ಯಾಕ್ ಅಂದು ಸುಮ್ಮನಾಗುವ ಸಮಾಜ,ಅದರ ಹಿನ್ನಲೆಯನ್ನು ಗಮನಿಸಿದಷ್ಟು ಸಾವಿನ ಕರಾಳ ಮುಖ ದರ್ಶನ ಪ್ರಕಟವಾಗುತ್ತದೆ.ಎಲ್ಲ ನೋವನ್ನು ಯಾರಿಗೆ ಹೇಳಲು ಸಾಧ್ಯ!? ಮರ್ಯಾದೆಗಂಜಿ ಬದುಕುವ ಜೀವಗಳು ಇದ್ದು ಸತ್ತಂತೆ!.

ನಾವು ನಾವಾಗಿ ಬದುಕಬೇಕಿದೆ.ಮನಃಶಾಂತಿ ಹುಡುಕಿದಷ್ಟು ನೆಮ್ಮದಿ ದೂರವಾಗುತ್ತಿದೆ.ಸಂಸಾರದ ಮೇಲಿನ ನಂಬಿಕೆ ಇಲ್ಲವಾಗಿರುವುದು ಇಂತಹ ಘಟನೆಗಳಿಂದ.ನ್ಯೂಸ್ ನೋಡಿದರೆ ಬರಿ ಸಂಸಾರ ಹಾಳಾದ ಸುದ್ದಿಗಳು ಬಿಟ್ಟರೇ ಬೇರೆನೂ ಇಲ್ಲ!. ಮದುವೆ ಯಾಕೆ ಆಗಬೇಕು? ಎಂಬ ಮಾತು ಯುವ ಸಮುದಾಯದಲ್ಲಿ ಚರ್ಚಾಸ್ಪದ ವಿಷಯವಾಗಿದೆ. ನಮಗೇನೂ ಬೇಕು ಬೇಡ ಎಂಬ ಮಾತು ವಯಕ್ತಿಕ ವಿಚಾರದಲ್ಲಿ ಲೀನವಾಗಿದೆ.ಹೆತ್ತ ತಂದೆ ತಾಯಿ ಮಕ್ಕಳ ಹಣೆ ಬರಹ ಬರೆಯಲು ಸಾಧ್ಯವಾ? ಅವರು ಬದುಕಿದಂತೆ ಇವರು ಬದುಕಲು ಸಾಧ್ಯವೇ ಹೀಗೆಲ್ಲ ಚರ್ಚಿಸಿ ಮರೆಯಾದರೆ ಇನ್ನೇನು? ನಮಗೆಲ್ಲ ಒಂಟಿಯಾಗಿ, ಮೂಡಿಯಾಗಿ,ಸ್ವಚ್ಛಂದವಾಗಿ,ಸ್ವತಂತ್ರವಾಗಿ ಬದುಕುವುದರಲ್ಲಿ ಹೆಚ್ಚೆಚ್ಚು ಆಸಕ್ತರಾಗುತ್ತಿರುವುದು ನಂಬದಿದ್ದರೂ ನಂಬಲೇ ಬೇಕು.
