ಅದು ಮಹಾಭಾರತದ ಕಾಲ. ಕೃಷ್ಣಾರ್ಜುನರು ಆ ದಿನ ಸಂಜೆ ನದಿ ತೀರದಲ್ಲಿ ವಿಹರಿಸುತ್ತಿದ್ದಾಗ ಅರ್ಜುನ ಮೌನವಾಗಿರುವುದನ್ನು ಕಂಡು ಕೃಷ್ಣ
‘ಅರ್ಜುನ, ಏಕೆ ಹೀಗೆ ಮೌನವಾಗಿರುವೆ? ನಿನ್ನನ್ನು ಕಾಡುತ್ತಿರುವ ಪ್ರಶ್ನೆ ಏನು? ಎಂದು ಕೇಳಿದ.

 ಮುಖದಲ್ಲಿ ತುಸುವೆ ಮಂದಹಾಸವನ್ನು ಸೂಸಿದ ಅರ್ಜುನ ಕೃಷ್ಣ ಯಶಸ್ಸಿನ ನಿಜವಾದ ರಹಸ್ಯವೇನು? ಎಂದು ಕೇಳಿದ.

 ಆಗ ಕೃಷ್ಣ ನದಿ ತೀರದಲ್ಲಿ ಮಕ್ಕಳು ಹಾರಿಸುತ್ತಿದ್ದ ದಾಳಿಪಟವನ್ನು ತೋರಿಸಿ ನಿನಗೇನು ಕಾಣುತ್ತದೆ ಎಂದು ಕೇಳಿದ.

 ಅಯ್ಯೋ ಅಷ್ಟು ಗೊತ್ತಾಗುತ್ತಿಲ್ಲವೇ? ಕೃಷ್ಣ ಮೇಲೆ ಆಗಸದಲ್ಲಿ ಹಾರುತ್ತಿರುವ ಗಾಳಿಪಟ. ನೋಡು ನೋಡು ಅದೆಷ್ಟು ಮೇಲೆ ಹಾರುತಿದೆ, ನೋಡಲು ಕೂಡ ಅದೆಷ್ಟು ಸುಂದರವಾಗಿದೆ ಅಲ್ಲವೇ?ಎಂದು ಮರು ಪ್ರಶ್ನಿಸಿದ.

 ಹಾರುತ್ತಿರುವ ಆ ಗಾಳಿಪಟವನ್ನು ನೋಡಿದಾಗ ನಿನಗೇನಾದರೂ ಬದಲಾಯಿಸಬೇಕು ಎಂದು ತೋಚುತ್ತದೆಯೇ? ಎಂದು ಕೃಷ್ಣ ಕೇಳಿದನು.

 ಉತ್ತರವಾಗಿ ಅರ್ಜುನ ಆ ಗಾಳಿಪಟ ಇನ್ನಷ್ಟು ಮೇಲೆಆಗಸದಲ್ಲಿ ಸ್ವಚ್ಛಂದವಾಗಿ ಹಾರಬಹುದು… ಆದರೆ ಅದಕ್ಕೆ ಕಟ್ಟಿರುವ ಸೂತ್ರ ಅದರ ಹಾರುವಿಕೆಗೆ ತಡೆಯಾಗುತ್ತಿದೆ, ಆ ಸೂತ್ರವನ್ನು ಹರಿದು ಹಾಕಿದರೆ ಗಾಳಿಪಟ ಮತ್ತಷ್ಟು ಮೇಲಕ್ಕೆ ಹಾರಲು ಸಾಧ್ಯವಾಗುತ್ತದೆ ಎಂದು ನನಗೆ ಅನ್ನಿಸುತ್ತಿದೆ ಎಂದು ಅರ್ಜುನ ಹೇಳಿದ.

