ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಾಯುತ್ತಿವೆ

ನರಿಗಳು ಕಾಯುತ್ತಿವೆ
ಕುರಿಗಳನ್ನು
ಏಳು ದಶಕಗಳ ಹಿಂದೆ
ಕೆಂಪು ಮಂಗಗಳು
ನಮ್ಮ ನೆಲ ನಮಗೆ
ಕೊಟ್ಟು ಹೋದರು
ಹುಲ್ಲು ಮೇಯ್ದು
ಬದುಕಬೇಕೆನ್ನುವ ನಮಗೆ
ಕಾಡು ಕೋಣ ಎಮ್ಮೆಗಳ ಭೀತಿ
ನಾವೂ ಕಾಟಕ್ಕೆ ಬೆದರಿ
ನರಿಯ ಆಜ್ಞೆಯಂತೆ
ಪಡಿತರ ಚೀಟಿಯ ಆಹಾರಕ್ಕೆ
ಮಾರು ಹೋಗಿ
ಕೊಟ್ಟಷ್ಟು ತಿಂದು
ದಿನ ನೂಕಿದೆವು
ಅಲ್ಲಿಯೂ ಹೆಗ್ಗಣಗಳದ್ದೇ
ಸಿಂಹ ಪಾಲು
ಉಗ್ರಾಣ ಕಾಯುವ
ನಾಯಿಗಳಿಗಿಲ್ಲ
ಒಪ್ಪತ್ತಿನ ಕೂಳು
ಒಮ್ಮೊಮ್ಮೆ ಕೊಬ್ಬಿದ ಕುರಿಗಳು
ಮಾಯವಾಗುತ್ತಿದ್ದವು
ಅವು ಸೈನ್ಯ ಸೇರಿದವು
ನರಿ ಪತ್ರಿಕಾ ಹೇಳಿಕೆ
ಮರುದಿನ ದೊಡ್ಡಿಯ ಪಕ್ಕದ
ಹಳ್ಳದ ದಂಡೆಯ ಮೇಲೆ
ಕುರಿಗಳ ಉಣ್ಣೆ ಎಲವು ಬಿದ್ದಿದ್ದವು
ದೇವರಿಗೆ ಎಡೆಯಾದವು ಕುರಿಗಳು
ಎಂಬ ನಂಬಿಕೆ ಹುಟ್ಟಿತು
ಹುಲಿ ಸಿಂಹ ಚಿರತೆಯಿಂದ
ರಕ್ಷಿಸುವ ನರಿಯ ಭರವಸೆ
ಹತ್ತು ವರುಷಕ್ಕೊಮ್ಮೆ
ಕುರಿ ಗಣತಿ
ನಮ್ಮೊಳಗಿನ ಒಂದು ಕುರಿ
ನರಿಯ ಅರಮನೆ ಹೊಕ್ಕಿ ನೋಡಿತು
ನಡೆದಿತ್ತು ಕುರಿಗಳ ಮಾರಣ ಹೋಮ
ಪುಲ್ವಾಮಾ ಭೀತಿ ರಾಮನ ಭಕ್ತಿ
ಮತ್ತೆ ಸಾಲಿನಲ್ಲಿ ನಿಂತು
ಮತ ಚಲಾಯಿಸುತ್ತಿದ್ದೇವೆ
ನರಿಗಳು ತೋರಿದ ಚಿಹ್ನೆಗೆ
ಕಾಡು ಉಳಿಸಿ ನಾಡು ಬೆಳೆಸಿ
ಟಿವಿ ಮಾಧ್ಯಮದಲ್ಲಿ
ಕಾಗೆ ಗೂಬೆಗಳ ನಿರಂತರ ಚರ್ಚೆ
ಮತ್ತೆ ಐದು ವರುಷ
ನಾವು ಏನೂ ಹೇಳುವ ಹಾಗಿಲ್ಲ
ನರಿ ಕಾಯುತ್ತಿವೆ
ನಮ್ಮಂತಹ ಕುರಿಗಳನ್ನು
ನಮ್ಮಂತಹ ಕುರಿಗಳನ್ನು
ಡಾ ಶಶಿಕಾಂತ ಪಟ್ಟಣ ರಾಮದುರ್ಗ

Bitter Truth is spoken…
ಅರ್ಥಪೂರ್ಣ ನಿಮ್ಮ ಕವನ
ವಾಸ್ತವದ ಕಡು ಸತ್ಯವನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ನಿಮ್ಮದೇ ಆದ ವಿಭಿನ್ನ ರೀತಿಯಲ್ಲಿ ಕಟ್ಟಿ ಕೊಟ್ಟ ವಿಡಂಬನೆಯ ಕವನ ಎಲ್ಲರೂ ಗಂಭೀರ ರೀತಿಯಲ್ಲಿ ವಿಚಾರ ಮಾಡಬೇಕಾಗಿದೆ ಸರ್
ಸುತೇಜ
Bitter truth is spoken
Very Good poetry
ಅರ್ಥ ಪೂರ್ಣ ಕವನ ಸರ್