ಜಗತ್ತನ್ನೇ ಗೆದ್ದವರು ಯಾರು ಇಲ್ಲ!. ಪ್ರಕೃತಿಯ ಎದುರು ನಿಂತು ಜಯಶೀಲರಾವದರು ಹುಟ್ಟಿಲ್ಲ.ಇಂತಹುದರಲ್ಲಿ ಮನುಷ್ಯನ ಮರ್ಕಟ ಮನಸ್ಸು ಏನು ಮಾಡಿದರು ಅದು ಸ್ಥಿರವಲ್ಲ.ವಿಪರ್ಯಾಸಗಳ ನಡುವೆ ಎಗುವುದು ಮನೆಮಾಡಿದೆ.ಯಾರು ಯಾರಿಗೂ ಅನಿವಾರ್ಯವಲ್ಲ!. ಹುಟ್ಟು-ಸಾವುಗಳ ನಡುವೆ ಜೀವನ ಜಂಟಿಯಾಗಿರುವುದು ಕ್ಷಣಿಕ ಮೋಹಕ್ಕೆ.ನಾವುಗಳು ಶಾಶ್ವತದ ಕನಸು ಕಂಡು ನೈಜ ಜೀವನದ ಬದುಕನ್ನು ಕನಿಷ್ಟ ಮಟ್ಟಕ್ಕೆ ತಂದಿದ್ದೆವೆ.ಯಾರಿಗೂ ಸಂಬಂಧಗಳ ಮೇಲೆ ವಿಶ್ವಾಸವಿಲ್ಲ.ಪರಸ್ಪರ ಒಪ್ಪಂದದ ಪ್ರಕಾರ ಇದ್ದು,ಬೇಡವಾದಾಗ ದೂರವಾಗುವ ಪರಿಪಾಠ ಬೆಳೆದು ಬಂದಿದೆ.ಕಾಟಾಚಾರಕ್ಕೆ ಸಂಸಾರ ನಡೆಸುವ ಮೂಲಕ ತಮ್ಮ ಮುಖವಾಡದ ಬದುಕನ್ನು ಕಟ್ಟಿಕೊಂಡವರು ಸಾಕಷ್ಟಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ನೈತಿಕತೆಯನ್ನು ಮಾರಿ,ಅನೈತಿಕತೆಗೆ ತಲೆಬಾಗುವ ನಯವಂಚಕರಿಂದ ಒಂದಿಷ್ಟು ಅಂತರ ಕಾಯ್ದು ಕೊಳ್ಳಬೇಕಾಗಿದ್ದು ಬಹುಮುಖ್ಯ. ಪ್ರಾಮಾಣಿಕತೆಗೆ ತಲೆಬಾಗುವ ನಾವು ನಂಬಿಕೆ ವಿಶ್ವಾಸಕ್ಕೂ ತಲೆಬಾಗಲೇಬೇಕು.ಅದನ್ನು ಉಳಿಸಿಕೊಂಡು ಹೋಗುವವರು ಯಾರು? ಎಂಬುದನ್ನು ತಿಳಿದುಕೊಂಡರೆ ಒಳಿತು.ಕೊಲೆ ಸುಲಿಗೆ,ಮೋಸ,ವಂಚನೆ ಇವು ನಮ್ಮ ಉದ್ಯೋಗವಾಗಬಾರದು. ಪರಸ್ಪರ ಕಾಳಜಿ, ಗೌರವ,ಪ್ರೀತಿ,ನಂಬಿಕೆ ಉಳಿಸಿಕೊಂಡ ಸಂಬಂಧಗಳು ಇಂದಿಗೂ ಮಾದರಿಯಾಗಿ ಬದುಕಿವೆ.ಇಲ್ಲದವು ಹಳಿತಪ್ಪಿ ಬಲಿಯಾಗಿವೆ.ಮುಂದಿನ ಪೀಳಿಗೆಗೆ ನಾವು ವರ್ಗಾವಣೆ ಮಾಡುವ ಸಂಬಂಧಗಳು ಯಾವವು ಎಂಬುದನ್ನು ಆತ್ಮಾವಲೋಕನ ಮಾಡಬೇಕಿದೆ.ಸಮಾಜದ ಜವಾಬ್ದಾರಿ ಯಾವುದೆಂದು ಅರ್ಥೈಸಲು ಸಮಯ ಬೇಕಿಲ್ಲ!. ಒಂದು ಅವಲೋಕನ ಇದ್ದರೆ ಸಾಕು.ಎಲ್ಲವೂ ಕಣ್ಮುಂದೆ ಪ್ರತ್ಯಕ್ಷವಾಗುತ್ತದೆ…..ಒಂಟಿತನದ ಕರಿನೆರಳು ಜಂಟಿಯಾಗಿ ನಿಲ್ಲದಂತೆ ಮನುಷ್ಯನ ಪ್ರಾಮಾಣಿಕನಾಗಿ ಬದುಕುವತ್ತ ಸಾಗಬೇಕು!.

ಶಿವಲೀಲಾ ಶಂಕರ್
ಅಥ೯ಪೂಣ೯ ಲೇಖನ ಮೇಡಂ
That’s true