 ಮಸುಲಕ್ಕ ಕೃಷ್ಣ ಅಲ್ಲಿಯೇ ಇದ್ದ ಪಟ ಹಾರಿಸುತ್ತಿದ್ದ ಗುಂಪಿನ ನಾಯಕನನ್ನು ಕರೆದು ಒಂದು ಪಟವನ್ನು ಕೇಳಿದ. ಕೃಷ್ಣ ಕೇಳಿದರೆ ಕೊಡದೆ ಇದ್ದಾರೆಯೇ?
 ಹಾಗೆ ಪಡೆದುಕೊಂಡ ಪಟವನ್ನು ಕೃಷ್ಣ ಅರ್ಜುನನಿಗೆ ಹಾರಿಸಲು ನೀಡಿದ.
 ಕೃಷ್ಣನಿಂದ ಪಟವನ್ನು ಪಡೆದ ಅರ್ಜುನ ಈಗ ತಾನೇ ಬಹಳ ಚೆನ್ನಾಗಿ ಹಾರುತ್ತಿದ್ದ ಗಾಳಿಪಟದ ಸೂತ್ರವನ್ನು ಕತ್ತರಿಸಿ .ಅತ್ಯಂತ ಸಂಭ್ರಮದಿಂದ ಗಾಳಿಪಟವನ್ನು ಹಾರಿಸಲು ಆರಂಭಿಸಿದ. ಸೂತ್ರವಿರದ ಗಾಳಿಪಟ ಮೊದಲು ಕೆಲ ಹೊತ್ತು ಆಕಾಶದಲ್ಲಿ ಮೇಲಕ್ಕೆ ಹಾರಿತೇನೋ ನಿಜ…. ಆದರೆ ಕೆಲ ಹೊತ್ತಿನಲ್ಲಿಯೇ ಅದು ಇಳಿಮುಖವಾಗಿ ಗಿರಕಿ ಹೊಡೆಯುತ್ತಾ  ಧರಾಶಾಯಿಯಾಗಿ ನೆಲದ ಮೇಲೆ ಬಿತ್ತು… ಹಾಗೆ ಕೆಳಕ್ಕೆ ಬಿದ್ದ ಪಟವನ್ನು ಪರೀಕ್ಷಿಸಿದಾಗ ಅದು ಬಹಳಷ್ಟು ಹರಿದುಹೋಗಿತ್ತು.

 ಆ ಪಟವನ್ನು ತೋರಿಸಿದ ಶ್ರೀ ಕೃಷ್ಣನು ಅರ್ಜುನನಿಗೆ
 ನೋಡು ಅರ್ಜುನ ಸೂತ್ರವಿರದ ಗಾಳಿಪಟ ಕೆಲ ಹೊತ್ತು ಆಕಾಶದಲ್ಲಿ ಮೇಲೆ ಹಾರಬಹುದು ನಿಜ…. ಆದರೆ ಅಲ್ಲಿಯೇ ಬಹಳ ಹೊತ್ತು ವಿರಾಜಮಾನವಾಗಿರಲು ಸಾಧ್ಯವಿಲ್ಲ. ಗಾಳಿಪಟದ ಹಾರಾಟಕ್ಕೆ ತೊಡಕಾಗಿದೆ ಎಂದುಕೊಂಡ ಆ ಸೂತ್ರವೇ ಗಾಳಿಪಟವನ್ನು ಕಾಯುತ್ತಿತ್ತು… ಒಂದು ಬಾರಿ ಆ ಸೂತ್ರದಿಂದ ತನ್ನ ಸಂಬಂಧವನ್ನು ಕಡಿದುಕೊಂಡ ಗಾಳಿಪಟ ಇನ್ನಿಲ್ಲದಂತೆ ನೆಲಕಚ್ಚಿತು. ನಮ್ಮ ಬದುಕು ಕೂಡ ಹಾಗೆಯೇ… ಎಷ್ಟೋ ಬಾರಿ ನಮ್ಮ ತಂದೆ, ತಾಯಿ, ಬಂಧು-ಬಳಗ, ಸಂಗಾತಿ ಮಕ್ಕಳು ನಮ್ಮ ಯಶಸ್ಸಿನ ಗುರಿ ತಲುಪುವ ದಾರಿಯಲ್ಲಿ ತಡೆಗೋಡೆಯಾಗಿದ್ದಾರೆ ಎಂದು ನಮಗೆ ಅನ್ನಿಸಬಹುದು! ಆದರೆ ಸತ್ಯ ಅದಲ್ಲ. ಅವರೆಲ್ಲರ ನಿಯಂತ್ರಣ ಇಲ್ಲದ ನಮ್ಮ ಬಾಳು ಸೂತ್ರ ಹರಿದ ಗಾಳಿಪಟದಂತಾಗಬಹುದು. ಅವರಾರೂ ನಮ್ಮ ವೇಗವನ್ನು ತಡೆಹಿಡಿಯುತ್ತಿಲ್ಲ, ಆದರೆ ನಮ್ಮ ಗಮ್ಯವನ್ನು ತಲುಪುವಲ್ಲಿ ಅವರ ಪಾತ್ರ ಹಿರಿದಾಗಿರುತ್ತದೆ.

 ನಿಜ ಅಲ್ಲವೇ ಸ್ನೇಹಿತರೆ? ಮಹಾಭಾರತದಲ್ಲಿ ಅಂದು ಕೃಷ್ಣ ಹೇಳಿದ ಮಾತುಗಳು ಪ್ರಸ್ತುತ ಕಲಿಯುಗದ ದಿನಮಾನಕ್ಕೂ ಸೂಕ್ತ ಎನಿಸುತ್ತದೆ

 ಇದನ್ನೇ ಕವಿ ದಿನಕರ ದೇಸಾಯಿಯವರ

 ಏರುವನು ರವಿ ಏರುವನು
 ಬಾನೊಳು ಸಣ್ಣಗೆ ತೋರುವನು
 ಏರಿದವನು ಚಿಕ್ಕವನಿರಲೇಬೇಕು
 ಎಂಬ ಮಾತನು ಸಾರುವನು

 ಎಂದು ಹೇಳಿರುವುದು. ನಾವು ಅದಷ್ಟೇ ಆಕಾಶವನ್ನು ಚುಂಬಿಸುವಂತಹ ಸಾಧನೆಯನ್ನು ಮಾಡಿದರೂ ನಮ್ಮ ಈ ಸಾಧನೆಗೆ ಕಾರಣರಾದ ಹೆತ್ತವರು ಶಿಕ್ಷಕರು ಸ್ನೇಹಿತರು, ಸಂಗಾತಿ ಮಕ್ಕಳು ಹೀಗೆ  ನೂರೆಂಟು ರೀತಿಯಲ್ಲಿ ಕಾಣದ ಕೈಗಳ ಸಹಾಯ ಹಸ್ತವನ್ನು
ಮರೆಯಲಾಗದು.

ಅದಷ್ಟೇ ಯಶಸ್ಸಿನ ಶಿಖರವನ್ನು ನಾವೇರಲಿ  ಔದ್ಯೋಗಿಕ ಉನ್ನತಿಯನ್ನು ಪಡೆಯಲಿ ನಮ್ಮ ಯಶಸ್ಸಿನ ಹಾದಿಯಲ್ಲಿ ಅವುಗಳನ್ನು ಹಂಚಿಕೊಳ್ಳಲು ಕೂಡ ನಮಗೆ ನಮ್ಮವರು ಬೇಕು.

 ಯಾವುದೇ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ನೋಡಿ.. ಓದು, ಉದ್ಯೋಗ ಬದುಕನ್ನು ಅರಸಿ ಒಂದೂರಿಂದ ಮತ್ತೊಂದು ಊರಿಗೆ ಹೋಗುವ ಬಹಳಷ್ಟು ಜನರು ತಮ್ಮ ಮೂಲ ನೆಲೆಗೆ ಮರಳುವಾಗ ಹಾಕುವ ಸಂತಸದ ಸ್ಟೇಟಸ್ಗಳು ಸ್ಟೋರಿಗಳು ಅವರು ಕಳೆದುಕೊಂಡ ಸಂತಸವನ್ನು ಮರಳಿ ಹುಡುಕಲು ತಮ್ಮ ಮೂಲ ನೆಲೆಯುತ್ತ ಧಾವಿಸುತ್ತಿದ್ದಾರೆ ಎಂದು ತೋರುವುದಿಲ್ಲವೇ?

 ಮುಂಜಾನೆ ಪೂರ್ವದಲ್ಲಿ ಉದಯಿಸುವ ಸೂರ್ಯ ಹೊತ್ತು ಕಂತುತ್ತಿದ್ದಂತೆ ಪಡುವಣದಲ್ಲಿ ಮುಳುಗುತ್ತಾನೆ ಅಲ್ಲವೇ… ಹಿಂದಿಯ ಒಂದು ಕಹಾವತ್ ಹೀಗಿದೆ ಸುಭಹ ಕಾ ಭೂಲಾ  ಜಬ್ ಶಾಮ್ ಕೊ ಘರ ಆಯೇ ತೋ ಉಸೇ ಭೂಲ ನಹಿ ಕೆಹತೆ ಎಂಬ ಮಾತಿನಂತೆ ನಾವು ಅದೆಷ್ಟೇ ಬದುಕಿನಲ್ಲಿ ಮುಂದೆ ಸಾಗಿದರೂ ನಮ್ಮ ಕೌಟುಂಬಿಕ ಮೌಲ್ಯಗಳನ್ನು ನಮ್ಮ ಸಂಸ್ಕೃತಿಯ ಬೇರುಗಳನ್ನು ಮರೆಯಬಾರದು.

