ವಿಶೇಷ ಲೇಖನ
ನಾಗರತ್ನ ಎಚ್ ಗಂಗಾವತಿ
ಬದುಕು ಬದಲಿಸಿದ ಗಾಂಧೀಜಿಯವರ ತತ್ವಗಳು
![](https://sangaati.in/wp-content/uploads/2025/02/download-3-5.jpg)
ನಮಗೆ ಸ್ವತಂತ್ರವನ್ನು ತಂದುಕೊಟ್ಟ ಮಹಾನ್ ಚೇತನ ಅಂದರೆ ಮಹಾತ್ಮ ಗಾಂಧೀಜಿಯವರು. ಇಂದಿಗೂ ಸಹ ಅವರ ತತ್ವಗಳು ಎಲ್ಲರ ಭವಿಷ್ಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆಗಳನ್ನ ನೀಡುತ್ತಾ ಬರುತ್ತಿವೆ.ಆದರೆ ಅವುಗಳನ್ನು ಅಳವಡಿಸಿಕೊಂಡಷ್ಟು ನಮ್ಮ ಜೀವನ ಸುಂದರವಾಗಿರುತ್ತದೆ. ಮಹಾರಾಷ್ಟ್ರದ ಒಂದು ಊರಿನ ಲಕ್ಷ್ಮಣ್ ತುಕಾರಾಂ ಗೋಲೆ ತುಂಬಾ ಮುಗ್ತ ಮನಸ್ಸಿನ ಹುಡುಗ. ತನ್ನ ಎದುರಿಗೆ ಯಾವುದಾದರೂ ಅನ್ಯಾಯವನ್ನು ಕಂಡರೆ ಅದನ್ನು ಸಹಿಸದೆ ಅದರ ವಿರುದ್ಧ ಹೋರಾಡುವಂತಹ ಆತ್ಮವಿಶ್ವಾಸ ಹೊಂದಿರುವಂತ ಮನಸ್ಸು ಅವನದು. ಆದರೆ ಅದೊಂದಿನ ತಾನು ಮಾಡದ ತಪ್ಪಿಗೆ ಸಮಸ್ಯೆಯನ್ನು ಅನುಭವಿಸುವಂತಹ ಒಂದು ಸ್ಥಿತಿ ಎದುರಾದಾಗ ಎಲ್ಲರೂ ಗೇಲಿ ಮಾಡಿ ನಗುವುದು, ಅಪಹಾಸ್ಯ ಮಾಡುವದಲ್ಲದೆ, ಮನೆಯಲ್ಲಿ ತಾಯಿ ಕೂಡ ಅವನನ್ನು ತಿರಸ್ಕಾರ ಮಾಡಿ ಮನೆಯಿಂದ ಹೊರ ಹಾಕುತ್ತಾರೆ.ಇವನ್ನೆಲ್ಲ ಕಂಡಾಗ ಅವನು ಕೊಲೆ, ಸುಲಿಗೆ, ಕಳ್ಳತನ ಮುಂತಾದ ಕ್ರೂರ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡು ತುಂಬಾ ಕೆಟ್ಟ ವ್ಯಕ್ತಿಯಾಗಿ ಸಮಾಜಕ್ಕೆ ಕಂಟಾಕನಾಗಿ ಪಾತಕ ಲೋಕದ ಪಾಪಿ ಆಗಿ ಹೋಗ್ತಾನೆ.ಕೆಲವರ ಸಹವಾಸದಿಂದ ಮತ್ತಷ್ಟು ಕೆಟ್ಟ ಕೆಲಸಗಳಲ್ಲಿ ತೊಡಗಿ ತನ್ನ ಜೀವನವನ್ನು ತಾನು ತೊಂದರೆಗೆ ಸಿಲುಕಿಸಿಕೊಂಡಿರುತ್ತಾನೆ.ಅವನು ಪೊಲೀಸರಿಗೆ ಸೆರೆ ಸಿಕ್ಕು ಸುಮಾರು 19 ಕೇಸ್ ಗಳಲ್ಲಿ ಅಪರಾಧಿಯಾಗಿ ಜೈಲು ಶಿಕ್ಷೆಗೆ ಗುರಿಯಗುತ್ತಾನೆ. ಪೊಲೀಸರ ಕೈಯಲ್ಲಿ ಅದೆಷ್ಟೋ ಹಿಂಸೆ ಹಾಗೂ ನೋವುಗಳನ್ನು ಅನುಭವಿಸುತ್ತಾನೆ. ಜೀವನದಲ್ಲಿ ಜಿಗುಪ್ಸೆ ಬರುತ್ತದೆ. ಒಂದು ದಿವಸ ಜೈಲಿಗೆ ಮಹಾನ್ ಗುರುಗಳ ದರ್ಶನ ಭಾಗ್ಯ ಸಿಕ್ಕು ಅವರ ಮನಪರಿವರ್ತನೆ ಮಾತುಗಳು ಹಾಗೂ ಮಹಾತ್ಮ ಗಾಂಧೀಜಿಯವರ ತತ್ವಗಳ ಭೋದನೆಯಿಂದಾಗಿ ಕ್ರಮೇಣ ಬದಲಾಗಿ ತನ್ನ ಸ್ವಭಾವ ಹಾಗೂ ನಡತೆಯನ್ನು ಬದಲಾಯಿಸಿಕೊಳ್ಳುತ್ತಾನೆ. ಅಹಿಂಸೆ ಮಾರ್ಗ ಜೀವನಕ್ಕೆ ಒಳ್ಳೆಯದು ಯಾರನ್ನು ಕೂಡ ನಾವು ಹಿಂಸೆ ಕೊಡುವುದರಿಂದ ನಮ್ಮ ಜೀವನಕ್ಕೆ ಒಳ್ಳೆಯದಲ್ಲ ಎಂಬುದನ್ನು ಕಂದುಕೊಂಡು, ಅರ್ಥಮಾಡಿಕೊಂಡ ಲಕ್ಷ್ಮಣ್ ತುಕಾರಾಂ ಗೋಲೆ ಅಂದಿನಿಂದ ತನ್ನ ತಪ್ಪುಗಳ ಅರಿವು ಮಾಡಿಕೊಂಡು ಗಾಂಧಿ ತತ್ವಗಳನ್ನ ನಿತ್ಯವೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೋಗ್ತಾನೆ. ಅವನ ದೈನಂದಿನ ಕಾರಾಗ್ರಹ ವಾಸದಲ್ಲಿಯ ಸನ್ನಡತೆಯಿಂದಾಗಿ ಅವನಿಗೆ ಶಿಕ್ಷೆ ಕೂಡ ಕಡಿಮೆಯಾಗಿ ಜೈಲುವಾಸದಿಂದ ಬಿಡುಗಡೆ ಹೊಂದಿ ಉತ್ತಮವಾದ ಜೀವನವನ್ನು ನಡೆಸುವುದರೊಂದಿಗೆ ಎಲ್ಲರಿಗೂ ಮಾದರಿಯಾಗಿ ಇಂದು ಗಾಂಧೀಜಿಯವರ ತತ್ವಗಳನ್ನು ಎಲ್ಲಾ ಕಡೆಯೂ ಹಬ್ಬಿಸುತ್ತಾ ವಿಶೇಷವಾಗಿ ಜೈಲಿನಲ್ಲಿಯ ಕೈದಿಗಳಿಗೆ ಮಾರ್ಗದರ್ಶನ ಹಾಗೂ ಗಾಂಧಿ ತತ್ವಗಳ ಪಾಲನೆಯ ಕುರಿತು ಉಪದೇಶ ಮಾಡುತ್ತಿದ್ದಾರೆ.ತನ್ನ ಬದುಕನ್ನು ಸುಂದರಗೊಳಿಸಿಕೊಂಡು ಈಗ ಎರಡು ಮಕ್ಕಳ ತಂದೆಯಾಗಿ ಸುಂದರ ಬದುಕನ್ನು ಕಟ್ಟಿಕೊಂಡು
ಕುಟುಂಬದ ವರ್ಗದವರೊಂದಿಗೆ ಸಾಗಿಸುತ್ತಾ ಬಂದಿದ್ದಾನೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬರೂ ಕೂಡ ಕೆಟ್ಟ ಹವ್ಯಾಸಗಳನ್ನು ತೊರೆದಷ್ಟು ಬದುಕು ಹಸನವಾಗುತ್ತದೆ ಎಂದು ಮಾದರಿಯಾಗಿದ್ದಾನೆ.ಹಾಗಾಗಿ ಅಂದು ಗಾಂಧಿಯವರು ಕೊಟ್ಟ ತತ್ವದರ್ಶನಗಳು ಇಂದು ನಮಗೆ ಉತ್ತಮ ದಾರಿದೀಪವಾಗಿ ಮನುಷ್ಯ ಬದಲಾಗಲು ಅನುಕೂಲಕರವಾಗಿವೆ.ಹಾಗಾಗಿ ಪ್ರತಿಯೊಬ್ಬರೂ ಕೂಡ ಗಾಂಧಿ ತತ್ವಗಳನ್ನು ನಮ್ಮ ನಿತ್ಯ ಬದುಕಲ್ಲಿ ಅಳವಡಿಸಿಕೊಳ್ಳೋಣ. ಈ ಗೋಲೆಯವರ ನೈಜ ಜೀವನವನ್ನು ಒಂದು ನಾಟಕ ರೂಪದಲ್ಲಿ ಈಸೂರು ಗ್ರಾಮದಲ್ಲಿ ಕಾಂತೇಶ್ ಕುದುರಿ ಮೋತಿ ಇವರ ಸಾರಥ್ಯದಲ್ಲಿ ತುಂಬಾ ಅದ್ಭುತವಾಗಿ ಶಿವಮೊಗ್ಗದ ಯುವಕರ ತಂಡ ತುಂಬಾ ಚೆನ್ನಾಗಿ ಅಭಿನಯಸಿ ಜನರನ್ನು ಮನಸ್ಸನ್ನು ತಟ್ಟಿದೆ.
ನಾಗರತ್ನ ಎಚ್ ಗಂಗಾವತಿ
![](https://sangaati.in/wp-content/uploads/2025/02/nagarathnah-1-840x1024.jpg)