 ಆಕಾಶವನ್ನು ಚುಂಬಿಸುವಂತೆ ಬೆಳೆದು ನಿಂತ ಮರ ಗಿಡಗಳು ಹಾಗೆ ಬೆಳೆಯಲು ಕಾರಣವಾಗಿರುವುದು ನೆಲದ ಆಳದಲ್ಲಿ ಹುದುಗಿ ಹೋಗಿರುವ  ಕಣ್ಣಿಗೆ ಕಾಣದ
ಅವುಗಳ ಬೇರುಗಳು. ಅದೆಷ್ಟು ಗಟ್ಟಿಯಾಗಿ ಬೇರುಗಳು ನೆಲವನ್ನು ಅಪ್ಪಿ ಹಿಡಿದಿರುತ್ತವೆಯೋ ಅಷ್ಟೇ ಸಶಕ್ತವಾಗಿ ಗಿಡ ತನ್ನ ರೆಂಬೆ ಕೊಂಬೆಗಳನ್ನು ವಿಸ್ತರಿಸಿ ಬೆಳೆಯುತ್ತದೆ. ನೆರಳು ನೀಡುತ್ತದೆ ಹಣ್ಣು ಹೂಗಳನ್ನು ಕೊಡುತ್ತದೆ. ಪಕ್ಷಿಗಳಿಗೆ ಆಶ್ರಯವನ್ನು ನೀಡುತ್ತದೆ… ಸಮೃದ್ಧ ಮಳೆಗೆ ಆಹ್ವಾನವೀಯುತ್ತದೆ….. ನೆಲದಲ್ಲಿ ಆಳವಾಗಿ ಹುದುಗಿರುವ ಬೇರುಗಳು ತನ್ನ ರಕ್ಷಣೆಗೆ ನಿಂತಿವೆ ಎಂಬ ಕಾರಣದಿಂದಲೇ ಅದೆಷ್ಟೇ ಮಳೆ ಸುರಿದರೂ ಬಿರುಗಾಳಿ ಬೀಸಿದರೂ ಮರ ಅಲ್ಲಾಡದೆ ದೃಢವಾಗಿ ನಿಲ್ಲುತ್ತದೆ.

 ಅಂತೆಯೇ ಭೂಮಿಯ ಮೇಲಿನ ಸರ್ವ ಶ್ರೇಷ್ಠ ಜೀವಿ ಎಂದು ಗುರುತಿಸಿಕೊಂಡಿರುವ ಮಾನವ ಜನ್ಮದಲ್ಲಿ ಹುಟ್ಟಿರುವ ನಾವುಗಳು ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕಾರಗಳು,ಮೌಲ್ಯಗಳು ಎಂಬ ಬೇರುಗಳ ಬಲದಿಂದಲೇ ನಮ್ಮ ಜೀವನವನ್ನು ಯಶಸ್ಸಿನತ್ತ ಸಾಗಿಸುತ್ತಿದ್ದೇವೆ ಎಂಬ ಅರಿವಿನ ಪ್ರಜ್ಞೆಯನ್ನು ಹೊಂದಿದ್ದು, ಈ ಮೌಲ್ಯಗಳು ಮತ್ತು ಸಂಸ್ಕಾರಗಳೆಂಬ ಅಗೋಚರ ಶಕ್ತಿಗಳೇ ನಮ್ಮನ್ನು
ಅನವರತ ಕಾಯುವ ಆಪ್ತರಕ್ಷಕರು ಎಂಬುದನ್ನು ಮರೆಯದೆ ಬದುಕಿನಲ್ಲಿ ಮುಂದೆ ಸಾಗೋಣ ಎಂಬ ಆಶಯದೊಂದಿಗೆ


Leave a Reply

Back To Top